ಅಂಕಣ

ಅರಬ್ ರಕ್ತಕ್ಕಿಂತ ಪಾಕಿಸ್ತಾನಿ ರಕ್ತ ಸಸ್ತಾ! ಯಾಕೆ ಗೊತ್ತಾ?

ಸೇನಾ ಕೂಟವೊಂದನ್ನು ಸ್ಥಾಪಿಸಿಕೊಳ್ಳುವ ಸಲುವಾಗಿ ಪಶ್ಚಿಮದ ದೇಶಗಳು 1947ರಲ್ಲಿ ವಾರ್ತಾಲಾಪ ಆರಂಭಿಸಿದಾಗ ಅವುಗಳ ಮುಂದೆ ಒಂದು ನಿರ್ದಿಷ್ಟ ಅಪಾಯ ಎದ್ದುನಿಂತಿತ್ತು. ಅದು ಕೇವಲ ಸೇನಾ ಅಪಾಯವಾಗಿರಲಿಲ್ಲ. ಅಂದು ಸೋವಿಯತ್ ಯೂನಿಯನ್​ನಲ್ಲಿ ಅಸ್ತಿತ್ವದಲ್ಲಿದ್ದ ಕಮ್ಯೂನಿಸ್ಟ್ ನಿರಂಕುಶ ಆಡಳಿತ ವ್ಯವಸ್ಥೆ ಪಶ್ಚಿಮದ ದೇಶಗಳಲ್ಲಿನ ಪ್ರಜಾಪ್ರಭುತ್ವಕ್ಕೆ ಸಂಪೂರ್ಣ ವಿರುದ್ಧವಾಗಿತ್ತು. ಆರ್ಥಿಕ ವಿಷಯದಲ್ಲಿ ಸೋವಿಯತ್ ಅನುಸರಿಸುತ್ತಿದ್ದ ಪೂರ್ಣ ಸರ್ಕಾರಿ ನಿಯಂತ್ರಿತ ವ್ಯವಸ್ಥೆ ಪಶ್ಚಿಮ ಯೂರೋಪಿಯನ್ ದೇಶಗಳ ಮುಕ್ತ ಅರ್ಥವ್ಯವಸ್ಥೆಗೆ ವಿರುದ್ಧವಾಗಿತ್ತು. ಇದರೊಂದಿಗೆ ಸೋವಿಯತ್ ಸೇನಾ ಚಟುವಟಿಕೆಗಳು ಪಶ್ಚಿಮ ಯೂರೋಪಿಯನ್ ದೇಶಗಳಲ್ಲಿ ಕಳವಳವನ್ನೂ ಉಂಟುಮಾಡಿದ್ದವು.

ಗ್ರೀಸ್, ಟರ್ಕಿಗಳಲ್ಲಿ ತನ್ನ ಕೈಗೊಂಬೆ ಸರ್ಕಾರಗಳನ್ನು ಸ್ಥಾಪಿಸುವುದರಲ್ಲಿ ಮಾಸ್ಕೋ ಯಶಸ್ವಿಯಾದರೆ ಅನತಿ ಕಾಲದಲ್ಲಿ ಸೋವಿಯತ್ ನೌಕಾಸೇನೆ ತಮ್ಮ ತೀರಗಳಲ್ಲಿ ಕಾಣಿಸಿಕೊಳ್ಳುವ ಅಪಾಯವನ್ನು ಇಟಲಿ, ಫ್ರಾನ್ಸ್ ಮನಗಂಡಿದ್ದವು. ಒಂದು ವೇಳೆ ಸೋವಿಯತ್ ನೌಕಾಸೇನೆ ಜಿಬ್ರಾಲ್ಟರ್​ಅನ್ನು ದಾಟಿದರೆ ತಾವೂ ಅಪಾಯಕ್ಕೆ ಸಿಲುವ ಸಾಧ್ಯತೆ ಪೋರ್ತಗಲ್, ಬ್ರಿಟನ್​ಗಳನ್ನು ಕಾಡುತ್ತಿತ್ತು. ಅದೇ ವೇಳೆಗೆ ಸೋವಿಯತ್ ಭೂಸೇನೆ ತಾನು ಈಗಾಗಲೇ ಭದ್ರವಾಗಿ ನೆಲೆನಿಂತಿದ್ದ ಪೂರ್ವ ಜರ್ಮನಿ ಮತ್ತು ಝೆಕೊಸ್ಲೊವೇಕಿಯಾಗಳ ಪಶ್ಚಿಮ ಗಡಿಗಳನ್ನು ದಾಟಿದರೆ ಪಶ್ಚಿಮ ಯೂರೋಪ್​ನ ಹೃದಯಭಾಗ ಬಲಹೀನಗೊಳ್ಳುತ್ತಿತ್ತು. ಆಗಷ್ಟೇ ಎರಡನೇ ಜಾಗತಿಕ ಯುದ್ಧದಿಂದ ಹೊರಬಂದು ನೆಲಕಚ್ಚಿದ್ದ ತಮ್ಮ ಅರ್ಥವ್ಯವಸ್ಥೆಗಳನ್ನು ಮತ್ತೆ ಹಳಿಗೇರಿಸಲು ಹೆಣಗುತ್ತಿದ್ದ ಪಶ್ಚಿಮ ಯೂರೋಪಿಯನ್ ದೇಶಗಳಿಗೆ ಸೋವಿಯತ್ ಅಪಾಯವನ್ನು ಎದುರಿಸಿ ನಿಲ್ಲುವ ಸಾಮರ್ಥ್ಯವೇ ಇರಲಿಲ್ಲ. ಹೀಗಾಗಿ ಮಾರ್ಷಲ್ ಪ್ಲಾನ್ ಮೂಲಕ ತಮ್ಮ ಆರ್ಥಿಕ ಪುನರುತ್ಥಾನಕ್ಕೆ ಸಹಕರಿಸುತ್ತಿದ್ದ ಅಮೆರಿಕವೇ ತಮ್ಮ ಸುರಕ್ಷೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಸಮರ್ಥವಾದ ದೇಶ ಎಂದು ಅವೆಲ್ಲವೂ ಸಾಮೂಹಿಕವಾಗಿ ತೀರ್ವನಿಸಿದ್ದವು.

