ಅಂಕಣ

ಧೂರ್ತತನದ ಅಡಕತ್ತರಿಯಲ್ಲಿ ಪಾಕಿಸ್ತಾನ

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ಭಾರತದ ವಿರುದ್ಧ ಬಳಸಲು ಯಾವುಯಾವುದೋ ವಿಧಾನಗಳಿಂದ ಅಣ್ವಸ್ತ್ರಗಳನ್ನು ಗಳಿಸಿಕೊಂಡ ಪಾಕಿಸ್ತಾನ ಅಣ್ವಸ್ತ್ರ ತಂತ್ರಜ್ಞಾನವನ್ನು ಕಳ್ಳಮಾರ್ಗದಲ್ಲಿ ಉತ್ತರ ಕೊರಿಯಾಗೆ ಕೊಟ್ಟು ಪ್ರತಿಯಾಗಿ ಅದೇ ಮಾರ್ಗದಲ್ಲಿ ಪಡೆದುಕೊಂಡ ಕ್ಷಿಪಣಿ ತಂತ್ರಜ್ಞಾನದ ಸಹಾಯದಿಂದ ನಿರ್ವಿುಸಿಕೊಂಡ ಕ್ಷಿಪಣಿಗಳಲ್ಲಿ ಕೆಲವಕ್ಕೆ ಇಟ್ಟ ಹೆಸರುಗಳು ಘಝ್ನುವಿ, ಘಾವ್ರಿ ಮತ್ತು ಅಬ್ದಾಲಿ ಎಂದು. ಘಝ್ನುವಿ ಅಂದರೆ ಸರಿಯಾಗಿ ಒಂದು ಸಹಸ್ರಮಾನದ ಹಿಂದೆ ಭಾರತದ ಮೇಲೆ ಹದಿನೇಳು ಬಾರಿ ದಾಳಿಯೆಸಗಿ ಸೋಮನಾಥ ಮಂದಿರವನ್ನು ಲೂಟಿ ಮಾಡಿ ಶಿವಲಿಂಗವನ್ನು ಎರಡು ತುಂಡಾಗಿಸಿ ಅವಮಾನಿಸಿದ ಮಹಮದ್ ಘಝ್ನಿ, ಘಾವ್ರಿ ಅಂದರೆ ಕ್ರಿ.ಶ. 1192ರಲ್ಲಿ ಎರಡನೆಯ ತರೈನ್ ಯುದ್ಧದಲ್ಲಿ ಪೃಥ್ವಿರಾಜ್ ಚೌಹಾನ್​ನನ್ನು ಸೋಲಿಸಿ ದೆಹಲಿಯ ಮೇಲೆ ಅಧಿಕಾರ ಸ್ಥಾಪಿಸಿದ ಮೊತ್ತಮೊದಲ ಮುಸ್ಲಿಂ ಅರಸ. ಇನ್ನು ಅಬ್ದಾಲಿಯ ಕಥೆ ಹೇಳುವುದಾದರೆ 1761ರಲ್ಲಿ ಮೂರನೆಯ ಪಾನಿಪತ್ ಯುದ್ಧದಲ್ಲಿ ಮರಾಠಾ ಸೇನೆಯನ್ನು ಸೋಲಿಸಿ ಮರಾಠಾ ಸಾಮ್ರಾಜ್ಯದ ಉತ್ತರಾಭಿಮುಖ ವಿಸ್ತರಣೆಯನ್ನು ತಡೆದ ಅಹ್ಮದ್ ಶಾ ಅಬ್ದಾಲಿಯೇ ಆತ.

ಮಹಮದ್ ಘಝ್ನಿ, ಮಹಮದ್ ಘೊರಿ ಮತ್ತು ಅಹ್ಮದ್ ಶಾ ಅಬ್ದಾಲಿ ಮೂವರೂ ಅಫ್ಘನ್ನರು. ಅಬ್ದಾಲಿಯನ್ನಂತೂ ಆಧುನಿಕ ಅಫ್ಘಾನಿಸ್ತಾನದ ನಿರ್ವತೃ ಎಂದು ಇತಿಹಾಸದಲ್ಲಿ ಗುರುತಿಸಲಾಗುತ್ತದೆ. ಅವರಾರೂ ಪಾಕಿಸ್ತಾನೀಯರಲ್ಲ ಎನ್ನುವುದು ಇಲ್ಲಿ ನಮ್ಮ ವಿಶ್ಲೇಷಣೆಗೆ ಮುಖ್ಯವಾದ ಐತಿಹಾಸಿಕ ಸತ್ಯ. ಹಾಗಿದ್ದರೆ ತನ್ನವರಲ್ಲದ ಆ ಮೂವರ ಹೆಸರುಗಳನ್ನು ಅರಸರನ್ನು ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲ ತನ್ನ ಕ್ಷಿಪಣಿಗಳಿಗೆ ಪಾಕಿಸ್ತಾನ ಇಟ್ಟದ್ದು ಏಕೆ? ಅಷ್ಟೇ ಅಲ್ಲ, ಪಾಕಿಸ್ತಾನದ ಶಾಲೆಗಳ ಇತಿಹಾಸ ಪಠ್ಯಪುಸ್ತಕಗಳಲ್ಲಿ ಆ ಮೂವರನ್ನು ಪಾಕಿಸ್ತಾನಿ ರಾಷ್ಟ್ರೀಯತೆಯ ಸಂಕೇತಗಳೆಂದೂ, ಪಾಕಿಸ್ತಾನದ ಪ್ರಮುಖ ಐತಿಹಾಸಿಕ ಸಾಮ್ರಾಟರೆಂದೂ ಬಣ್ಣಿಸಲಾಗುತ್ತದೆ. ಹಾಗಿದ್ದರೆ ಅವರು ಮೂವರು ಪಾಕಿಸ್ತಾನಕ್ಕಾಗಿ ಮಾಡಿದ ಘನಕಾರ್ಯಗಳಾದರೂ ಏನು?

