ಅನುದಾನ ನೀಡುವುದರಲ್ಲಿ, ಅಪರಾಧಿ ಚಟುವಟಿಕೆಗಳನ್ನು ಹತ್ತಿಕ್ಕುವಲ್ಲಿ, ಹಿಂದೂ ಧರ್ವಿುಯರ ಭಾವನೆಗಳಿಗೆ ಧಕ್ಕೆ ತರುವಲ್ಲಿ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ಮಿತಿ ಮೀರಿದೆ. ಹಿಂದೂಗಳ ಆರಾಧ್ಯದೈವ ಶ್ರೀರಾಮನ ಅಯೋಧ್ಯಾ ಮಂದಿರದ ಉದ್ಘಾಟನೆಯ ವೇಳೆ, ಮಂಡ್ಯದಲ್ಲಿ ಹನುಮ ಧ್ವಜ ಹಾರಿಸುವ ವೇಳೆ, ಗಣೇಶ ಮೂರ್ತಿ ವಿಸರ್ಜನೆ ವೇಳೆ, ವಕ್ಪ್ ಭೂ ಕಬಳಿಕೆಯ ವೇಳೆ, ಹೀಗೆ ಅನೇಕ ಘಟನೆಗಳಲ್ಲಿ ಕಾಂಗ್ರೆಸ್ನ ಹಿಂದೂ ದ್ವೇಷ ಹಾಗೂ ಮುಸ್ಲಿಂರ ಮೇಲಿನ ಹುಸಿಪ್ರೀತಿ ಬಹಿರಂಗವಾಗಿದೆ. ಈಗ ‘ಮೀಸಲಾತಿ’ ಎಂಬ ಹೊಸ ತುಪ್ಪವನ್ನು ಮುಸ್ಲಿಮರ ಮೂಗಿಗೆ ಸವರಲಾಗಿದೆ. ಈ ಮೂಲಕ ಮುಸ್ಲಿಂ ಸಮುದಾಯದ ಜನರನ್ನು ಕೇವಲ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ.
ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇಕಡ 4ರಷ್ಟು ಮೀಸಲಾತಿ ನೀಡುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ತುಷ್ಟೀಕರಣದ ಹೊಸ ಮಜಲನ್ನು ಹುಟ್ಟುಹಾಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊದಲಿನಿಂದಲೂ ಇಂತಹ ಎಡವಟ್ಟುಗಳನ್ನೇ ಮಾಡಿಕೊಂಡು ಬಂದಿದ್ದಾರೆ. ಆದರೆ ಈ ಬಾರಿ ಹಿಂದೂ-ಮುಸ್ಲಿಮರ ನಡುವೆ ಸಾಮರಸ್ಯ ಕದಡುವ ದೊಡ್ಡ ಹೆಜ್ಜೆಯನ್ನು ಇರಿಸಿದ್ದಾರೆ. ಪರಿಶಿಷ್ಟ ವರ್ಗ/ಪಂಗಡದ ಜನರ ಅಭಿವೃದ್ಧಿಗೆ ಮೀಸಲಾಗಿಡುವ ಹಣವನ್ನು ಮುಲಾಜಿಲ್ಲದೆ ಗ್ಯಾರಂಟಿಗೆ ಬಳಸುವ ಇವರು, ಶೋಷಿತ ಸಮುದಾಯಗಳ ಹಿತದ ಬಗ್ಗೆ ಸ್ವಲ್ಪವೂ ಚಿಂತನೆ ನಡೆಸಿಲ್ಲ. ಆದರೆ ಮುಸ್ಲಿಮರ ವಿಚಾರ ಬಂದಾಗ ಮಾತ್ರ ಅಗತ್ಯವಿಲ್ಲದಷ್ಟು ಕಾಳಜಿ ತೋರಿಸಲು ಆರಂಭಿಸುತ್ತಾರೆ. ಧರ್ಮದ ಆಧಾರದಲ್ಲಿ ಮೀಸಲು ನೀಡುವ ಈ ಆತಂಕಕಾರಿ ರಾಜಕೀಯವು ಸಮಾಜದ ಹಿತವನ್ನು