‘ಅಮೆರಿಕ ಫಸ್ಟ್’ ಹೆಸರಿನಲ್ಲಿ ಡೊನಾಲ್ಡ್ ಟ್ರಂಪ್ ಅವರ ನೀತಿಗಳು, ಕೈಗೊಳ್ಳುತ್ತಿರುವ ದುಡುಕಿನ ತೀರ್ವನಗಳು ಇತರ ದೇಶಗಳಿಗಿಂತ ಅಮೆರಿಕಕ್ಕೇ ಹೆಚ್ಚು ಮುಳುವಾಗಿ ಪರಿಣಮಿಸಲಿವೆ ಎಂದು ತಜ್ಞರು ಎಚ್ಚರಿಸುತ್ತಲೇ ಬಂಂದಿದ್ದರು. ಮುಂದಾಲೋಚನೆ ಮಾಡದೆ ದಿಢೀರ್ ನಿರ್ಧಾರ ಪ್ರಕಟಿಸುವುದು, ತಮ್ಮದೇ ನಿರ್ಧಾರವನ್ನು ವಾಪಸ್ ಪಡೆಯುವುದು ಅಥವಾ ಮತ್ತಷ್ಟು ಕಠಿಣ ಧೋರಣೆ ಅನುಸರಿಸುವುದು ಟ್ರಂಪ್ ನೀತಿಯೇ ಆಗಿಬಿಟ್ಟಿದೆ. 2017ರಿಂದ 2021ರ ಅವಧಿಯಲ್ಲಿ ಮೊದಲ ಬಾರಿ ಅಧ್ಯಕ್ಷರಾಗಿ, ಸೈ ಎನಿಸಿಕೊಂಡಿದ್ದ ಟ್ರಂಪ್ ಈ ಬಾರಿ ಸಂಪೂರ್ಣ ಬದಲಾಗಿದ್ದಾರೆ. ಸರ್ಕಾರದ ಒಳಗೆ, ಸರ್ಕಾರದ ಹೊರಗೆ ಪ್ರಬಲ ಪ್ರತಿರೋಧವನ್ನು ಎದುರಿಸುತ್ತಿದ್ದಾರೆ. ಅದರಲ್ಲೂ, ಜನರ ಭಾವನೆಗಳನ್ನು ಗೌರವಿಸದೆ ಮುಂದೆ ಸಾಗುತ್ತಿರುವ ಟ್ರಂಪ್ ನಡೆ ಈಗ ‘ಸರ್ವಾಧಿಕಾರಿ’ ಎಂಬ ಟೀಕೆಗೆ ಒಳಗಾಗಿದೆ. ಅದರಲ್ಲೂ, ಸರ್ಕಾರದ ಶಟ್ಡೌನ್ ದೀರ್ಘಾವಧಿಗೆ (ಅಕ್ಟೋಬರ್ 1ರಿಂದ ಹಲವು ಇಲಾಖೆಗಳು ಕಾರ್ಯನಿರ್ವಹಿಸುತ್ತಿಲ್ಲ) ಮುಂದುವರಿದಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
‘ಬೇರೆ ದೇಶಗಳ ನಡುವೆ ಯುದ್ಧ ನಿಲ್ಲಿಸಿದ್ದೇನೆ. ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗಬೇಕು’ ಎಂದು ಹಲವು ಬಾರಿ ಹೇಳಿದ್ದ ಟ್ರಂಪ್ ಈಗ ಆಂತರಿಕ ಬೇಗುದಿಯಿಂದ ತಲ್ಲಣಿಸಿದ್ದಾರೆ. ಟ್ರಂಪ್ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಿ, ‘ಅಮೆರಿಕದಲ್ಲಿ ಯಾರೂ ರಾಜರಿಲ್ಲ, ಎಲ್ಲರೂ ಸಮಾನರು ಮತ್ತು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಾರೆ’ ಎಂಬ ಸಂದೇಶವನ್ನು ಸಾರಲು ಆರಂಭವಾದ ‘ನೋ ಕಿಂಗ್ಸ್’ ಪ್ರತಿಭಟನೆ ಬೃಹತ್ ಸ್ವರೂಪ ಪಡೆದುಕೊಂಡಿದೆ. ಇದೇ ವರ್ಷ ಟ್ರಂಪ್ ಆಡಳಿತದ ವಿರುದ್ಧ ಮೂರು ಬಾರಿ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿದೆ. ಈ ಬಾರಿ ಅಕ್ಟೋಬರ್ 18ರಂದು 50 ರಾಜ್ಯಗಳಲ್ಲಿ ‘ನೋ ಕಿಂಗ್ಸ್’ ಘೋಷಣೆ ಪ್ರತಿಧ್ವನಿಸಿತು. 76 ಲಕ್ಷ ಜನರು ಈ ರ್ಯಾಲಿಗಳಲ್ಲಿ ಭಾಗವಹಿಸಿ ಟ್ರಂಪ್ಗೆ ‘ನೀವು ರಾಜರಲ್ಲ’ ಎಂಬ ಸ್ಪಷ್ಟ ಹಾಗೂ ಖಡಕ್ ಸಂದೇಶವನ್ನು ರವಾನಿಸಿದ್ದಾರೆ. ನ್ಯೂಯಾರ್ಕ್ನ ಟೈಮ್ ಸ್ಕೆ್ವೕರ್ನಲ್ಲಿ ನಡೆದ ರ್ಯಾಲಿಯಲ್ಲಂತೂ 1 ಲಕ್ಷ ಜನರು ಭಾಗವಹಿಸಿದ್ದರು. ನೇಪಾಳ ಮತ್ತು ಬಾಂಗ್ಲಾದೇಶದಂತೆ ಇಲ್ಲಿನ ಪ್ರತಿಭಟನೆ ಯಾವುದೇ ಹಿಂಸಾರೂಪಕ್ಕೆ ತಿರುಗಲಿಲ್ಲ ಎಂಬುದು ಸಕಾರಾತ್ಮಕ ಸಂಗತಿಯಾದರೂ, ಶಟ್ಡೌನ್ ಹಾಗೂ ಟ್ರಂಪ್ರ ಇತರ ನಿರ್ಧಾರಗಳು ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿರುವುದಂತೂ ಹೌದು.
ವಿರೋಧಕ್ಕೆ ಮತ್ತು ಪ್ರತಿಭಟನೆಗಳಿಗೆ ತಾನು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂಬುದನ್ನು ಬಿಂಬಿಸಲು ಡೊನಾಲ್ಡ್ ಟ್ರಂಪ್ ಕೃತಕ ಬುದ್ಧಿಮತ್ತೆಯನ್ನು ಅಸ್ತ್ರವಾಗಿಸಿಕೊಂಡಿದ್ದಾರೆ. ಆದರೆ, ಟ್ರಂಪ್ ಕುಚೋದ್ಯಗಳು ಜನರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಅ.18ರ ನೋ ಕಿಂಗ್ಸ್ ಪ್ರತಿಭಟನೆಯ ಕುರಿತು ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ನೀಡಿದ್ದು, ತಮ್ಮ ಟ್ರೂತ್ ಸಾಮಾಜಿಕ ಜಾಲತಾಣದ ಖಾತೆಯಲ್ಲಿ 20 ಸೆಕೆಂಡುಗಳ ಎಐ ವಿಡಿಯೋ ಹಂಚಿಕೊಂಡು ಅಣಕಿಸಿದ್ದಾರೆ. ರಾಜನಂತೆ ಕಿರೀಟ ತೊಟ್ಟಿರುವ ಟ್ರಂಪ್ ಯುದ್ಧ ವಿಮಾನದ ಮೂಲಕ ನಭಕ್ಕೆ ಜಿಗಿದು ಪ್ರತಿಭಟನಾಕಾರರ ಮೇಲೆ ಮಲದಂತೆ ಕಾಣುವ ವಸ್ತುವನ್ನು ಎಸೆಯುತ್ತಿರುವಂತೆ ವಿಡಿಯೋದಲ್ಲಿ ಚಿತ್ರಿಸಲಾಗಿದೆ.
ಇನ್ಸ್ಟಾಗ್ರಾಂನಲ್ಲೂ ರಾಜನಂತೆ ಧಿರಿಸು ತೊಟ್ಟಿರುವ ಟ್ರಂಪ್ ಶ್ವೇತಭವನದ ಮುಂದೆ ನಿಂತು ಆಂಡ್ರಿಯಾ ಬೊಸೆಲ್ಲಿ ಅವರ ಸಂಗೀತದೊಂದಿಗೆ ಪೋಸ್ ಕೊಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ನೋ ಕಿಂಗ್ಸ್ ಪ್ರತಿಭಟನಾಕಾರರನ್ನು ಟ್ರೋಲ್ ಮಾಡಿದ್ದಾರೆ. ಈ ಹಿಂದೆ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಭದ್ರತಾ ಪಡೆಗಳು ಬಂಧಿಸಿ, ಎಳೆದೊಯ್ಯುತ್ತಿರುವಂತೆ ಬಿಂಬಿಸಿ, ಎಐ ವಿಡಿಯೋ ಹಂಚಿಕೊಂಡಿದ್ದರು.
ಅಧಿಕಾರ ದುರ್ಬಳಕೆ: ಡೊನಾಲ್ಡ್ ಟ್ರಂಪ್ ತಾವು ಅಧಿಕಾರಕ್ಕೆ ಬಂದ ದಿನದಿಂದಲೂ (2025ರ ಜನವರಿ 20) ಹತ್ತಾರು ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದಾರೆ. ಜತೆಗೆ ಅವರು ತೆಗೆದುಕೊಂಡಿರುವ ನಿರ್ಧಾರಗಳು ಸಂಸತ್ತು ಮತ್ತು ನ್ಯಾಯಾಂಗವನ್ನು ಮೀರಿದ್ದು, ಅಧ್ಯಕ್ಷರ ಅಧಿಕಾರ ದುರ್ಬಳಕೆಯಾಗುತ್ತಿದೆ ಎಂಬುದು ಪ್ರತಿಭಟನಾಕಾರರ ಆರೋಪ.
ಸರ್ಕಾರದ ಶಟ್ಡೌನ್: ಬಜೆಟ್ಗೆ ಅನುಮೋದನೆ ನೀಡುವ ಸಂಬಂಧ ರಿಪಬ್ಲಿಕನ್ ಮತ್ತು ಡೆಮಾಕ್ರೆಟಿಕ್ ಸೆನೆಟರ್ಗಳ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರ 23 ದಿನಗಳಿಂದ ಶಟ್ಡೌನ್ ಆಗಿದೆ. ತುರ್ತು ಅಗತ್ಯದ ಸೇವೆಗಳು ಮತ್ತು ಇಲಾಖೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಶಟ್ಡೌನ್ನಿಂದಾಗಿ ಸಾರ್ವಜನಿಕರಿಗೆ ಆಗಿರುವ ತೊಂದರೆಯನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ.
ವಲಸೆ ನೀತಿ: ಟ್ರಂಪ್ರ ವಲಸೆ ನೀತಿಯನ್ನು ಪ್ರತಿಭಟನಾಕಾರರು ವಿರೋಧಿಸುತ್ತಿದ್ದಾರೆ. ಐಸಿಇ ಅಧಿಕಾರಿಗಳು ವಲಸಿಗರ ಮೇಲೆ ದಾಳಿ ನಡೆಸುತ್ತಿದ್ದು, ಸೈನಿಕರನ್ನು ನಗರಗಳಲ್ಲಿ ನಿಯೋಜಿಸಿರುವುದನ್ನು ವಿರೋಧಿಸಿ ಪ್ರತಿಭಟನಾಕಾರರು ರ‍್ಯಾಲಿ ನಡೆಸಿದ್ದಾರೆ.
