ಅಮ್ಮ ಎಂದರೆ ಏನೋ ಹರುಷವು 
ಅಂಕಣ

ಅಮ್ಮ ಎಂದರೆ ಏನೋ ಹರುಷವು

ವಿಶ್ವಾಸ್​ ಎನ್​ ಜೋಳದಾಳು
ತಾಯಿಯ ಪ್ರೀತಿ ಎಂದರೆ ಅದು ಬತ್ತದ ತೊರೆ. ಅವಳ ತ್ಯಾಗ ಅಳೆಯಲಾಗದ ಸಾಗರ. ಈ ಬಾರಿಯ ಅಮ್ಮನ ದಿನದ ಹಿನ್ನೆಲೆಯಲ್ಲಿ, ನಾಡಿನ ವಿವಿಧ ಕ್ಷೇತ್ರಗಳ ಸಾಧಕರು ತಮ್ಮ ಬದುಕಿನ ಯಶೋಗಾಥೆಯ ಹಿಂದಿರುವ ‘ಮಾತೃಶಕ್ತಿ’ಯನ್ನು ಇಲ್ಲಿ ಸ್ಮರಿಸಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ಸಂಸ್ಕಾರಯುತ ಬೆಳವಣಿಗೆಯಲ್ಲಿ ತಾಯಿಯ ಪಾತ್ರವನ್ನು ಮೆಲುಕು ಹಾಕಿದರೆ, ಬಹುಮುಖ ಪ್ರತಿಭೆಯ ನಟಿ ಶ್ರುತಿಯವರು ತಮ್ಮ ಇಬ್ಬರು ಅಮ್ಮಂದಿರ ಜತೆಗಿನ ಭಾವನಾತ್ಮಕ ಸಂಬಂಧವನ್ನಿಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಉದ್ಯಮ ಲೋಕದ ಯುವ ಸಾರಥಿ, ಜೆರೋಧಾ ಸಂಸ್ಥಾಪಕ ನಿತಿನ್ ಕಾಮತ್ ಅವರು ತಮ್ಮ ತಾಯಿ ರೇವತಿ ಕಾಮತ್ ಅವರ ಬಗ್ಗೆ ವಿವಿಧೆಡೆ ಹಂಚಿಕೊಂಡಿರುವ ವಿಷಯಗಳು ಇಲ್ಲಿವೆ. ಸಾಧಕರ ಬಾಳಿಗೆ ಬೆಳಕಾದ ಆ ಅಮ್ಮಂದಿರ ಅಪರೂಪದ ಕಥನಗಳು ನಿಮ್ಮ ಮುಂದೆ...

ತಾಯಿ ಎಂದರೆ ಮೌಲ್ಯಗಳನ್ನು ಬೆಳೆಸುವ ಶಕ್ತಿ

ಮಾನವನ ಬದುಕಿನಲ್ಲಿ ತಾಯಿಯ ಸ್ಥಾನವನ್ನು ಯಾವ ಪದಗಳಿಂದಲೂ ಸಂಪೂರ್ಣವಾಗಿ ವರ್ಣಿಸಲಾಗದು. ತಾಯಿ ಎಂದರೆ ಕೇವಲ ಜನ್ಮ ನೀಡುವವಳಲ್ಲ; ಮೌಲ್ಯಗಳನ್ನು ಬೆಳೆಸುವ ಶಕ್ತಿ, ಬದುಕಿಗೆ ದಿಕ್ಕು ತೋರುವ ದೀಪ, ಸಂಕಷ್ಟಗಳಲ್ಲಿ ಧೈರ್ಯ ತುಂಬುವ ಸಾನ್ನಿಧ್ಯ. ನನ್ನ ಬದುಕಿನಲ್ಲಿ ಅಂಥ ಪ್ರೇರಣಾಶಕ್ತಿಯಾಗಿ ನೆಲೆಸಿದವರು ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರು. ಮೂಡಬಿದಿರೆಯ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ಅವರು ಬಾಲ್ಯದಲ್ಲೇ ಧರ್ಮ, ಸಂಸ್ಕೃತಿ ಮತ್ತು ಶಿಸ್ತಿನ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದರು. ಜೈನಶಾಸ್ತ್ರಗಳ ಅಧ್ಯಯನ, ವ್ರತ-ಉಪವಾಸಗಳ ಆಚರಣೆ, ಸಾತ್ವಿಕ ಜೀವನಶೈಲಿ ಇವೆಲ್ಲವೂ ಅವರ ವ್ಯಕ್ತಿತ್ವಕ್ಕೆ ವಿಶೇಷ ಮೆರುಗನ್ನು ನೀಡಿದ್ದವು. ತಂದೆ-ತಾಯಿಯ ಸಂಸ್ಕಾರ ಹಾಗೂ ಗುರುಗಳ ಮಾರ್ಗದರ್ಶನದಿಂದ ಅವರು ಆಧ್ಯಾತ್ಮಿಕ ಚಿಂತನೆಗಳಲ್ಲಿ ಆಳವಾದ ಆಸಕ್ತಿ ಬೆಳೆಸಿಕೊಂಡಿದ್ದರು. ಧರ್ಮಸ್ಥಳಕ್ಕೆ ಬಂದ ನಂತರ ಅವರ ಜೀವನವೇ ಒಂದು ತಪಸ್ಸಾಗಿ ಮಾರ್ಪಟ್ಟಿತು. ಧರ್ಮಸ್ಥಳದ ಮನೆ ಎಂದರೆ ಸಾವಿರಾರು ಜನರ ಸಂಚಾರ, ಅನ್ನದಾಸೋಹ, ಧಾರ್ಮಿಕ ಕಾರ್ಯಕ್ರಮಗಳು, ಅತಿಥಿ ಸತ್ಕಾರ ಇವೆಲ್ಲವೂ ನಿರಂತರ ನಡೆಯುವ ಕಾರ್ಯಗಳು. ಈ ಎಲ್ಲಾ ಕಾರ್ಯಗಳ ಹಿಂದಿನ ಮೌನ ಶಕ್ತಿ ಮಾತೃಶ್ರೀಯವರೇ ಆಗಿದ್ದರು. ಅವರು ಎಲ್ಲರಿಗೂ ಪ್ರೀತಿಯಿಂದ ದೊಡ್ಡಮ್ಮ ಆಗಿದ್ದರು. ಮನೆಯವರಿಗಷ್ಟೇ ಅಲ್ಲ, ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬರಿಗೂ ಮಮತೆಯ ತಾಯಿಯಾಗಿದ್ದರು. ನಮ್ಮ ಜೀವನದಲ್ಲಿ ಸತ್ಯ, ಶಿಸ್ತು, ಸೇವಾಭಾವ ಮತ್ತು ವಿನಯವನ್ನು ಬೆಳೆಸಿದವರು ಅಮ್ಮ. ಸಮಾಜದ ನೋವಿಗೆ ಸ್ಪಂದಿಸಬೇಕು, ಧರ್ಮವನ್ನು ಬದುಕಿನಲ್ಲಿ ಅಳವಡಿಸಬೇಕು ಎಂಬ ಪಾಠವನ್ನು ಅವರು ತಮ್ಮ ಬದುಕಿನ ಮೂಲಕವೇ ಕಲಿಸಿದರು. ಅವರ ಸಾತ್ವಿಕತೆ ಮತ್ತು ಅನುಕಂಪ ನಮಗೆ ಸದಾ ಮಾರ್ಗದರ್ಶಕವಾಗಿದೆ.
ಧರ್ಮ, ಸಾಹಿತ್ಯ ಮತ್ತು ಕಲೆಗಳ ಬಗ್ಗೆ ಅವರಿಗೆ ವಿಶೇಷ ಅಭಿರುಚಿ ಇತ್ತು. ಹಲವಾರು ಗ್ರಂಥಗಳ ಪ್ರಕಟಣೆಗೆ ಪ್ರೋತ್ಸಾಹ ನೀಡಿದರು. ಮಹಿಳಾ ಲೇಖಕಿಯರನ್ನು ಉತ್ತೇಜಿಸಲು 'ಮಾತೃಶ್ರೀ ರತ್ನಮ್ಮ ಹೆಗ್ಗಡೆ ಗ್ರಂಥ ಬಹುಮಾನ' ಯೋಜನೆಯನ್ನು ಸ್ಥಾಪಿಸಿದ್ದು ಅವರ ದೂರದೃಷ್ಟಿಗೆ ಸಾಕ್ಷಿಯಾಗಿದೆ. ಧರ್ಮಸ್ಥಳದ ಬಾಹುಬಲಿ ಶಿಲ್ಪದ ನಿರ್ಮಾಣಕ್ಕೂ ಅವರ ಸಂಕಲ್ಪವೇ ಮೂಲ ಪ್ರೇರಣೆ. ಅಮ್ಮಂದಿರ ದಿನದ ಈ ಸಂದರ್ಭದಲ್ಲಿ ತಾಯಂದಿರನ್ನು ಸ್ಮರಿಸುವುದು ನಮ್ಮೆಲ್ಲರ ಧನ್ಯತೆ. ಅವರ ಜೀವನವು ಒಂದು ಕುಟುಂಬಕ್ಕೆ ಸೀಮಿತವಾಗಿರಲಿಲ್ಲ; ಅದು ಸಮಾಜಕ್ಕೆ ದಾರಿ ತೋರಿದ ಮೌಲ್ಯಪೂರ್ಣ ಬದುಕಾಗಿತ್ತು. ತಾಯಿಯ ಪ್ರೀತಿ, ತ್ಯಾಗ ಮತ್ತು ಆಶೀರ್ವಾದವೇ ವ್ಯಕ್ತಿಯ ಬದುಕಿನ ನಿಜವಾದ ಸಂಪತ್ತು ಎಂಬುದನ್ನು ಮಾತೃಶ್ರೀಯವರ ಜೀವನ ನಮಗೆ ತಿಳಿಸಿಕೊಡುತ್ತದೆ.
— ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀಕ್ಷೇತ್ರ ಧರ್ಮಸ್ಥಳ.

ನನ್ನ ಜೀವನದ ಅತಿದೊಡ್ಡ ಸಪೋರ್ಟ್ ಸಿಸ್ಟಮ್

ಜೀವನದಲ್ಲಿ ನಾವು ಎಷ್ಟೇ ಯಶಸ್ಸು ಕಂಡರೂ, ನಮಗೆ ಸರಿಯಾದ ಹಾದಿ ತೋರಿಸುವ ಒಬ್ಬ ವ್ಯಕ್ತಿ ಬೇಕಾಗುತ್ತದೆ. ನನ್ನ ಪಾಲಿಗೆ ಆ ಶಕ್ತಿ ನನ್ನ ತಾಯಿ ರೇವತಿ ಕಾಮತ್. ಅವರು ಕೇವಲ ನನ್ನ ತಾಯಿಯಲ್ಲ, ನನ್ನ ಜೀವನದ ಅತಿದೊಡ್ಡ ಸಪೋರ್ಟ್ ಸಿಸ್ಟಮ್ ಮತ್ತು ಸ್ಫೂರ್ತಿಯ ಚಿಲುಮೆ.
ನಾನು ಜೆರೋಧಾ ಆರಂಭಿಸುವುದಕ್ಕೂ ಮೊದಲು, ಅಂದರೆ 2000ರ ದಶಕದ ಆರಂಭದಲ್ಲಿ ಸ್ಟಾಕ್ ಮಾರ್ಕೆಟ್‌ನಲ್ಲಿ ವಿಪರೀತ ನಷ್ಟ ಅನುಭವಿಸಿದ್ದೆ. ಕೈಲಿದ್ದ ಹಣವೆಲ್ಲ ಖಾಲಿಯಾಗಿ, ಏನು ಮಾಡಬೇಕೆಂದು ತೋಚದ ಪರಿಸ್ಥಿತಿಯಲ್ಲಿದ್ದೆ. ಆ ಸಮಯದಲ್ಲಿ ಸಮಾಜದ ದೃಷ್ಟಿಯಲ್ಲಿ ನಾನು ಸೋತವನಾಗಿದ್ದೆ. ಆದರೆ ನನ್ನ ತಾಯಿ ನನ್ನನ್ನು ಪ್ರಶ್ನಿಸಲಿಲ್ಲ. ‘ನಿನಗೆ ನಿನ್ನ ಕೆಲಸದ ಮೇಲೆ ನಂಬಿಕೆ ಇದೆಯೇ? ಹಾಗಿದ್ದರೆ ಧೈರ್ಯವಾಗಿ ಮುಂದುವರಿ’ ಎಂದು ಬೆಂಬಲವಾಗಿ ನಿಂತರು. ಅವರ ಆ ಒಂದು ಮಾತು ಅಂದು ನನಗೆ ನೀಡಿದ ಧೈರ್ಯವೇ ಇಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಕಾರಣವಾಯಿತು.
ನನ್ನ ಜೀವನದ ಅತಿದೊಡ್ಡ ಪಾಠವೆಂದರೆ ನನ್ನ ತಾಯಿ ಕ್ಯಾನ್ಸರ್ ವಿರುದ್ಧ ನಡೆಸಿದ ಹೋರಾಟ. ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾದಾಗ ನಾವೆಲ್ಲರೂ ಆತಂಕಕ್ಕೊಳಗಾಗಿದ್ದೆವು. ಆದರೆ ಅವರು ಮಾತ್ರ ಅಚಲವಾಗಿದ್ದರು. ಚಿಕಿತ್ಸೆಯ ಸಮಯದಲ್ಲಿ ಅವರು ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಆದರೂ ಅವರು ಎಂದೂ ಮುಖ ಚಿಕ್ಕದು ಮಾಡಲಿಲ್ಲ. ನಗುನಗುತ್ತಲೇ ಆ ಕಾಯಿಲೆಯನ್ನು ಎದುರಿಸಿದರು. ಅವರ ಮನೋಸ್ಥೈರ್ಯವನ್ನು ನೋಡಿದಾಗ ನನಗೆ ಅನಿಸಿದ್ದು ಏನೆಂದರೆ, ‘ಜೀವನದಲ್ಲಿ ಯಾವುದೇ ಸಮಸ್ಯೆ ಬಂದರೂ ಅದನ್ನು ಎದುರಿಸುವ ರೀತಿ ನಮ್ಮ ಕೈಯಲ್ಲೇ ಇರುತ್ತದೆ’ ಎಂದು. ಅವರ ಆ ಹೋರಾಟವೇ ನನ್ನನ್ನು ಆರೋಗ್ಯ ಮತ್ತು ಫಿಟ್ನೆಸ್ ಬಗ್ಗೆ ಇಷ್ಟು ಗಂಭೀರವಾಗಿ ಯೋಚಿಸುವಂತೆ ಮಾಡಿತು.
ನಮ್ಮ ತಾಯಿ ಒಬ್ಬ ವೀಣಾ ವಾದಕಿ. ಅವರ ಜೀವನಶೈಲಿಯೇ ಬಹಳ ಶಿಸ್ತಿನಿಂದ ಕೂಡಿದೆ. ಇಂದು ನಮಗೆ ಹಣ, ಹೆಸರು ಎಲ್ಲವೂ ಇರಬಹುದು. ಆದರೆ ನನ್ನ ತಾಯಿ ಇಂದಿಗೂ ಅದೇ ಹಳೆಯ ಸರಳತೆಯನ್ನು ಉಳಿಸಿಕೊಂಡಿದ್ದಾರೆ. ಅವರಿಗೆ ಅಬ್ಬರದ ಬದುಕು ಇಷ್ಟವಿಲ್ಲ. ಅವರಿಗೆ ಬೇಕಿರುವುದು ಶಾಂತಿ ಮತ್ತು ನೆಮ್ಮದಿ ಮಾತ್ರ. ‘ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮ ಬೇರುಗಳನ್ನು ಮರೆಯಬಾರದು’ ಎಂಬುದನ್ನು ಅವರು ಮಾತಿನಲ್ಲಿ ಹೇಳಿಕೊಡಲಿಲ್ಲ, ಬದಲಾಗಿ ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾರೆ. ನಾವು ಬೆಳೆಯುವಾಗ ಅವರು ನಮಗೆ ಕಲಿಸಿದ ಶಿಸ್ತು ಮತ್ತು ಹಣದ ಮೌಲ್ಯ ಇಂದು ಉದ್ಯಮ ನಡೆಸುವಾಗ ನಮಗೆ ಬಹಳ ಸಹಾಯ ಮಾಡುತ್ತಿದೆ. ಅನಗತ್ಯ ಖರ್ಚು ಮಾಡಬಾರದು ಮತ್ತು ಪ್ರಾಮಾಣಿಕತೆಯಿಂದ ಇರಬೇಕು ಎನ್ನುವ ಪಾಠ ನಮಗೆ ಮನೆಯಿಂದಲೇ ಸಿಕ್ಕಿದೆ. ಅವರು ಒಬ್ಬ ಶಿಕ್ಷಕಿಯಾಗಿದ್ದರಿಂದ, ಪ್ರತಿಯೊಂದು ವಿಷಯವನ್ನೂ ವಿವರವಾಗಿ ಮತ್ತು ತಾಳ್ಮೆಯಿಂದ ಅರ್ಥೈಸಿಕೊಳ್ಳುವುದನ್ನು ನಾವು ಅವರಿಂದಲೇ ಕಲಿತಿದ್ದೇವೆ.
ಜೆರೋಧಾದ ಯಶಸ್ಸಿನ ಹಿಂದೆ ತಾಂತ್ರಿಕತೆ ಅಥವಾ ಮಾರುಕಟ್ಟೆಯ ಜ್ಞಾನ ಎಷ್ಟು ಕೆಲಸ ಮಾಡಿದೆಯೋ, ಅದಕ್ಕಿಂತ ಹೆಚ್ಚಾಗಿ ನನ್ನ ತಾಯಿ ನೀಡಿದ ನೈತಿಕ ಬೆಂಬಲ ಮತ್ತು ಸಂಸ್ಕಾರ ಕೆಲಸ ಮಾಡಿದೆ. ಅವರೇ ನನ್ನ ಜೀವನದ ರಿಯಲ್ ಹೀರೋ.
— ನಿತಿನ್ ಕಾಮತ್, ಜೆರೋಧಾ ಸಂಸ್ಥಾಪಕ.

ನನಗೆ ಇಬ್ಬರು ದೇವರು

ಡಬಲ್ ಧಮಾಕಾ ನನಗೆ. ಸಾಮಾನ್ಯವಾಗಿ ಎಲ್ಲರಿಗೂ ಒಬ್ಬ ತಾಯಿ ಸಿಗುವುದೇ ಪುಣ್ಯ. ಆದರೆ, ನನಗೆ ಇಬ್ಬರು ತಾಯಂದಿರು ಸಿಕ್ಕಿದ್ದಾರೆ. ನಾನು ಇನ್ನೆಷ್ಟು ಪುಣ್ಯ ಮಾಡಿದ್ದೇನೆ? ಯಾರು ನನ್ನನ್ನು ಹೆತ್ತ ತಾಯಿ ಅಂತ ಕೇಳುವ ಹಾಗೆ ಅವರಿಬ್ಬರೂ ಯಾವತ್ತಿಗೂ ನಡೆದುಕೊಳ್ಳಲೇ ಇಲ್ಲ. ಅಷ್ಟು ಪ್ರೀತಿ ನೀಡಲು ಒಂದು ಹೆಣ್ಣಿಗೆ ಹೇಗೆ ಸಾಧ್ಯ? ದೇವರು ಎಲ್ಲ ಕಡೆ ಇರಲು ಆಗುವುದಿಲ್ಲ, ಹೀಗಾಗಿ ತಾಯಂದಿರನ್ನು ಸೃಷ್ಟಿಸುತ್ತಾನೆ ಎಂಬ ಮಾತಿದೆ. ಅದು ನನ್ನ ವಿಷಯದಲ್ಲಿ ಅಕ್ಷರಶಃ ಸತ್ಯ. ನನಗೆ ಒಬ್ಬರಲ್ಲ, ಇಬ್ಬರು ದೇವರು. ರಾಧಮ್ಮ ಮತ್ತು ರುಕ್ಮಿಣಿ ಅಮ್ಮ - ಹುಟ್ಟುವಾಗ ಇಬ್ಬರಿಗೂ ಐದು ನಿಮಿಷ ವ್ಯತ್ಯಾಸವಷ್ಟೇ. ಅವರಲ್ಲಿ ದೊಡ್ಡವರು ಯಾರು, ಚಿಕ್ಕವರು ಯಾರು ಅಂತ ಕಂಡುಹಿಡಿಯಲು ನಮಗೇ ಹಲವು ವರ್ಷ ಬೇಕಾಯಿತು. ಬಾಲ್ಯದಲ್ಲಿ ಅವರನ್ನು ಕರೆಯುವಾಗ ಒಬ್ಬರನ್ನು ದೊಡ್ಡಮ್ಮ, ಇನ್ನೊಬ್ಬರನ್ನು ಚಿಕ್ಕಮ್ಮ ಅಂತ ಕರೆಯುತ್ತಿದ್ದೆವು. ಆದರೆ, ಚಿಕ್ಕಮ್ಮ ಎನ್ನುವುದು ಇಬ್ಬರಿಗೂ ಇಷ್ಟವಾಗುತ್ತಿರಲಿಲ್ಲ. ಆ ಗೊಂದಲವನ್ನು ಬಾಲ್ಯದಲ್ಲಿ ಒಬ್ಬರನ್ನು ಅಮ್ಮ ಮತ್ತೊಬ್ಬರನ್ನು ದೊಡ್ಡಮ್ಮ ಅಂತ ಕರೆಯುವ ಮೂಲಕ ನಿವಾರಿಸಿದ್ದು ನಾನೇ ಅಂತ ಹೇಳುತ್ತಿರುತ್ತಾರೆ.
