ಅಂಕಣ

ಪಾರಿವಾಳಗಳ ಸೇವೆಯಲ್ಲಿ ಹೆಲ್ಪಿಂಗ್ ಹ್ಯಾಂಡ್ಸ್ ಆರ್ಗನೈಝೇಷನ್

Mandara

ಇನ್ನೂ ಚುಮು ಚುಮು ಬೆಳಕು. ವಾಕಿಂಗ್​ಗೆ ಮೈಸೂರಿನ ಅರಮನೆ ಕಡೆ ಹೊರಟೆ. ಕೋಟೆ ಆಂಜನೇಯ ದೇಗುಲದ ದ್ವಾರದ ಬಳಿ ಜನರ ಗುಂಪಿತ್ತು. ಏನಿರಬಹುದು? ಕುತೂಹಲಕ್ಕೆ ಅತ್ತ ನಡೆದೆ. ಒಂದಿಷ್ಟು ಯುವಕರು ನೆಲದ ಮೇಲೆ ಜೋಳ ಸುರುವುತ್ತಿದ್ದರು!.

ತತ್​ಕ್ಷಣಕ್ಕೆ ಅದೆಲ್ಲಿಂದಲೋ ನೂರಾರು ಪಾರಿವಾಳಗಳು ಹಾರಿ ಬಂದವು. ಕ್ಷಣ-ಕ್ಷಣಕ್ಕೂ ಅವುಗಳ ಸಂಖ್ಯೆ ಏರುತ್ತಲೇ ಇತ್ತು. ಆ ಯುವಕರು ‘ದೂರ ನಿಲ್ಲಿ, ಪಾರಿವಾಳಗಳಿಗೆ ತೊಂದರೆ ಕೊಡದಿರಿ. ಹೀಗೆ ಜನರಿಗೆ ದೂರ ಸರಿಸುತ್ತಿದ್ದರೆ, ಇತ್ತ ಪಾರಿವಾಳಗಳು ನಿರ್ಭೀತಿಯಿಂದ ಜೋಳ ತಿಂದು, ಅಲ್ಲಿಯೇ ಬಟ್ಟಲಲ್ಲಿಟ್ಟ ನೀರು ಕುಡಿಯುತ್ತಿದ್ದವು. ಮರುದಿನವೂ ಇದೇ ದೃಶ್ಯ ಕಂಡಿತು. ‘ಒಂದೆರಡು ದಿನ ಕಾಳು ಹಾಕಿ ಬಿಡಲ್ಲ ಸರ್, ವರ್ಷವಿಡಿ ಹಾಕುತ್ತೇವೆ’ ಎಂದರು ಸೇವೆಯಲ್ಲಿ ಮಗ್ನರಾಗಿದ್ದ ಯುವಕ ರಾಜನ್ ಬಾಗ್.

ಹೌದು ಇವರು ನಿತ್ಯ ಬೆಳಗ್ಗೆ 5-45ರಿಂದ ಎರಡು ಗಂಟೆ ಇಲ್ಲಿ ಆಹಾರ ಹಾಕುತ್ತಾರೆ. ಅದೂ ಕಳೆದ ಐದು ವರ್ಷಗಳಿಂದ. ಮೊದಲು ಸೇವೆ ಆರಂಭಿಸಿದಾಗ ಕೇವಲ ಐದಾರ್ನೂರು ಪಾರಿವಾಳಗಳು ಬರುತ್ತಿದ್ದವಂತೆ. ಈಗ ಇವುಗಳ ಸಂಖ್ಯೆ ಎರಡು ಸಾವಿರ ಗಡಿ ದಾಟಿದೆ.

