ಕೈಯಲ್ಲಿ ವೀಣೆ ಹಿಡಿದುಕೊಂಡು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ‘ನಾರಾಯಣ... ನಾರಾಯಣ...’ ಎನ್ನುತ್ತ ತ್ರಿಲೋಕ ಸಂಚಾರ ನಡೆಸುವ ನಾರದರ ಪಾತ್ರ ಪುರಾಣಾದಿಗಳಲ್ಲಿ ಅತ್ಯಂತ ರಂಜನೀಯವಾದದ್ದು. ವಿನೋದ, ವಿದ್ವತ್ತು, ಜ್ಞಾನಗಳ ಸಾಗರ ಈ ದೇವಋಷಿ. ವೇದ, ಭಾಗವತ, ಭಗವದ್ಗೀತೆ, ವಾಯುಪುರಾಣ, ಬ್ರಹ್ಮಪುರಾಣ, ಬ್ರಹ್ಮವೈವರ್ತಪುರಾಣ ಹೀಗೆ ಎಲ್ಲದರಲ್ಲೂ ಈ ಭಕ್ತಾಗ್ರೇಸರನ ಉಲ್ಲೇಖವಿದೆ. ಮೇ 27ರ ‘ನಾರದ ಜಯಂತಿ’ ಹಿನ್ನೆಲೆಯಲ್ಲಿ ಈ ಬರಹ.
‘‘ನಿನ್ನ ಸೈನ್ಯವನ್ನೂ ಯುದ್ಧಯಂತ್ರಗಳನ್ನೂ ಸದಾ ಸಿದ್ಧವಾಗಿ ಇಟ್ಟಿರು. ಸೇವಕರನ್ನು ಪ್ರೀತಿಯಿಂದ ಒಲಿಸಿಕೊ. ಕಾಲಕ್ಕೆ ಸರಿಯಾಗಿ ಸೇವಕರಿಗೂ ಸೈನಿಕರಿಗೂ ಸಂಬಳ ಕೊಡು. ಆದಾಯಕ್ಕಿಂತ ಹೆಚ್ಚಾಗಿ ಎಂದಿಗೂ ಖರ್ಚು ಮಾಡಬೇಡ. ಕೆರೆ ಕಾಲುವೆಗಳನ್ನು ನಿರ್ವಿುಸಿ ರೈತರಿಗೆ ಬೇಕಾದ ಸೌಕರ್ಯವನ್ನು ಮಾಡಿಕೊಡು....’’
ಇದು ರಾಜ್ಯದ ಆಡಳಿತಗಾರನಿಗೆ ಆಧುನಿಕ ಕಾಲದ ರಾಜ್ಯಶಾಸ್ತ್ರ ವಿಶಾರದನೊಬ್ಬ ಹೇಳುವ ಬುದ್ಧಿವಾದ ಎಂದು ತೋರುತ್ತದೆ, ಅಲ್ಲವೆ? ಸೈನ್ಯ, ಯುದ್ಧ ಯಂತ್ರಗಳು, ಆದಾಯ-ವೆಚ್ಚ, ರೈತರು, ಕೆರೆ ಕಾಲುವೆಗಳಿಗೆ ಸಂಬಂಧಿಸಿದ ಈ ಮಾತುಗಳನ್ನು ಹೇಳಿದವರು ಯಾರು ಗೊತ್ತೆ? ನಾರದರು! ಮಹಾಭಾರತದಲ್ಲಿ ಯುಧಿಷ್ಠಿರನಿಗೆ ಮಾಡುವ ಉಪದೇಶ ಇದು.
