ಅಂಕಣ

ವಿಧಿನಿಯಮ ತಪ್ಪಿಸಲು ಸಾಧ್ಯವಿಲ್ಲ: ಮನೋಲ್ಲಾಸ

| ರಾಮ ಸುಬ್ರಾಯ ಶೇಟ್

ಜಗದೊಡೆಯ ಪರಮೇಶ್ವರನು ಅನಿಕೇತನ. ಕೈಲಾಸದ ಹಿಮದಲ್ಲಿ ವಾಸಿಸುತ್ತಾನೆ. ಕೆಲವೊಮ್ಮೆ ಮಸಣವೂ ಮನೆಯಾದ ಪ್ರಸಂಗವಿದೆ. ಲೋಕದಲ್ಲಿ ಎಲ್ಲರೂ ಸ್ವಂತ ಗುಡಿಸಲನ್ನಾದರೂ ಹೊಂದಲು ಪ್ರಯತ್ನಿಸುತ್ತಾರೆ. ಪಾರ್ವತಿಗೆ ಇದೊಂದು ಕೊರತೆ ಎನ್ನಿಸಿತು. ಶಿವನಂತಹ ಸರಳಜೀವಿ ವಿಶ್ವದಲ್ಲಿ ಯಾರೂ ಇಲ್ಲ. ಅದಕ್ಕೆ ಆತ ತ್ಯಾಗದ ಪ್ರತೀಕ. ಆದರೂ ಒಮ್ಮೆ ಪಾರ್ವತಿ ಪರಶಿವನನ್ನು, ‘ಸ್ವಾಮೀ, ಕೇಳಿದವರಿಗೆ ಕೇಳಿದ್ದನ್ನೆಲ್ಲ ನೀಡುವ ನೀವು ಒಂದು ಮನೆಯನ್ನು ಹೊಂದಿಲ್ಲವೆಂದರೆ?’ ಎಂದು ಕೇಳಿದಳು. ಆಗ ಪರಶಿವನು, ‘ಯಾರಿಗೆ ಯಾವುದು ಲಭ್ಯವಾಗಬೇಕೋ ಅದು ಆತನಿಗೆ ದೊರಕುತ್ತದೆಂಬುದು ಪ್ರಕೃತಿಯ ನಿಯಮ. ನಮಗೆ ಮನೆಯ ಯೋಗವಿಲ್ಲ. ಭೂಮಂಡಲವೇ ನಮ್ಮ ಮನೆ. ಇನ್ನೇಕೆ ಅದರ ಚಿಂತೆ?’ ಎಂದು ಹೇಳಿದ. ಪಾರ್ವತಿಯು ಪಟ್ಟು ಹಿಡಿದು, ‘ಅದೇನೇ ಇರಲಿ, ನಾವು ಮನೆಯನ್ನು ಕಟ್ಟಿಸಿಕೊಳ್ಳಲು ಪ್ರಯತ್ನಿಸೋಣ. ನಂತರ ಅದರ ಆಗುಹೋಗು’ ಎಂದಳು. ಸರಿ ಎಂದ ಶಿವನ ಆದೇಶದಂತೆ ಕುಶಲಕರ್ವಿು ಗಳೆಲ್ಲ ಉತ್ಸಾಹ ಮತ್ತು ಶ್ರದ್ಧೆಯಿಂದ ಸಮುದ್ರದ ನಡುವೆ ಭವ್ಯವಾದ ಅರಮನೆ ನಿರ್ಮಾಣ ಮಾಡಿದರು. ಪಾರ್ವತಿಗೆ ಸಂತೋಷವಾಯಿತು.

ಇನ್ನು ಗೃಹಪ್ರವೇಶವನ್ನು ವಿಜೃಂಭಣೆ ಯಿಂದ ನೆರವೇರಿಸ ಬೇಕೆಂದು ಪಾರ್ವತಿಯು ಎಲ್ಲ ಗಣಗಳೊಂದಿಗೆ ಸಿದ್ಧತೆ ಮಾಡಿಕೊಂಡಳು. ಬಂದವರಿಗೆಲ್ಲ ಯಥೇಚ್ಛ ಉಡುಗೊರೆಗಳನ್ನು ನೀಡುವ ನಿರ್ಧಾರ ಮಾಡಿಕೊಂಡಳು. ಅದರಂತೆ ಕುಬೇರನಿಗೆ ಆದೇಶವಾಯಿತು. ಪೌರೋಹಿತ್ಯಕ್ಕೆ ಮಹಾಬ್ರಾಹ್ಮಣನು, ಶಿವಭಕ್ತನೂ ಆದ ದಶಕಂಠನನ್ನು ಕರೆಯುವುದೆಂದು ತೀರ್ವನಿಸಲಾಯಿತು. ಸಮರ್ಪಕವಾಗಿ ಶಾಸ್ತ್ರಗಳೆಲ್ಲ ನೆರವೇರಿದವು. ಅತಿಥಿಗಳೆಲ್ಲ ತಿಂದುಂಡು ಉಡುಗೊರೆಗಳನ್ನು ಕೊಂಡು ಮರಳಿದರು. ಕೊನೆಗೆ ಉಳಿದವನು ದಶಕಂಠ. ಈತನು ಕೇಳಿದ್ದನ್ನು ನೀಡಲು ಶಿವಪಾರ್ವತಿಯರು ಸಿದ್ಧರಾಗಿದ್ದಾಗ ದಶಕಂಠ ಕೇಳಿದ್ದು, ‘ಪರಮೇಶ್ವರಾ, ನನಗೆ ಭವ್ಯವಾದ ಮನೆಯ ಕೊರತೆ ಇದೆ. ಈ ಮನೆಯನ್ನೇ ನನಗೆ ನೀಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ’ ಎಂದಾಗ ಪಾರ್ವತಿಗೆ ಕಸಿವಿಸಿಯಾಯಿತು. ಪರಮೇಶ್ವರನು ‘ತಥಾಸ್ತು’ ಎಂದು ಹಿಮಾಲಯಕ್ಕೆ ಹೊರಟ.

