ಅಂಕಣ

ಗೋವುಗಳ ಸಂಘಟನಾ ಶಕ್ತಿ ಬೆಳೆಯಬೇಕು! ಎಂಬ ಆಶಯ ವ್ಯಕ್ತಪಡಿಸಿದ್ದಾರೆ ಡಾ. ಕೆ.ಎಸ್​. ನಾರಾಯಣಾಚಾರ್ಯ

ಡಾ. ನಾರಾಯಣಾಚಾರ್ಯ ಕೆ.ಎಸ್

ಮಾರೀಚ, ಜಿಂಕೆಯ ವೇಷವನ್ನೇ ಧರಿಸಿ, ಸೀತೆಯನ್ನು ಯಾಮಾರಿಸಿದ. ಅದು ಭಾರತೀಯರ ಸಂಕಟ ಸ್ಥಿತಿ! ವೇಷ ಜಿಂಕೆಯದಾದರೂ, ಒಡಲೊಳಗೆ ಮಿದುಳು, ಹೃದಯ ರಾಕ್ಷಸನದ್ದು! ಬಿಡಿ. ನೀವು ರಾಮಾಯಣವನ್ನು ಸರಿಯಾಗಿ ಅರ್ಥೈಸಿಕೊಳ್ಳುವುದಿಲ್ಲ. ಬರೀ ‘ಮಿಥ್’ ಎನ್ನುತ್ತೀರಿ. ಮಾರೀಚಿ ಕಾದಂಬರಿಕಾರರು ನಿಮ್ಮ ಮಾಯೆ ಸಡಿಲು ಆಗದಂತೆ, ಹೊರ ಚರ್ಮಕ್ಕೇ ನಿಮ್ಮನ್ನು ಬಿಗಿಯುತ್ತಾರೆ.

‘ತಬ್ಲಿಘಿ’ ವೈರಾಣು ಪ್ರಸರಣದ ಚರ್ಚಾಕೂಟದ ದೃಶ್ಯವನ್ನು ಇತ್ತೀಚೆಗೆ ಟಿ.ವಿ.ಯೊಂದರಲ್ಲಿ ನೋಡುತ್ತಿದ್ದೆ. ಈ ‘ಗೋವಿನ ಹಾಡಿನ’ ಸಾಲು ನೆನಪಾಯ್ತು. ಕ್ಷಮಿಸಿ. ಒಂದು ಪುಣ್ಯಕೋಟಿ ಗೋವು ತನ್ನ ಕಂದನಿಗೆ ಹೇಳುತ್ತಿದೆ-‘ಹೆಬ್ಬುಲಿಯ ಬಾಯನ್ನು ಹೋಗುವೆನು, ಇಬ್ಬರಾ ಋಣ ತೀರಿತೆಂದು ತಬ್ಬಿಕೊಂಡಿತು ಕಂದನ’. ಹುಲಿಯ ಹೆಸರು ಚಂಡವ್ಯಾಘ್ರ. ಪ್ರಚಂಡ, ಇಂದಿನ ವೈರಾಣು ಕರೊನಾ ಎಂದುಕೊಳ್ಳಿ. ಗೋವು, ಪುಣ್ಯಕೋಟಿ-ಭರತಭೂಮಿಯ ಧರ್ಮಭೀರುಗಳು, ಪರರ ನೋವಿಗೆ ಸ್ಪಂದಿಸುವ ಹೃದಯವಂತರೂ, ಸತ್ಯಕ್ಕೆ ಮೀರಿ ನಡೆಯದವರು, ಕೊಟ್ಟ ಮಾತಿಗೆ ಮೀರದವರೂ ಆದ ಭಾರತೀಯರು. ಈ ವಿಪರ್ಯಾಸ ನೋಡಿ. ಮಾತು ಮೀರದ ಪುಣ್ಯಕೋಟಿಯೂ ಮಾತಿಗೆ ಕಟ್ಟು ಬೀಳದವರೂ, ಕ್ಷಣಕ್ಷಣಕ್ಕೆ ಮಾತು ಬದಲಿಸುವವರೂ, ಹಿಂಸಾವಿಹಾರಿಗಳು, ವಿಸ್ತರಣಾಕಾಂಕ್ಷಿಗಳೂ ಆದ ಚಂಡವ್ಯಾಘ್ರ ಸಮುದಾಯದವರೂ, ಒಂದೆಡೆ ವಾಸಿಸಬೇಕು. ಹುಲಿ, ಎಂದೂ ಗೋವಿನೊಡನೆ ಸೋದರ್ಯಕ್ಕೆ, ಸಹವಾಸಕ್ಕೆ, ಸಮರಸ ಸಾಮುದಾಯಿಕ, ಸಹಬಾಳ್ವೆಯ ತತ್ತ್ವಕ್ಕೆ ಒಪ್ಪದ, ಹೊಂದಿಕೊಳ್ಳದ ಸ್ವಭಾವದ್ದು. ಹೌದೇ? ಒಂದೇ ಕಾಡಿನಲ್ಲಿ ಹುಲಿಯೂ, ಗೋವೂ ಇರುತ್ತ, ಅದು ಗೋವುಗಳನ್ನು ತಿನ್ನುತ್ತ, ಇದು ಬರೀ ಹುಲ್ಲು ಮೇಯುತ್ತ, ಒಟ್ಟಿಗೇ ಇದ್ದರೂ ಅರಣ್ಯ ಒಂದು ರಾಷ್ಟ್ರ ಆಗುವುದಿಲ್ಲ!