ನಾರದರ ಹೆಸರನ್ನು ಯಾರು ಕೇಳಿಲ್ಲ? ಪ್ರತಿಯೊಂದು ಪುರಾಣ, ಹರಿಕಥೆ, ಪೌರಾಣಿಕ ನಾಟಕ, ಯಕ್ಷಗಾನ ಪ್ರಸಂಗಗಳಲ್ಲಿ ಅವರು ಇರುತ್ತಾರೆ. ಅವರು ಬರದೆ ಯಾವ ಕಥೆಯೂ ಮುಂದೆ ಸಾಗದು! ಕಥೆಗೆ ಕಳೆಯೇ ಏರದು! ಕೃತ, ತ್ರೇತಾ, ದ್ವಾಪರ- ಈ ಮೂರು ಯುಗಗಳ ಕಥೆಗಳಲ್ಲಿಯೂ ನಾರದರು ಕಾಣಿಸಿಕೊಳ್ಳುತ್ತಾರೆ. ನಾರ ಎಂದರೆ ಮನುಷ್ಯರಿಗೆ ಪ್ರಯೋಜನವಾಗುವ ಜ್ಞಾನ; ದ ಎಂದರೆ ಕೊಡುವವರು. ನಾರದ ಎಂದರೆ ಮನುಷ್ಯರಿಗೆ ಪ್ರಯೋಜನವಾಗುವ ಜ್ಞಾನವನ್ನು ಕೊಡುವವರು. ನಾರದರು ಸಂಗೀತವಿದ್ಯೆಯಲ್ಲಿ ವಿಶಾರದರು. ಸದಾ ಭಗವಂತನ ನಾಮಾವಳಿ ಹಾಡಿ ಆನಂದಿಸುವವರು. ದೇವರ್ಷಿಗಳಲ್ಲಿ ಅವರು ಶ್ರೇಷ್ಠರು. ಎಲ್ಲರಿಗೂ ಅವರ ಬಗ್ಗೆ ಗೌರವ. ಎಲ್ಲಿ ಹೋದರೂ ಸ್ವಾಗತ. ಜನರಿಗೆ ಧರ್ವೇಪದೇಶ ಮಾಡುತ್ತ, ನೀತಿಕಥೆ ಹೇಳುತ್ತ ಸಂಚರಿಸುವುದು ಅವರ ಸ್ವಭಾವ. ದೇವತೆಗಳು, ರಾಕ್ಷಸರು, ಮನುಷ್ಯರು ಎಲ್ಲರಿಗೂ ಅವರು ಬೇಕಾದವರು. ದೇವತೆಗಳ ಗುಟ್ಟನ್ನು ರಾಕ್ಷಸರಿಗೂ ರಾಕ್ಷಸರ ಗುಟ್ಟನ್ನು ದೇವತೆಗಳಿಗೂ ನಾರದರು ತಿಳಿಸಿ ಬಿಡುವುದುಂಟು! ಮೊದಲೇ ದೇವತೆಗಳಿಗೂ ರಾಕ್ಷಸರಿಗೂ ವೈರ. ನಾರದರ ಮಾತುಗಳಿಂದ ವೈರವು ಮಸೆದು ಯುದ್ಧವೇ ನಡೆಯುತ್ತದೆ! ಹೀಗಾಗಿ ನಾರದರು ಕಲಹ ಪ್ರಿಯರೆಂದು ಪ್ರಸಿದ್ಧಿಯಾಯಿತು!
ಮಹರ್ಷಿಗಳು ಹೀಗೆ ಮಾಡಬಹುದೆ? ಚಾಡಿಯ ಮಾತುಗಳನ್ನು ಹೇಳಿ ಜಗಳಕ್ಕೆ ದಾರಿ ಮಾಡಬಹುದೆ? ಅವರ ಮಾತು ಕೆಲವು ವೇಳೆ ಚಾಡಿಯಾಗಿ ಕಂಡರೂ ಉದ್ದೇಶವು ಒಳ್ಳೆಯದೇ. ಕೆಟ್ಟವರಿಗೆ ಬೇಗನೆ ಶಿಕ್ಷೆಯಾಗಲಿ, ಅಹಂಕಾರಿಗಳಿಗೆ ಬುದ್ಧಿ ಬರುವಂತಾಗಲಿ, ಒಳ್ಳೆಯವರು ಸುಖವಾಗಿ ಬಾಳಲಿ ಎಂಬುದೇ ಅವರ ಉದ್ದೇಶ. (ಆಧಾರ-ಕಣಜ)
ಹಲವು ಗ್ರಂಥಗಳ ಕರ್ತೃ
ವೇದ ಉಪನಿಷತ್ತುಗಳಲ್ಲಿ ನಾರದರ ಹೆಸರಿದೆ. ಜ್ಯೋತಿಶಾಸ್ತ್ರ, ಸಂಗೀತಶಾಸ್ತ್ರಗಳಲ್ಲಿ ಅವರು ಆಚಾರ್ಯರು. ನಾರದಸ್ಮೃ ಎಮಬ ಧರ್ಮಶಾಸ್ತ್ರದ ಗ್ರಂಥವಿದೆ. ವಣೋಚ್ಚಾರಣೆಯನ್ನು ತಿಳಿಸುವ ನಾರದಾಶಿಕ್ಷಾ ಎಂಬ ಗ್ರಂಥವನ್ನು ಅವರು ರಚಿಸಿದ್ದಾರೆ. ನಾರದಪುರಾಣ ಎಂಬ ಪ್ರಸಿದ್ಧವಾದ ಪುರಾಣವೂ ಅವರ ಹೆಸರಲ್ಲಿದೆ. ಪಾಂಚರಾತ್ರ ಎಂಬ ಗ್ರಂಥದ ಕರ್ತೃ ನಾರದರು. ಇವುಗಳಲ್ಲದೆ ನಾರದ ಭಕ್ತಿಸೂತ್ರ ಎಂದು ಪ್ರಸಿದ್ಧವಾದ ಒಂದು ಗ್ರಂಥ ಉಂಟು. ಅದರಲ್ಲಿ 84 ಸೂತ್ರಗಳಿಂದ ಭಕ್ತಿಯ ಸ್ವರೂಪವನ್ನೂ ಸಾಧನ ಕ್ರಮವನ್ನೂ ಅದರ ಮಹಿಮೆಯನ್ನೂ ನಾರದರು ವಿವರಿಸಿದ್ದಾರೆ.
