ಅಂಕಣ

ಇಂದು ನೋ ಸ್ಮೋಕಿಂಗ್ ಡೇ; ಸಿಗರೇಟು ಜಾಸ್ತಿ ಆದ್ರೆ ಹೊಗೆ!

Mandara
ಅಬ್ಬಾ... ಎಷ್ಟೊಂದು ಟೆನ್ಷನ್ ಇತ್ತು, ಒಂದು ಧಮ್ ಹೊಡೆದೆ ನೋಡಿ... ಅದೇನು ಕಿಕ್ ಅಂತೀರಾ... ಈಗ ಟೆನ್ಷನ್ ಫ್ರೀ ಆಗಿದ್ದೇನೆ...

ಟೆನ್ಷನ್ ಹೆಸರಿನಲ್ಲಿ ಧಮ್ ಎಳೆಯುವ ಧೂಮಪಾನಿಗಳೆಲ್ಲಾ ಹೇಳುವ ಮಾತಿದು. ಆದರೆ ಈ ಕಿಕ್ ಎಷ್ಟು ಹೊತ್ತು? ಏರಿದ ವೇಗದಲ್ಲಿಯೇ ಜರ್ರನೆ ಇಳಿದುಬಿಡುತ್ತದೆ. ಮತ್ತೆ ಮನಸ್ಸೆಲ್ಲಾ ಅಲ್ಲೋಲ ಕಲ್ಲೋಲ... ತಲೆ ನೋವು, ಅದೇನೋ ಟೆನ್ಷನ್... ಮತ್ತೆ ಕಿಕ್ ಬೇಕು ಎಂದು ಮನಸ್ಸು ಕರೆಯುತ್ತದೆ, ಮತ್ತೊಂದು, ಇನ್ನೊಂದು...

ಹೀಗೆ ಶುರುವಾಗಿ ಒಂದು ಪ್ಯಾಕೆಟ್, ಎರಡು ಪ್ಯಾಕೆಟ್... ಹ್ಞೂಂ... ಹ್ಞೂಂ... ಲೆಕ್ಕವೇ ಸಿಗುವುದಿಲ್ಲ. ಅಲ್ಲಿಂದ ಶುರುವಾಗುವುದು ಅಡಿಕ್ಷನ್.

ಹಾಗಿದ್ದರೆ ಅಡಿಕ್ಷನ್ ಎಂದರೇನು ಎನ್ನುವುದನ್ನು ಮೊದಲು ತಿಳಿಯುವ. ಇದಕ್ಕೊಂದು ಉದಾಹರಣೆ ಕೊಡುತ್ತೇನೆ. ಬೆಳಗ್ಗೆ ಎದ್ದ ತಕ್ಷಣ ಕಾಫಿನೋ, ಟೀನೋ ಬೇಕು. ಮನಸ್ಸಿಗೇನೋ ಒಂದು ಥರ ಮುದವನ್ನು ಇದು ನೀಡುತ್ತದೆ. ಆದರೆ ವಿಪರೀತ ಸೇವನೆಯಿಂದ ನಮ್ಮ ದೇಹದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಯೋ ಅಥವಾ ಏನೋ ಒಂದು ರೀತಿಯಲ್ಲಿ ಸಮಸ್ಯೆ ಆಗುತ್ತಿದೆ ಎಂದು ನಮ್ಮ ಅರಿವಿಗೆ ಬಂದರೂ ಅದು ನಮಗೆ ಬೇಕೇ ಬೇಕು ಎನ್ನುತ್ತೇವಲ್ಲ. ಅದೇ ಅಡಿಕ್ಷನ್ ಅಂದರೆ ಚಟ. ಸಾಮಾನ್ಯವಾಗಿ ಎಲ್ಲ ಮನುಷ್ಯರಲ್ಲಿಯೂ ಎರಡು ಮನಸ್ಸುಗಳಿವೆ. ಒಂದು ಕೆಟ್ಟದ್ದು, ಒಂದು ಒಳ್ಳೆಯದು. ಆದರೆ ನಮ್ಮ ಯಾವ ಮನಸ್ಸು ನಮ್ಮ ಮಾತು ಕೇಳುತ್ತದೆ? ಇದಿಲ್ಲ ಬಹಳ ಮುಖ್ಯ. ನಾವು ಯಾವ ಮನಸ್ಸಿಗೆ ಲಂಚ ಕೊಡುತ್ತೇವೆಯೋ ಆ ಮನಸ್ಸೇ ನಮ್ಮ ಮಾತು ಕೇಳುವುದು. ಅಂದರೆ ‘ಇದನ್ನು ನೀನು ತೆಗೆದುಕೊಂಡರೆ ಆ ಕ್ಷಣದಲ್ಲಿ ಏನೋ ಉಲ್ಲಾಸ ಉಂಟಾಗುತ್ತದೆ’ ಎಂದು ನಾವು ಅದಕ್ಕೆ ಹೇಳುವುದೇ ಲಂಚ ಕೊಟ್ಟಂತೆ. ಆದ್ದರಿಂದ ‘ನೀನು ತೆಗೆದುಕೊಳ್ಳಬೇಡ, ಇದರಿಂದ ನಿನಗೆ ಹಾನಿ ಇದೆ’ ಎನ್ನುವ ಮನಸ್ಸು ಈ ಲಂಚದ ಮನಸ್ಸಿನ ಎದುರು ಮೌನ ತಾಳಿಬಿಡುತ್ತದೆ!

