ಅಂಕಣ

ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ...: ಮನೋಲ್ಲಾಸ

Webdesk - Ravikanth
| ಜಯಶ್ರೀ ಜೆ. ಅಬ್ಬಿಗೇರಿ

ಒಮ್ಮೆ ಪಂಡಿತನೊಬ್ಬ ರಾಜನನ್ನು ಸ್ತುತಿಸಿ ಒಂದು ಪದ್ಯವನ್ನು ಬರೆದ. ಆ ಪದ್ಯ ಕೇಳಿ ರಾಜನಿಗೆ ಅತೀವ ಸಂತೋಷವಾಯಿತು. ಆ ಪಂಡಿತನಿಗೆ ಮುತ್ತು, ರತ್ನಗಳನ್ನು ನೀಡಿದ್ದಲ್ಲದೆ ಆತನ ಹಳ್ಳಿಗೆ ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ಸಡಗರ, ಸಂಭ್ರಮದಿಂದ ಕರೆದೊಯ್ಯಬೇಕೆಂದು ಆದೇಶಿಸಿದ. ಕಹಳೆಯ ಘೊಷಗಳೊಂದಿಗೆ ಮೆರವಣಿಗೆ ಸಾಗಿತ್ತು. ಪಲ್ಲಕ್ಕಿ ಒಂದು ಹಳ್ಳಿ ತಲುಪುತ್ತಿದ್ದಂತೆ ಗೊಲ್ಲರ ಹುಡುಗನೊಬ್ಬ ಕುತೂಹಲದಿಂದ ಪಲ್ಲಕ್ಕಿ ಹೊತ್ತವನನ್ನು ಕೇಳಿದ- ‘ನೀನು ಯಾರನ್ನು ಒಯ್ಯುತ್ತಿರುವೆ?’ ‘ಪಂಡಿತನನ್ನು’ ಎಂದು ಆತ ಉತ್ತರಿಸಿದ. ‘ಪಂಡಿತ ಎಂದರೆ’ ಮರುಪ್ರಶ್ನೆ ಬಾಲಕನಿಂದ. ‘ಒಬ್ಬ ಜ್ಞಾನಿಯಾದ ವ್ಯಕ್ತಿ’. ‘ಜ್ಞಾನಿಯಾದ ವ್ಯಕ್ತಿ ಎಂದರೆ ನನಗೆ ತಿಳಿಯಲಿಲ್ಲ. ಸ್ವಲ್ಪ ಸರಳಭಾಷೆಯಲ್ಲಿ ತಿಳಿಸಿ’ ಎಂದ ಹುಡುಗ. ‘ಎಲ್ಲವನ್ನೂ ತಿಳಿದ ವ್ಯಕ್ತಿ’ ಎಂದ ಆ ಸೇವಕ. ಹುಡುಗನಿಗೆ ಅಚ್ಚರಿಯೆನಿಸಿ ಮತ್ತೆ ಪ್ರಶ್ನಿಸಿದ. ‘ನಿಜಕ್ಕೂ ಅವರಿಗೆ ಎಲ್ಲವೂ ತಿಳಿದಿದೆಯೇ?’ ಮೆರವಣಿಗೆ ನಿಂತಿತು.

