ಅಂಕಣ

ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ...

(ಲೇಖಕರು ಅಮೆರಿಕದಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಮತ್ತು ಅಂಕಣ ಬರಹಗಾರರು)

ನೀವು ಸೂಚಿಸುವ ಕನ್ನಡ ಪದವನ್ನು ಸಂದರ್ಭಕ್ಕೆ ಸರಿಯಾಗಿ ಕನ್ನಡ ಬರವಣಿಗೆಯಲ್ಲಿ, ಸಂಭಾಷಣೆಯಲ್ಲಿ ಅತ್ಯಂತ ಸಹಜವೆಂಬಂತೆ ಬಳಸುವುದು ಸಾಧ್ಯವಿದೆಯೇ ಎಂದು ನೋಡಿಕೊಂಡು, ಸಾಧ್ಯವಾದರೆ ಸ್ವಂತ ವಾಕ್ಯದಲ್ಲಿ ಉದಾಹರಣೆಯಂತೆ ಬಳಸಿ ತೋರಿಸಿದರೆ ಈ ಚಟುವಟಿಕೆಯನ್ನು ನಾವೆಲ್ಲ ಸೇರಿ ಇನ್ನಷ್ಟು ಅರ್ಥಪೂರ್ಣವಾಗಿಸಬಹುದು. ಕೆ.ಎಸ್.ನರಸಿಂಹ ಸ್ವಾಮಿಯವರ ಈ ಪ್ರಖ್ಯಾತ ಭಾವಗೀತೆಯನ್ನು ಕೇಳಿ ಅರ್ಥೈಸಿಕೊಂಡವರಿಗೆ, ಸ್ವತಃ ಅನುಭವಿಸಿದವರಿಗೆ ಗೊತ್ತಿರುತ್ತದೆ- ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣಿನ ಮನದ ತಲ್ಲಣ-ತಳಮಳ. ಗುರುತು ಪರಿಚಯವಿಲ್ಲದ ಊರು, ಅಲಂಕಾರಕ್ಕಿಟ್ಟ ಗೊಂಬೆಯೇನೋ ಎನ್ನುವಂತೆ ಎಲ್ಲರೂ ದಿಟ್ಟಿಸುವವರು; ಕುಳಿತರೂ ಕಷ್ಟ, ನಿಂತರೂ ಕಷ್ಟ; ನಡುನಡುವೆ ತವರಿನ ನೆನಪಿಂದ ಕಣ್ಣುಗಳು ಹನಿಗೂಡುತ್ತವೆ; ಅಳು ತುಟಿಗೆ ಬರುತ್ತದೆ, ಆದರೆ ಗಟ್ಟಿಯಾಗಿ ಅಳಲಾಗದು; ಯಾರ ಬಳಿ ಮಾತನಾಡುವುದು, ಏನೆಂದು ಮಾತನಾಡುವುದು? ಮೊದಲ ದಿನವಂತೂ ಹೆಚ್ಚೂಕಡಿಮೆ ಮೌನದಲ್ಲೇ ಕಳೆದುಹೋಗುತ್ತದೆ.

ಎರಡನೆಯ ದಿನ ಅಷ್ಟಿಷ್ಟು ಧೈರ್ಯ ತಂದುಕೊಂಡು ಮಾತನಾಡಿದರೂ ಅದು ಅಸ್ಪಷ್ಟ- ‘ನೀರೊಳಗೆ ವೀಣೆ ಮಿಡಿದಂತೆ, ಬೇಲಿಯಲಿ ಹಾವು ಹರಿದಂತೆ!’ ಮೂರು-ನಾಲ್ಕು ದಿನಗಳೆನ್ನುವಾಗ ಪರಿಸ್ಥಿತಿ ಕ್ರಮೇಣ ಸುಧಾರಿಸುತ್ತದೆ. ಈ ಒಳತೋಟಿಗಳನ್ನೆಲ್ಲ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ ಕವಿ. ಈಗ ಕಾಲ ಬದಲಾಗಿದೆ, ನಾಲ್ಕೈದು ದಶಕಗಳ ಹಿಂದಿನಂತಲ್ಲ ಎನ್ನುವುದೂ ನಿಜವೆನ್ನಿ. ಆದರೂ Break the ice ಎಂಬ ನುಡಿಗಟ್ಟನ್ನು ಕನ್ನಡ ಸಂದರ್ಭದಲ್ಲಿ ಅವಲೋಕಿಸಿದಾಗ ಈ ಕವಿತೆ ಅದನ್ನೆಷ್ಟು ಸಮರ್ಥವಾಗಿ ನಿರ್ವಹಿಸಿದೆಯೆಂದು ಅಚ್ಚರಿಯಾಗುತ್ತದೆ.

