ಅಂಕಣ

ಮನೆಗಳಷ್ಟೇ ಅಲ್ಲ ಮನಸುಗಳೂ ಖಾಲಿ ಖಾಲಿ...

ಬಾಬುಪ್ರಸಾದ್​ ಮೋಡಿಸ್​
ಹೊಸ ಬಗೆಯ ಸಮಸ್ಯೆಗಳಿಗೆ ಪರಿಹಾರವೂ ವಿಭಿನ್ನವಾಗಿರಬೇಕು. ಈ ನಿಟ್ಟಿನಲ್ಲಿ ಕೇರಳದ್ದೊಂದು ಮಾದರಿ ನಡೆ. ದೇಶದಲ್ಲೇ ಮೊದಲ ಹಿರಿಯ ನಾಗರಿಕರ ಆಯೋಗ ಅಲ್ಲಿ ರಚನೆಯಾಗಿದೆ. ಹಿರಿಯ ನಾಗರಿಕರಿಗೆ ಕಾನೂನು, ಆರೋಗ್ಯ, ಆರೈಕೆಯ ನೆರವು ಸಿಗಲಿದೆ. ವಯಸ್ಸಿನ 60ರ ನಂತರ ಬದುಕನ್ನು ಮರಳಿ ಅರಳಿಸಿಕೊಳ್ಳಲು ಇದು ಉತ್ತಮ ಹೆಜ್ಜೆ.

ಇಡೀ ಹಳ್ಳಿಯ ನಿರವತೆಯಲ್ಲಿ ಆ ನಿಟ್ಟುಸಿರುಗಳು ಬಂದು ತಟ್ಟುತ್ತವೆ. ಅಲ್ಲಿ ವಿಷಾದವಿದೆ, ಮಡುಗಟ್ಟಿದ ದುಃಖವಿದೆ, ಹೇಳಿಕೊಳ್ಳದೆ ಉಳಿದ ಮಾತುಗಳ ರಾಶಿ ಇದೆ, ದುಃಖ, ಕಣ್ಣೀರು, ಮೌನ ಇದೆ. ಮುಂದಿನ ದಿನಗಳು ಹೇಗೆ ಎಂಬ ಆತಂಕವಿದೆ, ತಮ್ಮ ಯೋಗಕ್ಷೇಮವನ್ನು ಯಾರಾದರೂ ಕೇಳುವವರು ಇದ್ದಾರೆಯೇ ಎಂಬ ಕಾತರದ ನಿರೀಕ್ಷೆ ಕಣ್ಣುಗಳಲ್ಲಿ ತುಂಬಿಕೊಂಡು, ಎದೆಭಾರವಾಗಿದೆ. ಕೆಲವರಿಗೆ ಬ್ಯಾಂಕ್ ಖಾತೆ ತುಂಬ ಹಣವಿದೆ, ಖರ್ಚು ಮಾಡುವ ಶಕ್ತಿಯಿಲ್ಲ. ಇನ್ನು ಕೆಲವರಿಗೆ ಚಿಕಿತ್ಸೆಗಾಗಿಯೂ ಹಣ ಹೊಂದಿಸುವ ವೇದನೆ. 60 ವರ್ಷದ ನಂತರ ಅರಳು ಮರಳಲ್ಲ, ಜೀವನ ಮರಳಿ ಅರಳುವ ಹೊತ್ತು ಎನ್ನುತ್ತಾರೆ. ಆದರೆ, ಇವರುಗಳ ಹೃದಯದಲ್ಲಿ ಚಿಂತೆಯೆಂಬ ಕಾರ್ಖಾನೆ ಸದಾ ಕೆಲಸ ಮಾಡುತ್ತಿದ್ದರೆ ಬದುಕು ಅಸಹನೀಯವಾಗುತ್ತದೆ.

ಕಾಲಚಕ್ರದ ಮಹಿಮೆಯೇ ಹಾಗಲ್ಲವೆ? ಬಾಲ್ಯ, ಯೌವನ, ಮಧ್ಯವಯಸ್ಸು, ವೃದ್ಧಾಪ್ಯ... ಎಲ್ಲವೂ ಸರಸರನೆ ಬಂದು ಆವರಿಸಿಕೊಳ್ಳುತ್ತದೆ. ಯೌವನದಲ್ಲಿ ಎಷ್ಟೇ ಮೆರೆದರೇನೂ ಚಿಗುರೆಲೆ ಒಮ್ಮೆ ಹಣ್ಣೆಲೆಯಾಗಲೇಬೇಕು. ಇದು ಸೃಷ್ಟಿಯ ನಿಯಮ. ಅದಕ್ಕೆಂದೇ, ‘ಯಾವುದೂ ಇದ್ದಾಂಗ ಇರಂಗಿಲ್ಲ, ಬಂದದ್ದು ಸ್ವೀಕಾರ ಮಾಡ್ಕೊಂಡು ಇರೋದೇ ಜೀವನ. ಕೂದಲು ಬಿಳಿಯಾದ ಮೇಲೆ ಅದಕ್ಕೆ ಎಷ್ಟೇ ಕಪು್ಪಬಣ್ಣ ಬಳಿದರೂ, ಅದು ಕೆಲದಿನದಲ್ಲೇ ಮತ್ತೆ ಬಿಳಿಯಾಗೋದನ್ನು ತಪ್ಪಿಸಲಿಕ್ಕೆ ಸಾಧ್ಯ ಇಲ್ಲ’ ಅಂತ ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ತಮ್ಮ ಪ್ರವಚನಗಳಲ್ಲಿ ಮತ್ತೆ ಮತ್ತೆ ಹೇಳುತ್ತಿದ್ದರು.

ಜೀವನಪೂರ್ತಿ ಕುಟುಂಬದ, ವೃತ್ತಿಯ ಏಳಿಗೆಗೆ ದುಡಿದ ವ್ಯಕ್ತಿ ಜೀವನದ ಸಂಧ್ಯಾಕಾಲದಲ್ಲಿ ನಿಸ್ತೇಜ ಕಣ್ಣುಗಳಿಂದ, ಶೂನ್ಯ ದೃಷ್ಟಿಯಲ್ಲಿ ಕುಳಿತಾಗ ಮನಸ್ಸಿಗೆ ಹಿಂಸೆ ಆಗುತ್ತದೆ. ಮದುವೆ, ಮುಂಜಿಯ ಗೌಜಿಯಲ್ಲೂ ಫೈಬರ್ ಚೇರ್​ಗಳ ಕೊನೆಯ ಸಾಲಿನ ಮೂಲೆಯಲ್ಲಿ ಕುಳಿತುಕೊಂಡು, ಇಲ್ಲಿ ನೂರಾರು ಜನರಿದ್ದರೂ ‘ಹೇಗಿದ್ದೀರಿ ನೀವು’ ಅಂತ ಯಾರೂ ಮಾತನಾಡಿಸುತ್ತಿಲ್ಲ ಎಂದು ವಿಷಾದಪಡುವ, ಪಾರ್ಕ್​ಗಳ ಬೆಂಚಿನ ಮೇಲೆ ಕುಳಿತು ‘ಯಾವಾಗ ಈ ಮಂಡಿನೋವು ವಾಸಿಯಾಗುವುದೋ’ ಎಂದು ಪರಿತಪಿಸುವ, ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತಲಾಗದೆ ಆಯಾಸವಾದಾಗ ‘ಭಗವಂತ ಏಕೆ ಈ ಪರೀಕ್ಷೆ?’ ಎಂದು ಪ್ರಶ್ನಿಸುವ, ಗೆಳೆಯರೋ, ಸಮಾನವಯಸ್ಕರೋ ಬದುಕಿನ ಯಾತ್ರೆ ಮುಗಿಸಿದಾಗ ಒಂಟಿತನಕ್ಕೆ ಜಾರುವ, ತಮ್ಮವರಿಂದಲೇ ಅನಾದರಕ್ಕೆ ಒಳಗಾದಾಗ ಮರಗುವ ಹಿರಿಯ ನಾಗರಿಕರನ್ನು ನಮ್ಮ ಸುತ್ತಮುತ್ತಲೂ ನೋಡುತ್ತಲೇ ಇದ್ದೇವೆ. ಇದು ಕೆಲವೊಬ್ಬರ ಸಂವೇದನೆಯನ್ನು ಜಾಗೃತಗೊಳಿಸುತ್ತದೆ, ಮತ್ತೆ ಕೆಲವರು ‘ಇದೆಲ್ಲ ಇದ್ದದ್ದೇ’ ಎಂದು ಮಾಮೂಲಿಯಾಗಿ ತೆಗೆದುಕೊಂಡು ಮುಂದೆಸಾಗುತ್ತಾರೆ. ಆದರೆ, ಹಿರಿಯ ನಾಗರಿಕರು ಖುಷಿಯಿಂದ, ಸಮಾಧಾನದಿಂದ, ನೆಮ್ಮದಿಯಿಂದ ಬಾಳಲು ಸಾಧ್ಯವಿದೆ ಎಂಬುದೂ ಸೂರ್ಯನ ಪ್ರಖರ ಬೆಳಕಿನಷ್ಟೇ ಸತ್ಯ.

