ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ನಾಗಪುರ ‘ಕಿತ್ತಳೆ ನಗರಿ’ ಎಂಬ ಖ್ಯಾತಿ ಹೊಂದಿದೆ. ಬೇಸಿಗೆಯಲ್ಲಿ 48, ಕೆಲವೊಮ್ಮೆ 50 ಡಿಗ್ರಿ ಸೆಲ್ಸಿಯಸ್ವರೆಗೂ ಉಷ್ಣಾಂಶ ಏರಿ ಸನ್ ಸಿಟಿಯಾಗುವ, ಚಳಿಗಾಲದಲ್ಲಿ 10 ಡಿಗ್ರಿ ಸೆಲ್ಸಿಯಸ್ವರೆಗೂ ಕುಸಿದು ಚುಮು ಚುಮು ಚಳಿಯಲ್ಲಿ ಚಹಾದೊಂದಿಗೆ ಭಾಕರ್ವಾಡಿ ಸವಿಯುವ ವಿಶಿಷ್ಟ ನಗರವಿದು. ಇದೇ ನಾಗಪುರದ ಸೆಂಟ್ರಲ್ ಇಂಡಿಯಾ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್(ಸಿಐಐ)ನಲ್ಲಿ ಇತ್ತೀಚೆಗೆ (ಮಾರ್ಚ್ 16) ಘಟಿಕೋತ್ಸವ ಸಮಾರಂಭ ನಡೆಯಿತು. ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ, ಮಾತನಾಡಿದವರು ಮುಖ್ಯ ಅತಿಥಿಗಳಾಗಿದ್ದ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಜಯರಾಂ ಗಡ್ಕರಿ. ಸಾಮಾನ್ಯವಾಗಿ, ರಾಜಕಾರಣಿಗಳು ಮಾತನಾಡಿದರೆ ವಿವಾದಗಳು ಏರ್ಪಡುತ್ತವೆ, ಆ ಹೇಳಿಕೆಗಳ ಕುರಿತಾಗಿ ಸದನದ ಕಲಾಪವನ್ನೂ ನಡೆಯಲು ಬಿಡದೆ ಗಲಾಟೆ, ದಾಂಧಲೆ ನಡೆಸಲಾಗುತ್ತದೆ. ಟಿ.ವಿ. ಟಾಕ್ ಶೋಗಳಲ್ಲಿ ಕಿರುಚಾಡಿಕೊಂಡು ನಡೆಸುವ ಒಂದಷ್ಟು ‘ಚರ್ಚೆ’ಗಳು ವಿವಾದದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯುತ್ತವೆ. ಅಲ್ಲಿಗೆ, ಆ ರಾಜಕಾರಣಿಗೆ ಸಾಕಷ್ಟು ಪ್ರಚಾರ ಸಿಕ್ಕ ‘ಸಂತೃಪ್ತಿ’!
ನಿತಿನ್ ಗಡ್ಕರಿ ಯಾವುದೇ ಜೇನುಗೂಡಿಗೆ ಕಲ್ಲೆಸೆಯಲಿಲ್ಲ. ವಿವಾದ ಸೃಷ್ಟಿಯಾಗುವಂತೆ ಅಬ್ಬರಿಸಿ ಮಾತನಾಡಲಿಲ್ಲ. ಆದರೆ, ಈ ದೇಶದ ಪ್ರತಿಯೊಬ್ಬ ರಾಜಕಾರಣಿ ಘಟಿಕೋತ್ಸವದ ಅವರ ಭಾಷಣವನ್ನು ಮತ್ತೆ ಮತ್ತೆ ಕೇಳಬೇಕು. ರಾಜಕಾರಣಿಗಳು ಮಾತ್ರವಲ್ಲ ಧನಿಕರು, ಉದ್ಯಮಿಗಳು, ವಿದ್ಯಾರ್ಥಿಗಳು ಸೇರಿದಂತೆ ಜೀವನದಲ್ಲಿ ಉತ್ಕರ್ಷದ ಕನಸು ಕಾಣುವ ಪ್ರತಿಯೊಬ್ಬರೂ ಆ ಮಾತುಗಳನ್ನು ಕೇಳಬೇಕು, ಅವಲೋಕಿಸಬೇಕು. ಅಧಿಕಾರದಲ್ಲಿ ಇದ್ದೂ, ರಾಜಕಾರಣಿಯಾಗಿದ್ದೂ, ಮತಬ್ಯಾಂಕ್ನ ಚಿಂತೆ ಮಾಡದೆ ಗಡ್ಕರಿ ಇಂಥ ಮಾತುಗಳನ್ನು ಹೇಳಿರುವುದಕ್ಕೆ ಕಾರಣ ಅವರ ಪ್ರಾಮಾಣಿಕತೆ ಮತ್ತು ಆತ್ಮಸ್ಥೈರ್ಯ. ಅದಕ್ಕೆ ಒಂದು ಹ್ಯಾಟ್ಸಾಫ್ ಹೇಳುತ್ತ ಗಡ್ಕರಿ ಮಾತಿನ ಮಂಟಪಕ್ಕೆ ಹೋಗೋಣ.