ಸಿಗರೇಟ್ ಇಷ್ಟ ಆಗೋದೇಕೆ?: ಸಿಗರೇಟ್ ಸೇವನೆ ಮಾಡದವರಿಗೆ ಇದು ಅರ್ಥವಾಗದ ಪ್ರಶ್ನೆ. ಆ ಕೆಟ್ಟ ಹೊಗೆಯಲ್ಲಿ ಅದೆಂಥದ್ದಿದೆ ಎಂದು ಕೇಳುತ್ತಾರೆ. ಆದರೆ ಧೂಮಪಾನಿಗಳಿಗೆ ಈ ಹೊಗೆಯಲ್ಲಿಯೇ ಮಜ ಸಿಗುತ್ತದೆ. ಹಾಗಿದ್ದರೆ, ಇದ್ಯಾಕೆ ಇಷ್ಟ ಆಗುತ್ತದೆ ಎನ್ನುವುದು ಮುಂದಿರುವ ಪ್ರಶ್ನೆ. ಮೆದುಳಿನಲ್ಲಿರುವ ರಿಸೆಪ್ಟರ್ ಮೇಲೆ ಸಿಗರೇಟ್​ನಲ್ಲಿರುವ ನಿಕೋಟಿನ್ ಅಂಶ ಹೋಗಿ ಕುಳಿತಾಗ ಅದು ನೀಡುವ ಕಿಕ್. ನಮ್ಮ ಮನೆಗೆ ಬಾಗಿಲುಗಳು ಇರುವಂತೆ ನಮ್ಮ ಮೆದುಳಿಗೂ ಒಂದು ಬಾಗಿಲು (ರೆಸೆಪ್ಟರ್) ಇದೆ. ನಿಕೋಟಿನ್ ಅಂಶ ಈ ರಿಸೆಪ್ಟರ್ ಮೇಲೆ ಹೋದಾಗ ರಕ್ತನಾಳ ದೊಡ್ಡದಾಗುತ್ತದೆ. ಗಾಳಿಯಲ್ಲಿ ಸ್ಮೋಕಿಂಗ್ ಮಾಡುವ ನಿಕೋಟಿನ್ ನೇರವಾಗಿ ಶ್ವಾಸಕೋಶಕ್ಕೆ ಹೋಗುತ್ತದೆ. ರಕ್ತದಲ್ಲಿ ನಿಕೋಟಿನ್ ಅಂಶ ಜಾಸ್ತಿಯಾಗಿ ಮೆದುಳು ರಿಲ್ಯಾಕ್ಸ್ ಆದ ಹಾಗೆ ಅನ್ನಿಸುತ್ತದೆ. ಆಗ ಮನಸ್ಸಿಗೆ ಒಂದು ರೀತಿಯಲ್ಲಿ ಮುದ ಸಿಗುತ್ತದೆ. ಧೂಮಪಾನಿಗಳಿಗೆ ಏನಾದರೊಂದು