1992ರಲ್ಲಿ ಕೇಂದ್ರ ಸರ್ಕಾರದ ಮೂಲಕ ಬಂದ ಪಂಚಾಯತ್ ರಾಜ್ ತಿದ್ದುಪಡಿ ಕೇಂದ್ರಾಡಳಿತವೂ ಸೇರಿದಂತೆ, 20 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ರಾಜ್ಯಗಳನ್ನು ಬಿಟ್ಟು ಭಾರತದ ಉಳಿದೆಲ್ಲ ಭಾಗದಲ್ಲಿ ತ್ರಿಸ್ತರ ವ್ಯವಸ್ಥೆಯಲ್ಲಿ ಜಾರಿಗೊಂಡಿದೆ. ಅಂದರೆ, ಭಾರತ ದೇಶದ ನಾಗಲ್ಯಾಂಡ್, ಮೇಘಾಲಯ, ಮಿಜೋರಾಂ ಬಿಟ್ಟು ಉಳಿದೆಲ್ಲ ರಾಜ್ಯಗಳಲ್ಲಿ ಥ್ರೀ-ಟೈಯರ್ ಸಂಸ್ಥೆಯಾಗಿ ಅನುಷ್ಠಾನಗೊಂಡಿದೆ. ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದಾಗ ಸಹಜವಾಗಿಯೇ ಬಲಿಷ್ಠರ ಕೈಯಿಂದ ಅಧಿಕಾರ ಜಾರಿ ದುರ್ಬಲರ ಬೊಗಸೆಗೆ ಬಿದ್ದು ಬಿಟ್ಟಿತ್ತು. ಆಳರಸನೋ! ಊರರಸನೋ! ಆಗಿ ಪರಂಪರೆಯಿಂದ ಗ್ರಾಮ ಪಂಚಾಯತ್ ಅಧಿಕಾರ ಸೂತ್ರ ಹಿಡಿದ ಅನೇಕ ಬಲಾಢ್ಯರು ಪಂಚಾಯತ್ ಅಧಿಕಾರ ತಮ್ಮಿಂದ ತಮ್ಮ ಮಗ, ಮಗನಿಂದ ಮೊಮ್ಮಗನವರೆಗೆ ಹರಿದು ಹೋದದ್ದು ಬಿಟ್ಟರೆ ಅಧ್ಯಕ್ಷಗಿರಿಯ ಅಧಿಕಾರ ಜನಸಾಮಾನ್ಯರು ಕಣ್ಣೆತ್ತಿ ಕಾಣುವುದು ಸುಲಭವಾಗಿರಲಿಲ್ಲ. ಸಂವಿಧಾನ ತಿದ್ದುಪಡಿಯ ಕಾರಣದಿಂದ ನನ್ನೂರಿನಲ್ಲಿ ಅಧ್ಯಕ್ಷಗಿರಿ ಪ್ರಥಮ ಬಾರಿಗೆ ಶ್ರೀಮಂತರ ಮನೆಯ ದನದ ಕೊಟ್ಟಿಗೆಯಲ್ಲಿ ಸಗಣಿ ಬಾಚುತ್ತಿದ್ದ ಪರಿಶಿಷ್ಟ ಜಾತಿಯ ಮುತ್ತಕ್ಕನನ್ನು ಹುಡುಕಿ ಬಂದಿತ್ತು.
ಸ್ವತಂತ್ರ ಭಾರತದ ಏಳೂವರೆ ದಶಕ ಮೀರಿದ ಆಡಳಿತ ವ್ಯವಸ್ಥೆಯಲ್ಲಿ ಪಂಚಾಯತ್ ರಾಜ್ ಮಾತ್ರ ಸರ್ವರಿಗೂ ಸಮಾನತೆಯ ಸಂದೇಶಕ್ಕೆ ಒತ್ತು ಕೊಟ್ಟು ಕೆಲಸ ಮಾಡಿತು. ಆದ್ದರಿಂದಲೇ, ಭಾರತದ 2,55,401 ಗ್ರಾಮ ಪಂಚಾಯಿತಿಗಳಲ್ಲಿರುವ ಏಳು ಲಕ್ಷ ಸದಸ್ಯರಿಗೂ ಇದರಲ್ಲಿ ಅವಕಾಶ ಸಿಕ್ಕಿತು. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಬಹುತೇಕ ರಾಜ್ಯಗಳು ಶೇಕಡ 50ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ನೀಡುತ್ತಿವೆ. ಆ ಹಿನ್ನೆಲೆಯಲ್ಲಿ ಒಂದು ಸಾರಿ ಯೋಚನೆ ಮಾಡಿ ನೋಡಿ. ಭಾರತ ದೇಶದ 7 ಲಕ್ಷ ಸದಸ್ಯರಲ್ಲಿ ಸರಿಸುಮಾರು ಮೂರುವರೆ ಲಕ್ಷ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬುಡಕಟ್ಟು ಜನಾಂಗ ಮತ್ತು ಹಿಂದುಳಿದ ವರ್ಗದಿಂದ ಬಂದಿರುವ ಮಹಿಳೆಯರು ಅಧಿಕಾರ ಸೂತ್ರ ಹಿಡಿದಿದ್ದಾರೆ.
ಇದು ಬಲಾಢ್ಯರು ಸುಲಭವಾಗಿ ಜೀರ್ಣಿಸಿಕೊಳ್ಳಲಾಗದಷ್ಟು ಸೆಡ್ಡು ಹೊಡೆದು ವ್ಯವಸ್ಥೆ ಆಳವಾದ ಬೇರು ಬಿಟ್ಟಿದೆ. ದೇಶದಲ್ಲಿ ಒಂದು ಲಕ್ಷಕ್ಕೂ ಮಿಕ್ಕಿ ಮಹಿಳಾ ಅಧ್ಯಕ್ಷರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಷ್ಟೇ ಪ್ರಮಾಣದಲ್ಲಿ ಮಹಿಳೆಯರು ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ರಾಜ್ಯವೊಂದರಲ್ಲೇ 21 ರಿಂದ 22 ಸಾವಿರ ಪರಿಶಿಷ್ಟ ಜಾತಿಯವರು, ಪರಿಶಿಷ್ಟ ಪಂಗಡದವರು ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಒಂದು ರೇಷನ್ ಕಾರ್ಡ್ಗಾಗಿ ತಿಂಗಳುಗಟ್ಟಲೆ ತಾಲೂಕು ಕಚೇರಿಯಲ್ಲಿ ಅಲೆದಾಡುತ್ತಿದ್ದವರು. ಒಂದು ಮನೆ ಕಟ್ಟುವ ಪರವಾನಿಗೆಗೋಸ್ಕರ ಗ್ರಾಮ ಕಚೇರಿಗೆ ಸುತ್ತು ಬರುತ್ತಿದ್ದವರು, ಕುಡಿಯುವ ನಲ್ಲಿ ನೀರು ಕೊಡಿ ಎಂದು ಜಿಲ್ಲಾಧಿಕಾರಿಯವರಿಗೆ ಅರ್ಜಿ ಸಲ್ಲಿಸುತ್ತಿದ್ದವರು ಇಂದು ಪಂಚಾಯತ್ ರಾಜ್ ಮೂಲಕ ಅಧಿಕಾರದ ಸೂತ್ರ ಹಿಡಿದು ತಮ್ಮಂತೆ ಬದುಕುವ ಬಡವರ ಪರ ಕಡತ ವಿಲೇವಾರಿ ಮಾಡುತ್ತಿರುವುದು ಸಣ್ಣ ಮಾತಲ್ಲ.
ದುರದೃಷ್ಟಕ್ಕೆ ಸಂವಿಧಾನದ ತಿದ್ದುಪಡಿ ಮೂಲಕ 29 ವಿಷಯಗಳನ್ನು ಆಡಳಿತಾತ್ಮಕವಾಗಿ ಗ್ರಾಮ ಪಂಚಾಯಿತಿಗೆ ವರ್ಗೀಕರಿಸಲ್ಪಟ್ಟಿದ್ದರೂ ಅಧಿಕಾರದ ಹಂಚಿಕೆ ಮಾಡದೆ ಚಟುವಟಿಕೆ ನಕ್ಷೆಯಲ್ಲಿ ಸ್ಪಷ್ಟತೆ ಇಲ್ಲದೆ ಇಂದು ಕೂಡ ಹಲವು ಅಧಿಕಾರಗಳು ಗ್ರಾಮ ಪಂಚಾಯಿತಿಗೆ ಕೊಟ್ಟಿಲ್ಲ ಅಥವಾ ವಿಧಾನಸೌಧದಿಂದ ಅಧಿಕಾರ ಕೆಳಗಿಳಿಯಲು ಬಿಟ್ಟಿಲ್ಲ. ಹಾಗಾಗಿ ಗ್ರಾಮ ಸರ್ಕಾರಗಳಲ್ಲಿ ಸಂವಿಧಾನಬದ್ಧ ಅಧಿಕಾರವಿದ್ದು, ಹಲ್ಲಿಲ್ಲದ ಹಾವುಗಳಂತಾಗಿ ಒಂದರ್ಥದಲ್ಲಿ ಯಾರೇ ಬಂದರೂ ಪಂಚಾಯತ್ ರಾಜ್ ಶಾಪಗ್ರಸ್ತತೆಯಿಂದ ಮುಕ್ತವಾಗುತ್ತಿಲ್ಲ ಎಂಬಂತಾಗಿದೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ನಡೆಸುವ ಕಾಯ್ದೆಬದ್ಧ ಕಾರ್ಯಕ್ರಮಗಳಿಗೆ ಅಧೀನಧಿಕಾರಿಗಳಾಗಿ ಕೆಲಸ ಮಾಡಬೇಕು ಮತ್ತು ಅಭಿವೃದ್ಧಿ ಅಧಿಕಾರಿಗಳಾಗಿ ಪಂಚಾಯಿತಿಯನ್ನು ಮುನ್ನಡೆಸಬೇಕು. ಆದರೆ ಕೆಲವು ಪಂಚಾಯಿತಿಗಳಲ್ಲಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಸರಿಯಾದ ದಿಕ್ಕಿನಲ್ಲಿ ಸಾಗಿ ಗೌರವಯುತ ಕೆಲಸ ಕಾರ್ಯಗಳು ನಡೆಯುತ್ತಿದ್ದರೆ, ಮತ್ತೆ ಕೆಲವೆಡೆ ಎತ್ತು ಏರಿಗೆ, ಎಮ್ಮೆ ನೀರಿಗೆ ಇಳಿದಂತಾಗಿ ಗೊತ್ತು ಗುರಿಯಿಲ್ಲದ ಆಡಳಿತ ಸಾಗಿ ಒಬ್ಬರ ಮೇಲೊಬ್ಬರು ಪ್ರಕರಣ ದಾಖಲಿಸಿಕೊಂಡು ಪಂಚಾಯತ್ ಆಡಳಿತ ವ್ಯವಸ್ಥೆ ಆತಂಕ ಪಡುವ ಪರಿಸ್ಥಿತಿ ನಿರ್ವಣವಾದಾಗ ಮಧ್ಯ ಪ್ರವೇಶಿಸಿ ಸರಿದಾರಿಗೆ ತರಬೇಕಾದ ಮೇಲ್ಸ್ತರದ ಆಡಳಿತ ಇದ್ದೂ ಇಲ್ಲದಂತಾಗಿರುವುದು ಗೋಚರಿಸುತ್ತಿವೆ.
ಪಂಚಾಯತ್ ಕಾಯ್ದೆಯ ನಿಯಮ 52ರಂತೆ ಪ್ರತಿ ಗ್ರಾಮ ಪಂಚಾಯಿತಿಗಳಲ್ಲೂ ಗ್ರಾಮಸಭೆ, ವಾರ್ಡ್ ಸಭೆ, ಸಾಮಾನ್ಯ ಸಭೆ, ಅಲ್ಲದೆ ಪಂಚಾಯಿತಿ ಕೆಡಿಪಿ ಸಭೆ ಇವೆಲ್ಲವೂ ನಿಗದಿತ ಸಮಯದಲ್ಲಿ ಕಡ್ಡಾಯವಾಗಿ ನಡೆಯಬೇಕೆಂಬ ಸುತ್ತೋಲೆಗಳಿದ್ದರೂ ಕೆಲವು ಕಡೆ ವ್ಯವಸ್ಥಿತವಾಗಿ ಮತ್ತೆ ಕೆಲವು ಕಡೆ ಕಾಟಚಾರಕ್ಕೆ ನಡೆದ ಉದಾಹರಣೆಗಳೂ ಇವೆ. ನೋವಿನ ಸಂಗತಿಯೆಂದರೆ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯಿತಿಗಳು ಚುನಾಯಿತ ಪ್ರತಿನಿಧಿಗಳನ್ನು ಹೊಂದದೆ ಮೂರುವರೆ ವರ್ಷ ಸಂದು ಹೋಯಿತು.
ಮಹಾರಾಷ್ಟ್ರ ರಾಜ್ಯದಲ್ಲಿ ಹಿಂದುಳಿದ ವರ್ಗಕ್ಕೆ ಕೊಟ್ಟಿರುವ ಮೀಸಲಾತಿಯ ತಕರಾರು ಸುಪ್ರೀಂ ಕೋರ್ಟಿನ ಮೆಟ್ಟಿಲೇರಿ ಕಾನೂನು ಬಡಿದಾಟವಾಗುತ್ತಲೇ, ‘ಹಿಂದುಳಿದ ವರ್ಗದ ಬಲಾಢ್ಯ ಜಾತಿಗಳಷ್ಟೇ ಮೀಸಲಾತಿ ಪಡೆಯುತ್ತಿವೆ. ಸಣ್ಣ ಸಣ್ಣ ಜಾತಿಗಳಿಗೆ ಅಧಿಕಾರದ ಹಂಚಿಕೆಗೆ ಆಳುವವರ ನಿಲುವೇನು?’ ಎಂಬ ಸುಪ್ರೀಂಕೋರ್ಟಿನ ಪ್ರಶ್ನೆಗೆ ಉತ್ತರಿಸಲು ಸರ್ಕಾರ ತಡಬಡಿಸಿತ್ತು. ಘನವೆತ್ತ ನ್ಯಾಯಮೂರ್ತಿಗಳು, ‘ಒಂದೋ ಅವಕಾಶ ವಂಚಿತರಿಗೆ ಅಧಿಕಾರದ ಹಂಚಿಕೆ ಮಾಡಿ.
ಇಲ್ಲ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಬಿಟ್ಟು ಉಳಿದದ್ದೆಲ್ಲಕ್ಕೆ ಒಂದೇ ನಿಯಮದಡಿ ಚುನಾವಣೆ ಮಾಡಿ’ ಎಂದು ಸಲಹೆ ಕೊಟ್ಟ ನೆನಪು. ಹಿಂದೆ ನಮ್ಮದೇ ಸರ್ಕಾರವಿದ್ದು ನಾನೇ ಮಂತ್ರಿಯಾಗಿದ್ದಾಗ ಹಿಂದುಳಿದ ವರ್ಗಗಳಿಗೆ ಅಧಿಕಾರ ಹಂಚಿಕೆಗಾಗಿ ಮಾಡಿದ ನಿಯಮಗಳು ಹೊಸ ಸರ್ಕಾರ ಬಂದು ಎರಡು ವರ್ಷ ಸಂದರೂ ನ್ಯಾಯಾಲಯಕ್ಕೆ ಒಪ್ಪಿಸಿ ಸಹಮತ ಪಡೆದು ಚುನಾವಣೆ ನಡೆಸುವಲ್ಲಿ ಸಫಲವಾಗದೆ ಉಳಿದಿರುವುದು ಒಂದರ್ಥದಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ವ್ಯವಸ್ಥೆ ಮೇಲೆ ಚಪ್ಪಡಿ ಎಳೆದಂತಾಗಿದೆ.
ಜನಪ್ರತಿನಿಧಿಗಳಿಲ್ಲದ ಪಂಚಾಯತ್ ರಾಜ್ ವ್ಯವಸ್ಥೆಯು ಊಹಿಸಲಾಗದಷ್ಟು ನಿಷ್ಕಿ›ಯವಾಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಭೂಷಣವಲ್ಲ. ಇನ್ನಾದರೂ ಸರ್ಕಾರ ವಿಳಂಬವಿಲ್ಲದೆ ಪಂಚಾಯತ್ ರಾಜ್ ಚುನಾವಣೆ ಮಾಡಬೇಕಾದ ಅಗತ್ಯತೆ ತುರ್ತಾಗಿದೆ. ಭಾರತ ದೇಶದಲ್ಲಿ ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರಾದ ರಾಮಕೃಷ್ಣ ಹೆಗಡೆಯವರು ಸಮಾರಂಭವೊಂದರಲ್ಲಿ ಜಿಲ್ಲಾ ಪರಿಷತ್ ಅಧ್ಯಕ್ಷರನ್ನು ಸಂಬೋಧಿಸುತ್ತ, ‘ಈ ಜಿಲ್ಲೆಯ ಮುಖ್ಯಮಂತ್ರಿಗಳೇ...’ ಎಂದು ಕರೆದಿದ್ದರು. ಆದರಿಂದು, ಕರ್ನಾಟಕದಲ್ಲಿ ಜಿಲ್ಲಾ ಪಂಚಾಯಿತಿಗೆ ಮುಖ್ಯಮಂತ್ರಿಗಳೇ ಇಲ್ಲದೆ ಮೂರುವರೆ ವರ್ಷಗಳು ಸಂದು ಹೋಗುತ್ತಿವೆ. ಇಂದು ಪಂಚಾಯತ್ ರಾಜ್ ದಿನಾಚರಣೆಯಾಗಿದ್ದು, ಆಳಿಸಿಕೊಳ್ಳುವವರ ಆಡಳಿತಕ್ಕೆ ತುಕ್ಕು ಹಿಡಿಯಬಾರದೆಂಬುದೇ ಈ ಲೇಖನದ ಮುಖ್ಯ ಉದ್ದೇಶ. (ಲೇಖಕರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರು)