ರಾಜ ಅಥವಾ ರಾಜಕಾರಣಿ ಎಂದರೆ ರಾಜ್ಯವನ್ನು, ಜನರನ್ನು, ಸತ್ಯವನ್ನು ರಕ್ಷಿಸುವುದಕ್ಕಿರುವ ಅಧಿಕಾರ ಸ್ಥಾನ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಮತದಾನದ ಮೂಲಕ ಆಡಳಿತಪಕ್ಷ, ವಿರೋಧಪಕ್ಷ ಎಂದು ಅಧಿಕಾರ ನೀಡಿರುತ್ತಾರೆ. ಆ ಅಧಿಕಾರದಿಂದ ಶಿಷ್ಟತೆಯನ್ನು ರಕ್ಷಿಸುವ, ದುಷ್ಟತೆಯನ್ನು ಶಿಕ್ಷಿಸುವ ಕೆಲಸ ಮಾಡಬೇಕು. ಆಡಳಿತ ಪಕ್ಷದಲ್ಲಿಯೇ ಇರಲಿ, ಪ್ರತಿಪಕ್ಷದಲ್ಲಿಯೇ ಇರಲಿ ಪ್ರತಿಯೊಬ್ಬ ನಾಯಕರು, ಜನಪ್ರತಿನಿಧಿಗಳು ಮತ್ತು ರಾಜಕಾರಣಿಗಳ ಮೇಲೆ ಜನತೆ ಪ್ರಬಲವಾದ ನಂಬಿಕೆಯನ್ನು ಇಟ್ಟಿರುತ್ತಾರೆ. ‘ನಮ್ಮನ್ನು ರಕ್ಷಿಸುತ್ತಾರೆ, ಸತ್ಯವನ್ನು ಎತ್ತಿ ಹಿಡಿಯುತ್ತಾರೆ, ದುಷ್ಟರನ್ನು ಶಿಕ್ಷಿಸುತ್ತಾರೆ’ ಎಂದು. ಇದರಲ್ಲಿ ಆಡಳಿತ ಪಕ್ಷದವರಿಗಿರುವಷ್ಟೇ ಜವಾಬ್ದಾರಿ ಪ್ರತಿಪಕ್ಷದವರ ಮೇಲೂ ಇರುತ್ತದೆ. ಆಡಳಿತ ಪಕ್ಷದವರು ಮಾತ್ರ ರಾಷ್ಟ್ರರಕ್ಷಕರು, ಪ್ರತಿಪಕ್ಷದವರು ರಾಷ್ಟ್ರಭಕ್ಷಕರು ಎಂದಲ್ಲ. ಪ್ರತಿಯೊಬ್ಬ ರಾಜಕಾರಣಿ ರಾಷ್ಟ್ರರಕ್ಷಕ, ಪ್ರಜಾಪಾಲಕ, ಸತ್ಯಮಾರ್ಗಿ ಆಗಬೇಕು ಎಂಬುದೇ ಜನಾದೇಶ. ಭಾರತದ ಪರಂಪರಾಗತ ಆದರ್ಶ.
ಸುಳ್ಳು, ಭ್ರಮೆಗಳ ಮಾರ್ಗದಲ್ಲಿ ಜನರನ್ನು ಸಂಕಷ್ಟಕ್ಕೆ ತಳ್ಳಿ ರಾಷ್ಟ್ರಕಂಟಕರಾಗುವ ರೀತಿಯಲ್ಲಿ ಯಾರೂ, ಯಾವುದೇ ಪಕ್ಷ ವರ್ತಿಸಬಾರದು. ಅದರಲ್ಲೂ ರಾಷ್ಟ್ರದ ಜನರ ಪ್ರಾಣದ ಅಳಿವು-ಉಳಿವಿನ ಸಂಕಟದ ವಿಷಯದಲ್ಲಂತೂ ‘ಅಧಿಕಾರ ರಾಜಕಾರಣ’ದ ದುಷ್ಟತೆಯನ್ನು ಪ್ರದರ್ಶಿಸಬಾರದು. ಅಧಿಕಾರ ಹಿಡಿಯುವುದು, ಎದುರಾಳಿಯನ್ನು ಸೋಲಿಸಲು ಹೋರಾಡಬೇಕಾದದ್ದು ಚುನಾವಣೆಯ ರಣರಂಗದಲ್ಲೇ ಹೊರತು ಕರೊನಾದಂಥ ಮಹಾಮಾರಿ ಮರಣಮೃದಂಗ ಸೃಷ್ಟಿಸಿರುವ ಸಂದರ್ಭದಲ್ಲಿ ಅಲ್ಲ ಎಂಬ ಕನಿಷ್ಠ ಅರಿವಾದರೂ ನಮ್ಮ ರಾಜಕಾರಣಿಗಳಿಗೆ ಇರಬೇಕಿತ್ತು.
ಕರೊನಾ ವೈರಸ್ ಎಂಬ ಚೀನಾ ವೈರಸ್ ಇಡೀ ವಿಶ್ವವನ್ನೇ ಸಂಕಷ್ಟಕ್ಕೆ ಸಿಲುಕಿಸಿದೆ. 2020ರ ಮಾರ್ಚ್ನಲ್ಲಿ ಕೇಂದ್ರ ಸರ್ಕಾರ ಲಾಕ್ಡೌನ್ ಮಾಡುವ ಮೂಲಕ ಸೋಂಕು ನಿಯಂತ್ರಣಕ್ಕೆ ಮುಂದಾಯ್ತು. ಆಗ ಲಾಕ್ಡೌನ್ ವಿಷಯವಾಗಿ ವಿರೋಧ ಪಕ್ಷದ ನಾಯಕರು ಪ್ರಧಾನಿ ನರೇಂದ್ರ ಮೋದಿಯವರನ್ನು ದೂಷಿಸಿದರು. ಮೋದಿ ಹಾಗೂ ಆಡಳಿತ ಪಕ್ಷದ ಪ್ರತಿಯೊಂದು ಹೆಜ್ಜೆಯನ್ನೂ ವಿರೋಧಕ್ಕಾಗಿಯೇ ವಿರೋಧಿಸಲಾಯಿತು. ಸಿಎಎ ಕಾಯಿದೆಯಿಂದ ಆರಂಭಿಸಿ, ಕೃಷಿ ಮಸೂದೆಯನ್ನೂ ಒಳಗೊಂಡಂತೆ ಕರೊನಾ ತಡೆಗಾಗಿ ಕಂಡುಹಿಡಿದ ಲಸಿಕೆಯವರೆಗೂ ವಿರೋಧ ಪಕ್ಷ ಹಾಗೂ ಅದರ ನಾಯಕರು ರಾಷ್ಟ್ರರಕ್ಷಕರಂತೆ ವರ್ತಿಸಲಿಲ್ಲ. ಅವರನ್ನು ಚರಿತ್ರೆ ಎಂದೂ ಕ್ಷಮಿಸದು.
ಚೀನಾ ವೈರಸ್ ಭಾರತಕ್ಕೆ ಕಾಲಿಟ್ಟೊಡನೆ ಮೋದಿಯವರು ಕೈಗೊಂಡ ಕ್ರಮಗಳ ಬಗ್ಗೆ ವಿಶ್ವವೇ ಮೆಚ್ಚುಗೆ ಸೂಚಿಸಿತು. ಆದರೆ ವಿರೋಧಪಕ್ಷಗಳು ಮೆಚ್ಚಲಿಲ್ಲ. ನಮ್ಮ ವಿಜ್ಞಾನಿಗಳು ಹಗಲಿರುಳು ಶ್ರಮಿಸಿ ಎರಡು ಲಸಿಕೆ ಕಂಡುಹಿಡಿದು, ವಿಶ್ವವೇ ಬೆರಗಾಗುವಂತೆ ಮಾಡಿದರು. ಸರ್ಕಾರ ಕೋವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆಗಳಿಗೆ ಅನುಮತಿ ನೀಡಿ, ಲಸಿಕೆ ಆಂದೋಲನ ಪ್ರಾರಂಭಿಸಿತು. ಅದನ್ನು ಆರಂಭಿಸಿದ್ದು ವೋಟ್ಬ್ಯಾಂಕ್ ರಾಜಕಾರಣಕ್ಕಾಗಿ ಅಲ್ಲ, ಭಾರತ ಕರೊನಾಮುಕ್ತವಾಗಬೇಕೆಂದು. ಆದರೆ ಕಾಂಗ್ರೆಸ್ ಆದಿಯಾಗಿ ಇತರ ವಿರೋಧಪಕ್ಷಗಳು, ಕೆಲವು ಎಡಪಂಥೀಯ ವಿಚಾರ ವಾದಿಗಳು ‘ಲಸಿಕೆವಿರೋಧಿ’ ಆಂದೋಲನವನ್ನು ಗುಪ್ತವಾಗಿಯೂ, ಬಹಿರಂಗವಾಗಿ ಯೂ ಆರಂಭಿಸಿದವು. ಬಿಜೆಪಿ ಹಾಗೂ ನರೇಂದ್ರ ಮೋದಿ ಅವರನ್ನು ವಿರೋಧಿಸುವ ಸಲುವಾಗಿ ಜನರ ಪ್ರಾಣಗಳ ಜೊತೆ ಚೆಲ್ಲಾಟವಾಡಿದರು/ಚೆಲ್ಲಾಟವಾಡುತ್ತಿದ್ದಾರೆ.
ಭಾರತದಲ್ಲಿ ಲಸಿಕೆ ಅಭಿಯಾನ ಆರಂಭಿಸಿದಾಗ ಪ್ರಪಂಚದ ಹಲವು ದೇಶಗಳು ಲಸಿಕೆಗಳಿಗಾಗಿ ಕೈಚಾಚಿದವು. ಭಾರತವೂ ಆಯಾ ದೇಶಗಳಿಗೆ ರಫ್ತು ಮಾಡಿತು. ಇದಕ್ಕಾಗಿ ವಿಜ್ಞಾನಿಗಳನ್ನು, ಕೇಂದ್ರ ಸರ್ಕಾರವನ್ನು ಅಭಿನಂದಿಸಬೇಕಾಗಿದ್ದ ವಿರೋಧ ಪಕ್ಷಗಳು ಸುಮ್ಮನೆಯೂ ಇರದೆ ‘ಲಸಿಕೆ ವಿರುದ್ಧ ಅಪಪ್ರಚಾರದ ಯುದ್ಧ’ ಪ್ರಾರಂಭಿಸಿದರು. ಸ್ವದೇಶಿ ವ್ಯಾಕ್ಸಿನ್ಗಳ ವಿರುದ್ಧ ದೇಶದ ಹಲವಾರು ಬುದ್ಧಿಜೀವಿಗಳು, ಪ್ರಗತಿಪರರೆಂದು ಮುಖವಾಡ ಧರಿಸಿ ಸಾವಿರಕ್ಕೂ ಅಧಿಕ ಲೇಖನಗಳನ್ನು ಬರೆದಿದ್ದಾರೆ. ಮೋದಿ ವಿರೋಧದ ಭರದಲ್ಲಿ ಇವರು ‘ಜೀವವಿರೋಧಿ’ಗಳಾದರು.
ಜೆಎನ್ಯುು ಘಟನೆ ಸಂದರ್ಭದಿಂದಲೂ ರಾಹುಲ್ ಗಾಂಧಿ, ಸೀತಾರಾಮ ಯೆಚೂರಿ ಹಾಗೂ ಒವೈಸಿ ಇವರೆಲ್ಲ ಕಾಂಗ್ರೆಸ್, ಕಮ್ಯುನಿಷ್ಟ್ ಇತರ ಶಕ್ತಿಗಳನ್ನು ಒಟ್ಟುಗೂಡಿಸಿ ಮೋದಿಯವರ ಅಶ್ವಮೇಧದ ಕುದುರೆ ಕಟ್ಟಿಹಾಕಲು ಹೆಣಗುತ್ತಿರುವುದು ಹಳೆಯ ಕಥೆ. ಈಗಲೂ ವಿರೋಧಪಕ್ಷದ ನಾಯಕರು ಲಸಿಕೆ ವಿರುದ್ಧ ವಿಷಕಾರುವುದರಲ್ಲಿ ಹಿಂದೆಬಿದ್ದಿಲ್ಲ. ಸ್ವದೇಶಿ ವ್ಯಾಕ್ಸಿನ್ ವಿರುದ್ಧ ಮಾತನಾಡಿ ಜನರಲ್ಲಿ ಗೊಂದಲ ಮೂಡಿಸಿರುವ ರಾಜಕೀಯ ಪಕ್ಷಗಳು ಹಾಗೂ ಜನರ ಜೀವವಿರೋಧಿ ನಾಯಕರ ಸಂಖ್ಯೆ ಹೀಗಿದೆ.