ಆ ಮೂವರು ಅಫ್ಘನ್ ಅರಸರ ಸಾಧನೆಯೆಂದರೆ ಅವರು ಭಾರತದಲ್ಲಿ ಹಿಂದೂಗಳನ್ನು ಸೋಲಿಸಿದರು, ಸದೆಬಡಿದರು, ಮತಾಂತರಿಸಿದರು ಅಷ್ಟೇ. ಆ ಕಾರಣಕ್ಕಾಗಿಯೇ ಪಾಕಿಸ್ತಾನಿಯರಿಗೆ ಅವರು ಪ್ರಿಯ. ಮುಸ್ಲಿಂ ಪಾಕಿಸ್ತಾನಕ್ಕೆ ಹಿಂದೂಗಳನ್ನು ಹತ್ಯೆಗೈದ ಮುಸ್ಲಿಂ ಅರಸರು ಪ್ರಿಯವಾಗುವುದು ಸಹಜವೇ. ಆದರೆ ಇಲ್ಲೊಂದು ಸಮಸ್ಯೆಯಿದೆ. ಆ ಮೂವರು ಅಫ್ಘನ್ ಮುಸ್ಲಿಂ ಅರಸರು ದಾಳಿ ಎಸಗಿದ ಮುಖ್ಯ ಪ್ರದೇಶಗಳು ಇಂದಿನ ಪಾಕಿಸ್ತಾನದವೇ, ಅವರು ಲೂಟಿ ಮಾಡಿದ್ದು ಇಂದು ಪಾಕಿಸ್ತಾನದಲ್ಲಿರುವ ಹಳ್ಳಿ, ಪಟ್ಟಣಗಳನ್ನೇ, ಅವರು ಹತ್ಯೆಗೈದದ್ದು ಇಂದಿನ ಪಾಕಿಸ್ತಾನೀಯರ ಪೂರ್ವಿಕರನ್ನೇ, ಅವರು ಮತಾಂತರಿಸಿದ್ದು ಇಂದಿನ ಪಾಕಿಸ್ತಾನೀಯರ ಪೂರ್ವಜರನ್ನೇ. ಆದರೆ ಹಾಗೆ ಲೂಟಿಗೆ, ಹತ್ಯೆ, ಮತಾಂತರಕ್ಕೆ ಒಳಗಾದ ಜನ ಹಿಂದೂಗಳಾಗಿದ್ದರು ಎನ್ನುವ ಕಾರಣಕ್ಕಷ್ಟೇ ಇಂದು ಪಾಕಿಸ್ತಾನೀಯರು ಅ ಅಫ್ನನ್ ಅರಸರನ್ನು ತಮ್ಮ ‘ಹೀರೋ’ಗಳೆಂದು ಮಾನ್ಯಮಾಡುವುದಾದರೆ ಅವರು ತಮ್ಮ ಇತಿಹಾಸವನ್ನೇ, ತಮ್ಮ ಪೂರ್ವಿಕರ ನೋವನ್ನೇ ಕಡೆಗಣಿಸಿದ್ದಾರೆ ಎಂದರ್ಥವಲ್ಲವೇ? ಇದು ಇತಿಹಾಸದ ನಿರಾಕರಣೆಯಲ್ಲವೇ? ಅಬ್ದಾಲಿಯ ಬಗ್ಗೆ ಹೇಳುವುದಾದರೆ ಆತ ಮರಾಠರನ್ನು ಎದುರಿಸುವ ಹಾದಿಯಲ್ಲಿ ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿದ್ದ, ಇಂದಿನ ಪಾಕಿಸ್ತಾನೀಯರು ತಮ್ಮ ಸಾಂಸ್ಕೃತಿಕ ರಾಜಧಾನಿ ಎಂದು ಹೇಳಿಕೊಳ್ಳುವ ಲಾಹೋರ್ ನಗರವನ್ನೇ ಹಾಳುಗೆಡವಿದ್ದ. ಆದರೆ ಆತ ‘ಹಿಂದೂ’ ಮರಾಠರನ್ನು ಸೋಲಿಸಿದ ಎಂಬ ಕಾರಣಕ್ಕಷ್ಟೇ ಇಂದು ಪಾಕಿಸ್ತಾನೀಯರಿಗೆ ಮುಖ್ಯನಾಗುವುದಾದರೆ ಅವನ ಕತ್ತಿಗೆ ಬಲಿಯಾದ ಲಾಹೋರ್ ಮುಸ್ಲಿಮರೂ ಲೆಕ್ಕಕ್ಕಿಲ್ಲವೆಂದಾಯಿತಲ್ಲ? ಹೀಗೆ ತನ್ನ ನೆಲದ ಮೇಲೇ ದಾಳಿಯೆಸಗಿ ಲೂಟಿಗೈದ, ತನ್ನ ಪೂರ್ವಿಕರನ್ನೇ ಕೊಂದ ‘ವಿದೇಶಿ’ ಅರಸರನ್ನು ಪಾಕಿಸ್ತಾನ ತನ್ನ ರಾಷ್ಟ್ರೀಯತೆಯ ಸಂಕೇತಗಳು, ತನ್ನ ಐತಿಹಾಸಿಕ ಹೀರೋಗಳು ಎಂದು ತಿಳಿಯುವುದಾದರೆ ಆ ದೇಶ ತನ್ನ ಇತಿಹಾಸಕ್ಕೇ ಅಗೌರವ ತೋರಿದೆಯಲ್ಲವೇ? ತನ್ನ ಇತಿಹಾಸವನ್ನೇ ಕಡೆಗಣಿಸಿದೆಯಲ್ಲವೇ? ‘ಇತಿಹಾಸವನ್ನು ಕಡೆಗಣಿಸಿದವರು ಅದನ್ನು ಪುನರಾವರ್ತಿಸುವ ಶಿಕ್ಷೆಗೊಳಗಾಗುತ್ತಾರೆ’ ಎಂಬ ಜಾನ್ ಸಾಂತ್ಯಾಯಾನಾತಿನ ಅರ್ಥ ಇಂದು ಪಾಕಿಸ್ತಾಕ್ಕೆ ದಾರುಣ ಬಗೆಯಲ್ಲಿ ಆಗುತ್ತಿದೆ. ಅರ್ಥ ಮಾಡಿಸುತ್ತಿರುವವರು ಅಫ್ಘನ್ನರು. ಅಂದರೆ ಅದೇ ಘಝ್ನಿ, ಘೊರಿ, ಅದೇ ಅಬ್ದಾಲಿಯ ವಂಶಸ್ಥರು.

ಅಕ್ಟೋಬರ್ 16ರ ಪಾಕಿಸ್ತಾನಿ ವಾಯುದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಗಡಿ ಚೌಕಿಗಳ ಮೇಲೆ ಹಠಾತ್ ದಾಳಿ ನಡೆಸಿದ ಅಫ್ಘನ್ ತಾಲಿಬಾನ್ ಸೇನೆ ಐವತ್ತೆಂಟು ಪಾಕಿ ಸೈನಿಕರನ್ನು ಕೊಂದು ಅನಿರ್ದಿಷ್ಟ ಸಂಖ್ಯೆಯ ಪಾಕಿ ಸೈನಿಕರನ್ನು ಕೈದಿಗಳನ್ನಾಗಿಸಿಕೊಂಡು ಕರೆದೊಯ್ದರು ಎಂದು ಲೇಖನದ ಮೊದಲ ಭಾಗದಲ್ಲಿ ಹೇಳಿದ್ದೇನೆ. ಈಗ ಅದರ ಮುಂದಿನ ಭಾಗವನ್ನು ನಿಮ್ಮ ಮುಂದಿರಿಸುತ್ತಿದ್ದೇನೆ. ಅಫ್ಘನ್ ತಾಲಿಬಾನಿಗಳು ಪಾಕಿ ಸೈನಿಕರ ಪ್ಯಾಂಟ್​ಗಳನ್ನು ಬಿಚ್ಚಿಸಿ ಕೋಲುಗಳಿಗೆ ಸಿಕ್ಕಿಸಿ ಖೋಸ್ಟ್, ನಂಗರ್​ಹಾರ್, ಪಕ್ತಿಕಾ ಮುಂತಾದ ಗಡಿ ಪಟ್ಟಣಗಳಲ್ಲಿ ಸಾರ್ವಜನಿಕವಾಗಿ ಪ್ರದರ್ಶನ ಮಾಡಿದ್ದಾರೆ! ಇದು ಪಾಕಿಸ್ತಾನಿಸೇನೆಗಾದ ಅತಿ ದೊಡ್ಡ ಅವಮಾನ. ಹಿಂದೆ ಬಾಂಗ್ಲಾ ಯುದ್ಧಲ್ಲಿ 93,000ದಷ್ಟು ಅಗಾಧ ಸಂಖ್ಯೆಯ ಪಾಕಿಸ್ತಾನಿ ಸೈನಿಕರನ್ನು ಭಾರತ ಯುದ್ಧಕೈದಿಗಳನ್ನಾಗಿಸಿಕೊಂಡರೂ ಈ ಬಗೆಯಲ್ಲಿ ಅವಮಾನಿಸಿರಲಿಲ್ಲ. ಹಾಗೆ ನೋಡಿದರೆ ಇಂದು ಅಫ್ಘನ್ನರ ಕೈಯಲ್ಲಿ ಪಾಕಿಸ್ತಾನಿ ಸೈನಿಕರಿಗಾದ ಅವಮಾನ 1943ರಲ್ಲಿ ರಷ್ಯನ್ನರು ಜರ್ಮನ್ ಸೈನಿಕರಿಗೆ ಮಾಡಿದ ಅವಮಾನಕ್ಕಿಂತಲೂ ಮಿಗಿಲು. ಆ ವರ್ಷ ಜರ್ಮನ್ನರು ಆಕ್ರಮಿಸಿಕೊಂಡಿದ್ದ ಸ್ತಾಲಿನ್​ಗ್ರಾದ್ ನಗರವನ್ನು ಮತ್ತೆ ಕೈವಶ ಮಾಡಿಕೊಂಡ ಸೋವಿಯತ್ ಸೇನೆ ಸೋತ ಜರ್ಮನ್ ಸೇನೆಯ 53,000ದಷ್ಟು ಸೈನಿಕರನ್ನು ಮಾಸ್ಕೋ ನಗರದ ಬೀದಿಬೀದಿಗಳಲ್ಲಿ ಮೆರವಣಿಗೆ ಮಾಡಿತು. ಆದರೆ ಅವರ ಪ್ಯಾಂಟ್​ಗಳನ್ನು ಬಿಚ್ಚಿಸಲಿಲ್ಲ. ಪೆಹಲ್​ಗಾಮ್ಲ್ಲಿ ಹಿಂದೂಗಳ ಪ್ಯಾಂಟ್ ಬಿಚ್ಚಿಸಿದ ಪಾಕಿಸ್ತಾನಿ ಭಯೋತ್ಪಾದಕರ ಹೇಯ ಕೃತ್ಯಕ್ಕೆ ಪ್ರತಿಯಾಗಿ ಆ ಭಯೋತ್ಪಾದಕನಾದ ಪಾಕಿಸ್ತಾನಿ ಸೇನೆಯ ಸೈನಿಕರ ಪ್ಯಾಂಟ್ ಬಿಚ್ಚಿಸುವ ಕೃತ್ಯವನ್ನು ಅಫ್ಘನ್ನರು ಮಾಡಿದ್ದಾರೆ. ಅವರು ಅದೇ ಪಾಕಿಸ್ತಾನಿ ಹೀರೋಗಳಾದ ಘಝ್ನಿ,ಘೊರಿ, ಅಬ್ದಾಲಿಗಳ ವಂಶಸ್ಥರು! ತಮ್ಮ ಪೂರ್ವಿಕರ ಮೇಲೆ ರಾಕ್ಷಸಿ ಕೃತ್ಯಗಳನ್ನೆಸಗಿದವರನ್ನೇ ತಮ್ಮ ಐತಿಹಾಸಿಕ ಹೀರೋಗಳು, ರಾಷ್ಟ್ರೀಯತೆಯ ಸಂಕೇತಗಳು ಎಂದೆಲ್ಲ ಆರಾಧಿಸಿ ಇತಿಹಾಸ ಮರೆತ ಪಾಕಿಸ್ತಾನಕ್ಕೆ ಈ ಶಿಕ್ಷೆ ತಕ್ಕುದಾದದ್ದೇ.

ಇಂದಿನ ಈ ಬೆಳವಣಿಗೆಗಳಿಂದಾಗಿ ಪಾಕಿಸ್ತಾನದ ಮುಂದೆ ವಿಚಿತ್ರ ಸಂದಿಗ್ಧವೊಂದು ಎದುರಾಗಿದೆ. ಅದೇ ಘಝ್ನಿ, ಘಾವ್ರಿ, ಅಬ್ದಾಲಿ ಕ್ಷಿಪಣಿಗಳನ್ನು ಅಫ್ಘಾನಿಸ್ತಾನದ ಮೇಲೆಯೇ ಇಸ್ಲಾಮಾಬಾದ್ ಪ್ರಯೋಗಿಸಬಹುದೇ? ಹಾಗಾದಲ್ಲಿ ಇದೊಂದು ಇತಿಹಾಸದ ಕ್ರೂರ ವ್ಯಂಗ್ಯವಾಗಬಹುದಲ್ಲವೇ? ಅಫ್ಘನ್ನರ ಹೆಸರಿನ ಕ್ಷಿಪಣಿಗಳನ್ನು ಅಫ್ಘಾನಿಸ್ತಾನದ ವಿರುದ್ಧವೇ ಬಳಸುವುದನ್ನು ಪಾಕಿಸ್ತಾನ ಹೇಗೆ ಸಮರ್ಥಿಸಿಕೊಳ್ಳಬಹುದು? ಇತಿಹಾಸವನ್ನು ಕಡೆಗಣಿಸಿದರೆ ಎಂಥೆಂಥ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ?