‘‘ಯಾವುದೇ ವ್ಯಕ್ತಿ ಜಾತಿ, ಮತ, ಪಂಥ, ಧರ್ಮ, ಭಾಷೆಯ ಆಧಾರದಲ್ಲಿ ದೊಡ್ಡವನಾಗುವುದಿಲ್ಲ. ವ್ಯಕ್ತಿ ದೊಡ್ಡವ ಎನಿಸಿಕೊಳ್ಳುವುದು ಅವನ ಗುಣಗಳಿಂದ, ಅಂದರೆ ವ್ಯಕ್ತಿತ್ವದಿಂದ. ಹಾಗಾಗಿ, ಯಾರಾದರೂ ನನ್ನ ಬಳಿ ಜಾತಿಯ ಮಾತು ಹೇಳಿದರೆ ಅವರಿಗೆ ಪೆಟ್ಟು ಬೀಳುತ್ತದೆ. ನಾನು ಹಿಂದೆಯೂ ಈ ಮಾತನ್ನು ಹೇಳಿದಾಗ ನನ್ನ ಕೆಲ ಸ್ನೇಹಿತರು ಇದರಿಂದ ನಿಮ್ಮ ರಾಜಕೀಯ ಜೀವನಕ್ಕೆ ಹಿನ್ನಡೆಯಾಗುತ್ತದೆ ಎಂದರು. ಯಾರು ಮತ ಹಾಕಲಿ, ಬಿಡಲಿ, ಚುನಾವಣೆಯಲ್ಲಿ ನಾನು ಗೆಲ್ಲಲಿ ಅಥವಾ ಸೋಲಲಿ ಚಿಂತೆಯಿಲ್ಲ. ಆದರೆ, ನಾನು ನಂಬಿದ ಮೌಲ್ಯ, ಸಿದ್ಧಾಂತ ಮತ್ತು ನನ್ನತನವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಚುನಾವಣೆಯಲ್ಲಿ ಸೋತರೆ ಬದುಕಲು ಆಗುವುದಿಲ್ಲವೇನು? ಮಂತ್ರಿಯಾಗದಿದ್ದರೆ ಯಾರೂ ಸಾಯುವುದಿಲ್ಲ. ರಾಜಕೀಯ ಎಂಬುದು ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗಳನ್ನು ಸಾಕಾರಗೊಳಿಸಲು ಇರುವ ಅಸ್ತ್ರ. ಅದನ್ನು ಚೆನ್ನಾಗಿ ಉಪಯೋಗಿಸಬೇಕು’’. ಈ ಮಾತುಗಳ ಹಿನ್ನೆಲೆಯನ್ನೂ ಅರ್ಥ ಮಾಡಿಕೊಳ್ಳಬೇಕು.