ಪರಿಸ್ಥಿತಿ ಬದಲಾಗುತ್ತಿದೆ. ವರ್ಷ ಕಳೆದಂತೆ ಭಾರತದಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿದೆ. ದೇಶದಲ್ಲಿ ಪ್ರಸ್ತುತ 60 ವರ್ಷ ಮೇಲ್ಪಟ್ಟವರ ಸಂಖ್ಯೆ 15 ಕೋಟಿಯ ಗಡಿಯನ್ನು ದಾಟಿದೆ. 15 ಕೋಟಿ ಎಂಬುದು ಬಹುದೊಡ್ಡ ಮಾನವ ಸಂಪನ್ಮೂಲವೇ ಹೌದು. 2050ರ ಹೊತ್ತಿಗೆ ಅಂದರೆ ಮುಂದಿನ 25 ವರ್ಷಗಳಲ್ಲಿ ಈ ಸಂಖ್ಯೆ 15 ಕೋಟಿಯಿಂದ 34.7 ಕೋಟಿಗೆ ಹೆಚ್ಚಲಿದೆ. ದೇಶದಲ್ಲೇ ಅತಿ ಹೆಚ್ಚು ವೃದ್ಧರು ಕೇರಳದಲ್ಲಿದ್ದಾರೆ. ಅಲ್ಲಿ ಜನಸಂಖ್ಯೆಯ ಶೇಕಡ 16.5%ರಷ್ಟು 60 ವರ್ಷ ಮೇಲ್ಪಟ್ಟವರು. 2036ರ ಹೊತ್ತಿಗೆ ಜನಸಂಖ್ಯೆಯ ಕಾಲುಭಾಗ (25%) ವೃದ್ಧರಿಂದ ಕೂಡಿರಲಿದೆ. ನಂತರದ ಸ್ಥಾನ ಹಿಮಾಚಲ ಪ್ರದೇಶದ್ದು. ಇಲ್ಲಿ ಜನಸಂಖ್ಯೆಯ 13.9%ರಷ್ಟು 60 ವರ್ಷ ಮೇಲ್ಪಟ್ಟವರು. 2036ರ ಹೊತ್ತಿಗೆ ಇದು 19%ಕ್ಕೆ ಏರಿಕೆಯಾಗಲಿದೆ. ಮಹಾರಾಷ್ಟ್ರದಲ್ಲಿ 11.7%, ಗುಜರಾತ್​ನಲ್ಲಿ 10.1%, ಛತ್ತೀಸ್​ಗಢದಲ್ಲಿ 9.1%, ಕರ್ನಾಟಕದಲ್ಲಿ 6.8%ರಷ್ಟು ಜನಸಂಖ್ಯೆ 60 ವರ್ಷ ಮೇಲ್ಪಟ್ಟವರದ್ದು.

ಈ ಅಂಕಿಸಂಖ್ಯೆ ವಿವರಿಸಲು ಕಾರಣವೆಂದರೆ, ವೃದ್ಧರ ಸಂಖ್ಯೆ ಹೆಚ್ಚಿದಂತೆ ನಮ್ಮ ಸಾಮಾಜಿಕ ಯೋಜನೆಗಳು, ಸರ್ಕಾರ ಮತ್ತು ಸಮುದಾಯದ ಕಾಳಜಿ, ಮನುಷ್ಯನ ಅಂತಃಕರಣ ಎಲ್ಲವೂ ಹೊಸ ಮತ್ತು ಸಕಾರಾತ್ಮಕ ದಿಕ್ಕಿನಲ್ಲಿ ಸಾಗಬೇಕು. ಈಗಲೂ ನಮ್ಮಲ್ಲಿ ಹಿರಿಯ ನಾಗರಿಕರ ಬಗ್ಗೆ ತುಂಬ ಪೂರ್ವಗ್ರಹಗಳಿದ್ದು, ಅವುಗಳನ್ನು ತೊರೆದು ಚಿಂತನೆಯ ದಿಕ್ಕನ್ನೂ ಬದಲಿಸಿಕೊಳ್ಳಬೇಕಿದೆ.

