‘ಮನಸ್ಸೊಂದಿದ್ದರೆ ಮಾರ್ಗವು ಉಂಟು’ ಎಂಬ ಮಾತು ಕೇಳುತ್ತೀರಿ ಅಲ್ಲವೆ? ಆದರೆ ಇದರ ಬಗ್ಗೆ ಅಷ್ಟೆಲ್ಲಾ ಸೀರಿಯಸ್ ಆಗಿ ನೀವು ವಿಚಾರ ಮಾಡಿರಲಿಕ್ಕಿಲ್ಲ. ಈ ಮಾತನ್ನು ಸಾಧನೆಯ ಮೂಲಕ ನಿಜ ಮಾಡಿ ತೋರಿಸಿದ್ದಾನೆ ಪುಣೆಯ 9 ವರ್ಷದ ಪುಟಾಣಿ. ತನ್ನ ಗುರಿ ಸಾಧನೆಗೆ ದಿನವೂ 100 ಮಹಡಿ ಏರುತ್ತಿದ್ದ ಈತ!
ನೀವು ಹೆಚ್ಚೆಂದರೆ ಎಷ್ಟು ಕಿ.ಮೀ ಎತ್ತರದ ಗುಡ್ಡ ಏರಬಲ್ಲಿರಿ? ಒಂದು ಕಿ.ಮೀ ಏರುವಷ್ಟರಲ್ಲಿಯೇ ಸುಸ್ತೋ ಸುಸ್ತು ಎಂದು ಎಂದು ಏದುಸಿರು ಬಿಡುತ್ತೀರಲ್ಲವೆ? ಅದರಲ್ಲಿಯೂ ಅಂಕುಡೊಂಕು, ಹಳ್ಳ ಕೊಳ್ಳ ಜಾಗವಿದ್ದರಂತೂ ಏರುವ ಮೊದಲೇ ಸಾಧ್ಯವೇ ಇಲ್ಲ ಅಂದುಕೊಳ್ಳುತ್ತೀರಿ. ಆದರೆ ಮನಸ್ಸು, ಛಲ ಇದ್ದರೆ ಯಾವುದೂ ಕಷ್ಟವೇ ಅಲ್ಲ ಎಂದು ಪುಣೆಯ ಒಂಬತ್ತು ವರ್ಷದ ಬಾಲಕ ಆಫ್ರಿಕಾದ ಅತಿ ಎತ್ತರದ ಶಿಖರವಾಗಿರುವ ಕಿಲಿಮಂಜಾರೋ ಪರ್ವತ ಏರಿ ತೋರಿಸಿದ್ದಾನೆ!
ಮೂರನೇ ಕ್ಲಾಸ್ನಲ್ಲಿ ಕಲಿಯುತ್ತಿರುವ ಅದ್ವೈತ್ ಭರ್ತಿಯಾ ಎಂಬ ಪುಟಾಣಿ ಸಮುದ್ರಮಟ್ಟದಿಂದ 5,885 ಮೀಟರ್ ಅಂದರೆ ಸುಮಾರು ಆರು ಕಿ.ಮೀ ಎತ್ತರ ಇರುವ ಈ ಪರ್ವತವನ್ನು ಏಳು ದಿನಗಳಲ್ಲಿ ಏರುವ ಮೂಲಕ ದಾಖಲೆ ನಿರ್ವಿುಸಿದ್ದಾನೆ. ಜಗತ್ತಿನ ಏಳು ಖಂಡಗಳಲ್ಲಿ ಇರುವ ಏಳು ಅತ್ಯಂತ ಎತ್ತರದ ಶಿಖರಗಳಲ್ಲಿ ಇದೂ ಒಂದು.
ಮೊದಲಿನಿಂದಲೂ ಸಾಹಸ ಪ್ರವೃತ್ತಿ ಇರುವ ಈ ಬಾಲಕನಿಗೆ ಪರ್ವತ ಏರುವುದೆಂದರೆ ತುಂಬಾ ಖುಷಿಯಾಗಿತ್ತಂತೆ. ಅದಕ್ಕಾಗಿಯೇ ಅವನು ಎರಡು ತಿಂಗಳ ಕಠಿಣ ತರಬೇತಿಯನ್ನೂ ಪಡೆದ. ‘ದಿನವೂ ಒಂದು ಗಂಟೆ ಈಜುತ್ತಿದ್ದೆ. ಹೃದಯವನ್ನು ಚೆನ್ನಾಗಿ ಇಟ್ಟುಕೊಳ್ಳಲು ಫುಟ್ಬಾಲ್, ಕ್ರಿಕೆಟ್, ಟೆನ್ನಿಸ್ ಆಡುತ್ತಿದ್ದೆ. ಅಷ್ಟೇ ಅಲ್ಲದೇ ದಿನವೂ 100 ಮಹಡಿಗಳನ್ನು ಏರಿ, ಇಳಿಯುತ್ತಿದ್ದೆ. ಇದರಿಂದ ನನಗೆ ಪರ್ವತ ಏರಲು ತುಂಬಾ ಸಹಕಾರಿಯಾಯಿತು’ ಎನ್ನುತ್ತಾನೆ ಅದ್ವೈತ್.