ಅಲೆಮಾರಿಯಾಗಿ ತಿರುಗುತ್ತಿರು!
ನಾರದರು ತ್ರಿಲೋಕಸಂಚಾರಿ ಆಗಿದ್ದೇಕೆ ಎಂಬ ಬಗ್ಗೆ ಒಂದು ಕಥೆ ಇದೆ. ದಕ್ಷ ತನ್ನ ಮಕ್ಕಳಿಗೆ ಒಮ್ಮೆ ತಪಸ್ಸು ಮಾಡಿ ತೇಜಸ್ಸು, ಶಕ್ತಿ ಪಡೆದು ನಂತರ ಮದುವೆಯಾಗುವಂತೆ ಹೇಳಿದ. ಆ ಪ್ರಕಾರ ಅವರು ಉಗ್ರ ತಪಸ್ಸು ಆರಂಭಿಸಿದರು. ಅಲ್ಲಿಗೆ ನಾರದರು ಹೋಗಿ ‘ನೀವೇಕೆ ತಪಸ್ಸು ಮಾಡುತ್ತಿದ್ದೀರಿ? ಮುಂದೆ ಮದುವೆ ಮಾಡಿಕೊಳ್ಳಲೆಂದೇ? ಸಂಸಾರದಲ್ಲಿ ಸ್ವಲ್ಪವೂ ಸುಖವಿಲ್ಲ. ಅದರಿಂದ ತಪ್ಪಿಸಿಕೊಳ್ಳಿ’ ಎಂದು ಉಪದೇಶಿಸಿದರು. ಇದನ್ನು ಕೇಳಿ ದಕ್ಷನ ಮಕ್ಕಳು ಮದುವೆ ಯೋಚನೆಯನ್ನೇ ಬಿಟ್ಟುಬಿಟ್ಟರು. ಇದು ದಕ್ಷನಿಗೆ ಗೊತ್ತಾಯಿತು. ತನ್ನ ಬೇರೆ ಕೆಲವು ಮಕ್ಕಳನ್ನು ಕರೆದು ಹಿಂದಿನಂತೆಯೇ ಹೇಳಿ ತಪಸ್ಸಿಗೆ ಕಳಿಸಿದ. ನಾರದರು ಅವರನ್ನೂ ವಿರಕ್ತರನ್ನಾಗಿಸಿದರು. ದಕ್ಷನಿಗೆ ಕೋಪ ಬಂತು. ‘‘ನಾರದ, ನಿನಗೆ ಬೇರೆ ಕೆಲಸ ಇಲ್ಲವೆಂದು ಕಾಣುತ್ತದೆ. ಹೀಗೆಯೇ ಅಲೆಮಾರಿಯಾಗಿ ತಿರುಗುತ್ತಿರು’’ ಎಂದು ಶಪಿಸಿಬಿಟ್ಟ!
