ಅಂಕಣ

ಸದಾ ಸನ್ನದ್ಧ ನಮ್ಮ ಸೇನೆ ನಮ್ಮ ಹೆಮ್ಮೆ!

ಬಾಬುಪ್ರಸಾದ್​ ಮೋಡಿಸ್​
‘ಛೇ! ಮೋದಿ ಯಾಕೆ ಹೀಗೆ ಮಾಡಿದ್ರು? ಇಂಥ ಹೊತ್ತಿನಲ್ಲಿ ಈ ರೀತಿಯ ನಿರ್ಧಾರ ಮಾಡ್ತಾರೆ ಅಂತ ಕನಸುಮನಸಲ್ಲೂ ಯೋಚಿಸಿರಲಿಲ್ಲ...’

‘ಈ ಬಾರಿ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡೇ ಮಾಡ್ತಾರೆ ಅಂದುಕೊಂಡಿದ್ದೆ. ನಮ್ಮ ಸೇನೆಯವು› ಹೇಗೂ ಮೇಲುಗೈ ಸಾಧಿಸಿದ್ದರು. ಬಿಡಬಾರದಿತ್ತು. ಯಾಕಂದ್ರೆ ಇಂಥ ಅವಕಾಶ ಪದೇಪದೆ ಸಿಗಲ್ಲ..’

-ಪಹಲ್ಗಾಮ್ಲ್ಲಿ ಭಯೋತ್ಪಾದಕರು ನಡೆಸಿದ ನರಮೇಧಕ್ಕೆ ಪ್ರತಿಯಾಗಿ ಭಾರತದ ಆಪರೇಷನ್ ಸಿಂಧೂರದ ಹೊಡೆತಕ್ಕೆ ಸಿಲುಕಿ ಪಾಕಿಸ್ತಾನ ಪತರಗುಟ್ಟುತ್ತಿದ್ದ ಸಮಯದಲ್ಲಿ ಇದ್ದಕ್ಕಿದ್ದಂತೆ ಕದನ ವಿರಾಮ ಘೋಷಣೆಯಾದಾಗ ಸಾರ್ವಜನಿಕ ವಲಯದಲ್ಲಿ ಹೊಮ್ಮಿದ ಭಾವನೆಗಳಿವು. ಈಗಲೂ ಜನರ ನಡುವೆ ಇದು ಚರ್ಚಾವಿಷಯ. ಬಸ್ಸಲ್ಲಿ ಹೋಗುತ್ತಿರಲಿ, ಸಂಬಂಧಿಕರ ಮನೆಯಲ್ಲಿ ವಿಶೇಷದಲ್ಲಿ ಭಾಗವಹಿಸಿರಲಿ... ಅಲ್ಲೆಲ್ಲ ಇದೇ ಮಾತು-ಕತೆ. ಪಾಕಿಸ್ತಾನ ಇನ್ನೆಂದೂ ಇಂಥ ದುಸ್ಸಾಹಸ ಮಾಡದ ಹಾಗೆ ಪೂರ್ಣವಾಗಿ ಸೋಲಿಸಲಾಗುತ್ತದೆ ಎಂದು ದೇಶದ ಬಹಳ ಜನರು ಭಾವಿಸಿದ್ದರು. ಏಕೆಂದರೆ, ಪಹಲ್ಗಾಮ್ಲ್ಲಿ ನಡೆದ ಕೃತ್ಯ ದೇಶವಾಸಿಗಳಲ್ಲಿ ತೀವ್ರ ಆಕ್ರೋಶವುಂಟುಮಾಡಿತ್ತು.

