ಅಂಕಣ

ಎಕ್ಸಾಂ ಟೆನ್ಷನ್​ಗೂ ಮೋದಿ ಮದ್ದು: ಜ.20 ಪರೀಕ್ಷಾ ಪೇ ಚರ್ಚಾ 3.0

ನವರಿ ಅರ್ಧ ಭಾಗ ಮುಗಿದೇ ಹೋಯ್ತು. ನಿಮ್ಮಲ್ಲಿ ಕೆಲವರಿಗೆ ಈಗಾಗಲೇ ಪರೀಕ್ಷೆಯ ಟೆನ್ಷನ್ ಶುರುವಾಗಿರಬೇಕಲ್ಲವೆ? ‘ಓದು ಓದು, ಪರೀಕ್ಷೆ ಬಂತು’ ಎಂದು ಅಪ್ಪ-ಅಮ್ಮ ಗದರಿಸ್ತಾ ಇರಬೇಕಲ್ಲವೆ?

‘ನಾನು ಮೊದಲಿನಿಂದಲೂ ಓದುತ್ತಾ ಬಂದಿದ್ದೇನಪ್ಪ, ನನಗೇನು ಟೆನ್ಷನ್ನೇ ಇಲ್ಲಾ’ ಅನ್ನುವವರಲ್ಲಿ ನೀವೂ ಒಬ್ಬರಾಗಿರಲಿಕ್ಕೆ ಸಾಕು. ಆದರೂ ಅವ್ಳು ನನಗಿಂತ ಜಾಸ್ತಿ ಓದಿಬಿಟ್ಟಿದ್ದರೆ....? ಅವನಿಗೆ ಹೋದ ಸಲ ಆ ವಿಷಯದಲ್ಲಿ ಒಂದು ಮಾರ್ಕ್ ಹೆಚ್ಚಿಗೆ ಬಂದಿತ್ತು, ಈ ಸಲ ನಾನು ಅವನಿಗಿಂತ ಜಾಸ್ತಿ ತೆಗೆಯೋದು ಹೇಗೆ....? ಪರೀಕ್ಷೆ ಬರೆಯುವಾಗ ಮರೆತು ಹೋದರೆ? ಔಟ್ ಆಫ್ ಸಿಲೇಬಸ್ ಪ್ರಶ್ನೆ ಕೇಳಿಬಿಟ್ಟರೆ? ಹೀಗೆ... ಫೇಲ್ ಆಗೋರಿಗೆ ಪಾಸ್ ಆಗಬೇಕು ಎನ್ನೋ ಟೆನ್ಷನ್, ಪಾಸ್ ಆಗೋರಿಗೆ ಫಸ್ಟ್ ಕ್ಲಾಸ್ ಬರಬೇಕು ಎನ್ನೋ ಟೆನ್ಷನ್, ಫಸ್ಟ್ ಕ್ಲಾಸ್ ಬರೋರಿಗೆ ಡಿಸ್ಟಿಂಕ್ಷನ್, ಡಿಸ್ಟಿಂಕ್ಷನ್ ಬರೋರಿಗೆ ರ್ಯಾಂಕ್, ರ್ಯಾಂಕ್ ಬರೋರಿಗೆ ಔಟ್ ಆಫ್ ಔಟ್.... ಅಬ್ಬಬ್ಬಾ... ಈ ಟೆನ್ಷನ್ ಅನ್ನೋದು ಒಂದಾ... ಎರಡಾ...

ಪರೀಕ್ಷೆಗೆ ಸಂಬಂಧಿಸಿದಂತೆ ನಿಮ್ಮ ಹಾಗೂ ನಿಮ್ಮ ಪಾಲಕರ ಟೆನ್ಷನ್​ಗಳನ್ನು ದೂರ ಮಾಡಲು ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ನಿಮ್ಮ ಜತೆ ಮಾತನಾಡಲಿದ್ದಾರೆ, ಪರೀಕ್ಷೆಗೆ ಸಂಬಂಧಿಸಿದಂತೆ ಮಕ್ಕಳಲ್ಲಿ ಮೂಡಬಹುದಾದ ಎಲ್ಲಾ ಪ್ರಶ್ನೆಗಳಿಗೆ ಅವರು ‘ಪರೀಕ್ಷಾ ಪೇ ಚರ್ಚಾ’ದ ಮೂಲಕ ಉತ್ತರಿಸಲಿದ್ದಾರೆ.

