Business guidance questions and career path as a business person walking to a crossroad highway with two clouds shaped as arrows pointing in opposite directions on a blue summer sky and grass representing financial advice guide and looking for answers. 
ಅಂಕಣ

ನಮ್ಮನಮ್ಮಲ್ಲಿ|ಜಗಳವನ್ನೂ ಆಡಲಾರದಷ್ಟು ಅಸಡ್ಡೆ ಹುಟ್ಟಿಬಿಟ್ಟರೆ ಮಾತ್ರ ಕಷ್ಟ ಕಷ್ಟ!

‘ನೀವು ನನ್ನನ್ನು ಒಪ್ಪಬಹುದು. ಒಪ್ಪದೆಯೂ ಇರಬಹುದು. ಆದರೆ ನನ್ನನ್ನು ಯಾವತ್ತಿಗೂ ಅಸಡ್ಡೆ ಮಾಡಲಾರಿರಿ!’ ಇಂಥ ಮಾತನ್ನು ಒಬ್ಬ ಚಿಂತಕ, ಸಾಹಿತಿ, ಕ್ರಾಂತಿಕಾರಿ ಮಾತ್ರ ಆಡಬಲ್ಲ. ಆತ ಹೇಳುವುದು ಈ ಜಗತ್ತಿಗೆ, ಇವತ್ತಿನ ಮಟ್ಟಿಗೆ ಇಷ್ಟವಾಗುತ್ತದೋ ಬಿಡುತ್ತದೋ. ಪಥ್ಯವಾಗುತ್ತದೋ ಇಲ್ಲವೋ. ಜಗತ್ತು ಆತನ ಮೇಲೆ ಹರಿಹಾಯಬಹುದು, ಮುನಿಯಬಹುದು, ಮಾತು ಬಿಡಬಹುದು. ಆದರೆ ಯಾವತ್ತಿಗೂ ಜಗತ್ತು ಆತನನ್ನು ಇಗ್ನೋರ್ ಮಾಡಲಾರದು. ಅಸಡ್ಡೆ ಮಾಡಬೇಕು ಅಂದುಕೊಂಡಷ್ಟೂ ಮಾತಿಗೆ, ಬಾಯಿಗೆ, ನೆನಪಿಗೆ ಅಡ್ಡಡ್ಡ ಬರುವ ಮನುಷ್ಯ ಆತ. ಆತನ ಇಂಪಾರ್ಟೆನ್ಸೇ ಅಂತಹುದು.

ಈಗ ಹೇಳಿ- ನಿಮ್ಮ ಆತ್ಮೀಯರ ಜಗತ್ತಿನಲ್ಲಿ ನಿಮಗೆ ಅಂಥದ್ದೊಂದು ಸ್ಥಾನವಿದೆಯಾ? ನಿಮ್ಮ ದಾಂಪತ್ಯದಲ್ಲಿ, ಗೆಳೆಯರ ಬಳಗದಲ್ಲಿ, ಸ್ನೇಹಸಂಬಂಧದಲ್ಲಿ, ನಿಮ್ಮ ಆಫೀಸಿನಲ್ಲಿ, ನೀವು ತುಂಬ ಇಷ್ಟಪಟ್ಟವರ ಮನಸ್ಸಿನಲ್ಲಿ ನಿಮಗೆ ಆ ತರಹದ ಸ್ಥಾನವಿದೆಯಾ? ಅವರು ನಿಮ್ಮನ್ನು ಎಲ್ಲ ವಿಷಯಗಳಲ್ಲೂ ಒಪ್ಪಬಹುದು, ಒಪ್ಪದೆ ಇರಬಹುದು. ಆದರೆ ಯಾವ ವಿಷಯದಲ್ಲೂ ನಿಮ್ಮನ್ನು ಅವರು ಅಸಡ್ಡೆ ಮಾಡಬಾರದು. ಹಾಗಾಗದಂತೆ ನೀವು ನೋಡಿಕೊಳ್ಳಬೇಕು.

ಎಷ್ಟೇ ಚಿಕ್ಕ ಸಂಗತಿ ಅಂತ ಭಾವಿಸಿದರೂ, ಮನುಷ್ಯನೊಬ್ಬನ ಇಂಪಾರ್ಟೆನ್ಸು ಹೇಗೆ ಬೆಳೆಯುತ್ತ ಹೋಗುತ್ತದೋ ಗಮನಿಸಿರಿ. ನಿನ್ನೆ ಮೊನ್ನೆಯ ತನಕ ‘ಯಾರೋ’ ಆಗಿದ್ದ ಗೆಳತಿಯೊಬ್ಬಳು ಕ್ರಮೇಣ ನಿಮ್ಮ ಬದುಕಿನಲ್ಲಿ ತುಂಬ ಇಂಪಾರ್ಟೆಂಟ್ ಆಗುತ್ತ ಹೋಗುತ್ತಾಳೆ. ನೀವು ಕೊಳ್ಳುವ ಹೊಸ ಅಂಗಿಯಿಂದ ಹಿಡಿದು, ಕಾಣುವ ಅತಿ ಮುಖ್ಯ ಕನಸಿನ ತನಕ ಅವಳೊಂದಿಗೆ ಎಲ್ಲವನ್ನೂ ಷೇರ್ ಮಾಡಿಕೊಳ್ಳುತ್ತೀರಿ. ಅವಳದೊಂದು ಫೋನು. ಬೆಳಗ್ಗೆ ಎದ್ದ ಕೂಡಲೆ ಒಂದು ಎಸ್ಸೆಮ್ಮೆಸ್, ಯಾವುದೋ ಕೆಲಸಕ್ಕೆ ಹೊರಟಾಗ ಅವಳ ಶುಭಹಾರೈಕೆ, ಅವಳ ಒಳ್ಳೆಯ ಮಾತು-

ಅವುಗಳನ್ನೆಲ್ಲ ನೀವು ಎದುರು ನೋಡುತ್ತೀರಿ. ಯಾಕೆ ಫೋನು ಮಾಡಲಿಲ್ಲ ಅಂತ ಜಗಳವಾಡುತ್ತೀರಿ. ಭಕ್ತಿಯ ಹಾಗೆಯೇ ಪ್ರೀತಿ ಕೂಡ ಪರಸ್ಪರರ ಮೇಲೆ ಒಂದು ಹಕ್ಕು ತಂದುಕೊಡುತ್ತದೆ. ಈ ಹಕ್ಕು ಬೆಳೆದಂತೆಲ್ಲ ನಿಮ್ಮ ಬದುಕಿನಲ್ಲಿ ಆ ವ್ಯಕ್ತಿಯ ಇಂಪಾರ್ಟೆನ್ಸನ್ನೂ ಬೆಳೆಸುತ್ತ ಹೋಗುತ್ತದೆ.

ಆಫೀಸಾದರೂ ಅಷ್ಟೆ: ನಿಮ್ಮದೊಂದು ಕುರ್ಚಿಯಿದೆ, ಹುದ್ದೆಯಿದೆ, ಘನತೆಯಿದೆ, ನಿಮಗೊಂದು ಇಂಪಾರ್ಟೆನ್ಸ್ ಇದೆ. ಅದು ನಿಮ್ಮ ಕೆಲಸ, ಕಾರ್ಯಕ್ಷಮತೆ, ತಾಕತ್ತು, ಶ್ರದ್ಧೆ, ಉತ್ಸಾಹಗಳಿಂದಾಗಿ ನಿಮಗೆ ಸಿಕ್ಕ ಇಂಪಾರ್ಟೆನ್ಸು. ಒಂದು ಕಚೇರಿಯಲ್ಲಿ ಚಿಕ್ಕ ಸಂಬಳದ ಆಫೀಸ್ ಬಾಯ್ ಕೂಡ ತುಂಬ ಇಂಪಾರ್ಟೆಂಟ್ ಆದ ವ್ಯಕ್ತಿಯಾಗಿ ಬಿಟ್ಟಿರುತ್ತಾನೆ: ಅವನ ಶ್ರದ್ಧೆಯಿಂದಾಗಿ, ಚುರುಕುತನದಿಂದಾಗಿ. ಆಫೀಸಿಗೆ ಬಂದಕೂಡಲೆ ಅವನು ಕಾಣಲಿಲ್ಲ ಅಂದರೆ, ಅವನನ್ನು Mಜಿಠಠ ಮಾಡಿಕೊಳ್ಳುತ್ತೀರಿ. ಆ ಮಟ್ಟಿಗೆ ಅವನು ಇಂಪಾರ್ಟೆಂಟೇ.

