‘ಬಂಗಾರದ ಮನುಷ್ಯ’ ಚಿತ್ರದಲ್ಲಿ ಡಾ. ರಾಜ್ಕುಮಾರ್ ಬರಡು ಭೂಮಿಯಲ್ಲಿ ಹೊನ್ನು ಬೆಳೆದರೆ ಇಲ್ಲೊಂದು ಅವಿಭಕ್ತ ಕುಟುಂಬ ತಾಳೆ ಕೃಷಿ ಮೂಲಕ ಬರಡು ಭೂಮಿಯಲ್ಲಿ ಹಸಿರು ಕಂಗೊಳಿಸುವಂತೆ ಮಾಡಿದೆ. ದರಲೆ ಗುಡಿಸುವ ಯಂತ್ರದಿಂದ ಹಿಡಿದು, ಅಡಕೆ ಮರ ಗೊನೆಗೆ ಔಷಧಿ ಸಿಂಪರಣೆವರೆಗೆ, ತೆಂಗಿನ ಮರ ಏರುವುದರಿಂದ, ಅಡಕೆ ಗೊನೆ ಇಳಿಸುವವರಿಗೆ ಎಲ್ಲವೂ ಯಂತ್ರಾವಲಂಬಿತ! ಯಂತ್ರಗಳನ್ನು ತಾವೇ ಸಲೀಸಾಗಿ ಬಳಸುವಷ್ಟು ಪರಿಣತಿ ಇದೆ. ಅಷ್ಟೇ ಅಲ್ಲ ಈ ಕುಟುಂಬದವರೇ ಗೊನೆಯಿಂದ ಅಡಕೆ ಬೇರ್ಪಡಿಸುವ ಯಂತ್ರವನ್ನು ಅವಿಷ್ಕರಿಸಿದ್ದು, ಕಾರ್ವಿುಕರ ಬರ ನೀಗಿಸಿಕೊಂಡಿದೆ. ಉಡುಪಿ ಜಿಲ್ಲೆಯಲ್ಲಿ ತಾಳೆ (ಪಾಮ್ ಆಯಿಲ್) ಕೃಷಿ ಮಾಡಿ, ಅತ್ಯಧಿಕ ಇಳುವರಿ ಪಡೆದ ಪ್ರಥಮ ಕೃಷಿಕ, ಜಿಲ್ಲೆಯಲ್ಲಿ ತಾಳೆ ಕೃಷಿ ಆರಂಭಿಸಿದ ಎರಡನೇ ಕೃಷಿ ಕುಟುಂಬ ಇದು. ಕುಂದಾಪುರ ತಾಲೂಕು ಯಡಮೊಗೆ ಗ್ರಾಮ ಅಜ್ಜಿಕಾನು ಈ ಕುಟುಂಬದ ಆವಾಸಸ್ಥಾನ. ತಂದೆ ಶ್ರೀಪಾದ ಭಟ್ ಮಾರ್ಗದರ್ಶನದಲ್ಲಿ ಮಕ್ಕಳಾದ ಮಹೇಶ್ ಭಟ್ ಹಾಗೂ ರಾಜೇಶ್ ಭಟ್ ಮೂರು ವರ್ಷದ ಹಿಂದೆ 5 ಎಕರೆ ತೋಟದಲ್ಲಿ ತಾಳೆ ಕೃಷಿ ಆರಂಭಿಸಿದರು. ತಾಯಿ ಲಲಿತಾ, ಸೊಸೆಯಂದಿರಾದ ದೀಪಾ, ರಮ್ಯಾ ಕೂಡ ತಾಳೆ ತೋಟದಲ್ಲಿ ಬೆವರು ಸುರಿಸಿದ್ದು, ತಾಳೆ ಮರದಲ್ಲಿ ಟನ್ಗಟ್ಟಲೆ ಹಣ್ಣುಗಳ ಇಳುವರಿ ರೂಪದಲ್ಲಿ ಫಲ ನೀಡಿದೆ. ಮನೆ, ಅಂಗಳ ಬಿಟ್ಟರೆ ಮತ್ತೆಲ್ಲಾ ಹಸಿರು. ಅಡಕೆ, ಬಾಳೆ, ತರಕಾರಿ, ವೀಳ್ಯದೆಲೆ, ಕಾಳು ಮೆಣಸು ಎಲ್ಲವೂ ಇವರ ಕೃಷಿಯಲ್ಲಿದೆ. ಅಡಕೆ ಒಣಗಿಸುವುದಕ್ಕೆ ಅಂಗಳದಲ್ಲಿ ಶೇಡ್ನೆಟ್ ಫಿಟ್ ಮಾಡಿಕೊಂಡಿದ್ದಾರೆ. ಇದರಿಂದ ಅಡಕೆಗೆ ಕಲ್ಲು ಮಣ್ಣು ತಪ್ಪಿಸುವುದಲ್ಲದೆ, ಅಡಕೆ ಬೇಗ ಒಣಗುವುದಕ್ಕೂ ಸಹಾಯ ಮಾಡುತ್ತದೆ. ದರಲೆ ಒಟ್ಟು ಮಾಡುವುದಕ್ಕೂ ಯಂತ್ರ ಇದೆ. ಇವರೇ ಜನರೇಟರನ್ನು ಗ್ಯಾಸ್ ಸಂಪರ್ಕಕ್ಕೆ ಬದಲಾಯಿಸಿಕೊಂಡಿದ್ದಾರೆ. ವೆಲ್ಡಿಂಗ್ನಿಂದ ಹಿಡಿದು, ಸ್ಪಿಂಕ್ಲರ್ತನಕ ತರಹೇವಾರಿ ವಸ್ತುಗಳು ಇವರ ಮನೆಯಲ್ಲಿವೆ. ಕೃಷಿಗೆ ಬೇಕಾದ ಬಡಗಿ ಕೆಲಸದಿಂದ ಕಬ್ಬಿಣದ ಕೆಲಸದವರೆಗೆ, ಕೊಳವೆ ಬಾವಿಗೆ ಮೋಟಾರ್ ಇಳಿಸಿ ಏರಿಸುವುದಕ್ಕೂ ಇವರು ಯಂತ್ರ ಆವಿಷ್ಕರಿಸಕೊಂಡಿದ್ದಾರೆ. ಇದರಿಂದ ವರ್ಷಕ್ಕೆ ಒಂದರಿಂದ ಒಂದೂವರೆ ಲಕ್ಷ ರೂಪಾಯಿವರೆಗೆ ಲಾಭ ಗಳಿಸುತ್ತಿದ್ದಾರೆ.
ಪ್ರತಿದಿನ ಸಂಜೆ ಮನೆಯವರೆಲ್ಲಾ ಕೂತು ಕೃಷಿ ಬಗ್ಗೆ ಚರ್ಚೆ ನಡೆಸುತ್ತೇವೆ. ಈವತ್ತು ಏನಾಯಿತು ಎಷ್ಟಾಯಿತು ಎನ್ನುವ ಚರ್ಚೆ, ನಾಳೆ ಏನು ಮಾಡಬೇಕು ಎನ್ನುವ ತೀರ್ಮಾನ ಆಗುತ್ತದೆ. ಕೃಷಿ ವಿಷಯದಲ್ಲಿ ಪುರುಷರು ಮಹಿಳೆಯರು ಎನ್ನುವ ಭೇದಭಾವವಿಲ್ಲ. ನಮ್ಮ ಮನೆ ಮಹಿಳೆಯರು, ಬೇರೆ ಬೇರೆ ಕಡೆಯಿಂದ ಬಂದಿದ್ದರೂ ಕೃಷಿಗೆ ಒಗ್ಗಿಕೊಂಡಿದ್ದಾರೆ. ನಾವು ಒಂದೇ ಬೆಳೆ ನೆಚ್ಚಿಕೊಳ್ಳದೆ ವೀಳ್ಯದ ಎಲೆ, ಕಾಳು ಮೆಣಸು, ತರಕಾರಿ ಬೆಳೆಯುತ್ತೇವೆ. ಕೇಟರಿಂಗ್ ಕೂಡ ಮಾಡುತ್ತಿದ್ದು, ಅಡುಗೆಗೆ ನಾವೇ ಬೆಳೆದ ತರಕಾರಿ ಬಳಸುತ್ತೇವೆ. ಕೃಷಿಯಲ್ಲಿ ಯಂತ್ರ ಬಳಕೆ ಮಾಡಿದರಷ್ಟೇ ಸಾಲದು ಅದರ ಬಳಕೆ ಬಗ್ಗೆ ನಮಗೆ ಪರಿಣತಿ ಕೂಡ ಇದೆ. ಇದರಿಂದ ಕಾರ್ವಿುಕರ ಕೊರತೆಯ ಸಮಸ್ಯೆ ಇಲ್ಲ. ಸಮಯವೂ ಉಳಿತಾಯವಾಗುತ್ತಿದೆ.