ಮೈಸೂರಿನ ಜೈನ್ ಸಮುದಾಯದ ಸಮಾನ ಮನಸ್ಕ ಯುವಕರು ಕಳೆದ ಒಂದು ದಶಕದಿಂದ ‘ಹೆಲ್ಪಿಂಗ್ ಹ್ಯಾಂಡ್ಸ್ ಆರ್ಗನೈಝೇಷನ್’ ಕಟ್ಟಿಕೊಂಡಿದ್ದಾರೆ. ಅದರಲ್ಲಿ ‘ಕಬೂತರ್ ದಾನ್’ ಪ್ರಾಜೆಕ್ಟ್ ಅಡಿಯಲ್ಲಿ ಈ ಸೇವೆ ನಡೆಯುತ್ತದೆ. ಜೋಳ, ಹುರಿಗಡ್ಲೆ, ಮುಸುಕಿನ ಜೋಳ, ಹೆಸರುಕಾಳು... ಹೀಗೆ ದಿನಕ್ಕೆ 250-300 ಕೆ.ಜಿ ಆಹಾರ ಧಾನ್ಯ ಖರ್ಚಾಗುತ್ತೆ.

ಈ ಕೆಲಸಕ್ಕೇನು ಪ್ರೇರಣೆ ಎಂದು ಕೇಳಿದರೆ ‘ಹೈದರಾಬಾದ್​ನ ಟೂರಿಸ್ಟ್​ಗಳು ಒಮ್ಮೆ ಪಾರಿವಾಳಗಳಿಗೆ ಆಹಾರ ಹಾಕುತ್ತಿದ್ದರು. ಎಲ್ಲಿಂದಲೋ ಬಂದವರಿಗೆ ಈ ಅಕ್ಕರೆ, ಕಾಳಜಿ ಇದೆ. ನಾವೇಕೆ ಮಾಡಬಾರದೆಂದು ಯೋಚಿಸಿದೆವು. ಅದರ ಫಲವೇ ಇದು’ ಎಂದರು ಪ್ರಾಜೆಕ್ಟ್​ನ ಕಾರ್ಯದರ್ಶಿ ಆನಂದ ರಾಜ್ ಪಾಟ್ವಾ. ‘ನಮ್ಮ ಹಾಗೂ ನಮ್ಮ ಕುಟುಂಬ ಸದಸ್ಯರ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ... ಹೀಗೆ ವಿಶೇಷ ದಿನಗಳ ಆಡಂಬರ ಆಚರಣೆ ಮತ್ತು ದುಂದು ವೆಚ್ಚ ಮಾಡುವ ಬದಲು ಇಲ್ಲಿ ಕಾಳಿನಿಂದ ಅವರ ಹೆಸರು ಬರೆದು ಶುಭಾಶಯ ಕೋರುತ್ತೇವೆ. ಇದರಲ್ಲಿ ಸಿಗುವ ಸಂತೋಷ, ತೃಪ್ತಿ ಬೇರೆಯೇ’ ಎನ್ನುತ್ತಾರೆ ಸಂಸ್ಥೆಯ ಸದಸ್ಯ ಮಹಾವೀರ ಚಂದ್ ದೋಕ. ‘ಈಗೀಗ ಅನೇಕರು ಸ್ವಯಂ ಪ್ರೇರಣೆಯಿಂದ ಕಾಳುಕಡಿ ಹಾಕುವ ಮೂಲಕ ನಮ್ಮ ಸೇವೆಗೆ ಕೈ ಜೋಡಿಸುತ್ತಿದ್ದಾರೆ. ಎಲ್ಲರ ಸಹಕಾರ, ಬೆಂಬಲ ಇದೆ. ಖುಷಿ ಆಗುತ್ತಿದೆ.. ಎನ್ನುತ್ತಾರೆ ಅಧ್ಯಕ್ಷ ಮಹಾವೀರ್ ಚಂದ್ ಖಾಬಿಯಾ. ಇತ್ತೀಚೆಗೆ ನಿಧನರಾದ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಇವರಿಗೆ ಶಾಸಕ ರಾಮದಾಸ್ ಪಾರಿವಾಳಗಳಿಗೆ ಆಹಾರ ನೀಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದು ಇದಕ್ಕೊಂದು ತಾಜಾ ಉದಾಹರಣೆ. ಇನ್ನು, ಇವರು ಮಂಗಳವಾರ ಮತ್ತು ಶುಕ್ರವಾರ ಮಹಾವೀರ ನಗರದ ಜೈನ್ ದೇಗುಲದ ಬಳಿ ಪಾರಿವಾಳಗಳಿಗೆ ಆಹಾರ, ನೀರು ಒದಗಿಸುತ್ತಾರೆ. ಮುಂದಿನ ದಿನಗಳಲ್ಲಿ ಬನ್ನಿ ಮಂಟಪ, ಪಿಂಜಾ ಪೌಲ್ ಬಳಿ ಇರುವ ಪಾರಿವಾಳಗಳಿಗೆ ಆಹಾರ ಒದಗಿಸುವ ಯೋಜನೆ ಇಟ್ಟುಕೊಂಡಿದ್ದಾರೆ.