ಲೇಖನದ ಮೊದಲ ಭಾಗದಲ್ಲಿ ಹೇಳಿರುವಂತೆ ಅಫ್ಘನ್ನರು, ಮುಖ್ಯವಾಗಿ ಪಖ್ತೂನಿಗಳು ಅಂದರೆ ಪಠಾಣರು ಪಾಕಿಸ್ತಾನವನ್ನು ಈಗಿರುವ ಹಾಗೇ ಎಂದೂ ಒಪಿಕೊಳ್ಳಲೇ ಇಲ್ಲ. ಬ್ರಿಟಿಷರು ಎಳೆದ ಡ್ಯೂರಾಂಡ್ ಗಡಿರೇಖೆಯಿಂದಾಗಿ ಮೊದಲಿಗೆ ಬ್ರಿಟಿಷ್ ಭಾರತದ ಭಾಗವಾದ, ನಂತರ ಪಾಕಿಸ್ತಾನದ ಭಾಗವಾಗಿರುವ ಇಡೀ ಗಡಿನಾಡು ಖೈಬರ್ ಪಖ್ತೂನ್​ಖ್ವಾ ಪ್ರಾಂತ್ಯ ಮತ್ತು ಕ್ವೆಟ್ಟಾ ನಗರ ಸೇರಿದಂತೆ ಉತ್ತರ ಬಲೂಚಿಸ್ತಾನ ತಮ್ಮದು ಎಂದು ಅಫ್ಘನ್ನರು ಹೇಳುತ್ತಲೇ ಇದ್ದಾರೆ. ಅದೇ ಭಾವನೆ ಪಾಕಿಸ್ತಾನದಲ್ಲಿರುವ ಪಖ್ತೂನಿಗಳಲ್ಲೂ ಇದೆ. ಅವರಿಗೆ ತಮ್ಮ ಪಾಕಿಸ್ತಾನಿ ಅಸ್ಮಿತೆಗಿಂತಲೂ ಪಖ್ತೂನಿ ಅಸ್ಮಿತೆ ಹೆಚ್ಚು ಪ್ರಿಯ. ಅದನ್ನು ಗಡಿನಾಡು ಗಾಂಧಿ ಖಾನ್ ಅಬ್ದುಲ್ ಗಫಾರ್ ಖಾನ್ ಅವರ ಮಗ ಹಾಗೂ ಖೈಬರ್ ಪಖ್ತೂನ್​ಖ್ವಾ ಪ್ರಾಂತ್ಯದ ಮಾಜಿ ಮುಖ್ಯಮಂತ್ರಿ ಖಾನ್ ಅಬ್ದುಲ್ ವಲೀ ಖಾನ್ ಅರ್ಧ ಶತಮಾನದ ಹಿಂದೆಯೇ 1972ರಲ್ಲಿ ಧ್ವನಿಸಿದ್ದು ಹೀಗೆ- ‘ನಾನೊಬ್ಬ ಪಾಕಿಸ್ತಾನಿ, ಕಳೆದ ಮೂವತೆôದು ವರ್ಷಗಳಿಂದ; ನಾನೊಬ್ಬ ಮುಸ್ಲಿಂ, ಕಳೆದ ಸಾವಿರದ ನಾನೂರು ವರ್ಷಗಳಿಂದ; ನಾನೊಬ್ಬ ಪಖ್ತೂನಿ, ಕಳೆದ ಐದು ಸಾವಿರ ವರ್ಷಗಳಿಂದ!’

ವಲೀ ಖಾನ್​ರಂತೇ ಬಹುತೇಕ ಪಖ್ತೂನಿಗಳು ಯೋಚಿಸುತ್ತಾರೆ, ಪಾಕಿಸ್ತಾನದಿಂದ ಪ್ರತ್ಯೇಕಗೊಂಡು ಅಫ್ಘಾನಿಸ್ತಾನದೊಂದಿಗೆ ವಿಲೀನಗೊಳ್ಳುವ ಬಯಕೆಯನ್ನು ಸರಿಸುಮಾರು ಇಡೀ ಖೈಬರ್ ಪಖ್ತೂನ್​ಖ್ವಾ ಪ್ರಾಂತ್ಯ ಹೊಂದಿದೆ, ಅವಕಾಶಕ್ಕಾಗಿ ಕಾಯುತ್ತಿದೆ. ಅಲ್ಲಿ ಅಫ್ಘನ್ ತಾಲಿಬಾನ್ ಮತ್ತು ಪಾಕ್ ತಾಲಿಬಾನ್ ಅದೆಷ್ಟು ಭದ್ರವಾಗಿ ನೆಲೆಯೂರಿವೆಂದರೆ ಪಾಕ್ ತಾಲಿಬಾನ್ ಮುಖ್ಯಸ್ಥ ನೂರ್ ವಲೀ ಮೆಹ್ಸೂದ್​ನನ್ನು ಕೊಲ್ಲಲೆಂದು ಪಾಕಿಸ್ತಾನ ಕಾಬೂಲ್ ಮೇಲೆ ಬಾಂಬ್ ಹಾಕಿದರೆ ಆ ಪಾಕಿಸ್ತಾನದಲ್ಲೇ, ಖೈಬರ್ ಪಖ್ತೂನ್​ಖ್ವಾದಲ್ಲೇ ಆರಾಮವಾಗಿ ಓಡಾಡಿಕೊಂಡಿದ್ದ! ಆ ಸುಳಿವೇ ಪಾಕಿಸ್ತಾನಿ ಸೇನೆಗೆ ಇರಲಿಲ್ಲ.