ಪತ್ನಿಯ ಎದುರಿನಲ್ಲಿಯೇ ಪತಿಯನ್ನು ಗುಂಡುಹೊಡೆದು ಸಾಯಿಸುವ ಕ್ರೌರ್ಯ! ಪ್ರವಾಸದ ಮುದ ಅನುಭವಿಸಲೆಂದು ತೆರಳಿದ ಅದೆಷ್ಟೋ ಕುಟುಂಬಗಳು ಜೀವನಪರ್ಯಂತ ದುಃಖ ಅನುಭವಿಸುವ ಸನ್ನಿವೇಶ ಸೃಷ್ಟಿಸಲಾಯಿತು. ಕಣಿವೆಯ ಸುಂದರ ಪರಿಸರದಲ್ಲಿ ರಕ್ತದೋಕುಳಿ. ಪ್ರಧಾನಿಯಾದಿಯಾಗಿ ಪ್ರಮುಖ ನಾಯಕರು ಪ್ರತೀಕಾರದ ವಾಗ್ದಾನ ಮಾಡಿದ್ದರು. ಈ ಸನ್ನಿವೇಶದಲ್ಲಿ ರಾಜತಾಂತ್ರಿಕ ಕಾರ್ಯತಂತ್ರ ಮತ್ತು ಸಮರತಂತ್ರ- ಎರಡನ್ನೂ ಅದ್ಭುತವಾಗಿ ಸಂಯೋಜಿಸಿದ ಭಾರತವು ಪಾಕಿಸ್ತಾನಕ್ಕೆ ಮರೆಯಲಾಗದ ಪೆಟ್ಟು ಕೊಟ್ಟಿತು. ರಾಜತಾಂತ್ರಿಕವಾಗಿ ಉನ್ನತ ಕೌಶಲ ಹೊಂದಿರುವ ಎಸ್. ಜೈಶಂಕರ್ ಮತ್ತು ಗೂಢಚಾರಿಕೆಯಲ್ಲಿ ಪಳಗಿರುವ, ಯುದ್ಧ ತಂತ್ರಗಳನ್ನು ಅರೆದು ಕುಡಿದಿರುವ ಅಜಿತ್ ದೋವಲ್ ಮುಂತಾದವರು ಮೋದಿ ಟೀಮ್ಲ್ಲಿ ಇರುವುದು ಪ್ಲಸ್ ಪಾಯಿಂಟ್. ಭಾರತ ಏನು ಮಾಡಲು ಹೊರಟಿದೆ ಎಂಬುದನ್ನು ಗ್ರಹಿಸಲು ವಿಫಲವಾದ ಪಾಕಿಸ್ತಾನ ಜಾಗತಿಕವಾಗಿ ಮುಖಭಂಗ ಅನುಭವಿಸುವಂತಾಯಿತು. ಭಾರತವು ತನ್ನ ನಿಲುವನ್ನು ಜಾಗತಿಕ ದೇಶಗಳಿಗೆ ಮನವರಿಕೆ ಮಾಡುವ ಸಲುವಾಗಿ ಸಂಸದರ ನಿಯೋಗಗಳನ್ನು ಈಗ ಕಳಿಸಿರುವುದು ಕಾರ್ಯತಂತ್ರದ ಮುಂದುವರಿದ ಭಾಗವೇ ಆಗಿದೆ.

ಹಿಂದೆ ಉರಿ ಹಾಗೂ ಪುಲ್ವಾಮಾ ದಾಳಿ ನಡೆದ ಕೆಲ ದಿನಗಳಲ್ಲಿ ಅನೂಹ್ಯ ರೀತಿಯಲ್ಲಿ ಪಾಕ್ ಉಗ್ರ ನೆಲೆಗಳ ಮೇಲೆ ನಮ್ಮ ಸೇನೆ ದಾಳಿಗೈದಿತ್ತು. ಈಗಲೂ ಏನೋ ನಡೆಯುತ್ತದೆ ಎಂಬುದು ಖಾತ್ರಿಯಿತ್ತು. ಏನೆಂಬುದರ ಅಂದಾಜಿರಲಿಲ್ಲ ಅಷ್ಟೇ. ಇದಲ್ಲದೆ, ‘ಊಹಿಸಲಾಗದ ರೀತಿಯಲ್ಲಿ ಪೆಟ್ಟು ಕೊಡುತ್ತೇವೆ’ ಎಂದು ಮೋದಿ ಬೇರೆ ವಾರ್ನಿಂಗ್ ಮಾಡಿದ್ದರಲ್ಲ. ಆ ಸಮಯ ಬಂದೇಬಿಟ್ಟಿತು. ಮೇ 7ರ ತಡರಾತ್ರಿ 1 ಗಂಟೆಯ ಹೊತ್ತಿಗೆ ಪಿಒಕೆ ಹಾಗೂ ಪಾಕಿಸ್ತಾನದ ಒಟ್ಟು ಒಂಬತ್ತು ಉಗ್ರನೆಲೆಗಳ ಮೇಲೆ ಭಾರತ ದಾಳಿಗೈದು, ಪುಡಿಗಟ್ಟಿತು. ಪಾಕಿಸ್ತಾನ ತಾನು ಮುಖವುಳಿಸಿಕೊಳ್ಳುವ ಸಲುವಾಗಿ ಒಂದಷ್ಟು ಪ್ರತಿದಾಳಿ ನಡೆಸಿತು. ಬಹುಶಃ ಪಾಕಿಸ್ತಾನ ಮತ್ತು ಅಲ್ಲಿ ನೆಲೆ ಕಂಡುಕೊಂಡಿರುವ ಭಯೋತ್ಪಾದಕರು ಈ ಬಗೆಯ ನಿರ್ದಿಷ್ಟ ದಾಳಿಯನ್ನು ಊಹಿಸಿರಲಿಲ್ಲ. ಭಾರತ ಈ ದಾಳಿ ಮೂಲಕ, ಉಗ್ರರು ಯಾವ ಮೂಲೆಯಲ್ಲಿ ಕೂತಿದ್ದರೂ ಹುಡುಕಿ ಹೊಡೆಯಬಲ್ಲೆವು ಎಂಬ ಸಂದೇಶವನ್ನು ರವಾನಿಸಿತು.