ಗೋವು ಹಾಲು ಕೊಡುತ್ತದೆ, ನೇಗಿಲು ಎಳೆಯುತ್ತದೆ, ಗೊಬ್ಬರಕ್ಕೆ ಸಗಣಿ ನೀಡುತ್ತದೆ, ಆರೋಗ್ಯಕ್ಕೆ ಗಂಜಳ ಕೊಡುತ್ತದೆ. ಸತ್ತರೂ ಚರ್ಮದಿಂದ ತೆಪ್ಪಕ್ಕೆ, ಚಪ್ಪಲಿಗೆ, ಮೃದಂಗಕ್ಕೆ, ನಾನಾ ಉಪಕಾರ ಮಾಡುತ್ತದೆ. ಇದು ಕಾಮಧೇನು. ಕಲ್ಪವೃಕ್ಷವೆಂಬ ತೆಂಗಿನ ಮರದಂತೆ, ಕಾಯಿ, ಕೊಬ್ಬರಿ, ಎಳನೀರು, ಗರಿಯಿಂದ ಕಸಬರಿಗೆ, ನಾರಿನಿಂದ ಹಗ್ಗ, ನಾನಾ ಕರಕುಶಲ ವಸ್ತುಗಳು, ಸೂರಿಗೆ ಬೇಕಾದ ರೀಪುಗಳು, ತೊಲೆ-ಹೀಗೆ ನಾನಾ ಉಪಕಾರಕ್ಕೆ ಬರುವುದರಿಂದ ಕಾಮಧೇನು, ಕಲ್ಪವೃಕ್ಷಗಳನ್ನು ಹಿರಿಯರು ಸಮೀಕರಿಸಿದರು. ಕೊಚ್ಚೆಯ ನೀರನ್ನೇ ಬುಡಕ್ಕೆ ಹರಿಸಿದರೂ, ಕೊಡುವುದು ಸಿಹಿ ಎಳನೀರನ್ನೇ-ತಾನು ಸಾಯುವ ತನಕ, ಗಿಡ ನೆಟ್ಟವನು ಸತ್ತ ಮೇಲೂ! ಅದು ಭಾರತೀಯ ಹಿಂದೂ ಸಂಸ್ಕೃತಿ. ಇದು ಕೋಟಿ ಪುಣ್ಯದಿಂದ, ಋಷಿಮುನಿ ಸಂತರಿಂದ ಬೆಳೆಸಲ್ಪಟ್ಟ ಸನಾತನದ ಏಕಮೇವ ಧರ್ಮ! ಜಾಗ್ರತೆ-ಇದೇ ಧರ್ಮ.

