ಅಂಕಣ

ಕ್ಷುಲ್ಲಕ ರಾಜಕೀಯ ಬದಿಗಿಡಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ಕರೊನಾ ಸಾಂಕ್ರಾಮಿಕವೆಂಬುದು ಯುದ್ಧಕಾಲೀನ ತುರ್ತು ಪರಿಸ್ಥಿತಿಗಿಂತಲೂ ಕ್ಲಿಷ್ಟಕರವೆಂಬಂಥ ವಾತಾವರಣವನ್ನು ತಂದಿಟ್ಟಿದೆ. ಯಾವುದೇ ದೇಶದಲ್ಲಿ ಯುದ್ಧ, ಪ್ರಾಕೃತಿಕ ವಿಕೋಪ ಮತ್ತು ಈಗಿನ ಸಾಂಕ್ರಾಮಿಕ ರೋಗ ಪ್ರಸರಣದಂಥ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನಾಗಲೀ, ನಾಯಕನೇ ಆಗಲಿ ತಮ್ಮೊಳಗಿನ ಭಿನ್ನಮತಗಳನ್ನು ಮರೆತು ಆಡಳಿತಕ್ಕೆ ಬೆಂಬಲ ನೀಡಬೇಕಾದ ಬದ್ಧತೆ ಹೊಂದಿರುತ್ತಾರೆ. ಆದರೆ ನಮ್ಮ ದೇಶದಲ್ಲಿ ಆಗುತ್ತಿರುವುದೇನು? ರಾಷ್ಟ್ರ ಮತ್ತು ರಾಜ್ಯ ಮಟ್ಟದ ನಾಯಕರೆನಿಸಿಕೊಂಡವರು ಅವರವರ ಕ್ಷೇತ್ರದಲ್ಲಿ ಕರೊನಾ ಸಾಂಕ್ರಾಮಿಕ ವ್ಯಾಪಕವಾಗಿ ಹಬ್ಬಿ ಜನರು ಸಂಕಟವನ್ನು ಅನುಭವಿಸುತ್ತಿದ್ದರೂ, ಅವರು ಮಾತ್ರ ಕ್ಷೇತ್ರದತ್ತ ತಿರುಗಿಯೂ ನೋಡದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ.

ಇನ್ನೊಂದೆಡೆ ಕೆಲವು ಶಾಸಕರು, ಸಂಸತ್ ಸದಸ್ಯರು, ಉಸ್ತುವಾರಿ ಸಚಿವರು ತಮ್ಮ ಕಾರ್ಯಕ್ಷೇತ್ರಗಳಲ್ಲಿ ಅಹರ್ನಿಶಿ ದುಡಿಯುತ್ತ ಇತರರಿಗೆ ಮಾದರಿಯಾಗುತ್ತಿದ್ದರೆ, ಇನ್ನೂ ಕೆಲವು ಆಡಳಿತ ಪಕ್ಷದ ಶಾಸಕರು ಕ್ಷೇತ್ರದ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ತೆಪ್ಪಗೆ ಉಳಿದ ಉದಾಹರಣೆಗಳೂ ಇವೆ. ಈ ಕಾಲ್ಚೆಂಡಾಟದ ಪರಿ ಹೇಗಿದೆಯೆಂದರೆ, ಸಚಿವರು ತಮ್ಮ ಕ್ಷೇತ್ರಕ್ಕೆ ತೆರಳಿದರೆ ಸಾಮಾನ್ಯ ಜನರಂತೆ 14 ದಿನ ಕ್ವಾರಂಟೈನಿಗೆ ಒಳಪಡಬೇಕಿತ್ತೆಂದು ಗದ್ದಲವೆಬ್ಬಿಸಿದ್ದೂ ನಡೆದಿದೆ. ಸರ್ಕಾರದ ಪ್ರಕಟಣೆಗೆ ವ್ಯತಿರಿಕ್ತವಾಗಿ ವಲಸೆ ಕಾರ್ವಿುಕರಿಗೆ ರೈಲುವ್ಯವಸ್ಥೆ, ಬಸ್ಸುವ್ಯವಸ್ಥೆ ಇದೆಯೆಂದು ಪ್ರಚಾರ ಮಾಡಿ ಅವರು ಗುಂಪುಕಟ್ಟಿ ಗದ್ದಲವೆಬ್ಬಿಸಲು ಪ್ರಚೋದಿಸುವುದೇ ಮುಂತಾದ ಕ್ಷುಲ್ಲಕ ರಾಜಕೀಯ ವ್ಯಾಪಕವಾಗಿ ನಡೆದಿದೆ. ವಿಪಕ್ಷಗಳು ಇಷ್ಟೆಲ್ಲ ಅಧ್ವಾನ ಮಾಡುತ್ತಿರುವಾಗ ಜನರಿಗೆ ಮಾರ್ಗದರ್ಶನ ನೀಡುವ ಕೆಲಸವನ್ನು ಆಡಳಿತ ಪಕ್ಷದ ಶಾಸಕರು, ಕಾರ್ಯಕರ್ತರು ಮಾಡಬೇಕು. ಸರ್ಕಾರದ ಯೋಜನೆಗಳು ಯಶಸ್ವಿ ಆಗಬೇಕಾದರೆ, ವಿಪಕ್ಷಗಳು ಮಾಡುತ್ತಿರುವ ಅಪಪ್ರಚಾರದ ವಾಸ್ತವ ಚಿತ್ರಣವನ್ನು ಜನಸಾಮಾನ್ಯರಿಗೆ ಮನಗಾಣಿಸಬೇಕು. ಆಗ ಮಾತ್ರ ಸರ್ಕಾರದ ಶ್ರಮ ಸಾರ್ಥಕ.

| ಮೋಹನದಾಸ ಕಿಣಿ ಕಾಪು