ಪ್ರಾಚೀನ ಇಸ್ರೇಲ್ನ ರಾಜಧಾನಿಯಾದ ಈ ನಗರದ ಪೂರ್ವಭಾಗದ ಎತ್ತರದ ಪ್ರದೇಶ ಯೆಹೂದಿ ಧರ್ಮದ ಉಗಮ ಮತ್ತು ಪ್ರಾರಂಭಿಕ ಇತಿಹಾಸದೊಂದಿಗೆ ಹಾಸುಹೊಕ್ಕಾಗಿ ಬೆರೆತುಹೋಗಿದೆ. ಹೀಬ್ರೂ ಭಾಷೆಯಲ್ಲಿ ‘ಹರ್ ಹಭಾಯಿತ್’ ಅಂದರೆ ‘(ದೇವರ) ಮನೆ ಇರುವ ಬೆಟ್ಟ’ ಎಂದು ಕರೆಸಿಕೊಳ್ಳುವ ಈ ಸ್ಥಳದಲ್ಲಿ ಯೆಹೋವ ದೇವರು ಕಾಣಿಸಿಕೊಂಡ ಉಲ್ಲೇಖಗಳು ಯೆಹೂದಿ ಧರ್ಮಗ್ರಂಥಗಳಲ್ಲೊಂದಾದ ಬೈಬಲ್ನ ಹಳೆಯ ಒಡಂಬಡಿಕೆಯಲ್ಲಿ ಉಲ್ಲೇಖಗೊಂಡಿವೆ. ಹೀಗಾಗಿ, ಹೊರ ಜಗತ್ತಿಗೆ ‘ಟೆಂಪಲ್ ಮೌಂಟ್’ ಎಂದು ಪರಿಚಿತವಾಗಿರುವ ಈ ಸ್ಥಳ ಯೆಹೂದಿಯರಿಗೆ ಅತ್ಯಂತ ಪವಿತ್ರ.
ಬುದ್ಧಿವಂತಿಕೆಗಾಗಿ ದಂತಕತೆಯೇ ಆಗಿಹೋಗಿರುವ ಪ್ರಾಚೀನ ಇಸ್ರೇಲಿ ಅರಸ ಸೊಲೋಮನ್ ಕ್ರಿ.ಪೂ. 957ರಲ್ಲಿ ಇಲ್ಲಿ ಒಂದು ಆಲಯವನ್ನು ನಿರ್ವಿುಸಿದ. ಆ ದಿನಗಳು ಯೆಹೂದೀ ಇತಿಹಾಸದ ಸುವರ್ಣಯುಗ. ಈ ಸುವರ್ಣಯುಗ ಕ್ರಿ.ಪೂ. 587-86ರಲ್ಲಿ ಬ್ಯಾಬಿಲೋನಿಯನ್ನರಿಂದ ಅಂತ್ಯಗೊಂಡಿತು. ಬ್ಯಾಬಿಲೋನ್ ಅರಸ ಎರಡನೆಯ ನೆಬುಚೆಡ್ನೆಜಾರ್ ಜೆರುಸಲೇಂ ನಗರದ ಮೇಲೆ ದಾಳಿಯೆಸಗಿ ಅರಸ ಸೊಲೋಮನ್ ನಿರ್ವಿುಸಿದ್ದ ಆಲಯವನ್ನು ಧ್ವಂಸಗೊಳಿಸಿದ. ನಂತರ ಕ್ರಿ.ಪೂ. 512ರಲ್ಲಿ ಯೆಹೂದಿಗಳು ಆಲಯವನ್ನು ಪುನರ್ನಿರ್ವಿುಸಿದರೂ ಅದನ್ನು ಕ್ರಿ.ಪೂ. 70ರಲ್ಲಿ ರೋಮನ್ನರು ಹಾಳುಗೆಡವಿದರು. ಮುಂದಿನ ಒಂದು ಶತಮಾನದಲ್ಲಿ ಜೀಸಸ್ ಕ್ರೖೆಸ್ಟ್ನ ಕರುಣೆ, ಸಹೋದರತೆ ಮತ್ತು ಶಾಂತಿಯ ಉಪದೇಶಗಳನ್ನು ಜೆರುಸಲೇಂ ನಗರ ಮತ್ತೆಮತ್ತೆ ಕೇಳಿತು. ಜೀಸಸ್ ಕ್ರೖೆಸ್ಟ್ ಕತ್ತೆಯ ಮೇಲೆ ಕುಳಿತು ಮಹಾವೈಭವದಿಂದ ಜೆರುಸಲೇಂ ನಗರವನ್ನು ಪ್ರವೇಶಿಸುವುದರ ಹಾಗೂ ಆತ ಅಲ್ಲಿ ಬೋಧಿಸಿದ ಉದಾತ್ತ ಜೀವನಮೌಲ್ಯಗಳ ವಿವರಗಳನ್ನು ಆತನ ಶಿಷ್ಯರುಗಳು ರಚಿಸಿರುವ ಸುವಾರ್ತೆಗಳ ಸಂಕಲನವಾದ ‘ಹೊಸ ಒಡಂಬಡಿಕೆ’ಯಲ್ಲಿ ಕಾಣಬಹುದು. ಅಲ್ಲದೆ ಜೀಸಸ್ನನ್ನು ಶಿಲುಬೆಗೇರಿಸಿದ ಸ್ಥಳ ಕ್ಯಾಲ್ವೆರಿ ಸಹ ಜೆರುಸಲೇಂನಲ್ಲೇ ಇದೆ. ಈ ಎಲ್ಲ ಕಾರಣಗಳಿಂದ ಆ ಮಹಾನ್ ನಗರ ಕ್ರಿಶ್ಚಿಯನ್ನರಿಗೂ ಪವಿತ್ರವಾಯಿತು.