ಚಂಡವ್ಯಾಘ್ರನೋ? ಸ್ವಚ್ಛಂದವಿಹಾರಿ, ಹಿಂಸಾಜೀವಿ, ಕೊಳ್ಳೆ, ಲೂಟಿ, ದೊಂಬಿ, ರಕ್ತಪಾನದಿಂದ ಮಾತ್ರ ಬದುಕುವ ಜೀವಿ. ಹುಲಿಯ ಚರ್ಮವನ್ನು ಸಾತ್ವಿಕರು ಬಳಸುವುದಿಲ್ಲ. ಜಿಂಕೆಯ ಚರ್ಮ ಬೇರೆ. ಮಾರೀಚ, ಜಿಂಕೆಯ ವೇಷವನ್ನೇ ಧರಿಸಿ, ಸೀತೆಯನ್ನು ಯಾಮಾರಿಸಿದ. ಅದು ಭಾರತೀಯರ ಸಂಕಟ ಸ್ಥಿತಿ! ವೇಷ ಜಿಂಕೆಯದಾದರೂ, ಒಡಲೊಳಗೆ ಮಿದುಳು, ಹೃದಯ ರಾಕ್ಷಸನದ್ದು! ಬಿಡಿ. ನೀವು ರಾಮಾಯಣವನ್ನು ಸರಿಯಾಗಿ ಅರ್ಥೈಸಿಕೊಳ್ಳುವುದಿಲ್ಲ. ಬರೀ ‘ಮಿಥ್’ ಎನ್ನುತ್ತೀರಿ. ಮಾರೀಚಿ ಕಾದಂಬರಿಕಾರರು ನಿಮ್ಮ ಮಾಯೆ ಸಡಿಲು ಆಗದಂತೆ, ಹೊರ ಚರ್ಮಕ್ಕೇ ನಿಮ್ಮನ್ನು ಬಿಗಿಯುತ್ತಾರೆ. ಮಾರೀಚನನ್ನು ಬಯಲು ಮಾಡುವ ರಾಮಬಾಣ ನನ್ನಂಥ ಲೇಖಕರ ಲೇಖನಿಯಲ್ಲಿದೆ.

‘ರಾಮಾಯ ಸ್ವಸ್ತಿ, ರಾವಣಾಯ ಸ್ವಸ್ತಿ’ ಎಂಬ ಮೋಸದ ನ್ಯಾಯದ, ಸಮೀಕರಣದ, ಸೆಕ್ಯುಲರಿಸ್ಟರೂ ಎಲ್ಲ ಎಡಪಂಥೀಯರು, ಈವರೆಗೆ ಹುಲಿ-ಗೋವುಗಳ ಒಕ್ಕೂಟದ ಒಂದು ಭ್ರಾಂತಸಾಮ್ರಾಜ್ಯವನ್ನು ಭಾರತದ ಮೇಲೆ ಹೇರಲು ಹೊರಟರು. ಸೀತಾಪಹರಣದಂತೆ, ಭಾರತ ಕಷ್ಟಪಟ್ಟು ಸಂದಾದಿಸಿದ ಸ್ವಾತಂತ್ರ್ಯ ಹರಣವಾಯ್ತು. ಮತ್ತೆ ಚಂಡಕೌಶಿಕನೆಂಬ ವ್ಯಾಘ್ರ ಪಾರ್ಟಿಯ ದರ್ಬಾರು ಆರಂಭವಾಗಿ, ಹುಲಿಗಳಲ್ಲದೆ, ಚಿರತೆ, ತೋಳ, ನರಿ, ಕಿರುಬ, ಕರಡಿ ಮುಂತಾದ ಹಿಂಸಾಪಾರ್ಟಿಗಳೆಲ್ಲ ಒಗ್ಗೂಡಿಯೇ ಒಂದು ಯುಪಿಎ ಆಗಿ ಉದಿಸಿ, ಹತ್ತು ವರ್ಷ ಗೋವುಗಳ ರಕ್ತ ಹೀರಿದ್ದು ಇತಿಹಾಸ. ಹುಲಿಗೆ ತನ್ನ ಕಾಡೇನು? ಬೇರೆಯವರ ಕಾಡೇನು? ಎಂಬ ಗಾದೆ ಇದೆ. ಅದು ಭಾರತದ ಕಾಡೂ ಆದೀತು, ಇಟಲಿ, ಚೀನಾ, ಅಮೆರಿಕ, ಬ್ರಿಟನ್​ಗಳ ಕಾಡೂ ಆದಾವು. ಬೇಟೆ ಸಿಕ್ಕರೆ ಸಾಕಲ್ಲ? ಎಂದಿನಂತೆ ಗೋವುಗಳು ವಿದೇಶೀ ಹುಲಿಗೂ ಕಾಲಿಗೆ ಬಿದ್ದು ಬಿದ್ದು ನಮಸ್ಕರಿಸಿ, ಗೋಗರೆದು-‘ನೀನೇ ಪ್ರಧಾನಿಯಾಗು’ ಎಂದು ಕೈ ಮುಗಿದವು, ಗೋಗರೆದವು, ಎದೆ ಬಡಿದುಕೊಂಡವು! ಎದೆಯಿಲ್ಲದ ಹುಲಿ, ಸಂದರ್ಭ ಬಿಟ್ಟೀತೆ? ಆದರೆ, ಇಲ್ಲಿ ಗೋವುಗಳ ರಕ್ಷಕ, ಗೋಪಾಲ, ಕೃಷ್ಣ, ದ್ವಾರಕೆಯವನು, ಗುಜರಾತ್ ಪ್ರಾಂತ್ಯದವನು ಮೇಲೆದ್ದ! ಬಂದೂಕು ಹಿಡಿದಾಗ ಹುಲಿ ನಾಲ್ಕು ಹೆಜ್ಜೆ ಹಿಂದೆ ಇಟ್ಟಿದೆ. ಗೋವುಗಳಿಗೆ ಎಚ್ಚರವಿಲ್ಲ. ಬುದ್ಧಿ ಬಂದಿಲ್ಲ. ಅದು ಸದ್ಯದ ಪರಿಸ್ಥಿತಿ. ಅಷ್ಟರಲ್ಲಿ, ಈ ‘ತಬ್ಲಿಘಿ’ ನರಿಯ ಊಳೆ.

