ದುಡಿಯುವ ವರ್ಗ ಮಾತ್ರವಲ್ಲ, ಮಕ್ಕಳಿಂದ ಹಿರಿಯರವರೆಗೂ ಪ್ರತಿಯೊಬ್ಬರೂ ಒಂದಿಲ್ಲೊಂದು ಒತ್ತಡದಲ್ಲಿ ಜೀವನ ನಡೆಸುತ್ತಿದ್ದಾರೆ. ನಮ್ಮ ಮಗು ಶಾಲೆಯಲ್ಲಿ ಎಲ್ಲರಿಗಿಂತ ಹೆಚ್ಚು ಅಂಕ ಪಡೆಯಬೇಕು, ಓದಿನ ಜತೆಗೆ ಇತರೆ ಚಟುವಟಿಕೆಗಳಲ್ಲೂ ಸೈ ಎನ್ನಿಸಿಕೊಳ್ಳಬೇಕು ಎನ್ನುವ ಪಾಲಕರ ಅತಿಯಾದ ಆಸೆಯಿಂದ ಮಕ್ಕಳು ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಸಂಬಂಧಿಕರ ಮಕ್ಕಳು ಉನ್ನತ ಹುದ್ದೆಯಲ್ಲಿದ್ದಾರೆ; ನಮ್ಮ ಮಕ್ಕಳು ಏನು ಸಾಧನೆ ಮಾಡಿದ್ದಾರೆ ಎಂದು ಹೇಳಿಕೊಳ್ಳ ಬೇಕು ಎಂಬ ತಂದೆತಾಯಂದಿರ ಮೂದಲಿಕೆಯಿಂದಾಗಿ ಈ ಕೆಲಸ ದೊಡ್ಡದು, ಇದು ಚಿಕ್ಕದು ಎಂಬ ಭಾವನೆ ಯುವಕರಲ್ಲಿ ಬೆಳೆಯು ತ್ತಿದೆ. ಉದ್ಯೋಗ ಆಯ್ಕೆಯಲ್ಲೂ ಗೊಂದಲ ಹಾಗೂ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಅವರು ಮನೆ ಕಟ್ಟಿದ್ದಾರೆ ನಾವು ಕಟ್ಟಬೇಕು, ಅವರು ಕಾರು ಕೊಂಡಿದ್ದಾರೆ ನಾವು ಕೊಳ್ಳಬೇಕು. ಹೀಗೆ ತಮಗೆ ಏನು ಬೇಕು, ತಮ್ಮ ಜೀವನದ ಗುರಿ ಏನು ಎಂಬುದನ್ನು ಯೋಚಿ ಸುವ ಬದಲು ಬೇರೆಯವರು ಹಾಗೆ ಬದುಕುತ್ತಿದ್ದಾರೆ. ನಾವು ಅವರಿ ಗಿಂತ ಒಂದು ಪಟ್ಟು ಹೆಚ್ಚು ಹಣವಂತರಾಗಬೇಕು ಎಂಬುದು ಜನರ ಮನಸ್ಥಿತಿಯಾಗಿದೆ. ಈ ಮನೋಭಾವವೇ ನೆಮ್ಮದಿಯನ್ನು ಕಸಿಯು ತ್ತಿದ್ದು, ಸದಾ ಒತ್ತಡದಿಂದ ಜೀವನ ನಡೆಸುವ ಸ್ಥಿತಿಗೆ ದೂಡಿದೆ.
ಹಣವೇ ಯಶಸ್ಸಿನ ಮಾನದಂಡವಲ್ಲ: ಮನುಷ್ಯನಾಗಿ ಹುಟ್ಟಿದ ಮೇಲೆ ಗುರಿ ಇರಬೇಕು, ಆ ಗುರಿ ತಲುಪಲು ಸಾಧನೆ ಮಾಡಬೇಕು. ಹಾಗೆಂದು ಒತ್ತಡಕ್ಕೆ ಒಳಗಾಗಬಾರದು. ಗುರಿ ಸಾಧನೆ ಎಂದರೆ ಕೇವಲ ಹಣ ಸಂಪಾದಿಸುವುದು, ಅಗತ್ಯ ವಸ್ತುಗಳನ್ನು ಕೊಳ್ಳುವುದು ಎಂದಲ್ಲ. ನಾವು ಮಾಡುವ ಕೆಲಸ ಹೆತ್ತವರಿಗೆ, ನಾಡಿಗೆ ಕೀರ್ತಿ ತರುವಂತಿರಬೇಕು. ಇತರರಿಗೆ ಉಪಯೋಗವಾಗುವಂತಿರಬೇಕು. ಇದು ಸಾಧ್ಯವಾಗಲು ಮೊದಲು ಇರುವುದರಲ್ಲಿ ತೃಪ್ತಿಪಡುವುದನ್ನು ರೂಢಿಸಿಕೊಳ್ಳಬೇಕು. ಹೆಚ್ಚು ಶ್ರಮ ಪಡದೆ ಫಲಿತಾಂಶಕ್ಕಾಗಿ ಅತಿಯಾದ ನಿರೀಕ್ಷೆ ಹೊಂದುವುದೂ (ಉದಾಹರಣೆಗೆ ಆರಂಭದಿಂದಲೇ ಓದದೆ, ಪರೀಕ್ಷೆ ಸಮಯದಲ್ಲಿ ಹೆಚ್ಚು ಓದಲು ಪ್ರಯತ್ನಿಸುವುದು, ಹೆಚ್ಚಿನ ಅಂಕ ಬರಲಿ ಎಂದು ಬಯಸುವುದು) ಸಹ ಒತ್ತಡವೇ ಆಗಿದೆ.
ಯಶಸ್ಸು ಗಳಿಸಿದರೆ ಸಂತೋಷವಾಗಿರುತ್ತೇವೆ ಎಂದು ಭಾವಿಸುತ್ತೇವೆ. ಅದು ತಪ್ಪು. ಸಂತೋಷ ಹಾಗೂ ನೆಮ್ಮದಿ ಹೊರಗಿನ ವಸ್ತುಗಳಲ್ಲಿ ಇಲ್ಲ. ಅದು ನಮ್ಮ ಅಂತರಂಗದಲ್ಲಿಯೇ ಇದೆ. ಅದನ್ನು ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಮನುಷ್ಯನಿಗೆ ತೃಪ್ತಿ ಎನ್ನುವುದೇ ಇಲ್ಲ. ಒಂದು ಬೇಡಿಕೆ ಈಡೇರುತ್ತಲೇ ಮತ್ತೊಂದು ಬೇಡಿಕೆ ಯನ್ನು ಹೊಂದುತ್ತೇವೆ. ಹೀಗಾಗಿ ಇರುವುದನ್ನು ಬಿಟ್ಟು ಇಲ್ಲದುದಕ್ಕೆ ಕಾಯುತ್ತ ದಿನ ದೂಡುತ್ತೇವೆ. ಆದರೆ ಆ ನಾಳೆ ಎನ್ನುವುದು ಬರುವುದೇ ಇಲ್ಲ. ಹಾಗಾಗಿ ಇಂದು ಇರುವುದರಲ್ಲಿ ಸಂತೋಷ, ತೃಪ್ತಿಪಡುವುದನ್ನು ಯುವಜನರು ರೂಢಿಸಿಕೊಳ್ಳಬೇಕು. ಹಾಗೆಂದು ಸಾಧನೆ ಮಾಡಬಾರದು ಎಂದರ್ಥವಲ್ಲ. ಸಾಧಿಸಬೇಕು, ಆದರೆ ಅತಿಯಾಸೆ ಹೊಂದಬಾರದು. ‘ಸಾಕು ಸಾಕು ಎನ್ನುವವ ಸಾಹುಕಾರಿ: ಬೇಕು ಬೇಕು ಎನ್ನುವವ ಭಿಕಾರಿ’. ಹಾಗಾಗಿ ಯಾವುದೇ ಫಲಿತಾಂಶ ನಿಮ್ಮ ನಿಯಂತ್ರಣ ದಲ್ಲಿರುವ ರೀತಿಯಲ್ಲಿ ಯೋಚಿಸಿ, ಆಗ ಒತ್ತಡ ಇರುವುದಿಲ್ಲ.
ನಮ್ಮ ತಪ್ಪಿಗೆ ನಾವೇ ಹೊಣೆ: ಜೀವನದಲ್ಲಿ ನಾವು ಎದುರಿಸುವ ಎಲ್ಲಾ ಸಮಸ್ಯೆಗಳಿಗೂ ನಾವೇ ಹೊಣೆಯಾಗಿರುತ್ತೇವೆ. ಅದಕ್ಕಾಗಿ ಮತ್ತೊಬ್ಬರನ್ನು ಹೊಣೆ ಮಾಡಬೇಡಿ. ನೀವು ಸಿಲುಕಿರುವ ಸಮಸ್ಯೆಗೆ ಕಾರಣ ಅರಿತು, ಅದರಿಂದ ಹೊರಬರುವ ಪ್ರಯತ್ನ ಮಾಡಿ. ಅದನ್ನು ಜೀವನದ ಪಾಠ ಎಂದು ತಿಳಿಯಿರಿ. ಪ್ರತಿಯೊಂದು ವಸ್ತು ವಿಚಾರವನ್ನು ಸಕಾರಾತ್ಮಕವಾಗಿ ನೋಡುವುದನ್ನು ರೂಢಿಸಿಕೊಳ್ಳಿ. ನಮ್ಮ ಅಲೋಚನೆ ಹೇಗಿರುತ್ತದೋ, ದೃಷ್ಟಿಯೂ ಅದೇ ರೀತಿ ಇರುತ್ತದೆ. ಹಾಗಾಗಿ ಒಳ್ಳೆಯ ರೀತಿಯಲ್ಲಿ ಯೋಚಿಸಿದರೆ ನೋಡುವ ನೋಟವೂ ಒಳ್ಳೆಯದನ್ನೇ ಬಿಂಬಿಸುತ್ತದೆ. ಅಲೋಚನೆ ಕೆಟ್ಟದ್ದಿದ್ದರೆ ನೋಡುವುದು, ಮಾಡುವುದು ಎಲ್ಲವೂ ಕೆಟ್ಟದಾಗಿಯೇ ಇರುತ್ತದೆ.
