ಮೂಲ ಬೆಂಗಳೂರಿನ ಸುತ್ತ ಇತ್ತೀಚಿನ ವರ್ಷಗಳಲ್ಲಿ ರೂಪುಗೊಳ್ಳುತ್ತಿರುವ ಉಪನಗರ ಹೆಸರಿನ ಪ್ರದೇಶಗಳು, ಬೆಂಗಳೂರಿನಿಂದ ದೂರ ಇದ್ದೇವೆ ಎಂಬ ಭಾವನೆಯನ್ನು ನಿವಾಸಿಗಳಿಂದ ಹೋಗಲಾಡಿಸುತ್ತಿವೆ.
ಕೇಂದ್ರ ಬೆಂಗಳೂರಿನಲ್ಲಿ ದೊರಕುವ ಬಹುತೇಕ ಎಲ್ಲ ಸೌಲಭ್ಯಗಳನ್ನೂ ಹೊಂದುತ್ತಿರುವ ಪ್ರದೇಶಗಳು ಹಲವು ಬೆಂಗಳೂರುಗಳಾಗಿದ್ದು, ಇದರಿಂದ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಇಂಬು ಸಿಗುತ್ತಿದೆ. ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ನಗರಗಳಲ್ಲಿ ಜನಸಂದಣಿ, ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದಂತೆಯೇ ಸುತ್ತಮುತ್ತಲಿನ ನಗರಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳು ನಡೆದಿವೆ. ಬೆಂಗಳೂರಿನ ಸುತ್ತ ತುಮಕೂರು, ರಾಮನಗರ, ಸ್ವಲ್ಪ ದೂರದಲ್ಲಿ ಮೈಸೂರು, ಚಿತ್ರದುರ್ಗ, ಹಾಸನದಂತಹ ನಗರಗಳಲ್ಲಿ ಕೈಗಾರಿಕೆ ಅಭಿವೃದ್ಧಿಪಡಿಸಿ ಬೆಂಗಳೂರಿನ ದಟ್ಟಣೆ ಕಡಿಮೆ ಮಾಡುವ ಪ್ರಯತ್ನ ನಡೆದೇ ಇವೆ.
ಆದರೆ ಎಷ್ಟೇ ಪ್ರಯತ್ನ ನಡೆಸಿದರೂ ಬೆಂಗಳೂರು ಎಂಬ ಹೆಸರಿಗೆ ಇನ್ನೂ ಬೇಡಿಕೆ ತಗ್ಗಿಲ್ಲ. ಹೀಗಾಗಿ ಬೆಂಗಳೂರು ಹೊರವಲಯದಲ್ಲಿ ಉಪನಗರಗಳನ್ನು ನಿರ್ವಿುಸುವ ಕಾರ್ಯ ಅನೇಕ ವರ್ಷಗಳಿಂದ ನಡೆದಿದೆ. ಯಲಹಂಕ ಉಪನಗರ, ಕೆಂಗೇರಿ ಉಪನಗರಗಳು ಮೂಲಸೌಕರ್ಯದಲ್ಲಿ ಕೇಂದ್ರ ಬೆಂಗಳೂರಿಗೆ ಯಾವುದರಲ್ಲೂ ಕಡಿಮೆಯಿಲ್ಲ ಎಂಬಂತೆ ಬೆಳೆದಿವೆ.
ಕೊಂಪೆಯಾಗಿ ಉಳಿದಿಲ್ಲ: 15 ವರ್ಷಗಳ ಹಿಂದೆ ಯಾರಾದರೂ ನೆಲಮಂಗಲ, ಕೆಂಗೇರಿ, ಯಲಹಂಕದಲ್ಲಿ ನಿವೇಶನ ಖರೀದಿಸುತ್ತೇನೆ ಎಂದರೆ, ‘ಆ ಕೊಂಪೆಯಲ್ಲಿ ನಿವೇಶನ ಏಕೆ ಕೊಳ್ಳುತ್ತೀಯ? ನಿರ್ಜನ ಪ್ರದೇಶ, ಕಾಡು ಪ್ರಾಣಿಗಳ ಜಾಗ ಅದು. ಅಲ್ಲಿ ಇನ್ನು ನೂರು ವರ್ಷಕ್ಕೂ ಮನೆ ಕಟ್ಟಲು ಆಗುತ್ತದೆಯೋ ಇಲ್ಲವೋ’ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ಈಗ ಈ ಪ್ರದೇಶಗಳು ಬೆಂಗಳೂರನ್ನೇ ಹೊದ್ದು ಕುಳಿತಿವೆ.