ಇದಲ್ಲದೆ 265 ಎನ್ಜಿಓಗಳು, 172 ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು ಮತ್ತು ನಿವೃತ್ತ ನ್ಯಾಯಾಧೀಶರು ವ್ಯಾಕ್ಸಿನ್ ವಿರುದ್ಧ ಮಾತಾಡಿದ್ದಾರೆ. ವ್ಯಾಕ್ಸಿನ್ ವಿರುದ್ಧ 342 ವ್ಯಂಗ್ಯಚಿತ್ರಗಳನ್ನು ಬರೆಸಿ ಪ್ರಕಟಿಸಲಾಗಿದೆ. ಇದೆಲ್ಲವನ್ನೂ ಇವರು ಮಾಡಿರುವುದು ವ್ಯಾಕ್ಸಿನ್ನಿನ ವಿರುದ್ಧವೋ? ಪ್ರಧಾನಿ ಮೋದಿ ವಿರುದ್ಧವೋ? ದೇಶದ ವಿರುದ್ಧವೋ? ಎಂಬುದರ ಪರಿಶೀಲನೆ ನಡೆಯಬೇಕು. ಜನರ ಪ್ರಾಣ ರಕ್ಷಿಸುವ ಹೊಣೆ ಆಡಳಿತ ಪಕ್ಷ ಹಾಗೂ ಸರ್ಕಾರದ ಮೇಲೆ ಎಷ್ಟಿದೆಯೋ, ಪ್ರತಿಪಕ್ಷಗಳ ಮೇಲೂ ಅಷ್ಟೇ ಇದೆ ಎಂಬುದನ್ನು ಆ ನಾಯಕರು ಮರೆತರು. ಸಿಎಎ ಸಂದರ್ಭದಲ್ಲಿ ಬೆಂಕಿ ಹಚ್ಚಿದ ಕೈಗಳೇ ಕೃಷಿ ಮಸೂದೆ ಹೆಸರಲ್ಲಿ, ಕರೊನಾ ಲಸಿಕೆ ಹೆಸರಲ್ಲಿ ಕಣ್ಣಿಗೆ ಕಾಣದಂತೆ ಬೆಂಕಿ ಹಚ್ಚಿದರು. ‘ಲಸಿಕೆ ಹಾಕಿಸಿಕೊಳ್ಳುವುದರಿಂದ ಮಕ್ಕಳಾಗುವುದಿಲ್ಲ, ಕೂದಲು ಉದುರುತ್ತವೆ’ ಎಂದು ಅಪಪ್ರಚಾರ ಮಾಡಿದರು. ಇದರಿಂದ ದೇಶದಾದ್ಯಂತ 40 ಲಕ್ಷಕ್ಕಿಂತಲೂ ಹೆಚ್ಚು ಡೋಸ್ಗಳು ಹಾಳಾದವು. ಆದರೆ ತಾವು ಮಾತ್ರ ಲಸಿಕೆ ಹಾಕಿಸಿಕೊಳ್ಳುವುದನ್ನು ಮರೆಯಲಿಲ್ಲ. ಇವರು ಯಾವ-ಯಾವ ದೇಶಗಳ ಏಜೆಂಟರಂತೆ, ಸಿದ್ಧಾಂತಗಳ ವಕ್ತಾರರಂತೆ, ಯೋಜನೆಗಳ ಕಾರ್ಯಪಾಲಕರಂತೆ ಕೆಲಸ ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ ಎಂಬುದೂ ಬಯಲಾಗಬೇಕಿದೆ.
ನಿಜ, ‘ಕೋವಿಡ್-19’ ನಿಯಂತ್ರಣ ಮಾಡಲೇಬೇಕಾದ ರೋಗ, ಕರೊನಾದ 2ನೇ ಅಲೆ ಹಾಗೂ ವಿಷಕಾರುವ ಪಕ್ಷಗಳ ನಿರಂತರ ಹಲವು ಅಲೆಗಳ ನಡುವೆಯೂ ಭಾರತದ ಜನತೆ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಶಕ್ತಿಮೀರಿ ಪ್ರಯತ್ನಿಸುತ್ತಿವೆ. ಈ ಎಲ್ಲ ವಿರೋಧಗಳ ನಡುವೆಯೂ ಈವರೆಗೆ ಭಾರತದಲ್ಲಿ 18 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ. ಈವರೆಗೆ 2.50 ಕೋಟಿಗಿಂತ ಅಧಿಕ ಜನರು ಸೋಂಕಿತರಾಗಿದ್ದು, 2.11 ಕೋಟಿಗೂ ಅಧಿಕ ಜನರು ಗುಣಮುಖರಾಗಿದ್ದಾರೆ. 35 ಲಕ್ಷದ ಆಸುಪಾಸಿನಲ್ಲಿ ಸಕ್ರಿಯ ಪ್ರಕರಣಗಳಿವೆ. 2.75 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಭಾರತದಲ್ಲಿ ಕರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಪ್ರಪಂಚದ ಅನೇಕ ದೇಶಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ನಿಜ, ಭಾರತದಲ್ಲಿ ಇನ್ನೂ ಸಾಕಷ್ಟು ಕೆಲಸ ಆಗಬೇಕು ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಪ್ರಪಂಚದ ಮುಂದುವರಿದ ದೇಶಗಳು ಸೇರಿ ಎಲ್ಲ ದೇಶಗಳು ಕರೊನಾ ವಿರುದ್ಧ ಸೋತಿವೆ ಎಂಬುದನ್ನು ಮರೆಯದಿರೋಣ. ಇಂದಿನ ಪರಿಸ್ಥಿತಿಯಲ್ಲಿ ವಿಜ್ಞಾನಕ್ಕಿಂತ ಕರೊನಾ ವೈರಸ್ ಮುಂದಿದೆ. ಇದು ಪ್ರಪಂಚದ ವಿಜ್ಞಾನಿಗಳಿಗೆ, ತಂತ್ರಜ್ಞರುಗಳಿಗೆ, ವೈದ್ಯರುಗಳಿಗೆ ಬಹುದೊಡ್ಡ ಸವಾಲಾಗಿದೆ ಎಂದು ನೆನಪಿನಲ್ಲಿಟ್ಟುಕೊಳ್ಳೋಣ. ಕೇಂದ್ರ ಸರ್ಕಾರದ ಆಶಯ, ಒತ್ತಾಸೆಯಂತೆ ಭಾರತದ ವಿಜ್ಞಾನಿಗಳು ವ್ಯಾಕ್ಸಿನ್ ಕಂಡು ಹಿಡಿದು ಜನಾಂದೋಲನಕ್ಕೆ ಮುಂದಾದರು. ಆದರೆ ಜನರ ಪ್ರಾಣರಕ್ಷಣೆಗೆ, ಕರೊನಾ ನಿಯಂತ್ರಣಕ್ಕೆ ಸರ್ಕಾರದೊಡನೆ, ದೇಶದೊಡನೆ ಕೈಜೋಡಿಸಬೇಕಾದ ಪ್ರತಿಪಕ್ಷಗಳು ಅದರ ವಿರುದ್ಧ ನಿಂತಿದ್ದಕ್ಕೆ ಮುಂದೊಂದು ದಿನ ತಕ್ಕ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಕರ್ನಾಟಕದ ಹಾಗೂ ದೇಶದ ಎಲ್ಲ ವಿರೋಧ ಪಕ್ಷಗಳ ನಾಯಕರು ಮನಗಾಣಬೇಕಿದೆ.
(ಲೇಖಕರು ವಿಧಾನ ಪರಿಷತ್ ಸದಸ್ಯ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ)