ಸಾಂದರ್ಭಿಕ ಚಿತ್ರ 
ಅಂಕಣ

ತೆರೆದವು ಹೊಸ ಪಥ ಹೊಮುಜ್​​ ಈಗ ಅಪ್ರಸ್ತುತ

ಬಳ್ಳಾರಿಯಿಂದ ಬೋಸ್ಟನ್​ವರೆಗೆ ಭಯ ಹುಟ್ಟಿಸುವ ತೈಲ ಸುದ್ದಿ ಶೀರ್ಷಿಕೆಗಳು ಬಹುತೇಕ ಎಲ್ಲರ ಕಣ್ಣು ಕುಕ್ಕುತ್ತಿವೆ. ಆದರೆ, ಸದ್ದಿಲ್ಲದೆ ನಡೆಯುತ್ತಿರುವ ಬೃಹತ್ ಮಾರುಕಟ್ಟೆ ಮಾರ್ಪಾಡುಗಳು ಹೊಮುಜ್ ಜಲಸಂಧಿಯನ್ನೇ ಅಪ್ರಸ್ತುತಗೊಳಿಸುತ್ತಿವೆ. ಮೇ ತಿಂಗಳಲ್ಲಿ ನಾನು ಪ್ರಸ್ತಾಪಿಸಿದ್ದ ಪ್ರವೃತ್ತಿಗಳಿಗೆ ಇದು ಮತ್ತಷ್ಟು ವೇಗ ನೀಡುತ್ತಿದೆ. ಇಂಧನ ಬೆಲೆಗಳು ಶೀಘ್ರದಲ್ಲೇ ಕುಸಿಯಲು ಕಾರಣ ಇಲ್ಲಿದೆ.

ಇರಾನ್ ಯುದ್ಧ ಬೇಗನೆ ಕೊನೆಗೊಳ್ಳದಿದ್ದರೆ ವಿಪತ್ತು ಸಂಭವಿಸುತ್ತದೆ ಎಂದು ಮಾರ್ಚ್ ನಿಂದೀಚಿಗೆ ಜಾಗತಿಕವಾಗಿ ವಿಶ್ಲೇಷಕರು ಊಹಿಸಿದ್ದರು. ಹೊಮುಜ್ ಜಲಸಂಧಿಯ ವಿಷಯವನ್ನು ಸಾಮಾನ್ಯವಾಗಿ ‘ಅದಿದ್ದರೆ ಮಾತ್ರ ಎಲ್ಲವೂ, ಇಲ್ಲದಿದ್ದರೆ ಏನೂ ಇಲ್ಲ’ ಎಂಬ ದೃಷ್ಟಿಕೋನದಿಂದ ನೋಡಲಾಗುತ್ತಿತ್ತು. ಅಂದರೆ, ಅದು ತೆರೆದಿದ್ದರೆ ಎಲ್ಲವೂ ಸರಿ, ಮುಚ್ಚಿದರೆ ವಿಪತ್ತು ಎಂಬಂತೆ. ತೈಲ ಬೆಲೆ 250 ಅಮೆರಿಕನ್ ಡಾಲರ್ ತಲುಪಲಿದೆ ಎಂಬ ಅಂದಾಜುಗಳು ವ್ಯಾಪಕವಾಗಿ ಹಬ್ಬಿದ್ದವು. ಕಠಿಣ ಎಲ್​ಪಿಜಿ ನಿರ್ಬಂಧಗಳು ಕರ್ನಾಟಕದ ಹೋಟೆಲ್ ಮತ್ತು ರೆಸ್ಟೋರೆಂಟ್​ಗಳಿಗೆ ತೀವ್ರ ಪೆಟ್ಟು ನೀಡಿದವು. ಪೆಟ್ರೋಲ್ ಬೆಲೆ ಏರಿಕೆಯ ಬಿಸಿ ತೀವ್ರವಾಗಿ ತಟ್ಟಿತು. ನಿಮ್ಮ ಎಲ್​ಪಿಜಿಯ ಸುಮಾರು ಶೇಕಡಾ 90ರಷ್ಟನ್ನು ಗಲ್ಪ್ ಪೂರೈಸುತ್ತಿದ್ದುದರಿಂದ ಅನೇಕರು ಭಾರತಕ್ಕೆ ಮುಂದೆ ಇನ್ನೂ ಕೆಟ್ಟ ಪರಿಸ್ಥಿತಿ ಎದುರಾಗಬಹುದು ಎಂದು ಊಹಿಸಿದ್ದರು. ಯುದ್ಧ ಇನ್ನೂ ನಿಂತಿಲ್ಲ. ಆದರೂ ಜಾಗತಿಕ ಅಥವಾ ಸ್ಥಳೀಯವಾದ ಯಾವುದೇ ವಿಪತ್ತು ಸಂಭವಿಸಿಲ್ಲ.

ಭಾರತದ ಜಿಡಿಪಿ ಬೆಳವಣಿಗೆ ವರ್ಷದಿಂದ ವರ್ಷಕ್ಕೆ ಶೇಕಡಾ 8.6 ಮತ್ತು 2026ರ ಮೊದಲ ಎರಡು ತ್ರೖೆಮಾಸಿಕಗಳಲ್ಲಿ ಶೇಕಡಾ 7.8ರಷ್ಟಿತ್ತು. ಹೆಚ್ಚಿನ ಇಂಧನ ಬೆಲೆಗಳು ಆರ್ಥಿಕತೆಯನ್ನು ಬುಡಮೇಲು ಮಾಡುತ್ತಿಲ್ಲ. ಭಾರತದ ಇ-ಕಾಮರ್ಸ್ ಮತ್ತು ಗ್ರಾಹಕ ಸರಕುಗಳ ಕಂಪನಿಗಳಿಗೆ ಭರ್ಜರಿ ಬೇಡಿಕೆಯಿದ್ದು, ಹಲವು ಕಂಪನಿಗಳು ಬೆಲೆ ಏರಿಸುತ್ತಿವೆ. ಅಮೆರಿಕ, ಯುರೋಪ್ ಸೇರಿದಂತೆ ಬಹುತೇಕ ಎಲ್ಲ ಪ್ರಮುಖ ಪ್ರಾಂತ್ಯಗಳೂ ಬೆಳವಣಿಗೆ ಕಾಣುತ್ತಿವೆ.

ಕರಾಳ ಮುನ್ಸೂಚನೆಗಳು ವಿಫಲವಾಗಿದ್ದೇಕೆ? ಬೆಲೆಗಳು ಸಂಕೇತ ಸೂಚಕಗಳಾಗಿವೆ. ದುಬಾರಿ ತೈಲವು ಉತ್ಪಾದಕರಿಗೆ ಹೊಂದಿಕೊಳ್ಳಲು ಹೇಳುತ್ತದೆ. ಬಹಳ ಕಡಿಮೆ ಜನರಿಗೆ ಅರ್ಥವಾಗುವಂತಹ ಒಳ್ಳೆಯ ಹೊಸ ಬದಲಾವಣೆಗಳು ಬಹಳಷ್ಟಿವೆ.

ಗಮನಿಸಿ - ಯುದ್ಧಪ್ರೇರಿತ ತೈಲ ಬೆಲೆ ಏರಿಕೆಗಳು ಬೇಗನೆ ಕರಗಿಹೋಗುತ್ತವೆ. ಏಕೆಂದರೆ ಮಾರುಕಟ್ಟೆಗಳು ಭಯಪಟ್ಟಿದ್ದಕ್ಕಿಂತ ಸಣ್ಣದಾದ ಪರಿಣಾಮಕ್ಕೆ ಮುಂಚಿತವಾಗಿಯೇ ಬೆಲೆ ಕಟ್ಟುತ್ತವೆ ಎಂದು ಮಾರ್ಚ್​ನಲ್ಲಿ ನಾನು ನಿಮಗೆ ಹೇಳಿದ್ದೆ, ಹಾಗೆಯೇ ಆಯಿತು; ಮತ್ತೆ ಏರುವ ಮುನ್ನ ಏಪ್ರಿಲ್ ಆರಂಭದಿಂದ ಜುಲೈ ಆರಂಭದವರೆಗೆ ತೈಲ ಬೆಲೆಗಳು ಅರ್ಧದಷ್ಟು ಕುಸಿದವು. ಹೊಂದಾಣಿಕೆಗಳಿಗೆ ಧನ್ಯವಾದ ಹೇಳಿ. ಹೊಮುಜ್ ಜಲಸಂಧಿಯನ್ನು ಬಳಸದೆಯೇ ಪೈಪ್​ಲೈನ್​ಗಳ ಮೂಲಕ ಬೃಹತ್ ಪ್ರಮಾಣದ ಯುಎಇ ಮತ್ತು ಸೌದಿ ತೈಲವನ್ನು ಫುಜೈರಾ ಬಂದರು ಹಾಗೂ ಕೆಂಪು ಸಮುದ್ರದ ಪ್ರಮುಖ ಸಾಗಾಟ ಕೇಂದ್ರವಾದ ಯಾನ್ಬುಗೆ ಸಾಗಿಸಲಾಯಿತು. ಕೊಲ್ಲಿಯೇತರ ಉತ್ಪಾದನೆ ಜಾಗತಿಕವಾಗಿ ಹೆಚ್ಚಾಯಿತು. ನಿಮ್ಮ ಸರ್ಕಾರ, ರಿಯಾಯಿತಿ ದರದಲ್ಲಿ ರಷ್ಯಾದ ಕಚ್ಚಾ ತೈಲವನ್ನು ಖರೀದಿಸಿತು. ಜೂನ್ ಅಂತ್ಯದ ವೇಳೆಗೆ ಕರ್ನಾಟಕದಾದ್ಯಂತ ಎಲ್​ಪಿಜಿ ನಿರ್ಬಂಧಗಳು ಮರೆಯಾದವು.

ಬಳಿಕ ಆತಂಕಗಳು ಮರುಕಳಿಸಿದವು. ಇರಾನ್ ಬೆಂಬಲಿತ ಹೂತಿಗಳು ಕೆಂಪು ಸಮುದ್ರದ ಸಾಗಾಟವನ್ನು ಅಸ್ತವ್ಯಸ್ತಗೊಳಿಸಿದರು. ಹಡಗುಗಳನ್ನು ಇರಾನ್ ಧ್ವಂಸಗೊಳಿಸಿತು ಮತ್ತು ಡ್ರೋನ್ ದಾಳಿಗಳು ಸೌದಿ ಅರೇಬಿಯಾದ ಪೂರ್ವ-ಪಶ್ಚಿಮ ಪೈಪ್​ಲೈನ್​ಅನ್ನು ಸ್ಥಗಿತಗೊಳಿಸಿದವು. ತೈಲ ಬೆಲೆ ಮತ್ತೆ ಹೆಚ್ಚಿತು.

ಸದ್ದಿಲ್ಲದೆ, ಮತ್ತೆ ಏರಿದ ಬೆಲೆಗಳು ವಿನೂತನ ಪರಿಹಾರಗಳ ಮೂಲಕ ಮತ್ತಷ್ಟು ಪೂರೈಕೆ ಸೃಷ್ಟಿಗೆ ಕಾರಣವಾಗುತ್ತವೆ. ಶೀಘ್ರದಲ್ಲೇ ಹೊಮುಜ್ ಅಪ್ರಸ್ತುತವಾಗಲಿದೆ. ಗಮನಿಸಿ, ಶಾಂತಿ ಸ್ಥಾಪನೆಯಾಗದೆಯೇ ಅಕ್ಟೋಬರ್​ನ ಗಲ್ಪ್ ತೈಲ ರಫ್ತು ಯುದ್ಧಪೂರ್ವ ಮಟ್ಟ ತಲುಪಿದೆ.

