|ಮೇಧಾ ಪ್ರಹ್ಲಾದಾಚಾರ್ಯ ಜೋಶಿ
ಧರ್ಮದ, ಜ್ಞಾನದ ಬೇರನ್ನು ಗಟ್ಟಿಗೊಳಿಸುತ್ತ ಹಗಲಿರುಳು ಸಮಾಜವನ್ನು ಸುಭದ್ರಗೊಳಿಸಲು ಶ್ರಮಿಸುತ್ತಿರುವ ತಪಸ್ವಿ ಸಂತರು ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿಗಳು. ಶ್ರೀಮನ್ ಮಧ್ವಾಚಾರ್ಯರ ಮೂಲಮಹಾಸಂಸ್ಥಾನವೆನಿಸಿದ ಉತ್ತರಾದಿಮಠದ ಸರ್ವಜ್ಞಪೀಠದಲ್ಲಿ 42ನೇ ಪೀಠಾಧಿಪತಿಗಳಾಗಿ ವಿರಾಜಮಾನರಾದವರು.
ಪೂರ್ವಾಶ್ರಮದಲ್ಲಿ ಗುತ್ತಲ ಮನೆತನದ ಸರ್ವಜ್ಞಾಚಾರ್ಯರಿವರು. ಪಂಡಿತ್ ಗುತ್ತಲ ರಂಗಾಚಾರ್ಯರು ಹಾಗೂ ರುಕ್ಮಿಣಿಬಾಯಿಯವರಲ್ಲಿ ಫಾಲ್ಗುಣ ಶುದ್ಧ ಚತುರ್ಥಿ (08-01-1973)ಯಂದು ಮಧ್ವಮತ ಬೆಳಗುವ ಬೆಳಕಾಗಿ ಜನಿಸಿದರು. ಐದನೇ ವಯಸ್ಸಿನಲ್ಲೇ ಗುರುಕುಲವಾಸಿಗಳಾಗಿ ಸತ್ಯಧ್ಯಾನ ವಿದ್ಯಾಪೀಠ, ಮುಂಬೈನಲ್ಲಿ ಪಂಡಿತ್ ಮಾಹುಲಿ ಗೋಪಾಲಾಚಾರ್ಯರು ಹಾಗೂ ಮಾತುಲ ಪಂ. ವಿದ್ಯಾಸಿಂಹಾಚಾರ್ಯರಲ್ಲಿ ಚತುಃಶಾಸ್ತ್ರ ಅಧ್ಯಯನ ಮಾಡಿದರು. ಬಾಲ್ಯದಿಂದಲೇ ವಿಶಿಷ್ಟ ಅಧ್ಯಯನಶೀಲತೆ, ಪ್ರಖರ ಪಾಂಡಿತ್ಯ, ಅಷ್ಟೇ ಶಾಂತಮೂರ್ತಿಗಳು. 23ನೇ ವಯಸ್ಸಿನಲ್ಲಿ ಗುರುಗಳಾದ ಶ್ರೀಸತ್ಯಪ್ರಮೋದತೀರ್ಥರಿಂದ 1997 ರಲ್ಲಿ ಯತ್ಯಾಶ್ರಮ ಸ್ವೀಕರಿಸಿದರು. ಭಾರತೀಯ ಸನಾತನ ವೈದಿಕ ಪ್ರಪಂಚಕ್ಕೆ ಹೊಸ ದಾರಿಯನ್ನು ತೋರಲು ಭಾಸ್ಕರನಂತೆ ಜಗದ್ಗುರುಗಳಾಗಿ ಉದಯಿಸಿದರು.
ಸಮಾಜಮುಖಿ: ಯತಿಗಳಾದ ಕೆಲವು ದಿನಗಳಲ್ಲಿಯೇ ಅವರು ಸ್ಥಾಪಿಸಿದ್ದು ‘ವಿಶ್ವ ಮಧ್ವ ಮಹಾ ಪರಿಷತ್ತು’. ಇಂದಿಗೆ ಭಾರತದಾದ್ಯಂತ ಈ ಪರಿಷತ್ತಿನ ಅನೇಕ ಶಾಖೆಗಳಾಗಿವೆ. ಎಲ್ಲ ಶಾಖೆಗಳಲ್ಲಿಯೂ ವಿದ್ವಾಂಸರಿಂದ ಮಹಾಭಾರತ, ರಾಮಾಯಣ, ಭಾಗವತ ಮೊದಲಾದ ಗ್ರಂಥಗಳ ಕುರಿತು ಪ್ರವಚನ ಕಾರ್ಯಕ್ರಮ ನಡೆಸುತ್ತಿದ್ದಾರೆ. ಶ್ರೀಗಳವರ ಆಜ್ಞೆಯಂತೆ ಮಠದ ಅನೇಕ ಶಾಖೆಗಳಿಂದ ನಿತ್ಯ ಅನ್ನದಾನ ನಡೆಯುತ್ತಿದೆ. ಪ್ರಕೃತಿ ವಿಕೋಪದಿಂದ ತೊಂದರೆಗೊಳಗಾದ ಅನೇಕ ಊರುಗಳಲ್ಲಿ ಶ್ರೀಮಠದಿಂದ ಸಹಾಯಹಸ್ತ ಸದಾ ಸಿದ್ಧ.