ಟಿ.ವಿ. ಚರ್ಚೆಯನ್ನು ನಡೆಸಿದ ಒಬ್ಬ ಆಂಕರ್ ಪ್ರಶ್ನೆ ಮಾಡಿದ್ದೇ ಮಾಡಿದ್ದು! ತಬ್ಲಿಘಿ ಪ್ರತಿನಿಧಿಯೊಬ್ಬರು ತಬ್ಬಿಬ್ಬಾದರು! ಪ್ರಶ್ನೆ-‘ಸುಮಾರಾಗಿ ದಾರಿಗೆ ಬರುತ್ತಿದ್ದ ವೈರಾಣು ಪ್ರಸರಣ ನಿಗ್ರಹ, ಒಮ್ಮೆಲೆಗೇ ಉಲ್ಬಣಿಸಲು ಈ ತಬ್ಲಿಘಿ ಸಂಘಟನೆ ಕಾರಣವಲ್ಲವೇ?’ ನೋಡಿ ನುಣುಚು ಉತ್ತರ-‘ನಮ್ಮದು ಶಾಂತ ಸಂಘಟನೆ. ಒಗ್ಗೂಡಲು ಸಾಂವಿಧಾನಿಕ ಹಕ್ಕು ಇದೆ. ನಮ್ಮದು ಭಾರತಕ್ಕೆ ಸೀಮಿತ ಕ್ಷೇತ್ರವಲ್ಲ. ವಿಶ್ವದಾದ್ಯಂತ ಇರುವ ಸಂಘಟನೆ. ಭಾರತದಲ್ಲೇ 36 ಸಾವಿರಕ್ಕೂ ಅಧಿಕ ಕೇಂದ್ರಗಳಿವೆ...’ ಇದು ನೇರ ಉತ್ತರವೇ? ನೀವೇ ನೋಡಿಕೊಳ್ಳಿ!! ಮಾರಾಯ್ರೆ! ಮಾಯದಿ ಬಿಟ್ಟು ಎದ್ದೇಳಿ. ಆಂಕರ್ ಬಳಿ ಅಂಕಿಅಂಶ ಇತ್ತು. ಜೋರುದನಿಯಲ್ಲಿ ಕೇಳುತ್ತಾಳೆ-‘ಈ ದಾಖಲೆ ಅಂಕಿಗಳು ಸುಳ್ಳೇ?’ ಉತ್ತರ-‘ನಾವು ನಂಬುವುದಿಲ್ಲ. ನಮ್ಮ ಎಲ್ಲ ಕೇಂದ್ರಗಳೂ ಕೇಂದ್ರ ಸರ್ಕಾರದೊಡನೆ ಸಹಕರಿಸಲು ಆಜ್ಞೆ ಮಾಡಿದ್ದೇವೆ!’ ಮತ್ತೆ ಪರೀಕ್ಷಿಸಿ, ಉತ್ತರ ನೇರವೇ? ಜಾರಿಕೆಯೇ? ಮತ್ತೆ ಪ್ರಶ್ನೆ: ‘ನಮ್ಮ ಅಂಕಿಗಳು ಸರಿಯಿಲ್ಲವಾದರೆ ನಮ್ಮ ಪ್ರಸಾರವಾಹಿನಿಯ ಮೇಲೆ ಕೇಸು ಹಾಕಬಹುದಲ್ಲ? ನಿಮಗೆ ಈ ಸಂಕಟ ಕಾಲದಲ್ಲಿ ನಿಜಾಮುದ್ದೀನ್ ಜಮಾತ್​ನಲ್ಲಿ ಇಷ್ಟು ಸಂಖ್ಯೆಯ ಜಮಾವಣೆಗೆ ಅವಸರ, ಜರೂರತ್ತು ಏನಿತ್ತು? ಅಲ್ಲಿಂದಲೇ ಅಲ್ಲವೇ ರೋಗಾಣು ಪ್ರಸರಣ ತೀವ್ರವಾದದ್ದು?’ ಉತ್ತರ-‘ನಾವು ಸಂಘಟನೆ ಮಾಡಿರಬಹುದು. ಆಪತ್ಕಾಲವಾಗಿದ್ದರೆ, ನಮಗೆ ಪರ್ವಿುಟ್ ಏಕೆ ಕೊಟ್ಟಿರಿ? ಕೊಟ್ಟವರು ಕೇಂದ್ರ ಸರ್ಕಾರವಲ್ಲವೇ?’ ಮತ್ತೆ ಜಾರಿಕೆಯ ಉತ್ತರ.