ಇದಲ್ಲದೆ, ಭಾರತದ ವಾಯು ರಕ್ಷಣಾ ವ್ಯವಸ್ಥೆಯ ಕ್ಷಮತೆ ಒರೆಗೆ ಹಚ್ಚಲ್ಪಟ್ಟಿತು. ಸ್ಪಷ್ಟ ಕಾರ್ಯತಂತ್ರ, ನಿಖರ ಗುರಿ, ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆಯ ವಿರಾಟರೂಪವನ್ನು ಇದು ಪ್ರದರ್ಶಿಸಿತು. ಅಣ್ವಸ್ತ್ರ ಝುಳಪಿಸಿ ಬೆದರಿಸುವ ಕಾರ್ಯವನ್ನು ಪಾಕ್ ಇಷ್ಟೂ ವರ್ಷ ಮಾಡಿಕೊಂಡು ಬಂದಿತ್ತು. ಈ ಬಾರಿ ಅದು ಸಾಧ್ಯವಾಗಲಿಲ್ಲ. ‘ಅಣ್ವಸ್ತ್ರ ಬ್ಲ್ಯಾಕ್​ವೆುೕಲ್​ಗೆ ಜಗ್ಗಲ್ಲ’ ಎಂದು ಪ್ರಧಾನಿ ಮೋದಿ ಸ್ಪಷ್ಟಮಾತುಗಳಲ್ಲಿ ಹೇಳಿದರು. ಎಲ್ಲ ರೀತಿಯಿಂದಲೂ ಪರಿಸ್ಥಿತಿ ಮೇಲೆ ನಾವು ಮೇಲುಗೈ ಸಾಧಿಸಿದ್ದೆವು. ಹೀಗಿರುವಾಗ ಪಾಕಿಸ್ತಾನವನ್ನು ನಿರ್ಣಾಯಕವಾಗಿ ಸೋಲಿಸಿಬಿಡಬೇಕಿತ್ತು; ಹೀಗೆ ಮಾಡಿದ್ದಲ್ಲಿ ಭವಿಷ್ಯದಲ್ಲಿ ಆ ದೇಶ ತೆಪ್ಪಗಿರುತ್ತಿತ್ತು. ತಂತ್ರಗಾರಿಕೆಯಲ್ಲಿ ನಿಪುಣರಾದ ಖಡಕ್ ನಾಯಕ ಮೋದಿ ಈ ಕೆಲಸ ಮಾಡುತ್ತಾರೆ ಎಂದು ಜನ ಅಂದುಕೊಂಡಿದ್ದರು. ದೇಶ ವಿಭಜನೆಯ ಮರುದಿನದಿಂದಲೇ ಪಾಕಿಸ್ತಾನದ ಉಪಟಳವನ್ನು ನೋಡುತ್ತಿರುವ ಜನರಲ್ಲಿ ಇಂಥದೊಂದು ಭಾವನೆ ಮೂಡಿದ್ದರೆ ಅದು ಅಸಹಜ ಎನ್ನುವಂತಿಲ್ಲ.

ಆದರೆ ರಾಜತಾಂತ್ರಿಕರು ಹಾಗೂ ಕೆಲ ಅಂತಾರಾಷ್ಟ್ರೀಯ ವಿಶ್ಲೇಷಕರು ಈ ಸನ್ನಿವೇಶವನ್ನು ನೋಡುವ ಬಗೆ ಬೇರೆ. ಪಾಕಿಸ್ತಾನ ಒಂದು ‘ವಿಫಲ ದೇಶ’ ಎಂದು ಜಾಗತಿಕ ದೇಶಗಳು ಹಣೆಪಟ್ಟಿ ಕಟ್ಟಿಯಾಗಿದೆ. ಅಲ್ಲಿನ ಆಂತರಿಕ ಪರಿಸ್ಥಿತಿ ದಯನೀಯವಾಗಿದೆ. ರಾಜಕೀಯ ನಾಯಕತ್ವದ ಮೇಲೆ ಜನರಿಗೆ ಭರವಸೆ ಇಲ್ಲದಾಗಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟು ಭಿಕ್ಷಾಪಾತ್ರೆ ಹಿಡಿದಿದೆ. ಸಾಲಕ್ಕಾಗಿ ಪದೇಪದೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯತ್ತ ಕೈಚಾಚುವುದು ಅದಕ್ಕೆ ರೂಢಿಯಾಗಿ ಹೋಗಿದೆ. ಮತ್ತೊಂದೆಡೆ, ಬಲೂಚಿಸ್ತಾನ ಪ್ರತ್ಯೇಕ ದೇಶಕ್ಕಾಗಿ ಆಂದೋಲನ ನಡೆಯುತ್ತಿದ್ದು, ಪಾಕಿಸ್ತಾನಕ್ಕೆ ತಲೆಬಿಸಿ ತಂದಿಟ್ಟಿದೆ. ಪಾಕ್ ಆಡಳಿತಗಾರರು ಬಲೂಚ್ ಪ್ರದೇಶದಿಂದ ಲಾಭ ಎತ್ತುತ್ತಿದ್ದಾರೆ ಹೊರತು ಇಲ್ಲಿನ ಅಭಿವೃದ್ಧಿಗೆ ಏನನ್ನೂ ಮಾಡುತ್ತಿಲ್ಲ ಎಂಬ ಸಿಟ್ಟು ಅಲ್ಲಿನ ಜನರಲ್ಲಿದೆ. ಬಲೂಚ್ ಲಿಬರೇಷನ್ ಆರ್ವಿು (ಬಿಎಲ್​ಎ) ಸದಸ್ಯರು ಪಾಕ್ ಸೈನಿಕರನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ದಾಳಿಗಳನ್ನು ಸಂಘಟಿಸುತ್ತಿದ್ದಾರೆ. ಆ ಪ್ರದೇಶದಲ್ಲಿ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಚೀನಾಕ್ಕೂ ಇದು ಇಕ್ಕಟ್ಟು ತಂದಿಟ್ಟಿದೆ. ಹೀಗಾಗಿ ಚೀನಾವು ತನ್ನ ಇಂಜಿನಿಯರ್​ಗಳು, ಕಾರ್ವಿುಕರು ಹಾಗೂ ನಾಗರಿಕರ ರಕ್ಷಣೆಗೆ ಭದ್ರತಾ ವ್ಯವಸೆ ಮಾಡಿಕೊಳ್ಳುವ ತುರ್ತು ಸನ್ನಿವೇಶ ಏರ್ಪಟ್ಟಿದೆ.