ಏಳನೆಯ ಶತಮಾನದ ಪ್ರಾರಂಭದಲ್ಲಿ ಈ ನಗರಕ್ಕೆ ಮತ್ತೊಬ್ಬ ಪ್ರವಾದಿಯ ಪ್ರವೇಶವಾಯಿತು. ಇಸ್ಲಾಂ ಧರ್ಮದ ಸ್ಥಾಪಕ ಪ್ರವಾದಿ ಮಹಮದ್ ಒಂದು ರಾತ್ರಿಯಲ್ಲಿ ಇದೇ ಜೆರುಸಲೇಂ ನಗರದ ಟೆಂಪಲ್ ಮೌಂಟ್ನಿಂದ ಸ್ವರ್ಗಾರೋಹಣಗೈದು ದೇವರನ್ನು ಸಂಧಿಸಿ, ಆತನಿಂದ ಪ್ರಾರ್ಥನಾವಿಧಿಗಳನ್ನು ಅರಿತು ಭೂಮಿಗೆ ತಂದ ವಿವರಗಳು ಖುರಾನ್ನ ಸುರಾಹ್ ಅಲ್-ಇಸ್ರಾದಲ್ಲಿ ಮತ್ತು ಪ್ರವಾದಿಯವರ ಉಲ್ಲೇಖಗಳ ಸಂಕಲನವಾದ ಹದೀತ್ನಲ್ಲಿ ಲಭ್ಯವಿವೆ. ಪ್ರವಾದಿಯವರ ಸ್ವರ್ಗಯಾತ್ರೆಯ ನೆನಪನ್ನು ಅನೂಚಾನಗೊಳಿಸುವ ಉದ್ದೇಶದಿಂದ ಅದೇ ಶತಮಾನದಲ್ಲಿ ಉಮಯ್ಯದ್ ಖಲೀಫರುಗಳು ಅದೇ ಟೆಂಪಲ್ ಮೌಂಟ್ನ ದಕ್ಷಿಣ ಭಾಗದಲ್ಲಿ ‘ಅಲ್ ಅಕ್ಸಾ’ ಎಂದು ಪ್ರಸಿದ್ಧವಾಗಿರುವ ಮಸೀದಿಯನ್ನು ನಿರ್ವಿುಸಿ ದರು. ಜೆರುಸಲೇಂ ನಗರ ಮೂರೂ ಧರ್ಮಗಳಿಗೆ ಪವಿತ್ರ ಸ್ಥಳವೆನಿಸಿದ್ದು ಹೀಗೆ.
ರಾಜಾಶ್ರಯ ಪಡೆದ ಇಸ್ಲಾಂ ಮುಂದಿನ ಮೂರು ಶತಮಾನಗಳಲ್ಲಿ ಜೆರುಸಲೇಂ ನಗರದಲ್ಲಿ ಯೆಹೂದೀ ಮತ್ತು ಕ್ರಿಶ್ಚಿಯನ್ ಧರ್ಮಗಳೆರಡನ್ನೂ ಮೆಟ್ಟಿ ಉತ್ತುಂಗಕ್ಕೇರಿತು. ಇಸ್ಲಾಂನ ಅಧಿಪತ್ಯಕ್ಕೆ ಧಕ್ಕೆಯೊದಗಿದ್ದು ಒಮ್ಮೆ ಮಾತ್ರ, ಕ್ರೂಸೇಡ್ಗಳ ದಿನಗಳಲ್ಲಿ. ಕ್ರಿಶ್ಚಿಯನ್ ಪವಿತ್ರ ಸ್ಥಳಗಳನ್ನು ಮುಸ್ಲಿಂ ಹಿಡಿತದಿಂದ ಪಾರು ಮಾಡುತ್ತೇವೆಂದು ಯುರೋಪಿನ ಕ್ರಿಶ್ಚಿಯನ್ ರಾಜ್ಯಗಳು ಒಂದುಗೂಡಿ 12-13ನೇ ಶತಮಾನಗಳಲ್ಲಿ ಇಸ್ರೇಲ್ನತ್ತ ದಂಡೆತ್ತಿ ಬಂದದ್ದು, ತಮ್ಮ ‘ಪವಿತ್ರಭೂಮಿ’ಯನ್ನು ಕೆಲಕಾಲ ವಿಮೋಚನೆಗೊಳಿಸಿದ್ದು ಇಸ್ಲಾಂ-ಕ್ರಿಶ್ಚಿಯಾನಿಟಿ ಸಂಘರ್ಷದ ಇತಿಹಾಸದ ಪ್ರಮುಖ ಅಧ್ಯಾಯ. ಆಗಲೂ ಬಲಿಯಾದದ್ದು ಜೆರುಸಲೇಂ ನಗರವೇ. ಅದನ್ನು ಮೊದಲು ಪ್ರವೇಶಿಸಿದ ಜರ್ಮನ್ ಸೈನಿಕರು ನಗರವನ್ನು ಧ್ವಂಸಗೊಳಿಸಿ, ‘ಹೀರೋಸೋಲಿಮಾ ಈಸ್ತ್ ಪೆರ್ದಿತಾ, ಹುರ್ರಾ! ಹೀರೋಸೋಲಿಮಾ ಈಸ್ತ್ ಪೆರ್ದಿತಾ, ಹುರ್ರಾ!’ ಅಂದರೆ ‘ಜೆರುಸಲೇಂ ನಾಶವಾಯಿತು’ ಎಂದು ಅಟ್ಟಹಾಸಗೈದು ಕುಣಿದಿದ್ದರು. (ಅದರ ಹ್ರಸ್ವರೂಪವೇ ಹಿಪ್ ಹಿಪ್ ಹುರ್ತಾ)