ಮದುವೆಯಾಗಿ ಹೋದ ಹೆಣ್ಣಿಗಷ್ಟೇ ಅಂತಲ್ಲ, ಬೇರೆಬೇರೆ ಸಂದರ್ಭಗಳಲ್ಲಿ ನಮಗೆಲ್ಲರಿಗೂ ಇಂತಹ ಅನುಭವ ಆಗಿರುತ್ತದೆ. ಹೊಸ ಪರಿಸರ, ಅಪರಿಚಿತ ಮುಖಗಳು, ಕೆಲವೊಮ್ಮೆ ಗೊತ್ತಿರುವವರೇ ಇದ್ದರೂ ಸೇರಿರುವ ಸಂದರ್ಭ/ಉದ್ದೇಶ ಹೊಸದು. ಬಾಯ್ದೆರೆದರೆ ಬಣ್ಣಗೇಡು ಎಂದು ಹಿಂಜರಿಕೆ. ಉಸಾಬರಿಯೇ ಬೇಡವೆಂದು ಮೌನವನ್ನೇ ಆಯ್ದುಕೊಳ್ಳುತ್ತೇವೆ. ಆದರೆ ನಮ್ಮಂತೆಯೇ ಅಲ್ಲಿ ಸೇರಿದ ಇತರರ ಪರಿಸ್ಥಿತಿಯೂ. ಕೊನೆಗೂ ಯಾರೋ ಒಬ್ಬರು ಧೈರ್ಯದಿಂದ ಮೌನ ಮುರಿಯುತ್ತಾರೆ. ಒಂದು ನಗೆಚಟಾಕಿಯನ್ನೋ ಹಾಸ್ಯಪ್ರಸಂಗವನ್ನೋ ಏನೂ ಇಲ್ಲದಿದ್ದರೆ ಮಳೆ-ಬೆಳೆ, ಮಕ್ಕಳು-ಮರಿಗಳ ಸಮಾಚಾರವನ್ನೋ ಹಂಚಿಕೊಳ್ಳು ತ್ತಾರೆ. ಅದುವರೆಗೆ ಕವಿದಿದ್ದ ಬಿಗುಮಾನದ ಕಾರ್ವೇಡ ಕರಗುತ್ತದೆ. ಉಭಯಕುಶ ಲೋಪರಿ ಸಾಂಪ್ರತ ಸಲೀಸು ವಾತಾವರಣ ಉಂಟಾಗುತ್ತದೆ. ಇದನ್ನೇ ಇಂಗ್ಲಿಷ್​ನಲ್ಲಿ Break the ice ಅಥವಾ Ice-breaker ಎನ್ನುವುದು. ಮೂಲತಃ ಇದು, ಹಡಗುಗಳು ಸಂಚರಿಸುವ ದಾರಿಯಲ್ಲಿ ಸಮುದ್ರ ಹೆಪ್ಪುಗಟ್ಟಿ ಮಂಜುಗಡ್ಡೆಯಾಗಿದ್ದರೆ ಚಿಕ್ಕ ದೋಣಿಯೊಂದನ್ನು ಬಳಸಿ ಮಂಜನ್ನು ಕಡಿದು ಕರಗಿಸಿ ದಾರಿ ಮಾಡಿಕೊಳ್ಳುವ ಪ್ರಕ್ರಿಯೆಯಿಂದಲೇ ಬಂದ ನುಡಿಗಟ್ಟು.