ಹೇಗೆ? ಇಂಧನ ಮೂಲಸೌಕರ್ಯದ ನಿಪುಣರಾದ ಸೌದಿಗಳು ಕೇವಲ ಮೂರೇ ವಾರಗಳಲ್ಲಿ ಪೂರ್ವ-ಪಶ್ಚಿಮ ಪೈಪ್​ಲೈನ್​ಅನ್ನು ಶೇಕಡಾ 80ರಷ್ಟು ಸಾಮರ್ಥ್ಯಕ್ಕೆ ಮರಳಿ ತಂದರು. ಹೊಮುಜ್ ಜಲಸಂಧಿಯ ಕಣ್ತಪ್ಪಿಸಿ ನುಸುಳುವ ಸಣ್ಣ ಟ್ಯಾಂಕರ್​ಗಳು, ಜಲಸಂಧಿಯ ಹೊರಗೆ ನಿಂತಿರುವ ದೊಡ್ಡ ಹಡಗುಗಳಿಗೆ ತೈಲವನ್ನು ಪಂಪ್ ಮಾಡುತ್ತಿವೆ. ಹೂತಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು, ಅವು ಯಾನ್ಬುವಿನಿಂದ ಈಜಿಪ್ಟ್​ಗೆ ತೈಲವನ್ನು ಸಾಗಿಸಿ ಅಲ್ಲಿಂದ ಮುಂದಕ್ಕೆ ರಫ್ತು ಮಾರ್ಗ ಕಂಡುಕೊಂಡಿವೆ.

ಭಾರತವು ವೇಗವಾಗಿ ಹೊಂದಿಕೊಂಡಿತು. ಯಾನ್ಬು ಮೂಲಕ ಹರಿಯುವ ತೈಲದಿಂದ ಅಪಾರ ಪ್ರಯೋಜನ ಪಡೆಯಿತು. ಕೊಲ್ಲಿ ರಾಷ್ಟ್ರಗಳನ್ನು ಬಿಟ್ಟು ಬೇರೆಡೆಗೆ ತನ್ನ ಪೂರೈಕೆ ಮೂಲಗಳನ್ನು ಪುನರ್​ರಚಿಸಿತು. 2025ರ ಜನವರಿಯಿಂದ ಅಕ್ಟೋಬರ್​ವರೆಗೆ, ಭಾರತದ ಎಲ್​ಪಿಜಿ ಆಮದಿನ ಶೇಕಡಾ 93ರಷ್ಟನ್ನು ಮಧ್ಯಪ್ರಾಚ್ಯ ಮತ್ತು ಕೇವಲ ಶೇಕಡಾ 7ರಷ್ಟನ್ನು ಅಮೆರಿಕ ಪೂರೈಸಿತ್ತು. ಈಗ, ಮಧ್ಯಪ್ರಾಚ್ಯದ ಪಾಲು ಶೇಕಡಾ 56ರಷ್ಟಿದೆ. ಅಮೆರಿಕದ್ದು ಶೇಕಡಾ 35ರಷ್ಟಿದೆ. ಹೆಚ್ಚುವರಿ ತೈಲ, ಇರಾನ್, ಅರ್ಜೆಂಟೀನಾ, ಚಿಲಿ, ಫ್ರಾನ್ಸ್ ಮತ್ತು ನೆದರ್ಲ್ಯಾಂಡ್ಸ್​ನಿಂದ ಬಂದಿತು. ಭಾರತದ ಪ್ರಮುಖ ತೈಲ ಕಂಪನಿಗಳನ್ನು ಕಾಡುತ್ತಿರುವ ಎಥೆನಾಲ್ ಮಿಶ್ರಣದ ಆರೋಪಗಳ ಮೇಲೆ ಅತಿಯಾಗಿ ಗಮನ ಹರಿಸಬೇಡಿ. ಕರ್ನಾಟಕಕ್ಕೆ ನಿಜವಾದ ಪೂರೈಕೆಯು ಧಾರಾಳವಾಗಿ ಹರಿದುಬರುತ್ತಿದೆ.

