ಅಂಕಣ

ಅಣಬೆ ಬೇಸಾಯ ಉತ್ತಮ ಆದಾಯ: ಯುವ ಕೃಷಿಕನ ಸ್ವಾವಲಂಬನೆ ಗಳಿಕೆ

| ಶಿವು ಹುಣಸೂರು

ಯುವ ಕೃಷಿಕನೊಬ್ಬ ಅಣಬೆ ಬೇಸಾಯದ ಮೂಲಕ ಆರ್ಥಿಕವಾಗಿ ಸ್ವಾವಲಂಬನೆ ಗಳಿಸಿದ್ದಾರೆ. ಅಣಬೆ ಕೃಷಿಗೆ ಅಗತ್ಯವಾದ ಯಂತ್ರೋಪಕರಣವನ್ನೂ ತಾವೇ ಆವಿಷ್ಕರಿಸಿರುವುದು ಇವರ ಮತ್ತೊಂದು ವಿಶೇಷ. ಹುಣಸೂರು ನಗರ ಹೊರವಲಯದ ಹಾಲಗೆರೆಯ ವೆಂಕಟೇಶ್​-ಗೌರಮ್ಮ ದಂಪತಿಯ ಪುತ್ರ ಸುನೀಲ್​, ಅಣಬೆ ಕೃಷಿಯಲ್ಲಿ ತೊಡಗಿರುವ ಯುವಕ. ಖಾಸಗಿ ಮೊಬೈಲ್​ ಕಂಪನಿಯ ಮಾರುಕಟ್ಟೆ ವಿಭಾಗದಲ್ಲಿ ಕೆಲಸಮಾಡುತ್ತಿದ್ದ ಸುನೀಲ್​, ದಿನವಿಡೀ ದುಡಿದರೂ ಸಂಪಾದನೆ ಅಷ್ಟಕ್ಕಷ್ಟೇ ಇತ್ತು. ಈ ನಡುವೆ, ಅಣಬೆ ಕೃಷಿ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ ಸುನೀಲ್​, ತಾನೇಕೆ ಅಣಬೆ ಕೃಷಿ ಮಾಡಬಾರದೆಂದು ಯೋಚಿಸಿ ಹೊಸ ಕಾರ್ಯಕ್ಕೆ ಕೈಹಾಕಿದರು. ಎರಡು ವರ್ಷದ ಪರಿಶ್ರಮದಿಂದಾಗಿ ಪ್ರಸ್ತುತ ಅಣಬೆ ಕೃಷಿಯಲ್ಲಿ ಯಶಸ್ಸು ಸಾಧಿಸಿ ಮಾರುಕಟ್ಟೆಯನ್ನೂ ಕಂಡುಕೊಂಡಿದ್ದು, ಉತ್ತಮ ಲಾಭ ಗಳಿಸುತ್ತಿದ್ದಾರೆ.