ಇದೆಲ್ಲವೂ ಕಣ್ಣೆದುರೇ ಇದ್ದ ಇತಿಹಾಸವನ್ನು ಕಡೆಗಣಿಸಿದ್ದಕ್ಕೆ ಪಾಕಿಸ್ತಾನ ಅನುಭವಿಸುತ್ತಿರುವ ಶಿಕ್ಷೆಯಾಯಿತು. ಇದು ಸಾಲದು ಎಂಬಂತೆ ತಾನೇ ಸೃಷ್ಟಿಸಿದ ಇತಿಹಾಸವನ್ನೂ ಪಾಕಿಸ್ತಾನ ಇದೇ ದಿನಗಳಲ್ಲಿ ಸಾರಾಸಗಟಾಗಿ ಡೆಗಣಿಸುತ್ತಿದೆ. ತನ್ನನ್ನು ‘ಇಸ್ಲಾಮಿಕ್ ರಿಪಬ್ಲಿಕ್’ ಎಂದು ಸಂವಿಧಾನಾತ್ಮಕವಾಗಿ ಘೊಷಿಸಿಕೊಂಡ ಪಾಕಿಸ್ತಾನ ತಾನು ಜಗತ್ತಿನ ಎಲ್ಲ ಮುಸ್ಲಿಮರ ರಕ್ಷಕ ಎಂದು ಬಿಂಬಿಸಿಕೊಳ್ಳುವ ಯಾವ ಅವಕಾಶವನ್ನೂ ಬಿಡಲಿಲ್ಲ. ಆ ನೀತಿಯ ಭಾಗವಾಗಿ ಅದು ಇಸ್ರೇಲ್ ಅನ್ನು ಉಗ್ರವಾಗಿ ವಿರೋಧಿಸಿತು ಮತ್ತು ತಾನು ಪ್ಯಾಲೆಸ್ತೀನಿಯರ ಪರ ಎಂದು ಹೇಳಿಕೊಂಡಿತು; ಇಸ್ರೇಲ್ ಅನ್ನು ವಿರೋಧಿಸುವ, ಪ್ಯಾಲೆಸ್ತೀನಿಯನ್ನರನ್ನು ಬೆಂಬಲಿಸುವ ಸಂಘಟನೆಗಳು ತನ್ನಲ್ಲಿ ತಲೆಯೆತ್ತಲು ಅವಕಾಶ ಮಾಡಿಕೊಟ್ಟಿತು ಮತ್ತು ಅವುಗಳನ್ನು ಪೋಷಿಸಿತು ಸಹ. ಆದರೆ ಅದೇ ಸಮಯದಲ್ಲಿ ಅದು ಪ್ಯಾಲೆಸ್ತೀನಿಯನ್ನರ ವಿರುದ್ಧವಾಗಿಯೂ ಅದು ಕೆಲಸ ಮಾಡಿದ್ದೂ ಆಯಿತು. ಜೋರ್ಡಾನ್​ನಲ್ಲಿದ್ದ ಪ್ಯಾಲೆಸ್ತೀನಿಯನ್ನರು ಅಲ್ಲಿನ ಅರಸನನ್ನೇ ಕೊಂದು ಸರ್ಕಾರವನ್ನು ತಮ್ಮ ಕೈಗೆ ತೆಗೆದುಕೊಳ್ಳಲು 1970ರಲ್ಲಿ ಸಂಚು ಹೂಡಿದಾಗ ಅವರನ್ನು ಅಡಗಿಸಿ ತನ್ನ ದೇಶದಿಂದ ಹೊರದಬ್ಬಲು ಜೋರ್ಡಾನ್ ಅರಸ ಯಾಚಿಸಿದ್ದು ಪಾಕಿಸ್ತಾನಿ ಸೇನೆಯ ಸಹಾಯವನ್ನು. ಒಂದಷ್ಟು ಹಣ ಗಳಿಕೆಗಾಗಿ ಬಾಡಿಗೆ ಬಂಟನಾಗಲು ತಯಾರಾಗಿಯೇ ಇದ್ದ ಪಾಕಿಸ್ತಾನ ಜಿಯಾ-ಉಲ್-ಹಕ್​ನ ನೇತೃತ್ವದಲ್ಲಿ ತನ್ನ ಸೈನಿಕರನ್ನು ಜೋರ್ಡಾನ್​ಗೆ ಕಳುಹಿಸಿತು. ಸಹಸ್ರಗಟ್ಟಲೆಯಲ್ಲಿ ಪ್ಯಾಲೆಸ್ತೀನಿಯನ್ನರನ್ನು ಕೊಂಡು ಜಿಯಾ ಜೋರ್ಡಾನ್ ಅರಸನಿಗೆ ಸೇವೆ ಸಲ್ಲಿಸಿದ. ಇದು ಪಾಕಿಸ್ತಾನದಲ್ಲಿ ಜನಸಾಮಾನ್ಯರಿಗೆ ತಿಳಿಯಲೇ ಇಲ್ಲ. (ಅದೇ ಜಿಯ ಮುಂದೆ ಪಾಕಿಸ್ತಾನದ ಸರ್ವಾಧಿಕಾರಿಯಾದ. ಅದು ಬೇರೆಯೇ ಕಥೆ.)

