| ಕುಮಾರ್ ಅರಸೀಕೆರೆ 28 ವರ್ಷ
ಮುದ್ರೆಗಳನ್ನು ಯೋಗದ ಅಂಶವೆಂದು ಪರಿಗಣಿಸಲಾಗುತ್ತಿದೆ. ಕೈಯ ಬೆರಳುಗಳನ್ನು ವ್ಯವಸ್ಥಿತ ಭಂಗಿಯಲ್ಲಿ ಜೋಡಿಸುವ ಕ್ರಿಯೆಯೇ ಮುದ್ರೆ. ನಮ್ಮ ದೇಹವು ಪಂಚಭೂತಗಳಿಂದ ರಚನೆಯಾಗಿದೆ. ಕೈಯಲ್ಲಿನ ಐದು ಬೆರಳುಗಳು ಪಂಚಭೂತಗಳನ್ನು ಪ್ರತಿನಿಧಿಸುತ್ತವೆ ಹಾಗೂ ಪ್ರತಿಯೊಂದು ಬೆರಳು ತನ್ನದೇ ಆದ ಶಕ್ತಿ, ಚೈತನ್ಯವನ್ನು ಹೊಂದಿದೆ. ಎಲ್ಲಾ ಬೆರಳುಗಳೂ ಚೇತನದಾಯಕ ಹಾಗೂ ಅವು ದೇಹಕ್ಕೆ ಹೊಸ ಚೈತನ್ಯವನ್ನು ತುಂಬುತ್ತವೆ. ಹೆಬ್ಬೆರಳು ಅಗ್ನಿ ತತ್ವ; ತೋರು ಬೆರಳು ವಾಯು, ಮಧ್ಯದ ಬೆರಳು ಆಕಾಶ; ಉಂಗುರದ ಬೆರಳು ಪೃಥ್ವಿ (ಭೂಮಿ); ಕಿರುಬೆರಳು ವರುಣ (ಜಲತತ್ವ) ಪ್ರತಿನಿಧಿಸುತ್ತವೆ. ಪಂಚಭೂತಗಳನ್ನು ಪ್ರತಿನಿಧಿಸುವ ಹೆಬ್ಬೆರಳಿನ ತುದಿಯನ್ನು ಆಯಾ ಬೆರಳುಗಳ ತುದಿಗೆ ರ್ಸ³ಸಿದಾಗ ಪಂಚತತ್ವಗಳು ಸಮತೋಲನ ಸ್ಥಿತಿಗೆ ಬರುತ್ತವೆ. ಹಠಯೋಗದಲ್ಲಿ ಮುದ್ರಾ ಯೋಗ ಒಂದು ಭಾಗವಾಗಿದೆ. ಮುದ್ರಾ ತೆರಪಿ (ಚಿಕಿತ್ಸೆ) ಎನ್ನುವುದು ಮತ್ತೊಂದು ಅನೌಷಧೀಯ ಚಿಕಿತ್ಸೆಯಾಗಿದ್ದು ಯಾವುದೇ ತೊಂದರೆಯಿಲ್ಲದೆ ಸಹಾಯಮಾಡುತ್ತದೆ.
ಮುಖ್ಯವಾಗಿ ಕೈ ಬೆರಳು ಕಾಲಿನ ಬೆರಳುಗಳ ಹೊರ ವಲಯದಲ್ಲಿ ಚೈತನ್ಯ ಶಕ್ತಿ ಹರಿದು ಹೋಗುತ್ತದೆ. ಈ ಚೈತನ್ಯ ಶಕ್ತಿಯನ್ನು ದೇಹದ ಒಳಕ್ಕೆ ತರಲು ಮುದ್ರೆಗಳು ಸಹಕಾರಿ. ಮುದ್ರೆಗಳು ನರಮಂಡಲವನ್ನು ಸಚೇತನಗೊಳಿಸಿ, ದೇಹದಲ್ಲಿ ಶಕ್ತಿ ಸಂಚಾರ ಸುಗಮಗೊಳಿಸುತ್ತವೆ.
ಕುಳಿತುಕೊಂಡು ಇರುವಾಗಲಾದರೂ, ನಿಂತಾಗ, ಪ್ರಯಾಣಿಸುವಾಗ, ಹಾಗೆಯೇ ಹಾಸಿಗೆಯಲ್ಲಿ ಮಲಗಿರುವಾಗಲೂ ಅಲ್ಲದೆ ಟಿ.ವಿ ವೀಕ್ಷಣೆ ಮಾಡುತ್ತಿರುವಾಗಲೂ ಮುದ್ರೆಗಳನ್ನು ಮಾಡಬಹುದು. ಮುದ್ರೆಯನ್ನು ಎರಡೂ ಕೈಗಳಿಂದ ಮಾಡಿದರೆ ಉತ್ತಮ ಲಾಭವನ್ನು ಪಡೆಯಬಹುದಾಗಿದೆ. ಮುದ್ರೆಗಳನ್ನು ಯಾವುದೇ ಸ್ಥಿತಿಯಲ್ಲೂ ಮಾಡಬಹುದಾದರೂ ವಿಶೇಷವಾಗಿ ಪದ್ಮಾಸನ, ಸ್ವಸ್ತಿಕಾಸನ, ಸುಖಾಸನ ಅಥವಾ ವಜ್ರಾಸನ ಹಾಕಿ ಧ್ಯಾನಾವಸ್ಥೆಯಲ್ಲಿ ಕುಳಿತು ಮಾಡುವುದರಿಂದ ದೇಹಕ್ಕೆ ಹೆಚ್ಚಿನ ಚೈತನ್ಯ ಹಾಗೂ ಮನಸ್ಸಿಗೆ ನೆಮ್ಮದಿ ದೊರಕುತ್ತದೆ.