ಇದು ಅಮೆರಿಕದ ಆಗಿನ ಹಿತಾಸಕ್ತಿಗಳಿಗೂ ಪೂರಕವಾಗಿಯೇ ಇತ್ತು. ಒಂದು ವೇಳೆ ಮಾಸ್ಕೋದ ಹಿಡಿತಕ್ಕೆ ಪಶ್ಚಿಮ ಯೂರೋಪ್ ಸಿಕ್ಕಿಹೋದರೆ ದ್ವಿಗುಣ ಅಥವಾ ತ್ರಿಗುಣಗೊಳ್ಳುವ ಸೋವಿಯತ್ ಆರ್ಥಿಕ-ಸೇನಾಶಕ್ತಿಯನ್ನು ತಾನಷ್ಟೇ ಏಕಾಂಗಿಯಾಗಿ ಎದುರಿಸುವ ಸಂಕಷ್ಟ ವಾಷಿಂಗ್ಟನ್​ನ ಅರಿವಿಗೆ ಬಂದಾಗಿತ್ತು. ಪಶ್ಚಿಮ ಯೂರೋಪ್​ಅನ್ನು ರಕ್ಷಿಸುವುದು ತನ್ನ ರಕ್ಷಣೆಯ ಮೊದಲ ಹಾಗೂ ಪ್ರಮುಖ ಹೆಜ್ಜೆ ಎಂದು ಅಮೆರಿಕ ನಂಬಿತ್ತು. ಹೀಗಾಗಿಯೇ ಆ ಎಲ್ಲ ದೇಶಗಳೂ ಒಟ್ಟುಗೂಡಿ ತಮ್ಮ ಸಾಮೂಹಿಕ ಸುರಕ್ಷೆಗಾಗಿ ಸೇನಾಕೂಟವೊಂದನ್ನು ಸ್ಥಾಪಿಸಿಕೊಳ್ಳುವ ವಿಷಯದಲ್ಲಿ ಒಮ್ಮತಕ್ಕೆ ಬಂದವು. ಅದರಂತೆ ನ್ಯಾಟೋ ಅಸ್ತಿತ್ವಕ್ಕೆ ಬಂತು.

ಈಗ ನಾವು ನಮ್ಮ ವಿಶ್ಲೇಷಣೆಯನ್ನು ಫಾಸ್ಟ್ ಫಾರ್ವರ್ಡ್ ಮಾಡಿ 2025ಕ್ಕೆ ತರೋಣ. ಇಂದು ಮುಸ್ಲಿಂ ದೇಶಗಳಿಗೆ ಒಂದು ನಿರ್ದಿಷ್ಟ ಅಪಾಯದ ಮೂಲವಿದೆಯೇ? ಅದನ್ನು ಒಟ್ಟಾಗಿ ಎದುರಿಸುವುದು ತಮ್ಮ ಅಸ್ತಿತ್ವದ ಅಗತ್ಯ ಎಂದು ಎಲ್ಲ ಮುಸ್ಲಿಂ ದೇಶಗಳು ಭಾವಿಸುತ್ತವೆಯೇ? ಈ ಎರಡೂ ಪ್ರಶ್ನೆಗಳಿಗೆ ಉತ್ತರ ಒಂದು ದೊಡ್ಡ ದನಿಯ ‘ಇಲ್ಲ’ ಎಂದು.