‘‘ಶಿಕ್ಷಣಕ್ಕೆ ದೊಡ್ಡ ಶಕ್ತಿ ಇದೆ. ಪದವಿ ಪಡೆದುಕೊಳ್ಳುವ ವಿದ್ಯಾರ್ಥಿ ತನ್ನ ಕುಟುಂಬವನ್ನು, ಸಮಾಜವನ್ನು ಮುಂದಕ್ಕೆ ಕೊಂಡೊಯ್ಯುವ ಬಲ ಪಡೆದುಕೊಳ್ಳುತ್ತಾನೆ. ಪದವಿ ಎಂಬುದು ಬರೀ ಶಿಕ್ಷಣದ ಕ್ರಮವಲ್ಲ. ಅದು ಜ್ಞಾನಕ್ಕೆ (knowledge) ಸಂಬಂಧಿಸಿದ್ದು. ಜ್ಞಾನದ ಬಲದಿಂದ ಮಹತ್ವದ ಬದಲಾವಣೆ ತರಬಹುದು. ಏನು ಬೇಕಾದರೂ ಸಾಧಿಸಬಹುದು. ‘conversion of knowledge into wealth is future’ (ಜ್ಞಾನವನ್ನು ಸಂಪತ್ತಾಗಿ ಪರಿವರ್ತಿಸುವುದು ಭವಿಷ್ಯ). ಇನ್ನೊಂದು ನನ್ನ ಮುಖ್ಯ ನಂಬಿಕೆಯೆಂದರೆ No Person is Waste, No Material is Waste (ಯಾವುದೇ ವ್ಯಕ್ತಿ, ಯಾವುದೇ ವಸ್ತು ವ್ಯರ್ಥವಲ್ಲ). ಶಿಕ್ಷಣ ಜ್ಞಾನವನ್ನು ಒದಗಿಸುತ್ತದೆ. ಜ್ಞಾನದ ಬಲದಿಂದ ಸಂಪತ್ತು ಸೃಷ್ಟಿಯಾಗುತ್ತದೆ. ಆದರೆ, ಈ ಸಂಪತ್ತನ್ನು ಹೇಗೆ ವಿನಿಯೋಗಿಸಬೇಕು? ಖಂಡಿತ, ಸ್ವಂತದ ಅವಶ್ಯಕತೆ ಅಂದರೆ ಜೀವನ ನಿರ್ವಹಣೆಗಾಗಿ ಒಂದಿಷ್ಟು ಹಣ ಬೇಕು, ಇದು ಪ್ರಾಥಮಿಕ ಅಗತ್ಯತೆ. ಏಕೆಂದರೆ, ಹಸಿವಿನಿಂದ ಬಳಲುತ್ತಿರುವವರಿಗೆ ಯಾವುದೇ ತತ್ತ್ವ, ಸಿದ್ಧಾಂತವನ್ನು ಬೋಧಿಸಬಾರದು. ಆದರೆ, ಜೀವನ ನಿರ್ವಹಣೆಯ ಸವಾಲು ಬಗೆಹರಿಸಿಕೊಂಡ ಬಳಿಕ ಸಂಪತ್ತಿನ ಬಳಕೆ ಬಡವರ, ಶೋಷಿತರ ಕಲ್ಯಾಣಕ್ಕೆ, ಸಮಾಜದ ಅಭಿವೃದ್ಧಿಗೆ ಬಳಕೆಯಾಗಬೇಕು. ಬಡವರ ಕಣ್ಣೀರು ಒರೆಸಲು ನೆರವಾಗಬೇಕು. ಬಡವರಿಂದ ಸಿಗುವ ಆಶೀರ್ವಾದ ಜಗತ್ತಿನಲ್ಲಿ ಬಲು ದೊಡ್ಡ ಸಂಪತ್ತು!’’
ಅಬ್ಬಾ! ಎಷ್ಟೊಂದು ಪಾಠಗಳಿವೆ ನೋಡಿ. ಇಲ್ಲಿ ಇನ್ನೂ ವಿಶೇಷ ಸಂಗತಿಯೆಂದರೆ ಗಡ್ಕರಿ ಇದೆಲ್ಲವನ್ನೂ ತಾತ್ವಿಕವಾಗಿ ಬೋಧನೆ ಮಾಡಿಲ್ಲ. ಪ್ರಾಯೋಗಿಕವಾಗಿ ತಮ್ಮ ಜೀವನದಲ್ಲಿ, ಕಾರ್ಯದಲ್ಲಿ ಜಾರಿಗೆ ತಂದು, ನಿಜವಾದ ಯಶಸ್ಸು ಮತ್ತು ಸಾರ್ಥಕತೆ ಎರಡನ್ನೂ ಅನುಭವಿಸಿ ಆಡಿರುವ ಮನದಾಳದ ಮಾತುಗಳು. ಹೇಳಿದಂತೆ ನಡೆಯುವವರ ಮಾತಿಗೆ ಬೆಲೆ ಇದೆ ಎಂದು ನಿರೂಪಿಸುವ ಮೂಲಕ ಗಡ್ಕರಿ ಮತ್ತೊಮ್ಮೆ ನೈತಿಕತೆ, ನಿಜವಾದ ಅಭಿವೃದ್ಧಿ, ತತ್ವಜ್ಞಾನ ಮತ್ತು ಅಧ್ಯಾತ್ಮ ಇದೆಲ್ಲದರ ಬಗ್ಗೆ ವಿಭಿನ್ನ ಹಾಗೂ ವಿಶಿಷ್ಟ ನೋಟವನ್ನು ನೀಡಿದ್ದಾರೆ. ಅಂದಹಾಗೆ ಸ್ವಾರಸ್ಯದ ಸಂಗತಿ ಎಂದರೆ, ಗಡ್ಕರಿಯವರ ಬಳಿ 12 ಡಾಕ್ಟರೇಟ್ ಪದವಿಗಳಿವೆ ((d.litt). ದೇಶದ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಅವರಿಗೆ ಡಾಕ್ಟರೇಟ್ ನೀಡಿ ಗೌರವಿಸಿವೆ. ಆದರೆ, ಅವರು ಇಂದಿಗೂ ತಮ್ಮ ಹೆಸರಿನೊಂದಿಗೆ ‘ಡಾ.’ ಬಳಸುತ್ತಿಲ್ಲ! ಅಷ್ಟೇ ಅಲ್ಲ, ಕಡಿಮೆ ಅವಧಿಯಲ್ಲಿ ಗುಣಮಟ್ಟದ ಸೇತುವೆ ನಿರ್ವಣ, ರಸ್ತೆ ನಿರ್ಮಾಣ ಸೇರಿದಂತೆ ಏಳು ವಿಶ್ವದಾಖಲೆಗಳು ಇವರ ಹೆಸರಿನಲ್ಲಿವೆ!
1957ರ ಮೇ 27ರಂದು ನಾಗಪುರದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ನಿತಿನ್ ಗಡ್ಕರಿ ಕಾನೂನು (ಎಲ್ಎಲ್ಬಿ) ವಿಷಯದಲ್ಲಿ ಪದವೀಧರರು. ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ಬಿಜನೆಸ್ ಮ್ಯಾನೆಜ್ವೆುಂಟ್ನಲ್ಲಿ ಡಿಪ್ಲೋಮಾ ಹೊಂದಿದ್ದಾರೆ. ಕೃಷಿ ವಿಜ್ಞಾನವನ್ನೂ ಬಹು ಆಸಕ್ತಿಯಿಂದ ಓದಿಕೊಂಡಿದ್ದಾರೆ. ಶೈಕ್ಷಣಿಕವಾಗಿ ಅವರು ಓದಿದ ವಿಷಯಗಳು ಒಂದಕ್ಕೊಂದು ಸಂಬಂಧವೇ ಇಲ್ಲದವು. ಹಾಗಾಗಿಯೇ, ನಿತಿನ್ ಅಕ್ಕಂದಿರು, ‘ನೀನು ನಿನ್ನ ಸ್ನೇಹಿತರಂತೆ ಬ್ಯಾಂಕ್ ಪರೀಕ್ಷೆ ಕಟ್ಟಿ, ಬ್ಯಾಂಕ್ ಉದ್ಯೋಗಕ್ಕೆ ಸೇರಿಕೋ’ ಎಂದು ಸದಾ ಆಗ್ರಹಿಸುತ್ತಿದ್ದರಂತೆ. ಇವರು ಹಾಗೆ ಮಾಡದಿದ್ದಾಗ ‘ಏನಾದರೂ ಮಾಡಿಕೋ ಹೋಗು’ ಅಂತ ಮುನಿಸಿಕೊಳ್ಳುತ್ತಿದ್ದರಂತೆ. ಬಳಿಕ ಗಡ್ಕರಿ ತಮ್ಮದೇ ಆದ ‘ಪೂರ್ತಿ ಗ್ರೂಪ್’ ಎಂಬ ನಿರ್ಮಾಣ (construction) ಕಂಪನಿಯನ್ನು ಕಟ್ಟಿದರು. ಪ್ರಸ್ತುತ ಅವರ ಕಂಪನಿಯಲ್ಲಿ, 350ಕ್ಕೂ ಹೆಚ್ಚು ಇಂಜಿನಿಯರ್ಗಳು, ಐವರು ಚಾರ್ಟಡ್ ಅಕೌಂಟೆಟ್ಸ್, ಮೂವರು ಕಂಪನಿ ಕಾರ್ಯದರ್ಶಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯದಲ್ಲಿ ಪೂರ್ಣ ವ್ಯಸ್ತರಾದ ಮೇಲೆ ಕಂಪನಿ ಕಾರ್ಯನಿರ್ವಹಣೆ ಹೊಣೆಯನ್ನು ಮಕ್ಕಳಿಗೆ ವಹಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮೂಲಕ ಸಾಮಾಜಿಕ ಬದುಕು ಆರಂಭಿಸಿದ ಗಡ್ಕರಿ ಸಕ್ರಿಯ ರಾಜಕಾರಣಕ್ಕೆ ಆಗಮಿಸಿದ್ದು 1980ರಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮೂಲಕ. ಪಕ್ಷ ಸಂಘಟನೆಗಾಗಿ ಸ್ಕೂಟರ್ನಲ್ಲಿ ಸಂಚರಿಸುತ್ತ, ಕಾರ್ಯಕರ್ತರನ್ನು ಭೇಟಿ ಮಾಡಿ, ಹುರಿದುಂಬಿಸುತ್ತ ಸಾಮಾನ್ಯರೊಂದಿಗೆ ಬೆರೆಯುವ ಗಡ್ಕರಿ ಅವರಿಗೆ ನಾಗಪುರದ ಗಲ್ಲಿ-ಗಲ್ಲಿಗಳೊಂದಿಗೆ ಭಾವನಾತ್ಮಕ ಸಂಬಂಧವಿದೆ. ನಾಗಪುರದ ಶಾಸಕರಾಗಿ, ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಬಳಿಕ ಮಹಾರಾಷ್ಟ್ರ ಲೋಕೋಪಯೋಗಿ ಸಚಿವರಾಗಿ ಕಾರ್ಯನಿರ್ವಹಿಸಿದರು. ಈ ಅವಧಿಯಲ್ಲಿ ಸಂಚಾರ ಸಿಕ್ಕು (ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಅದೆಷ್ಟು ಮೇಲ್ಸೆತುವೆಗಳನ್ನು ನಿರ್ವಿುಸಿದರೆಂದರೆ ಜನರು ಅವರನ್ನು ‘ಫ್ಲೈಓವರ್ ಮಿನಿಸ್ಟರ್’ ಎಂದೇ ಕರೆಯತೊಡಗಿದರು. ನಂತರದ ದಿನಗಳಲ್ಲಿ ರಾಷ್ಟ್ರ ರಾಜಕಾರಣಕ್ಕೆ ಬಂದು ಕೆಲ ಅವಧಿ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿದ್ದರು. 2014ರಿಂದ ಸಂಸದರಾಗಿ, ನರೇಂದ್ರ ಮೋದಿಯವರ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದೆಲ್ಲವನ್ನೂ ವಿವರಿಸಿದ್ದು ಖಂಡಿತವಾಗಿಯೂ ಗಡ್ಕರಿಯವರನ್ನು ಹೊಗಳಲು ಅಲ್ಲ. ಬದಲಿಗೆ, ವ್ಯಕ್ತಿ ತನ್ನ ಸಾಮರ್ಥ್ಯವನ್ನು ಸಮಾಜದ ಅಭಿವೃದ್ಧಿಗೆ ಸರಿಯಾದ ದಿಕ್ಕಿನಲ್ಲಿ ಬಳಸಿದರೆ ಹೇಗೆಲ್ಲ ಅದ್ಭುತ ಬದಲಾವಣೆ ತರಬಹುದು ಮತ್ತು ಅಪಸವ್ಯಗಳೇ ತುಂಬಿರುವ ರಾಜಕೀಯದಲ್ಲೂ ಸುಧಾರಣೆಯ ತಾಜಾ ಅಲೆ ಹೇಗೆ ತರಬಹುದು ಎಂಬ ಕಾರಣಕ್ಕಾಗಿ. ಗಡ್ಕರಿ ಶಾಸಕರಾಗಿದ್ದಾಗ ಅವರಿಗೆ ಒಂದು ಇಂಜಿನಿಯರಿಂಗ್ ಕಾಲೇಜು ಮಂಜೂರಾಯಿತು. ಅದನ್ನವರು ವಹಿಸಿದ್ದು ಯಾರಿಗೆ ಅಂತೀರಿ? ನಾಗಪುರದ ಅಂಜುಮನ್ ಇಸ್ಲಾಂ ಸಂಸ್ಥೆಗೆ. ಗಡ್ಕರಿಯವರ ಈ ನಿರ್ಧಾರಕ್ಕೆ ಪ್ರತಿರೋಧಗಳು ಬಂದವಂತೆ. ಆದರೆ, ತಾನು ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡೆ. ಏಕೆಂದರೆ, ಸಮಾಜದಲ್ಲಿ ಶಿಕ್ಷಣದ ಅತಿ ಹೆಚ್ಚು ಅವಶ್ಯಕತೆ ಮುಸ್ಲಿಂ ಸಮುದಾಯಕ್ಕೆ ಇದೆ. ಅವರು ಕೆಲವೇ ಕೆಲವು ಪಾರಂಪರಿಕ ವೃತ್ತಿಗಳನ್ನೇ ನೆಚ್ಚಿಕೊಂಡಿರಬಾರದು. ಮುಸ್ಲಿಂ ಯುವಕರು-ಯುವತಿಯರು ವೈದ್ಯರು, ಇಂಜಿನಿಯರ್, ವಕೀಲರಾಗಿ ಸಮಾಜದ ಬೆಳವಣಿಗೆಯಲ್ಲಿ ಅವರ ಕೊಡುಗೆ ನೀಡಬೇಕು. ಅವರು ಎಷ್ಟು ಬಾರಿಯಾದರೂ ನಮಾಜ್ ಮಾಡಲಿ ಅಭ್ಯಂತರವಿಲ್ಲ. ಆದರೆ, ಶಿಕ್ಷಣ ಮತ್ತು ಅದರೊಂದಿಗೆ ವಿಜ್ಞಾನ-ತಂತ್ರಜ್ಞಾನವನ್ನು ಮೈಗೂಡಿಸಿಕೊಳ್ಳದಿದ್ದರೆ ಭವಿಷ್ಯ ಎಲ್ಲಿದೆ? ಎಂಬ ಪ್ರಶ್ನೆ ಮೂಲಕ ಗಡ್ಕರಿ ಸಮಾಜದ ಕಣ್ಣು ತೆರೆಸಿದ್ದಾರೆ.
ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರನ್ನು ಇಡೀ ವಿಶ್ವವೇ ಗೌರವದಿಂದ ಸ್ಮರಿಸಿಕೊಳ್ಳುತ್ತದೆ. ಇದಕ್ಕೆ ಕಾರಣ, ಕಲಾಂ ಅವರು ವಿಜ್ಞಾನಕ್ಕೆ ನೀಡಿದ ಕೊಡುಗೆ ಮತ್ತು ಸಮಾಜಕ್ಕೆ ಹಂಚಿದ ಜ್ಞಾನ ಎಂಬ ಪ್ರೇರಣೆಯ ಬಿಂದುವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡ ಗಡ್ಕರಿ, ‘ನೀವು ಉದ್ಯೋಗ ಕೇಳುವವರಾಗಬೇಡಿ, ಉದ್ಯೋಗ ಸೃಷ್ಟಿಸುವವರಾಗಿ. ನಮ್ಮಲ್ಲಿ ಸಾಕಷ್ಟು ಅವಕಾಶಗಳಿವೆ. ಅದನ್ನು ಸದುಪಯೋಗ ಪಡಿಸಿಕೊಳ್ಳಿ’ ಎಂದು ಹೇಳಲು ಮರೆಯಲಿಲ್ಲ. ಗಡ್ಕರಿ ಒಂದಿಷ್ಟು ಸಮಯ ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳ (ಎಂಎಸ್ಎಂಇ) ಸಚಿವರಾಗಿದ್ದರು. ಆಗ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ವೈದ್ಯಕೀಯ ಉಪಕರಣಗಳ ಪಾರ್ಕ್ ಸ್ಥಾಪಿಸಿದ್ದು, ಅಲ್ಲಿ 100ಕ್ಕೂ ಅಧಿಕ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಅಲ್ಲಿಂದ 45 ಸಾವಿರ ಕೋಟಿ ರೂಪಾಯಿಗಳ ರಫ್ತು ವಹಿವಾಟು ನಡೆಯುತ್ತಿದೆ. ಅನೇಕ ಉದ್ಯಮಿಗಳು ತಮ್ಮ ಉದ್ಯಮಜಾಲವನ್ನು ಆ ಮೂಲಕ ಸಂಪತ್ತನ್ನು ಹೆಚ್ಚಿಸಿಕೊಂಡಿದ್ದಾರೆ. ಅವರೆಲ್ಲ ಗಡ್ಕರಿಯವರಿಗೆ ‘ನಿಮಗೆ ನಾವು ಕೃತಜ್ಞತಾಪೂರ್ವಕವಾಗಿ ಏನಾದರೂ ಕೊಡಬೇಕಲ್ಲ?’ ಎಂದಾಗ ಸ್ವಂತಕ್ಕೇನು ಕೇಳದೆ ವಿಶಿಷ್ಟ ಟಾಸ್ಕ್ ನೀಡಿದರು. ಅದುವೇ ಗುಣಮಟ್ಟದ ಶ್ರವಣಯಂತ್ರಗಳನ್ನು ತಯಾರಿಸುವ ಸವಾಲು. ವೈದ್ಯಕೀಯ ಮಾರುಕಟ್ಟೆಯಲ್ಲಿ 80 ಸಾವಿರ ರೂ.