ದೂರ್ವಾಸ ಮುನಿಯ ಗರ್ವಭಂಗ
ಒಮ್ಮೆ ನಾರದರು ಕೈಲಾಸದಲ್ಲಿ ಈಶ್ವರನ ಸಭೆಯಲ್ಲಿ ಕುಳಿತಿದ್ದರು. ಮಹಾಯೋಗಿಗಳೂ ಬ್ರರ್ಹ¾ಗಳೂ ಅಲ್ಲಿದ್ದರು. ಆಗ ದೂರ್ವಾಸ ಮುನಿಗಳು ಗ್ರಂಥಗಳ ಒಂದು ದೊಡ್ಡ ಹೊರೆ ಹೊತ್ತುಕೊಂಡು ಸಭೆಗೆ ಬಂದರು. ಯಾರನ್ನೂ ಲೆಕ್ಕಿಸದೆ ನೇರವಾಗಿ ಹೋಗಿ ಶಿವನ ಬಳಿ ಕುಳಿತರು. ಶಿವ ನಸುನಗುತ್ತ ‘ದೂರ್ವಾಸರೇ, ನಿಮ್ಮ ಅಧ್ಯಯನ ಎಲ್ಲಿಯವರೆಗೆ ಬಂತು’ ಎಂದು ಕೇಳಿದ. ದೂರ್ವಾಸರು ಹೆಮ್ಮೆಯಿಂದ ಗ್ರಂಥಗಳ ಹೊರೆ ತೋರಿಸಿ ‘ಇವುಗಳನ್ನೆಲ್ಲ ಅಧ್ಯಯನ ಮಾಡಿರುವೆ. ಇವು ನನಗೆ ಕಂಠ ಪಾಠ!’ ಎಂದು ದರ್ಪದಿಂದ ಹೇಳಿದರು. ಆಗ ನಾರದರು ‘ಗ್ರಂಥಗಳ ಹೊರೆ ಹೊತ್ತಿರುವ ಕತ್ತೆ’ ಎಂದುಬಿಟ್ಟರು. ದೂರ್ವಾಸರಿಗೆ ಎಲ್ಲಿಲ್ಲದ ಕೋಪ ಬಂತು. ನಾರದರ ಮೇಲೆ ಸಿಟ್ಟಿನಿಂದ ಮಾತನಾಡತೊಡಗಿದರು. ಆಗ ನಾರದರು ‘ಇದಕ್ಕೇ ನಾನು ಹೇಳಿದ್ದು. ಅಷ್ಟು ಗ್ರಂಥಗಳನ್ನು ಓದಿದರೂ ಕೋಪ ಹೋಗಲಿಲ್ಲ. ಅಹಂಕಾರ ನೀಗಲಿಲ್ಲ. ಯಾರನ್ನೂ ಲೆಕ್ಕಿಸದೆ ಶಿವನ ಪಕ್ಕ ಹೋಗಿ ಕುಳಿತಿರಿ. ಇಂತಹ ಓದಿನಿಂದೇನು ಫಲ? ಆ ಗ್ರಂಥಗಳು ಕತ್ತೆಯ ಹೊರೆಯಲ್ಲದೆ ಇನ್ನೇನು?’ ಎಂದರು. ದೂರ್ವಾಸರಿಗೆ ತಮ್ಮ ತಪ್ಪಿನ ಅರಿವಾಯಿತು.
ಸಕಲ ವಿದ್ಯಾ ಪಾರಂಗತ
ಮಹಾಭಾರತದ ಆದಿಪರ್ವದಲ್ಲಿ ವ್ಯಾಸರು ನಾರದ ಮಹರ್ಷಿಗಳನ್ನು ಹೀಗೆ ವರ್ಣಿಸಿದ್ದಾರೆ- ನಾರದ ಮುನಿಗಳು ವೇದಾಂತಶಾಸ್ತ್ರದಲ್ಲಿ ಪಾರಂಗತರು. ಮಹಾ ತೇಜಸ್ವಿಗಳು, ತಪಸ್ವಿಗಳು, ನೀತಿಕೋವಿದರು, ಶಾಂತರು, ಮೃದುಸ್ವಭಾವದವರು, ದೇವ ದಾನವ ಮಾನವರೆಲ್ಲರಿಂದ ಪೂಜಿತರು, ಶುಭ್ರವಾದ ದೇಹಕಾಂತಿಯುಳ್ಳವರು, ಬುದ್ಧಿಶಕ್ತಿಯಲ್ಲಿ ಬೃಹಸ್ಪತಿಗೆ ಸಮಾನರು, ಸಾಮವೇದದಲ್ಲಿ ನಿಷ್ಣಾತರು, ಸಂಗೀತದಲ್ಲಿ ನಿಪುಣರು, ಯಾರಿಗೆ ಯಾವ ಸಂಶಯ ಬಂದರೂ ನಿವಾರಿಸುವ ಸಾಮರ್ಥ್ಯ ಇರುವವರು, ಕಾಲೋಚಿತವಾಗಿ ಉಪಾಯ ಹೇಳಿ ಜನರ ಸಂಕಷ್ಟ ನೀಗಿಸಬಲ್ಲವರು, ಮಧುರ ವಾಗಿ ಮಾತನಾಡಿ ಜನರನ್ನು ವಶಪಡಿಸಿಕೊಳ್ಳಲು ಶಕ್ತರು, ಒಂದೊಂದು ಅಕ್ಷರದ ಉಚ್ಚಾರ, ಪ್ರತಿಯೊಂದು ಶಬ್ದದ ಅರ್ಥ ಅವರಿಗೆ ಗೊತ್ತಿದೆ. ಒಂದೊಂದು ಶಬ್ದ ಹೇಗೆ ಬೆಳೆದು ಬಂದಿತು, ಅದನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ಚೆನ್ನಾಗಿ ಅರಿತಿದ್ದಾರೆ.