ಪ್ರತಿಷ್ಠಿತ ಮಾಲ್ಗಳು, ಸಿನಿಮಾ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್ಗಳು, ಹಣ್ಣು, ತರಕಾರಿ ಮಾರುಕಟ್ಟೆಗಳು, ಸೂಪರ್ ಮಾರ್ಕೆಟ್ಗಳು, ಅಂತಾರಾಷ್ಟ್ರೀಯ ಬ್ರಾ್ಯಂಡ್ ಬಟ್ಟೆ ಅಂಗಡಿಗಳು ನೋಡನೋಡುತ್ತಲೇ ತಲೆಯೆತ್ತಿವೆ. ಉತ್ತಮ ರಸ್ತೆ ಸಂಪರ್ಕ, ರೈಲುಗಳ ಸಂಪರ್ಕದ ಜತೆಗೆ ಇದೀಗ ಅನೇಕ ಭಾಗಗಳಿಗೆ ಮೆಟ್ರೊ ಯೋಜನೆಯೂ ಅನುಷ್ಠಾನಗೊಳ್ಳುತ್ತಿದ್ದು, ಕೇಂದ್ರ ಬೆಂಗಳೂರಿನ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಿದೆ. ಕೇಂದ್ರ ಬೆಂಗಳೂರಿನಲ್ಲಿ ಅತ್ಯಂತ ಹೆಚ್ಚಿನ ಹಣ ತೆತ್ತು ಅತಿ ಸಣ್ಣ ನಿವೇಶನ ಖರೀದಿಸುವ ಬದಲಿಗೆ ಉಪನಗರಗಳ ಸುತ್ತ, ಹೊಸ ಪ್ರದೇಶಗಳಲ್ಲಿ ದೊಡ್ಡ ನಿವೇಶನ ಖರೀದಿಸಿ ವಿಸ್ತೀರ್ಣದಲ್ಲಿ ಮನೆ ಕಟ್ಟಿಕೊಳ್ಳುವ ಆಲೋಚನೆ ಬಲಿಯುತ್ತಿದೆ. ಈ ಹಿಂದೆ ಕೊಂಪೆಗಳು ಎಂದು ಕರೆಸಿಕೊಳ್ಳುತ್ತಿದ್ದ ಪ್ರದೇಶಗಳು ಬೆಂಗಳೂರಿನ ಪ್ರತಿರೂಪಗಳಂತೆಯೇ ಬೆಳವಣಿಗೆ ಕಂಡಿವೆ.
ನೀರು ಸರಬರಾಜು: ವಸತಿ ಪ್ರದೇಶಗಳು ರೂಪುಗೊಳ್ಳಲು ಬೇಕಿರುವುದು ಮುಖ್ಯವಾಗಿ ನೀರಿನ ಸಂಪರ್ಕ. ಬೆಂಗಳೂರು ಸುತ್ತಲಿನ ಪ್ರದೇಶದ 110 ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಪೈಪ್ಲೈನ್ ಅಳವಡಿಸುವ ಕಾರ್ಯ ಈಗಾಗಲೆ ಭರದಿಂದ ಸಾಗಿದೆ. ಕಾವೇರಿಯಿಂದ ಬೆಂಗಳೂರಿಗೆ ದೊರಕಿರುವ ಪಾಲಿನಲ್ಲಿಯೇ ಕುಡಿಯುವ ನೀರು ಮನೆಗೇ ಬರುತ್ತದೆ ಎಂಬುದು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಟಾನಿಕ್ ನೀಡಿದೆ. ಕಾವೇರಿ ನೀರು ಬರುತ್ತದೆ ಎಂಬುದು ಹುಡಿಕೆದಾರರನ್ನು ಹೆಚ್ಚಿಗೆ ಆಕರ್ಷಿಸುತ್ತಿದೆ.