ಬೆಲೆ ಬಾಳುವ ಶ್ರವಣಯಂತ್ರಗಳು ಇಲ್ಲಿ ಅದೇ ಗುಣಮಟ್ಟದೊಂದಿಗೆ ತಲಾ 2 ಸಾವಿರ ರೂ.ಗಳಲ್ಲಿ ತಯಾರಾಗಿ ಗಡ್ಕರಿಯವರನ್ನು ತಲುಪಿದವು. ಶ್ರವಣದೋಷ ಸಮಸ್ಯೆ ಎದುರಿಸುತ್ತಿದ್ದ ನಾಗಪುರದ 2,500 ಹಿರಿಯ ನಾಗರಿಕರಿಗೆ ಗಡ್ಕರಿ ಅದನ್ನು ಉಚಿತ ವಾಗಿ ವಿತರಿಸಿದರು! ಇದು ಅನ್ವೇಷಣೆಯ ಶಕ್ತಿ! ಕೋವಿಡ್ ಸಂಕಷ್ಟದ ಕಾಲಘಟ್ಟದಲ್ಲಿ ಆಸ್ಪತ್ರೆಗಳಿಗೆ 500 ವೆಂಟಿಲೇಟರ್ಗಳನ್ನು ಉಚಿತವಾಗಿ ಒದಗಿಸಿದ್ದಾರೆ. ತಮ್ಮ ತಾಯಿ ಯವರ ಸ್ಮರಣಾರ್ಥ ನಾಗಪುರದಲ್ಲಿ ವೈದ್ಯಕೀಯ ಪರೀಕ್ಷೆಗಳ ಲ್ಯಾಬ್ ಸ್ಥಾಪಿಸಲು ಮುಂದಾಗಿರುವ ಗಡ್ಕರಿಯವರು ಅಲ್ಲಿ 800 ರೂ.ಗೆ ಎಂಆರ್ಐ, 600 ರೂ.ಗೆ, ಸಿಟಿ ಸ್ಕಾ್ಯನ್, 200 ರೂ.ಗಳಲ್ಲಿ ಡಯಾಲೀಸಿಸ್ ಸೌಲಭ್ಯ ಒದಗಿಸಲು ಮುಂದಾಗಿದ್ದಾರೆ. ವಿದರ್ಭದ ರೈತರು ಕಿತ್ತಳೆ ಬೆಳೆಯ ಮೂಲಕ ವಾರ್ಷಿಕವಾಗಿ 5 ಸಾವಿರ ಕೋಟಿ ರೂ.ಗಳ ವಹಿವಾಟು ನಡೆಸುತ್ತಿದ್ದು, ಕಿತ್ತಳೆಯ ಹೊಸ ತಳಿಗಳ ಮೂಲಕ ಈ ವಹಿವಾಟನ್ನು ವಾರ್ಷಿಕ 30 ಸಾವಿರ ಕೋಟಿ ರೂ.ಗೆ ಹೆಚ್ಚಿಸುವ ಗುರಿ ಹೊಂದಿದ್ದಾರೆ.
ಪ್ರಸ್ತುತ ಕಾಲಘಟ್ಟದಲ್ಲಿ ರಾಷ್ಟ್ರವಾದಕ್ಕೆ ಹೊಸ ವ್ಯಾಖ್ಯಾನ ನೀಡಿರುವ ಅವರು, ‘ಆಮದು ಪ್ರಮಾಣವನ್ನು ಕಡಿಮೆ ಮಾಡುವುದು, ರಫ್ತು ಹೆಚ್ಚಿಸುವುದೇ ಈಗಿನ ನಿಜವಾದ ರಾಷ್ಟ್ರವಾದ’ ಎನ್ನುವ ಮೂಲಕ ಆರ್ಥಿಕ, ಕೈಗಾರಿಕಾ ಅಭಿವೃದ್ಧಿಗೆ ವಿಶಾಲ ನೋಟ ಒದಗಿಸಿದ್ದಾರೆ. ಹಸಿರು ಇಂಧನಕ್ಕೆ ಉತ್ತೇಜನ ನೀಡುತ್ತ, ಬಯೋ ಇಥೆನಾಲ್ ಇಂಧನದ ಕಾರನ್ನು ಸ್ವತಃ ಬಳಸುತ್ತಿದ್ದಾರೆ. ಈಗ ಹೇಳಿ, ಇದನ್ನೆಲ್ಲ ಮಾಡಲು ಯಾವ ಮತಬ್ಯಾಂಕ್ನ್ನು ಓಲೈಸಬೇಕಿದೆ? ನಿಷ್ಠೆಯಿಂದ ಸರಿಯಾಗಿ ಕೆಲಸ ಮಾಡಿದರೆ ಎಲ್ಲ ಮತದಾರರೂ ಮತಬ್ಯಾಂಕ್ ಭಾಗವೇ. ಸತ್ಯ ಮಾತನಾಡಲು ಧೈರ್ಯ, ಅದಕ್ಕಿಂತ ಹೆಚ್ಚಾಗಿ ಆತ್ಮಸ್ಥೈರ್ಯ, ಪ್ರಾಮಾಣಿಕತೆ ಬೇಕು. ಅದಕ್ಕೆಂದೆ, ಜೀವವಿಮೆ ಮತ್ತು ಟಮ್ರ್ ವಿಮೆ ಕಂತಿನ ಮೇಲಿನ ಜಿಎಸ್ಟಿಯನ್ನು ರದ್ದು ಮಾಡಿ ಎಂದು ಗಡ್ಕರಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆಯಲು ಸಾಧ್ಯವಾಗಿದ್ದು. ‘ರಸ್ತೆ ಅಪಘಾತಗಳಿಗೆ ದೋಷಪೂರ್ಣ ರಸ್ತೆಗಳು ಮತ್ತು ಅದನ್ನು ನಿರ್ವಿುಸಿದ ಇಂಜಿನಿಯರ್ಗಳು, ಗುತ್ತಿಗೆದಾರರು ಹೊಣೆ’ ಎಂದು ಸದನದಲ್ಲೇ ಹೇಳಲು ಸಾಧ್ಯವಾಗಿದ್ದು!
ಯಾವ ವ್ಯಕ್ತಿಯಲ್ಲಿ ಸಾಮರ್ಥ್ಯವಿದೆಯೋ ಅಂಥವರಿಗೆ ಗಿಮಿಕ್ಗಳ ಅವಶ್ಯಕತೆ ಇರುವುದಿಲ್ಲ. ಆ ಸಾಮರ್ಥ್ಯವನ್ನು ಸಮಾಜ, ರಾಷ್ಟ್ರದ ಅಭಿವೃದ್ಧಿಗೆ ವಿನಿಯೋಗಿಸಿ ಶ್ರೇಷ್ಠವಾದದ್ದನ್ನು ಸಾಧಿಸುತ್ತಾರೆ. ಅಯ್ಯಾ, ರಾಜಕಾರಣಿಗಳೇ ದಯವಿಟ್ಟು ಒಮ್ಮೆ ಗಡ್ಕರಿಯವರ ಮಾತು ಕೇಳಿ. ಕೊನೆಗೊಮ್ಮೆ ಸತ್ಯ ಮಾತನಾಡಲೇ ಬೇಕಾಗುತ್ತದೆ, ಅದನ್ನು ಮುಂದೂಡಿದಷ್ಟು ಅಪಾಯವೇ. ಶಿಕ್ಷಣ, ತಂತ್ರಜ್ಞಾನ, ಅನ್ವೇಷಣೆ, ಶ್ರಮ ಇದೆಲ್ಲದರ ಒಟ್ಟು ಫಲ ಶ್ರೀಸಾಮಾನ್ಯನ ಏಳ್ಗೆಗೆ ಬಳಕೆಯಾಗಲಿ. ಸಿಡಿಲ ಸಂತ ಸ್ವಾಮಿ ವಿವೇಕಾನಂದರ ‘ದರಿದ್ರ ನಾರಾಯಣ’ ಸಿದ್ಧಾಂತ ಹೇಳಿರುವುದು ಇದನ್ನೇ. ಬಡವನ ಮುಖದಲ್ಲಿ ಅರಳುವ ಸಂತೃಪ್ತಿಯ ನಗು, ಅದು ಆ ಭಗವಂತನ ನಗುವಿನಂತೆಯೇ ನಿಷ್ಕಲ್ಮಶ, ಆಕರ್ಷಕ! ಅಂಥ ನಗು ನಮ್ಮ ಸುತ್ತಲೂ ವ್ಯಾಪಿಸಿಕೊಳ್ಳಲಿ. ಅದಕ್ಕೆ ನಮ್ಮ ಸಾಮರ್ಥ್ಯ ಸದ್ಬಳಕೆಯಾಗಲಿ.