ಅದೇ, ಇತ್ತ ಭಾರತದ ಚಿತ್ರಣ ಭಿನ್ನವಾಗಿದೆ. ‘ಜಾಗತಿಕವಾಗಿ ಮೂರನೇ ಬೃಹತ್ ಆರ್ಥಿಕ ಶಕ್ತಿಯಾಗುವತ್ತ ಭಾರತ ದಾಪುಗಾಲಿಟ್ಟಿದೆ. ಜಾಗತಿಕ ವಲಯದಲ್ಲಿ ಭಾರತದ ಇಮೇಜ್ ಬದಲಾಗಿದೆ. ಹೀಗಿರುವಾಗ ಪಾಕಿಸ್ತಾನದಂತಹ ದೇಶವನ್ನು ಯುದ್ಧದಲ್ಲಿ ಮಣ್ಣುಮುಕ್ಕಿಸಿಯೇಬಿಡಬೇಕೆಂಬ ಜರೂರತ್ತು ಇಲ್ಲ. ಆಪರೇಷನ್ ಸಿಂಧೂರ ಕೊಟ್ಟ ಹೊಡೆತ ಅಂತಿಂಥದ್ದಲ್ಲ. ಇದರಿಂದ ಸುಧಾರಿಸಿಕೊಳ್ಳಲು ಸುಲಭವಿಲ್ಲ. ಒಂಬತ್ತು ಪ್ರಮುಖ ಉಗ್ರ ಶಿಬಿರಗಳನ್ನು ಧ್ವಂಸಮಾಡಿದ್ದು ಬಲು ದೊಡ್ಡ ಸಾಧನೆ. ಇದರಿಂದ ಚೇತರಿಸಿಕೊಂಡು ಮತ್ತೆ ಒಟ್ಟುಗೂಡಲು ಸಮಯ ಹಿಡಿಯುತ್ತದೆ. ಭಾರತದ ಬಗ್ಗೆ ಜಾಗತಿಕವಾಗಿ ಸಕಾರಾತ್ಮಕ ಇಮೇಜ್ ಇದೆ. ಹೊರ ದೇಶಗಳ ಹೂಡಿಕೆದಾರರು, ಉದ್ಯಮಿಗಳು ಕೂಡ ವಿಶ್ವಾಸ ಇರಿಸಿದ್ದಾರೆ. ಇಂಥ ಸನ್ನಿವೇಶದಲ್ಲಿ ಯುದ್ಧ ಸಂಭವಿಸಿದಲ್ಲಿ ಉದ್ಯಮಿಗಳಲ್ಲಿ ಕಳವಳ ಶುರುವಾಗುತ್ತದೆ. ಹೂಡಿಕೆ ತಗ್ಗುತ್ತದೆ. ನಮ್ಮ ಪ್ರಗತಿ ಒಂದಷ್ಟು ವರ್ಷ ಹಿಂದಕ್ಕೆ ಹೋಗುತ್ತದೆ’ ಎಂದು ಮಾಜಿ ರಾಯಭಾರಿ ಎನ್.ಪಾರ್ಥಸಾರಥಿ ಹೇಳುತ್ತಾರೆ.

ಪಾಕಿಸ್ತಾನ ಈ ಹಿಂದೆ ನಾಲ್ಕು ಭಾರಿ ಸಮರದಲ್ಲಿ ಪೆಟ್ಟು ತಿಂದಿದೆ. ಆದರೂ ಬುದ್ಧಿ ಕಲಿತಿಲ್ಲ. ಯುದ್ಧವೇ ಆದಲ್ಲಿ, ಎದುರಾಳಿಗೆ ಹೆಚ್ಚು ಹಾನಿಯಾದರೂ ನಮ್ಮ ಕಡೆಯೂ ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿ ಸ್ವಲ್ಪವಾದರೂ ಆಗುತ್ತದೆಯಲ್ಲವೆ? ಎಂಬುದು ಯುದ್ಧವಿರೋಧಿಗಳ ಪ್ರತಿಪಾದನೆ.

ಆಪರೇಷನ್ ಸಿಂಧೂರ ಪರಿಣಾಮವಾಗಿ ಪಾಕ್​ಪ್ರೇರಿತ ಭಯೋತ್ಪಾದನೆ ನಿಂತುಬಿಡುತ್ತದೆಯಾ? ಆ ದೇಶ ತನ್ನ ಆಲೋಚನಾಧಾಟಿಯಲ್ಲಿ ಬದಲಾವಣೆ ತಂದುಕೊಳ್ಳುತ್ತದೆಯಾ? ಇತಿಹಾಸವನ್ನು ವಸ್ತುನಿಷ್ಠವಾಗಿ ಅವಲೋಕಿಸಿದರೆ, ಈ ಪ್ರಶ್ನೆಗೆ ‘ಇಲ್ಲ’ ಎಂದೇ ಉತ್ತರ ದೊರೆಯುತ್ತದೆ. ಹಾಗಾದರೆ ಪರಿಹಾರವೇನು? ‘ಗಡಿಯಲ್ಲಿ ಭದ್ರತೆ ಹೆಚ್ಚಿಸುವುದು, ಗುಪ್ತಚರ ವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ದೇಶದಲ್ಲಿ ಆಂತರಿಕವಾಗಿ ಉಗ್ರವಾದಕ್ಕೆ ಬೆಂಬಲ ಇರದಂತೆ ಕಟ್ಟೆಚ್ಚರ- ಇವು ಭಾರತ ತನ್ನನ್ನು ತಾನು ರಕ್ಷಿಕೊಳ್ಳುವ ಉಪಾಯ’ ಎಂದು ತಜ್ಞರು ಹೇಳುತ್ತಾರೆ.