ಮನೆಯಲ್ಲಿ ಅಕ್ಕ-ತಮ್ಮ, ತಂದೆ-ತಾಯಿ, ಹೆಂಡತಿಮಕ್ಕಳು Mಜಿಠಠ ಮಾಡಿಕೊಂಡ ಹಾಗೇನೇ, ನಮ್ಮ ಇಂಪಾರ್ಟೆನ್ಸ್ ಫೀಲ್ ಮಾಡಿದ ಹಾಗೇನೇ- ನಾವು ವ್ಯವಹರಿಸುವ, ಕೆಲಸ ಮಾಡುವ, ಪ್ರೀತಿಸುವ, ಸಂಬಂಧವಿರಿಸಿಕೊಳ್ಳುವ ವಲಯಗಳಲ್ಲೂ ನಮಗೆ ನಮ್ಮದೇ ಆದ ಇಂಪಾರ್ಟೆನ್ಸ್ ಇದೆಯಾ? ಅದನ್ನು ನಾವು ಗಳಿಸಿಕೊಂಡಿದ್ದೇವಾ? ಮೊದಲಿಗೆ ಈ ವಿಷಯವನ್ನು ಖಚಿತ ಮಾಡಿಕೊಳ್ಳಿ. ನಂತರ ಉದ್ಭವವಾಗುವುದೇ ಅತಿ ಮುಖ್ಯ ಪ್ರಶ್ನೆ.

ಗಳಿಸಿಕೊಂಡ ಆ ಇಂಪಾರ್ಟೆನ್ಸು ಹಾಗೇ ಉಳಿಸಿಕೊಂಡಿದ್ದೇವಾ? ಇದು ಕೇವಲ ಮುಖ್ಯವಾದ ಪ್ರಶ್ನೆಯಲ್ಲ. ಅತ್ಯಂತ ಕಷ್ಟದ ಪ್ರಶ್ನೆಯೂ ಹೌದು. ಪದೇಪದೆ ಕೇಳಿಕೊಳ್ಳಬೇಕಾದ, ಚೆಕ್ ಮಾಡಿಕೊಳ್ಳಬೇಕಾದ, ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆಯೂ ಹೌದು. ನನ್ನ ಮಟ್ಟಿಗೆ ನಾನು ಇಡೀ ದಿನದಲ್ಲಿ ಹೆಚ್ಚೆಂದರೆ ಐದಾರು ಜನ ತೀರ ಆತ್ಮೀಯರ ಫೋನು, ಮೆಸೇಜುಗಳಿಗಾಗಿ ಕಾಯುತ್ತೇನೆ. ಅವರು ಫೋನು ಮಾಡುತ್ತಿಲ್ಲ, ಮೆಸೇಜು ಕಳಿಸುತ್ತಿಲ್ಲ ಅಂದರೆ-ಯಾವುದೋ ಕೆಲಸದಲ್ಲಿದ್ದಿರಬೇಕು. ಏಕೆಂದರೆ, ನನ್ನ ಸನ್ನಿಹಿತ ವಲಯದವರೆಲ್ಲ ಓದು ಬರಹದ ಮಂದಿ. ಇವೆರಡೂ ಅಲ್ಲ, ಆದರೂ ಅವರು ನನ್ನಿಂದ ದೂರ ಉಳಿದಿದ್ದಾರೆ, ಮಾತಾಡುತ್ತಿಲ್ಲ, ಮೆಸೇಜು ಕಳಿಸುತ್ತಿಲ್ಲ ಅಂದರೆ ಅವರಿಗೆ ನನ್ನ ಮೇಲೆ ಸಿಟ್ಟು ಬಂತಾ? ಗಾಬರಿಯಾಗುತ್ತೇನೆ. ನನ್ನಿಂದ ಅಪಚಾರವಾಯಿತಾ? ಸರಿಪಡಿಸಿಕೊಳ್ಳುತ್ತೇನೆ.