ಏನಿದು ಪರೀಕ್ಷಾ ಪೇ ಚರ್ಚಾ?: ‘ಪರೀಕ್ಷೆ ಪೇ ಚರ್ಚಾ’ ಎಂದರೆ ಪರೀಕ್ಷೆಗೆ ಸಂಬಂಧಿಸಿದಂತೆ ಮಕ್ಕಳಲ್ಲಿ ಹಾಗೂ ಪಾಲಕರಲ್ಲಿ ಮೂಡಬಹುದಾದ ಸಂದೇಹಗಳ ಕುರಿತು ರ್ಚಚಿಸುವುದು. 2018ರಿಂದ ಪ್ರತಿವರ್ಷ ಇದನ್ನು ನಡೆಸಲಾಗುತ್ತಿದೆ. ಈ ಬಾರಿಯದ್ದು ಮೂರನೇ ಆವೃತ್ತಿ (3.0).

ಹೇಗೆ ಆಯ್ಕೆ ನಡೆಯುತ್ತದೆ?: ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಶಾಲೆಗಳಿಗೆ ಹಾಗೂ ಮಾಧ್ಯಮಗಳ ಮೂಲಕ ಮೊದಲೇ ತಿಳಿಸಲಾಗುತ್ತದೆ. ಅದರಲ್ಲಿ ಭಾಗವಹಿಸಲು ಇಚ್ಛಿಸುವವರಿಗಾಗಿ ವೆಬ್​ಸೈಟ್ ಲಿಂಕ್ ನೀಡಲಾಗುತ್ತದೆ. ಅಲ್ಲಿಗೆ ಹೋಗಿ ವಿದ್ಯಾರ್ಥಿ ತನ್ನ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು. ಅದರಲ್ಲಿ ನಾಲ್ಕು ವಿಷಯಗಳನ್ನು ನೀಡಲಾಗುತ್ತದೆ (ಈ ವಿಷಯಗಳು ಪ್ರತಿವರ್ಷವೂ ಭಿನ್ನಭಿನ್ನವಾಗಿರುತ್ತವೆ). ಪ್ರತಿಯೊಂದಕ್ಕೂ ಒಂದೂವರೆ ಸಾವಿರ ಶಬ್ದಗಳಷ್ಟು ಉತ್ತರಿಸಿ ‘ಸೆಂಡ್’ ಬಟನ್ ಕ್ಲಿಕ್ ಮಾಡಿದರೆ ಆಯಿತು. ನಂತರ ಉತ್ತಮ ಎನಿಸುವ ಬರಹಗಳು ಯಾವುವು ಎಂದು ಸೆಲೆಕ್ಟ್ ಮಾಡಿ ಅಂಥ ವಿದ್ಯಾರ್ಥಿಗಳಿಗೆ ಪ್ರಧಾನಿ ಜತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ.