ಇದು ಹಳೆಯ ಕಥೆಯಾದರೆ ಇಂದಿನದು ಇನ್ನೂ ವಿಚಿತ್ರ ಹಾಗೂ ಧೂರ್ತತೆಯ ಪರಾಕಾಷ್ಠೆ. ಇಸ್ರೇಲ್ ವಿರುದ್ಧ ಎಲ್ಲೆಡೆ ವಿಷ ಕಾರುತ್ತಲೇ ಆ ಯೆಹೂದಿ ದೇಶದೊಂದಿಗೆ ರಹಸ್ಯವಾಗಿ ಸಂಬಂಧ ಕುದುರಿಸಿಕೊಳ್ಳಲು ಪಾಕಿಸ್ತಾನ ಎರಡು ದಶಕಗಳ ಹಿಂದೆಯೇ ಕಸರತ್ತು ಆರಂಭಿಸಿತು. 1999-2008ರ ಅವಧಿಯಲ್ಲಿ ಪಾಕಿಸ್ತಾನದ ಸೇನಾ ಸರ್ವಾಧಿಕಾರಿಯಾಗಿದ್ದ ಜನಲ್ ಪರ್ವೆಜ್ ಮುಷರ›ಫ್ ಇಸ್ರೇಲಿಗಳೊಂದಿಗೆ ಮಾತುಕತೆ ನಡೆಸಲು ತಮ್ಮ ವಿದೇಶ ಮಂತ್ರಿ ಶಾ ಮೆಹಮೂದ್ ಕಸೂರಿಯವರ ನೇತೃತ್ವದಲ್ಲಿ ನಿಯೋಗವೊಂದನ್ನು ಟರ್ಕಿಯ ಇಸ್ತಾಂಬುಲ್ ನಗರಕ್ಕೆ ಕಳುಹಿಸಿದ್ದರು! (ಆ ದಿನಗಳಲ್ಲಿ ಟರ್ಕಿ ಮತ್ತು ಇಸ್ರೇಲ್​ಗಳ ನಡುವೆ ಹೊಕ್ಕುಬಳಕೆ ಚೆನ್ನಾಗಿಯೇ ಇತ್ತು) ಈ ವಿಷಯವನ್ನು ಖುದ್ದು ಕಸೂರಿ ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ.

ಮುಷರ›ಫ್​ರ ಪ್ರಯತ್ನವನ್ನು ನಂತರದ ನಾಗರಿಕ ಸರ್ಕಾರಗಳ ಸಹಕಾರದೊಂದಿಗೆ ಪಾಕಿಸ್ತಾನಿ ಸೇನೆ ಮುಂದುವರಿಸಿತು. ಈ ಬಗ್ಗೆ ಜನರಲ್ ಕಮರ್ ಜಾವೇದ್ ಬಾಜ್ವಾ ಅವರ 2016-22ರ ಅವಧಿಯ ಸೇನಾ ದಂಡನಾಯಕತ್ವದ ದಿನಗಳಲ್ಲಿನ ವಿವರವೊಂದನ್ನು ಹಿರಿಯ ಪತ್ರಕರ್ತ ಹಾಮಿದ್ ಮೀರ್ ಹೇಳುತ್ತಾರೆ. ಇಸ್ರೇಲ್ ಜತೆಗೆ ಸಂಬಂಧಗಳನ್ನು ಸುಧಾರಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿರುವಾಗ ನೀವೇಕೆ ಆ ಯೆಹೂದಿ ರಾಷ್ಟ್ರದ ಕುರಿತಾಗಿ ವಿಷಯುಕ್ತ ಲೇಖನಗಳನ್ನು ಬರೆದು ನಮ್ಮ ಪ್ರಯತ್ನಕ್ಕೆ ಕಲ್ಲು ಹಾಕುತ್ತಿದ್ದೀರಿ ಎಂದು ಜ. ಬಾಜ್ವಾ ತಮ್ಮನ್ನು ತರಾಟೆಗೆ ತೆಗೆದುಕೊಂಡದ್ದಾಗಿ ಪತ್ರಕರ್ತ ಮೀರ್ ಹೇಳುತ್ತಾರೆ.