ಅದ್ವೈತ್ ಜತೆ ಒಂದಿಷ್ಟು ಸಾಹಸಿಗರು ಪರ್ವತಾರೋಹಣದಲ್ಲಿ ಭಾಗವಹಿಸಿದ್ದರು. ಅದ್ವೈತ್ ತಾಯಿ ಕೂಡ ಸಾಹಸಿ. ಅವರೂ ಮಗನ ಜತೆ ಹೋಗಿದ್ದರು. ಆದರೆ ಅವರಿಗೆ ಹಾಗೂ ಇನ್ನು ಕೆಲವು ಪರ್ವತಾರೋಹಿಗಳಿಗೆ ತುಂಬಾ ಎತ್ತರಕ್ಕೆ ಹೋಗಲು ಸಾಧ್ಯವಾಗದೇ ವಾಪಸಾದರು. ಆದರೆ ಅದ್ವೈತ್ ಇದನ್ನು ಏರಿ ಶಹಭಾಸ್ಗಿರಿ ಗಿಟ್ಟಿಸಿಕೊಂಡಿದ್ದಾನೆ.
ಪರ್ವತ ಏರುವ ಬಗ್ಗೆ ತನ್ನ ಅನುಭವ ಹಂಚಿಕೊಂಡಿರುವ ಈ ಪೋರ, ‘ಪರ್ವತಾರೋಹಣ ಸಕತ್ ಖುಷಿಕೊಟ್ಟಿತು. ನಾವು ಡೇರೆಗಳಲ್ಲಿ ವಾಸಿಸುತ್ತಿದ್ದೆವು. ಕೆಲವು ಕಡೆಗಳಲ್ಲಿ ಮರದ ಮನೆಗಳಲ್ಲಿ ವಾಸಿಸುತ್ತಿದ್ದೆವು. ಹಿಮಕ್ಕೆ ಮೈ ಒಡ್ಡುವುದು ಒಂಥರಾ ಹಿತ ಎನಿಸುತ್ತಿತ್ತು. ಏಳು ದಿನಗಳಲ್ಲಿ ಚಾರಣ ಮುಗಿಸಿದೆ. ಮನಸ್ಸು ಮಾಡಿದ್ದರೆ ಇನ್ನೂ ಬೇಗನೇ ಮುಗಿಸಬಹುದಿತ್ತು. ಆದರೆ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ, ನಡುನಡುವೆ ಸಾಕಷ್ಟು ವಿರಾಮ ತೆಗೆದುಕೊಂಡು ಆರಾಮಾಗಿ ಹೋಗಿದ್ದರಿಂದ ಒಂದು ವಾರವಾಯಿತು’ ಎಂದಿದ್ದಾನೆ. ‘ಮೈನಸ್ 21 ಡಿಗ್ರಿ ಉಷ್ಣಾಂಶ ಇತ್ತು. ಮೇಲಕ್ಕೆ ಹೋದಂತೆಲ್ಲಾ ಆಮ್ಲಜನಕದ ಕೊರತೆಯನ್ನು ಎದುರಿಸಬೇಕಾಯಿತು. ತುಂಬಾ ಮಂದಿ ಆರೋಹಣವನ್ನು ಅರ್ಧಕ್ಕೆ ಬಿಟ್ಟುಬಿಟ್ಟರು. ಆದರೆ ನಾನು ಮೇಲಕ್ಕೆ ಏರಿದೆ’ ಎನ್ನುತ್ತಾನೆ.
ಈ ಪುಟಾಣಿ ಇಷ್ಟೆಲ್ಲಾ ಸಾಹಸ ಮಾಡಿ, ಜಗತ್ಪ್ರಸಿದ್ಧಿಯಾದರೂ, ಅವನ ಪರ್ವತಾರೋಹಣದ ಆಸೆ ಇನ್ನೂ ನಿಂತಿಲ್ಲ. ಯೂರೋಪಿನ ಅತ್ಯುನ್ನತ ಶಿಖರವಾದ ಮೌಂಟ್ ಎವೆರೆಸ್ಟ್ ಏರುವುದಕ್ಕಾಗಿ ತಯಾರಿ ನಡೆಸಿದ್ದಾನೆ. ಈಗಲಾದರೂ ಒಪು್ಪವಿರಾ ‘ಮನಸ್ಸೊಂದಿದ್ದರೆ ಮಾರ್ಗವು ಉಂಟು’ ಎಂದು...