ಸಂಪೂರ್ಣವಾಗಿ ಕಡೆಗಣಿಸಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ಚರ್ಚೆಯಾಗಿದ್ದು, ಕಾಂಗ್ರೆಸ್ ಸರ್ಕಾರದ ಈ ನೀತಿಯನ್ನು ಖಂಡಿಸಲಾಗಿದೆ. ಇದು ಮುಸ್ಲಿಮರ ವಿರುದ್ಧವಾದ ಧೋರಣೆಯಲ್ಲ, ಇದು ಸಮಾನತೆಯನ್ನು ಕೊಲ್ಲುವ ಉದ್ದೇಶದ ವಿರುದ್ಧವಾದ ಧೋರಣೆ ಎಂಬುದನ್ನು ಅರಿಯಬೇಕಿದೆ. ಇಲ್ಲಿ ಭಾರತದ ರಾಜಕೀಯ ಇತಿಹಾಸವನ್ನೊಮ್ಮೆ ಗಮನಿಸಬೇಕಾಗುತ್ತದೆ. 1937ರಲ್ಲಿ ಕಾಂಗ್ರೆಸ್ ಪಕ್ಷ, ಮುಸ್ಲಿಂ ಲೀಗ್ ಜೊತೆ ಮೈತ್ರಿ ಮಾಡಿಕೊಂಡಿತು. ಆಗ ಮುಸ್ಲಿಂ ಲೀಗ್ ಹಾಗೂ ಮೊಹಮ್ಮದ್ ಅಲಿ ಜಿನ್ನಾ ಅವರ ಉದ್ದೇಶ ಧರ್ಮದ ಆಧಾರದಲ್ಲಿ, ಅಂದರೆ ಮುಸ್ಲಿಂರಿಗಾಗಿ ಪ್ರತ್ಯೇಕ ರಾಷ್ಟ್ರವನ್ನು ಸೃಷ್ಟಿಸುವುದೇ ಆಗಿತ್ತು. ಇದು ಗೊತ್ತಿದ್ದೂ ಕಾಂಗ್ರೆಸ್ ಅದೇ ಪಕ್ಷದ ಜೊತೆ ಕೈ ಜೋಡಿಸಿತು. ಅಂದರೆ 1947ರಲ್ಲಿ ಭಾರತ ವಿಭಜನೆಯಾಗಿ ಪಾಕಿಸ್ತಾನ ರಚನೆಯಾಗಲು ಕಾಂಗ್ರೆಸ್ ಕೂಡ ಪಾತ್ರ ವಹಿಸಿತು. ಧರ್ಮದ ಆಧಾರದಲ್ಲಿ ಜನರನ್ನು ಒಡೆಯುವ ಸಿದ್ಧಾಂತವನ್ನು ಕಾಂಗ್ರೆಸ್ ಆಗಲೇ ಮೈಗೂಡಿಸಿಕೊಂಡಿತು.
ಸಂವಿಧಾನ ಶಿಲ್ಪಿಗೆ ಅಪಮಾನ: ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸುವಾಗ ಶೋಷಿತ ವರ್ಗಗಳ ಜನರ ಕಲ್ಯಾಣಕ್ಕೆ ಒತ್ತು ನೀಡಿದ್ದರು. ಅದಕ್ಕಾಗಿಯೇ ಮೀಸಲಾತಿಯನ್ನು ಜಾರಿಗೆ ತಂದರು. ಆದರೆ ಅವರೆಂದೂ ಧರ್ವಧಾರಿತ ಮೀಸಲಾತಿಯನ್ನು ಒಪ್ಪಿಕೊಂಡಿರಲಿಲ್ಲ. ಸಂವಿಧಾನ ರಚನಾ ಸಭೆಯಲ್ಲೇ ಈ ಬಗ್ಗೆ ಚರ್ಚೆಯಾಗಿ 43 ತಜ್ಞರ ಸಮಿತಿ ರಚಿಸಲಾಗಿತ್ತು. ಈ ಸಮಿತಿಯ ಸಭೆಯಲ್ಲಿ ಪಂಡಿತ್ ಜವಾಹರಲಾಲ್ ನೆಹರು, ಬಾಬಾಸಾಹೇಬ್ ಅಂಬೇಡ್ಕರ್ ಸೇರಿದಂತೆ ಅನೇಕರು ಧರ್ವಧಾರಿತ ಮೀಸಲಾತಿಗೆ ವಿರೋಧ ಸೂಚಿಸಿ ಮಾತನಾಡಿದ್ದರು. ಅನೇಕ ಮುಸ್ಲಿಂ ಮುಖಂಡರು ಕೂಡ ಇಂಥ ಮೀಸಲಾತಿಯನ್ನು ವಿರೋಧಿಸಿದ್ದರು.