ಜೀವನದ ಗುರಿ ಎಂದರೆ ಹಣ ಸಂಪಾದಿಸುವುದು ಎಂದರ್ಥವಲ್ಲ. ನಾವು ಇದ್ದಷ್ಟು ದಿನ ಯಾರಿಗೂ ತೊಂದರೆ ಮಾಡದೆ, ಕಷ್ಟದಲ್ಲಿ ಇರುವವರಿಗೆ ನೆರವಾಗುವುದು. ಹಾಗೆಂದು ಯಾರಿಗಾದರೂ ಹಣ ಕೊಟ್ಟರೆ ಮಾತ್ರ ಅದು ಸಹಾಯ ಎಂದರ್ಥವಲ್ಲ. ನಾವು ಮಾಡುವ ಸಹಾಯ ಮತ್ತೊಬ್ಬರಿಗೆ ಉಪಯೋಗವಾಗಬೇಕು. ಅದರಿಂದ ಹಲವಾರು ಜನರು ಪ್ರೇರಣೆಗೆ ಒಳಗಾಗಬೇಕು. ಈ ನಿಟ್ಟಿನಲ್ಲಿ ನೇತ್ರದಾನ ಶ್ರೇಷ್ಠದಾನವಾಗಿದೆ.
ಮಾದರಿ ನಡೆ: 20-30 ವರ್ಷಗಳ ಹಿಂದೆ ನೇತ್ರಕಸಿ ಮಾಡಬೇಕು ಎಂದರೆ ನೆರೆಯ ಶ್ರೀಲಂಕಾದಿಂದ ಕಾರ್ನಿಯಾಗಳು ಬರುತ್ತಿದ್ದವು. ಅಲ್ಲಿ ಬೌದ್ಧರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಂಗಾಂಗ ದಾನದಿಂದ ಮೋಕ್ಷ ದೊರೆಯುತ್ತದೆ ಎನ್ನುವ ಅವರ ನಂಬಿಕೆ ಅವರ ಮರಣಾನಂತರವೂ ಇತರರ ಬಾಳು ಬೆಳಗಿಸುತ್ತಿದೆ. ಈ ವಿಷಯ ತಿಳಿದ ವರನಟ ಡಾ.ರಾಜ್ಕುಮಾರ್ ಅವರು ನಾರಾಯಣ ನೇತ್ರಾಲಯದಲ್ಲಿ ಡಾ. ರಾಜ್ಕುಮಾರ್ ಐ ಬ್ಯಾಂಕ್ ಉದ್ಘಾಟಿಸುವುದರ ಜತೆಗೆ ನೇತ್ರದಾನದ ಪ್ರತಿಜ್ಞೆ ಸ್ವೀಕರಿಸಿದರು. ಇಂದು ಅವರ ಇಡೀ ಕುಟುಂಬ ನೇತ್ರದಾನಕ್ಕೆ ಹೆಸರು ನೋಂದಾಯಿಸಿಕೊಂಡಿದೆ. ಇತ್ತೀಚಿಗೆ ನಮ್ಮನ್ನು ಅಗಲಿದ ನಟ ಪುನೀತ್ ರಾಜ್ಕುಮಾರ್ ಅವರು ತಂದೆ ರಾಜ್ಕುಮಾರ್ ಹಾಗೂ ತಾಯಿ ಪಾರ್ವತಮ್ಮ ಅವರ ಹಾದಿಯಲ್ಲಿ ಸಾಗಿ, ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ನಾಲ್ವರ ಬಾಳಿಗೆ ಬೆಳಕಾಗಿದ್ದಾರೆ. ಜತೆಗೆ, ಅವರು ನಿಸ್ವಾರ್ಥ ಸೇವೆಯ ಮೂಲಕ ಸಮಾಜಕ್ಕೆ ನೀಡಿರುವ ಕೊಡುಗೆ ಮಾದರಿಯಾದದ್ದು. ಯುವಜನರು ಇಂತಹ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕಿದೆ.
(ಲೇಖಕರು ನಾರಾಯಣ ನೇತ್ರಾಲಯದ ಮುಖ್ಯಸ್ಥರು)