ಇತರ ನೀತಿಗಳು: ವಿಶ್ವವಿದ್ಯಾಲಯಗಳಿಗೆ ಹಣಕಾಸು ನೆರವು ಕಡಿತ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಹೆಚ್ಚಿದ ಕಟ್ಟುಪಾಡುಗಳು, ಉದ್ಯೋಗ ಕಡಿತ, ಬಜೆಟ್ ಕೊರತೆ ಮತ್ತು ಸರ್ಕಾರದಲ್ಲಿ ಉದ್ಯಮಿಗಳ ಪ್ರಭಾವ ಹೆಚ್ಚಾಗಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.
- ಅಕ್ಟೋಬರ್ 18ರಂದು (ಶನಿವಾರ) ಅಮೆರಿಕದ 50 ರಾಜ್ಯಗಳ 2600 ಸ್ಥಳಗಳಲ್ಲಿ ‘ನೋ ಕಿಂಗ್ಸ್’ ರ್ಯಾಲಿಗಳನ್ನು ಆಯೋಜಿಸಲಾಗಿತ್ತು. ಇದರಲ್ಲಿ ಒಟ್ಟು 76 ಲಕ್ಷ ಜನರು ಭಾಗವಹಿಸಿದ್ದರು.
- ಉದ್ಯೋಗ ಕಡಿತದ ನಿರ್ಧಾರವನ್ನು ವಿರೋಧಿಸಿ 2025ರ ಏಪ್ರಿಲ್ನಲ್ಲಿ ಕೂಡ ಟ್ರಂಪ್ ಮತ್ತು ಎಲಾನ್ ಮಸ್ಕ್ ವಿರುದ್ಧ ದೇಶದ 1300 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು. ಜೂನ್ನಲ್ಲಿ ಪ್ರತಿಭಟನೆ ತಾರಕಕ್ಕೆ ಏರಿ 2100 ಸ್ಥಳಗಳಲ್ಲಿ ರ್ಯಾಲಿಗಳನ್ನು ನಡೆಸಲಾಗಿತ್ತು.
ಅಮೆರಿಕ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿಗೆ ಸಿಲುಕಿದ್ದು, ಇದು ಯಾವಾಗ ಕೊನೆಗೊಳ್ಳಲಿದೆ ಎಂಬುದು ಸದ್ಯಕ್ಕಂತೂ ಊಹೆ ಮಾಡಲಾಗದ ಸಂಗತಿಯಾಗಿದೆ. ಅಮೆರಿಕದಲ್ಲಿ ಆರ್ಥಿಕ ವರ್ಷ ಸೆಪ್ಟೆಂಬರ್ 30ಕ್ಕೆ ಅಂತ್ಯಗೊಂಡು, ಹೊಸ ಆರ್ಥಿಕ ವರ್ಷ ಅಕ್ಟೋಬರ್ 1ಕ್ಕೆ ಆರಂಭಗೊಳ್ಳುತ್ತದೆ. ಹೊಸ ಆರ್ಥಿಕ ವರ್ಷ ಆರಂಭಗೊಳ್ಳುವ ಮುನ್ನವೇ ಹಣಕಾಸು ವಿಧೇಯಕ ಅಮೆರಿಕ ಸಂಸತ್ತಿನ ಎರಡೂ ಸದನಗಳಲ್ಲಿ ಅಂಗೀಕಾರವಾಗಬೇಕು. ಮೇಲ್ಮನೆ ಸೆನೆಟ್ ಮತ್ತು ಕೆಳಮನೆ ಹೌಸ್ ಆಫ್ ರೆಪ್ರಿಸೆಂಟೇಟಿವ್ ಅಂಗೀಕಾರದ ಬಳಿಕವೇ ಸರ್ಕಾರಿ ಯೋಜನೆಗಳಿಗೆ ಹಣ ಮಂಜುರಾಗುತ್ತದೆ. ಈ ಬಾರಿ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷದವರ ನಡುವಿನ ಭಿನ್ನಾಭಿಪ್ರಾಯ ಬಗೆಹರಿಯದ್ದರಿಂದ ಬಜೆಟ್ಗೆ ಅಂಗೀಕಾರ ದೊರೆತಿಲ್ಲ. ಹಾಗಾಗಿ, ಸರ್ಕಾರಿ ಖಜಾನೆಗೆ ಬೀಗ ಬಿದ್ದಿದ್ದು (ಶಟ್ಡೌನ್), ತುರ್ತು ಅಗತ್ಯವಿಲ್ಲದ ಇಲಾಖೆಗಳ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಇದರಿಂದ ಶೇಕಡ 40ರಷ್ಟು ಸರ್ಕಾರಿ ನೌಕರರು ಅಂದರೆ 7.50 ಲಕ್ಷ ನೌಕರರು ವೇತನ ರಹಿತ ರಜೆ ಮೇಲೆ ತೆರಳಿದ್ದಾರೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದ ಮೊದಲ ಅವಧಿಯಲ್ಲೂ 2018-19ರ ನಡುವೆ ಮೂರು ಬಾರಿ ಸರ್ಕಾರಿ ಆಡಳಿತ ಸ್ಥಗಿತಗೊಂಡಿತ್ತು. 2018ರ ಡಿಸೆಂಬರ್ನಿಂದ 2019ರ ಜನವರಿ ನಡುವೆ 35 ದಿನ ಆಡಳಿತ ವ್ಯವಸ್ಥೆ ಸ್ಥಗಿತಗೊಂಡಿತ್ತು. ರಿಪಬ್ಲಿಕನ್ ಮತ್ತು ಡೆಮೋಕ್ರಾಟ್ ರಾಜಕೀಯ ಪಕ್ಷದ ಪ್ರತಿನಿಧಿಗಳ ನಡುವೆ ಒಮ್ಮತ ಮೂಡದಿರುವುದರಿಂದ 23 ದಿನಗಳಾದರೂ ಶಟ್ಡೌನ್ ಅಂತ್ಯಗೊಂಡಿಲ್ಲ.
ವಿರೋಧಿಗಳ ವರ್ಚಸ್ಸು ಕುಂದಿಸಲು ಮತ್ತು ತಮ್ಮನ್ನು ತಾವು ‘ಸುಪ್ರೀಂ ಲೀಡರ್’ ಎಂದು ತೋರಿಸಿಕೊಳ್ಳಲು ಟ್ರಂಪ್ ಪದೇಪದೇ ಎಐ ಆಧಾರಿತ ನಕಲಿ ಫೋಟೋ ಮತ್ತು ವಿಡಿಯೋಗಳ ಮೊರೆ ಹೋಗುತ್ತಿದ್ದಾರೆ. ಈವರೆಗೆ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಎಐ ಆಧಾರಿತ ನಕಲಿ ಫೋಟೋ ಮತ್ತು ವಿಡಿಯೋದ 62 ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಫೇಕ್ ನ್ಯೂಜ್, ವ್ಯಂಗ್ಯ ಮತ್ತು ಅವಮಾನವನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಈ ಪೋಸ್ಟ್ಗಳ ಮೂಲಕ ಟ್ರಂಪ್ ತಾವು ಹೀರೋ ಎಂಬಂತೆ ಬಿಂಬಿಸಿಕೊಂಡಿದ್ದು, ರಾಜಕೀಯ ವಿರೋಧಿಗಳನ್ನು ಅವಮಾನಿಸುತ್ತ, ಅವರನ್ನು ದೇಶಭಕ್ತಿ ಇಲ್ಲದವರು ಎಂದು ಜರೆದಿದ್ದಾರೆ. ಶ್ವೇತಭವನ ಇದನ್ನು ‘ಸೃಜನಾತ್ಮಕ ಕಾರ್ಯತಂತ್ರ’ ಎಂದು ಸಮರ್ಥಿಸಿಕೊಂಡಿದ್ದರೆ, ಟ್ರಂಪ್ ವಿರೋಧಿಗಳು ‘ಇದು ಅಪಾಯಕಾರಿ ಪ್ರಯೋಗ’ ಎಂದು ಜರೆದಿದ್ದಾರೆ.