ಇರಾನ್, ಸಹಜವಾಗಿಯೇ, ದಿಗ್ಬಂಧನಕ್ಕೆ ಒಳಗಾಗಿದೆ. ಆದರೆ ಮತ್ತಷ್ಟು ಹೊಂದಾಣಿಕೆಗಳು ರೂಪುಗೊಳ್ಳುತ್ತವೆ. ಪಂಪಿಂಗ್ ಕೇಂದ್ರಗಳ ಮೇಲ್ದರ್ಜೆ ಮತ್ತು ಕಚ್ಚಾ ತೈಲವನ್ನು ಸಾಗಿಸಲು ಅಸ್ತಿತ್ವದಲ್ಲಿರುವ ಅನಿಲ ಕೊಳವೆ ಮಾರ್ಗವನ್ನು ಪರಿವರ್ತಿಸುವ ಮೂಲಕ ಸೌದಿ ಅರೇಬಿಯಾ, ಶೀಘ್ರದಲ್ಲೇ ತೈಲ ರಫ್ತನ್ನು ದಿನಕ್ಕೆ ಮೂರು ಮಿಲಿಯನ್ ಬ್ಯಾರೆಲ್​ಗಳಷ್ಟು (ಬಿಪಿಡಿ) ಹೆಚ್ಚಿಸಲಿದೆ.

ಯುಎಇ ತೈಲ ಉತ್ಪಾದನೆ ಈಗಷ್ಟೇ ದಾಖಲೆ ಮಟ್ಟ ತಲುಪಿದೆ. ಅದು ಜಲಸಂಧಿಯನ್ನು ಬಳಸದೆ ಸಾಗುವ ಪೈಪ್​ಲೈನ್​ಗಳ ಸಾಮರ್ಥ್ಯವನ್ನು ದ್ವಿಗುಣಗೊಳಿಸುತ್ತಿದೆ (ಬಹುಶಃ ಮೂರು ಪಟ್ಟು ಹೆಚ್ಚಿಸುತ್ತಿದೆ). ಬಂದರುಗಳಿಗೆ ಸರಕು ಸಾಗಣೆ ಟ್ರಕ್ ಕಾರವಾನ್​ಗಳು ಮರುಭೂಮಿಗಳ ಉದ್ದಗಲಕ್ಕೂ ಸಂಚರಿಸುತ್ತಿವೆ. ಅನಿಲ ಸಾಗಟಕ್ಕೆ ಕತಾರ್, ಹಡಗಿನಿಂದ ಹಡಗಿಗೆ ವರ್ಗಾವಣೆ ತಂತ್ರ ಬಳಸುತ್ತಿದೆ. ಇರಾಕ್ ಶೀಘ್ರದಲ್ಲೇ ತನ್ನ ಪಶ್ಚಿಮಮುಖಿ ಪೈಪ್​ಲೈನ್​ಗಳನ್ನು ಪುನರಾರಂಭಿಸಲಿದೆ. ಭಾರತದಲ್ಲಿ ಮತ್ತು ವಿಶ್ವಾದ್ಯಂತ, ಆಮದು ಮತ್ತು ರಫ್ತುದಾರರು ಸಂಗ್ರಹಣೆ ವಿಸ್ತರಿಸುವಲ್ಲಿ ಹೂಡಿಕೆ ಮಾಡುತ್ತಿದ್ದಾರೆ.

ಅಮೆರಿಕದ ನೈಸರ್ಗಿಕ ಅನಿಲ ಉತ್ಪಾದನೆಯು ದಾಖಲೆಯ ಗರಿಷ್ಠ ಮಟ್ಟದಲ್ಲಿದೆ. ಬರಿದಾದ ಮೀಸಲು ಸಂಗ್ರಹಗಳನ್ನು ಮರುಪೂರಣಗೊಳಿಸಲು ಹೆಚ್ಚಿನ ಅನಿಲವು ಪೂರೈಕೆಯಾಗುತ್ತಿರುವುದರಿಂದ, ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲಿ ಅಥವಾ ಬಿಡಲಿ, ಇಂಧನ ಬೆಲೆಗಳು ಯುದ್ಧಪೂರ್ವ ಮಟ್ಟಕ್ಕೆ ಇಳಿಯಲಿವೆ.