ರೀತಿಯ ಟೆನ್ಷನ್ ಇದ್ದರೆ ಆ ಸಮಯದಲ್ಲಿ ಅದು ಕಮ್ಮಿಯಾದಂತೆ ಅನ್ನಿಸುತ್ತದೆ. ಒಂದು ರೀತಿಯ ಕಿಕ್ ಬರುವಂತೆ ಭಾಸವಾಗುತ್ತದೆ. ಆದರೆ ಆ ಕಿಕ್ ಬಹಳ ಸಮಯ ಇರುವುದಿಲ್ಲ. ತಕ್ಷಣ ಇಳಿಯುತ್ತದೆ. ಆಗ ಮತ್ತೆ ಕಿಕ್ ಬೇಕು ಎನಿಸಿ ಇನ್ನೊಂದು ಸಲ ಸ್ಮೋಕ್ ಮಾಡುವ ಮನಸ್ಸಾಗುತ್ತದೆ. ಆದರೆ ಸಿಗರೇಟ್​ನಲ್ಲಿ ನಿಕೋಟಿನ್ ಅಂಶ ಒಂದೇ ಇರುವುದಿಲ್ಲವಲ್ಲ! ಅದರ ಜತೆಗೆ, ಟಾರ್, ಮಿಥೇನ್ ಗ್ಯಾಸ್ ಸೇರಿದಂತೆ ನಾನಾ ರಾಸಾಯನಿಕಗಳು ಇರುತ್ತವೆ. ಇವುಗಳ ಪೈಕಿ ಶೇ.70ರಷ್ಟು ಕ್ಯಾನ್ಸರ್ ತರುವಂಥ ರಾಸಾಯನಿಕಗಳು. ಇವೆಲ್ಲಾ ಗೊತ್ತಿದ್ದರೂ ಒಮ್ಮೆ ದಾಸನಾದರೆ ಅದನ್ನು ಬಿಡುವುದು ಕಷ್ಟ. ಹೀಗೆ ಹೇಳುವಾಗ ಒಂದು ವಿಚಾರ ಹೇಳಲೇಬೇಕು. ಅದೇನೆಂದರೆ ಎಲ್ಲರ ಸಹಿಸಿಕೊಳ್ಳುವ ಗುಣ (ಟಾಲರೆನ್ಸ್ ಲೆವೆಲ್) ಒಂದೇ ತೆರನಾಗಿ ಇರುವುದಿಲ್ಲ. ಕೆಲವರಿಗೆ ಚಿಕ್ಕ ಕೆಲಸವೂ ದೊಡ್ಡ ಟೆನ್ಷನ್ ಎನಿಸುತ್ತದೆ. ಏನೇ ಕೆಲಸ ಹೇಳಿದರೂ ಅದು ಕಷ್ಟ-ಕಷ್ಟ ಎನ್ನಿಸುತ್ತದೆ.

