ಸಾಂಖ್ಯಯೋಗದ ಭಾಷೆಯಲ್ಲಿ ಪ್ರಧಾನ್. ಭೌತಶಾಸ್ತ್ರದ ಭಾಷೆಯಲ್ಲಿ ಶಕ್ತಿ (energy) ಇನ್ನೂ ಸರಿಯಾಗಿ ಹೇಳಬೇಕೆಂದರೆ ಚಲನ ಶಕ್ತಿ (Kinetic energy). ವಿಶ್ವದ ಏಕಮೇವ ಸತ್ಯ, ಚರಮಸತ್ಯ ಅಥವಾ ಪರಮಸತ್ಯವನ್ನು ವೇದಾಂತ ಕರೆಯುವುದು ‘ಬ್ರಹ್ಮ’ ಎಂದು. ಇದು ತ್ರಿಮೂರ್ತಿಗಳಲ್ಲಿ ಬರುವ ಬ್ರಹ್ಮ ಅಲ್ಲ. ಅವನು ಚತುಮುಖ ಬ್ರಹ್ಮ. ವೇದಾಂತದ ಬ್ರಹ್ಮನು ಚತುಮುಖ ಬ್ರಹ್ಮನಿಗಿಂತ ಭಿನ್ನ ಎಂದು ತೋರಿಸುವುದಕ್ಕಾಗಿ ಅವನನ್ನು ‘ಪರಬ್ರಹ್ಮ’ ಎಂದು ಕರೆಯಲಾಗುತ್ತದೆ. ಅದೇ ಸೂಕ್ತ. ಈ ಬ್ರಹ್ಮ, ಪರಿಪೂರ್ಣ, ಅದ್ಭುತ, ಅಗ್ರಾಹ್ಯ ಮತ್ತು ಏಕಮೇವ ಅದ್ವಿತೀಯ. ಆದ್ದರಿಂದ ಅವನಲ್ಲಿ ಸೃಷ್ಟಿಯೇ ಮುಂತಾದ ಕಾರ್ಯಗಳು ನಡೆಯಲಾರವು. ಅವನಿಂದ ಕಾರ್ಯ ಮಾಡಿಸಬೇಕಾದರೆ ಅವನದ್ದೇ ಶಕ್ತಿಯಾದ, ಅವನಲ್ಲೇ ಆಶ್ರಯವನ್ನು ಪಡೆದುಕೊಂಡ ಮಾಯೆ ಜಾಗೃತಳಾಗಬೇಕು.
ಆಗ ಮಾತ್ರ ಅವನು ಸೃಷ್ಟಿ, ಸ್ಥಿತಿ, ಲಯ ಕಾರ್ಯಗಳನ್ನು ಮಾಡಬಲ್ಲ ಪರಿಪೂರ್ಣತೆಯನ್ನು ಕ್ರಿಯಾಶೀಲವನ್ನಾಗಿಸುವುದು ಅಸಾಧ್ಯವಾದ ಮಾತು. ಅಸಾಧ್ಯವಾದದ್ದನ್ನೂ ಸಾಧ್ಯವಾಗಿಸುವ ಸಾಮರ್ಥ್ಯವುಳ್ಳವಳೇ ಮಾಯೆ ಅಥವಾ ದೇವಿ. ಆದ್ದರಿಂದ ಅವಳಿಗೆ ‘ಅಘಟಿತ ಘಟನಾ ಪಟೀಯಸಿ’ ಎಂದು ಸ್ತುತಿಸಿದ್ದಾರೆ. ಘಟಿಸಲಾರದ್ದನ್ನು ಕೂಡ ಘಟಿಸುವಂತೆ ಮಾಡಬಲ್ಲವಳು ಎಂದು ಅರ್ಥ. ಆದ್ದರಿಂದಲೇ ನಿರೀಕ್ಷಿಸದಿದ್ದದ್ದು ನಡೆದುಬಿಟ್ಟರೆ ‘ಏನೋ ಮಾಯಾಮಂತ್ರ ಮಾಡಿದ’ ಎಂದೆನ್ನುತ್ತಾರೆ ಈಗಲೂ ಆಡುಭಾಷೆಯಲ್ಲಿ! ಮಾಯೆ ಎನ್ನುವುದರ ಬಗ್ಗೆ ಯಾವ ರೀತಿಯ ವ್ಯಾಖ್ಯಾನವನ್ನು ಮಾಡುವುದೂ ಕಷ್ಟ. ಅದೊಂದು ಅದ್ಭುತ ಪರಮಾತ್ಮ ಶಕ್ತಿ. ಪ್ರತಿಯೊಬ್ಬ ಮನುಷ್ಯನನ್ನೂ ಇದು ಆವರಿಸಿಕೊಂಡಿದೆ. ಇಡೀ ಪ್ರಜ್ಞೆಯನ್ನು ಇದು ಆವರಿಸಿಕೊಂಡಿದೆ. ಅದರ ಶಕ್ತಿಯಿಂದಲೇ ಎಲ್ಲೆಲ್ಲೂ ಓತಪೋ›ತವಾಗಿರುವ ಪರಮಾತ್ಮ ನಮಗೆ ಕಾಣುವುದಿಲ್ಲ. ಅದರ ಇರುವಿಕೆಯನ್ನೇ ಸಾಧಿಸಲಾಗದ ಪ್ರಪಂಚ ನಮ್ಮ ಕಣ್ಣಿಗೆ ರಾಚುವಂತೆ ಕಾಣುತ್ತದೆ.