ಚಿಪ್ಪು ಅಣಬೆ: ಸುನೀಲ್​ ಚಿಪ್ಪು ಅಣಬೆಯ ಕೃಷಿ ಕೈಗೊಂಡಿದ್ದು, ಮೈಸೂರಿನ ತೋಟಗಾರಿಕೆ ಇಲಾಖೆಯಿಂದ ಅಣಬೆ ಬೀಜ(ಸ್ಪಾನ್​) ಖರೀದಿಸುತ್ತಾರೆ. 12*18 ಇಂಚಿನ ಪಾಲಿಥಿನ್​ ಕವರ್​ಗಳಲ್ಲಿ ಭತ್ತದ ಹುಲ್ಲಿನ ನಡುವೆ 3&4 ಹಂತಗಳಲ್ಲಿ ಬೀಜಗಳನ್ನು ಹಾಕಿ ಕವರ್​ ಮುಚ್ಚಿಡುತ್ತಾರೆ. ಉದ್ದನೆ ದಾರದಲ್ಲಿ ಮಾಡಿರುವ ಸ್ಟ್ಯಾಂಡ್​ನಲ್ಲಿ ಅದನ್ನು ಇರಿಸುತ್ತಾರೆ. ಅಣಬೆ ಕೃಷಿಗೆ ಕತ್ತಲ ಕೋಣೆಯ ಅಗತ್ಯವಿರುತ್ತದೆ. ಕೋಣೆಯ ನೆಲ ಮತ್ತು ಗೋಡೆಗಳು ಮಣ್ಣಿನಿಂದ ಕೂಡಿರಬೇಕು. ಕಾರಣ ಅಣಬೆ ಬೆಳೆಯಲು ತೇವಾಂಶದ ಹವಾಮಾನ (14&16 ಡಿಗ್ರಿ ಸೆ.) ಅತ್ಯಗತ್ಯ. ಅಣಬೆ ಬೆಳೆಸಲು ಮರದ ಅಥವಾ ಇನ್ಯಾವುದೇ ಲೋಹದ ಸ್ಟಾ$್ಯಂಡ್​ಗಳನ್ನು ಸುನೀಲ್​ ಬಳಸುತ್ತಿಲ್ಲ. ಪ್ಲಾಸ್ಟಿಕ್​ ದಾರದ ನೇತು ಹಾಕುವ ಸ್ಟ್ಯಾಂಡ್​​ಗಳೇ ಸಾಕಾಗುತ್ತವೆ ಎನ್ನುತ್ತಾರೆ ಅವರು. ಇದನ್ನು ನಿರ್ಮಿಸಿಕೊಳ್ಳಲು ಖರ್ಚು ಕೂಡ ಕಡಿಮೆ. ಒಮ್ಮೆ ಬೀಜಗಳನ್ನು ಕವರ್​ನಲ್ಲಿ ಹಾಕಿದ ನಂತರ 20&22 ದಿನಗಳ ಕಾಲ ಬೀಜಗಳಿಗೆ ಬೆಳಕು ತಾಗಬಾರದು. 20 ದಿನಗಳ ನಂತರದ 20 ದಿನಗಳ ಕಾಲ ಅಣಬೆ ಬೆಳೆಯುತ್ತಲೇ ಇರುತ್ತದೆ.

ಗ್ರೀನ್​ ಫಂಗಸ್​ ರೋಗ

ಹವಾಮಾನ ವೈಪರೀತ್ಯದಿಂದಾಗಿ ಅಣಬೆಗೆ ಗ್ರೀನ್​ ಫಂಗಸ್​ (ಪಾಚಿರೋಗ) ತಗಲುತ್ತದೆ. ಬಾವಿಸ್ಟಿನ್​ ಔಷಧವನ್ನು ಸಿರೀಂಜ್​ ಮೂಲಕ ಹಸಿರು ಪಾಚಿಯಾಗಿರುವ ಸ್ಥಳಕ್ಕೆ ನೀಡಿದಲ್ಲಿ ರೋಗ ವಾಸಿಯಾಗುತ್ತದೆ.

ಆರೋಗ್ಯಪೂರ್ಣ ಆಹಾರ

ಅಣಬೆ ರುಚಿಯಷ್ಟೇ ಅಲ್ಲ, ಅತ್ಯುತ್ತಮ ಹಾಗೂ ಆರೋಗ್ಯಪೂರ್ಣ ಆಹಾರವೂ ಹೌದು. ವಿಟಮಿನ್​ ಡಿ ಯುಕ್ತ, ಆ್ಯಂಟಿ ಆಕ್ಸಿಡೆಂಟ್​, ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಕ್ಯಾನ್ಸರ್​ ವಿರುದ್ಧ ಹೋರಾಡಲು, ಆಟೋ ಇಮ್ಮೂನ್​ ಕಾಯಿಲೆಗಳನ್ನು ನಿರ್ವಹಿಸಲು, ಆಯಿಸ್ಟರ್​ ಮಶ್ರೂಮ್​ ಉತ್ತಮ ಔಷಧವಾಗಿ ಪರಿಗಣಿತವಾಗಿದೆ. ಆ್ಯಂಟಿ ಮೈಕ್ರೋಬಿಯಲ್​, ಆ್ಯಂಟಿ ವೈರಲ್​, ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುವ, ಕೆಟ್ಟ ಕೊಲೆಸ್ಟ್ರಾಲ್​ ಮತ್ತು ಟ್ರೆಗ್ಲಿಸರೈಡ್ಸ್​ ಅಂಶ ಕಡಿಮೆ ಗೊಳಿಸುತ್ತದೆ. ಆಯಿಸ್ಟರ್​ ಮಶ್ರೂಮ್​ ಅನ್ನು ಒಣಗಿಸಿ ಪುಡಿ ಮಾಡಿ ಜೋಳದ ರೊಟ್ಟಿ ಜತೆಯಲ್ಲಿ ಸೇವಿಸುತ್ತಾರೆ.

