ಪ್ರಶ್ನೆ: ನನ್ನ ಮಗಳಿಗೆ ವಿವಾಹ ನಿಶ್ಚಯವಾಗಿದೆ. ಆದರೆ ಅವಳ ಒಡನಾಟ ಮೊದಲು ಬೇರೆ ಹುಡುಗನ ಜತೆ ಇತ್ತು. ಆ ಹುಡುಗ ಸರಿಯಿಲ್ಲ. ಅವನು ದುಡ್ಡಿನ ಆಸೆಗಾಗಿ ಅವಳ ಹಿಂದೆ ಬಂದಿದ್ದ. ಅವನಿಗೆ ಎಲ್ಲ ದುರಭ್ಯಾಸಗಳೂ ಇವೆ. ಆ ಹುಡುಗ ನನ್ನ ಮಗಳ ಜೊತೆ ಇರುವ ಫೋಟೋ ಎಲ್ಲ ತೋರಿಸಿ ಅವರ ತಲೆಕೆಡಿಸಿದ್ದಾನೆ. ನನ್ನ ಮಗಳಿಗೆ ಈಗಲೂ ಬೆದರಿಕೆ ಹಾಕುತ್ತಾನೆ. ಈಗ ಅವರು ನಿಮ್ಮ ಮಗಳ ರಕ್ತ ಪರೀಕ್ಷೆ ಆಗಬೇಕು. ಆಮೇಲೆ ಮದುವೆ ಎನ್ನುತ್ತಿದ್ದಾರೆ. ನಾನು ಈಗ ಏನು ಮಾಡಬೇಕೋ ತಿಳಿಯುತ್ತಿಲ್ಲ. ರಕ್ತ ಪರೀಕ್ಷೆ ಮಾಡುವುದರಿಂದ ಏನಾದರೂ ತೊಂದರೆ ಇದೆಯೇ? ನನ್ನ ಮಗಳಿಗೆ ಮದುವೆ ಆಗುವುದು ಹೇಗೆ? ಆ ಹುಡುಗ ಮತ್ತೆ ತೊಂದರೆ ಮಾಡದೇ ಇರಲು ಏನು ಮಾಡಬೇಕು?
ಉತ್ತರ: ನೀವು ನಿಮ್ಮ ಮಗಳ ಒಡನಾಟದಲ್ಲಿದ್ದ ಹುಡುಗನ ಬಗ್ಗೆ ಹೆದರಬೇಡಿ. ಆ ಹುಡುಗ ನಿಮ್ಮ ಹುಡುಗಿಯನ್ನು ಹೆದರಿಸಿದರೆ ಪೋಲೀಸರ ಬಳಿ ಫಿರ್ಯಾದನ್ನು ಕೊಡಿ. ನಿಮ್ಮ ಮಗಳು ಅವನಿಂದ ಹೊರಬಂದದ್ದು ಒಳ್ಳೆಯದೇ ಆಯಿತು. ನಿಮ್ಮ ಮಗಳು ಬೇರೆ ಯಾರನ್ನಾದರೂ ಮದುವೆ ಆಗುವುದಾದರೆ ಎಲ್ಲ ವಿಷಯಗಳನ್ನು ಮುಚ್ಚುಮರೆಯಿಲ್ಲದೆ ತಿಳಿಸಿ ಅವರು ಒಪ್ಪಿದರೆ ಆ ನಂತರ ಮದುವೆ ಆಗಲಿ. ವಿಷಯವನ್ನು ಮುಚ್ಚಿಟ್ಟು ಮದುವೆ ಅಗುವುದರಲ್ಲಿ ಯಾವ ಪ್ರಯೋಜನವೂ ಇಲ್ಲ. ಹಾಗೆ ಮುಚ್ಚಿಟ್ಟು ಮದುವೆ ಅದರೂ ಮುಂದೆ ಕಲಹ ಪ್ರಾರಂಭವಾಗಬಹುದು. ಇನ್ನು ರಕ್ತ ಪರೀಕ್ಷೆಯ ವಿಷಯ ಇಲ್ಲಿ ಬರುವುದೇ ಇಲ್ಲ. ದೈಹಿಕ ಸಂಪರ್ಕ ಹೊಂದಿದ್ದರೆ ಅ ಬಗ್ಗೆಯೂ ನಿಮ್ಮ ಮಗಳು ತಿಳಿಸಲಿ. ಒಪ್ಪಿಗೆ ಆದಾಗ ಮಾತ್ರ ಮದುವೆ ಮಾಡಿ. ರಕ್ತ ಪರೀಕ್ಷೆಯಿಂದ ಹುಡುಗನ ಮನೆಯವರು ಏನು ಮಾಹಿತಿ ಪಡೆಯುತ್ತಾರೆ ಎನ್ನುವುದು ಖಚಿತವಾಗಿ ತಿಳಿಯುತ್ತಿಲ್ಲ. ಬಹುಷ: ಅವರು ನಿಮ್ಮ ಹುಡುಗಿಗೆ ದೈಹಿಕ ಸಂಪರ್ಕ ಇತ್ತೋ ಇಲ್ಲವೋ ಎನ್ನುವ ಬಗ್ಗೆ ವೈದ್ಯಕೀಯ ಪರೀಕ್ಷೆಗೆ ಕೇಳಿರಬಹುದು. ಆದರೆ ಅಷ್ಟೆಲ್ಲಾ ಸಂಶಯವಿರುವವರನ್ನು ಮದುವೆಯಾಗಿ ನಿಮ್ಮ ಮಗಳು ಏನು ತಾನೇ ಸುಖ ಪಡಬಹುದು ಎನ್ನುವುದನ್ನೂ ಯೋಚಿಸಿ.
ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)
ದಾಂಪತ್ಯದಲ್ಲಿ ಸಮರಸ ಮೂಡುವುದು ಹೇಗೆ ಎಂಬ ಕುರಿತಾಗಿ ಎಸ್.ಸುಶೀಲಾ ಚಿಂತಾಮಣಿಯವರು ತಿಳಿಸಿರುವ ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ. ವಿಷಯ ವಿವಾಹದ ಅವಶ್ಯಕತೆ ಇದೆಯೆ?