ಇಂದು ಜಯಂತಿ
ವೀರೇಶ್ವರ ಪುಣ್ಯಾಶ್ರಮ ನಾಡಿನ ಬಹುದೊಡ್ಡ ಸಂಗೀತ ಸರೋವರ. ಇಲ್ಲಿ ಮಿಂದವರು ಪರಮಪಾವನ. ದೈಹಿಕ ಅಂಧತ್ವ ಲೆಕ್ಕಿಸದೆ ಅಂತರಂಗದ ಕಣ್ಣುಗಳ ತೇಜಸ್ಸಿನಿಂದ ಲೋಕಕ್ಕೆ ಬೆಳಕಾದವರು ಡಾ. ಪುಟ್ಟರಾಜ ಗವಾಯಿಗಳು.
ದೈಹಿಕ ಊನತೆಯಿಂದ ಮನುಷ್ಯ ಕೇವಲ ಅಸಹಾಯಕನಾಗು ವುದಲ್ಲದೆ, ಅವಮಾನವನ್ನೂ ಅನುಭವಿಸುತ್ತಾನೆ. ಅದನ್ನು ಅರಿತ ಗವಾಯಿಗಳು ಸಂಗೀತವೆಂಬ ದಿವ್ಯಾಯುಧವನ್ನು ಕರುಣಿಸಿ ದಿವ್ಯಾಂಗರನ್ನು ಮಹಾಶಕ್ತಿಯನ್ನಾಗಿ ಪರಿವರ್ತಿಸಿದರು. ಅವರ ವೈಯಕ್ತಿಕ ಸಾಧನೆ ಸಾಮಾನ್ಯವಲ್ಲ. ಹಿಂದುಸ್ತಾನಿ ಹಾಗೂ ಕರ್ನಾಟಕ ಸಂಗೀತದಲ್ಲಿ ಜ್ಞಾನ ಹೊಂದಿದ್ದಲ್ಲದೆ, ಎಲ್ಲ ವಾದ್ಯಗಳನ್ನು ಲೀಲಾಜಾಲವಾಗಿ ನುಡಿಸುತ್ತಿದ್ದ ಏಕಮೇವ ಸಂಗೀತಗಾರರು.
ಬದುಕಿನ ಪ್ರತಿಕ್ಷಣಗಳನ್ನು ಧ್ಯಾನಸ್ಥ ಸ್ಥಿತಿಯಲ್ಲಿ ಕಳೆದರು. ಓದು, ಬರಹ, ಸಂಗೀತ ಹಾಗೂ ಲಿಂಗಪೂಜೆಗಳ ಮೂಲಕ ಹೊಸಮಾರ್ಗ ಸೃಷ್ಟಿ ಮಾಡಿದರು. ಆಶ್ರಮದಲ್ಲಿ ಅಭ್ಯಾಸ ಮಾಡುತ್ತಿದ್ದ ಬಡ, ಅನಾಥ ಮಕ್ಕಳಿಗೆ ಒಂದಿನಿತು ತೊಂದರೆಯಾಗದಂತೆ ನೋಡಿಕೊಂಡರು. ಅವರ ಆಸಕ್ತಿಗೆ ಅನುಗುಣವಾಗಿ ಸಂಗೀತ ಶಿಕ್ಷಣ ನೀಡುವ ವಿನೂತನ ಪಠ್ಯಕ್ರಮ ಆಶ್ರಮದ್ದು. ಕೇವಲ ಉದ್ಯೋಗ ಅವಕಾಶಗಳನ್ನು ದೃಷ್ಟಿಯಲ್ಲಿ ಇಟ್ಟುಕೊಳ್ಳದೆ, ಸಾಧಕರಾಗಿ ಬೆಳೆಯಲಿ ಎಂಬ ದಿವ್ಯ ಪರಿಕಲ್ಪನೆ ಅವರದಾಗಿತ್ತು.