ಒಂದೊಂದು ಮುದ್ರೆಯನ್ನು ಕನಿಷ್ಠ 15 ರಿಂದ 30 ನಿಮಿಷಗಳವರೆಗೆ ಮಾಡಿದಲ್ಲಿ ವಿಶೇಷ ಫಲ ದೊರಕುವುದು. ಮುದ್ರೆಗಳನ್ನು ಗುರುವಿನ ಮಾರ್ಗದರ್ಶನ, ಸಲಹೆ ಪಡೆದು ಅಭ್ಯಾಸ ಮಾಡಿ.
ಅಪಾನ ಮುದ್ರೆ: ದೇಹದಲ್ಲಿರುವ ಮಲಿನ ವಸ್ತುಗಳ ಸಮರ್ಪಕವಾದ ವಿಸರ್ಜನೆಯನ್ನು ಮುದ್ರೆಗಳ ಮೂಲಕ ಸರಿಪಡಿಸಬಹುದು. ದೇಹದಲ್ಲಿರುವ ವಿಷಕಾರಕ ವಸ್ತುಗಳನ್ನು ತೆಗೆಯುವಲ್ಲಿ ಈ ಮುದ್ರೆ ಸಹಕಾರಿಯಾಗಿದೆ. ದೇಹದ ಶುದ್ಧೀಕರಣವನ್ನು ಈ ಮುದ್ರೆಯ ಮೂಲಕ ಮಾಡಬಹುದು.
ವಿಧಾನ: ಮಧ್ಯದ ಬೆರಳು ಮತ್ತು ಉಂಗುರ ಬೆರಳ ತುದಿಯನ್ನು ಹೆಬ್ಬೆರಳಿನ ತುದಿಗೆ ಸೇರಿಸಬೇಕು. ಉಳಿದ ಎರಡು ಬೆರಳುಗಳು ನೇರವಾಗಿರಲಿ. ಸುಮಾರು 30 ರಿಂದ 45 ನಿಮಿಷಗಳ ಕಾಲ ಈ ಮುದ್ರೆಯನ್ನು ಮಾಡಿದಲ್ಲಿ ಉತ್ತಮ ಆರೋಗ್ಯವನ್ನು ಪಡೆಯಬಹುದು. ಇದರೊಂದಿಗೆ 10 ನಿಮಿಷ ಪ್ರಾಣ ಮುದ್ರೆಯನ್ನು ಸಹ ಮಾಡಬೇಕು. ತುಂಬಾ ವಯಸ್ಸಾದವರು, ಹೊಟ್ಟೆಯ ಕಾಯಿಲೆ ಸಮಸ್ಯೆ ಇದ್ದವರು 10 ನಿಮಿಷಕ್ಕಿಂತ ಹೆಚ್ಚು ಹೊತ್ತು ಅಭ್ಯಾಸ ಮಾಡುವುದು ಬೇಡ. ವಾಂತಿ ಭೇದಿ, ಕಾಲರಾ ಸಮಸ್ಯೆ ಇದ್ದಾಗ ಅಭ್ಯಾಸ ಮಾಡುವುದು ಬೇಡ.
ಪ್ರಯೋಜನಗಳು: ಮಧುಮೇಹ ಕಾಯಿಲೆಯನ್ನು ನಿಯಂತ್ರಿಸಬಹುದು. ಮಲಬದ್ಧತೆ ಹಾಗೂ ಮೂಲವ್ಯಾಧಿ ಸಮಸ್ಯೆಯನ್ನು ನಿವಾರಿಸುವಲ್ಲಿ ಇದು ಸಹಾಯ ಮಾಡುತ್ತದೆ. ಜೀರ್ಣ ಶಕ್ತಿ ಹೆಚ್ಚಿಸುತ್ತದೆ. ದೇಹದ ಜಡತ್ವವನ್ನು ಹೋಗಲಾಡಿಸುತ್ತದೆ. ವಾಂತಿಯ ನಿಯಂತ್ರಣಕ್ಕೂ ಸಹಕಾರಿ. ಊಟ ಆದ ನಂತರ ತಿಂದ ಆಹಾರ ಜೀರ್ಣವಾಗಲು ಈ ಮುದ್ರೆ ಅಭ್ಯಾಸ ಮಾಡಬೇಕು. ಬೆಳಗ್ಗೆ ಎದ್ದ ಕೂಡಲೇ ಮಲ ವಿಸರ್ಜನಾ ಕಾರ್ಯ ಸುಗಮವಾಗಲು ಈ ಅಪಾನ ಮುದ್ರೆಯನ್ನು ಅಭ್ಯಾಸ ಮಾಡಿ.