ಇನ್ನು ಮುಂದೆ ದೇವಾಲಯಗಳ ಆದಾಯದ ಒಂದು ಪಾಲು ಹಣ, ರಾಜ್ಯ ಸರ್ಕಾರಕ್ಕೆ ಕೊಡುವುದನ್ನು ಕಡ್ಡಾಯಗೊಳಿಸುವ 2024ನೇ ಸಾಲಿನ ‘ಕರ್ನಾಟಕ ಧಾರ್ವಿುಕ ಸಂಸ್ಥೆಗಳ ಮತ್ತು ಧರ್ವದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ’ಕ್ಕೆ ವಿಧಾನಸಭೆ ಒಪ್ಪಿಗೆ ನೀಡಿದೆ. 10 ಲಕ್ಷ ರೂ.ಗಳಿಂದ 1 ಕೋಟಿ ರೂ.ವರೆಗೆ ವಾರ್ಷಿಕ ಆದಾಯ ಇರುವ ದೇವಸ್ಥಾನಗಳು ಸರ್ಕಾರಕ್ಕೆ ತಮ್ಮ ಆದಾಯದ ಶೇಕಡಾ 5ರಷ್ಟು ಹಣವನ್ನು ಕೊಡಬೇಕು, 1 ಕೋಟಿ ರೂ.ಗಿಂತ ಹೆಚ್ಚು ಆದಾಯ ಇರುವ ದೇವಸ್ಥಾನಗಳು ಸರ್ಕಾರಕ್ಕೆ ಶೇಕಡಾ 10ರಷ್ಟು ಕೊಡುಗೆ ನೀಡಬೇಕು ಎಂಬುದಾಗಿ ಈ ವಿಧೇಯಕದಲ್ಲಿ ತಿದ್ದುಪಡಿ ತರಲಾಗಿದೆ.
ರಾಜ್ಯದಲ್ಲಿರುವ ದೇವಸ್ಥಾನಗಳನ್ನು ಅವುಗಳ ವಾರ್ಷಿಕ ಆದಾಯಕ್ಕೆ ಅನುಗುಣವಾಗಿ ಎ, ಬಿ ಮತ್ತು ಸಿ ದರ್ಜೆಯಾಗಿ ವಿಂಗಡಿಸಲಾಗಿದೆ. ಎ ದರ್ಜೆಯ 205, ಬಿ ದರ್ಜೆಯ 193 ಮತ್ತು ಸಿ ದರ್ಜೆಯ 34,165 ದೇವಸ್ಥಾನಗಳು ಇವೆ. 25 ಲಕ್ಷಕ್ಕಿಂತ ಅಧಿಕ ಆದಾಯ ಇರುವಂಥವನ್ನು ಎ ವರ್ಗ, 5 ಲಕ್ಷ ರೂ.ನಿಂದ 25 ಲಕ್ಷ ರೂ.ವರೆಗೆ ಆದಾಯ ಇರುವಂಥವನ್ನು ಬಿ ವರ್ಗ ಮತ್ತು 5 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ದೇವಾಲಯಗಳನ್ನು ಸಿ ವರ್ಗ ಎಂದು ವಿಂಗಡಿಸಲಾಗಿದೆ. 2022-23ನೇ ಸಾಲಿನಲ್ಲಿ ಎ ವರ್ಗದ ದೇವಾಲಯಗಳಿಂದ 675.55 ಕೋಟಿ ರೂ. ಮತ್ತು ಬಿ ದರ್ಜೆ ದೇವಾಲಯಗಳಿಂದ 33.31 ಕೋಟಿ ರೂ. ಆದಾಯ ಬಂದಿದೆ.
ಸುಮಾರು 40 ಸಾವಿರ ಅರ್ಚಕರಿದ್ದು ಅವರಿಗೆ ವಾರ್ಷಿಕ 60 ಸಾವಿರ ರೂ. ತಸ್ತೀಕ್ ಹಣವನ್ನು ಸರ್ಕಾರ ನೀಡುತ್ತಿದೆ. ಅರ್ಚಕರು ಮೃತಪಟ್ಟರೆ ಅವರ ಅವಲಂಬಿತ ಕುಟುಂಬಸ್ಥರಿಗೆ 2 ಲಕ್ಷ ರೂ. ನೀಡಲಾಗುತ್ತಿದೆ. ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪಿಯುಸಿವರೆಗೆ 5 ಸಾವಿರ ರೂ. ಮತ್ತು ಸ್ನಾತಕೋತ್ತರ, ವೃತ್ತಿಪರ ಕೋರ್ಸ್ ಅಧ್ಯಯನಕ್ಕೆ 50 ಸಾವಿರ ರೂ. ಕೊಡಲಾಗುತ್ತಿದೆ. ಅರ್ಚಕರಿಗೆ ನೀಡುತ್ತಿರುವ ತಸ್ತೀಕ್ ಮೊತ್ತ ತೀರಾ ಅಲ್ಪ. ಅದನ್ನು ಈಗಿನ ಜೀವನ ನಿರ್ವಹಣಾ ಮಟ್ಟಕ್ಕೆ ಅಗತ್ಯವಿರುವಷ್ಟು ಹೆಚ್ಚಿಸುವುದಕ್ಕಾಗಿ ಸರ್ಕಾರ ಈಗ ಸಂಗ್ರಹಿಸಲು ಹೊರಟಿರುವ ಹೆಚ್ಚುವರಿ ಮೊತ್ತವನ್ನು ಬಳಸಿದರೆ ಅದರಲ್ಲಿ ತಪ್ಪೇನೂ ಇಲ್ಲ.