ಜೆರುಸಲೇಂ ಮುಂದಿನ ಆರೂವರೆ ಶತಮಾನಗಳವರೆಗೆ ತುರ್ಕೀಯರ ಬಿಗಿಮುಷ್ಟಿಯಲ್ಲಿ ನಂತರ ಮೂರು ದಶಕಗಳು ಬ್ರಿಟಿಷರ ಆಡಳಿತದಲ್ಲಿ ಕಳೆದು 1948ರಲ್ಲಿ ಎರಡಾಗಿ ಸೀಳಿ ಇಸ್ರೇಲ್ ಮತ್ತು ಪ್ಯಾಲೆಸೆôನ್ಗಳ ನಡುವೆ ಹಂಚಿಹೋಯಿತು. ಪ್ಯಾಲೆಸೆôನನ್ನು ವಿಭಜಿಸಿ ಯೆಹೂದಿಯರಿಗೂ ಮುಸ್ಲಿಮರಿಗೂ ಅವರವರದೇ ಸ್ವತಂತ್ರ ರಾಷ್ಟ್ರಗಳನ್ನು ನಿರ್ವಿುಸುವ ಯೋಜನೆಯನ್ನು ವಿಶ್ವಸಂಸ್ಥೆ ರೂಪಿಸಿದಾಗ ಕಗ್ಗಂಟಾಗಿ ಕಂಡದ್ದು ಜೆರುಸಲೇಂ ನಗರ. ಎರಡೂ ಜನಾಂಗಗಳು ಅದನ್ನು ತಮ್ಮದೆಂದೇ ವಾದಿಸಿದ್ದರಿಂದ ವಿವಾದ ತಪ್ಪಿಸಲೋಸುಗ ನಗರವನ್ನು ಯಾರೊಬ್ಬರಿಗೂ ಕೊಡದೇ ಅದನ್ನೊಂದು ಪ್ರತ್ಯೇಕ ‘ಅಂತಾರಾಷ್ಟ್ರೀಯ ನಗರ’ವನ್ನಾಗಿ ಮಾರ್ಪಡಿಸಿ ಅದರ ಆಡಳಿತದ ಉಸ್ತುವಾರಿಯನ್ನು ತಾನೇ ನೋಡಿಕೊಳ್ಳಲು ವಿಶ್ವಸಂಸ್ಥೆ ನಿರ್ಧರಿಸಿತು. ಆದರೆ ಪ್ಯಾಲೆಸೆôನ್ ವಿಭಜನೆ ಮುಸ್ಲಿಮರ ವಿರೋಧದಿಂದಾಗಿ ಸುಸೂತ್ರವಾಗಿ ಸಾಗದೆ, ಯೆಹೂದಿಗಳು ಏಕಪಕ್ಷೀಯವಾಗಿ ಇಸ್ರೇಲ್ ಅನ್ನು ಸ್ಥಾಪಿಸಿಕೊಂಡಾಗ ನವರಾಷ್ಟ್ರದ ಮೇಲೆ ಸುತ್ತಲ ಅರಬ್ ದೇಶಗಳೆಲ್ಲವೂ ಏಕಕಾಲದಲ್ಲಿ ಎರಗಿದವಷ್ಟೇ. ಆಗ ಜರುಗಿದ ಯುದ್ಧದಲ್ಲಿ ಯೆಹೂದಿಯರು ಮೇಲುಗೈ ಸಾಧಿಸಿ ಅರಬ್ಬರಿಗಾಗಿ ಮೀಸಲಿಟ್ಟಿದ್ದ ವೆಸ್ಟ್ ಬ್ಯಾಂಕ್ನ ಪಶ್ಚಿಮ ಭಾಗವನ್ನು ವಶಕ್ಕೆ ತೆಗೆದುಕೊಂಡದ್ದಲ್ಲದೆ ಪೂರ್ವದಲ್ಲಿ ಮುಂದೊತ್ತಿ ಹೋಗಿ ಜೆರುಸಲೇಂ ನಗರದ ಪಶ್ಚಿಮ ಭಾಗವನ್ನು ಆಕ್ರಮಿಸಿಕೊಂಡು ನವರಾಷ್ಟ್ರಕ್ಕೆ ಸೇರಿಸಿಕೊಂಡರು. ವೆಸ್ಟ್ ಬ್ಯಾಂಕ್ನ ಪೂರ್ವಭಾಗದ ಜತೆಗೆ ಟೆಂಪಲ್ ಮೌಂಟ್/ಅಲ್-ಅಕ್ಸಾ ಮಸೀದಿ ಇರುವ ಜೆರುಸಲೇಂ ನಗರದ ಪೂರ್ವಭಾಗವೂ ಜೋರ್ಡಾನ್ ಸೇನೆಯ ಹಿಡಿತಕ್ಕೆ ಸಿಕ್ಕಿತು. ಅದೇ ಮುಂದಿನ ಬಹುಪಾಲು ಸಮಸ್ಯೆಗಳಿಗೆ ಮೂಲ.