ಕಷ್ಟಪಟ್ಟು ಕೆಲಸ ಮಾಡುವವರಿಗೆ ಟಾಲರೆನ್ಸ್ ಗುಣ ಕಮ್ಮಿಯಾಗಿ ಇಂಥ ವ್ಯಸನಕ್ಕೆ ಈಡಾದರೆ, ಇಷ್ಟಪಟ್ಟು ಕೆಲಸ ಮಾಡುವವರು ಇಂಥ ಚಟಗಳಿಗೆ ದಾಸರಾಗುವುದು ತೀರಾ ಕಮ್ಮಿ.

ಸ್ಮೋಕಿಂಗ್ ಬಿಡುವ ಆಸೆಯೆ?: ಅರಿತೋ, ಅರಿಯದೆಯೋ ಧೂಮಪಾನಕ್ಕೆ ದಾಸನಾಗಿಬಿಟ್ಟಾಗಿದೆ. ಆದರೆ ಅದರಿಂದ ಹೊರಬರುವುದು ಹೇಗೆ ಎನ್ನುವುದು ಈಗಿರುವ ಪ್ರಶ್ನೆ. ಸ್ಮೋಕಿಂಗ್ ಬಿಡಬೇಕು ಎನ್ನಿಸುವವರಿಗೆ ಮೊದಲು ತಾನು ಅದರ ದಾಸನಾಗಿದ್ದೇನೆ ಎನ್ನುವುದರ ಅರಿವಾಗ ಬೇಕಾದದ್ದು ಬಹಳ ಮುಖ್ಯ. ನನಗೆ ತೊಂದರೆ ಆಗುತ್ತಿದೆ ಎಂದು ತಿಳಿದಾಗಲೇ ತಾನೆ ಅದಕ್ಕೆ ಚಿಕಿತ್ಸೆ ಪಡೆಯಲು ಸಾಧ್ಯ!

1+1= 2 ಅಲ್ಲ...! : ಸಾಮಾನ್ಯವಾಗಿ ಧೂಮಪಾನಿಗಳು ಹೇಳುವುದು ಏನು ಎಂದರೆ, ‘ಅವನು 10 ಸಿಗರೇಟ್ ಸೇಯುತ್ತಾನೆ. ಅವನು ಆರಾಮ್ ಇದ್ದಾನೆ, ನಾನು 8 ಸೇಯುತ್ತೇನೆ. ನನಗೇನು ಆಗಲು ಸಾಧ್ಯ’ ಎಂಬ ಮಾತು. ಆದರೆ ಒಂದು ವಿಷಯ ನೆನಪಿಡಿ. ವೈದ್ಯಕೀಯ ಭಾಷೆಯಲ್ಲಿ ಪ್ರತಿ ಸಲವೂ 1+1= 2 ಆಗುವುದಿಲ್ಲ. ಅದು 2.1, 2.7, 2.9 ಏನು ಬೇಕಾದರೂ ಆಗಬಹುದು. ಏಕೆಂದರೆ ಪ್ರತಿಯೊಬ್ಬರ ಜೆನೆಟಿಕ್ ಮೇಕಪ್ ಹಾಗೂ ಎನ್​ವಿರಾನ್​ವೆುಂಟಲ್ ಇಂಟರ್ಯಾಕ್ಷನ್ (ನೇಚರ್ ಆಂಡ್ ನರ್ಚರ್- ಅರ್ಥಾತ್ ಹುಟ್ಟಿನಿಂದ ಬಂದ ಗುಣ ಹಾಗೂ ಸುತ್ತಲಿನ ಪರಿಸರದಿಂದ ಬರುವ ಗುಣ) ಬೇರೆ ಬೇರೆ ರೀತಿ ಇರುತ್ತದೆ. ಇವುಗಳ ಆಧಾರದ ಮೇಲೆ ಪ್ರತಿಯೊಬ್ಬರ ಸಾಮರ್ಥ್ಯ ನಿರ್ಧಾರವಾಗುತ್ತದೆ.

ಒಂದು ಉದಾಹರಣೆ ಕೊಡುವುದಾದರೆ, ನೀವು ನಡುರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೀರಿ. ಇನ್ನೊಬ್ಬ ಫುಟ್​ಪಾಥ್ ಮೇಲೆ ಹೋಗುತ್ತಿದ್ದಾನೆ. ಹಾಗೆಂದು ಫುಟ್​ಪಾಥ್ ಮೇಲೆ ಹೋಗುವವನಿಗೂ ಅಪಘಾತ ಆಗುವುದಿಲ್ಲವೆಂದಲ್ಲ. ಆದರೆ ಹೆಚ್ಚಿನ ರಿಸ್ಕ್ ಇರುವುದು ನಡುರಸ್ತೆಯಲ್ಲಿ ಹೋಗುವವನಿಗೆ ತಾನೆ? ಧೂಮಪಾನದ ವಿಷಯದಲ್ಲಿಯೂ ಹಾಗೆಯೇ. ಧೂಮಪಾನಿಗಳು ನಡುರಸ್ತೆಯಲ್ಲಿ ಹೋಗುತ್ತಿರುವವರು. ಆದ್ದರಿಂದ ವ್ಯಸನಗಳ ವಿಷಯದಲ್ಲಿ ಇನ್ನೊಬ್ಬರ ಜತೆ ನಿಮ್ಮನ್ನು ಕಂಪೇರ್ ಮಾಡಿಕೊಳ್ಳಲು ಹೋಗಬೇಡಿ.