ಅವರ ಸಾವಿರಾರು ಶಿಷ್ಯರು ಸಂಗೀತ ದಿಗ್ಗಜರೆನಿಸಿಕೊಂಡಿದ್ದಾರೆ. ಇಂದಿಗೂ ಗುರುಸ್ಮರಣೆ ಮಾಡಿ ತಮ್ಮ ಕಛೇರಿ ಆರಂಭಿಸುತ್ತಾರೆ. ಗುರು-ಶಿಷ್ಯ ಪರಂಪರೆ ಉಳಿಸಿಕೊಂಡ ಹೆಗ್ಗಳಿಕೆ ಪುಣ್ಯಾಶ್ರಮಕ್ಕೆ ಸಲ್ಲುತ್ತದೆ. ಅವರು ರಚಿಸಿದ ಪುರಾಣ, ನಾಟಕಗಳು, ವಚನ, ಕೀರ್ತನಗಳು ಹಾಗೂ ಇತರ ಸಾಹಿತ್ಯ ಪ್ರಕಾರಗಳು ಸಾವಿರಾರು ಕೀರ್ತನಕಾರರಿಗೆ, ಪ್ರವಚನಕಾರರಿಗೆ ಕೈಪಿಡಿಗಳಾದವು. ಅವರ ದೃಷ್ಟಿಕೋನ ಅನನ್ಯ. ಸಾಹಿತ್ಯ, ಸಂಗೀತ ಪರಸ್ಪರ ಪೂರಕವಾಗಿ ಸಾಗುವ ಮಾರ್ಗದ ಸೂಕ್ಷ್ಮ ಸಂವೇದನೆಯನ್ನು ಸಮರ್ಥವಾಗಿ ಗ್ರಹಿಸಿದ್ದರು. ಅವರು ವೈಯಕ್ತಿಕ ಬದುಕಿನ ಭಕ್ತಿಮಾರ್ಗದ ಮೂಲಕ ದೇವರನ್ನು ಒಲಿಸಿಕೊಂಡು ಸ್ವತಃ ದೇವರಾದರು. ಅವರನ್ನು ನಂಬಿ ಬರುವ ಭಕ್ತರಿಗೆ ನಿರಂತರ ಸಾಂತ್ವನ ದಯಪಾಲಿಸುತ್ತಿದ್ದರು.
ಸಮಾಜದ ಎಲ್ಲ ವರ್ಗದ ಜನ ಅವರನ್ನು ದೇವರ ಸ್ವರೂಪದಲ್ಲಿ ಆರಾಧಿಸುತ್ತಿದ್ದರು. ಜಾತ್ಯತೀತ ಪದ ತನ್ನ ಹರವು ವಿಸ್ತರಿಸಿಕೊಂಡದ್ದು ಪುಣ್ಯಾಶ್ರಮದಲ್ಲಿ ಮಾತ್ರ ಎಂಬ ಭಾವ ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದೆ. ಭಕ್ತರು ಮಾಡುತ್ತಿದ್ದ ತುಲಾಭಾರ ಕೇವಲ ಸಾಂಕೇತಿಕ, ಅದರಿಂದ ಬರುವ ಹಣವನ್ನು ಮಠದ ಅಭಿವೃದ್ಧಿಗೆ ಬಳಸುತ್ತಿದ್ದರು. ತುಲಾಭಾರ ತನ್ನ ಮೌಲ್ಯ ಹೆಚ್ಚಿಸಿಕೊಂಡು ಭಕ್ತಿ ಮಾರ್ಗಕ್ಕಿರುವ ಇನ್ನೊಂದು ಹಾದಿ ಸೃಷ್ಟಿಸಿತು. ಅವರು ಆಚರಿಸುವ ಎಲ್ಲ ಕ್ರಿಯೆಗಳಲ್ಲಿ ಕೇವಲ ಭಕ್ತಿ ಮೆರೆಯುತ್ತಿತ್ತು, ಮೌಢ್ಯತೆಗೆ ಜಾಗವಿರಲಿಲ್ಲ. ಭಕ್ತಿ ಮತ್ತು ಪ್ರೀತಿಯ ಅಭಿವ್ಯಕ್ತಿಯನ್ನು ಪ್ರಶ್ನಿಸಬಾರದು ಮತ್ತು ಪ್ರಶ್ನಿಸಲಾಗದು ಎಂಬುದನ್ನು ಪೂಜ್ಯರು ತೋರಿಸಿಕೊಟ್ಟರು.