1967ರಲ್ಲಿ ಇಸ್ರೇಲ್ ಪೂರ್ವ ಜೆರುಸಲೇಂ ನಗರದ ಜತೆ ಇಡೀ ವೆಸ್ಟ್ ಬ್ಯಾಂಕನ್ನು ವಶಕ್ಕೆ ತೆಗೆದುಕೊಂಡಿತು. ಹೀಗೆ ಟೆಂಪಲ್ ಮೌಂಟ್ ಎರಡು ಸಹಸ್ರಮಾನಗಳ ನಂತರ ದಕ್ಕಿದ್ದು ಯೆಹೂದಿಯರಿಗೆ ಸಂಭ್ರಮದ ಸಂಗತಿ. ಇಷ್ಟಾಗಿಯೂ, ಪ್ಯಾಲೆಸ್ತೀನೀ ಮುಸ್ಲಿಮರ ಧಾರ್ವಿುಕ ಭಾವನೆಗಳು ಹಾಗೂ ಹಕ್ಕುಗಳನ್ನು ಗೌರವಿಸಿದ ಇಸ್ರೇಲ್ ಅಲ್-ಅಕ್ಸಾ ಮಸೀದಿಯ ವ್ಯವಹಾರಗಳನ್ನು ಜೆರುಸಲೇಂ ಇಸ್ಲಾಮಿಕ್ ವಕ್್ಛಗೊಪ್ಪಿಸಿ ಅಲ್ಲಿನ ಭದ್ರತಾ ವ್ಯವಸ್ಥೆಯನ್ನಷ್ಟೇ ತನ್ನ ಕೈಯಲ್ಲಿಟ್ಟುಕೊಂಡಿತು. ಹೀಗಾಗಿ ಮಸೀದಿಯ ಹನ್ನೆರಡು ದ್ವಾರಗಳಲ್ಲೂ ಇಸ್ರೇಲಿ ಪೊಲೀಸ್ ಸುರಕ್ಷಾ ವ್ಯವಸ್ಥೆಯಿದೆ.
1993ರ ಶಾಂತಿ ಒಪ್ಪಂದಗಳ ಪ್ರಕಾರ ಗಾಜಾ ಮತ್ತು ವೆಸ್ಟ್ ಬ್ಯಾಂಕ್ನ ಜೆರಿಕೋ ಪಟ್ಟಣಗಳಲ್ಲಿ ಸ್ವತಂತ್ರ ಪ್ಯಾಲೆಸೆôನ್ ರಾಷ್ಟ್ರದ ಸ್ಥಾಪನೆಯ ಅಸ್ತಿಭಾರ ಹಾಕಲಾಯಿತು. ಆ ಯೋಜನೆ ಪ್ರಕಾರ ವೆಸ್ಟ್ ಬ್ಯಾಂಕ್ನ ಇತರ ಭಾಗಗಳೂ ಹಂತಹಂತವಾಗಿ ಇಸ್ರೇಲ್ನಿಂದ ಪ್ಯಾಲೆಸೆôನ್ಗೆ ವರ್ಗಾವಣೆಯಾಗಬೇಕಾಗಿತ್ತು. ಆಗ ಅಲ್-ಅಕ್ಸಾ ಮಸೀದಿ ಸೇರಿ ಪೂರ್ವ ಜೆರುಸಲೇಂ ಮೇಲೆ ತಮ್ಮ ಅಧಿಕಾರದ ಕನಸು ಕಂಡ ಪ್ಯಾಲೆಸ್ತೀನಿಯರಿಗೆ ನಿರಾಸೆ ಕಾದಿತ್ತು. ವೆಸ್ಟ್ ಬ್ಯಾಂಕ್ನ ಇತರೆಲ್ಲ ಪ್ರದೇಶಗಳನ್ನು ಪ್ಯಾಲೆಸ್ತೀನಿಯರಿಗೆ ಬಿಟ್ಟುಕೊಡಲು ಸಿದ್ಧವಿದ್ದ ಇಸ್ರೇಲ್ ತನ್ನ ಪುರಾತನ ರಾಜಧಾನಿ ಪೂರ್ವ ಜೆರುಸಲೇಂ ಅನ್ನು, ಯೆಹೂದಿಯರ ಪರಮ ಪವಿತ್ರ ಸ್ಥಳ ಹರ್ ಹಭಾಯಿತ್ ಅನ್ನು ಮಾತ್ರ ಬಿಟ್ಟುಕೊಡಲು ತಯಾರಿರಲಿಲ್ಲ. ಇದು ವ್ಯಕ್ತವಾದದ್ದು ಒಪ್ಪಂದಗಳಿಗೆ ಸಹಿ ಬಿದ್ದ ಮರುಗಳಿಗೆಯೇ. ಪ್ಯಾಲೆಸ್ತೀನೀ ನಾಯಕ ಮೆಹಮೂದ್ ಅಬ್ಬಾಸ್, ‘ಇನ್ನು ಕೆಲವೇ ದಿನಗಳಲ್ಲಿ ಪೂರ್ವ ಜೆರುಸಲೇಂ ಮೇಲೆ ಪ್ಯಾಲೆಸ್ತೀನಿ ಪತಾಕೆ ಹಾರಲಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಘೊಷಿಸಿದರು. ಅದೇ ವೇದಿಕೆಯಲ್ಲಿದ್ದ ಇಸ್ರೇಲಿ ವಿದೇಶಮಂತ್ರಿ ಶಿಮೋನ್ ಪೆರೆಸ್ ಪ್ರತಿಕ್ರಿಯಿಸಿ, ‘ಪ್ಯಾಲೆಸ್ತೀನಿಯರಲ್ಲಿ ಅಂತಹ ಕನಸೇನಾದರೂ ಇದ್ದರೆ ಅದನ್ನು ಅವರು ಮರೆಯುವುದು ಒಳ್ಳೆಯದು’ ಎಂದರು. ಜೆರುಸಲೇಂ ನಗರ ಯೆಹೂದೀ ಅಸ್ಮಿತೆಯ ಪ್ರತೀಕ, ಇನ್ನು ಅದನ್ನೆಂದೂ ನಾವು ಇತರರ ಅಧೀನಕ್ಕೆ ಒಪ್ಪಿಸಲಾರೆವು ಎಂದು ಇಸ್ರೇಲ್ ಜಗತ್ತಿಗೆ ಸಾರಿದ್ದು ಹೀಗೆ.
1948ರಿಂದಲೂ ತನ್ನ ಅಧೀನದಲ್ಲಿದ್ದ ಪಶ್ಚಿಮ ಜೆರುಸಲೇಂನ್ನು ಇಸ್ರೇಲ್ ಬಹುಪಾಲು ಯೆಹೂದಿ ನಗರವಾಗಿ ಪರಿವರ್ತಿಸಿತ್ತು, 1967ರಿಂದ ಆ ಪ್ರಕ್ರಿಯೆ ಪೂರ್ವ ಜೆರುಸಲೇಂನಲ್ಲೂ ಜಾಲನೆಯಲ್ಲಿದ್ದರೂ ಅಲ್ಲಿ ಇನ್ನೂ ಅರಬ್ ಜನಸಂಖ್ಯೆ ಅಧಿಕವಾಗಿದೆ. ಇಡೀ ಜೆರುಸಲೇಂ ನಗರ ತನ್ನದೆಂದು ಹೇಳಿಕೊಳ್ಳುವ ಇಸ್ರೇಲ್ ನಗರದಲ್ಲಿರುವ ಅರಬ್ಬರೂ ತನ್ನ ನಾಗರಿಕರೇ, ಅವರಿಗೂ ಪ್ಯಾಲೆಸೆôನ್ಗೂ ಯಾವ ಸಂಬಂಧವೂ ಇಲ್ಲ ಎಂದೇ ಸಾಧಿಸಿಕೊಂಡು ಬಂದಿದೆ. ಈ ಅರಬ್ಬರು ಇಸ್ರೇಲ್ನಲ್ಲಿರುವ ಅರಬ್ ಜನಸಂಖ್ಯೆಯ ಒಂದು ಪುಟ್ಟ ಭಾಗವಷ್ಟೇ. ಇಸ್ರೇಲ್ ಯೆಹೂದಿ ರಾಷ್ಟ್ರವಾದರೂ ಅಲ್ಲಿನ ಜನಸಂಖ್ಯೆಯ ಶೇಕಡ 20.95 ಭಾಗ ಅರಬ್ ಮುಸ್ಲಿಮರು! ಅವರ ಒಟ್ಟುಸಂಖ್ಯೆ 18.90 ಲಕ್ಷ! ಇಸ್ರೇಲಿ ರಾಜಧಾನಿ ಟೆಲ್ ಅವಿವ್ನಲ್ಲೇ 10,500 ಅರಬ್ಬರಿದ್ದಾರೆ. ‘ಇಸ್ರೇಲ್ನ ಅರಬ್ ರಾಜಧಾನಿ’ ಎಂದು ಕರೆಯಲ್ಪಡುವ, ಜೀಸಸ್ ಕ್ರೖೆಸ್ಟ್ನ ಜನ್ಮಸ್ಥಳವಾದ ನಜರೇತ್ ಪಟ್ಟಣದ ಒಟ್ಟು ಜನಸಂಖ್ಯೆ 77,445. ಅದರಲ್ಲಿ ಶೇ.69 ಮುಸ್ಲಿಮರು ಮತ್ತು ಶೇ.30.9 ಕ್ರಿಶ್ಚಿಯನ್ನರು. ಅಲ್ಲಿನ ಯೆಹೂದಿಗಳ ಪ್ರಮಾಣ ಕೇವಲ ಶೇ.0.1. ಹೀಗೆ ಪೂರ್ವ ಜೆರುಸಲೇಂನಲ್ಲಿರುವ ಪ್ಯಾಲೆಸ್ತೀನಿ ಅರಬ್ಬರು ತನ್ನದೇ ಪ್ರಜೆಗಳು ಎಂದು ಇಸ್ರೇಲ್ ಹೇಳುವುದನ್ನು ಪ್ಯಾಲೆಸೆôನ್ನ ಪರಸ್ಪರ ವಿರೋಧಿ ಬಣಗಳಾದ ಫತಾ ಮತ್ತು ಹಮಾಸ್ ತಮ್ಮ ವೈರ ಸಾಧನೆಗಾಗಿ ಬಳಸಿಕೊಳ್ಳುತ್ತಿವೆ. ಇಂದು ಪ್ಯಾಲೆಸೆ ôನ್ ರಾಜಕಾರಣವನ್ನು ನಿರ್ದೇಶಿಸುತ್ತಿರುವ ಬಹು ದೊಡ್ಡ ಅಂಶ ಇದು.