ಆದರೆ ಅವರ ದೃಷ್ಟಿಯಲ್ಲಿ ನಾನು ಅಪ್ರಸ್ತುತನಾಗುತ್ತಿದ್ದೇನಾ? ಅದಕ್ಕಿಂತ ಕಳವಳಕಾರಿಯಾದದ್ದು ಮತ್ತೊಂದಿಲ್ಲ ನನಗೆ. ಇಪ್ಪತೆôದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿಳಿದಾಗ, ಬಸ್ಟಾ್ಯಂಡಿನ ಸಿಮೆಂಟಿನ ಕಟ್ಟೆಯ ಮೇಲೆ ಮಲಗಿದ್ದಾಗ-ಈ ಬೆಂಗಳೂರಿಗೆ ನಾನು ಏನೂ ಅಲ್ಲ, ಯಾರೂ ಇಲ್ಲ. ಇವತ್ತು ಇಲ್ಲಿ ನನ್ನ ಇಂಪಾರ್ಟೆನ್ಸು, ನನ್ನ ಐಡೆಂಟಿಟಿ-ಏನಿದೆ, ಎಷ್ಟಿದೆ ಅಂತ ನನಗೆ ಗೊತ್ತು. ಅದು ಕಡಿಮೆಯಾಗದಂತೆ ನನ್ನ ನಿರಂತರ ಪ್ರಯತ್ನ ನಾನು ಮಾಡುತ್ತಲೇ ಇದ್ದೇನೆ. ಆದರೆ ಈ ಎಲ್ಲ ಇಂಪಾರ್ಟೆನ್ಸು, ಐಡೆಂಟಿಟಿ ಕಳೆದು ಹೋದರೂ ಚಿಂತೆಯಿಲ್ಲ. ಅದನ್ನು ಮತ್ತೆ ಹೇಗೋ ಗಳಿಸಿಕೊಳ್ಳಬಹುದು. ಆದರೆ ತೀರ ಆತ್ಮೀಯವೆನ್ನಿಸುವ ಆ ಐದಾರು ಮಂದಿಯ ಕಣ್ಣಲ್ಲಿ ನನ್ನೆಡೆಗೆ ಅಸಡ್ಡೆ ಹುಟ್ಟಿದರೆ, ಅದನ್ನು ನಾನು ಸಹಿಸಲಾರೆ. ಅವರೊಂದಿಗೆ ಜಗಳ, ವಿರಸ, ಕದನ, ಮುನಿಸು ಎಲ್ಲವೂ ಸರಿಯೇ. ಆದರೆ ಅವರು ಅಸಡ್ಡೆ ಮಾಡಿದರೆ ಮಾತ್ರ, ಆ ಸಂಕಟವೇ ಬೇರೆ.

