ಅಂಕಣ

ನ್ಯಾಯದೇವತೆ; ತಂಗಿಯನ್ನು ಮದುವೆಯಾಗಲು ಗಂಡನ ಪಟ್ಟು!

  • ನಾನು ಸರ್ಕಾರಿ ನೌಕರಿಯಲ್ಲಿದ್ದೇನೆ. ಗಂಡ ಮತ್ತು ಮಗಳು ಇದ್ದಾರೆ. ನಮ್ಮ ತಂದೆ ಕೂಡ ಜತೆಯಲ್ಲಿಯೇ ವಾಸಿಸುತ್ತಿದ್ದಾರೆ. ನನ್ನ ತಂಗಿ ಗಂಡ ತೀರಿಕೊಂಡ ಮೇಲೆ ಅವಳು ಮಗುವಿನ ಜತೆ ನಮ್ಮೊಟ್ಟಿಗೆ ಇದ್ದಾಳೆ. ಈಗ ಅವಳು ವಿಧುರ ಒಬ್ಬರನ್ನು ಮದುವೆಯಾಗಬೇಕೆಂದುಕೊಂಡಿದ್ದಾಳೆ. ಅವರೂ ತುಂಬಾ ಒಳ್ಳೆಯವರು. ಈಗ ಸಮಸ್ಯೆ ಬಂದಿರುವುದು ನನ್ನ ಗಂಡನದ್ದು. ಅವರು ಏನೂ ಕೆಲಸ ಮಾಡುತ್ತಿಲ್ಲ. ನಾನೇ ದಿನವೂ ಖರ್ಚಿಗೆ ದುಡ್ಡು ಕೊಡಬೇಕು. ಈಗ ಅವರು ನನ್ನ ತಂಗಿಯನ್ನು ಮದುವೆ ಆಗುತ್ತೇನೆ ಎಂದು ಹಠ ಹಿಡಿದಿದ್ದಾರೆ. ಇದಕ್ಕೆ ಒಪ್ಪದಿದ್ದರೆ ಡಿವೋರ್ಸ್ ಕೊಡುತ್ತೇನೆ ಎಂದು ಹೆದರಿಸುತ್ತಿದ್ದಾರೆ. ನನ್ನ ತಂಗಿಗೆ ಅವರನ್ನು ಕಂಡರೆ ಆಗುವುದಿಲ್ಲ. ಈ ವಿಷಯದಲ್ಲಿ ಜಗಳವಾಡಿ ನನ್ನ ಗಂಡ ನನ್ನ ತಾಯಿಯನ್ನೂ ಚೆನ್ನಾಗಿ ಹೊಡೆದಿದ್ದಾರೆ. ನಮ್ಮ ತಂದೆಯ ಕಚೇರಿ ಹತ್ತಿರ ಹೋಗಿ ಗಲಾಟೆ ಮಾಡುತ್ತಿದ್ದಾರೆ. ನನ್ನ ತಂಗಿಯನ್ನು ಹೇಗಾದರೂ ಒಪ್ಪಿಸಿ ಮದುವೆ ಮಾಡಿಸಿದರೆ ಇಂಥ ವ್ಯಕ್ತಿ ಜತೆ ಆಕೆ ಜೀವನವೂ ಹಾಳಾಗುತ್ತದೆ. ಈಗ ಏನು ಮಾಡಬೇಕು ಎಂದೇ ತಿಳಿಯದಾಗಿದೆ. ಪರಿಹಾರವಿದೆಯೆ?