ಹೀಗಿದೆ ಚಿಕಿತ್ಸೆ: ಸ್ಮೋಕಿಂಗ್ ಬಿಟ್ಟೇ ಬಿಡಬೇಕೆಂಬ ಮನಸ್ಸು ಮಾಡಿದಾಗ ನಾವು ಮೊದಲು ಇನ್​ಸೈಟ್ ಓರಿಯಂಟೇಷನ್ ಚಿಕಿತ್ಸೆ ಮಾಡುತ್ತೇವೆ. ಈ ಸಂದರ್ಭದಲ್ಲಿ ಧೂಮಪಾನದ ದಾಸನಾಗಿರುವುದಕ್ಕೆ ಕಾರಣವೇನು ಎಂಬುದನ್ನು ಹುಡುಕುತ್ತೇವೆ. ಖಿನ್ನತೆ ಇದ್ದಾಗ ಸಮಾಲೋಚನೆ ಮಾಡುತ್ತೇವೆ. ಖಿನ್ನತೆ ಸಂದರ್ಭದಲ್ಲಿ ನಿದ್ದೆಯ ಸಮಸ್ಯೆಯೂ ಎದುರಾಗುವ ಕಾರಣ ಅದಕ್ಕೂ ಚಿಕಿತ್ಸೆ ನೀಡುತ್ತೇವೆ. ಇಂಥ ವ್ಯಸನಿಗಳು ಮುಳ್ಳಿನ ಮೇಲೆ ಕುಳಿತುಬಿಟ್ಟಿದ್ದಾರೆ. ಮುಳ್ಳು ತೆಗೆಯಲು ಆಗುತ್ತಿಲ್ಲ, ಆದರೆ ಆ ನೋವನ್ನು ಕಮ್ಮಿ ಮಾಡುವುದು ನಮ್ಮ ಕರ್ತವ್ಯ. ಆದ್ದರಿಂದ ಈ ಚಿಕಿತ್ಸೆ.

ಆರಂಭದಲ್ಲಿ ಫಾರ್ಮಕೋ, ಆ ನಂತರ ಸೈಕೋ ಥೆರಪಿ ಕೊಡುತ್ತೇವೆ. ಚೈನ್ ಸ್ಮೋಕರ್ ಆಗಿದ್ದಲ್ಲಿ ಒಂದೇ ಬಾರಿಗೆ ಚಟ ಬಿಡಿಸುವುದು ಕಷ್ಟ. ಆದ್ದರಿಂದ ಮೊದಲು ಪರ್ಯಾಯ ನಿಕೋಟಿನ್ ನೀಡಲಾಗುತ್ತದೆ. ಜೆಲ್, ಚ್ಯೂಯಿಂಗ್ ಗಮ್ ಇಲ್ಲವೇ ನಿಕೋಟಿನ್ ಪ್ಯಾಚ್​ಗಳನ್ನು (ದೇಹದಲ್ಲಿ ಅಂಟಿಸಿಕೊಳ್ಳುವುದು) ಪರ್ಯಾಯವಾಗಿ ನೀಡುತ್ತೇವೆ. ಹೀಗೆ ಮಾಡಿದಾಗ ಸಿಗರೇಟ್​ನಷ್ಟು ಹಾನಿಕರವಲ್ಲದ ನಿಕೋಟಿನ್ ಮೊದಲೇ ಮೆದುಳಿನ ಬಾಗಿಲಿಗೆ ಹೋಗಿ ಕುಳಿತುಕೊಳ್ಳುವ ಕಾರಣ, ಸಿಗರೇಟ್ ಸೇವನೆ ಮಾಡಬೇಕು ಎನ್ನಿಸುವುದಿಲ್ಲ. ಹೀಗೆ ನಿಧಾನವಾಗಿ ಟ್ರೀಟ್​ವೆುಂಟ್ ಕೊಡಲು ಶುರು ಮಾಡುತ್ತೇವೆ. ಆದರೆ ಚಿಕಿತ್ಸೆ ಏನೇ ಇದ್ದರೂ ಮೊದಲು ಅದನ್ನು ಬಿಡುವ ಬಗ್ಗೆ ಗಟ್ಟಿ ಮನಸ್ಸು ಮಾಡಿ, ಆರೋಗ್ಯವನ್ನು ಕಾಪಾಡಿಕೊಳ್ಳಿ.