ಇಂದು ಜಗತ್ತಿನಲ್ಲಿ 57 ಮುಸ್ಲಿಂ ದೇಶಗಳಿವೆ. ಇಸ್ರೇಲಿ ದಾಳಿಯನ್ನು ಖಂಡಿಸಿ ಕತಾರ್​ಗೆ ಸಹಾನುಭೂತಿ ವ್ಯಕ್ತಪಡಿಸಲು ಒಟ್ಟುಗೂಡಿದ ಮುಸ್ಲಿಂ ದೇಶಗಳು 40. ಮೂರು ತಿಂಗಳ ಹಿಂದೆ ಇರಾನ್ ಮೇಲಿನ ಇಸ್ರೇಲಿ ದಾಳಿಯನ್ನು ಖಂಡಿಸಲು ಕೇವಲ 27 ಮುಸ್ಲಿಂ ದೇಶಗಳು ಒಂದೆಡೆ ಸೇರಿದ್ದವು. ಅಂದರೆ ಇಸ್ರೇಲಿ ದಾಳಿಗೆ ಒಳಗಾಗುವ ಮುಸ್ಲಿಂ ದೇಶಗಳಿಗೆ ಸಹಾನುಭೂತಿ ವ್ಯಕ್ತಪಡಿಸುವುದರಲ್ಲಿ ಮುಸ್ಲಿಂ ದೇಶಗಳೇ ತಾರತಮ್ಯ ಎಸಗುತ್ತವೆ! ಇದರರ್ಥ ಇಸ್ರೇಲನ್ನು ತಮ್ಮ ಸಾಮೂಹಿಕ ಅಪಾಯದ ಮೂಲ ಎಂದು ಎಲ್ಲ ಮುಸ್ಲಿಂ ದೇಶಗಳೂ ಒಪ್ಪುವುದಿಲ್ಲ. ಗಮನಿಸಬೇಕಾದ ವಿಷಯವೆಂದರೆ ಇರಾನ್ ಅಥವಾ ಕತಾರ್ ಪರವಾಗಿ ನಿಂತು ಇಸ್ರೇಲ್ ವಿರುದ್ಧ ಶಕ್ತಿಪ್ರದರ್ಶನಕ್ಕೆ ಹಲವು ಪ್ರಮುಖ ಮುಸ್ಲಿಂ ದೇಶಗಳು ಸಿದ್ಧವಿಲ್ಲ! ಈ ಕುರಿತಾಗಿ ಪ್ರಮುಖವೆನಿಸುವ ಕೆಲವು ಉದಾಹರಣೆಗಳನ್ನು ನೋಡೋಣ.

ಇಸ್ರೇಲ್ ಜತೆ ಅನಧಿಕೃತವಾಗಿ ಸಂಬಂಧಗಳನ್ನು ವೃದ್ಧಿಸಿಕೊಳ್ಳಲು ಮುಸ್ಲಿಂ ಜಗತ್ತಿನ ನಾಯಕ ಸೌದಿ ಅರೇಬಿಯಾ ಕನಿಷ್ಠ ಅರ್ಧ ದಶಕದಿಂದಲೂ ಪ್ರಯತ್ನಿಸುತ್ತಲೇ ಇದೆ. ಅವೆರಡೂ ದೇಶಗಳ ನಡುವೆ ಆರ್ಥಿಕ ಹೊಕ್ಕುಬಳಕೆ ವರ್ಷವರ್ಷಕ್ಕೂ ವಿಸ್ತರಿಸುತ್ತಲೇ ಇದೆ. 2 ವರ್ಷಗಳ ಹಿಂದೆ ಘಟಿಸಿದ ಹಮಾಸ್ ದಾಳಿ ಘಟಿಸದೇ ಇದ್ದಿದ್ದರೆ, ಇಸ್ರೇಲ್ ಗಾಜಾ ಮೇಲೆ ಭೀಕರವಾಗಿ ಎರಗದೇ ಹೋಗಿದ್ದರೆ ಇಷ್ಟರಲ್ಲಿ ಆ ಯೆಹೂದಿ ರಾಷ್ಟ್ರ ಮತ್ತು ಈ ಮುಸ್ಲಿಂ ಜಗತ್ತಿನ ನಾಯಕ ಮುಕ್ತ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿಕೊಂಡಿರುತ್ತಿದ್ದವು. ಇಸ್ಲಾಮಿಕ್ ಜಗತ್ತಿನ ಇನ್ನೊಂದು ಪ್ರಮುಖ ಹಾಗೂ ಪ್ರಭಾವಶಾಲಿ ದೇಶ ಯುಎಇ. ಆ ದೇಶ ಈಗಾಗಲೇ ಐ2-ಯು2 (ಇಸ್ರೇಲ್-ಇಂಡಿಯಾ ಮತ್ತು ಯುಎಸ್-ಯುಎಇ) ಲಾಂಛನದಡಿ ಇಸ್ರೇಲ್ ಜತೆ ವ್ಯಾವಹಾರಿಕ ಸಂಬಂಧಗಳನ್ನು ಚಾಲ್ತಿಯಲ್ಲಿಟ್ಟಿದೆ.