ಹಾಗೆಯೇ ನಮ್ಮೊಳಗೆ ಓತಪೋ›ತವಾಗಿರುವ ಆತ್ಮ ನಮ್ಮ ಗಮನಕ್ಕೇ ಬಾರದಿದ್ದರೂ ನಮ್ಮ ಬಗ್ಗೆ ನಾವು ಕಲ್ಪಿಸಿಕೊಂಡಿರುವ ‘ನಾನು’ ಅಥವಾ ‘ಅಹಂ’ ರಾರಾಜಿಸುತ್ತದೆ. ಈ ಮಾಯೆಯ ಬಗ್ಗೆ ಋಗ್ವೇದದಲ್ಲಿಯೇ ಪ್ರಸ್ತಾಪ ಬಂದಿದ್ದರೂ ಉಪನಿಷತ್ ಗೀತೆಗಳಲ್ಲಿ ಪ್ರಸ್ತಾಪವಿದ್ದರೂ ಅದರ ವಿಸõತ ವಿವರಣೆಯನ್ನು ನೀಡಿದವರು ಶ್ರೀ ಶಂಕರಾಚಾರ್ಯರು. ನಿರ್ಗಣ, ನಿರಾಕಾರವಾದ ಪೂರ್ಣಸತ್ಯ ಸಗುಣ, ಸಾಕಾರ ಜಗತ್ತಾಗಿ ಹೇಗೆ ಪರಿವರ್ತಿತವಾಯಿತು ಎಂಬ ಪ್ರಶ್ನೆಗೆ ರ್ತಾಕ ಉತ್ತರ ಸಿಗುವುದು ಮಾಯಾಸಿದ್ಧಾಂತದಲ್ಲಿ ಮಾತ್ರ. ಶಂಕರರ ಮಾಯೆಯನ್ನು ಕುರಿತ ‘ಮಹಾದ್ಭುತ ಅನಿರ್ವಚನೀಯ ರೂಪಾ’ ಎಂಬ ವ್ಯಾಖ್ಯಾನವೇ ಆಧುನಿಕ ಭೌತ ವಿಜ್ಞಾನಿ
ಹೈಸನ್ಬರ್ಗ್ನ uncertainty principle ಆಗಿ ನಿರೂಪಿತಗೊಂಡಿರುವುದು. ಕ್ವಾಂಟಂ ವಿಜ್ಞಾನಿ ಜಗತ್ತಿನ ಮೂಲವಸ್ತು ಅರ್ಥಾತ್ ಯಾವ ವಸ್ತುವಿನಿಂದ ಈ ಜಗತ್ತು ಆಗಿದೆ ಎನ್ನುವುದನ್ನು ಕುರಿತು ಹೇಳುವ ಸಿದ್ಧಾಂತ ಶಂಕರರ ಮಾಯಾಸಿದ್ಧಾಂತವೇ ಆಂಗ್ಲ ಭಾಷೆಗೆ ತರ್ಜುಮೆಗೊಂಡಿದೆಯೆನೋ ಎನ್ನುವಷ್ಟು ಸಾಮಾನ್ಯ ಅಂಶಗಳನ್ನು ಹೊಂದಿದೆ. ಆದ್ದರಿಂದಲೇ ವೇದಾಂತವನ್ನು ಕುರಿತು ಸ್ವಾಮಿ ವಿವೇಕಾನಂದರು, ಅರವಿಂದರು, ಟ್ಯಾಗೋರ್ ಹಾಗೂ ಪಾಶ್ಚಾತ್ಯ ಜಗತ್ತಿನ ಸುಪ್ರಸಿದ್ಧ ವಿದ್ವಾಂಸರು ಅಷ್ಟೊಂದು ಪ್ರಶಂಸನೀಯ ಮಾತುಗಳನ್ನಾಡಿರುವುದು, ಅದೊಂದು ಅದ್ಭುತ ಸತ್ಯಶೋಧಕ ಸಿದ್ಧಾಂತ ಎಂದು ಹಾಡಿ ಹೊಗಳಿರುವುದು. ಈ ಮಾಯೆಯನ್ನು ಅವಲಂಬಿಸಿಯೇ ಪರಬ್ರಹ್ಮ ನಾಮ, ರೂಪಗಳನ್ನು ಹೊತ್ತ ಈಶ್ವರನಾಗುತ್ತಾನೆ ಹಾಗೂ ಈ ಈಶ್ವರನೇ ಮತ್ತೆ ಮಾಯೆಯನ್ನು ಅವಲಂಬಿಸಿ ಅವತಾರ ಪುರುಷನಾಗುವುದು. ಕಪಿಲ ಮಹರ್ಷಿ ವೇದಾಂತದ ಬ್ರಹ್ಮವನ್ನೇ ‘ಪುರುಷ’ ಎಂದಿರುವುದು. ನಮ್ಮೊಳಗಿರುವ ಸ್ಥಳೀಯ ಬ್ರಹ್ಮ ‘ಆತ್ಮ’ನೂ ಪುರುಷನೇ. ಪುರುಷ ಪ್ರಕೃತಿಯ ಸಹಕಾರ ಸೃಷ್ಟಿಗೆ ಕಾರಣವಾದರೆ ಅವರ ಪ್ರತ್ಯೇಕತೆ ಪುರುಷನ ಮುಕ್ತಿಗೆ ಕಾರಣವಾಗುತ್ತದೆ ಎನ್ನುತ್ತಾನೆ ಪತಂಜಲಿ.
ಇವೆಲ್ಲ ಒಂದೆರೆಡು ಸಲ ಓದಿದರೆ ಅಥವಾ ಕೇಳಿದರೆ ತಿಳಿಯುವಂಥದ್ದಲ್ಲ. ಮತ್ತೆ ಮತ್ತೆ ಮನನ ಮಾಡಿದಾಗ ಮಾತ್ರ ಅರಿವಿಗೆ ಬರುತ್ತದೆ. ‘ಶ್ರವಣಂ, ಮನನಂ, ನಿಧಿಧ್ಯಾಸನಂ’ ಎಂಬ ಸ್ಪಷ್ಟ ಸೂತ್ರವನ್ನೇ ವೇದಾಂತಿಗಳು ನೀಡಿದ್ದಾರೆ. ಮೊದಲು ಕೇಳಬೇಕು ನಂತರ ಮತ್ತೆ ಮತ್ತೆ ಮನನ ಮಾಡಬೇಕು ನಂತರ ಕ್ರಮೇಣ ಅನುಷ್ಠಾನಕ್ಕೆ ತರಬೇಕು ಎಂದು.
ದೇವಿಯ ಆರಾಧನೆಯಿಂದ, ಅವಳ ಕೃಪೆಯಿಂದ, ಅಸಾಧ್ಯವಾದದ್ದೂ ಸಾಧ್ಯವಾಗುವುದರಿಂದಲೇ ಜಗತ್ತಿನಾದ್ಯಂತ ಅವಳ ಆರಾಧನೆ ನಡೆಯುತ್ತದೆ. ಬೇರೆ ಬೇರೆ ರೂಪಗಳನ್ನು ಅವಳೂ ಪಡೆದುಕೊಂಡಿದ್ದಾಳೆ. ಅವಳ ಆರಾಧನೆಯೂ ಪಡೆದುಕೊಂಡಿದೆ. ಅಲ್ಲಿಗೆಲ್ಲ ಈ ಸಿದ್ಧಾಂತ ಹಾಗೂ ಆರಾಧನಾ ವಿಧಾನ ಭಾರತದಿಂದಲೇ ಹೋಗಿರಬೇಕು. ‘ಜಗತ್ತಿನ ಯಾವುದೇ ಭಾಗದಲ್ಲಿ ಕಂಡು ಬರುವ ಯಾವುದೇ ಧಾರ್ವಿುಕ ಭಾವನೆ ಅಲ್ಲಿಗೆ ತಲುಪಿದ್ದು ಭಾರತದಿಂದ’ ಎನ್ನುವ ಸ್ವಾಮಿ ವಿವೇಕಾನಂದರ ಮಾತಿಗೆ ಸಾವಿರ ಸಮರ್ಥನೆಗಳನ್ನು ಕೊಡಬಹುದು. ಜಗತ್ತನ್ನೇ ವಿಧ್ವಂಸಗೊಳಿಸಿದ ಚಂಗೇಸ್ ಖಾನ್, ಅವನು ಹೆಸರಿನಿಂದ ಮುಸಲ್ಮಾನನಂತೆ ಕಂಡುಬಂದರೂ, ಆರಾಧಿಸುತ್ತಿದ್ದುದು ದೇವಿಯನ್ನು. ಅವನ ದೇವತೆ ‘ಶ್ಯಾಮಾ’ ಅವನ ಧರ್ಮದ ಹೆಸರೂ ‘ಶ್ಯಾಮಾಯಿಸಂ’ ಶ್ಯಾಮಾ ಎನ್ನುವುದು ದೇವಿಯ ಸುಪ್ರಸಿದ್ಧ ಹೆಸರೇ.
ಇದರ ಅನುಯಾಯಿಗಳು ನೀಲಿಯಾಕಾಶದ ಕಡೆಗೆ ನೋಡಿ ಪ್ರಾರ್ಥಿಸುವುದು ಅವರ ಸಾಧನಾ ವೈಖರಿ. ಕೇವಲ ಅವನಷ್ಟೇ ಅಲ್ಲ. ಅವನ ಇಡೀ ಟಾರ್ಟರ್ ಜನಾಂಗವೇ ಇದನ್ನು ಅಳವಡಿಸಿಕೊಂಡಿರುವುದು. ಟಿಬೇಟಿಯನ್ನರು ಬೌದ್ಧ ಧರ್ಮವನ್ನು ಅಪ್ಪಿಕೊಂಡರೂ ತಮ್ಮ ಹೃದಯಗಳನ್ನು ಅನಾದಿ ಕಾಲದಿಂದ ಆಳುತ್ತಿದ್ದ ಅವಲೋಕಿತೇಶ್ವರ (ಶಿವ) ಮತ್ತು ತಾರಾದೇವಿ (ದೇವಿ)ಗಳ ಪ್ರಭಾವಗಳಿಂದ ತಪ್ಪಿಸಿಕೊಳ್ಳಲಾಗಲೇ ಇಲ್ಲ. ನನ್ನ ಯುರೋಪಿಯನ್ ಪ್ರವಾಸದಲ್ಲಿ ಸ್ವಿಟ್ಜರ್ಲೆಂಡ್ ಮತ್ತಿತರ ಸುತ್ತುಮುತ್ತಲ ಪ್ರದೇಶದಲ್ಲಿ ದಕ್ಷಿಣ ಭಾರತದ ಸುಪ್ರಸಿದ್ಧ ‘ಮಾರಿ’ಯ ದೇವಸ್ಥಾನಗಳನ್ನು ನೋಡಿದ್ದೆ. ಕೇಳಿದಾಗ ಸ್ಥಳೀಯರು ಹೇಳಿದ್ದು ಅವಳು ಕಪ್ಪು ಮೇರಿ (Black Mary) ಎಂದು. ನಮ್ಮ ಮಾರಿಯೇ ಅಲ್ಲಿ ‘ಮೇರಿ’ ಆಗಿದ್ದಾಳಷ್ಟೇ! ಕ್ರಿಸ್ತನ ತಾಯಿ ಮೇರಿ ಎಂದೂ ಕಪ್ಪು ಬಣ್ಣದವಳಲ್ಲ ಅವಳು ಶ್ವೇತವರ್ಣೀಯಳು! ಜಪಾನೀಯರೂ ದೇವಿಯನ್ನು ‘ಕಾಮಿ’ ಎಂಬ ಹೆಸರಿನಿಂದ ಕರೆಯುತ್ತಾರೆ ಮತ್ತು ಹೃತ್ಪೂರ್ವಕವಾಗಿ ಆರಾಧಿಸುತ್ತಾರೆ. ಕ್ರಿಶ್ಚಿಯನ್ ಧರ್ಮದಲ್ಲೂ ರೋಮನ್ ಕ್ಯಾಥೋಲಿಕ್ ಪಂಥದಲ್ಲಿ ಕ್ರಿಸ್ತನ ತಾಯಿಗೆ ಕ್ರಿಸ್ತನಿಗಿಂತ ಒಂದು ತೂಕ ಹೆಚ್ಚೇ ಗೌರವ ಸಲ್ಲಿಸುತ್ತಾರೆ. ಕನ್ಯಾ ಮೇರಿ (Virgin Mary) ಹೆಸರಿನಲ್ಲಿ ಅವಳ ಆರಾಧನೆ ನಡೆಯುತ್ತದೆ. ‘ಅವೇ ಮಾರಿಯಾ’ ಎಂಬ ಮಂತ್ರವನ್ನೂ ಜಪಿಸುತ್ತಾರೆ. ಭಾರತದಲ್ಲಿ ದೇವಿ ಆರಾಧನೆ ಪ್ರತಿ ಗ್ರಾಮ ಮತ್ತು ಪ್ರತಿ ಮನೆಯಲ್ಲೂ ನಡೆಯುತ್ತದೆ ಎಂದು ನಾನು ಹೇಳಬೇಕಾದ ಅವಶ್ಯಕತೆಯೇನಿದೆ.
ಮನೆ-ಮನೆಯಲ್ಲೂ ನಮ್ಮನ್ನು ಹೊತ್ತು, ಹೆತ್ತು ಪಾಲಿಸುವ ‘ತಾಯಿ’ ದೇವಿಯ ಸ್ವರೂಪವೇ! ಅಷ್ಟೇ ಏಕೆ ಎಲ್ಲೆಲ್ಲಿ ‘ಸ್ತ್ರೀ’ ರೂಪ ಇದೆಯೋ ಅದೆಲ್ಲ ದೇವಿಯ ವ್ಯಕ್ತರೂಪವೇ! ಉತ್ತರ ಭಾರತದಲ್ಲಿ ಪ್ರತಿ ಹುಡುಗಿಯನ್ನೂ ಸಂಬೋಧಿಸುವುದು ‘ದೇವಿ’ ಅಂತಲೇ. ಸ್ತ್ರೀ, ಸಹಜವಾಗಿಯೇ ವಾತ್ಸಲ್ಯಮಯಿ; ಮೃದು ಹೃದಯದವಳು. ಅವಳ ವಾತ್ಸಲ್ಯ ಭಾವವನ್ನು ಜಾಗೃತಗೊಳಿಸಿ ಅವಳಿಂದ ಮಮತೆ ಅಕ್ಕರೆಗಳನ್ನು ಪಡೆದುಕೊಳ್ಳುವುದು ಬಹಳ ಸರಳ. ಮಕ್ಕಳ ವಿಷಯದಲ್ಲಂತೂ ಅವಳಿಗೆ ‘ಕುರುಡುಪ್ರೇಮ’. ಕಾಶಿಯ ಅನ್ನಪೂರ್ಣೆಯ ಮುಂದೆ ನಿಂತು ಹಸುಳೆಯೊಬ್ಬ ಸಹಜ ಮಾತೃಪ್ರೇಮದಿಂದ ತನ್ನ ತಾಯಿಯನ್ನು ಸ್ತುತಿಸುವಂತೆ ಶ್ರೀ ಶಂಕರರು ಆಡಿದ ಮಾತು ಚರಿತ್ರಾರ್ಹ. ‘ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ’ ಎನ್ನುವುದೇ ಅದು. ಅರ್ಥಾತ್ ‘ಅಮ್ಮ ಜಗತ್ತಿನಲ್ಲಿ ಕೆಟ್ಟ ಮಗ ಇರ್ತಾನೆ ; ಕೆಟ್ಟ ತಾಯಿ ಎಂದೂ ಇರುವುದಿಲ್ಲ. ಆದ್ದರಿಂದ ನನ್ನ ದೋಷಗಳನ್ನೆಣಿಸದೆ ನನಗೆ ಕೃಪೆ ಮಾಡು’. ಯಾವುದರ ಕೃಪೆ? ಜ್ಞಾನ, ವೈರಾಗ್ಯಗಳನ್ನು ಕೊಡುವುದರ ಕೃಪೆ. ಆಧುನಿಕ ಯುಗದಲ್ಲಿ ಶ್ರೀರಾಮಕೃಷ್ಣರ ದೇವಿಯನ್ನು ಕುರಿತ ಭಕ್ತಿ, ಭಾವ, ಸಂಬಂಧ, ಪ್ರೇಮ, ವ್ಯಾಕುಲತೆ ಇವುಗಳನ್ನು ಕುರಿತು ಬರೆಯುವುದಕ್ಕೂ ಮನುಷ್ಯ ಮಾತ್ರನಿಗೆ ಸಾಧ್ಯವಿಲ್ಲದ ಮಾತು. ತೆರೆದ ಕಣ್ಣಿನಿಂದಲೇ ಪ್ರತಿಕ್ಷಣವೆಂಬಂತೆ ದೇವಿಯೊಡನೆ ಒಡನಾಟವಿತ್ತು ಅವರಿಗೆ. ಅವರ ಅಸ್ತಿತ್ವದ ಸಾರವೇ ‘ದೇವಿ’ ಆಗಿದ್ದಳು. ತಾವಷ್ಟೇ ಅಲ್ಲ ತಮ್ಮ ಪ್ರಿಯ ಶಿಷ್ಯ ನರೇಂದ್ರನಿಗೂ ದೇವಾಲಯದಲ್ಲಿ ಪ್ರತಿನಿತ್ಯ ತಾವು ಪೂಜಿಸುವುದು ಚಿನ್ಮಯಿ ದೇವಿಯನ್ನೇ- ಜೀವಂತ ದೇವಿಯನ್ನೇ- ಎಂದು ತೋರಿಸಿ ಪ್ರತಿಮೆಯಲ್ಲಿ ಅವಳ ಅಸ್ತಿತ್ವವನ್ನು ಎಂದೂ ಶಂಕಿಸಿದಂತೆ ಮಾಡಿದರು.
ತಂತ್ರವೆಂದರೆ ಮೂಗು ಮುರಿಯುವ ಅಂದಿನ ದಿನಗಳಲ್ಲಿ ತಾಂತ್ರಿಕ ಸತ್ಯಗಳನ್ನು ಅರವತ್ನಾಲ್ಕು ರೀತಿಯಲ್ಲಿ ಸಾಕ್ಷಾತ್ಕರಿಸಿಕೊಂಡು ಭಾರತೀಯ ಸಾಧನಾ ಪದ್ಧತಿಗಳೆಲ್ಲವೂ ನೂರಕ್ಕೆ ನೂರು ಶಾಶ್ವತ ಸತ್ಯಗಳೇ. ಸಾಧಕ ಅರ್ಹನಾಗಿರಬೇಕಷ್ಟೇ ಎಂಬುದನ್ನು ಸಾಬೀತು ಪಡಿಸಿದರು. ಇಡೀ ಪೂರ್ವ ಭಾರತ ಶಾಕ್ತ ಪಂಥೀಯರು. ಅದರ ಕೇಂದ್ರ ಕೊಲ್ಕತ್ತಾ, ಅದರ ನಿಜವಾದ ಹೆಸರು ‘ಕಾಳೀ ಘಟ್ಟ’ ಎಂತಲೇ ಬಂಗಾಳಿಗಳಿಗೆ ಕಾಳಿ ಅಥವಾ ದುರ್ಗಾ ತಮ್ಮ ಮನೆಯ ಮಗಳು. ಶಿವ ಅವರ ಅಳಿಯ. ನವರಾತ್ರಿಯಲ್ಲಿ ದೇವಿ ಪ್ರತಿಮೆಯನ್ನು ಅವರು ಮನೆಗೆ ತರುವ ರೀತಿ ಮತ್ತು ವಿಜಯದಶಮಿಯಂದು ವಿಸರ್ಜಿಸುವ ರೀತಿ ಮದುವೆಯಾಗಿ ಹೋದ ಮಗಳು ತವರುಮನೆಗೆ ಬಂದು ಮತ್ತೆ ಹಿಂತಿರುಗುವ ಸಂದರ್ಭದಂತೆ ಕಣ್ಣಿಗೆ ರಾಚುತ್ತದೆ.
ಆ ಒಂಬತ್ತು ದಿನಗಳ ಅವರ ಸಂಭ್ರಮ ಹೇಳತೀರದು. ಬಂಗಾಳದ ಸೇನ್ ಮನೆತನ ಮತ್ತು ಕರ್ನಾಟಕಕ್ಕೆ ಬಿಡಿಸಲಾಗದ ನಂಟಿರುವುದರಿಂದಲೋ ಏನೋ ಕರ್ನಾಟಕಕ್ಕೂ ಈ ಸಂಸ್ಕೃತಿ ಬಂದಿದೆ ಎಂದು ಕೆಲವರು ಹೇಳುವುದಾದರೂ ದುರ್ಗಾಸಪ್ತಶತಿಯಲ್ಲಿ ಬರುವ ಮಹಿಷ ಮತ್ತು ಸುರಥ ಕರ್ನಾಟಕದವರಾದ್ದರಿಂದ ಕರ್ನಾಟಕ ಅದರಲ್ಲೂ ಶೃಂಗೇರಿಯಲ್ಲಿ ‘ಶಾರದಾಂಬ’ ಪ್ರತಿಷ್ಠಿತಳಾಗಿ ತನ್ಮೂಲಕ ನವರಾತ್ರಿಯಲ್ಲಿ ಇನ್ನಷ್ಟು ಪ್ರಾಮುಖ್ಯತೆಯನ್ನು ಗಳಿಸಿ ವಿಜಯನಗರದ ನವರಾತ್ರಿ ವೈಭವ ಕರ್ನಾಟಕ ಸಿಂಹಾಸನಾಧೀಶ ವಿದ್ಯಾರಣ್ಯರಿಂದ ಅಲ್ಲಿಗೆ ಒಯ್ಯಲ್ಪಟ್ಟು ಅಲ್ಲಿಯ ಸಾಮಂತರೇ ಆಗಿದ್ದ ಮೈಸೂರು ಒಡೆಯರು ಅದನ್ನು ಅಳವಡಿಸಿಕೊಂಡಿರುವುದು ಇನ್ನೂ ರ್ತಾಕ ವಿವರಣೆ ಎನ್ನಿಸುತ್ತದೆ ನನಗೆ. ಅದು ಹೇಗಾದರೂ ಇರಲಿ ದೇವಿ ಆರಾಧನೆ ಮನುಷ್ಯನಿಗೆ ಪರಮ ಶ್ರೇಯಸ್ಕರ.
ಅದ್ವೈತ ಮಠಗಳಲ್ಲಿ ಅದು ಶ್ರೀಚಕ್ರದ ಆರಾಧನೆಯ ರೂಪದಲ್ಲಿದ್ದರೆ ದುರ್ಗಾಸಪ್ತಶತಿ ಪಾರಾಯಣದ ವಿವಿಧ ರೂಪ ಮತ್ತು ಲಲಿತಾಸಹಸ್ರನಾಮದ ಪಾರಾಯಣ ಇಡೀ ಭಾರತವನ್ನು ವ್ಯಾಪಿಸಿಕೊಂಡಿರುವುದಷ್ಟೇ ಅಲ್ಲ ಭಾರತದಾಚೆಗೂ, ಮೂಲ ಭಾರತೀಯರಲ್ಲದ ಯುರೋಪ್ ಅಮೆರಿಕಗಳನ್ನೂ ವ್ಯಾಪಿಸಿಕೊಂಡಿದೆ. ಇಟಲಿಯ ಟ್ಯೂರಿನ್ ನಗರದ ಸಮೀಪದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀವಿದ್ಯಾ ಆಶ್ರಮದ ಸಾಧಕರು ಪ್ರತಿನಿತ್ಯ ಪ್ರಾತಃಕಾಲ ಮತ್ತು ಸಾಯಂಕಾಲದಲ್ಲಿ ಲಲಿತಾ ಸಹಸ್ರನಾಮವನ್ನು ಶ್ರದ್ಧಾ, ಭಕ್ತಿಯಿಂದ ಪಠಿಸುತ್ತ ಬಂದಿರುವುದನ್ನು ನಾನೇ ಅಲ್ಲಿದ್ದಾಗ ನೋಡಿದ್ದೇನೆ. ‘ನಾಮ ಪಾರಾಯಣ ಪ್ರೀತಾ’ ಎಂತಲೇ ಹಯಗ್ರೀವರು ಅವಳನ್ನು ಅಗಸ್ತ್ಯಗೆ ಪರಿಚಯಿಸಿದ್ದಾರೆ.
ಜಗನ್ಮಾತೆಯ ಜಗದೆಡೆಗಿನ ಪ್ರೇಮಪೂರಿತ ಹಾಗೂ ವಾತ್ಸಲ್ಯ ಪೂರ್ಣದ ಭಾವ, ಅವಳ ಪಾವಿತ್ರ್ಯ, ಸಹನೆ ಇತ್ಯಾದಿ ಸದ್ಗುಣ ಹಾಗೂ ಸರ್ವಶಕ್ತಿತ್ವದ ಪರಿಚಯ ನಮಗೆ ಸ್ಪಷ್ಟವಾಗಿ ಆಗುವುದು ಆಧುನಿಕ ಯುಗದಲ್ಲಿ ಜನ್ಮವೆತ್ತಿದ ಶ್ರೀಮಾತೆ ಶಾರದಾದೇವಿಯವರನ್ನು ನೋಡಿದಾಗ. ಅಂಥ ಸ್ವಾಮಿ ವಿವೇಕಾನಂದರೇ ಸ್ಪಷ್ಟ ಮಾತುಗಳಲ್ಲಿ ಉದ್ಘೋಷಿಸಿದ್ದಾರೆ. ‘ರಾಮಕೃಷ್ಣರನ್ನು ಅವತಾರವೆಂದಾದರೂ ಕರೆ, ಸಂತನೆಂದಾದರೂ ಕರೆ, ಮತ್ತಾವ ಭಾವದಿಂದಲಾದರೂ ಕರೆ! ಆದರೆ ಶಾರದಾಮಾತೆಯಲ್ಲಿ ಜಗನ್ಮಾತೆಯನ್ನು ಕಾಣದಿದ್ದರೆ ನಿನಗೆ ಧಿಕ್ಕಾರವಿರಲಿ’ ಎಂದು. ಅದನ್ನೆಲ್ಲ ಅರಿಯಬೇಕಾದರೆ ಸಂಬಂಧಿಸಿದ ಪುಸ್ತಕಗಳ ಅಧ್ಯಯನವಾಗಬೇಕು.
ಒಟ್ಟಿನಲ್ಲಿ ಜಗನ್ಮಾತೆ ಈ ಸೃಷ್ಟಿಯ ಆಧಾರ, ಸಾರ ಮತ್ತು ಸ್ವಯಂ ಅವಳೇ ಸೃಷ್ಟಿ ಕೂಡ. ಅವಳ ಕೃಪೆಯಿಂದ ಕಾಳಿದಾಸ ಕವಿ ಪುಂಗವನಾಗಬಲ್ಲ. ಮತ್ತಾರೋ ಮತ್ತೇನೋ ಆಗಬಲ್ಲರು! ಆದ್ದರಿಂದಲೇ ಅವಳ ಆರಾಧನೆಗೆ ಇಷ್ಟು ಮಹತ್ವ. ಶ್ರೀಶಂಕರ ಮತ್ತು ಶ್ರೀರಾಮಕೃಷ್ಣ ಇಬ್ಬರೂ ಧರ್ಮಗ್ಲಾನಿಯನ್ನು ತೊಡೆದು ಹಾಕಿ ಮಾನವ ಜೀವನವನ್ನು ವ್ಯವಸ್ಥೆಗೊಳಿಸಿದ್ದು ಅವಳ ಕೃಪೆಯಿಂದಲೇ. ನಮಗೂ ಅವಳ ನಿರಂತರ ಕೃಪೆ ಲಭಿಸಲಿ. ನವರಾತ್ರಿ ನವೋತ್ಸಾಹವನ್ನೂ, ನವ ಜೀವನವನ್ನೂ ತರಲಿ.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)