ಪಲ್ಲಕ್ಕಿಯಿಂದಾಚೆ ಇಣುಕಿ ನೋಡಿದ ಪಂಡಿತ ಅಸಮಾಧಾನದಿಂದ, ‘ಏಕೆ ನಿಲ್ಲಿಸಿದಿರಿ?’ ಎಂದು ಕೇಳಿದ. ಪಲ್ಲಕ್ಕಿ ಹೊತ್ತ ವ್ಯಕ್ತಿ, ‘ಪಂಡಿತರೇ, ಇಲ್ಲೊಬ್ಬ ಹುಡುಗ ನಮಗೆ ಉತ್ತರಿಸಲಾಗದ ಪ್ರಶ್ನೆಗಳನ್ನು ಕೇಳುತ್ತಿದ್ದಾನೆ’ ಎಂದ. ಗರ್ವದಿಂದ ಹೊರಬಂದ ಪಂಡಿತ, ‘ಪ್ರಶ್ನೆಯೇ, ಕೇಳು’ ಎಂದ. ಹುಡುಗ ಕೆಳಗೆ ಬಗ್ಗಿ ತನ್ನ ಕೈಯಲ್ಲಿರುವ ಕೋಲಿನಿಂದ ಕೆಲವು ಅಸಮವಾದ ರೇಖೆಗಳನ್ನು ಬರೆದು, ‘ಇದೇನು ಹೇಳಬಲ್ಲಿರಾ’ ಎಂದು ಕೇಳಿದ. ಪಂಡಿತ ತಲೆ ಕೆರೆದುಕೊಂಡ ಯೋಚಿಸಿದ. ಅದು ತಾನು ಕಲಿತ ಯಾವ ಅಕ್ಷರದಂತೆಯೂ ಇರಲಿಲ್ಲ. ಯಾವುದೋ ಚಿತ್ರವಿರಬಹುದೆಂದು ಕಂಡು ಹಿಡಿಯಲು ಯತ್ನಿಸಿದ. ಕೊನೆಗೆ ಬೇಸತ್ತು, ‘ಇದು ಯಾವ ಅಕ್ಷರವೂ ಅಲ್ಲ. ಚಿತ್ರದಂತೆಯೂ ಕಾಣುತ್ತಿಲ್ಲ’ ಎಂದ. ಹುಡುಗ, ‘ತಾವು ಎಲ್ಲ ತಿಳಿದವರು. ಇಷ್ಟು ಸರಳವಾದದ್ದು ಗೊತ್ತಾಗಲಿಲ್ಲವೇ?’ ಎಂದಾಗ ಪಂಡಿತ ಸೋಲನ್ನು ಒಪ್ಪಿ ‘ಈಗ ನೀನು ಉತ್ತರ ನೀಡು’ ಎಂದ. ‘ಇದು ನನ್ನ ಎತ್ತು ಮೂತ್ರ ಮಾಡುವ ರೀತಿ’ ಎಂದು ಹುಡುಗ ಉತ್ತರಿಸಿದ. ಯಾರೇ ಆಗಲಿ ತಮಗೆ ಎಲ್ಲ ತಿಳಿದಿದೆ ಎಂದು ಹೇಳಲಾಗದು. ಹುಡುಗನಿಗೆ ತನ್ನ ಪ್ರಾಣಿಗಳ ಬಗ್ಗೆ ತಿಳಿದಿತ್ತು. ಪಂಡಿತನಿಗೆ ಪುಸ್ತಕದಲ್ಲಿ ಓದಿದ್ದು, ಜೀವನವಿಡಿ ಇತರ ವಿದ್ವಾಂಸರಿಂದ ಕಲಿತಿದ್ದು ತಿಳಿದಿತ್ತು.

ಬದುಕಿಗೆ ಸುಂದರ ರೂಪ ಕೊಡುವ ಜ್ಞಾನವೆಂಬುದು ದೊಡ್ಡ ಸಾಗರ. ಜ್ಞಾನವನ್ನು ನಮ್ಮ ಸಾಮರ್ಥ್ಯದ ಪ್ರಕಾರ ಪಡೆಯಬಹುದು. ಜ್ಞಾನಸಾಗರದ ಆಳ, ಅಗಲ, ವಿಸ್ತಾರವನ್ನು ದೂರದಿಂದಲೇ ನೋಡಿ ಬೆರಗಾಗುತ್ತೇವೆ. ಕೆಲವು ಬೊಗಸೆಗಳಿಗೆ ತೃಪ್ತಿ ಪಟ್ಟುಕೊಳ್ಳುತ್ತೇವೆ. ಕೇವಲ ಹನಿಗಳ ರುಚಿ ನೋಡಿ ಸಂಪೂರ್ಣ ಸಾಗರವನ್ನು ಕುಡಿದಂತೆ ಅಹಂಕಾರದಿಂದ ನಡೆದುಕೊಳ್ಳುತ್ತೇವೆ. ಜ್ಞಾನದ ಮಿತಿ ಅರಿತರೆ ಇನ್ನಷ್ಟು ತಿಳಿಯಲು ಪ್ರೇರಣೆಯಾಗುತ್ತದೆ. ‘ಓದಿದಷ್ಟು ನಮ್ಮ ಅಜ್ಞಾನ ಅರಿವಿಗೆ ಬರುತ್ತದೆ’. ಅಜ್ಞಾನದ ಕತ್ತಲೆ ಬಿಸಿಲಿಗೊಡ್ಡಿದ ಮಂಜಿನಂತೆ ಕರಗಿ ಹೋಗಬೇಕೆಂದರೆ ಜ್ಞಾನದ ಬಲ ಬೇಕೇ ಬೇಕು. ಬಹಿರಂಗದ ಸುಖ, ಅಂತರಂಗದ ಶಾಂತಿ ನೀಡುವ ಜ್ಞಾನ ಗಳಿಸೋಣ.

(ಲೇಖಕಿ ಆಂಗ್ಲಭಾಷಾ ಉಪನ್ಯಾಸಕಿ)