ಇಲ್ಲಿ ಜೋರ್ಡಾನ್​ನ ಪ್ರಸ್ತಾಪ ಅಗತ್ಯ. ಇಸ್ರೇಲ್​ನ ಪೂರ್ವಕ್ಕಿರುವ ಈ ಪ್ರಮುಖ ಅರಬ್ ಮುಸ್ಲಿಂ ದೇಶ ಇಸ್ರೇಲ್ ಜತೆ ಕಳೆದ ಕಾಲು ಶತಮಾನದಿಂದಲೂ ಹಿತಕರ ಸಂಬಂಧ ಸ್ಥಾಪಿಸಿಕೊಂಡಿದೆ. ಇರಾನ್ ಮೇಲೆ ದಾಳಿಯೆಸಗಲು ಹೊರಟ ಇಸ್ರೇಲಿ ಯುದ್ಧವಿಮಾನಗಳು ತನ್ನ ವಾಯುಪ್ರದೇಶದಲ್ಲಿ ಹಾದುಹೋಗಲು ಅನುಮತಿ ನೀಡಿದ ಜೋರ್ಡಾನ್ ಇದೇ ಅನುಮತಿಯನ್ನು ಇರಾನ್​ಗೆ ನೀಡದೇ ಹೋದದ್ದನ್ನು, ಇಸ್ರೇಲ್​ನತ್ತ ಸಾಗುತ್ತಿದ್ದ ಇರಾನಿ ಕ್ಷಿಪಣಿ ಮತ್ತು ಡ್ರೋನ್​ಗಳನ್ನು ತನ್ನ ವಾಯುಪ್ರದೇಶದಲ್ಲಿ ಹೊಡೆದುರುಳಿಸಿದ್ದನ್ನು ನೆನಪಿಸಿಕೊಂಡರೆ ಆ ಪ್ರಮುಖ ಮುಸ್ಲಿಂ ದೇಶ ಯಾರ ಪರವಾಗಿದೆ ಎಂದು ಸಂಶಯಕ್ಕೆಡೆಯಿಲ್ಲದಂತೆ ತಿಳಿದುಕೊಳ್ಳಬಹುದು.

ಇಸ್ರೇಲ್ ಜತೆಗೂಡಿ ಇಂಡಿಯಾ-ಮಿಡ್ಲ್​ಈಸ್ಟ್-ಯೂರೋಪ್ ಎಕನಾಮಿಕ್ ಕಾರಿಡಾರ್ (ಐಮೆಕ್) ಅಭಿವೃದ್ಧಿಪಡಿಸಲು 2023ರ ಸೆಪ್ಟೆಂಬರ್​ನಲ್ಲಿ ಯುಎಇ, ಸೌದಿ ಅರೇಬಿಯಾ ಮತ್ತು ಜೋರ್ಡಾನ್ ಸಹಮತಕ್ಕೆ ಬಂದಿದ್ದವು. ಗಾಜಾ ಸಂಘರ್ಷದಿಂದಾಗಿ ನಿಲುಗಡೆಗೆ ಬಂದಿರುವ ಆ ಯೋಜನೆ ಅನುಕೂಲಕರ ಸನ್ನಿವೇಶ ಪುನರ್ನಿರ್ವಣವಾದಾಗ ಮತ್ತೆ ಚಾಲನೆಗೊಳ್ಳುವುದು ನಿಶ್ಚಿತ. ಇದೆಲ್ಲದರ ಅರ್ಥ ಪ್ರಮುಖ ಮುಸ್ಲಿಂ ದೇಶಗಳು ಇಸ್ರೇಲ್ ಜತೆಗಿನ ಆರ್ಥಿಕ ಸಂಬಂಧಗಳಿಗೆ ಹೆಚ್ಚಿನ ಪ್ರಾಧಾನ್ಯ ನೀಡುತ್ತವೆ ಹಾಗೂ ಇರಾನ್, ಕತಾರ್ ಅಥವಾ ಇನ್ನಾವುದೇ ಮುಸ್ಲಿಂ ದೇಶದ ಪರವಾಗಿ ನಿಂತು ತಮಗೆ ಅನನುಕೂಲ ಉಂಟುಮಾಡಿಕೊಳ್ಳಲು ತಯಾರಾಗಿಲ್ಲ.