ಆದರೆ ಆಲಂಕಾರಿಕವಾಗಿ ಬಳಸುವಾಗ, ಸಾಮಾಜಿಕ ಸಂದಿಗ್ಧಗಳನ್ನು ಮೀರಿನಿಲ್ಲುವ, ಮೌನವೆಂಬ ಮಂಜುಗಡ್ಡೆಯನ್ನು ಮುರಿಯುವ ಆಶಯದ ಸನ್ನಿವೇಶಗಳಿಗೇ ಹೆಚ್ಚು ಸೂಕ್ತ. ವಿಲಿಯಂ ಶೇಕ್ಸ್​ಪಿಯರ್ 1592ರಷ್ಟು ಹಿಂದೆಯೇ ಬರೆದ ‘ಟೇಮಿಂಗ್ ಆಫ್ ದ ಶ್ರೂ’ ನಗೆನಾಟಕದಲ್ಲೂ ಈ ನುಡಿಗಟ್ಟಿನ ಬಳಕೆ, ಇದೇ ಅರ್ಥದಲ್ಲೇ, ಆಗಿದೆಯಂತೆ. ಆದ್ದರಿಂದ Break the ice ಅಂದರೆ ಕನ್ನಡದಲ್ಲಿ ‘ಮೌನ ಮುರಿ’ ಎನ್ನಬಹುದು. ಹಾಗೆ ಮೌನ ಮುರಿದು ಮೂಡಿಬರುವ ಮಾತು ಹಿತಮಿತದ್ದಾಗಿರಬೇಕು ಎನ್ನುವುದು ವಿದಿತ- ‘ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ’ ಎಂದು ಚನ್ನವೀರ ಕಣವಿಯವರು ಹೇಳಿದಂತೆ. ವ್ಯಾವಹಾರಿಕ ಸಭೆಗಳಲ್ಲಿ ಮೌನ ಮುರಿಯಲು ಹಾಸ್ಯ ಬಳಸಿದರೂ ಅದು ಹಾಸ್ಯಾಸ್ಪದ ಆಗಬಾರದು, ಕೀಳು ಅಭಿರುಚಿಯದಿರಬಾರದು ಎಂಬ ಎಚ್ಚರಿಕೆ ಬೇಕು.

ಮೌನ ಮುರಿ ಪದ ಸೂಚಿಸಿದವರು

ಭಾಸ್ಕರ ಕಶ್ಯಪ್, ಡಾ.ರಾಮಪ್ರಸಾದ್ ಕೊಣನೂರು, ಶಂಕರ ಯಂಡಿಗೇರಿ, ಉಷಾಕಿರಣ್ ಅತ್ತಾವರ, ವಿಶ್ವನಾಥ ಬೆಟ್ಟದಪುರ, ಸುಜಿತ್ ಸಂಡೂರು, ನಳಿನಿ ಭಟ್, ಪ್ರಫುಲ್ಲಾ ಕೆ, ಮನೋನ್ಮಣಿ ಕೆ.ವಿ, ಕೃಪಾ ಗೋಖಲೆ ಮತ್ತಿತರರು. ಸಂಸ್ಕೃತಭೂಯಿಷ್ಠವಾಗಿ ‘ಮೌನಭಂಜನ’ ಎನ್ನಬಹುದೆಂದವರು ಅಮೇಯ್ ಚಂದ್ರಶೇಖರ್.

ಉದಾಹರಣೆಗೆ: ಸಂದರ್ಶನ ಕೊಠಡಿಯ ಹೊರಗೆ ಕೂತ ಅಭ್ಯರ್ಥಿಗಳು. ಎಲ್ಲರ ಮುಖದಲ್ಲೂ ಕಾತರ; ಒಂದು ರೀತಿಯ ನೀರವತೆ. ಆಗ ಅಲ್ಲಿ ಬಂದ ಉತ್ಸಾಹಿ ಯುವ ಅಭ್ಯರ್ಥಿಯೊಬ್ಬ ತನ್ನ ಒಂದು ಚಾಟೂಕ್ತಿಯಿಂದ ಅಲ್ಲಿನ ಮೌನಭಂಜನಗೊಳಿಸಿ ವಾತಾವರಣವನ್ನು ತಿಳಿಗೊಳಿಸಿದನು. ಇನ್ನು, ‘ಮೈಚಳಿ ಬಿಡಿಸು’ ಎಂದು ಕೆಲವರು ಸೂಚಿಸಿದ್ದಾರಾದರೂ ಸಾಮಾನ್ಯವಾಗಿ ಆ ನುಡಿಗಟ್ಟನ್ನು ಭಯದಿಂದ ನಡುಗುವಂತೆ/ಬೆವರುವಂತೆ ಮಾಡು ಎಂಬರ್ಥದಲ್ಲಿ ಬಳಸುತ್ತೇವೆ. Break the ice ಇರುವುದು ಭಯ ಹುಟ್ಟಿಸುವುದಕ್ಕಲ್ಲ, ಭಯ ನಿವಾರಣೆಗೆ. ವಾತಾವರಣವನ್ನು ತಿಳಿಗೊಳಿಸುವುದಕ್ಕೆ. ಹಾಗಾಗಿ ‘ಮೌನ ಮುರಿ’ಯೇ ಹೆಚ್ಚು ಸೂಕ್ತ.