ನಂಬಿಗೆಯ ಮೂಲಕ ಮನುಷ್ಯ ಏನನ್ನಾದರೂ ಸಾಧಿಸಬಲ್ಲ ಎಂಬುದನ್ನು ಅವರು ಅವರ ಗುರುಗಳಾದ ಪಂಡಿತ ಪಂಚಾಕ್ಷರಿ ಗವಾಯಿಗಳಿಂದ ಕಲಿತಿದ್ದರು. ಅದನ್ನು ಇತರರು ಅರಿಯುವ ಅರಿವು ಮೂಡಿಸಿದರು. ವಿವಾದಗಳಿಂದ ಸದಾ ದೂರವಿದ್ದುಕೊಂಡು ಸಾಧನೆ ಮಾಡುತ್ತಲೇ ಸಾಗಿದರು. ದಾವಣಗೆರೆ ಹಾಗೂ ಶಿವಮೊಗ್ಗದ ಭಕ್ತರು ಪುಣ್ಯಾಶ್ರಮದ ಶಾಖೆಗಳನ್ನು ಆರಂಭಿಸುವ ಮನಸ್ಸು ಮಾಡಿದಾಗ ಸಂಭ್ರಮದಿಂದ ಒಪ್ಪಿಕೊಂಡರು. ಶಿವಮೊಗ್ಗ ಆಶ್ರಮದ ಪಂಡಿತ ಸಂಗಮೇಶ್ವರ ಗವಾಯಿಗಳವರ ಮೇಲೆ ಅಪಾರ ವಿಶ್ವಾಸವಿತ್ತು. ಅಂಧರಾದ ಸಂಗಮೇಶ್ವರ ಗವಾಯಿಗಳು ಧೃತಿಗೆಡದೆ ಲೋಕಸಂಚಾರ ಮಾಡಿ ಶಿವಮೊಗ್ಗ ಆಶ್ರಮ ಕಟ್ಟಿ ಬೆಳೆಸಿದರು.
ನಾಡಿನಲ್ಲಿ ಸಂಗೀತ ಎಂದರೆ ಪುಟ್ಟರಾಜರು ಎಂಬ ವ್ಯಾಖ್ಯಾನ ಆರಂಭವಾಯಿತು. ಸಂಗೀತ ಕಲಾವಿದರಿಗೆ ತಾವು ಆಶ್ರಮದ ಶಿಷ್ಯರೆಂದು ಹೇಳಿಕೊಳ್ಳಲು ಅಪಾರ ಹೆಮ್ಮೆ. ಇತ್ತೀಚೆಗೆ ತುಂಬ ಪ್ರಚಾರ ಪಡೆಯುತ್ತಿರುವ ಸಂಗೀತದ ರಿಯಾಲಿಟಿ ಶೋ ಗಳಲ್ಲಿ ಆಶ್ರಮದ ಶಿಷ್ಯರು ಪ್ರತಿಭೆಯನ್ನು ಇಡೀ ಜಗತ್ತಿಗೆ ಪರಿಚಯಿಸಿದ್ದಾರೆ. ಉಳ್ಳವರ ಸ್ವತ್ತಾಗಿದ್ದ ಸಂಗೀತ ಸಾಮಾನ್ಯರ ಸಂಪತ್ತಾಗಿದೆ ಎಂದು ಇಲ್ಲಿ ಗೆದ್ದ ಪ್ರತಿಭೆಗಳು ಸಾಬೀತು ಮಾಡಿದ್ದಾರೆ.