ನೀವು ಕೂಡಲೇ ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಣೆ ಮಾಡುವ ಕಾನೂನಿನ ಕೆಳಗೆ ನಿಮ್ಮ ಪತಿಯ ವಿರುದ್ಧ ಪ್ರಕರಣ ದಾಖಲಿಸಿ. ಅವರು ನಿಮ್ಮ ಮನೆಗೆ ಬರಬಾರದು ಎನ್ನುವ ಪೊ›ಟೆಕ್ಷನ್ ಆರ್ಡರ್ /ರಕ್ಷಣೆಯ ಆದೇಶವನ್ನು ಪಡೆಯಿರಿ. ನಿಮ್ಮ ತಂದೆಯಿಂದಲೂ ನಿಮ್ಮ ಪತಿಯ ವಿರುದ್ಧ ಫಿರ್ಯಾದು ದಾಖಲಿಸಿ. ನಿಮ್ಮ ತಂಗಿಯನ್ನು ಮದುವೆಯಾಗಲು ಹಿಂಸೆ ಮಾಡುತ್ತಿದ್ದಾರೆ ಎನ್ನುವುದನ್ನೂ ನೀವು ಪ್ರಕರಣದಲ್ಲಿ ತಿಳಿಸಿ. ಹಾಗೆಯೇ ಅವಳಿಂದಲೂ ರಕ್ಷಣೆ ಕೋರಿ ಪೊಲೀಸರಿಗೆ ಅರ್ಜಿ ಸಲ್ಲಿಸಿ. ಯಾವುದೇ ಕಾರಣಕ್ಕೂ ನಿಮ್ಮ ಪತಿ ನಿಮ್ಮ ತಂಗಿಯನ್ನು ಮದುವೆ ಆಗಲು ಒಪ್ಪಲೇ ಬೇಡಿ. ಒಬ್ಬ ಪತ್ನಿ ಬದುಕಿರುವಾಗ ಆಕೆಯಿಂದ ವಿಚ್ಛೇದನ ಪಡೆಯದೇ ಇನ್ನೊಂದು ಮದುವೆ ಆಗುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. ನಿಮಗೆ ಆತ ವಿಚ್ಛೇದನ ಕೊಡುತ್ತೇನೆ ಎಂದು ಹೆದರಿಸಿದರೆ ನೀವು ಹೆದರಬೇಡಿ. ಇಂತಹ ವ್ಯಕ್ತಿಯ ಜತೆ ವೈವಾಹಿಕ ಸಂಬಂಧ ಇಟ್ಟುಕೊಂಡು ನಿಮಗೆ ಬರುವ ಲಾಭವಾದರೂ ಏನು? ಮೇಲಾಗಿ ವಿಚ್ಛೇದನವನ್ನು ಯಾರೂ ಯಾರಿಗೂ ಕೊಡಲಾಗುವುದಿಲ್ಲ. ವಿಚ್ಛೇದನ ಕೊಡುವ ಅಧಿಕಾರ ಇರುವುದು ನ್ಯಾಯಾಲಯಕ್ಕೆ ಮಾತ್ರ. ತಾನೇ ತಪ್ಪು ಮಾಡಿ, ವಿಚ್ಛೇದನ ಪಡೆಯುವ ಅಧಿಕಾರ ಯಾರಿಗೂ ಇರುವುದಿಲ್ಲ. ಆತ ಪ್ರಕರಣ ದಾಖಲಿಸಲಿ. ನೀವು ಧೈರ್ಯವಾಗಿ ಎದುರಿಸಿ. ಆತನನ್ನು ಪೋಷಿಸುವುದನ್ನು ನಿಲ್ಲಿಸಿ.
  • ನಾವು ಮೂವರು ಸಹೋದರಿಯರು. ನಮ್ಮ ತಂದೆ ತಾಯಿಯನ್ನು ಸಾಯುವವರೆಗೆ ನಾನೇ ನೋಡಿಕೊಂಡೆ. ಅವರ ಎಲ್ಲ ಖರ್ಚುಗಳನ್ನೂ ನಾನೇ ಹದಿನೈದು ವರ್ಷ ನೋಡಿಕೊಂಡೆ. ಸುಮಾರು ಐವತ್ತು ಲಕ್ಷ ಖರ್ಚು ಮಾಡಿದ್ದೇನೆ. ಲೆಕ್ಕ ಪತ್ರ ಇದೆ. ಈಗ ಹತ್ತು ವರ್ಷದ ಕೆಳಗೆ ನಮ್ಮ ತಂದೆ ತೀರಿಕೊಂಡರು. ನಮ್ಮ ತಾಯಿ ತೀರಿಕೊಂಡು ಆರು ತಿಂಗಳಾಗಿದೆ. ನಮ್ಮ ತಂದೆಗೆ ಸೇರಿದ ಒಂದು ಮನೆ ಇದೆ. ಒಂದು ಕೋಟಿ ರೂಪಾಯಿ ಬೆಲೆ ಆಗಬಹುದು. ಈಗ ನನ್ನ ಅಕ್ಕಂದಿರು ಇಬ್ಬರೂ ಅವರಿಗೂ ಮನೆಯಲ್ಲಿ ಸಮಭಾಗ ಬೇಕು ಎನ್ನುತ್ತಿದ್ದಾರೆ. ಅವರಿಬ್ಬರಿಗೂ ಪೆನ್ಷನ್ ಬರುತ್ತದೆ. ನನಗೆ ಏನೂ ವ್ಯವಸ್ಥೆ ಇಲ್ಲ. ನನ್ನ ಹಣವೆಲ್ಲಾ ಖಾಲಿ ಆಗಿದೆ. ಅವರನ್ನು ಲೆಕ್ಕ ಪತ್ರ ನೋಡಿ ಎಂದರೆ ಅಪ್ಪ ಅಮ್ಮನಿಗೆ ಅಷ್ಟು ಖರ್ಚು ಮಾಡು ಎಂದು ನಿನಗೆ ಯಾರು ಹೇಳಿದರು? ನಿನ್ನ ಹುಚ್ಚು. ದೊಡ್ಡಸ್ತಿಕೆಗೆ ಖರ್ಚು ಮಾಡಿದ್ದಿ. ಮನೆಯಲ್ಲಿ ಮೂವರಿಗೂ ಸಮಪಾಲು ಎನ್ನುತ್ತಿದ್ದಾರೆ. ಇದು ನ್ಯಾಯವೇ? ನಾನು ಏನು ಮಾಡಬೇಕು ತಿಳಿಸಿ.