ಇಲ್ಲಿ ಒಂದು ಸಂಗತಿ ಉಲ್ಲೇಖನೀಯ. ಭಯೋತ್ಪಾದನೆಯ ಕುರಿತ ವಾದಗಳನ್ನು ಅಮೆರಿಕ ಮೊದಮೊದಲು ಉಪೇಕ್ಷಿಸುತ್ತಿತ್ತು. ಕಿವಿನೋವು, ಹಲ್ಲುನೋವು ಇವೆಲ್ಲವನ್ನೂ ಅನುಭವಿಸಿದವರಿಗೆ ಮಾತ್ರ ಗೊತ್ತು. ಬೇರೆಯವರಿಗೆ ಹೇಳಿದರೆ ಇದರ ತೀವ್ರತೆ ಅಂದಾಜಾಗುವುದಿಲ್ಲ. ಇದೂ ಹಾಗೇ. ಯಾವಾಗ 2001ರ ಸೆಪ್ಟೆಂಬರ್​ನಲ್ಲಿ ತನ್ನ ನೆಲದಲ್ಲಿಯೇ ಭಯೋತ್ಪಾದನಾ ಕೃತ್ಯ ನಡೆಯಿತೋ ಆಗ ಅಮೆರಿಕ ಬೆಚ್ಚಿಬಿತ್ತು. ಆ ದಾಳಿ ಅಮೆರಿಕದ ಪ್ರತಿಷ್ಠ್ಠೆಗೇ ಬಿದ್ದ ಹೊಡೆತವಾಗಿತ್ತು. ಮುಂದೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ತನ್ನಲ್ಲಿ ವಿಶೇಷ ಸಮಸ್ಯೆ ಆಗದಂತೆ ಎಚ್ಚರವಹಿಸಿತು. ಭಯೋತ್ಪಾದನಾ ನಿಗ್ರಹಕ್ಕೆ ಮುಂದಾಯಿತು. ಉಗ್ರರನ್ನು ಸದೆಬಡಿಯಲು ಅಫ್ಘಾನಿಸ್ತಾನದ ಬೆಟ್ಟಗುಡ್ಡಗಳಲ್ಲಿ ಅಮೆರಿಕದ ಸೈನಿಕರು ಬೆವರು ಸುರಿಸಿದರು; ವಿಮಾನಗಳು ಹಾರಾಡಿದವು.