ವಯಸ್ಸಾದವರು ಹೊರೆ. ಅವರ ಕಾಲ ಮುಗಿದುಹೋಯಿತು, ಅವರ ಮಾತೇಕೆ ಕೇಳಬೇಕು? ವಯಸ್ಸಾದವರ ಮೇಲೆ ಖರ್ಚು ಏಕೆ ಮಾಡಬೇಕು? ವಯಸ್ಸಾದವರು ತಮ್ಮ ಪಾಡಿಗೆ ತಾವು ಇರಬೇಕು. ವಯಸ್ಸಾದವವರು ಪ್ರತ್ಯೇಕವಾಗಿ ವಾಸಿಸಬೇಕು. ವಯಸ್ಸಾದವರು ಆಸ್ತಿ ಮಾತ್ರ ಬಿಟ್ಟುಕೊಡಬೇಕು. ಆದರೆ, ಕುಟುಂಬದ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ಹಿರಿಯ ನಾಗರಿಕರು ತಮ್ಮ ಕುಟುಂಬದವರಿಗೆ ಯಾವುದೇ ಸಲಹೆ, ಸೂಚನೆ ನೀಡಬಾರದು. ಹೀಗೆ ಈ ಬಗೆಯಲ್ಲಿ ಸೃಷ್ಟಿಸಿಕೊಂಡ ಹಲವು ಪೂರ್ವಗ್ರಹಗಳೇ, ಆಲೋಚನೆಗಳೇ ನೆಮ್ಮದಿಯನ್ನು ಕದಡಿಬಿಟ್ಟಿವೆ.

ನಮ್ಮ ಆಲೋಚನೆಯ ದಿಕ್ಕನ್ನು ಹೀಗೆ ಬದಲಿಸಿಕೊಂಡರೆ.... (ಇದು ಅಪ್ಪಟ ವಾಸ್ತವವೂ ಹೌದು)

ಹಿರಿಯರು ಹೊರೆಯಲ್ಲ. ಅವರು ಅನುಭವ ಮತ್ತು ಜ್ಞಾನದ ಗಣಿಗಳು. ಹಿರಿಯರ ಜೀವನಾನುಭವ ಕೇಳಿಸಿಕೊಂಡು, ಅದರ ಸಾರ್ಥಕ ಅಂಶಗಳನ್ನು ಅಳವಡಿಸಿಕೊಂಡರೆ ಬದುಕು ನಂದನವನ.

ಹಿರಿಯರು ಎಟಿಎಂಗಳಲ್ಲ. ಅವರು ಜೀವನಪೂರ್ತಿ ದುಡಿದು, ಗಳಿಸಿದ ಹಣ, ಸಂಪತ್ತನ್ನು ಬದುಕಿನ ಸಂಧ್ಯಾಕಾಲದಲ್ಲಿ ಅನುಭವಿಸಲು ಅವರಿಗೆ ಬಿಟ್ಟುಬಿಡಬೇಕು.

ಹಿರಿಯರು ಕೌಶಲಗಳ ಆಗರ. ಜೀವನಪದ್ಧತಿ, ಸಂಪ್ರದಾಯ, ಅಧ್ಯಾತ್ಮ, ನೈತಿಕತೆ, ಮೌಲ್ಯ ಸೇರಿದಂತೆ ಹಲವು ಗಟ್ಟಿ ಅನುಭವಗಳನ್ನು, ಕೌಶಲಗಳನ್ನು ಅವರು ಹಂಚಿಕೊಂಡರೆ ಅದರಿಂದ ಸಮುದಾಯಕ್ಕೇ ಲಾಭ.

ಹಿರಿಯರಿಗೂ ಜೀವನೋತ್ಸಾಹವಿದೆ. ಏಕೆಂದರೆ, ಪುರುಸೊತ್ತಾಗಿ ಬದುಕಲು ಸಮಯ ಸಿಗುವುದೇ 60ರ ನಂತರ. ಹಾಗಾಗಿ, ಅವರ ಆಸಕ್ತಿ, ಕೌಶಲಗಳನ್ನು ಗೌರವಿಸೋಣ.

