ಅಂಕಣ

ಕಾವ್ಯ ತಪಸ್ವಿ ಎಚ್ಚೆಸ್ವಿ; ಹೇಗಾದ ಗೊತ್ತಾ ಚಿನ್ನಾರಿ ಮುತ್ತ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇದೇ ತಿಂಗಳ 5ರಿಂದ 7ರವರೆಗೆ ಕಲಬುರಗಿಯಲ್ಲಿ ನಡೆಯಲಿದೆ. ಕಾವ್ಯ, ನಾಟಕ, ಕತೆ, ಕಾದಂಬರಿ, ಪ್ರಬಂಧ, ಜೀವನಚಿತ್ರ, ಆತ್ಮಚರಿತ್ರೆ, ವಿಮರ್ಶೆ, ಮಕ್ಕಳ ಸಾಹಿತ್ಯ ಹೀಗೆ ಎಲ್ಲ ಸಾಹಿತ್ಯಪ್ರಕಾರಗಳಲ್ಲೂ ಕೃಷಿ ಮಾಡಿರುವ ಎಚ್.ಎಸ್. ವೆಂಕಟೇಶಮೂರ್ತಿ ಅವರು ಈ ಸಮ್ಮೇಳನದ ಸರ್ವಾಧ್ಯಕ್ಷರು. ಅವರೊಂದಿಗಿನ ಒಡನಾಟದ ಕ್ಷಣಗಳನ್ನು ನಾಡಿನ ನಾನಾ ಕ್ಷೇತ್ರಗಳ ಸಾಧಕರು ಇಲ್ಲಿ ಮೆಲುಕು ಹಾಕಿದ್ದಾರೆ.

ನನಗೆ ಮಕ್ಕಳ ಸಿನಿಮಾ ಮಾಡಬೇಕು, ಅದು ಸಂಗೀತಮಯವಾಗಿರಬೇಕು, ಅತ್ಯುತ್ತಮವಾಗಿರಬೇಕು ಅನ್ನೋ ಆಸೆ. ಆದರೆ ಅದಕ್ಕೆ ಸರಿಯಾದ ಕಥೆ ಸಿಕ್ಕಿರಲಿಲ್ಲ. ಅದೇ ಸಮಯದಲ್ಲಿ ಪ್ರಸಿದ್ಧ ಕವಿಗಳ ಕವನಗಳಿಗೆ ದೃಶ್ಯರೂಪ ಕೊಡುವ ಪ್ರಯತ್ನದಲ್ಲಿ ನಾವು ಅಂದರೆ ಸಿ. ಅಶ್ವಥ್, ಎಚ್ಚೆಸ್ವಿ, ಎಂ.ಎನ್. ವ್ಯಾಸರಾವ್, ಬಿ.ಆರ್. ಲಕ್ಷ್ಮಣರಾವ್ ತೊಡಗಿಸಿಕೊಂಡಿದ್ದೆವು.

ಆ ಸಂದರ್ಭದಲ್ಲಿ ಒಮ್ಮೆಮಕ್ಕಳ ಸಿನಿಮಾ ಮಾಡುವ ನನ್ನ ಮನದಿಂಗಿತವನ್ನು ವ್ಯಕ್ತಪಡಿಸಿ ‘ಒಂದು ಒಳ್ಳೆಯ ಮಕ್ಕಳ ಕಥೆ ಸಿಗ್ತಾ ಇಲ್ಲ’ ಅಂದೆ. ಆಗ ಎಚ್ಚೆಸ್ವಿ, ‘ಅದ್ಕೇನ್ರಿ, ನಾವೆಲ್ಲ ಒಟ್ಟಿಗೆ ಕುಳಿತ್ರೆ ಆಗೇಬಿಡುತ್ತೆ’ ಎಂದು ಕಥೆಯ ಎಳೆ ಹೇಳಿದರು. ಬರೆದುಕೊಡುವಂತೆ ಕೇಳಿದೆ. ಆಯ್ತು ಎಂದರು.