| ರಾಜೇಶ್ ಭಟ್ ಉತ್ತಮ ಸಂಬಳದ ಕೆಲಸ ಬಿಟ್ಟು ಕೃಷಿಗೆ ಇಳಿದ ಯುವಕ
ತಾಳೆ ಅತ್ಯಂತ ನಂಬಿಕಸ್ಥ ಕೃಷಿಯಾಗಿದ್ದು, ಕೈಕೊಡುವ ಪ್ರಶ್ನೆಯೇ ಇಲ್ಲ. ಕೃಷಿ ಇಲಾಖೆಗೆ ತಾಳೆ ಕೃಷಿ ಬಗ್ಗೆ ಮಾಹಿತಿ ನೀಡಿದರೆ, ಅವರು ತಾಳೆ ಕೃಷಿ ನೋಡಿಕೊಳ್ಳುವ ಕಂಪನಿಗೆ ರೆಫರ್ ಮಾಡುತ್ತಾರೆ. ಕಂಪನಿಯವರೇ ಸ್ಥಳಕ್ಕೆ ಬಂದು ತಾಳೆ ಕೃಷಿಗೆ ಸ್ಥಳ ಯೋಗ್ಯವೇ ಎಂದು ಪರೀಕ್ಷಿಸಿ, ಯೋಗ್ಯವಾಗಿದ್ದರೆ, ಅವರೇ ಸಸಿ ಕೂಡ ಕೊಟ್ಟು ಮೂರು ವರ್ಷ ಮೈಂಟೇನಿಗಾಗಿ ಫರ್ಟಿಲೈಸರ್ ಕೂಡಾ ಕೊಡುತ್ತಾರೆ. ತಾಳೆ ಫಸಲು ಬಂದ ನಂತರ ಮಾರುಕಟ್ಟೆ ಸಮಸ್ಯೆ ಇಲ್ಲ. ಡೈರಿಗೆ ಹಾಲು ಹಾಕುವ ಹಾಗೆ ತಾಳೆ ಹಣ್ಣು ನಾವು ಕೊಟ್ಟರಾಯಿತು. ಎಷ್ಟು ಟನ್ ಕೊಟ್ಟಿದ್ದೇವೆ, ಬೆಲೆ ಎಲ್ಲವೂ ಕ್ಷಣಮಾತ್ರದಲ್ಲಿ ಮೊಬೈಲಿಗೆ ಮಸೇಜ್ ಬರುತ್ತದೆ. 1 ಕೇಜಿಗೆ ತಾಳೆಗೆ ಸರ್ಕಾರ -ಠಿ;11.50 ಬೆಂಬಲ ಕೊಡುತ್ತಿದ್ದು, ನಾವು ಕೊಟ್ಟ ತಾಳೆಹಣ್ಣಿನ ಟನ್ ಲೆಕ್ಕದಲ್ಲಿ ನಮ್ಮ ಅಕೌಂಟಿಗೆ ಬೆಂಬಲ ಬೆಲೆ ಬಂದು ಬೀಳುತ್ತದೆ. ತಾಳೆ ಗಿಡಿ ಸಣ್ಣದಿದ್ದಾಗ ಹಂದಿ ಕಣೆಹಂದಿ ಸಮಸ್ಯೆ ಬಿಟ್ಟರೆ ಮತ್ತಾವ ರೋಗವೂ ತಾಳೆ ಮರಕ್ಕೆ ಬರುವುದಿಲ್ಲ. ತಾಳೆ ನಿಜಕ್ಕೂ ಲಾಭದಾಯಕ ಕೃಷಿ.ತಾಳೆ ಕೃಷಿಕರ ಸೊಸೈಟಿ ಕೂಡಾ ಸದ್ಯದಲ್ಲಿ ಆರಂಭವಾಗಲಿದೆ.