ಬೆಂಗಳೂರು- ಮೈಸೂರು ಷಟ್ಪಥ ರಸ್ತೆ
ಬೆಂಗಳೂರಿನ ಮಂದಿ ವಾರಾಂತ್ಯದ ದಿನ ಕಳೆಯಲು ಹತ್ತಿರ ಇರುವ ಮೈಸೂರನ್ನೇ ಆಯ್ಕೆ ಮಾಡಿಕೊಳ್ಳುವುದು ಅಧಿಕ. ಈಗಿರುವ ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರುತ್ತಿದೆ. ಹೆದ್ದಾರಿ ನಿರ್ವಣದ ನಂತರ ಎರಡು ನಗರಗಳ ನಡುವಿನ ಪ್ರಯಾಣ ಅವಧಿ ಕುಸಿಯಲಿದೆ. ಹೆದ್ದಾರಿ ನಿರ್ವಣದ ನಂತರ ಎರಡು ನಗರಗಳ ನಡುವೆ ಸಂಚರಿಸಲು 2 ರಿಂದ 2.30 ತಾಸು ಸಾಕು. ರಾಷ್ಟ್ರೀಯ ಹೆದ್ದಾರಿ 6 ಪಥಗಳನ್ನು ಒಳಗೊಂಡಿರುತ್ತದೆ. ಸ್ಥಳೀಯರು ಸಂಚರಿಸಲು ಸರ್ವಿಸ್ ರಸ್ತೆ ನಿರ್ವಣವಾಗಲಿದೆ. ಮಾರ್ಗ ಮಧ್ಯೆ ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಬೈಪಾಸ್ ರಸ್ತೆ ನಿರ್ವಣವಾಗಲಿದೆ. ಇದರಿಂದ ಈ ಎರಡು ಪಟ್ಟಣಗಳಿಂದ ರಸ್ತೆ ದೂರ ಹಾದುಹೋಗಲಿದೆ. ಇನ್ನು ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣದಲ್ಲಿ ಮೇಲು ಸೇತುವೆ ನಿರ್ವಣವಾಗಲಿದೆ.
ಒಟ್ಟುಗೂಡಿಸುತ್ತಿವೆ ಊರ ಹಬ್ಬಗಳು
ಬೆಂಗಳೂರು ಕೇಂದ್ರದಲ್ಲಿ ನಡೆಯುತ್ತಿದ್ದ ಅನೇಕ ಸಾಂಪ್ರದಾಯಿಕ ಹಬ್ಬಗಳನ್ನೂ ಈ ಹೊಸ ಪ್ರದೇಶಗಳಲ್ಲಿ ಆಯೋಜನೆ ಮಾಡಲಾಗುತ್ತಿದೆ. ಬಸವನಗುಡಿಯಲ್ಲಿ ಮಾತ್ರ ನಡೆಯುತ್ತಿದ್ದ ಕಡಲೆಕಾಯಿ ಪರಿಷೆ ಇತ್ತೀಚಿನ ವರ್ಷಗಳಲ್ಲಿ ಯಲಹಂಕದಲ್ಲೂ ನಡೆಯುತ್ತಿದೆೆ. ಇದರ ಜತೆಗೆ ಆಯಾ ಪ್ರದೇಶದ ದೊಡ್ಡ ಕೆರೆಗಳ ಸುತ್ತ ಕೆರೆ ಹಬ್ಬ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾಕೂಟಗಳು, ಹಳ್ಳಿ ಸಂತೆ ನಡೆಯುತ್ತಿವೆ. ಮೊದಲೆಲ್ಲ ಊರಿನ 100-200 ಮನೆಗಳವರು ಸೇರಿ ಆಚರಿಸುತ್ತಿದ್ದ ಊರ ಹಬ್ಬಗಳು ಆಯಾ ಪ್ರದೇಶದ ದೊಡ್ಡ ಉತ್ಸವಗಳಾಗಿ ಮಾರ್ಪಟ್ಟಿವೆ. ತಾವು ಬೆಂಗಳೂರಿನಿಂದ ಎಲ್ಲೋ ದೂರದಲ್ಲಿದ್ದೇವೆ ಎಂಬ ಮನಸ್ಥಿತಿಯನ್ನು ಇದು ಬದಲಿಸಿದ್ದು, ಬಾಡಿಗೆಗೆ ತೆರಳಿದವರು ಅದೇ ಪ್ರದೇಶದಲ್ಲಿ ನಿವೇಶನ ಖರೀದಿಸಿ ನೆಲೆ ಕಂಡುಕೊಳ್ಳಲು ಮುಂದಾಗುತ್ತಿದ್ದಾರೆ.