ಆ ಕಥೆ ಕೇಳಿದ್ದ ಅಶ್ವಥ್ ಅದಾಗಲೇ ಹಾಡು ಹೀಗಿರಬೇಕು, ಹಾಗಿರಬೇಕು ಎನ್ನುತ್ತ ಉತ್ಸಾಹದಿಂದ ಟ್ಯೂನ್ ಹಾಕಲು ಶುರು ಮಾಡಿದ್ದರು. ಎರಡೇ ವಾರದಲ್ಲಿ ಟ್ಯೂನ್ ರೆಡಿ ಆಗಿಬಿಟ್ಟಿತ್ತು.

ಈ ಮಧ್ಯೆ ಎಚ್ಚೆಸ್ವಿ ಅವರಿಗೆ ಪೋನ್ ಮಾಡಿದಾಗೆಲ್ಲ ‘ಕಥೆ ಸಿದ್ಧವಾಗ್ತಾ ಇದೆ.. ಸಿದ್ಧವಾಗ್ತಾ ಇದೆ’ ಅನ್ನುತ್ತಲೇ ಇದ್ದರು. ಅಲ್ಲಿಗೆ ನಮ್ಮ ಕನಸು ಪೂರ್ಣವಾಗುವುದಿಲ್ಲ ಎಂಬ ಸ್ಥಿತಿ ತಲುಪಿದೆವು. ಇದ್ದಕ್ಕಿದ್ದಂತೆ ಒಂದು ದಿನ ‘ಆಗಿದೆ’ ಅಂದರು. ನಾವೆಲ್ಲ ರೀಡಿಂಗ್​ಗೆ ಕುಳಿತುಕೊಂಡೆವು.

ಅಲ್ಲಿಂದ ಶುರುವಾಯ್ತು ನೋಡಿ, ಸತತವಾಗಿ ಸಿನಿಮಾದ ಕೆಲಸಗಳು. ಹೇಗಿದ್ದ ಹೇಗಾದ ಗೊತ್ತ... ಈ ಚಿನ್ನಾರಿ ಮುತ್ತ. ಅದು ಕಾದಂಬರಿ ಆದುದು ಸಿನಿಮಾ ಬಂದ ಮೇಲೆಯೇ! ಮಕ್ಕಳ ಸಿನಿಮಾವಾದ್ದರಿಂದ ಮುಖ್ಯವಾಗಿ ಸಂಭಾಷಣೆಯಲ್ಲಿ ನನಗೆ ಒಂದು ಲಯ ಬೇಕಿತ್ತು, ಪ್ರಾಸ ಬೇಕಿತ್ತು. ಎಲ್ಲವೂ ಲಯಬದ್ಧವಾಗಿಯೇ ಇರಬೇಕಿತ್ತು.

ಶಿಶು ಸಾಹಿತ್ಯ, ಶಿಶು ಭಾಷೆ, ಶಿಶುಪ್ರಾಸ, ಮುಖ್ಯವಾಗಿ ಶಿಶು ಮನೋಧರ್ಮವನ್ನು ಶಿಶು ಹೃದಯದ ಎಚ್ಚೆಸ್ವಿ ಹಾಗೂ ನಾವೆಲ್ಲ ಸೇರಿ ಸಿನಿಮಾ ಸಿದ್ಧಪಡಿಸಿದೆವು. ಅದು 25 ವಾರ ಓಡಿದ ಮೇಲೆ ಒಂದು ಸಮಾರಂಭ ಮಾಡಿದೆವು. ಆಗ ಎಚ್ಚೆಸ್ವಿ, ‘ಇನ್ನೊಮ್ಮೆ ಇಂಥ ಪ್ರಯತ್ನ ಆಗುತ್ತಾ?’ ಎಂದು ಕೇಳಿದ್ದರು. ಹಾಗೇ ಆಯಿತು. ‘ಚಿನ್ನಾರಿ ಮುತ್ತ’ ಸಿನಿಮಾ ‘ನ ಭೂತೋ ನ ಭವಿಷ್ಯತಿ’ ಆಯಿತು.

ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಅಂಥ ಮತ್ತೊಂದು ಸಿನಿಮಾ ಬರಲೇ ಇಲ್ಲ- ಗುಣಮಟ್ಟ, ಪ್ರಸಿದ್ಧಿ, ಪ್ರಶಸ್ತಿ ಎಲ್ಲ ದೃಷ್ಟಿಯಿಂದ ಪೂರ್ಣ ಪ್ರಮಾಣದ ಮಕ್ಕಳ ಸಿನಿಮಾ ಅದು.

| ನಾಗಾಭರಣ ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