ಚಟ ಬಿಡಲು ಸುಲಭ ಉಪಾಯ...: ಸಿಗರೇಟ್ ಬಿಡಲು ದೊಡ್ಡ ಮನಸ್ಸು ಮಾಡಿಯೇ ಬಿಟ್ಟಿದ್ದೀರಿ ಎಂದುಕೊಳ್ಳಿ. ನಿಮಗೆ ವೈದ್ಯರ ಬಳಿ ಹೋಗಲು ಇಷ್ಟವಿಲ್ಲದ ಪಕ್ಷದಲ್ಲಿ ನೀವೇ ಸ್ಮೋಕಿಂಗ್ ತ್ಯಜಿಸಬಹುದು. ಇಲ್ಲಿವೆೆ ಟಿಪ್ಸ್:

ಆರಂಭಿಕ ಹಂತದಲ್ಲಿ ಬೆಳಗ್ಗೆ ಮತ್ತು ರಾತ್ರಿಯ ಸ್ಮೋಕಿಂಗ್ ಬಿಡುವುದು ಕಷ್ಟ, ಅದನ್ನು ಶುರುವಿಗೆ ಬಿಡಲೂ ಬಾರದು. ಏಕೆಂದರೆ ಏಕಾಏಕಿ ಇದನ್ನು ಬಿಟ್ಟರೆ ಕೆಲವರಿಗೆ ತಲೆನೋವು, ಖಿನ್ನತೆ, ಮೈ ಕೈ ನಡುಕ.. ಹೀಗೆ ಅನಾರೋಗ್ಯ ಸಮಸ್ಯೆ ಕಾಡಬಹುದು. ಆದ್ದರಿಂದ ಈ ನಡುವಿನ ಒಂದೊಂದೇ ಸಿಗರೇಟ್ ಅನ್ನು 3 ಅಥವಾ 5 ದಿನಕ್ಕೊಮ್ಮೆ ಬಿಡುತ್ತಾ ಬನ್ನಿ.

ಅತ್ಯಂತ ಸುಲಭದ್ದು ಎಂದರೆ ಮಧ್ಯಾಹ್ನ ಟೀ- ಕಾಫಿ ಸೇವನೆ ವೇಳೆ ಸಿಗರೇಟ್ ಬೇಕೆನಿಸಿದಾಗ ಟೀ-ಕಾಫಿ ಕುಡಿಯುವುದನ್ನೇ ಬಿಡಿ. ಹೀಗೆ ಬಿಟ್ಟಾಗಲೂ ಸಿಗರೇಟ್ ಬೇಕೇ ಬೇಕು ಎನ್ನಿಸಿದರೆ ಒಂದು ಸಲ ಅದಕ್ಕೆ ಲೈಟರ್ ಹಚ್ಚಿ ಎಸೆದು ಬಿಡಿ. ಇಲ್ಲವೇ ಅರ್ಧ ಅರ್ಧ ಕಟ್ ಮಾಡಿಕೊಂಡು ಸ್ಮೋಕ್ ಮಾಡಿ.