ಈಗ ಅರಬ್ ಜಗತ್ತಿನಾಚೆಗೆ ಕಣ್ಣು ಹಾಯಿಸೋಣ. ಜನಸಂಖ್ಯೆ ದೃಷ್ಟಿಯಿಂದ ಅತಿ ದೊಡ್ಡ ಮುಸ್ಲಿಂ ರಾಷ್ಟ್ರ ಇಂಡೋನೇಷ್ಯಾ. ಇಸ್ಲಾಮಿಕ್ ನ್ಯಾಟೋ ಸ್ಥಾಪನೆ ಕುರಿತು ಪಾಕಿಸ್ತಾನದ ರಕ್ಷಣಾ ಮಂತ್ರಿ ಖ್ವಾಜಾ ಆಸಿಫ್ ಮಾತಾಡಿದ ಕೆಲವೇ ದಿನಗಳಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯ 80ನೇ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೋ ಸುಬಿಯಾಂತೋ ತಮ್ಮ ಮಾತುಗಳನ್ನು ಆರಂಭಿಸಿದ್ದು ಸಂಸ್ಕೃತ ಶ್ಲೋಕದ ಮೂಲಕ ಮತ್ತು ಅಂತ್ಯಗೊಳಿಸಿದ್ದು ಅರೇಬಿಕ್​ನ ಸಲಾಮ್ ಹಿಬ್ರೂನ ಶಲೋಮ್ ಮತ್ತು ಸಂಸ್ಕೃತದ ‘ಓಂ ಶಾಂತಿ ಶಾಂತಿ ಶಾಂತಿ’ಗಳನ್ನು ಉಚ್ಚರಿಸುವುದರ ಮೂಲಕ.

ಅಷ್ಟೇ ಅಲ್ಲ, ತಮ್ಮ ಭಾಷಣದಲ್ಲಿ ಗಾಜಾದ ಪ್ಯಾಲೆಸ್ತೀನಿಯನ್ ಮುಸ್ಲಿಮರ ಮಾನವ ಹಕ್ಕುಗಳನ್ನು ಕಾಪಾಡುವುದರ ಅಗತ್ಯದ ಬಗ್ಗೆ ಹೇಳುವುದರ ಜತೆಗೆ ಇಸ್ರೇಲ್​ನ ಶಾಂತಿಯುತ ಅಸ್ತಿತ್ವಕ್ಕೂ ಮಹತ್ವ ನೀಡಬೇಕೆಂದು ಪ್ರತಿಪಾದಿಸಿದರು! ಇದರರ್ಥ ಇಸ್ರೇಲ್ ವಿರುದ್ಧದ ಯಾವುದೇ ಸೇನಾಕೂಟದಲ್ಲಿ ಇಂಡೋನೇಷ್ಯಾ ಭಾಗಿಯಾಗುವುದಿಲ್ಲ. ಅಂತಹ ಕೂಟ ಸೌದಿ ಅರೇಬಿಯಾ, ಯುಎಇ, ಜೋರ್ಡಾನ್​ಗಳಿಗೂ ಬೇಕಾಗಿಲ್ಲ. ಅವೆಲ್ಲವೂ ಇಸ್ರೇಲ್ ಜತೆಗಲ್ಲದೆ ಭಾರತದ ಜತೆಗೂ ವ್ಯಾಪಕ ಆರ್ಥಿಕ, ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿಕೊಂಡಿವೆ. ಅವುಗಳನ್ನು ಮುಂದುವರಿಸಿಕೊಂಡು ಹೋಗಲು ಉತ್ಸುಕತೆ ತೋರುತ್ತವೆ. ಅವು ಪಾಕಿಸ್ತಾನವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎನ್ನುವುದಕ್ಕೆ ಕಳೆದ ಒಂದೆರಡು ವರ್ಷಗಳಲ್ಲೇ ಉದಾಹರಣೆಗಳು ಕಂಡಿವೆ.

ಹಾಗಿದ್ದರೆ ಸೌದಿ ಮತ್ತು ಪಾಕಿಸ್ತಾನ ಮಾಡಿಕೊಂಡಿರುವ ರಕ್ಷಣಾ ಒಪ್ಪಂದದ ಅರ್ಥವೇನು? ಒಂದು ದೇಶದ ಮೇಲಾಗುವ ದಾಳಿಯನ್ನು ತನ್ನ ಮೇಲಾದ ದಾಳಿಯೆಂದು ಇನ್ನೊಂದು ದೇಶವೂ ಪರಿಗಣಿಸುತ್ತದೆ ಎಂದು ಹೇಳುವ ಆ ಒಪ್ಪಂದ ಸೌದಿಯನ್ನು ಭಾರತದ ವಿರುದ್ಧ ನಿಲ್ಲಿಸುತ್ತದೆಯೇ? ಆಪರೇಷನ್ ಸಿಂಧೂರ್ ಮತ್ತೆ ಚಾಲನೆಗೊಂಡರೆ ಭಾರತ-ಸೌದಿ ಕಾದಾಟಕ್ಕಿಳಿಯುತ್ತವೆಯೇ? ಖಂಡಿತ ಇಲ್ಲ.