ಪ್ಯಾಲೆಸ್ತೈನ್ನ ಅಧ್ಯಕ್ಷ ಸ್ಥಾನಕ್ಕೆ ಮತ್ತು ಪ್ಯಾಲೆಸೆôನ್ ನ್ಯಾಷನಲ್ ಅಥಾರಿಟಿ (ಪಿಎನ್ಎ)ಗೆ ಕೊನೆಯ ಬಾರಿ ಚುನಾವಣೆಗಳು ನಡೆದದ್ದು ಕ್ರಮವಾಗಿ 2005 ಮತ್ತು 2006ರಲ್ಲಿ ಹಾಗೂ ತನ್ನ ಹಾಗೂ ತನ್ನ ಫತಾದ ಸೋಲನ್ನು ತಡೆಯಲೋಸುಗ ಅಧ್ಯಕ್ಷ ಮಹಮೂದ್ ಅಬ್ಬಾಸ್ ಚುನಾವಣೆಗಳನ್ನೇ ಮುಂದೂಡುತ್ತ ಬಂದಿದ್ದಾರೆ. ಇಸ್ರೇಲ್ ಜತೆಗಿನ ಜುಲೈ 2014ರ ಘರ್ಷಣೆಗಳಲ್ಲಿ ಕಂಗೆಟ್ಟ ಹಮಾಸ್ ವಿಧಿಯಿಲ್ಲದೇ ಫತಾ ಜತೆ ಹೊಂದಾಣಿಕೆಯ ಬದುಕಿಗೆ ಶರಣಾಗಿತ್ತು. ಆದರೆ ಮುಸ್ಲಿಂ ಜಗತ್ತಿನ ನಾಯಕನ ಕನಸು ಕಾಣುವ ಇರಾನ್ ಅದಕ್ಕಾಗಿ ಇಸ್ರೇಲ್-ದ್ವೇಷವನ್ನು ದೊಡ್ಡದಾಗಿ ಪ್ರದರ್ಶಿಸುತ್ತಿದೆ ಮತ್ತು ಯೆಹೂದಿ ರಾಷ್ಟ್ರಕ್ಕೆ ಹಾನಿಯೆಸಗಲು ಹಮಾಸ್ ಅನ್ನು ಬಳಸಿಕೊಳ್ಳುತ್ತಿದೆ. ಹಮಾಸ್ಗೆ ಇರಾನ್ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದಲ್ಲದೆ ಈಗಿರುವ ಗಾಜಾ ಜತೆ ವೆಸ್ಟ್ ಬ್ಯಾಂಕ್ನಲ್ಲೂ ಅಧಿಕಾರ ಗಳಿಸಿಕೊಳ್ಳಲು ಹಮಾಸ್ ಅನ್ನು ಪ್ರೇರೇಪಿಸುತ್ತಿದೆ. ಜತೆಗೆ, ಹಿಂದೆ ಇಸ್ರೇಲ್ ಪರವಾಗಿದ್ದು ಈಗ ಅದರ ವಿರೋಧಿಯಾಗಿ ಬದಲಾಗಿರುವ ಟರ್ಕಿ ಕೂಡ ಇರಾನ್ ಜತೆ ಸೇರಿ ಹಮಾಸ್ಗೆ ಕುಮ್ಮಕ್ಕು ನೀಡತೊಡಗಿದೆ. ಹೀಗೆ ಹುಮ್ಮಸ್ಸುಗೊಂಡ ಹಮಾಸ್ ಚುನಾವಣೆಗಳಿಗಾಗಿ ಒತ್ತಡ ಹಾಕತೊಡಗಿದಾಗ ಸಮ್ಮತಿಸಿದ ಅಧ್ಯಕ್ಷ ಮೆಹಮೂದ್ ಅಬ್ಬಾಸ್ ಈ ವರ್ಷದ ಮೇ 22ಕ್ಕೆ ಪಿಎನ್ಎ ಚುನಾವಣೆಗಳನ್ನೂ, ಜುಲೈ 31ಕ್ಕೆ ಅಧ್ಯಕ್ಷೀಯ ಚುನಾವಣೆಗಳನ್ನೂ ನಡೆಸುವುದಾಗಿ ಘೊಷಿಸಿದರು. ಆದರೆ ಕಳೆದೊಂದು ದಶಕದಿಂದಲೂ ಹಮಾಸ್ನ ಪ್ರಭಾವ ವೆಸ್ಟ್ ಬ್ಯಾಂಕ್ನಲ್ಲೂ ಏರುತ್ತಿರುವುದು, ಜತೆಗೆ ಫತಾದಲ್ಲೇ ಎರಡು ಅಬ್ಬಾಸ್-ವಿರೋಧಿ ಬಣಗಳು ತಲೆಯೆತ್ತಿರುವುದು ಚುನಾವಣೆಗಳಲ್ಲಿ ಹಮಾಸ್ನ ವಿಜಯದ ಸ್ಪಷ್ಟ ಸಂಕೇತಗಳಾಗಿ ಕಾಣತೊಡಗಿದಾಗ ಇಸ್ರೇಲ್ ಕೂಡ ಎಚ್ಚೆತ್ತುಕೊಂಡಿತು.
ಚುನಾವಣೆಗಳು ನಡೆದು ಇಡೀ ಪ್ಯಾಲೆಸೆôನ್ ಮೇಲೆ ಹಮಾಸ್ನ ಅಧಿಕಾರ ಸ್ಥಾಪಿತವಾದರೆ ಆಗ ಗಾಜಾ ಮತ್ತು ವೆಸ್ಟ್ ಬ್ಯಾಂಕ್ಗಳೆರಡೂ ಕಡೆಗಳಿಂದಲೂ ಇಸ್ರೇಲ್ಗೆ ಅಪಾಯ ಕಟ್ಟಿಟ್ಟ ಬುತ್ತಿ. ಇದನ್ನು ತಡೆಯಬೇಕಾದರೆ ಚುನಾವಣೆಗಳಿಗೇ ಅಡ್ಡಗಾಲು ಹಾಕಬೇಕು ಎನ್ನುವುದು ಇಸ್ರೇಲ್ನ ಯೋಜನೆಯಾಯಿತು. ಅದಕ್ಕನುಗುಣವಾಗಿ, ಪ್ಯಾಲೆಸೆôನ್ ಚುನಾವಣೆಗಳಲ್ಲಿ ಪೂರ್ವ ಜೆರುಸಲೇಂನ ಅರಬ್ಬರು ಭಾಗವಹಿಸುವಂತಿಲ್ಲ ಎಂದು ಇಸ್ರೇಲ್ ಘೊಷಿಸಿತು. ಅದರ ಹಿಂದೆಯೇ, ಪೂರ್ವ ಜೆರುಸಲೇಂನ ಅರಬ್ಬರು ಭಾಗವಹಿಸದೆ ಚುನಾವಣೆಗಳು ಸಂಪೂರ್ಣವಾಗುವುದಿಲ್ಲ, ಅವರು ಭಾಗವಹಿಸುವ ಪರಿಸ್ಥಿತಿ ನಿರ್ವಣವಾಗುವವರೆಗೆ ಚುನಾವಣೆಗಳನ್ನು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾಗಿದೆ ಎಂದು ಅಧ್ಯಕ್ಷ ಅಬ್ಬಾಸ್ ಏಪ್ರಿಲ್ 29ರಂದು ಘೊಷಿಸಿದರು. ಇದರರ್ಥ ಚುನಾವಣೆಗಳು ಎಂದೂ ನಡೆಯುವುದಿಲ್ಲ, ತಮ್ಮ ಕೈಗೆ ಇಡೀ ಪ್ಯಾಲೆಸೆôನ್ ಎಂದೂ ದಕ್ಕುವುದಿಲ್ಲ ಎಂದು ಅರಿಯಲಾಗದಷ್ಟು ಹಮಾಸ್ ನಾಯಕರು ಪೆದ್ದರೇನೂ ಅಲ್ಲ. ಜತೆಗೆ ಚುನಾವಣೆಗಳ ರದ್ದತಿ
ಇಸ್ರೇಲ್ ಮತ್ತು ಫತಾ ಜಂಟಿಯಾಗಿ ತನ್ನ ವಿರುದ್ಧ ಹೂಡಿದ ಸಂಚು ಎಂದೂ ಹಮಾಸ್ ಭಾವಿಸಿದ್ದೂ ಸತ್ಯಕ್ಕೆ ದೂರವೇನೂ ಆಗಿರಲಿಲ್ಲ. ಆಗ ಹಮಾಸ್ ಯೋಜಿಸಿದ್ದು 2 ಯುದ್ಧಗಳು: ಒಂದು- ಇಸ್ರೇಲ್ ವಿರುದ್ಧ ಸೇನಾ ಯುದ್ಧ, ಎರಡು- ಫತಾ ವಿರುದ್ಧ ರಾಜಕೀಯ ಯುದ್ಧ. ಇದರ ಪರಿಣಾಮವೇ ಮೇ 10-21ರ ನಡುವೆ ನಡೆದ ‘ಯುದ್ಧ.’