ಇಬ್ಬರು ತಾಯಂದಿರೂ ನನಗೆ ಹಾಲುಣಿಸಿದ್ದಾರೆ. ಇಬ್ಬರೂ ನನ್ನ ಪಾಲಿನ ಶಕ್ತಿ. ಅಮ್ಮ ನನಗೆ ಕೇವಲ ಅಮ್ಮ ಮಾತ್ರವಲ್ಲ; ಗೆಳತಿ, ಗುರು, ನನ್ನ ನಿರ್ದೇಶಕಿ, ಮೆಂಟರ್ ಎಲ್ಲವೂ ಆಗಿದ್ದರು. ದೊಡ್ಡಮ್ಮ ಮನೆಯಲ್ಲಿ ಎಲ್ಲರನ್ನೂ ನೋಡಿಕೊಳ್ಳುತ್ತಿದ್ದರೆ, ಅಮ್ಮ ಯಾವಾಗಲೂ ನನ್ನ ಜೊತೆ ಶೂಟಿಂಗ್‌ಗೆ ಬರುತ್ತಿದ್ದರು. ಇಬ್ಬರೂ ರಂಗಭೂಮಿ ಹಿನ್ನೆಲೆಯಿದ್ದವರು. 9ನೇ ವಯಸ್ಸಿನಲ್ಲಿ ಗುಬ್ಬಿ ನಾಟಕ ಕಂಪನಿ ಸೇರಿ, ಲವ-ಕುಶ ಪಾತ್ರದಲ್ಲಿ ನಟಿಸುತ್ತಿದ್ದರು. ಹೀಗಾಗಿ ಶೂಟಿಂಗ್ ಸಮಯದಲ್ಲಿ ನಾನು ಆಕ್ಟಿಂಗ್ ಮಾಡುವಾಗ ತಿದ್ದುತ್ತಿದ್ದರು. ನನ್ನ ವೃತ್ತಿಜೀವನದಲ್ಲಿ ಅವರೂ ಪ್ರಮುಖ ಪಾತ್ರ ವಹಿಸಿದ್ದರು. ಅಣ್ಣ ಶರಣ್ ಮತ್ತು ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಬೇಕು ಅಂತ ನಾಟಕ ಕಂಪನಿ ಬಂದ್ ಮಾಡಿ ಅಪ್ಪ ನಮ್ಮನ್ನೆಲ್ಲ ಬೆಂಗಳೂರಿಗೆ ಕರೆತಂದರು. ಆ ಸಮಯದಲ್ಲಿ ಹೆಚ್ಚು ಹಣ ಇರಲಿಲ್ಲ. ಕೊನೆಗೆ ಅಮ್ಮನ ತಾಳಿ ಮಾತ್ರ ಉಳಿದಿತ್ತು. ಆಗ ಅಪ್ಪ, "ಇದೊಂದು ಮಾತ್ರ ಉಳಿದಿದೆ. ಇದನ್ನು ಮಾರಿ ಹಣ ತರುತ್ತೇನೆ. ಅದು ಖರ್ಚಾಗುವವರೆಗೆ ಬೆಂಗಳೂರಿನಲ್ಲಿರೋಣ. ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ಈ ಹಣ ಖರ್ಚಾಗುವಷ್ಟರಲ್ಲಿ ನಿಮಗೆ ಅವಕಾಶ ಸಿಗುತ್ತದೆ. ಇಲ್ಲದಿದ್ದರೆ ವಾಪಸ್ ಹೋಗಿ ಮತ್ತೆ ನಾಟಕ ಪ್ರಾರಂಭಿಸೋಣ" ಅಂದರು. ಅದೇ ಸಮಯದಲ್ಲಿ ನನಗೆ ‘ಶ್ರುತಿ’ ಚಿತ್ರದಲ್ಲಿ ಅವಕಾಶ ದೊರೆಯಿತು. ನಾನು ಮತ್ತು ಅಣ್ಣ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವಲ್ಲಿ ಅಪ್ಪ ಮತ್ತು ಅಮ್ಮಂದಿರ ಹೋರಾಟವೂ ದೊಡ್ಡದಿದೆ.
— ಶ್ರುತಿ ಕೃಷ್ಣ, ಹಿರಿಯ ನಟಿ.