ಇಷ್ಟಾಗಿ ಗೆಳೆಯರು, ಆತ್ಮೀಯರು, ಸಹೋದ್ಯೋಗಿಗಳು, ಸಾಮಾನ್ಯ ಜನರು-ಇವರಲ್ಲಿ ನಮ್ಮೆಡೆಗೆ ಏಕೆ ಅಸಡ್ಡೆ ಹುಟ್ಟುತ್ತದೆ ಗೊತ್ತೆ? ಮೊದಲನೆಯದು, ನಾವು ಏನನ್ನೂ ಮಾಡದಿದ್ದಾಗ, ಸೋಮಾರಿಗಳಾದಾಗ-ನಿಷ್ಕ್ರಿಯರಾದಾಗ ಸಾರ್ವಜನಿಕರ ಅಸಡ್ಡೆಗೊಳಗಾಗುತ್ತೇವೆ. ಫೇಲ್ ಆದರೂ ಸರಿಯೇ, ಅದು ನಿಷ್ಕ್ರಿಯತೆಗಿಂತ ಮೇಲು. ಸೋಮಾರಿಗಳಾದಾಗ ಆಫೀಸಿನಲ್ಲಿ ಅಸಡ್ಡೆ ಹುಟ್ಟುತ್ತದೆ. ಮೇಲಿಂದ ಮೇಲೆ ‘ಇವನು ಬೇಕಾದ ಟೈಮಿಗೆ ಆಗೋನಲ್ಲ’ ಎಂಬಂತೆ ವರ್ತಿಸಿದಾಗ ಅದೇ ಅಸಡ್ಡೆ ಗೆಳೆಯರಲ್ಲಿ ಹುಟ್ಟುತ್ತದೆ. ದುಡಿಯಲಾಗದ ಮನುಷ್ಯ ಹೆಂಡತಿಮಕ್ಕಳ ತಾತ್ಸಾರಕ್ಕೆ ಒಳಗಾಗುತ್ತಾನೆ. ಪದೇಪದೆ ಜಗಳ, ಸಲ್ಲದ ಕೊಂಕು, ವಿನಾಕಾರಣದ ಮುನಿಸು, ಅನಾರೋಗ್ಯಕರ ಅವಮಾನ, ಚುಚ್ಚುಮಾತು,

ಅರ್ಥಹೀನ ನಿರ್ಲಕ್ಷ್ಯ-ಇವುಗಳಿಂದಾಗಿ ತುಂಬ ಪ್ರೀತಿಸುವ ವ್ಯಕ್ತಿಯೆಡೆಗೂ ಅಸಡ್ಡೆ ಹುಟ್ಟುತ್ತದೆ. ಯಾವ ವ್ಯಕ್ತಿಯ ಫೋನಿಗೆ, ಮೆಸೇಜಿಗೆ ಕಾಯ್ದು ಚಡಪಡಿಸುತ್ತೇವೆಯೋ, ಕ್ರಮೇಣ ಅದೇ ವ್ಯಕ್ತಿಯ ಫೋನು-ಮೆಸೇಜು ಭಯ ಹುಟ್ಟಿಸತೊಡಗುತ್ತವೆ. ಭಯವೆಂಬುದು, ಅಸಡ್ಡೆಯೆಂಬ ಸುದೀರ್ಘ ಅಧ್ಯಾಯದ ಮೊದಲ ಮುನ್ನುಡಿ.

ನಮ್ಮನ್ನು ಜಾರ್ಜ್ ಬುಷ್ ಗುರುತಿಸಲಿಲ್ಲ, ಒಪ್ಪಲಿಲ್ಲ, ಸಮ್ಮತಿಸಲಿಲ್ಲ ಅಂದರೆ ಬೇಸರವಿಲ್ಲ. ನಮ್ಮವರು ಅನ್ನಿಸಿಕೊಂಡವರು ನಮ್ಮನ್ನು ಒಪ್ಪುತ್ತಿಲ್ಲ, ಗಮನಿಸುತ್ತಿಲ್ಲ, ಕಡೇ ಪಕ್ಷ ಜಗಳವೂ ಆಡುತ್ತಿಲ್ಲ ಅಂದರೆ-ಆ ಅಸಡ್ಡೆ ಎಷ್ಟು ಭಯಂಕರ ಅಲ್ಲವೆ?

(ಲೇಖಕರು ಹಿರಿಯ ಪತ್ರಕರ್ತರು)