ಅಂತೂ ಕೊನೆಗೆ ಪಾಕಿಸ್ತಾನದ ಅಬೋಟಾಬಾದಿನಲ್ಲಿ ಅಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್​ನನ್ನು ಹತ್ಯೆಗೈದು ಉಸ್ಸಪ್ಪಾ ಎಂದು ನಿಟ್ಟುಸಿರುಬಿಟ್ಟಿತು. ಆದರೆ ಪಾಕಿಸ್ತಾನ ಎಂಥ ಚಾಲಾಕಿ ಎಂದರೆ, ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಕೈಜೋಡಿಸುವ ಹೆಸರಲ್ಲಿ ಅಮೆರಿಕದಿಂದ ದಂಡಿಯಾಗಿ ಹಣ ಪಡೆಯಿತು. ಕೊನೆಗೆ ಟ್ರಂಪ್ ಅವರೇ ಈ ಹಣಕಾಸು ನೆರವನ್ನು ಕಟ್ ಮಾಡಬೇಕಾಯಿತು. ಅಮೆರಿಕಕ್ಕೆ ಯಾರಿಂದ ಎಷ್ಟು ನಷ್ಟವಾಗಿದೆ ಎಂದು ಲೆಕ್ಕಹಾಕಿ, ಅದರ ವಸೂಲಿಗೆ ಟ್ರಂಪ್ ಬೇರೆ ಬೇರೆ ರೀತಿಯಲ್ಲಿ ಯತ್ನಿಸುತ್ತಿದ್ದಾರೆ. ಒಂದು ಉದಾಹರಣೆ ನೀಡುವುದಾದರೆ- ರಷ್ಯಾ ವಿರುದ್ಧದ ಯುದ್ಧದಲ್ಲಿ ಅಮೆರಿಕ ಹಾಗೂ ಯುರೋಪ್ ಸಹಯೋಗಿಗಳು ಯೂಕ್ರೇನ್ ಬೆಂಬಲಕ್ಕೆ ನಿಂತು ಹಣಕಾಸು ಹಾಗೂ ಶಸ್ತ್ರಾಸ್ತ್ರ ಬೆಂಬಲ ನೀಡುತ್ತಿವೆಯಷ್ಟೆ. ಯೂಕ್ರೇನ್ ಜೊತೆಗೆ ಖನಿಜ ಒಪ್ಪಂದ ಮಾಡಿಕೊಳ್ಳುವ ಮೂಲಕ, ಆ ದೇಶಕ್ಕೆ ನೀಡಿದ ನೆರವಿಗೆ ಪ್ರತಿಯಾಗಿ ಒಂದಷ್ಟು ಪರಿಹಾರ ಪಡೆದುಕೊಳ್ಳುವ ಪ್ಲಾನ್ ಟ್ರಂಪ್ ಅವರದು. ಇಂಥ ಉಪಾಯ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದು ಬೇರೆ ಮಾತು.

ಒಂದೊಮ್ಮೆ ಭಾರತ-ಪಾಕ್ ಸಂಘರ್ಷ ಮುಂದುವರಿದಿದ್ದಲ್ಲಿ ಚೀನಾವು ಪಾಕ್ ಪರವಾಗಿ ನಿಲ್ಲುವ ಸಾಧ್ಯತೆ ನಿಚ್ಚಳವಾಗಿತ್ತು ಎಂದು ರಕ್ಷಣಾ ವಿಶ್ಲೇಷಕರು ಹೇಳುತ್ತಾರೆ. ಚೀನಾಕ್ಕೆ ಪಾಕಿಸ್ತಾನ ಸದ್ಯ ಪರಮಾಪ್ತ ದೇಶ. ಸರಿಸುಮಾರು 2010ರವರೆಗೆ ಪಾಕಿಸ್ತಾನಕ್ಕೆ ಹೆಚ್ಚು ಶಸ್ತ್ರಾಸ್ತ್ರ ಪೂರೈಸುತ್ತಿದ್ದುದು ಅಮೆರಿಕ. ಆದರೆ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕ್ ಇಬ್ಬಂದಿತನ ಹಾಗೂ ತಾಲಿಬಾನಿಗಳ ಅಫ್ಘಾನಿಸ್ತಾನಕ್ಕೆ ಪಾಕ್ ಬೆಂಬಲ ಮುಂದುವರಿಸಿದ್ದರಿಂದಾಗಿ ಅಸಮಾಧಾನಗೊಂಡ ಅಮೆರಿಕ ಶಸ್ತ್ರಾಸ್ತ್ರ ಪೂರೈಕೆಯನ್ನು ತಗ್ಗಿಸಿತು. ಅತ್ತ ಚೀನಾ ಪಾಕ್​ಗೆ ಶಸ್ತ್ರಾಸ್ತ್ರ ಪೂರೈಕೆ ಹೆಚ್ಚಿಸತೊಡಗಿತು. ಈಗಂತೂ ಪಾಕಿಸ್ತಾನಕ್ಕೆ ಶೇಕಡ 80ರಷ್ಟು ಶಸ್ತ್ರಾಸ್ತ್ರಗಳು ಬರುವುದು ಚೀನಾದಿಂದಲೇ. ಇದಲ್ಲದೆ, ಚೀನಾವು ಪಾಕಿಸ್ತಾನದಲ್ಲಿ ಅಗಾಧ ಪ್ರಮಾಣದ ಹೂಡಿಕೆ ಮಾಡಿದೆ.