ಎಡಮುರಿ/ಬಲಮುರಿ ಎಂದು ಗಣೇಶನ ಸೊಂಡಿಲಿಗೆ ಅಥವಾ ಕಾವೇರಿ ನದಿಯ ತಿರುವಿಗೆ ಸಂಬಂಧಿಸಿದಂತೆ ಹೇಳುತ್ತೇವಲ್ಲ, ಅದೇರೀತಿ ಮೌನಮುರಿ ಎಂದು ನಾಮಪದವಾಗಿಯೂ ಬಳಸಬಹುದು. ಉದಾಹರಣೆಗೆ: ಬಾಬ್ಬಿ ಹಿಂದಿ ಚಿತ್ರದ ‘ಮುಝೆ ಕುಛ್ ಕೆಹನಾ ಹೈ... ಪೆಹಲೇ ತುಮ್ ಪೆಹಲೇ ತುಮ್..’ ಹಾಡಿನಲ್ಲಿ ಮೌನಮುರಿ ಯಾರಿಂದ ಎಂದು ಸ್ಪರ್ಧೆ; ಲಖನೌದಲ್ಲಿ ನವಾಬರ ಗಾಡಿಗಳು ‘ಪೆಹಲೇ ಆಪ್ ಪೆಹಲೇ ಆಪ್...’ ಎನ್ನುತ್ತ ಹೊರಡುತ್ತವೆಂಬ ಹೋಲಿಕೆ!

ಕಳೆದ ಸಲ ಕೇಳಿದ್ದ ಎರಡನೆಯ ಪದ Home delivery. ಈಗಿನ ಅಮೆಝಾನ್, ಫ್ಲಿಪ್​ಕಾರ್ಟ್, ಝೊಮ್ಯಾಟೊ, ಸ್ವಿಗ್ಗಿ, ಡನ್ಝೊ ಯುಗದಲ್ಲಿ, ವಿಶೇಷತಃ ಕೋವಿಡ್ ಕಾಲಘಟ್ಟದ ಬಳಿಕ, ನಗರ ಪ್ರದೇಶಗಳಲ್ಲಷ್ಟೇ ಅಲ್ಲ ಹಳ್ಳಿಗಳಿಗೂ ವಿಸ್ತರಿಸುತ್ತಿರುವ ಸೇವಾಸೌಲಭ್ಯ. ಒಂದಲ್ಲಒಂದು ಸಂದರ್ಭದಲ್ಲಿ ನಾವೆಲ್ಲರೂ ಇದರ ಫಲಾನುಭವಿಗಳೇ. ಎಷ್ಟು ಒಳಿತು ಮತ್ತು ಅನುಕೂಲಗಳು ಇವೆಯೋ ಅಷ್ಟೇ ಅಪಾಯಗಳೂ- ಸೋಮಾರಿ ಅಥವಾ ಮೈಗಳ್ಳರಾಗುವುದು, ಕೊಳ್ಳುಬಾಕರಾಗುವುದು, ಹೆಚ್ಚುಹೆಚ್ಚು ಅಪರಿಚಿತರಿಗೆ ನಮ್ಮ ಮನೆಯನ್ನು ಪ್ರಕಟಪಡಿಸುವುದು ಇತ್ಯಾದಿ- ಇವೆಯೆಂಬುದು ನಿಧಾನವಾಗಿ ಅರಿವಾಗುತ್ತದೆ. ಇಂಗ್ಲಿಷ್ ಭಾಷೆಗೆ delivery ಪದ ಬಂದಿದ್ದು ಫ್ರೆಂಚ್​ನಿಂದ. ಸಾಮಾನು-ಸರಂಜಾಮುಗಳನ್ನು ಹಸ್ತಾಂತರಿಸು ಎಂಬ ಮೂಲ ಅರ್ಥ. ಗ್ರಾಹಕರು ಅಂಗಡಿಗೆ ಹೋಗಿ ಅಲ್ಲಿ ಸರಕುಗಳನ್ನು ಪಡೆಯುವುದು ಒಂದು ವಿಧವಾದರೆ ಗ್ರಾಹಕರ ಮನೆಗೇ ಸರಕುಗಳನ್ನು ತಂದು ಒದಗಿಸುವುದು ಇನ್ನೊಂದು ವಿಧ.