ಇದುವೇ ವಾಸ್ತವವಾಗಿತ್ತು. ದಶಕಗಳಿಂದ ಜಲಸಂಧಿಯನ್ನು ಮುಚ್ಚುವುದನ್ನು ಇರಾನ್, ಭೂರಾಜಕೀಯ ಒತ್ತಡದ ತಂತ್ರವಾಗಿ ಬಳಸಿಕೊಂಡಿತ್ತು. ಆರ್ಥಿಕ ಸಮರದ ಒಂದು ಅಸ್ತ್ರವಾಗಿ. ಆದರೆ ಆ ತಂತ್ರಕ್ಕೆ ಇರುವ ದೌರ್ಬಲ್ಯ? ಅದು ಒಮ್ಮೆ ಮಾತ್ರ ಬಳಸಬಹುದಾದ ತಂತ್ರವಾಗಿದೆ. ಈಗಿನಂತೆ ಕೇವಲ ಒಮ್ಮೆ ಜಲಸಂಧಿಯನ್ನು ಮುಚ್ಚುವುದರಿಂದ ಪರ್ಯಾಯ ಹೊಂದಾಣಿಕೆ ಅನಿವಾರ್ಯವಾಗುತ್ತದೆ.

ಇಂಧನ ಬಿಕ್ಕಟ್ಟಿನ ಭವಿಷ್ಯವಾಣಿಗಳನ್ನು ನಡಿಯುವವರು ಇದ್ದೇ ಇರುತ್ತಾರೆ. ಆದರೆ, ಅವರನ್ನು ನಿರ್ಲಕ್ಷಿಸಿ. ಒತ್ತಡದ ಅಂಶಗಳು ಉಳಿದಿದ್ದರೂ ಸಹ, ಪೂರೈಕೆ ಸರಪಳಿಗಳು ಮತ್ತು ಆರ್ಥಿಕತೆಗಳು ಪ್ರತಿಯೊಂದು ಹೊಸ ಅಡಚಣೆಗೂ ಮತ್ತೆ ಮತ್ತೆ, ಪದೇಪದೆ ಹೊಂದಿಕೊಳ್ಳುತ್ತವೆ. ಉತ್ತಮ ಪೂರೈಕೆಯುಳ್ಳ ಜಗತ್ತು ನಿಮ್ಮ ಕಣ್ಣಮುಂದೆಯೇ ಸದ್ದಿಲ್ಲದೆ ಹೊರಹೊಮ್ಮುತ್ತಿದೆ.

ಲೇಖಕರು ಫಿಶರ್ ಇನ್ವೆಸ್ಟ್​ಮೆಂಟ್ಸ್​ನ ಸಂಸ್ಥಾಪಕ, ಕಾರ್ಯಕಾರಿ ಅಧ್ಯಕ್ಷ ಮತ್ತು ಸಹ-ಮುಖ್ಯ ಹೂಡಿಕೆ ಅಧಿಕಾರಿ. 1979ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿ 37 ವರ್ಷ ಅದರ ಸಿಇಒ ಆಗಿದ್ದರು. ಇದು ಜಾಗತಿಕವಾಗಿ 386 ಬಿಲಿಯನ್ ಅಮೆರಿಕನ್ ಡಾಲರ್​ಗಿಂತ ಹೆಚ್ಚಿನ ಹಣಕಾಸು ನಿರ್ವಹಿಸುವ ಹೂಡಿಕೆ ಸಲಹಾ ಸಂಸ್ಥೆ. ನ್ಯೂಯಾರ್ಕ್ ಟೈಮ್ಸ್​ನ 4 ಬೆಸ್ಟ್ಸೆಲ್ಲರ್ ಸೇರಿದಂತೆ 11 ಪುಸ್ತಕಗಳ ಲೇಖಕರಾಗಿರುವ ಫಿಶರ್, ವಿಶ್ವದ 28 ದೇಶಗಳ ಪ್ರಮುಖ ಮಾಧ್ಯಮಗಳಲ್ಲಿ ಅಂಕಣಗಳನ್ನು ಆಯಾ ದೇಶದ ಸ್ಥಳೀಯ ಭಾಷೆಗಳಲ್ಲಿ ಬರೆಯುತ್ತಾರೆ.