ಕಾಂಗ್ರೆಸ್ಗೆ ಈ ಇತಿಹಾಸ ಗೊತ್ತಿಲ್ಲ ಎಂದೇನಲ್ಲ. ಆದರೆ ಈಗಿನ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಜಾಣನಡೆಯನ್ನು ಕಾಂಗ್ರೆಸ್ ಇಟ್ಟಿದೆ. ಇದು ಮುಸ್ಲಿಂರ ಬಗೆಗಿನ ಕಾಳಜಿಯಲ್ಲ. ಇದು ವೋಟ್ಬ್ಯಾಂಕ್ನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳುವ ಹುನ್ನಾರ. ಈ ಹುನ್ನಾರ ಯಾವ ಮಟ್ಟಿಗೆ ಪ್ರಬಲವಾಗಿದೆ ಎಂದರೆ ಇವರು ಆರಾಧಿಸುವ ಜವಾಹರಲಾಲ್ ನೆಹರು ಅವರ ಅಭಿಪ್ರಾಯವನ್ನೂ ಈಗ ಧಿಕ್ಕರಿಸುತ್ತಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ‘ಒಳ್ಳೆಯ ದಿನಗಳಿಗೆ ಕಾಯೋಣ, ಕೆಲವು ತೀರ್ಪಗಳು ಸಂವಿಧಾನವನ್ನೇ ಬದಲಾಯಿಸಿವೆ. ಇದೇ ರೀತಿ ಈ ಬಾರಿಯೂ ಕಾಯೋಣ, ಸಂವಿಧಾನವನ್ನು ಬದಲಾಯಿಸೋಣ’ ಎಂದು ಮಾಧ್ಯಮ ಸಂದರ್ಶನದಲ್ಲಿ ಬಹಿರಂಗವಾಗಿ ಹೇಳಿದ್ದಾರೆ. ಸಂವಿಧಾನದ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಕಾಂಗ್ರೆಸ್ ನಾಯಕರೇ ಈಗ ಸಂವಿಧಾನವನ್ನು ಬದಲಿಸುವ ಮಾತನಾಡುತ್ತಿದ್ದಾರೆ ಎಂದರೆ, ಇವರ ಸಂವಿಧಾನ ಹಿತರಕ್ಷಣೆಯ ನಾಟಕಕ್ಕೆ ಬೇರೆ ಸಾಕ್ಷಿ ಬೇಕಿಲ್ಲ.
ನ್ಯಾಯಾಂಗಕ್ಕೆ ಬೆಲೆ ಇಲ್ಲವೇ?: ಸರ್ಕಾರ ಅಥವಾ ಪೊಲೀಸ್ ವ್ಯವಸ್ಥೆ ನ್ಯಾಯ ಕೊಡಲು ಸಾಧ್ಯವಾಗದೆ ಹೋದಾಗ, ಜನರು ನ್ಯಾಯಾಂಗದ ಮೊರೆ ಹೋಗುತ್ತಾರೆ. ನ್ಯಾಯಾಲಯಕ್ಕೆ ಅಂತಹ ವಿಶೇಷ ಮಹತ್ವವಿದೆ. ಆದರೆ ಕಾಂಗ್ರೆಸ್ ನಾಯಕರ ಕಣ್ಣಿನಲ್ಲಿ ನ್ಯಾಯಾಂಗಕ್ಕೂ ಮಹತ್ವ ಇಲ್ಲವಾಗಿದೆ. ಈ ಹಿಂದೆ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಮುಸ್ಲಿಂರಿಗೆ ವಿಶೇಷವಾದ ಮೀಸಲಾತಿ ನೀಡಲು ಪ್ರಯತ್ನ ಮಾಡಿದ್ದವು. ಆಗ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಈ ರೀತಿ ಧರ್ವಧಾರಿತವಾದ ಮೀಸಲಾತಿ ನೀಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದವು. ಈ ಇತಿಹಾಸ ಗೊತ್ತಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಮುಸ್ಲಿಮರು ಹಿಂದುಳಿದವರು’ ಎಂಬ ನೆಪ ಹೇಳಿ ಮೀಸಲಾತಿ ನೀಡಿ ಮತಬ್ಯಾಂಕ್ನ ಋಣ ತೀರಿಸಿದ್ದಾರೆ. ಆದರೆ ಇದರಿಂದಾಗಿ ಸಾಮಾಜಿಕ ವ್ಯವಸ್ಥೆಯ ಮೇಲೆ ಯಾವ ರೀತಿ ದುಷ್ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಅವರು ತಲೆ ಕೆಡಿಸಿಕೊಂಡಿಲ್ಲ.
ಭಾರತೀಯ ಜನತಾ ಪಾರ್ಟಿ ಯಾವಾಗಲೂ ಸಮಾಜದ ಸಾಮರಸ್ಯವನ್ನು ಕಾಪಾಡುವ ಹಾಗೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಕೆಲಸದ ಕಡೆಗೆ ಗಮನ ಹರಿಸಲಿದೆ. ಮುಸ್ಲಿಂ ಮೀಸಲಾತಿ ಸೇರಿದಂತೆ ಎಲ್ಲ ಬಗೆಯ ತುಷ್ಟೀಕರಣ ನೀತಿಗಳನ್ನು ಬಿಜೆಪಿ ಇನ್ನು ಮುಂದೆಯೂ ವಿರೋಧಿಸಲಿದೆ. ಹೋರಾಟದ ಮೂಲಕವೇ ಕಾಂಗ್ರೆಸ್ನ ಈ ರೋಗಕ್ಕೆ ಔಷಧ ನೀಡುವ ಸಂವಿಧಾನ ಪರ ಕೆಲಸವನ್ನು ಬಿಜೆಪಿ ಮಾಡಲಿದೆ. (ಲೇಖಕರು ವಿಧಾನಸಭೆಯ ವಿರೋಧ ಪಕ್ಷದ ನಾಯಕರು)