ಹೀಗೆಲ್ಲಾ ಮಾಡಿದಾಗಲೂ ಸಮಸ್ಯೆ ಉಂಟಾದರೆ ವೈದ್ಯರನ್ನು ಭೇಟಿ ಮಾಡಿ. ತೀವ್ರ ಮದ್ಯಪಾನಿಯೊಬ್ಬ ಏಕಾಏಕಿ ಮದ್ಯವನ್ನು ಬಿಟ್ಟಾಗ ಫಿಟ್ಸ್ ಬರುವ ಸಮಸ್ಯೆ ಇರುತ್ತದೆ, ಕೆಲವು ಸಲ ಪ್ರಾಣಕ್ಕೂ ಕುತ್ತಾಗಬಹುದು. ಆದ್ದರಿಂದ ಅಂಥವರಿಗೆ ಮದ್ಯದ ಬದಲು ಪರ್ಯಾಯ ಔಷಧವನ್ನು ನೀಡುತ್ತಾ, ಕ್ರಮೇಣ ಅದನ್ನು ಕಡಿಮೆ ಮಾಡಲಾಗುತ್ತದೆ. ಆದರೆ ಧೂಮಪಾನವನ್ನು ಏಕಾಏಕಿ ಬಿಟ್ಟರೆ ಇಂಥ ಯಾವ ಗಂಭೀರ ಸಮಸ್ಯೆಗಳೂ ಇರುವುದಿಲ್ಲ. ಅಷ್ಟಕ್ಕೂ ತೀರಾ ವ್ಯಸನಿಯಾಗಿದ್ದರೆ ವೈದ್ಯರು ಕೂಡ ಅದಕ್ಕೆ ಪರ್ಯಾಯ ನಿಕೋಟಿನ್ ಕೊಟ್ಟೇ ಕೊಡುತ್ತಾರಲ್ಲವೆ?

ಶುರು ಹೇಗೆ ಆಗುತ್ತದೆ?: ಸಿಗರೇಟ್ ಶುರು ಮಾಡಲು ಹತ್ತಾರು ಕಾರಣಗಳಿವೆ. ಸಿನಿಮಾಗಳಲ್ಲಿ ನಟರು ಮಾಡಿದ್ದನ್ನು ನೋಡಿ, ಅದರ ಪ್ರಭಾವ ಯುವ ಜನರ ಮೇಲೆ ಹೆಚ್ಚಾಗುತ್ತದೆ. ಇನ್ನೊಂದು ಪೀರ್ ಪ್ರೆಷನ್. ಇದರರ್ಥ ಸುತ್ತಮುತ್ತಲು ಇರುವ ಗೆಳೆಯರು ಪ್ರಚೋದನೆ ಮಾಡುವುದು. ಅವರ ಒತ್ತಾಸೆಗೆ ಮಣಿದು ಒಂದು ಧಮ್ ಎಳೆಯುತ್ತಾರೆ ಎಂದುಕೊಳ್ಳಿ. ಆಗ ಇವರಿಗೆ ಏನಾದರೂ ಟೆನ್ಷನ್ ಇದ್ದರೆ ಆ ಕ್ಷಣದಲ್ಲಿ ಅದು ಮಾಯವಾದಂತೆ ಭಾಸವಾಗುತ್ತದೆ. ಅಲ್ಲಿಂದ ಇನ್ನೊಂದು, ಮತ್ತೊಂದು ಶುರುವಾಗಿ ಅದು ವ್ಯಸನವಾಗಿ ಮಾರ್ಪಡುತ್ತದೆ. ಇಂದಿನ ಕೆಲವು ಯುವತಿಯರು ಇದಕ್ಕೆ ದಾಸವಾಗುತ್ತಿದ್ದಾರೆ. ಅದನ್ನು ನೋಡಿದ ಹುಡುಗರಿಗೂ ಕಿಕ್ ಬರುತ್ತದೆ. ಹುಡುಗಿಯೇ ಮಾಡುತ್ತಿದ್ದಾಳೆ, ನಾನು ಮಾಡಿದರೇನು ಎನ್ನಿಸುತ್ತದೆ. ಇಲ್ಲದೇ ಹೋದರೆ ಹುಡುಗಿರನ್ನು ಅಟ್ರ್ಯಾಕ್ಟ್ ಮಾಡಲು ಇದು ಒಂದು ರೀತಿಯ ದಾರಿ ಎನ್ನಿಸುವುದೂ ಉಂಟು.