ತಿಂಗಳಿಗೆ 30 ಸಾವಿರ ರೂ. ಆದಾಯ

ಒಂದು ಕೆಜಿ ಬೀಜದಲ್ಲಿ 5&6 ಕೆಜಿ ಅಣಬೆ ಇಳುವರಿ ಪಡೆಯಲು ಸಾಧ್ಯ. ಒಂದರ ನಂತರ ಒಂದರಂತೆ ಬೆಳೆ ತೆಗೆದರೆ ತಿಂಗಳಿಗೆ ಖರ್ಚು ಕಳೆದು ಕನಿಷ್ಠ 30 ಸಾವಿರ ರೂ. ಆದಾಯ ಗಳಿಸಲು ಸಾಧ್ಯವೆನ್ನುತ್ತಾರೆ ಸುನೀಲ್​. ಅಣಬೆ ಕರಾವಳಿ ಭಾಗದ ಜನರ ಅಚ್ಚುಮೆಚ್ಚಿನ ಆಹಾರ. ಮೈಸೂರು ವ್ಯಾಪ್ತಿಯಲ್ಲೂ ಅಣಬೆಯನ್ನು ಆಹಾರವಾಗಿ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಗುಣಮಟ್ಟದ ಅಣಬೆಗೆ ಬೇಡಿಕೆ ಇದ್ದೇಇದೆ. ಸುನೀಲ್​ ಅವರನ್ನು ಸಂಪರ್ಕಿಸಲು: 99648 85050

ಬ್ಯಾಚ್​ ಮೂಲಕ ಬೆಳೆ

ಅಣಬೆ ಕೃಷಿಗಾಗಿ ಮೂರರಿಂದ ನಾಲ್ಕು ದಿನಗಳ ಕಾಲ ಬೆಳಗ್ಗೆ 5ರಿಂದ 9 ಗಂಟೆವರೆಗೆ ದುಡಿದರೆ ಸಾಕು. ನಂತರ 22 ದಿನ ಕೆಲಸವಿಲ್ಲ. ಬೆಳೆ ಬಂದ ಬಳಿಕ ಕಟಾವು ಮಾಡಿ ಮಾರುಕಟ್ಟೆ ಮಾಡುವ ಕಾರ್ಯ ಇರಲಿದೆ. ಸುನೀಲ್​, ಮೂರು ಕೋಣೆಗಳನ್ನು ಮಾಡಿಕೊಂಡು ಒಂದರ ನಂತರ ಒಂದರಂತೆ ಬೆಳೆ ತೆಗೆಯುತ್ತಾರೆ. ಹಾಗಾಗಿ, ಇವರಲ್ಲಿ ಸದಾ ಅಣಬೆ ಸಿಗುತ್ತದೆ. ಅಣಬೆ ಕಟಾವಾದ ಕೂಡಲೇ 200 ಗ್ರಾಂ ಮತ್ತು ಅರ್ಧ ಕೆಜಿ ಪ್ಯಾಕ್​ ಮಾಡಿ ಮಡಿಕೇರಿಯರೆಗೂ ಮಾಲ್​ಗಳು, ದಿನಸಿ ಅಂಗಡಿಗಳಿಗೆ ಬೆಳಗ್ಗೆ 10 ಗಂಟೆಯೊಳಗೆ ಸರಬರಾಜು ಮಾಡುತ್ತಾರೆ. ಯಾಕೆಂದರೆ, ಅಣಬೆ ಆಯಸ್ಸು ಕೇವಲ ಒಂದು ದಿನ ಮಾತ್ರ.