ಪಾಲಕರನ್ನು ನೋಡಿಕೊಂಡ ನಿಮ್ಮ ಬಗ್ಗೆ ನಿಜವಾಗಿಯೂ ಹೆಮ್ಮೆ ಎನ್ನಿಸುತ್ತಿದೆ. ಕಾನೂನಿನ ಪ್ರಕಾರ ಹೋದರೆ ನಿಮ್ಮ ತಂದೆಯ ಆಸ್ತಿಯಲ್ಲಿ ನೀವು ಮೂವರು ಹೆಣ್ಣು ಮಕ್ಕಳಿಗೂ ತಲಾ ಮೂರನೇ ಒಂದು ಸಮಭಾಗ ಇರುತ್ತದೆ. ತಂದೆ ತಾಯಿಗೆ ಖರ್ಚು ಮಾಡಿದ ಹಣ ನಿಮಗೆ ವಾಪಸ್ ಆಗುವುದು ಕಷ್ಟ. ನೀವು ಮೊದಲಿಗೆ ಈ ಬಗ್ಗೆ ಸಹೋದರಿಯರ ಜತೆ ಸೇರಿ ಒಪ್ಪಂದದ ಪತ್ರ ಮಾಡಿಕೊಂಡಿದ್ದರೆ ಚೆನ್ನಾಗಿತ್ತು. ಈಗ ನೀವು ಮನೆ ಆಸ್ತಿಯ ವಿಭಾಗಕ್ಕೆ ನಿಮ್ಮ ಸೋದರಿಯರ ವಿರುದ್ಧ ದಾವೆ ಹಾಕಿ. ಅದರಲ್ಲಿ ಈವರೆಗೆ ಆಗಿರುವ ಖರ್ಚನ್ನೂ ತೋರಿಸಿ. ಅದನ್ನೂ ಮೂರು ಭಾಗ ಮಾಡಬೇಕೆಂದು ನ್ಯಾಯಾಲಯದಲ್ಲಿ ಕೇಳಿಕೊಳ್ಳಿ. ದಾವೆಯಲ್ಲಿ ನಿಮ್ಮ ಸೋದರಿಯರಿಗೆ ನೊಟೀಸು ಜಾರಿ ಆದಮೇಲೆ, ದಾವೆಯನ್ನು ಮಧ್ಯಸ್ಥಿಕೆಗೆ ಕಳಿಸಬೇಕೆಂದು ನ್ಯಾಯಾಲಯವನ್ನು ಕೇಳಿಕೊಳ್ಳಿ. ಅಲ್ಲಿ ಮಧ್ಯಸ್ಥಿಕೆಗಾರರ ಸಹಾಯದಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಬಹುದು. ನಿಮ್ಮ ಸೋದರಿಯರು ರಾಜಿ ಸೂತ್ರಕ್ಕೆ ಒಪ್ಪದೇ ಹೋದರೆ ಧೈರ್ಯವಾಗಿ ದಾವೆ ನಡೆಸಿ. ಕಾನೂನಿನ ಆದೇಶ ಏನು ಎನ್ನುವುದಾದರೂ ತಿಳಿಯುತ್ತದೆ.