ಸೌದಿ ಬಳಿ ಅಮೆರಿಕ ತಯಾರಿಕೆಯ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಹೇರಳವಾಗಿವೆ. ಆದರೆ ಅವುಗಳನ್ನು ಸಮರ್ಥವಾಗಿ ಬಳಸಬಲ್ಲ ಸೈನಿಕರು ಮತ್ತು ವೈಮಾನಿಕರಿಲ್ಲ. ಇದು ಈವರೆಗೆ ಸೌದಿ ಸರ್ಕಾರಕ್ಕೆ ಸಮಸ್ಯೆಯಾಗೇನೂ ಕಾಡಿರಲಿಲ್ಲ. ಯಾಕೆಂದರೆ ಆ ದೇಶದ ಸುರಕ್ಷೆಗೆ ಈವರೆಗೂ ಯಾವ ಅಪಾಯವೂ ಎದುರಾಗಿರಲಿಲ್ಲ. ಆದಾಗ್ಯೂ ಸೌದಿ ಸರ್ಕಾರ ಭಾರಿ ಬೆಲೆಯ ಅಮೆರಿಕನ್ ಶಸ್ತ್ರಾಸ್ತ್ರಗಳನ್ನು ಖರೀದಿಸಿ ಇಟ್ಟುಕೊಂಡದ್ದರ ಹಿಂದಿನ ಕಾರಣ ಅಮೆರಿಕನ್ ಸರ್ಕಾರವನ್ನು ಸಂತುಷ್ಟಗೊಳಿಸುವುದು. ಅದಕ್ಕಾಗಿ ತನ್ನ ಅಗಾಧ ಪೆಟ್ರೋ ಡಾಲರ್ ಭಂಡಾರದ ಒಂದು ಸಣ್ಣ ಅಂಶವನ್ನು ವ್ಯಯಿಸುವುದು ಆ ತೈಲಶ್ರೀಮಂತ ದೇಶಕ್ಕೆ ಕಷ್ಟವೇನೂ ಆಗಿರಲಿಲ್ಲ.

ಆದರೀಗ ಸನ್ನಿವೇಶ ಬದಲಾಗುತ್ತಿದೆ. ದಕ್ಷಿಣದ ಯೆಮೆನ್​ನಲ್ಲಿ ತಳವೂರಿರುವ ಹೂತಿಗಳು ಕ್ಷಿಪಣಿ, ಡ್ರೋನ್​ಗಳ ಮೂಲಕ ಸೌದಿಯ ಸೇನಾ ಹಾಗೂ ಆರ್ಥಿಕ ಕೇಂದ್ರಗಳ ಮೇಲೆ ಅಡಿಗಡಿಗೆ ದಾಳಿಯೆಸಗುತ್ತಿದ್ದಾರೆ. ಇವರನ್ನು ಶಿಕ್ಷಿಸಲು ಯುದ್ಧವಿಮಾನಗಳಿಗಿಂತಲೂ ಪದಾತಿದಳ ಅಗತ್ಯ. ಅದು ಸೌದಿಯಲ್ಲಿಲ್ಲ. ಇದ್ದರೂ ಅದನ್ನು ಬಳಸಲು ಸೌದಿ ಸರ್ಕಾರ ತಯಾರಿಲ್ಲ. ಹಾಗಾಗಿ ಈಗ ಅದು ಕಣ್ಣುಹಾಕಿರುವುದು ಪಾಕಿಸ್ತಾನಿ ಸೈನಿಕರ ಮೇಲೆ! ಸೌದಿಗಳು, ಅಷ್ಟೇ ಏಕೆ, ಒಟ್ಟಾರೆ ಅರಬ್ಬರು ಪಾಕಿಸ್ತಾನೀಯರನ್ನು ನೋಡುವುದು ಎರಡನೇ ದರ್ಜೆಯ ಮುಸ್ಲಿಮರಾಗಿ; ಅಗತ್ಯ ಬಿದ್ದಾಗ ಬಳಸಿಕೊಳ್ಳಬಹುದಾದ ಕಾಲಾಳುಗಳನ್ನಾಗಿ. ಜತೆಗೆ ಪಾಕಿಸ್ತಾನಿ ಸೈನಿಕರು ಕಾದಾಟದ ತರಬೇತಿ ಪಡೆದವರೂ ಆಗಿರುವುದು ಒಂದು ಬೋನಸ್ ಪಾಯಿಂಟ್.

ಅರಬ್ಬರು ಹಿಂದೆಯೂ ಪಾಕಿಸ್ತಾನಿ ಸೈನಿಕರನ್ನು ಬಳಸಿಕೊಂಡದ್ದುಂಟು. 1970ರಲ್ಲಿ ತನ್ನ ವಿರುದ್ಧವೇ ಮಸಲತ್ತು ಮಾಡಿದ ಪ್ಯಾಲೆಸೆôನ್ ಲಿಬರೇಶನ್ ಆರ್ಗನೈಸೇಷನ್ (ಪಿಎಲ್​ಓ) ಸಂಘಟನೆಯನ್ನು ದೇಶದಿಂದ ಹೊರಗಟ್ಟಲು ಜೋರ್ಡಾನ್ ಅರಸ ಬಳಸಿಕೊಂಡದ್ದು ಪಾಕಿಸ್ತಾನಿ ಸೇನೆಯನ್ನು. 1970ರ ಸೆಪ್ಟೆಂಬರ್​ನಲ್ಲಿ ಅಲ್ಲಿಗೆ ಕಾಲಿಟ್ಟ ಕುಖ್ಯಾತ ಜಿಯಾ-ಉಲ್-ಹಕ್ ನೇತೃತ್ವದ ಪಾಕಿಸ್ತಾನಿ ಸೈನಿಕರು ಪ್ಯಾಲೆಸ್ತೀನಿಯರನ್ನು ಸಾವಿರಗಟ್ಟಲೆ ಸಂಖ್ಯೆಯಲ್ಲಿ ಕೊಂದರು! ತೀರಾ ಇತ್ತೀಚೆಗೆ ಕತಾರ್ ಫಿಫಾ ಪುಟ್​ಬಾಲ್ ಪಂದ್ಯಾವಳಿ ಆಯೋಜಿಸಿದಾಗ ತನ್ನ ಪೊಲೀಸ್ ಪಡೆಯ ಬದಲಿಗೆ ಉಪಯೋಗಿಸಿದ್ದು 3,600 ಪಾಕಿಸ್ತಾನಿ ಸೈನಿಕರನ್ನು! ಆರ್ಥಿಕ ಸಂಕಷ್ಟದಿಂದ ನರಳುತ್ತಿರುವ ಪಾಕಿಸ್ತಾನಕ್ಕೆ ತನ್ನ ಸೈನಿಕರಿಗೆ ನಿಯಮಿತವಾಗಿ ವೇತನ ನೀಡುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರಿಗೆ ಮತ್ತಾರೋ ಸಂಬಳ ಕೊಟ್ಟು ಕೆಲಸಕ್ಕೆ ಇಟ್ಟುಕೊಂಡರೆ ಅದನ್ನೇಕೆ ಬೇಡವೆನ್ನಬೇಕು? ಅದನ್ನೀಗ ಸೌದಿ ತನ್ನ ಅನುಕೂಲಕ್ಕಾಗಿ ಬಳಸಿಕೊಳ್ಳಹೊರಟಿದೆ. ಪ್ರತಿಯಾಗಿ ತನಗೆ ಪುಕ್ಕಟೆಯಾಗಿ ಕಚ್ಚಾತೈಲ ಹಾಗೂ ವರ್ಷಕ್ಕೆ ಒಂದೆರಡು ಬಿಲಿಯನ್ ಡಾಲರ್​ಗಳೂ ಸಿಕ್ಕರೆ ನಿತ್ರಾಣವಾಗಿರುವ ಪಾಕಿಸ್ತಾನಿ ಅರ್ಥವ್ಯವಸ್ಥೆಯ ಬಾಯಿಗೆ ಗಂಜಿ ಹೊಯ್ದಂತೆಯೂ ಆಗುತ್ತದೆ.