ಮತ್ತೆ ಪ್ರಶ್ನೆ-‘ಈ ತಬ್ಲಿಘಿ ನಿಮ್ಮ ಇಡೀ ಸಮುದಾಯವನ್ನು ಪ್ರತಿನಿಧಿಸುತ್ತದೆಯೇ ಅಥವಾ ಇದು ಒಂದು ಪಂಗಡವೇ?’ ಉತ್ತರಿಸುವಾತ ‘ತಬ್ಬಿಬ್ಬು’. ಒಬ್ಬ ‘ಹೌದು’ ಎಂದರೆ, ಇನ್ನೊಬ್ಬ ತಡವರಿಸುತ್ತಾನೆ. ವಹಾಬೀ ಇದೆ! ಶಿಯಾ ಇದೆ, ಬೇರೆ ಬೇರೆಯಾಗಿ ಇವೆಯಲ್ಲ? ಸಾಹೇಬ್ರೆ! ನಾವು ಯಾಮಾರುವ ಕಾಲ ಹೋಯ್ತು. ಇತರರ ಮೇಲೆ ಆಕ್ರಮಣ ಮಾಡಿದಾಗ ಎಲ್ಲ ಒಂದಾಗುತ್ತೀರಿ! ಆಕ್ರಮಣವಿಲ್ಲದಾಗ, ನೀವು ನೀವೇ ಬಡಿದಾಡುತ್ತೀರಿ, ಅದು ಚರಿತ್ರೆ! ಇರಾಕ್, ಇರಾನ್, ಸಿರಿಯಾ, ಸೌದಿಗಳ ಕಚ್ಚಾಟ ನೋಡಿ! ಬೇಡಿ ಹಾಕುವುದು ಯಾರಿಗೆ? ಮಲೇಷ್ಯಾ, ಇಂಡೋನೇಷ್ಯಾ, ಫಿಲಿಪೆನ್ಸ್, ಅಫ್ ಕೋರ್ಸ್ ಭಾರತದ ಮುಗ್ಧರಿಗೆ! ಬೆಲ್ಜಿಯಂ ಸ್ವತಂತ್ರ ಚಿಂತಕನೊಬ್ಬನ ಮಾತು ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ಲಕ್ಷಗಟ್ಟಲೆ ಹುಲಿಯ ಪಾರ್ಟಿ ಸಮುದಾಯಕ್ಕೆ ಜ್ಞಾನೋದಯವಾಗಿದೆ. ‘ಮತ ಬಿಟ್ಟು ಹೊರಬರಲು ಕಾಲ, ಸಂದರ್ಭ, ನೋಡುತ್ತಿದ್ದಾರೆ’ ಅಂತ. ಅವನದು ನಂಬಲರ್ಹವಾದ ಸಂಶೋಧನೆ. ಇಲ್ಲಿ ಟಿವಿಯ ಆಂಕರ್ ಸಹ ಹೇಳಿದರು-‘ನಿಮ್ಮ ಆಟ ಬಯಲಾಗುತ್ತಿದೆ. ಅದು ನೋಡಲು ನೀವಿನ್ನೂ ಬದುಕಿರುತ್ತೀರಿ?’ ಅಂತ. ಎಲ್ಲ ತಾಳೆಯಾಗುತ್ತಿದೆ. ಹೌದೇ? ಈಗ ಪುಣ್ಯಕೋಟಿಗಳು ಎಚ್ಚರವಾಗಬೇಕು. ಗೋವುಗಳ ಮಧ್ಯೆ ಎತ್ತುಗಳೂ, ಗೂಳಿಗಳೂ ಬೇಕು!