ಭಾರತೀಯ ಕುಟುಂಬ ಪದ್ಧತಿಯಲ್ಲಂತೂ ಹಿರಿಯರಿಗೆ ತುಂಬ ಪೂಜ್ಯ ಸ್ಥಾನ. ಹಾಗಾಗಿ, ಅವರಿಗೊಂದು ಮಾತು ಕೇಳಿ, ಪ್ರಮುಖ ನಿರ್ಧಾರಗಳನ್ನು ತಳೆದರೆ ಅದರಿಂದ ಶ್ರೇಯಸ್ಸೇ ಆಗುತ್ತದೆ.

ಹಿರಿಯರ ಬದುಕಿನಿಂದ ಕಲಿಯೋಣ. ಯಾವುದೋ ವ್ಯಕ್ತಿತ್ವ ವಿಕಸನ ತರಬೇತಿಯಲ್ಲಿ ಕಲಿಯುವುದಕ್ಕಿಂತ ಹೆಚ್ಚು ಹಿರಿಯರ ಬದುಕಿನಿಂದ ಕಲಿಯಲು ಸಾಧ್ಯವಿದೆ. ಅದನ್ನು ಅವಕಾಶವಾಗಿ ಪರಿಗಣಿಸಿ, ಸದುಪಯೋಗ ಪಡಿಸಿಕೊಳ್ಳೋಣ.

್ಝರಿಯರ ಬಗ್ಗೆ ವಿನಮ್ರತೆ ಇರಲಿ. ಏಕೆಂದರೆ, ಎಲ್ಲರಿಗೂ ಒಂದಿಲ್ಲ ಒಂದು ದಿನ ವಯಸ್ಸಾಗುತ್ತದೆ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಹಾಗಾಗಿ, ವಯಸ್ಸಾದವರ ಬಗ್ಗೆ ಪ್ರೀತಿ ಇರಲಿ, ಅಕ್ಕರೆ ಇರಲಿ. ‘ನೀವು ನಮಗೆ ಆಧಾರ’ ಎಂಬ ಭದ್ರ ಭಾವನೆ ಇರಲಿ.

ಭಾವನಾತ್ಮಕ ಬೆಂಬಲ ನೀಡೋಣ. ವಯಸ್ಸಾದವರು ಬಯಸೋದು ನಾಲ್ಕು ಒಳ್ಳೆಯ ಮಾತು ಮತ್ತು ಒಂದಿಷ್ಟು ಭಾವನಾತ್ಮಕ ಬೆಂಬಲ ಅಷ್ಟೇ. ಆ ನಿಜವಾದ ಕಾಳಜಿಯನ್ನು ತೋರಿ, ಅವರ ಬದುಕಿನ ಘನತೆಯನ್ನು ಎತ್ತಿಹಿಡಿಯೋಣ.

ಆಸ್ತಿ ಸಂಪತ್ತಿನ ವಿಷಯದಲ್ಲಿ ಕಲಹ ಮಾಡಿಕೊಳ್ಳದೆ ಸ್ವಂತ ಪರಿಶ್ರಮದಿಂದ ಸಂಪತ್ತು ಸೃಷ್ಟಿಸೋಣ. ‘ನೀವೇ ನಮ್ಮ ಆಸ್ತಿ’ ಎಂದು ಹಿರಿಯರಿಗೆ ಹೇಳಿದಾಗ, ಅವರಿಂದ ಸಿಗುವ ಆಶೀರ್ವಾದ ಬದುಕಿನಲ್ಲಿ ಪವಾಡವನ್ನೇ ಸೃಷ್ಟಿಸಬಲ್ಲದು.

ಶ್ರವಣಕುಮಾರನಾಗದಿದ್ದರೂ ಕಲಹಕುಮಾರ/ಕುಮಾರಿ ಆಗುವುದು ಬೇಡ. ಒಂದು ವೇಳೆ ಅನಿವಾರ್ಯವಾಗಿ ದೂರದಲ್ಲಿ ಇದ್ದರೂ, ಅವರ ಕಾಳಜಿ ನಿಟ್ಟಿನಲ್ಲಿ ನಿರ್ಲಕ್ಷ್ಯ ಬೇಡ. ತಂದೆ-ತಾಯಿ, ಅಜ್ಜ-ಅಜ್ಜಿ, ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಮಮ್ಮ ಇವರೆಲ್ಲ ಬದುಕಿನ ಬಾಂಧವ್ಯಯಾತ್ರೆಯ ಸೂತ್ರಧಾರರು. ನಮ್ಮ ಉತ್ಕರ್ಷಕ್ಕೆ ಸಂತೋಷ ಪಡುವ, ಕಷ್ಟವಾದಾಗ ನೋವು ಅನುಭವಿಸುವ ಇಂಥ ಭಾವನಾತ್ಮಕ ಶಕ್ತಿಗಳನ್ನು ಎಂದೆಂದಿಗೂ ಗೌರವಿಸೋಣ.

ಈಗ ಮತ್ತೆ ಕೇರಳಕ್ಕೆ ಬರೋಣ. ಕೇರಳದಲ್ಲಿ 60 ವರ್ಷ ಮೇಲ್ಪಟ್ಟವರ ಸಂಖ್ಯೆ 56 ಲಕ್ಷ. ಇಲ್ಲಿನ 21 ಲಕ್ಷಕ್ಕಿಂತಲೂ ಅಧಿಕ ಮನೆಗಳಲ್ಲಿ ಬರೀ ವೃದ್ಧರಿದ್ದಾರೆ. ಮಕ್ಕಳು ಉದ್ಯೋಗದ ನಿಮಿತ್ತ ವಿದೇಶಗಳಲ್ಲಿ ಇರುವುದರಿಂದ 12 ಲಕ್ಷ ಮನೆಗಳಿಗೆ ಬೀಗ ಬಿದ್ದಿದೆ. ಹಳ್ಳಿಗಳು ಯುವಕರು-ಯುವತಿಯರಿಲ್ಲದೆ ಬಿಕೋ ಎನ್ನುತ್ತಿವೆ. ರಾಜ್ಯದ 3.43 ಕೋಟಿ ಜನಸಂಖ್ಯೆಯಲ್ಲಿ ಪ್ರತಿ ಐದು ಮನೆಯಲ್ಲಿ ಒಂದು ಮನೆಯ ಕನಿಷ್ಠ ಒಬ್ಬ ಸದಸ್ಯ ದುಡಿಯಲು ಹೊರದೇಶದಲ್ಲಿದ್ದಾನೆ. ಹೀಗಿರುವಾಗ ಹಿರಿಯರನ್ನು ನೋಡಿಕೊಳ್ಳುವವರು ಯಾರು? ಇದೊಂದು ದೊಡ್ಡ ಸಾಮಾಜಿಕ ಪ್ರಶ್ನೆಯಾಗಿ ಉದ್ಭವವಾಗಿದೆ.

ಅದಕ್ಕೆಂದೆ, ಕೇರಳ ಸರ್ಕಾರ ದೇಶದಲ್ಲೇ ಮೊದಲ ‘ಹಿರಿಯ ನಾಗರಿಕರ ಆಯೋಗ’ವನ್ನು 2025ರ ಮಾರ್ಚ್​ನಲ್ಲಿ ಸ್ಥಾಪಿಸಿದೆ. ಹಿರಿಯ ನಾಗರಿಕರ ಹಕ್ಕುಗಳನ್ನು ರಕ್ಷಿಸುವುದು, ಹಿರಿಯ ನಾಗರಿಕರ ಪುನರ್ವಸತಿ, ರಕ್ಷಣೆ, ಹಿರಿಯ ನಾಗರಿಕರ ಒಳಗೊಳ್ಳುವಿಕೆ, ಅವರ ಘನತೆಯ ರಕ್ಷಣೆ ಮತ್ತು ಹಿರಿಯ ನಾಗರಿಕರು ತಮ್ಮ ಜ್ಞಾನ, ಕೌಶಲವನ್ನು ಸಮಾಜಕ್ಕೆ ಕೊಡುಗೆ ನೀಡಲು ಈ ಆಯೋಗ ಪ್ರೋತ್ಸಾಹ ನೀಡುತ್ತದೆ. ಮುಖ್ಯವಾಗಿ, ಹಿರಿಯರಿಗಾಗಿ ಆರೈಕೆ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಆಸ್ತಿ ವಿವಾದ ಅಥವಾ ದುರುಪಯೋಗದ ಸಂದರ್ಭದಲ್ಲಿ ಅವರಿಗೆ ಕಾನೂನು ನೆರವು ನೀಡಲಾಗುತ್ತಿದೆ. ತಂದೆ-ತಾಯಿಯನ್ನು ನೋಡಿಕೊಳ್ಳದ ಮಕ್ಕಳಿಗೆ ಆಸ್ತಿಹಕ್ಕನ್ನು ನಿರಾಕರಿಸುವ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಕೌನ್ಸೆಲಿಂಗ್, ವೈದ್ಯರು ಮತ್ತು ನರ್ಸ್​ಗಳ ಸೇವೆ ಮನೆಯಲ್ಲೇ ಸಿಗುವಂಥ ವ್ಯವಸ್ಥೆ ರೂಪಿಸಲಾಗಿದೆ.

‘ಹಿರಿಯ ನಾಗರಿಕರನ್ನು ಪೂರ್ಣ ಹೃದಯದಿಂದ ಅಪ್ಪಿಕೊಳ್ಳುವ ನೀತಿಗಳನ್ನು ಜಾರಿಗೆ ತರುತ್ತಿದ್ದೇವೆ’ ಎಂದು ಅಲ್ಲಿನ ಮುಖ್ಯಮಂತ್ರಿಗಳು ಹೇಳಿದ್ದು, ಮಹಿಳಾ ಮತ್ತು ಮಕ್ಕಳ ಆಯೋಗ, ಮಾನವ ಹಕ್ಕುಗಳ ಆಯೋಗದಂತೆ ಈಗ ಪ್ರತಿ ರಾಜ್ಯದಲ್ಲೂ ಹಿರಿಯ ನಾಗರಿಕರ ಆಯೋಗದ ಅಗತ್ಯವಿದೆ.

ಸರ್ಕಾರದ ಕ್ರಮಗಳ ಹೊರತಾಗಿ ಕೇರಳದ ವಯೋವೃದ್ಧರು ಕೆಲ ತಮ್ಮದೇ ಆದ ರಚನಾತ್ಮಕ ದಾರಿಗಳನ್ನು ಕಂಡುಕೊಂಡಿದ್ದಾರೆ ಎಂಬುದು ವಿಶೇಷ. ಪತ್ತನಂತಿಟ್ಟ ಜಿಲ್ಲೆಯ ಕುಂಬನಾಡ್ ಎಂಬ ಗ್ರಾಮದಲ್ಲಿ ಬ್ಯಾಂಕ್, ಎಟಿಎಂ, ಆಸ್ಪತ್ರೆ ಎಲ್ಲವೂ ಇದೆ. ಆದರೆ ಯುವಕರೇ ಇಲ್ಲ! ಹಾಗಾಗಿ, ಇಲ್ಲಿನ ವೃದ್ಧರೇ ಒಬ್ಬರಿಗೊಬ್ಬರು ಆಸರೆಯಾಗಿ ನಿಂತಿದ್ದಾರೆ. ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ ಕೂಡಲೇ ಆಸ್ಪತ್ರೆಗೆ ಅಥವಾ ಸರ್ಕಾರದ ಸಹಾಯವಾಣಿಗೆ ಸಂಪರ್ಕ ಮಾಡಿ, ವಿಷಯ ತಿಳಿಸುತ್ತಾರೆ. ಪ್ರತಿದಿನ ಬೆಳಗ್ಗೆ ಒಂದು ನಿಗದಿತ ಸಮಯದಲ್ಲಿ ಹಿರಿಯ ನಾಗರಿಕರೆಲ್ಲ ಭೇಟಿಯಾಗುತ್ತಾರೆ, ಇದರಿಂದ ಪರಸ್ಪರರ ವಿಷಯ ತಿಳಿಯುತ್ತದೆ.

ಯಾರಿಗಾದರೂ ತುರ್ತು ಸಹಾಯದ ಅಗತ್ಯವಿದ್ದಲ್ಲಿ, ಅದನ್ನು ಪೂರೈಸಲಾಗುತ್ತದೆ. ಸ್ಥಳೀಯ ಚರ್ಚುಗಳು ಕೂಡ ಮೊದಲು ವಾರಕ್ಕೊಮ್ಮೆ ಹಿರಿಯರನ್ನು ಒಟ್ಟು ಸೇರಿಸುತ್ತಿದ್ದವು. ಈಗ ಅದನ್ನು ವಾರಕ್ಕೆ ಎರಡು ಬಾರಿ ಮಾಡಲಾಗಿದೆ. ಕುಂಬನಾಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 25 ಸಾವಿರ ಮನೆಗಳಿವೆ. ಈ ಪೈಕಿ 11,118 ಮನೆಗಳು ಬೀಗ ಜಡಿದುಕೊಂಡಿವೆ. ಉಳಿದ ಜನಸಂಖ್ಯೆಯ ಪೈಕಿ ಶೇ.96ರಷ್ಟು ವಯೋವೃದ್ಧರೇ ಆಗಿದ್ದಾರೆ.