ಈಗ ಪುಟ್ಟರಾಜ ಗವಾಯಿಗಳು ನಮ್ಮೊಂದಿಗೆ ದೈಹಿಕವಾಗಿ ಮಾತ್ರ ಇಲ್ಲ. ಆದರೆ ನಮ್ಮ ಉಸಿರಲಿ, ಕಲಾವಿದರ ಕಂಠಸಿರಿಯಲಿ ಮಾರ್ದನಿಸುತ್ತಲೇ ಇದ್ದಾರೆ. ‘ಶರಣರಿಗೆ ಸಾವೆಂಬುದೇ ಇಲ್ಲ’ ಎಂಬುದಕ್ಕೆ ಪುಟ್ಟರಾಜ ಗವಾಯಿಗಳ ಬದುಕೇ ನಿದರ್ಶನ. ಅವರು ಆಚರಿಸುತ್ತಿದ್ದ ಪಂಚಾಕ್ಷರಿ ಗವಾಯಿಗಳ ಸ್ಮರಣೆ ಕಾರ್ಯಕ್ರಮ ಮೂಲಕ ಸಂಗೀತ ರಾತ್ರಿಗಳು ನಡೆಯುತ್ತಿದ್ದವು. ಈಗ ಪುಟ್ಟರಾಜ ಗವಾಯಿಗಳ ಜನ್ಮಸ್ಮರಣೆ ಹಾಗೂ ಪುಣ್ಯಸ್ಮರಣೆ ಮೂಲಕ ಸಂಗೀತ ರಸದೌತಣ ಸಾಗಿಯೇ ಇದೆ. ಗಾನಕೆ ಒಲಿಯದ ಮನಸೇ ಇಲ್ಲ, ಮನುಷ್ಯರೇ ಇಲ್ಲ ಎಂಬ ಸ್ಥಿತಿ ನೂರ್ಮಡಿಸಲು ವೀರೇಶ್ವರ ಪುಣ್ಯಾಶ್ರಮ ನಿರಂತರ ತನ್ನ ಕೆಲಸ ಮುಂದುವರಿಸಿದೆ.
ನೂರಾರು ಪ್ರಶಸ್ತಿಗಳು, ಸಾವಿರಾರು ಪುರಸ್ಕಾರಗಳು ಹಾಗೂ ಅಸಂಖ್ಯ ತುಲಾಭಾರಗಳು ಈಗ ಬರೀ ನೆನಪಲ್ಲ, ಅವೆಲ್ಲ ಜೀವಚೈತನ್ಯ, ಜೀವನೋತ್ಸಾಹದ ಕಂಪನಗಳು. ಸಂಗೀತಕ್ಕೆ ಭಾಷೆ, ಗಡಿಗಳ ಇತಿ ಮಿತಿಯಿಲ್ಲ. ಜಾತಿ, ಧರ್ಮಗಳ ಗೊಂದಲವಿಲ್ಲ. ಏನಿದ್ದರೂ ನಾದ, ನಿನಾದಗಳ ಜೀವತರಂಗ. ತಂಬೂರಿಯ ಶೃತಿ ಮೀಟಿದಾಗ, ಹಾರ್ವೇನಿಯಂ ಮೇಲೆ ಬೆರಳು ನಲಿಯುವಾಗ, ತಬಲಾ ಮೇಲೆ ಕೈ ಆಡಿಸುವಾಗ ಸಂಗೀತದ ಅಲೆಗಳು ತೇಲಿ ಬಂದು ಕಿವಿಗೆ ಅಪ್ಪಳಿಸಿ ಮನಸು ಪ್ರಫುಲ್ಲವಾದಾಗ ಪುಟ್ಟರಾಜರ ದಿವ್ಯವ್ಯಕ್ತಿತ್ವ ಕಣ್ಮುಂದೆ ಸುಳಿಯುತ್ತದೆ. ಮನಸು ಭಕ್ತಿ ಭಾವದಿಂದ ಹಾಡುತ್ತ ಹಾಡುತ್ತಾ ಕುಣಿದು ಕುಪ್ಪಳಿಸುತ್ತದೆ.
| ಸಿದ್ದು ಯಾಪಲಪರವಿ
(ಲೇಖಕರು ಹವ್ಯಾಸಿ ಬರಹಗಾರರು)