ಒಂದು ವೇದಮಂತ್ರ ನೆನಪಾಗುತ್ತಿದೆ. ‘ಗಮಿದ್ಯೆ ಗಾವೋ ಯತ್ರ ಭೂರಿ ಶೃಂಗಂ ಅಯಾಸಃ... ತದವ ಭಾತಿ ಭೂರೇಃ|| (ಋಗ್ವೇದ 164ನೇ ಸೂಕ್ತ ಪ್ರಥಮ ಮಂಡಲ) ಅರ್ಥ: ‘ಎಲ್ಲಿ ಬಲಿಷ್ಠ ಕೊಂಬು, ಕೋಡುಗಳುಳ್ಳ ಸದೃಢ, ಪುಷ್ಟ ಗೋವುಗಳು ಸಮೃದ್ಧವಾಗಿ ಇರುವವೋ, ಅವುಗಳ ಮಧ್ಯೆ ಶ್ಲಾಘನೀಯನಾದ ವಿಷ್ಣುವಿನ-ಗೋಪಾಲಕನ ಸ್ಥಾನ ಇರುತ್ತದೆ’ ಅಂತ. ಗೋವುಗಳು ಬಹಳ! ಗೋಪಾಲ ಇದ್ದುದರಿಂದ ಅಂದು ಕಂಸನ ಆಟ ನಡೆಯಲಿಲ್ಲ. ಅಂದಿನ ಚಂಡವ್ಯಾಘ್ರ, ಕಂಸ. ಇಂದಿನ ಕಂಸ ಪಾರ್ಟಿಯವರೂ, ಸಮುದಾಯಗಳವರೂ ಬೇರೆ! ಹುಲಿಗಳ ಸಂಘಟನಾಶಕ್ತಿ ಕುಗ್ಗಬೇಕು. ಗೋವುಗಳ ಸಂಘಟನಾ ಶಕ್ತಿ ಬೆಳೆಯಬೇಕು. ಅರಣ್ಯದಲ್ಲಿ ಗೋವುಗಳು ನಿರಾಬಾಧವಾಗಿ ಓಡಾಡಿ, ಹುಲ್ಲುಮೇದು, ಹಾಲು ಕೊಡುವ ಪರಿಪಾಠ ನಿರಂತರವಾಗಿ ನಡೆಯಲು, ಹುಲಿಯ ಬೇಟೆಗೆ ಅರಸರು ಅಂದು ಮುಂದಾಗುತ್ತಿದ್ದರು. ಅಂದು ‘ಸಮರಸ ಢೋಂಗಿ’ವಾದಿಗಳು ಇರಲಿಲ್ಲ. ಅರ್ಜುನನ ಗಾಂಡೀವ ಇತ್ತು. ಭೀಮನ ಗದೆಯಿತ್ತು. ಶ್ರೀರಾಮನ ಬಾಣ ಇತ್ತು. ಕೃಷ್ಣನ ಸುದರ್ಶನ ಚಕ್ರ ಇತ್ತು. ಭೀಷ್ಮ ದ್ರೋಣರ ಸೆಕ್ಯುಲರಿಸಂ, ನಾನ್ ಅಲೈನ್​ವೆುಂಟು, ‘ನಿರ್ಲಿಪ್ತ’ವಾದ ಸೇಡಿನ ಪಕ್ಷಪಾತ ನಡೆಯಲಿಲ್ಲ. ಇಂದು ಲೆಫ್ಟಿಸ್ಟ್ಟೇ, ಚಂಡವ್ಯಾಘ್ರನಿಗೆ ರಕ್ಷಕರು! ಹುಲಿ ಎಂದೂ ಗೋವಾಗುವುದಿಲ್ಲ. ಅಂದರೆ ‘ತಬ್ಲಿಘಿ’ಗಳು ನುಣುಚುವವರೇ ಹೊರತು, ತರ್ಕಬದ್ಧ ನಡತೆಗೆ ‘ರೀಸನಬಲ್’ ಎಂಬ ದಾರಿಗೆ ಬರುವುದಿಲ್ಲ. ತಬ್ಬಲಿಗಳಾದವರು, ನಾವು, ನೀವು!