ಎರ್ನಾಕುಲಂ ಜಿಲ್ಲೆಯ ಹಲವು ಹಳ್ಳಿಗಳಲ್ಲೂ ವಯೋವೃದ್ಧರ ಸರಾಸರಿ ಸಂಖ್ಯೆ ಒಂದು ಸಾವಿರಕ್ಕಿಂತ ಹೆಚ್ಚಿದೆ. ಹೀಗಾಗಿ, ಇವರೇ ಪರಸ್ಪರ ಭಾವನಾತ್ಮಕ ಬಂಧವನ್ನು ಕಟ್ಟಿಕೊಂಡಿದ್ದಾರೆ. ಕಷ್ಟ-ಸುಖ ಎರಡೂ ಸಂದರ್ಭದಲ್ಲಿ ಒಟ್ಟಾಗುತ್ತಾರೆ. ಹೊಸ ಸ್ನೇಹಿತರನ್ನು ಮಾಡಿಕೊಂಡು ಮಾತಿನ ಮಂಟಪದಲ್ಲಿ ಚಿಂತೆಯನ್ನೆಲ್ಲ ಕಳೆಯುತ್ತಾರೆ. ಮಕ್ಕಳು, ಮೊಮ್ಮಕ್ಕಳು ಬಂದಾಗ ಬರಲಿ ಎಂದು ತಮ್ಮದೇ ದಿನಚರಿ ರೂಪಿಸಿಕೊಂಡಿದ್ದಾರೆ, ಉತ್ತಮ ಹವ್ಯಾಸಗಳಲ್ಲಿ ಕಾಲ ಕಳೆಯುತ್ತಾರೆ. ಹೀಗಾಗಿ, ಗ್ರಾಮಗಳೇ ಕುಟುಂಬಗಳಾಗಿ ಮಾರ್ಪಟ್ಟಿವೆ.

ಖಾಲಿ ಮನಸ್ಸುಗಳಲ್ಲಿ ಹೊಸ ಕನಸುಗಳು ಕುಣಿಯುತ್ತಿವೆ. ನಿರಾಶೆಯ ನಿಟ್ಟುಸಿರು ಸಮಾಧಾನದ ನಿಟ್ಟುಸಿರು ಆಗಿ ಬದಲಾಗುತ್ತಿದೆ. ಈ ಸ್ಥಿತಿಯನ್ನು ಎಲ್ಲ ಕಡೆ ಅಳವಡಿಸಿಕೊಳ್ಳಲು ಸಾಧ್ಯವಿದೆ. ಅದಕ್ಕೆ ಬೇಕಿರುವುದು ಒಂದಿಷ್ಟು ಇಚ್ಛಾಶಕ್ತಿ ಮತ್ತು ಸಮಾಜದ ಬೆಂಬಲವಷ್ಟೇ. ನಮ್ಮ ಕುಟುಂಬ, ಹಳ್ಳಿ, ಪೇಟೆಗಳಲ್ಲೂ ಹಿರಿಯರ ಸಂತೃಪ್ತಿಯ ನಗು ಆವರಿಸಿಕೊಳ್ಳಲಿ. ಅಂಥ ಪೂರಕ, ಚೇತೋಹಾರಿ ವಾತಾವರಣ ಸೃಷ್ಟಿಸುವಂಥ ಹೊಣೆಗಾರಿಕೆ ಎಲ್ಲರ ಮೇಲೂ ಇದೆ ಎಂಬುದನ್ನು ಮರೆಯದಿರೋಣ. ಹಿರಿಯರ ನಗು, ನೆಮ್ಮದಿಯಲ್ಲಿ ನಮ್ಮ ಸಾರ್ಥಕತೆಯನ್ನು ಕಾಣೋಣ. (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)