ಆ ದಿನ ನಮ್ಮ ಅದೃಷ್ಟದೇವಿ ಯಾಕೋ ಮುನಿಸಿಕೊಂಡಿದ್ದಳು. ಉಯ್ಯಾಲೆಯಾಟ ಭರ್ಜರಿಯಾಗಿ ನಡೆಯುತ್ತಿದ್ದಾಗಲೇ ದುರ್ಘಟನೆಯೊಂದು ಘಟಿಸಿಬಿಟ್ಟಿತು. ಬಿಳಲಿಗೆ ಅಡ್ಡಲಾಗಿ ಹಾಕಿದ್ದ ಕೋಲು ಮುರಿದು ಅದರಲ್ಲಿ ಕುಳಿತಿದ್ದ ದೊಡ್ಡಮ್ಮನ ಮಗ ಬಿದ್ದದ್ದು ನೇರವಾಗಿ ಪಾಳು ಬಾವಿಗೆ. ನಾವೆಲ್ಲ ದಿಗ್ಭ್ರಮೆಯಿಂದ ಮೂಕರಾದೆವು. ದೊಡ್ಡಣ್ಣ ಕೂಡಲೇ ಬಾವಿಯ ಪಕ್ಕಕ್ಕೆ ಓಡಿದ. ಬಾವಿಗೆ ಬಿದ್ದವನು ಹೇಗಿದ್ದಾನೋ ಎಂಬ ಗಾಬರಿ ನಮ್ಮದಾದರೆ ಆತ ಸ್ವಲ್ಪ ಹೊತ್ತಿನಲ್ಲಿ ನಗು ನಗುತ್ತ ‘ನನಗೇನೂ ಆಗಿಲ್ಲ’ ಎಂದು ಎದ್ದು ಬಂದ. ಅಲ್ಲಿದ್ದ ಗಿಡಗಂಟಿಗಳು ಅವನನ್ನು ನಿಧಾನಕ್ಕೆ ಬಾವಿಗಿಳಿಸಿ ಮೂಳೆ ಮುರಿಯುವಂತಹ ತೊಂದರೆಯನ್ನೇನೂ ಮಾಡಿರಲಿಲ್ಲ. ಆದರೆ ಯಾವುದೋ ಗಿಡದ ಹರಿತ ಭಾಗವೊಂದು ಕಾಲಿನ ಹಿಂಭಾಗಕ್ಕೆ ತಾಗಿ ಆಳವಾದ ಸೀಳು ಗಾಯವಾಗಿತ್ತು. ಮೊದಲೇ ಸ್ವಲ್ಪ ಒರಟನಾದ ಅವನು ಗಾಯವನ್ನು ಲೆಕ್ಕಿಸದೆ ನಡೆಯುತ್ತಿದ್ದರೂ ನಮಗೆ ಅದೇ ಅವಸ್ಥೆಯಲ್ಲಿ ಮನೆಗೆ ಹೋದರೆ ಬೆನ್ನಿಗೆ ಧರ್ಮದೇಟು ಬೀಳುವ ಚಿಂತೆ. ಬೂರುಗದ ಹತ್ತಿ ಮರ ಸುತ್ತೆಲ್ಲ ಕಾಯಿಗಳನ್ನುದುರಿಸಿತ್ತು. ಅದರ ಬೀಜ ಬೇರ್ಪಡಿಸಿ ಆ ಹತ್ತಿಯಿಂದ ಒತ್ತಿ ಹಿಡಿದು ಗಾಯದಲ್ಲಿ ರಕ್ತ ಹರಿಯದಂತೆ ಪ್ರಯತ್ನಿಸುತ್ತಿದ್ದೆವು. ದೊಡ್ಡಣ್ಣ ಗದ್ದೆ ಬದುವಿಗೆ ಹೋಗಿ ಅದ್ಯಾವುದೋ ಎಲೆಯನ್ನು ಹಿಡಿದುಕೊಂಡು ಬಂದು ಕಲ್ಲಿನಲ್ಲಿ ಜಜ್ಜಿ ಅದರ ರಸ ತೆಗೆದು ಗಾಯಕ್ಕೆ ಹಿಂಡಿದ. ಸ್ವಲ್ಪ ಹೊತ್ತಿನಲ್ಲೇ ರಕ್ತ ಕಟ್ಟಿತು. ಅವನ ಕಾಲಿನ ಗಾಯ ಮನೆಯ ಹಿರಿಯರಿಗೆ ತಿಳಿಯಬಾರದೆಂದು ಮನೆಗೆ ಬಂದವನೇ ಸೊಂಟಕ್ಕೆ ದೊಡ್ಡ ಟವೆಲ್ ಸುತ್ತಿಕೊಂಡು ‘ಅಜ್ಜನ ಹಾಗೇ ನಾನೂ ಪಂಚೆ ಉಟ್ಟಿದ್ದು’ ಎಂದು ಹೇಳಿದ್ದ. ರಾತ್ರಿ ನೆಲದ ಮೇಲೆ ಊಟಕ್ಕೆ ಕುಳಿತುಕೊಳ್ಳುವಾಗ ರಹಸ್ಯ ಹೊರ ಬಿದ್ದಿತ್ತು. ಒಬ್ಬೊಬ್ಬರ ಬಾಯಿಂದಲೂ ಸತ್ಯ ಹೊರಡಿಸಿ ಅಜ್ಜಿ ಸಹಸ್ರನಾಮಾರ್ಚನೆ ಮಾಡಿತ್ತಿದ್ದರೆ, ಅಜ್ಜ ಆ ಕತ್ತಲಲ್ಲೇ ತಲೆಗೆ ಟಾರ್ಚ್ ಕಟ್ಟಿಕೊಂಡು ತೋಟಕ್ಕಿಳಿದು ಒಂದಿಷ್ಟು ಸೊಪ್ಪು ತಂದರು. ನೋಡಿದರೆ ಅದು ದೊಡ್ಡಣ್ಣ ತಂದ ಸೊಪ್ಪೇ. ನಾವು ಅದರ ಗುರುತು ಹಿಡಿದು ‘ಇದನ್ನೇ ಅಜ್ಜ ದೊಡ್ಡಣ್ಣ ಇವನ ಕಾಲಿಗೆ ಹಾಕಿದ್ದು’ ಎಂದು ಬೊಬ್ಬಿಟ್ಟೆವು. ಸ್ವಲ್ಪ ಸಮಾಧಾನಗೊಂಡ ಅಜ್ಜ, ‘ಈ ಸೊಪ್ಪು ಗಾಯಕ್ಕೆ ರಾಮಬಾಣ. ಗಡಿ ಸೊಪ್ಪಿದು’ ಎಂದರು. ಆಗೆಲ್ಲ ಹೆಸರು ಗೊತ್ತಿಲ್ಲದ ಗಡಿ ಸೊಪ್ಪು ಎಂದೇ ಗುರುತಿಸುತ್ತಿದ್ದ ಸೊಪ್ಪು ನಾನು ಮದುವೆಯಾಗಿ ಬಂದಾಗ ನಮ್ಮತ್ತೆ ತಲೆಕೂದಲಿನ ಎಣ್ಣೆಗೆ ಕಾಯಿಸುವಾಗ ಹಾಕುವುದು ಕಾಣಿಸಿತ್ತು. ಇದು ಗಾಯಕ್ಕೆ ಹಾಕುವ ಸೊಪ್ಪು ಎಂದು ಗುರುತಿಸಿ ಹೇಳಿದ್ದೆ. ‘ಇದು ಕೂದಲ ನರೆ ಕೂಡ ತಡೆಯುತ್ತದೆ’ ಅಂದಿದ್ದರು. ಈ ಸೊಪ್ಪು ನಮ್ಮ ಈಗಿನ ಶ್ಯಾಂಪೂ ಸೋಪುಗಳಲ್ಲಿ ಬಳಕೆಯಾಗುತ್ತದೆ ಎಂದು ಚಿತ್ರದಲ್ಲಿ ತೋರಿಸುವ ಭೃಂಗರಾಜ ಅಥವಾ ಗರ್ಗನ ಸೊಪ್ಪು. ನಮ್ಮದೇ ಹಿತ್ತಲಲ್ಲಿ ಬೆಳೆಯುವ ನಾವು ಬಳಸದ ಔಷಧೀಯ ಸೊಪ್ಪು.
ನುಗ್ಗೆ ಮರದ ಗೆಲ್ಲುಗಳನ್ನು ಸವರಿ ಕೆಲ ದಿನಗಳಾಗಿತ್ತು. ಗಿಡ ಮುಚ್ಚುವಂತೆ ಹೊಸ ಚಿಗುರು. ನುಗ್ಗೆ ಸೊಪ್ಪಿನ ಅಡುಗೆ ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು ಎಂದು ಸೊಪ್ಪು ಕೊಯ್ಯಲು ಚಪ್ಪಲಿ ಮೆಟ್ಟಿ ತೋಟಕ್ಕಿಳಿದಿದ್ದೆ. ಒಂದಿಷ್ಟು ಸೊಪ್ಪು ಕೊಯ್ದಾಗಿತ್ತು. ಎತ್ತರದ ಗೆಲ್ಲಿನಲ್ಲಿರುವ ಸೊಪ್ಪಿನ ಕಡೆ ಗಮನ ಕೊಡುತ್ತ ಕಾಲ ಕೆಳಗೆ ನೋಡುವುದನ್ನು ಮರೆತು ಹೆಜ್ಜೆ ಇಡುತ್ತಿದ್ದೆ. ಪಾದಕ್ಕೆ ಯಾರೋ ಉಗುರುಗಳಲ್ಲಿ ಬಲವಾಗಿ ಗೀರಿದ ಅನುಭವ. ಪಕ್ಕನೆ ಪಾದಗಳನ್ನು ಹಿಂದಕ್ಕೆಳೆದುಕೊಂಡೆ. ನನ್ನ ನೋಟವಿನ್ನೂ ನುಗ್ಗೆ ಸೊಪ್ಪಿನಿಂದ ಕೆಳಗಿಳಿದಿರಲಿಲ್ಲ. ಪಾದ ಬೆಂಕಿ ಮುಟ್ಟಿದಂತೆ ಉರಿಯತೊಡಗಿತು. ತೋಟದಲ್ಲಿರುವ ಉರ್ಸಣಿಕೆ (ತುರಿಕೆ) ಗಿಡ ಮುಟ್ಟಿತೇನೋ? ಹುಲ್ಲಿನ ನಡುವೆ ಅ ಗಿಡವಿದ್ದರೆ ಕಾಣಿಸುವುದಿಲ್ಲ ಎಂದು ಬಯ್ದುಕೊಂಡು ಕೆಳಗೆ ದೃಷ್ಟಿ ಹಾಯಿಸಿದರೆ ಇಂಚಿಂಚಿಗೆ ಸ್ಕೇಲಿನಲ್ಲಿ ಗೆರೆ ಎಳೆದಂತಿರುವ ಮೈ ಹೊತ್ತ ಕಟ್ಟ ಹಾವು ಪಾದದ ಸಮೀಪವೇ ಮುಂದಕ್ಕೆ ಹೋಗುವುದು ಕಾಣಿಸಿತ್ತು. ಸೊಪ್ಪು ಕೊಯ್ಯುವುದರಲ್ಲಿ ಮಗ್ನಳಾದ ನನಗೆ ಆ ಕ್ಷಣದಲ್ಲಿ ದೂರ ಸಾಗುತ್ತಿರುವ ಹಾವಿನ ಬಗ್ಗೆ ಏನೂ ಅನ್ನಿಸಿರಲಿಲ್ಲ. ಸಾಕಾಗುವಷ್ಟು ಸೊಪ್ಪು ಕೊಯ್ದಾದ ಮೇಲೆಯೇ ಪಾದದ ಕಡೆ ಗಮನ ಹರಿಸಿದ್ದು. ಇನ್ನೂ ಉರಿಯುತ್ತಲೇ ಇದ್ದ ಪಾದವನ್ನೆಳೆದುಕೊಂಡು ಮನೆಗೆ ಬಂದವಳಿಗೆ ನನ್ನ ಕಾಲಿಗೆ ಹಾವು ಏನಾದರೂ ಮಾಡಿತೇ ಎಂಬ ಸಣ್ಣ ಸಂದೇಹ. ಬಂದವಳೇ ಕಾಲನ್ನು ಸೂಕ್ಷ್ಮವಾಗಿ ಗಮನಿಸಿ ಎಲ್ಲೂ ಗಾಯಗಳಿಲ್ಲ ಅಂದ ಮೇಲೆ ಹಾವಿನ ಹಲ್ಲೇನೂ ತಾಗಿಲ್ಲ ಎಂಬ ಸಮಾಧಾನ. ಆದರೆ ಇನ್ನೂ ನಿಲ್ಲದ ಉರಿಗಾಗಿ ಅಡುಗೆಮನೆಯೊಳಕ್ಕೆ ನಡೆದವಳೇ ಒಂದಿಷ್ಟು ಹಸಿ ಅರಿಶಿನದ ಕೋಡನ್ನು ಅರೆದು ಅದಕ್ಕೆ ಈರುಳ್ಳಿ ರಸ ಸೇರಿಸಿ ಕಾಲಿಗೆ ಲೇಪದಂತೆ ಹಚ್ಚಿಕೊಂಡೆ. ಮತ್ತೂ ಒಂದೆರಡು ದಿನ ಇದನ್ನೇ ಮುಂದುವರಿಸಿದ ನಂತರ ಕಾಲಿನ ಉರಿ ಕಡಿಮೆಯಾಯಿತು.
ನಮ್ಮ ನೆಂಟರ ಮಗುವೊಂದಕ್ಕೆ ಕೆಮ್ಮಿನ ಉಪಟಳ ಬಹಳ. ಆಗಾಗ ಮಗುವಿನ ಕೆಮ್ಮಿನ ಬಾಧೆಯಿಂದ ಮನೆಮಂದಿ ಕಂಗಾಲಾಗುತ್ತಿದ್ದರು. ನಮ್ಮ ಮನೆಗೆ ಒಮ್ಮೆ ಭೇಟಿ ಕೊಟ್ಟವರು ನಮ್ಮ ಹೂವಿನ ಕುಂಡಗಳಲ್ಲಿದ್ದ ತುಂಬೆ ಹೂಗಳನ್ನು ನೋಡಿ, ‘ಅಯ್ಯೋ, ಈ ಗಿಡ ನಿಮ್ಮಲ್ಲಿದೆಯಾ? ಎಲ್ಲೆಲ್ಲಿ ಹುಡುಕಿದೆ ನೋಡಿ ಸಿಗಲಿಲ್ಲ. ಮೊದಲೆಲ್ಲ ಗದ್ದೆ ಕೊಯ್ಲಾದ ಮೇಲೆ ಗದ್ದೆಯಿಡೀ ಬಿಳಿಯಾದ ಹೂವಿಂದಲೇ ಮುಚ್ಚುವಷ್ಟು ತುಂಬೆ ಗಿಡಗಳು ಕಾಣ ಸಿಗುತ್ತಿದ್ದವಲ್ಲ. ಈಗ ಇದನ್ನು ಹುಡುಕುತ್ತಲೇ ಸುಮಾರು ಅಲೆದಿದ್ದೆ. ಎಲ್ಲಿಯೂ ದೊರಕಿರಲಿಲ್ಲ. ಇದು ಸಣ್ಣ ಮಕ್ಕಳ ಕೆಮ್ಮಿನ ಉಪಶಮನಕ್ಕೆ ಒಳ್ಳೆಯದಂತೆ. ನನ್ನಮ್ಮ ಇದನ್ನು ಹುಡುಕಿ ತಾ, ನಾನು ಮದ್ದು ಮಾಡಿ ಕೊಡ್ತೇನೆ ಪುಳ್ಳಿಯ ಕೆಮ್ಮಿಗೆ’ ಎಂದಿದ್ದರು. ನನ್ಗೊಂದು ಗಿಡ ಅಥವಾ ಬೀಜ ಕೊಡಬಹುದಾ ಎಂದು ಕೇಳಿ ಕೊಂಡೊಯ್ದಿದ್ದರು. ಮತ್ಯಾವಾಗಲೋ ಸಿಕ್ಕಿ ‘ಮಗು ಈಗ ಆರೋಗ್ಯವಾಗಿದೆ. ನಾನಂತೂ ಒಂದು ದೊಡ್ಡ ಸಾಲು ತುಂಬೆ ಗಿಡ ಬೆಳೆಸಿದ್ದೇನೆ’ ಈಗ ಎಂದಿದ್ದರು.
ತೋಟದ ಬೇಲಿಯಲ್ಲಿ ನೆಟ್ಟ ಕೆಂಪು ದಾಸವಾಳ ಬೇಸಿಗೆಯಲ್ಲಿ ಗಿಡು ಮುಚ್ಚುವಂತೆ ಅರಳುತ್ತದೆ. ಒಂದಷ್ಟು ಹೂವು ತಂದು ಕುಸುಮ ಬೇರ್ಪಡಿಸಿ ದಳಗಳನ್ನು ಸ್ವಚ್ಛಗೊಳಿಸಿ ದೊಡ್ಡ ಪಾತ್ರೆಯಲ್ಲಿ ನೀರಿಟ್ಟು ದಳಗಳನ್ನು ಹಾಕಿ ಕುದಿಸಿ, ತಣಿಸಿ, ಬೆಲ್ಲದ ಹುಡಿ ಸೇರಿಸಿ ಬೇಕಿದ್ದರೆ ನಿಂಬೆ ರಸ ಸೇರಿಸಿ ಶರಬತ್ತು ಮಾಡಿ ಕುಡಿದರೆ ಬಾಯಿಗೆ ಮಾತ್ರವಲ್ಲ ಮೈಗೂ ತಂಪು. ನಾನು ಕಾಲೇಜಿಗೆ ಹೋಗುವಾಗ ಇಂತಹ ಕಡು ಬೇಸಿಗೆಯಲ್ಲಿ ಎಳ್ಳಿನ ಜ್ಯೂಸೂ, ಜೀರಿಗೆ ನೀರು, ಕಾಮಕಸ್ತೂರಿ ಬೀಜದ ಶರಬತ್ತು ಎಲ್ಲವನ್ನೂ ಮಾಡಿ ಮೆಸ್ನಲ್ಲಿದ್ದ ಹುಡುಗಿಯರಿಗೆ ನೀಡುತ್ತಿದ್ದ ನಮ್ಮ ಆಂಟಿಯ ಕಾಳಜಿ ಈಗಲೂ ತಂಪು ನೆನಪು.
ಹೊಟ್ಟೆ ಕೆಟ್ಟರೆ ಕಾಳ್ಜೀರಿಗೆ ಕಷಾಯವೋ, ಕಂಚಿಸಟ್ಟಿನ ತಂಬುಳಿಯೋ ಮನೆಯಲ್ಲೇ ಮಾಡಿ ಬಡಿಸಿಬಿಡುತ್ತಿದ್ದರು ನಮ್ಮ ಅಮ್ಮನೋ ಅಜ್ಜಿಯೋ. ಜ್ವರ ಬಂದು ಬಾಯಿ ರುಚಿ ಕೆಟ್ಟು ಅನ್ನ ಹೊಟ್ಟೆಗಿಳಿಯದಿದ್ದರೆ ಉಪ್ಪು ಹಾಕಿ ಒಣಗಿಸಿದ ಶುಂಠಿಯೋ, ಅಥವಾ ಉಪ್ಪಲ್ಲಿ ಅದ್ದಿಟ್ಟ ನಿಂಬೆಹಣ್ಣಿನ ಹೋಳೋ ಬೆರೆಸಿದ ಗಂಜಿಯೂಟ ಅನ್ನದ ರುಚಿ ತೋರಿಸಿಕೊಡುತ್ತಿತ್ತು. ವರ್ಷದ ಮೂರೂ ಕಾಲಗಳಲ್ಲಿ ವಿಶೇಷವಾಗಿ ಮಾಡುತ್ತಿದ್ದ ಕೆಲವು ಅಡುಗೆಗಳೂ ಆಯಾ ಕಾಲದಲ್ಲಿ ತಲೆದೋರುವ ಸಣ್ಣ ಪುಟ್ಟ ಕಾಯಿಲೆಕಸಾಲೆಗಳನ್ನು ದೂರವಿಡುತ್ತಿತ್ತು.
ಮನೆಯ ಸುತ್ತಮುತ್ತ ಕಾಣ ಸಿಗುವ ಪ್ರತಿ ಬೇರು, ಕಾಂಡ, ಎಲೆ, ಕಾಯಿ, ಹಣ್ಣುಗಳೂ ಔಷಧೀಯ ಗುಣ ಹೊತ್ತವುಗಳೇ. ನಾವು ನೋಡುವ ಕಣ್ಣು ತೆರೆದು ನೋಡಿದರೆ. ನಾವು ಕಳೆ ಎಂದು ಕಿತ್ತು ಬಿಸುಡುವ ಹಲವು ಗಿಡಗಳೂ ಮಣ್ಣಿನ ಸವಕಳಿ ತಡೆಯುವುದಲ್ಲದೆ ಹಲವು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಗುಣ ಹೊತ್ತಿರುವಂತವುಗಳೇ.
ಎಲ್ಲಿ ಹೋಯಿತು ನಮ್ಮ ಈ ಜ್ಞಾನ? ಶೀತಕ್ಕಿಷ್ಟು ಮಾತ್ರೆ, ಜ್ವರಕ್ಕೆ ಇಂಜೆಕ್ಷನ್, ಗಾಯಗಳಿಗೆ ಮುಲಾಮು ಎಂದೆಲ್ಲ ಮುಟ್ಟಿದ್ದಕ್ಕೆ ಹಿಡಿದಿದ್ದಕ್ಕೆ ಆಸ್ಪತ್ರೆಗೆ ಅಲೆಯುವ, ಸಾವಿರಾರು ರೂಪಾಯಿ ಕೊಟ್ಟು ಮೈ ಮೂತಿಗೆಲ್ಲ ಬಳಿದುಕೊಳ್ಳುವ ಕ್ರೀಮುಗಳು ಲೋಷನ್ನುಗಳನ್ನೆಲ್ಲ ಕೊಳ್ಳುವ ನಮಗೆ ನಮ್ಮ ಸುತ್ತಮುತ್ತವೇ ಲಭ್ಯವಿರುವ ಇಂತಹ ಗಿಡಮರಗಳ ಗುಣವಿಶೇಷಣಗಳನ್ನು ತಿಳಿದುಕೊಳ್ಳುವ ವ್ಯವಧಾನವೇಕಿಲ್ಲ?
ನಮಗೆ ಈಗ ಗೊತ್ತಿರುವ ಅಲ್ಪಸ್ವಲ್ಪ ಹಿತ್ತಲ ಗಿಡಗಳ ಜ್ಞಾನವನ್ನು ನಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸುವ ಕೆಲಸ ಮಾಡುವುದು ಉತ್ತಮ. ಹೊಸತು ಎನ್ನುವುದು ಹಳೆಯದರ ಮುಂದುವರಿಕೆಯ ಭಾಗವಾಗಲಿ.