ಹೀಗೆ ಈ ಸಂಸ್ಥೆಯ ಯುವಕರು ಅರಮನೆ ನಗರಿಯಲ್ಲಿ ಸದಾ ಕ್ರಿಯಾಶೀಲವಾಗಿ, ನಿಸ್ವಾರ್ಥ ಮತ್ತು ಸಮರ್ಪಣಾ ಭಾವದಿಂದ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು, ಎಲ್ಲರ ಪ್ರೀತಿ, ಅಭಿನಂದನೆಗೆ ಪಾತ್ರರಾಗಿ ದ್ದಾರೆ. ಇವರ ಸಮಾಜಮುಖಿ ಕೆಲಸಗಳ ಕುರಿತ ಹೆಚ್ಚಿನ ಮಾಹಿತಿಗೆ 'helping hands kabootar dana' ಫೇಸ್​ಬುಕ್ ಅಕೌಂಟ್ ನೋಡಬಹುದು.

ಎತ್ತಿನ ಗಾಣದಿಂದ ಎಣ್ಣೆ: ನಾವು ದಿನನಿತ್ಯ ಬಳಸುವ ಎಣ್ಣೆಯೊಂದರಿಂದಲೇ ಭಯಾನಕ ರೋಗಗಳು ನಮ್ಮ ದೇಹವನ್ನು ಕಬಳಿಸುತ್ತಿವೆ ಎಂಬ ಸತ್ಯವನ್ನು ಅರಿತ ‘ದೇಸಿರಿ’ ತಂಡ, ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ 15 ಸಾವಿರ ಕಿಲೋ ಮೀಟರ್​ಗೂ ಅಧಿಕ ಅಧ್ಯಯನ ಪ್ರವಾಸದಲ್ಲಿ ತೊಡಗಿತ್ತು. ಆಗ ಅವರಿಗೆ ಸಮಸ್ಯೆಗಳ ಪರಿಹಾರದ ರೂಪದಲ್ಲಿ ಕಂಡುಬಂದದ್ದು ಎತ್ತಿನ ಗಾಣದಿಂದ ಎಣ್ಣೆ ತೆಗೆಯುವ ಉದ್ಯಮ. ‘ಸರಳವಾಗಿ ಹೇಳಬೇಕೆಂದರೆ, ದೇಸಿರಿಯು ರೈತರಲ್ಲಿ ನೈಸರ್ಗಿಕ ಅಥವಾ ಸಹಜ ಕೃಷಿಯ ಬಗೆಗೆ ಉತ್ತೇಜನ ನೀಡುತ್ತದೆ ಮತ್ತು ಅವರು ಬೆಳೆದ ಎಣ್ಣೆಕಾಳುಗಳಿಗೆ ಉತ್ತಮ ಮೌಲ್ಯನೀಡಿ ಖರೀದಿಸುತ್ತದೆ. ಹಳ್ಳಿಯಲ್ಲಿ ಕೇಂದ್ರೀಕೃತವಾಗಿರುವ ಹಳ್ಳಿಯ ಜನರೇ ಉದ್ಯೋಗಸ್ಥರಾಗಿರುವ ಎತ್ತಿನ ಗಾಣದ ಕೇಂದ್ರದಲ್ಲಿ ಯಾವುದೇ ಕಲಬೆರಕೆಯಿಲ್ಲದೆ, ರಾಸಾಯನಿಕ ಬಳಸದೆ, ಎಣ್ಣೆಯನ್ನು ತೆಗೆದು ಗ್ರಾಹಕರಿಗೆ ತಲುಪಿಸಲಾಗುತ್ತದೆ. ಹೀಗಾಗಿ ಪಟ್ಟಣದ ಹಣ ಹಳ್ಳಿಗೆ ಹರಿದು ಬರುತ್ತದೆ, ಹಳ್ಳಿಯಲ್ಲಿ ಉದ್ಯೋಗ ಸೃಷ್ಟಿಯಿಂದ ಪಟ್ಟಣದ ಕಡೆಗಿನ ವಲಸೆ ತಪ್ಪುತ್ತದೆ. ಹಳ್ಳಿಯ ಹಣ ಹಳ್ಳಿಯಲ್ಲೇ ಉಳಿದು ಸ್ವಾವಲಂಬನೆ ಸೃಷ್ಟಿಯಾಗುತ್ತದೆ’ ಎನ್ನುತ್ತಾರೆ ಇದರ ರೂವಾರಿ ಯೋಗೇಶ್. ಕೃಷಿ ಕ್ಷೇತ್ರ ಯಾಂತ್ರೀಕರಣಗೊಂಡು ದೇಸಿ ಎತ್ತುಗಳ ತಳಿಗಳು ನಶಿಸಿಹೋಗುತ್ತಿವೆ. ದೇಸಿ ಎತ್ತುಗಳೇ ಗಾಣದ ಉದ್ಯಮದ ಚಾಲನಾಶಕ್ತಿಯಾಗಿರುವುದರಿಂದ ದೇಸಿ ಎತ್ತುಗಳ ಅಭಿವೃದ್ಧಿ ಮತ್ತು ಸಂರಕ್ಷಣೆ ಸಾಧ್ಯವಾಗುತ್ತದೆ. 2-3 ದಶಕಗಳಿಂದ ತೆರೆಮರೆಗೆ ಸರಿದಿದ್ದ ಎತ್ತಿನ ಗಾಣದಿಂದ ಎಣ್ಣೆ ತೆಗೆಯುವ ಸಾಂಪ್ರದಾಯಿಕ ವಿಧಾನವನ್ನು ಪುನರುಜ್ಜೀವನಗೊಳಿಸುವ, ಈ ಪದ್ಧತಿಯನ್ನು ಮುನ್ನೆಲೆಗೆ ತರುವ ಪ್ರಯತ್ನ ಯಶಸ್ವಿಯಾಗಿದ್ದು ಕರ್ನಾಟಕ ಮಾತ್ರವಲ್ಲದೇ ದೇಶದ ಇತರ ರಾಜ್ಯಗಳಲ್ಲೂ ಈ ಪದ್ಧತಿ ಮರುಸ್ಥಾಪಿಸುವಲ್ಲಿ ತರಬೇತಿ ನೀಡುತ್ತಿದ್ದಾರೆ.