| ಮಹೇಶ್ ಭಟ್ ಉಡುಪಿ ಜಿಲ್ಲೆಯಲ್ಲಿ ತಾಳೆ ಕೃಷಿ ಆರಂಭಿಸಿದ 2ನೇ ಇಳುವರಿಯಲ್ಲಿ ಪ್ರಥಮ ಸ್ಥಾನ ಪಡೆದ ಕೃಷಿಕ
ಯಂತ್ರ ಸಿದ್ಧವಾಗಿದ್ದು ಹೇಗೆ..: ಶ್ರೀಪಾದ ಭಟ್ ಮಕ್ಕಳು ಪುತ್ತೂರಲ್ಲಿ ಗೊನೆಯಿಂದ ಅಡಕೆ ಬೇರ್ಪಡಿಸುವ ಯಂತ್ರ ನೋಡಿ ನಂತರ ತಮ್ಮದೇ ಕಲ್ಪನೆ ಯಂತ್ರ ಸಿದ್ಧಪಡಿಸಿದ್ದಾರೆ. ನಿರುಪಯುಕ್ತ ಕೊಳವೆಬಾವಿ ಪೈಪಿಗೆ ಎರಡಿಂಚು ಉದ್ದದ ಕಬ್ಬಿಣದ ಕಂಬಿ ವೆಲ್ಡ್ ಮಾಡಿದ್ದಾರೆ. ಎರಡೂ ಬದಿ ವೆಲ್ಡ್ ಆದ ಡ್ರಮ್ ಮಧ್ಯೆ ಕಂಬಿ ಕೂರಿಸಿ, ಅದಕ್ಕೆ ಬೇರಿಂಗ್ ಕೂರಿಸಿ, ಆಧಾರಸ್ತಂಭಕ್ಕೆ ಸೇರಿಸಲಾಗಿದೆ. ಒಂದು ಬದಿ ಕಂಬಿಗೆ ಫ್ಯಾನ್ ಬೆಲ್ಟ್ ಕೂರಿಸಲು ಅನುಕೂಲವಾಗುವಂತೆ ಪುಲ್ಲಿ ಕೂರಿಸಲಾಗಿದೆ. ಯಂತ್ರದ ಪ್ಲಾಟ್ಪಾಮರ್್ನಲ್ಲಿ ಎರಡು ಹೆಚ್ಪಿ ಮೋಟಾರ್ ಕೂರಿಸಿದ್ದು, ಪುಲ್ಲಿಯಿಂದ ಮೋಟಾರಿಗೆ ಫ್ಯಾನ್ ಬೆಲ್ಟ್ ಸೇರಿಸಲಾಗಿದೆ. ಯಂತ್ರದ ಮುಂಭಾಗದಲ್ಲಿ ಅಡಕೆ ಗೊನೆ ಹಿಡಿದರೆ ತಿರುಗುವ ಡ್ರಮ್ ಅಡಕೆ ಗೊನೆಯಿಂದ ಬೇರ್ಪಡಿಸುತ್ತದೆ. ಹೇಗೆ ಬೇರ್ಪಟ್ಟ ಅಡಕೆ ಯಂತ್ರದ ಮುಂಭಾಗದಲ್ಲಿ ಇಟ್ಟ ಬುಟ್ಟಿಗೋ ಅಥವಾ ಚೀಲಕ್ಕೋ ಬೀಳುತ್ತದೆ. 200 ಗೊನೆ ಅಡಕೆ ಬೇರ್ಪಡಿಸಲು 15 ನಿಮಿಷ ಸಾಕು. ಸಾವಿರಾರು ಗೊನೆಯಿಂದ ಅಡಕೆ ಬೇರ್ಪಡಿಸಲು ಹತ್ತಾರು ಕೂಲಿಯಾಳು, ಒಂದೆರಡು ದಿನ ಬೇಕಾಗುತ್ತದೆ. ಆದರೆ ಯಂತ್ರ ಈ ಕೆಲಸ ಒಂದೆರಡು ಗಂಟೆಯಲ್ಲಿ ಮಾಡಿ ಮುಗಿಸುತ್ತದೆ. ಪ್ರಸಕ್ತ ಸಿದ್ಧಪಡಿಸಿದ ಯಂತ್ರದಲ್ಲಿ ಅಡಕೆ ಬೇರ್ಪಡುವಾಗ ದೂರ ಸಿಡಿಯುತ್ತಿದ್ದು, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಯಂತ್ರವನ್ನೂ ಬೇರೆ ಬೇರೆ ಕಡೆ ಒಯ್ಯುವ ವ್ಯವಸ್ಥೆ ಅಳವಡಿಸಿಕೊಂಡಿದೆ. ಮೋಟಾರ್ನಿಂದ ಡ್ರಮ್ಮಿಗೆ ಬಂದ ಫ್ಯಾನ್ಬೆಲ್ಟ್ ತೆರೆದುಕೊಂಡಿದ್ದು, ಅಪಾಯ ಆಗದಂತೆ ಕವರ್ ಮಾಡುವ ಸಿದ್ಧತೆ ನಡೆಯುತ್ತಿದೆ. ಮನೆಯ ಹೆಂಗಸರು ಒಂದೊಂದೇ ಗೊನೆ ಕೊಡುತ್ತಿದ್ದರೆ, ಪುರುಷರು ಯಂತ್ರಕ್ಕೆ ಗೊನೆ ಹಿಡಿದರೆ, ಉಳಿದವರು ಅಡಕೆ ಬುಟ್ಟಿ ಹಾಗೂ ಚೀಲದ ಮೂಲಕ ಒಳಗಿರಿಸುವ ಕೆಲಸ ಮಾಡುತ್ತಾರೆ.
ನಾನು ನರ್ಸಿಂಗ್ ಡಿಪ್ಲೋಮಾ ಮಾಡಿದ್ದು, ನನ್ನ ಪತಿ ಎಲೆಕ್ಟ್ರಾನಿಕ್ ಇಂಜಿನಿಯರ್. ಬೆಂಗಳೂರಲ್ಲಿ ಕೆಲಸ ಇತ್ತು. ಒಮ್ಮೆ ಊರಿಗೆ ಬರುವಾಗ ಕಾರ್ ಅಪಘಾತಕ್ಕೆ ಸಿಕ್ಕಿ ಬಚಾವಾಗಿದ್ದೇ ದೊಡ್ಡದು. ಮನೆಯಲ್ಲಿ ನಮ್ಮನ್ನು ಮಕ್ಕಳಂತೆ ನೋಡಿಕೊಂಡರು. ನನ್ನ ಹಾಗೂ ಪತಿ ದೇಹದಲ್ಲಿ ಮೂಳೆಗಿಂತ ರಾಡ್ಗಳೇ ಹೆಚ್ಚಿವೆ. ಕೃಷಿ ನಮ್ಮಲ್ಲಿ ಹೊಸ ಚೈತನ್ಯ ತಂದಿದ್ದೇ ಅದರಲ್ಲಿ ಆಸಕ್ತಿ ಮೂಡಲು ಕಾರಣ. ನಾವಿಷ್ಟು ಲವಲವಿಕೆಯಿಂದ ಇರುವುದನ್ನು ಕಂಡು ವೈದ್ಯರೇ ಅಚ್ಚರಿಪಟ್ಟಿದ್ದಾರೆ. ಮತ್ತೆ ಬದುಕು ಕೊಟ್ಟ ಕೃಷಿ ನಮ್ಮ ಉಸಿರು. ಬೆಂಗಳೂರಲ್ಲಿ ಪಡೆಯುತ್ತಿರುವ ಸಂಬಳಕ್ಕಿಂತ ಹೆಚ್ಚು ಕೃಷಿ ನಮಗೆ ಕೊಡುತ್ತದೆ. ಕೃಷಿಯಲ್ಲಿ ತೊಡಗಿಸಿಕೊಳ್ಳುವಾಗ ಸಿಗುವ ತೃಪ್ತಿ, ನಾವು ಬೆಳೆದಿದ್ದನ್ನು ಬಳಸುವಾಗ ಸಿಗುವ ಖುಷಿ ಕೋಟಿ ಕೊಟ್ಟರೂ ಸಿಗುವುದಿಲ್ಲ.
| ರಮ್ಯಾ ಭಟ್
| ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