ಈಜಿಪ್ತ್ ಮತ್ತು ಅಮೆರಿಕಗಳ ಪರಿಶ್ರಮದಿಂದ ಕದನವಿರಾಮ ಜಾರಿಗೆ ಬರುವ ಹೊತ್ತಿಗೆ ಇಸ್ರೇಲ್ ವಿರುದ್ಧದ ಸೇನಾಯುದ್ಧದಲ್ಲಿ ಹಮಾಸ್ ಸೋತಿತ್ತು, ಆದರೆ ಫತಾ ವಿರುದ್ಧದ ರಾಜಕೀಯ ಯುದ್ಧದಲ್ಲಿ ಜಯಶಾಲಿಯಾಗಿತ್ತು. ಇಸ್ರೇಲ್ ವಿರುದ್ಧ 4,300 ರಾಕೆಟ್ ದಾಳಿ ನಡೆಸಿದರೂ ಅಲ್ಲಿ ಘಟಿಸಿದ ಹತ್ತು ಸಾವುಗಳಿಗೆ ಬದಲಾಗಿ ಗಾಜಾ ಕಳೆದುಕೊಂಡದ್ದು 250 ಜೀವಗಳು. ಹೆಚ್ಚಿನ ಜೀವಹಾನಿಯಾದದ್ದು ಹಲವು ಹಮಾಸ್ ರಾಕೆಟ್ಗಳು ಇಸ್ರೇಲ್ ತಲುಪದೇ ಗಾಜಾದಲ್ಲೇ ಬಿದ್ದದ್ದರಿಂದ. ಜತೆಗೆ ಹಮಾಸ್ ತನ್ನ ಬಹುಪಾಲು ಶಸ್ತ್ರಸಂಗ್ರಹವನ್ನೂ, ಸೂಕ್ಷ್ಮ ಹಾಗೂ ಪ್ರಮುಖ ಕಟ್ಟಡಗಳನ್ನೂ ಕಳೆದುಕೊಂಡಿದೆ.
ಆದರೆ ಹಮಾಸ್ ಪ್ರಯತ್ನದ ಮೂಲಉದ್ದೇಶ ಯಶಸ್ವಿಯಾಗಿದೆ. ವೆಸ್ಟ್ ಬ್ಯಾಂಕ್ನಲ್ಲಿ ಅದರ ಪ್ರಭಾವ ಗಣನೀಯವಾಗಿ ಏರಿದೆ. ಹಮಾಸ್ ಕ್ಷಿಪ್ರಕ್ರಾಂತಿಗೆ ಮುಂದಾದರೆ ಅದಕ್ಕೆ ಜನಬೆಂಬಲ ನಿಶ್ಚಿತ ಎಂಬ ಸ್ಥಿತಿ ನಿರ್ವಣವಾಗಿದೆ. ಇದನ್ನು ತಡೆಯಲು ಇಸ್ರೇಲ್ ಶತಾಯಗತಾಯ ಪ್ರಯತ್ನಪಟ್ಟೇಪಡುತ್ತದೆ. ಅದು ಇನ್ನೂ ಗಟ್ಟಿಯಾಗಿ ಫತಾ ಪರವಾಗಿ ನಿಲ್ಲುತ್ತದೆ. ಇದರರ್ಥ ಪಶ್ಚಿಮ ಏಷ್ಯಾದ ಇತಿಹಾಸದಲ್ಲಿ ಮತ್ತೊಂದು ರಕ್ತರಂಜಿತ ಪುಟ ತೆರೆದುಕೊಳ್ಳಲು ಹೆಚ್ಚು ಕಾಲವೇನೂ ಬೇಕಾಗುವುದಿಲ್ಲ. ಆಗ ಮತ್ತೆ ರಕ್ತಪಾತ ಅನುಭವಿಸುವುದು ಜೆರುಸಲೇಂ ನಗರವೇ. ಹಮಾಸ್ ಮತ್ತು ಫತಾ ಬೆಂಬಲಿಗರು ಅಲ್-ಅಕ್ಸಾ ಮಸೀದಿ ಮುಂದೇ ಮೇ 23ರಂದು ಅಂದರೆ ಕದನವಿರಾಮ ಜಾರಿಯಾದ ಎರಡೇ ದಿನಗಳಲ್ಲಿ, ಕಾದಾಡಿ ಮುಂದಿನ ದಿನಗಳ ದುರಂತದ ಸೂಚನೆ ನೀಡಿದ್ದಾರೆ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)