‘ಈಗ ಆದ ಪ್ರಮಾದ ಪುನಃ ಆಗದಂತೆ ಎಚ್ಚರವಹಿಸೋಣ. ವಿಶ್ವಕರ್ಮರು ಇಲ್ಲಿಯೇ ಹತ್ತಿರದಲ್ಲಿ ಒಂದು ಮನೆ ನಿರ್ವಿುಸಲಿ. ಯಾರಿಗೂ ಗೊತ್ತಾಗದಂತೆ ಅಲ್ಲಿ ವಾಸಿಸೋಣ’ ಎಂದಳು ಪಾರ್ವತಿ. ಅದೂ ಆಗಲೆಂದು ಪರಶಿವ ಕಾರ್ಯ ನೆರವೇರಿಸಿದ. ಅಂದು ಅಲ್ಲಿಯೇ ಹರಿಯುವ ನದಿಯ ಬಳಿ ನೀರಾಟವಾಡುತ್ತಿದ್ದಾರೆ. ಒಂದು ಅನಾಥಮಗು ಅಳುತ್ತಿದೆ. ಸಮಾಧಾನ ಪಡಿಸಲಾಗುತ್ತಿಲ್ಲ. ಮನೆಗೆ ಕರೆದೊಯ್ದರೆ ಸುಮ್ಮನಾಯಿತು. ಶಿವ-ಪಾರ್ವತಿಯರು ಮತ್ತೆ ಹೊರಗೆ ಕರೆದೊಯ್ಯಲು ಪ್ರಯತ್ನಿಸಿದರೆ ಮಗು ಬರುವುದಿಲ್ಲವೆಂದು ಹಠ ಹಿಡಿಯಿತು. ಅದನ್ನು ಒಳಗೆ ಕೂರಿಸಿ ಕದ ಹಾಕಿ ‘ಯಾರು ಬಂದರೂ ಬೀಗ ತೆಗೆಯಬೇಡ’ ಎಂದರು. ಕೆಲಹೊತ್ತಿನ ಮೇಲೆ ತಿರುಗಿ ಬಂದು ಬಾಗಿಲು ತೆಗೆಯಲು ಹೇಳಿದರೆ, ‘ಯಾರು ಬಂದರೂ ಬೀಗ ತೆಗೆಯಬೇಡವೆಂದು ಹೇಳಿದ್ದೆ. ಹರನೇ ತನ್ನ ಮಾತನ್ನು ಮುರಿಯುವುದೇ? ಹೊರಟುಹೋಗು?’ ಎಂದಿತು. ಪರಶಿವನು ಪಾರ್ವತಿಯೊಂದಿಗೆ ಮನೆಯಿಂದ ದೂರಹೊರಟು ತಿರುಗಿನೋಡಿದರೆ ಒಳಗೆ ವಿಷ್ಣು ನಗುತ್ತ ನಿಂತಿದ್ದ.

ಇದೊಂದು ಜನಪದೀಯ ಉಲ್ಲೇಖವಾದರೂ ಸತ್ಯವಾದ ಸಂಗತಿ. ಇಂಥ ಅನೇಕ ನಿದರ್ಶನಗಳು ನಮಗೆ ದೊರೆಯುತ್ತವೆ. ಶ್ರೀರಾಮನಿಗೆ ಕಾನನವಾಸ, ಪಾಂಡವರಿಗೆ ಅರಣ್ಯವಾಸ ಮತ್ತು ಅಜ್ಞಾತವಾಸ, ಹೀಗೆ ಪ್ರಕೃತಿನಿಯಮ, ವಿಧಿನಿಯಮ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತು ಬಂದಿದ್ದನ್ನು ಸ್ವೀಕರಿಸಿ ತೃಪ್ತಿಯಿಂದ ಜೀವಿಸಬೇಕು.

(ಲೇಖಕರು ನಿವೃತ್ತ ಉಪನ್ಯಾಸಕ, ಗಮಕಿ)