  • ನಾನು ಮೂರು ಹೆಣ್ಣು ಮಕ್ಕಳ ತಂದೆ. ನನಗೆ ನರಗಳ ದೌರ್ಬಲ್ಯವಿದ್ದು ಕಷ್ಟದಿಂದ ಜೀವ ಸಾಗಿಸುತ್ತಿದ್ದೇನೆೆ. ನನ್ನ ಹೆಂಡತಿಯನ್ನು ಸಾಕಿದವರು ಬಹಳ ಶ್ರೀಮಂತರು. ಅವರೇ ನಿಂತು ನಮ್ಮ ಮದುವೆ ಮಾಡಿದ್ದರು. ಆಸ್ತಿ ಕೊಡಿ ಎಂದು ಕೇಳಿದ್ದಕ್ಕೆ ಕೋಪ ಮಾಡಿಕೊಂಡು ದೂರ ಇಟ್ಟಿದ್ದಾರೆ. ಆಸ್ತಿಯನ್ನೆಲ್ಲಾ ನನ್ನ ಹೆಂಡತಿಯ ಸಾಕು ತಂದೆಯ ಸಹೋದರರ ಮಕ್ಕಳು ಮೋಸದಿಂದ ವಿಲ್ ಮತ್ತು ದಾನ ಪತ್ರ ಮಾಡಿಸಿಕೊಂಡಿದ್ದಾರೆ. ಈಗ ನನ್ನ ಹೆಂಡತಿ ಕೇಸು ಹಾಕಬಹುದೇ?  ನಾವು ಬೇಕಿದ್ದರೆ ನನ್ನ ಹೆಂಡತಿಯ ತಂದೆ ತಾಯಿಯನ್ನು ಸಾಕಿ ಸಲಹಿ ಪೋಷಣೆ ಮಾಡುತ್ತೇವೆ.

ಸಾಕು ಮಕ್ಕಳಿಗೆ ತಂದೆ ತಾಯಿಯ ಆಸ್ತಿಯಲ್ಲಿ ಅವರು ಬದುಕಿರುವಾಗ ಅಥವಾ ತೀರಿಕೊಂಡಾಗ ಯಾವ ಹಕ್ಕೂ ಇರುವುದಿಲ್ಲ. ದತ್ತು ಮಕ್ಕಳಾಗಿದ್ದರೆ ಕಾನೂನು ಬೇರೆ. ನಿಮ್ಮ ಪತ್ನಿಗೆ ಯಾವುದೇ ರೀತಿಯಲ್ಲೂ ಎಂದಿಗೂ ಆಸ್ತಿಯಲ್ಲಿ ಯಾವುದೇ ಹಕ್ಕೂ ಬರುವುದಿಲ್ಲ. ಒಂದು ವೇಳೆ ವಿಲ್ ಅಥವಾ ದಾನ ಪತ್ರ ಸಕ್ರಮವಾಗಿಲ್ಲ ಎಂದು ನ್ಯಾಯಾಲಯದಲ್ಲಿ ತೀರ್ಮಾನ ಆದರೂ, ಸಾಕು ಮಕ್ಕಳಿಗೆ ಹಕ್ಕು ಬರುವುದಿಲ್ಲ.

ಸಾಕು ತಂದೆ ತಾಯಿಗಳ ಸಂಬಂಧಿಗಳಿಗೆ, ಹಿಂದೂ ವಾರಸಾ ಕಾಯ್ದೆಯಂತೆ ಆಸ್ತಿ ಹಂಚಿಕೆ ಆಗುತ್ತದೆ. ನೀವು ನಿಮ್ಮ ಪತ್ನಿಯ ಸಾಕು ತಂದೆ ತಾಯಿಯರನ್ನು ಪೋಷಣೆ ಮಾಡಿದರೂ ಮಾಡದೇ ಇದ್ದರೂ ನಿಮ್ಮ ಪತ್ನಿಗೆ ಅವರ ಆಸ್ತಿಯಲ್ಲಿ ಭಾಗ ಬರುವುದಿಲ್ಲ. ತಾವು ಆಸ್ತಿ ಕೇಳಿ ವಿಶ್ವಾಸ ಕಳೆದುಕೊಂಡಿದ್ದೀರಿ. ಈಗಲೂ ಅವರ ಪ್ರೀತಿ ವಿಶ್ವಾಸ ಗಳಿಸಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು. ಅವರೇ ಮನಸ್ಸು ಬದಲಾಯಿಸಿ ಏನಾದರೂ ಕೊಟ್ಟರೆ ಅದು ನಿಮ್ಮ ಅದೃಷ್ಟ. ಕೇಸು ಹಾಕಿ ಪ್ರಯೋಜನವಿಲ್ಲ.