ಚಾಡಿ ಹಿಂದಿನ ಸದುದ್ದೇಶ...
ಕಂಸ ದುರುಳ. ಅವನ ತಂಗಿ ದೇವಕಿಗೂ ವಸುದೇವನಿಗೂ ಮದುವೆಯಾಯಿತು. ಆಗ ಅಶರೀರವಾಣಿ ‘ದೇವಕಿಯ ಎಂಟನೆಯ ಗರ್ಭದಲ್ಲಿ ಜನಿಸುವ ಶಿಶುವಿನಿಂದ ನಿನ್ನ ಮರಣ’ ಎಂದಿತು. ಅದನ್ನು ಕೇಳಿ ಕಂಸ ತನ್ನ ತಂಗಿಯನ್ನೇ ಕೊಲ್ಲಲು ಮುಂದಾದ. ವಸುದೇವ ಅಡ್ಡ ಬಂದು, ದೇವಕಿಯಲ್ಲಿ ಜನಿಸುವ ಮಕ್ಕಳೆಲ್ಲರನ್ನೂ ಕಂಸನಿಗೆ ಒಪ್ಪಿಸುವುದಾಗಿ ಹೇಳಿದ. ಆಮೇಲೆ ನಾರದರು ರಹಸ್ಯವಾಗಿ ಕಂಸನನ್ನು ಕಂಡು ‘ನಿನ್ನನ್ನು ಕೊಲ್ಲಲು ದೇವತೆಗಳು ಸಂಚು ಮಾಡಿದ್ದಾರೆ. ವಸುದೇವ, ದೇವಕಿ, ನಿನ್ನ ತಂದೆ ಎಲ್ಲರೂ ದೇವತೆಗಳ ಪರ. ನೀನು ರಾಕ್ಷಸ’ ಎಂದು ಹೇಳಿದರು. ಕಪಿಗೆ ಹೆಂಡ ಕುಡಿಸಿದಂತಾಯಿತು. ವಸುದೇವ-ದೇವಕಿಯನ್ನು ಸೆರೆಮನೆಯಲ್ಲಿಟ್ಟ. ತನ್ನ ತಂದೆಯನ್ನೂ ಬಂಧಿಸಿ ತಾನೇ ರಾಜನಾದ. ಇಂಥ ಚಾಡಿಮಾತು ನಾರದರಿಗೇಕೆ ಬೇಕಿತ್ತು ಎನ್ನಿಸಬಹುದು. ನಾರದರ ಉದ್ದೇಶವೇ ಬೇರೆ. ಪಾಪಿಗಳ ಪಾಪವು ಪರಮಾವಧಿ ಮುಟ್ಟಿದಾಗಲೇ ಅವರಿಗೆ ದಂಡನೆ. ಕಂಸನ ಕ್ರೂರ ಕೃತ್ಯಗಳು ಒಂದರ ಹಿಂದೆ ಒಂದರಂತೆ ಬೇಗಬೇಗ ನಡೆದವು. ಕೃಷ್ಣನ ಸಂಹಾರಕ್ಕಾಗಿ ರಾಕ್ಷಸರನ್ನು ಕಳಿಸಿದ. ಅವರೆಲ್ಲರ ವಧೆ ಆಯಿತು. ಕಂಸನನ್ನು ಸಂಹರಿಸಲು ಕೃಷ್ಣನಿಗೆ ಸರಿಯಾದ ಕಾರಣವೂ ಬೇಗನೆ ಒದಗಿತು. ಕಂಸನ ಸಂಹಾರ ಆಯಿತು.