ಶ್ಯೂರಿಟಿ ಇರಲಿ ಎಚ್ಚರ!: ಕೆಲಸದ ಒತ್ತಡ, ವೈಯಕ್ತಿಕ ಹಾಗೂ ಸಾಮಾಜಿಕ ತೊಂದರೆಗಳಿಂದ ಬಳಲುತ್ತಿರುವ ಕಾರಣ ಧೂಮಪಾನಕ್ಕೆ ಮೊರೆ ಹೋಗಿರುವವರಂತೆ ಜಾಮೀನು (ಶ್ಯೂರಿಟಿ) ನೀಡಿ ಮೋಸ ಹೋಗಿ ಈ ಚಟಕ್ಕೆ ಬಲಿಯಾದವರೂ ನನ್ನ ಬಳಿ ಬರುತ್ತಾರೆ. ಅನೇಕ ಸಂದರ್ಭಗಳಲ್ಲಿ , ಸ್ನೇಹಿತರು ಇಲ್ಲವೇ ಪರಿಚಯಸ್ಥರು ಎಂಬ ಮುಜುಗರಕ್ಕೆ ಬಿದ್ದು ಇಲ್ಲವೇ ಸಾಲ ಪಡೆಯುವಾಗ ತುಂಬಾ ಒತ್ತಾಯ ಮಾಡಿದ ಎನ್ನುವ ಕಾರಣಕ್ಕೆ ಸಾಲ ಪತ್ರಕ್ಕೆ ‘ಅಯ್ಯೋ ಪಾಪ’ ಎಂದುಕೊಂಡು ಜಾಮೀನುದಾರರಾಗಿ ಸಹಿ ಹಾಕಿಬಿಡುತ್ತಾರೆ. ಇಂಥ ಸಂದರ್ಭದಲ್ಲಿ ಸಹಿ ಹಾಕಿಸಿಕೊಳ್ಳುವಾಗ ಇದ್ದ ಕಾಳಜಿ ಸಾಲ ಮಾಡಿದ ಮೇಲೆ ಹೊರಟುಹೋಗುತ್ತದೆ. ಸಾಲವನ್ನು ಸರಿಯಾಗಿ ತುಂಬದಾಗ, ಜಾಮೀನುದಾರರಿಗೆ ನೋಟಿಸ್ ಬರುತ್ತದೆ, ಎಷ್ಟೋ ಕೇಸ್​ಗಳಲ್ಲಿ ಜಾಮೀನುದಾರರೇ ಸಾಲವನ್ನು ತುಂಬಬೇಕಾದ ಪರಿಸ್ಥಿತಿ ಬಂದು ಬಿಡುತ್ತದೆ. ಈ ಟೆನ್ಷನ್​ನಿಂದ ಹೊರಕ್ಕೆ ಬರಲು ಇಂಥ ಕೆಟ್ಟ ಚಟಗಳ ದಾಸರಾಗುತ್ತಿದ್ದಾರೆ. ಆದ್ದರಿಂದ ಎಮೋಷನಲ್ ಫೂಲ್ ಆಗುವ ಮೊದಲು, ಯೋಚನೆ ಮಾಡಿ. ಸಹಿ ಹಾಕದೇ ಕೆಟ್ಟವರೆನಿಸಿಕೊಂಡರೂ ಪರವಾಗಿಲ್ಲ, ಸಹಿ ಹಾಕಿ ಮೋಸ ಹೋಗಬೇಡಿ.