ಇಲ್ಲಿ ಇರಾನ್ ಆಯಾಮವನ್ನು ನಾವು ಪ್ರಮುಖವಾಗಿ ಗುರುತಿಸಬೇಕು. ಇಸ್ರೇಲ್, ಅಮೆರಿಕದ ದಾಳಿಗಳ ಹೊರತಾಗಿಯೂ ಇರಾನ್ ತನ್ನ ಅಣ್ವಸ್ತ್ರ ಯೋಜನೆ ನಿಲ್ಲಿಸಿಲ್ಲ. ಒಂದು ವೇಳೆ ತೆಹರಾನ್ ಅಣ್ವಸ್ತ್ರಗಳನ್ನು ಗಳಿಸಿಕೊಂಡರೆ ಅವುಗಳನ್ನು ಅದು ಬಳಸಲು ಪ್ರಯತ್ನಿಸುವುದು ಇಸ್ರೇಲ್ ಜತೆಗೆ ಸೌದಿ ವಿರುದ್ಧ ಸಹ. ಇಸ್ಲಾಮಿಕ್ ಜಗತ್ತಿನ ನಾಯಕತ್ವಕ್ಕಾಗಿ ಸೌದಿಗಳೊಂದಿಗಿನ ಇರಾನಿ ತಕರಾರಿಗೆ ನಾಲ್ಕೂವರೆ ದಶಕಗಳ ಇತಿಹಾಸವಿದೆ. ಇಂತಹ ಸನ್ನಿವೇಶದಲ್ಲಿ ತಾನೂ ಅಣ್ವಸ್ತ್ರಗಳನ್ನು ಹೊಂದುವುದು ಸೌದಿ ಸರ್ಕಾರದ ಜರೂರು. ಈ ವಿಷಯದಲ್ಲಿ ಅದರ ನೆರವಿಗೆ ಬರುತ್ತಿರುವುದು 1970ರ ದಶಕದಲ್ಲಿ ಅದು ಪಾಕಿಸ್ತಾನದೊಂದಿಗೆ ಮಾಡಿಕೊಂಡ ಒಪ್ಪಂದ. ಆ ಪ್ರಕಾರ ಪಾಕಿಸ್ತಾನಿ ಅಣ್ವಸ್ತ್ರಗಳು ಬೇಕೆಂದಾಗ ತನಗೂ ಒದಗಬೇಕು ಎಂಬ ಕರಾರಿನೊಂದಿಗೆ ಪಾಕಿಸ್ತಾನದ ಅಣ್ವಸ್ತ್ರ ಯೋಜನೆಗೆ ಸೌದಿ ಧನಸಹಾಯ ಮಾಡಿತು. ಇದರರ್ಥ ಪಾಕಿಸ್ತಾನದ ಅಣ್ವಸ್ತ್ರಗಳ ಮೇಲೆ ಸೌದಿಗೂ ಸಮಾನ ಹಕ್ಕುಗಳಿವೆ.

ವರದಿಗಳ ಪ್ರಕಾರ ಅಣ್ವಸ್ತ್ರಗಳನ್ನು ಸಂಗ್ರಹಿಸಿ ಇಡಲು ಪಾಕಿಸ್ತಾನದಲ್ಲಿ ತಯಾರಾದಂತಹ ಸೌಲಭ್ಯಗಳು ಸೌದಿಯಲ್ಲೂ ತಯಾರಾಗಿವೆ. 2023ರ ಜನವರಿಯಲ್ಲೇ ಹಲವು ಪಾಕಿಸ್ತಾನಿ ಅಣ್ವಸ್ತ್ರಗಳನ್ನು ಅಮೆರಿಕನ್ನರು ಅಲ್ಲಿಗೆ ಸಾಗಿಸಿದ್ದಾರೆ! ರಹಸ್ಯವಾಗಿ ನಡೆದ ಆ ಕೃತ್ಯವನ್ನು ಅಧಿಕೃತಗೊಳಿಸುವ ಹುನ್ನಾರವೇ ಈಗ ಆಗಿರುವ ರಕ್ಷಣಾ ಒಪ್ಪಂದ. ಕಪ್ಪುಹಣವನ್ನು ಬಿಳಿದಾಗಿಸಲು ಆಡುವ ಕಳ್ಳಾಟಕ್ಕೆ ಇದನ್ನು ಹೋಲಿಸಬಹುದು. ಇಸ್ಲಾಮಿಕ್ ನ್ಯಾಟೋ ಎಂದೂ ಅಸ್ತಿತ್ವಕ್ಕೆ ಬರುವುದಿಲ್ಲ. ಪಾಕಿಸ್ತಾನದೊಂದಿಗೆ ಈಗ ಸೌದಿ ಮಾಡಿಕೊಂಡಿರುವ, ಮುಂದೆ ಇರಾಕ್, ಕತಾರ್ ಮಾಡಿಕೊಳ್ಳಬಹುದಾದ ರಕ್ಷಣಾ ಒಪ್ಪಂದಗಳು ಅರಬ್ ರಕ್ತದ ಬದಲು ಪಾಕಿಸ್ತಾನಿ ರಕ್ತವನ್ನು ಮೆಲ್ಲಲು ಆ ದೇಶಗಳು ಮಾಡಿಕೊಂಡ ಉಪಾಯಗಳಷ್ಟೇ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)