ಪ್ರತಿದಿನ ಸಾವಿರಾರು ಭಕ್ತರು ಆಗಮಿಸುವ ಪ್ರಸಿದ್ಧ ದೇವಾಲಯಗಳಲ್ಲಿ ಕೂಡ ಮೂಲಸೌಕರ್ಯಗಳ ಕೊರತೆ ಇದೆ. ‘ಶಕ್ತಿ’ ಯೋಜನೆ ಜಾರಿಯಾದ ಬಳಿಕವಂತೂ ಈ ಸಂಖ್ಯೆ ಸುಮಾರು ಶೇಕಡಾ 25-30ರಷ್ಟು ಹೆಚ್ಚಾಗಿದೆ. ಅದರಲ್ಲೂ ಮಹಿಳೆಯರ ಸಂಖ್ಯೆ ಗಣನೀಯವಾಗಿ ಜಾಸ್ತಿಯಾಗಿದೆ. ತತ್ಪರಿಣಾಮ, ದೇವಸ್ಥಾನಗಳ ಆದಾಯವೂ ಹೆಚ್ಚಿದೆ. ಆದರೆ ಬಹುತೇಕ ಭಕ್ತರ ಮನಸ್ಸಿನಲ್ಲಿ ಒಂದು ಸಂಶಯ ಮೊಳಕೆಯೊಡೆದಿದೆ. ಇಷ್ಟೆಲ್ಲ ಆದಾಯ ಇದ್ದರೂ ಮೂಲಸೌಕರ್ಯಗಳು ಅಷ್ಟಕ್ಕಷ್ಟೇ ಇರುವಾಗ, ಈ ಹಣವೆಲ್ಲ ಎಲ್ಲಿ ಹೋಗುತ್ತದೆ? ಅನ್ಯಧರ್ಮದ ಧಾರ್ವಿುಕ ಸ್ಥಳಗಳ ಅಭಿವೃದ್ಧಿಗೆ ಈ ಹಣ ಹೋಗುವುದಾದರೆ ಭಕ್ತರು ಹುಂಡಿಗೆ ಏಕೆ ಹಣ ಹಾಕಬೇಕು ಎನ್ನುವ ವಾದವನ್ನೂ ಕೆಲವರು ಮುಂದಿಟ್ಟಿದ್ದಾರೆ. ಸರ್ಕಾರ ಇಂತಹ ಸಂಶಯಗಳಿಗೆ ಆಸ್ಪದವಾಗದಂತೆ ಎಚ್ಚರ ವಹಿಸಲಿ. ಅನ್ಯ ಉದ್ದೇಶ ಅಥವಾ ಅನ್ಯ ಯೋಜನೆಗಳಿಗೆ ಈ ಹಣವನ್ನು ಬಳಸಿಕೊಳ್ಳದೇ ಇರಲಿ. ಈಗ ಸಂಗ್ರಹಿಸಲು ಹೊರಟಿರುವ ಹಣವನ್ನು ದೇವಸ್ಥಾನಗಳ ಜೀಣೋದ್ಧಾರಕ್ಕೆ ಮತ್ತು ವಸತಿ ಮತ್ತಿತರ ಮೂಲಸೌಕರ್ಯಗಳನ್ನು ಕಲ್ಪಿಸುವುದಕ್ಕೆ ಸಂಪೂರ್ಣವಾಗಿ ಬಳಸಿಕೊಳ್ಳಲಿ. ಗ್ಯಾರಂಟಿ ಯೋಜನೆಗಳಿಂದ ಆಗಿರಬಹುದಾದ ಆರ್ಥಿಕ ಹೊರೆಯನ್ನು ತುಂಬಿಸಿಕೊಳ್ಳುವುದಕ್ಕಾಗಿ ಇಂತಹ ಕಾರ್ಯಗಳಿಗೆ ಕೈಹಾಕದೇ ಇರಲಿ.