ತನ್ನ ಬಹಿರಂಗ ನೀತಿಯಾದ ಇಸ್ರೇಲ್-ವಿರೋಧ ಹಾಗೂ ಇಸ್ಲಾಂ-ಪರ ನೀತಿಯ ಅಂಗವಾಗಿ ಪಾಕಿಸ್ತಾನಿ ಸೇನೆ ತೆಹ್ರೀಕ್-ಎ-ಲಬ್ಬಾಯಿಕ್ ಪಾಕಿಸ್ತಾನ್ (ಟಿಎಲ್​ಪಿ) ಎಂಬ ಮತಾಂಧ ಸಂಘಟನೆಯನ್ನು ಹುಟ್ಟುಹಾಕಿ ಬೆಳೆಸಿತು. ಅದರ ಎಲ್ಲ ಇಸ್ರೇಲ್-ವಿರೋಧಿ ದೊಂಬರಾಟಗಳನ್ನು ಇದುವರೆಗೂ ಪಾಕಿಸ್ತಾನಿ ಸೇನೆ ಮತ್ತು ಸರ್ಕಾರ ಬೆಂಬಲಿಸುತ್ತಲೇ ಬಂತು. ಆದರೀಗ ಗಾಳಿ ಬೇರೆ ದಿಕ್ಕಿನಲ್ಲಿ ಬೀಸುತ್ತಿರುವಂತೆ ಕಾಣುತ್ತಿದೆ. ಗಾಝಾದಲ್ಲಿ ಶಾಂತಿ ಸ್ಥಾಪನೆಗಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೂಪಿಸಿದ ಇಪ್ಪತ್ತು ಅಂಶಗಳ ಯೋಜನೆಯನ್ನು ಪಾಕಿಸ್ತಾನಿ ಸೇನೆ ಮತ್ತು ಸರ್ಕಾರ ಬೆಂಬಲಿಸಿವೆ. ಆದರೆ ಆ ಯೋಜನೆ ಪ್ಯಾಲೆಸ್ತೀನಿಯನ್ನರ ಹಿತಾಸಕ್ತಿಗೆ ವಿರುದ್ಧ ಎಂದು ಟಿಎಲ್​ಪಿ ತಿಳಿದಿದೆ. ತನ್ನ ವಿರೋಧವನ್ನು ವ್ಯಕ್ತಪಡಿಸಲು ಅದು ಲಾಹೋರ್​ನಿಂದ ಇಸ್ಲಾಮಾಬಾದ್​ವರೆಗೆ ಜಾಥಾಒಂದನ್ನು ಆಯೋಜಿಸಿತು. ಅಲ್ಲಿ ತಲುಪಿ ಅಮೆರಿಕಾದ ದೂತಾವಾಸದ ಮುಂದೆ ಪ್ರದರ್ಶನ ನಡೆಸುವುದು ಅದರ ಉದ್ದೇಶ. ಆದರೆ ಅಂತಹ ಪ್ರಯತ್ನ ಅಧ್ಯಕ್ಷ ಟ್ರಂಪ್​ರನ್ನು ಕೆರಳಿಸಬಹುದೆಂದು ತಿಳಿದ ಪಾಕಿಸ್ತಾನಿ ಸೇನೆ ಮುರೀಡ್ಕೆಯಲ್ಲೇ ಟಿಎಲ್​ಪಿ ಜಾಥಾದ ಮೇಲೆ ಕತ್ತಲೆಯಲ್ಲೇ ದಾಳಿ ಮಾಡಿ ಮುನ್ನೂರಕ್ಕೂ ಹೆಚ್ಚಿನ ಜೀವಹಾನಿಗೆ ಕಾರಣವಾಗಿದೆ! ಗಾಯಾಳುಗಳ ಸಂಖ್ಯೆ ಎರಡು ಸಾವಿರವನ್ನೂ ದಾಟಿದೆ. ಇದು ಇಸ್ರೇಲ್ ಮತ್ತು ಪ್ಯಾಲೆಸ್ತೀನಿಯನ್ನರ ಕುರಿತಾಗಿ ಪಾಕಿಸ್ತಾನ ತೋರಿದ ಅತ್ಯಂತ ಧೂರ್ತ ನಡವಳಿಕೆ. ಅಂದರೆ ತಾನೇ ಸೃಷ್ಟಿಸಿದ ಇತಿಹಾಸವನ್ನು ಬದಲಿಸಿ ಸಂಪೂರ್ಣ ವಿರುದ್ಧ ದಿಕ್ಕಿಗೆ ಪಾಕಿಸ್ತಾನಿ ಸೇನೆ ಮತ್ತು ಸರ್ಕಾರ ಇಂದು ತಿರುಗಿವೆ. ಇದರ ಪರಿಣಾಮ ಅವೆರಡಕ್ಕೂ ಒಳ್ಳೆಯದೇನಲ್ಲ ಎಂಬ ಸೂಚನೆಗಳು ದಟ್ಟವಾಗಿ ಕಾಣಬರುತ್ತಿವೆ. ಟಿಎಲ್​ಪಿ ತನ್ನ ಆಂದೋಲನವನ್ನು ವಿಸ್ತಾರಗೊಳಿಸುವ, ಹಿಂಸಾತ್ಮಕವಾಗುವ ಸೂಚನೆಗಳು ಕಾಣಬರುತ್ತಿವೆ. ಇದು ಪ್ರಧಾನಿ ಶೆಹ್​ಬಾಜ್ ಶರೀಫ್ ಮತ್ತು ಸೇನಾ ನಾಯಕ ಜ. ಆಸಿಂ ಮುನೀರ್ ಅವರ ಮುಂದಷ್ಟೇ ಅಲ್ಲ, ಪಾಕಿಸ್ತಾನದ ಭವಿಷ್ಯದ ಮುಂದೆಯೂ ಪ್ರಶ್ನೆಗಳನ್ನುಂಟು ಮಾಡಿದೆ.