ಸಂಚಾರ ದಟ್ಟಣೆಯಿಂದ ಮುಕ್ತಿ
6 ಪಥಗಳ ರಾಷ್ಟ್ರೀಯ ಹೆದ್ದಾರಿ ನಂತರ ಎರಡು ನಗರಗಳ ನಡುವೆ ಇದ್ದ ವಾರಾಂತ್ಯದ ಸಂಚಾರ ದಟ್ಟಣೆಗೆ ಕಡಿವಾಣ ಬೀಳಲಿದೆ. ವಾರಾಂತ್ಯಗಳಲ್ಲಿ ಮಂಡ್ಯದಿಂದ ಬೆಂಗಳೂರಿನ ಕೆಂಗೇರಿವರೆಗೂ ವಾಹನಗಳು ಜಾಮ್ ಆಗಿ ಪ್ರಯಾಣಿಕರು ನರಕ ಅನುಭವಿಸಿದ ಉದಾಹರಣೆಗಳು ಸಾಕಷ್ಟು ಇವೆ. ಅಲ್ಲದೆ ಎರಡು ನಗರಗಳು ಊಹೆಗೂ ಮೀರಿ ಅಭಿವೃದ್ಧಿ ಹೊಂದುತ್ತಿರುವುದರಿಂದ ವಲಸೆ ಅಧಿಕಗೊಂಡಿದೆ. ಅಲ್ಲದೆ ರಿಯಾಲ್ಟಿ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದುತ್ತಿರುವುದರಿಂದ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ.
ರಸ್ತೆ ಬದಿಯ ಜಮೀನುಗಳಿಗೆ ಡಿಮ್ಯಾಂಡ್
ರಸ್ತೆ ಮೇಲ್ದರ್ಜೆಗೇರಿಸುವ ಯೋಜನೆಗೆ ಚಾಲನೆ ಸಿಗುತ್ತಿದ್ದಂತೆ ಹಲವು ರಿಯಲ್ ಎಸ್ಟೇಟ್ ಕಂಪನಿಗಳು ಜಮೀನು ಖರೀದಿಗೆ ಮುಂದಾಗಿವೆ. ರಿಯಲ್ ಎಸ್ಟೇಟ್ನ ದೈತ್ಯ ಕಂಪನಿಗಳು ಕೂಡ ಈಗಾಗಲೇ ಇತ್ತ ಕಣ್ಣರಳಿಸಿವೆ. ಬಿಡದಿ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ಹಾಗೂ ಮೈಸೂರುಗಳಲ್ಲಿ ಲೇಔಟ್ಗಳು ಹಾಗೂ ಅಪಾರ್ಟ್ ಮೆಂಟ್ಗಳ ನಿರ್ವಣದ ಗುರಿ ಹೊಂದಿವೆ. ಬಿಡದಿವರೆಗೂ ಎಕರೆಗೆ ಕೋಟಿ ರೂಪಾಯಿಗೂ ಮೀರಿ ದರ ಇದ್ದರೆ ಬಿಡದಿಯಿಂದ ಮುಂದಕ್ಕೆ ದರದಲ್ಲಿ ಇಳಿಕೆ ಕಂಡು ಬರುತ್ತಿದೆ.