ಪಾಕ್ ಮೇಲಿನ ಪ್ರೀತಿ ಎಂಬುದಕ್ಕಿಂತ ತನ್ನ ಹಿತಾಸಕ್ತಿ ರಕ್ಷಣೆಗೆ ಚೀನಾ ಯತ್ನಿಸುವುದು ಸಹಜವೇ. ಹೀಗಿರುವಾಗ ಯುದ್ಧವೇ ಆದಲ್ಲಿ ಪಾಕ್ ಜೊತೆ ‘ಡ್ರ್ಯಾಗನ್’ ಕೈಜೋಡಿಸಲು ಮುಂದಾದಲ್ಲಿ ಅಚ್ಚರಿಯೇನಿರಲಿಲ್ಲ ಎಂಬುದು ಕೆಲ ವಿಶ್ಲೇಷಕರ ಅಂಬೋಣ. ಅಂಥ ಸಂದರ್ಭ ಎದುರಾದಲ್ಲಿ ನಮ್ಮ ಸೇನೆ ಮೇಲೆ ಒತ್ತಡ ಹೆಚ್ಚುತ್ತಿತ್ತು. ಸೈನಿಕರು, ಶಸ್ತ್ರಾಸ್ತ್ರಗಳು ಹಾಗೂ ರಕ್ಷಣಾ ವಲಯದ ಬಜೆಟ್ ಅಂಕಿಅಂಶಗಳ ಹೋಲಿಕೆಯಲ್ಲಿ, ಚೀನಾ ನಮಗಿಂತ ಮುಂದಿರಬಹುದು. ಆದರೆ, ನಮ್ಮ ಸೈನಿಕರು ಚೀನಾ ಸೈನಿಕರನ್ನು ಎದುರಿಸಲು ಸಮರ್ಥರು. 2020ರ ಗಲ್ವಾನ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸುಮಾರು 77 ದಿನಗಳವರೆಗೆ ನಮ್ಮ ಸೈನಿಕರು ಗಡಿಯಲ್ಲಿ ಚೀನಾ ಸೇನೆಗೆದುರಾಗಿ ಯಾವುದೇ ಸನ್ನಿವೇಶಕ್ಕೆ ತಯಾರಾಗಿ ನಿಂತಿದ್ದರೆಂಬುದನ್ನು ಇಲ್ಲಿ ಸ್ಮರಿಸೋಣ.

ಯುದ್ಧ ಬೇಕು- ಬೇಡ ಎಂಬ ವಾದ-ಪ್ರತಿವಾದಗಳೇನೇ ಇರಲಿ, ಇನ್ನು ಉಗ್ರದಾಳಿ ನಡೆದರೆ ಭಾರತದ ಪ್ರತಿಕ್ರಿಯೆ ಬಲು ಕಠಿಣವಾಗಿರುತ್ತದೆ ಎಂಬುದಂತೂ ಈ ಪ್ರಸಂಗದಿಂದ ಸ್ಪಷ್ಟವಾಗಿದೆ. ಹಾಗೆ, ಪಿಒಕೆಯನ್ನು ಮರಳಿ ಪಡೆಯಬಹುದು ಎಂಬ ನಿರೀಕ್ಷೆಯೂ ಇದೆ.

ಕೊನೇ ಮಾತು: ನಮ್ಮ ದೇಶವನ್ನು ಕಾಯುವುದಕ್ಕೆ ಸೇನೆ ಸದಾ ಸನ್ನದ್ಧವಾಗಿರುತ್ತದೆ ಎಂಬುದು ನಾವು ನೆಮ್ಮದಿಯಿಂದ ಇರಬಹುದಾದ, ನಮ್ಮ ನಮ್ಮ ಕೆಲಸಕಾರ್ಯಗಳಲ್ಲಿ ಸಮಾಧಾನದಿಂದ ತೊಡಗಿಸಿಕೊಳ್ಳಬಹುದಾದ ಸಂಗತಿ. ಅಲ್ಲೆಲ್ಲೋ ಗಡಿಯಲ್ಲಿ, ದುರ್ಗಮ ವಾತಾವರಣದಲ್ಲಿ ಕಟ್ಟೆಚ್ಚರದಿಂದ ಇದ್ದು, ಕಾಯುವ ಕಾಯಕದಲ್ಲಿ ತೊಡಗಿರುವ ಸೈನಿಕರಿಗೊಂದು ಸಲಾಂ! (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)