ಬಡ ಮಕ್ಕಳಿಗೆ ಶಿಕ್ಷಣ: ‘ಹೆಲ್ಪಿಂಗ್ ಹ್ಯಾಂಡ್ಸ್ ಆರ್ಗನೈಝೇಷನ್’ ಸಂಸ್ಥೆಯ ಸದಸ್ಯರು ಪಾರಿವಾಳಗಳಿಗೆ ಆಹಾರ ನೀಡುವ ಕೆಲಸ ಮಾತ್ರವಲ್ಲದೇ ಹಲವಾರು ಸಮಾಜಮುಖಿ ಕೆಲಸಗಳನ್ನೂ ಮಾಡುತ್ತಿದ್ದಾರೆ. ಸಂಸ್ಥೆಯಲ್ಲಿ ಒಟ್ಟು 60 ಸದಸ್ಯರು ಇದ್ದು, ತಮ್ಮ ತಮ್ಮಲ್ಲೇ ಹಣವನ್ನು ಸಂಗ್ರಹಿಸುತ್ತಾರೆ. ಬೇರೆಯವರು ಸ್ವ-ಇಚ್ಛೆಯಿಂದ ಕೊಟ್ಟರೆ ಪಡೆಯುತ್ತಾರೆ. ಹೀಗೆ ಸಂಗ್ರಹವಾದ ಹಣವನ್ನು ನಾನಾ ಸೇವಾ ಕೆಲಸಗಳಿಗೆ ವಿನಿಯೋಗಿಸುತ್ತಾರೆ. ‘ಶಿಕ್ಷಾ ಪ್ರಾಜೆಕ್ಟ್ ಅಡಿಯಲ್ಲಿ ಬಡ ಮಕ್ಕಳಿಗೆ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ. ಮೈಸೂರಿನ ಅರಮನೆ ಹಿಂಭಾಗದ ಇಟ್ಟಿಗೆ ಗೂಡು ಸರಕಾರಿ ಪ್ರಾಥಮಿಕ ಶಾಲೆಯನ್ನು ಆರು ವರ್ಷದ ಕೆಳಗೆಯೇ ದತ್ತು ಪಡೆದು ಅಭಿವೃದ್ಧಿ ಮಾಡುತ್ತಿದ್ದಾರೆ. ಇವರೇ ಕಂಪ್ಯೂಟರ್ ಶಿಕ್ಷಕರನ್ನು ನೇಮಿಸಿ ಮಕ್ಕಳಿಗೆ ಕಂಪ್ಯೂಟರ್ ಜ್ಞಾನ ನೀಡುತ್ತಿದ್ದಾರೆ. ಶೈಕ್ಷಣಿಕ ಪ್ರವಾಸದ ವ್ಯವಸ್ಥೆ ಮಾಡುತ್ತಾರೆ. ಈ ಶಾಲೆ ಸೇರಿದಂತೆ ಮೈಸೂರು ಹಾಗೂ ಸುತ್ತಮುತ್ತಲಿನ ಸರಕಾರಿ ಶಾಲೆಗಳನ್ನು ಆಯ್ಕೆ ಮಾಡಿ ಅಲ್ಲಿಯ ಮಕ್ಕಳಿಗೆ ಸ್ಕೂಲ್ ಬ್ಯಾಗ್, ಬಟ್ಟೆ, ಪುಸ್ತಕ, ಪೀಠೋಪಕರಣಗಳು ಒದಗಿಸುತ್ತಾರೆ. ರಾಜ್ಯ ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ಧನ ಸಹಾಯ ಮಾಡಿದ್ದಾರೆ. ಇನ್ನು ‘ಹೆಲ್ತ್ ಪ್ರಾಜೆಕ್ಟ್ ಅಡಿಯಲ್ಲಿ ಉಚಿತ ಆರೋಗ್ಯ ಶಿಬಿರ ಏರ್ಪಡಿಸುತ್ತಾರೆ. ಬಡವರ ಆಸ್ಪತ್ರೆ ಖರ್ಚು ಭರಿಸುತ್ತಾರೆ. ಚಳಿಗಾಲದಲ್ಲಿ ನಿರ್ಗತಿಕರಿಗೆ ಶಾಲು, ಕಂಬಳಿಯಂಥ ಬೆಚ್ಚನೆಯ ಉಡುಪುಗಳನ್ನು ಕೊಡುತ್ತಾರೆ.