Home deliveryಗೆ ಓದುಗರು ಸೂಚಿಸಿರುವ ಕನ್ನಡ ಪದಗಳು ಹೀಗಿವೆ: ಮನೆಗೆ ವಿತರಣೆ (ಜಿ.ಟಿ.ಜಯರಾಮಪ್ಪ, ರೇವತಿ ಜೋಶಿ, ಅರುಂಧತಿ ಸುರೇಶ, ರಾಜಕುಮಾರ ಹೊಟಗರ, ಸಂತೋಷ ಸಗರೆ, ಅಪೂರ್ವಾ ಗುಲ್ಬರ್ಗ ಮತ್ತಿತರರು), ಮನೆಗೊದಗಿಸು (ಸಣ್ಣಪ್ಪ ನಾಯಕ್), ಮನೆಗಿಳಿಸು (ಅಂಜನಾ ತುಮಕೂರು, ವಿದ್ಯಾಶಂಕರ ಶರ್ಮ), ಮನೆಮುಟ್ಟಿಸು (ರಾಜಶೇಖರ ಇಂಡಿ, ಜಿ.ನಾರಾಯಣ ರಾವ್, ಪಿ.ಜೆ.ರಾಘವೇಂದ್ರ, ನಿತ್ಯಾನಂದ ಬ್ರಹ್ಮಾವರ), ದ್ವಾರಸೇವೆ (ಶ್ರೀಲತಾ ಮೈಸೂರು), ಗೃಹಸೇವೆ (ಲಕ್ಷ್ಮೀಕಾಂತ ಪಾಟೀಲ, ಎಂ.ಕೆ.ರಮೇಶ್). ಗೃಹವಿತರಣೆ ಎಂದು ಕೆಲವರು ಸೂಚಿಸಿದ್ದಾರೆ, ಆದರೆ ಇದು ಮನೆಗೆ ವಿತರಣೆ ಅಂತನಿಸುವುದಕ್ಕಿಂತ ಸರ್ಕಾರದ ಯಾವುದೋ ಯೋಜನೆಯಡಿ ಮನೆಗಳದೇ ವಿತರಣೆಯೇನೋ ಎಂಬಂತಾಗುತ್ತದೆ.

ತುಸು ಭಿನ್ನವಾಗಿ ಆಲೋಚಿಸಿ ‘ಮನೆತಂಕ’ ಎಂಬ ಪದ ಸೂಚಿಸಿದ್ದಾರೆ ಅಮೇಯ್ ಚಂದ್ರಶೇಖರ್. ಇದು ಮನೆತನಕ ಎಂಬ ಪದದ ಸರಳ ರೂಪಾಂತರ, ಚೆನ್ನಾಗಿದೆ. ‘ಎಲೆ ಕೆಂಚಿ ತಾರೇ ನಮ್ ಮನೆತಂಕ ಬಾರೇ...’ ಜನಪದ ಗೀತೆಯನ್ನು ನೆನಪಿಸುವಂತೆಯೂ ಇದೆ. ಮುಂದೊಂದು ದಿನ ಹೋಟೆಲ್, ಅಂಗಡಿಗಳ ಎದುರು ಹೀಗೆ ಫಲಕ ಕಾಣಿಸಿಕೊಳ್ಳಬಹುದು. ‘ಮೂರು ಕಿ.ಮೀ ವ್ಯಾಪ್ತಿಯೊಳಗೆ ಉಚಿತ ಮನೆತಂಕ ಸೌಲಭ್ಯವಿದೆ’! ಚತುರವಾಣಿಗೆ ಚೈತನ್ಯ ತುಂಬಲು ವಿದ್ಯುತ್ತನ್ನು ಉಣಿಸುವ ಸಾಧನ Charger ಅನ್ನು ಕನ್ನಡದಲ್ಲಿ ಏನನ್ನೋಣ? ಎಂಬ ಮೂರನೆಯ ಪ್ರಶ್ನೆಗೆ ಸ್ವಾರಸ್ಯಕರ ಉತ್ತರಗಳು ಬಂದಿವೆ. ಅವುಗಳಲ್ಲಿ ಹೆಚ್ಚು ಸೂಕ್ತ ಎನಿಸುವಂಥದು ‘ತುಂಬುಕ’. ವಿದ್ಯುಚ್ಛಕ್ತಿಯನ್ನು ಮರು-ತುಂಬುವ ಸಾಧನವಾದ್ದರಿಂದ ತುಂಬುಕ ಸರಳವೂ ಅರ್ಥಪೂರ್ಣವೂ ಆಗಿದೆ. ಬಳಕೆಯೂ ಸುಲಭವೇ ಇದೆ: ‘ಐಫೋನ್​ನ ತುಂಬುಕವನ್ನು ಒಮ್ಮೆ ನಿಮ್ಮಿಂದ ಎರವಲು ಪಡೆಯಲೇ?’, ಶಿಬಿರಾರ್ಥಿಗಳು ಹಾಸಿಗೆ-ಹೊದಿಕೆ ತಟ್ಟೆ-ತಂಬಿಗೆಗಳನ್ನಷ್ಟೇ ಅಲ್ಲ, ತುಂಬುಕವನ್ನೂ ಮರೆಯದೇ ತರಬೇಕು’ ಇತ್ಯಾದಿ. ಈ ಪದವನ್ನು ಸೂಚಿಸಿದವರು: ಮೀನಾಕ್ಷಿ ಟಕ್ಕಳಕಿ, ಎನ್.ವಿ.ಶಂಕರ್, ರಾಜೇಂದ್ರ ಶಿವಬಸಪ್ಪ, ಸುಜಾತಾ ಕುಲಕರ್ಣಿ, ವಾಸುದೇವ ಭಟ್, ರಾಮಚಂದ್ರ ಬಡಗಬೆಟ್ಟು, ಸುಮನ್ ಬೆಂಗಳೂರು, ಎಚ್.ಎನ್.ವಾಸುದೇವ ರಾವ್, ವಿಲಾಸ್ ಹುದ್ದಾರ್ ಮತ್ತಿತರರು.

ಓದುಗರು ಸೂಚಿಸಿದ ಇತರ ಪದಗಳು

ಶಕ್ತಿಪೂರಕ (ಮಾ.ರಂ.ರಘುನಾಥ, ಶ್ರೀನಾಥ್ ಕೆ.ಟಿ, ವಸಂತ ಮರಾಠೆ, ತಾರಾಪ್ರಸಾದ ತೀರ್ಥಹಳ್ಳಿ, ಎಸ್.ಅರುಣ, ಜಿ.ಎಚ್.ಸಂಕಪ್ಪ ಮತ್ತಿತರರು), ಆವೇಶಕ (ಸಂಜೀವ ಜೋಶಿ, ಅನುಷಾ ಭಟ್, ಸಮರ್ಥ ಸದರಜೋಶಿ), ತ್ರಾಣಪೂರಕ (ಸತ್ಯ ಹರಿಹಳ್ಳಿ). ವಿದ್ಯುದುಣಕ (ವಿನಾಯಕ ಕಾಮತ್). ತುಸು ಭಿನ್ನವಾಗಿ ಆಲೋಚಿಸಿ ‘ಮಿನ್ನಗಿಂಡಿ’ ಎಂಬ ಪದ ಸೂಚಿಸಿದ್ದಾರೆ ಉದಯ ಶಾಸ್ತ್ರಿ ಆರಗ. ಅವರ ತರ್ಕವೇನೆಂದರೆ, ನಿಜವಾದ ಗಿಂಡಿ (ನೀರನ್ನು ಶೇಖರಿಸಿಡುವ, ಅದರಿಂದಲೇ ನೀರು ಹರಿಯುವಂತೆ ಮಾಡಬಹುದಾದ, ವಿನಿಯೋಗಕ್ಕೆ ಬಳಸಬಹುದಾದ, ಕೊಂಬಿನಂತಹ ಕಿರಿದಾದ ಬಾಯಿಯುಳ್ಳ ಚಿಕ್ಕ ಪಾತ್ರೆ) ಈಗ ಕಣ್ಮರೆಯಾಗುತ್ತಿದೆ. ಹಾಗಾಗಿ ಗಿಂಡಿಯನ್ನು ಗಿಂಡಿಯಾಗಿ ಇನ್ನು ಬಳಸುತ್ತೇವೋ ಇಲ್ಲವೋ, ಈ ರೀತಿಯಾದರೂ ರೀ-ಚಾರ್ಜ್ ಮಾಡಿ ಉಳಿಸಿಕೊಳ್ಳುವ ಆಸೆ. ‘ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿದಂತೆ ಮಿನ್ನಗಿಂಡಿಯ ಹಿಡಿದು ಕೈಯೊಳು ಚತುರವಾಣಿಯ ಬೆಳಗಿಸಿ’!

ಕನ್ನಡ ಪದ ಕಟ್ಟುವ ಮತ್ತು ಹುಡುಕುವ ನೆಪದಲ್ಲಿ ಕನ್ನಡಾಭಿಮಾನದ ಹತ್ತುಹಲವು ಸಾಧ್ಯತೆಗಳನ್ನು ತೋರುತ್ತಿರುವ ಓದುಗಮಿತ್ರರೆಲ್ಲರಿಗೂ ಅಭಿನಂದನೆಗಳು. ಅಂಕಣದ ಬಗೆಗಿನ ಮೆಚ್ಚುಗೆಯ ಮತ್ತು ಪ್ರೋತ್ಸಾಹದ ನುಡಿಗಳಿಗಾಗಿ ಧನ್ಯವಾದಗಳು. ಇಂಗ್ಲಿಷ್ ಪದಗಳಿಗೆ ನಿಘಂಟು ಸೂಚಿಸುವ ಕನ್ನಡ ಅರ್ಥವಿವರಣೆಯನ್ನು ಬರೆದುಕಳುಹಿಸುವುದಕ್ಕಿಂತ, ನೀವು ಸೂಚಿಸುವ ಕನ್ನಡ ಪದವನ್ನು ಸಂದರ್ಭಕ್ಕೆ ಸರಿಯಾಗಿ ಕನ್ನಡ ಬರವಣಿಗೆಯಲ್ಲಿ, ಸಂಭಾಷಣೆಯಲ್ಲಿ ಅತ್ಯಂತ ಸಹಜವೆಂಬಂತೆ ಬಳಸುವುದು ಸಾಧ್ಯವಿದೆಯೇ ಎಂದು ನೋಡಿಕೊಂಡು, ಸಾಧ್ಯವಾದರೆ ಸ್ವಂತ ವಾಕ್ಯದಲ್ಲಿ ಉದಾಹರಣೆಯಂತೆ ಬಳಸಿ ತೋರಿಸಿದರೆ ಈ ಚಟುವಟಿಕೆಯನ್ನು ನಾವೆಲ್ಲ ಸೇರಿ ಇನ್ನಷ್ಟು ಅರ್ಥಪೂರ್ಣವಾಗಿಸಬಹುದು.

ಈ ವಾರದ ಮೂರು ಪದಗಳು

1. Headlight: ರಾತ್ರಿ ಹೊತ್ತು ವಾಹನ ಚಲಾಯಿಸುವಾಗ ವಾಹನದ ಕಣ್ಣುಗಳಂತೆ ಇರುವ ದೀಪ ಜೋಡಿಯೇ ಬೆಳಕಿನ ಮೂಲ. ಕನ್ನಡದಲ್ಲಿ ಇದಕ್ಕೆ ಅಷ್ಟೇ ಪ್ರಖರವಾದ ಪದ ಇಲ್ಲವೇ?

2. SIM Card: ಚತುರವಾಣಿಯಲ್ಲಿ ಬಳಕೆಯಾಗುವ Subscriber Identity .ಇದಕ್ಕೊಂದು ಕನ್ನಡ ಪದ ಹುಡುಕೋಣ!

3. T-Shirt: ಕನ್ನಡದಲ್ಲಿ ಇಂಗ್ಲಿಷ್​ನ ಖ ಯನ್ನು ಹೋಲುವ ಅಕ್ಷರವಿಲ್ಲ ನಿಜ, ಆದರೆ ಅಂಗಿಯಂತೆಯೇ ಇರುವ ಅಂಗಿಯಲ್ಲದ ಈ ಅಂಗಿಗೆ ನಾವು ಕನ್ನಡದ್ದೇ ಆದ ಒಂದು ಅಂಗಿಯನ್ನು ತೊಡಿಸಬಹುದಲ್ಲ!

ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್​ಆಪ್ ಸಂಖ್ಯೆ: +12404010945