ಅಂಕಣ

ಫಲ ನೀಡಿದ ಪೇರಲ ಕೃಷಿ

malli

ನವಲಗುಂದದ ಈ ರೈತ ಬಿ.ಕಾಂ. ಪದವೀಧರ. ಕೆಲಸಕ್ಕೆ ಅಲೆಯದೆ ಕೃಷಿಯನ್ನೇ ಜೀವನವಾಗಿ ಆಯ್ದುಕೊಂಡಿದ್ದಾರೆ. ಮಾರಾಟದಲ್ಲಿ ತಮ್ಮ ವಿನೂತನ ಐಡಿಯಾಗಳಿಂದ ಸಾಕಷ್ಟು ಹಣವನ್ನೂ ಗಳಿಸುತ್ತಿದ್ದಾರೆ.

ಪೇರಲ ಹಣ್ಣು ಹಳ್ಳಿಗಳಲ್ಲಿ ಸಾಧಾರಣವಾಗಿ ಎಲ್ಲ ಹವಾಮಾನಗಳಲ್ಲಿ ಬೆಳೆಯುವಂಥದ್ದು. ಇದರಲ್ಲಿ ವಿಟಮಿನ್ ಸಿ ಧಾರಾಳವಾಗಿದೆ. ಪೊಟ್ಯಾಶಿಯಂ ಹಾಗೂ ಫೈಬರ್ ಅಂಶವೂ ಇದೆ. ಇದರ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ.

ನವಲಗುಂದದಿಂದ 4 ಕಿ.ಮೀ. ದೂರದಲ್ಲಿ ಹೆದ್ದಾರಿ ಪಕ್ಕದಲ್ಲೇ 4 ಎಕರೆ ಪೇರಲ ತೋಟವಿದೆ. ಸಾಯಿಬಾಬಾ ಅರ್ಜುನಪ್ಪ ಆನೆಗುಂದಿ ಎಂಬುವವರು ಅದರ ಮಾಲೀಕರು. ಅವರೇನು ಕೃಷಿ ಕುಟುಂಬದಿಂದ ಬಂದವರಲ್ಲ. ನವಲಗುಂದದ ಶಂಕರ ಪದವಿ ಕಾಲೇಜಿನಲ್ಲಿ ಬಿ.ಕಾಂ. ಮುಗಿಸಿ, ಕೃಷಿ ಕ್ಷೇತ್ರಕ್ಕೆ ಬಂದವರು.

ಅವರದು ಒಟ್ಟು 17 ಎಕರೆ ಜಮೀನಿದ್ದು 2014ರಲ್ಲಿ ಬಿತ್ತಿದ ಗೋವಿನ ಜೋಳ, ಕಡಲೆ, ಸೂರ್ಯಕಾಂತಿ ಮುಂತಾದ ಬೆಳೆಗಳು ಸರಿಯಾಗಿ ಬಂದಿರಲಿಲ್ಲ. ಹೀಗಾಗಿ ಪರ್ಯಾಯ ಬೆಳೆ ಬೆಳೆಯಲು ನಿರ್ಧರಿಸಿ, ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಮಾಹಿತಿ ಪಡೆಯಲು ಹೋದರು. ಕೃಷಿ ತಜ್ಞರ ಜತೆ ರ್ಚಚಿಸಿ, 4 ಎಕರೆಯಲ್ಲಿ ಪೇರಲ ಸಸಿ ನೆಡಲು ತೀರ್ವನಿಸಿದರು. ಕೃಷಿ ವಿವಿಯಿಂದಲೇ ರೂ. 45ಕ್ಕೆ ಒಂದರಂತೆ ಲಖನೌ 49 ತಳಿಯ ಸಸಿ ಖರೀದಿಸಿ 16/8 ಅಡಿ ಅಂತರದಲ್ಲಿ 1000 ಸಸಿಗಳನ್ನು ನಾಟಿ ಮಾಡಿದರು.

ನೀರಿಗಾಗಿ ಅವರು ಮಾಡಿದ ಸಾಹಸವೂ ರೋಮಾಂಚಕವೇ. ಜಮೀನಿನಿಂದ 2 ಕಿ.ಮೀ. ದೂರದಲ್ಲಿರುವ ಬೆಣ್ಣೆಹಳ್ಳದಿಂದ ಪೈಪ್​ಲೈನ್ ಮುಖಾಂತರ ನೀರನ್ನು ತಂದು 260/160 ಅಡಿ ಉದ್ದಗಲ ಹಾಗೂ 15 ಅಡಿ ಆಳ ಇರುವ ಕೃಷಿ ಹೊಂಡದಲ್ಲಿ ಸಂಗ್ರಹಿಸಿದ್ದಾರೆ. ಈ ನೀರನ್ನು ಹರಿಗಾಲುವೆ ಮುಖಾಂತರ ಪೇರಲ ಗಿಡಗಳಿಗೆ ಪೂರೈಸುತ್ತಾರೆ. ಪ್ರತಿ ವರ್ಷ ನವಲಗುಂದ, ಬೆಳವಟಗಿ ರೈತರಿಂದ ಸಾವಯವ ಗೊಬ್ಬರ ಪಡೆದು ಗಿಡಗಳಿಗೆ ಹಾಕುತ್ತಾರೆ.

ಸಸಿ ನಾಟಿ ಮಾಡಿದ ಒಂದೂವರೆ ತಿಂಗಳ ನಂತರ ರೆಂಬೆಗಳನ್ನು ಕತ್ತರಿಸುವುದು ಅಗತ್ಯ. ಹಾಗೆ ಮಾಡಿದಾಗ ಕೊಂಬೆಗಳ ಬೆಳವಣಿಗೆ ತೀವ್ರಗೊಂಡು, ಹೂವು ಹೆಚ್ಚಾಗಿ, ಕಾಯಿ ಕಟ್ಟುವಿಕೆ ಉತ್ತಮವಾಗುತ್ತದೆ. ನಾಟಿ ಮಾಡಿದ 20 ತಿಂಗಳಿಗೆ ಮೊದಲ ಬೆಳೆ ಆರಂಭವಾಗುತ್ತದೆ. ಕಾಯಿಯ ಗಾತ್ರ ದೊಡ್ಡದಾಗುತ್ತದೆ. ಸಾಯಿಬಾಬಾ ಈ ಎಲ್ಲ ವಿಧಾನಗಳನ್ನು ಅನುಸರಿಸಿರುವುದರಿಂದ ಇಳುವರಿ ಹೇರಳವಾಗಿದೆ.

ಈಗ ಪ್ರತಿ ಗಿಡದಿಂದ ಅಂದಾಜು 100 ಕಾಯಿಗಳ ಫಸಲು ಸಿಗುತ್ತದೆ. ಪ್ರಾರಂಭದಲ್ಲಿ ಪ್ರತಿದಿನ 30-40 ಕೆ.ಜಿ. ದೊರೆಯುತ್ತಿದ್ದ ಫಸಲು ಸದ್ಯ ಪ್ರತಿ ದಿನ 1 ಕ್ವಿಂಟಲ್​ನಷ್ಟು ಆಗುತ್ತಿದೆ! ಒಂದು ವರ್ಷದಲ್ಲಿ 6-8 ತಿಂಗಳು ಭರ್ಜರಿ ಫಸಲು ಬರುತ್ತದೆ. ತೋಟದ ಬದಿಯಲ್ಲೇ ತೆರೆದಿರುವ ಅಂಗಡಿಯಲ್ಲಿ ಕೆ.ಜಿ.ಗೆ ರೂ. 60ರಂತೆ ಮಾರಾಟವಾಗುತ್ತದೆ. ವಾರ್ಷಿಕ ಪೇರಲ ಕೃಷಿಯಿಂದ 6-8 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ.

ಮೊದಲ ವರ್ಷ ಸಸಿಗಳ ಖರೀದಿಗೆ ಹೆಚ್ಚು ಬಂಡವಾಳ ಅಗತ್ಯ. 2ನೇ ವರ್ಷದಿಂದ ಖರ್ಚು ಕಡಿಮೆ. ತೋಟದ ನಿರ್ವಹಣೆಗೆ ಮಾತ್ರ ಹಣ ಬೇಕಾಗುತ್ತದೆ. ವರ್ಷಕ್ಕೆ 2 ಬಾರಿ ಕಟಾವು ಮಾಡಬಹುದು. ತೋಟದಲ್ಲಿ 5-6 ಜನರಿಗೆ ಕೆಲಸ ನೀಡಿದ್ದಾರೆ. ಇವರ ತೋಟದಲ್ಲಿ 25 ದಾಳಿಂಬರ, 15 ಸೀತಾಫಲ, 10 ಮಾವು, 10 ಲಿಂಬೆ, 10 ಆಪಲ್ ಬಾರೆ ಮತ್ತು 2 ಲಕ್ಷಣ ಫಲ ಗಿಡಗಳಿವೆ. ತೋಟದ ಸುತ್ತಲೂ 500 ಹೆಬ್ಬೇವು ಗಿಡಗಳಿರುವುದು ವಿಶೇಷ. ಅಲ್ಲದೆ 3 ಆಕಳುಗಳನ್ನೂ ಸಾಕಿದ್ದಾರೆ. ಕೃಷಿ ಕಾಯಕದಲ್ಲಿ ಪತ್ನಿ ಲಕ್ಷ್ಮೀ, ಮಕ್ಕಳಾದ ಸ್ಮಿತಾ ಮತ್ತು ಗಾಯಿತ್ರಿ ನೆರವಾಗುತ್ತಾರೆ. ಸಂಪರ್ಕಕ್ಕೆ: 9242403279.

ಪಿಕ್ ಆಂಡ್ ಪೇ!

ಇದು ಈ ರೈತ ಆರಂಭಿಸಿರುವ ಹೊಸ ರೀತಿಯ ವ್ಯಾಪಾರದ ಐಡಿಯಾ. ಗ್ರಾಹಕರು ಪೇರಲ ತೋಟದಲ್ಲಿ ಮನದಣಿಯೆ ಅಲೆದಾಡಿ ತಮಗಿಷ್ಟವಾದ ಪೇರಲ ಹಣ್ಣುಗಳನ್ನು ಕಿತ್ತುಕೊಳ್ಳಬಹುದು. ನಂತರ ತೂಕ ಮಾಡಿಸಿ, ಹಣ ಪಾವತಿಸಬಹುದು. ತೋಟದಲ್ಲಿ ವಿಹರಿಸುವುದೇ ಆಹ್ಲಾದದಾಯಕ. ಜತೆಗೆ, ತಮಗೆ ಬೇಕಾದ ಹಣ್ಣು ಕಿತ್ತುಕೊಂಡು ತಿನ್ನುವುದು ಗ್ರಾಹಕರಿಗೆ ಇನ್ನಷ್ಟು ಚೇತೋಹಾರಿ ಅನುಭವ ನೀಡುತ್ತದೆ.

| ಸುರೇಶ ಗುದಗನವರ ರಾಮದುರ್ಗ