ಕರೊನಾ ಸಮಯದಲ್ಲಿ ಶ್ರೀಗಳವರ ನಿರ್ದೇಶನದಂತೆ ನೂರಾರು ಜನ ಸ್ವಯಂಸೇವಕರು ಅನೇಕ ಪೀಡಿತ ಪರಿವಾರಗಳಿಗೆ ನಿತ್ಯವೂ ಊಟವನ್ನು ಒದಗಿಸಿದ್ದರು. ಬಡ ಪರಿವಾರಗಳಿಗಾಗಿ ಸಾಮೂಹಿಕ ವಿವಾಹ ಹಾಗೂ ಉಪನಯನಗಳನ್ನು ಊರೂರುಗಳಲ್ಲಿ ನಡೆಸುತ್ತಾರೆ. ಮಕ್ಕಳಿಗಾಗಿ ಅಲ್ಲಲ್ಲಿ ನಿರಂತರ ಧಾರ್ವಿುಕ ಶಿಬಿರಗಳು, ಸಾಮೂಹಿಕ ಪಾರಾಯಣಗಳು ಮೊದಲಾದ ಧಾರ್ವಿುಕ ಕಾರ್ಯಗಳು ಸದಾ ನಡೆಯುವಂತೆ ವ್ಯವಸ್ಥೆ ಮಾಡಿದ್ದಾರೆ. ಗೋವು ಸಂರಕ್ಷಣೆ ನಿಟ್ಟಿನಲ್ಲಿ ಅನೇಕ ಗೋಶಾಲೆಗಳನ್ನು ಶ್ರೀಮಠದ ವತಿಯಿಂದ ಆಯಾ ಊರುಗಳಲ್ಲಿ ಕಟ್ಟಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಸುಮಾರು ಮೂವತ್ತರಿಂದ ನಲವತ್ತು ದೇಗುಲಗಳ ನಿರ್ಮಾಣ ಹಾಗೂ ಜೀಣೋದ್ಧಾರ ಕಾರ್ಯಗಳನ್ನು ಭಾರತದಾದ್ಯಂತ ನಡೆಸಿದ್ದಾರೆ.
ಸರಸ್ವತಿ ಸೇವೆ: ತಮ್ಮ ಗುರುಗಳು ಕಟ್ಟಿದ ಜ್ಞಾನದೇಗುಲ ಜಯತೀರ್ಥ ವಿದ್ಯಾಪೀಠದಲ್ಲಿ ನೂರಾರು ಜನ ವಿದ್ಯಾರ್ಥಿಗಳಿಗೆ ಪ್ರಾಚೀನ ಗುರುಕುಲ ಪದ್ಧತಿಯಲ್ಲಿ ಶಾಸ್ತ್ರ ಶಿಕ್ಷಣ ನಡೆಸುತ್ತಿದ್ದಾರೆ. ವಿಷ್ಣುವಿಜಯ, ಕರ್ಮನಿರ್ಣಯ, ಯಂತ್ರೋದ್ಧಾರಕ ಪ್ರಾಣದೇವರ ಸ್ತೋತ್ರ ವ್ಯಾಖ್ಯಾನ, ಮಹಾಭಾರತ ತಾತ್ಪರ್ಯ ನಿರ್ಣಯಕ್ಕೆ ವ್ಯಾಖ್ಯಾನ ಹೀಗೆ ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ. ಸ್ತೋತ್ರ ಸಾಹಿತ್ಯವಂತೂ ಅತೀ ಶ್ರೀಮಂತವಾಗಿದೆ ಗುರುಗಳಲ್ಲಿ. ಸತ್ಯಾತ್ಮತೀರ್ಥರ ಉಪದೇಶಗಳು, ಶಾಸ್ತ್ರಾನುವಾದಗಳು, ಅವರ ಉಪನ್ಯಾಸದ ಶೈಲಿಯನ್ನು ಕಂಡ ಕೋವಿದ ಸಮಾಜವಷ್ಟೆ ಅಲ್ಲದೆ ಅವರ ಸಮಕಾಲೀನ ಯತಿಗಳೂ ಇವರ ಜಿಹ್ವೆಯಲ್ಲಿ ತಾಯಿ ಸರಸ್ವತಿ ನಲಿದಾಡುತ್ತಿರುವುದರಲ್ಲಿ ಸಂದೇಹವೇ ಇಲ್ಲವೆಂದು ಉದ್ಗಾರವೆತ್ತುವರು. ಶ್ರೀಮಠದ ಸಂಶೋಧನಾ ಕೇಂದ್ರದಿಂದ ಸುಮಾರು ಇನ್ನೂರಕ್ಕೂ ಹೆಚ್ಚು ಗ್ರಂಥಗಳ ಮುದ್ರಣವಾಗಿದೆ.
(ಲೇಖಕರು ಹವ್ಯಾಸಿ ಬರಹಗಾರರು)