ಈ ವರ್ಷ ಕೇಳಿದ್ದ ಪ್ರಶ್ನೆ ಎಂದರೆ: ನಿಮ್ಮ ಶೈಕ್ಷಣಿಕ ಜೀವನದಲ್ಲಿ ಇಷ್ಟು ಮುಂದಕ್ಕೆ ಬರಲು ನಿಮಗೆ ಯಾರು ಪ್ರೇರಣೆ, ಅವರಿಗೆ ನೀವೇಕೆ ಅಷ್ಟೊಂದು ಮಹತ್ವ; ನಿಮ್ಮ ಜೀವನದ ಗುರಿಯೇನು?; ನೀವು ಏನನ್ನು ವೃತ್ತಿಯಾಗಿ ಮುಂದುವರಿಸಲು ಬಯಸುತ್ತೀರಿ, ಕಾರಣವೇನು?; ಆದರ್ಶ ಎನಿಸುವ ಪರೀಕ್ಷಾ ವ್ಯವಸ್ಥೆ ಹೇಗಿರಬೇಕು ಹಾಗೂ ಬರೀ ಓದು ಓದು ಎನ್ನದೇ ಪಠ್ಯೇತರ ಚಟುವಟಿಕೆಗಳಲ್ಲೂ ನಿಮ್ಮನ್ನು ನೀವು ಹೇಗೆ ತೊಡಗಿಸಿಕೊಂಡಿದ್ದೀರಿ? ಇವುಗಳಿಗೆ ಅಲ್ಲಿಯೇ ಟಿಪ್ಪಣಿ ಬರೆಯಲು ಅವಕಾಶ ನೀಡಲಾಗಿತ್ತು. ಕೆಲವು ವಿದ್ಯಾರ್ಥಿಗಳು ಖುದ್ದು ಇಂಗ್ಲಿಷ್​ನಲ್ಲಿ ಬರೆದು ಕಳುಹಿಸಿದರೆ, ಇನ್ನು ಕೆಲವು ಶಾಲೆಗಳಲ್ಲಿ ಶಿಕ್ಷಕರೇ ವಿದ್ಯಾರ್ಥಿಗಳಿಗೆ ಇಂಗ್ಲಿಷ್​ನಲ್ಲಿ ಭಾಷಾಂತರ ಮಾಡಲು ಸಹಾಯ ಮಾಡಿ ವಿಷಯವನ್ನು ಅಪ್​ಲೋಡ್ ಮಾಡಿದ್ದರು. ದೇಶದ ವಿವಿಧ ಶಾಲೆಗಳ ಲಕ್ಷಾಂತರ ಮಕ್ಕಳು ಈ ವಿಷಯಗಳ ಬಗ್ಗೆ ಬರೆದು ಕಳಹಿಸಿದ್ದರು. ಆ ಪೈಕಿ ಎರಡು ಸಾವಿರಕ್ಕೂ ಅಧಿಕ ಮಕ್ಕಳನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟಕದಿಂದ 42 ಮಕ್ಕಳ ಆಯ್ಕೆ

ಕರ್ನಾಟಕದ ವಿವಿಧ ಶಾಲೆಗಳಿಂದ ಒಟ್ಟು 42 ಮಕ್ಕಳು ಆಯ್ಕೆಯಾಗಿದ್ದಾರೆ. ಇವರೆಲ್ಲರೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರವಾಗಿ ಪ್ರಶ್ನೆ ಕೇಳಲು ಬೆಂಗಳೂರಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಂದರೆ, ದೆಹಲಿಯಲ್ಲಿ ಕಾರ್ಯಕ್ರಮ ನಡೆಯುತ್ತದೆ. ದೇಶದ ಕೆಲವು ಭಾಗಗಳಲ್ಲಿ ಆ ಭಾಗದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಕೇಂದ್ರ ಇರುತ್ತದೆ. ಅಲ್ಲಿ ವೀಡಿಯೊ ಕಾನ್​ಫರೆನ್ಸ್ ವ್ಯವಸ್ಥೆ ಮಾಡಲಾಗುತ್ತದೆ. ಒಂದೊಂದು ರಾಜ್ಯದ ಮಕ್ಕಳ ಜತೆ ಈ ಕಾನ್​ಫರೆನ್ಸ್ ಮೂಲಕ ಪ್ರಧಾನಿ ಮಾತನಾಡುತ್ತಾರೆ. ಮಕ್ಕಳು ಶಿಕ್ಷಣಕ್ಕೆ ಸಂಬಂಧಿಸಿದಂತೆ ಪ್ರಧಾನಿಯವರಿಗೆ ಅಲ್ಲಿಯೇ ನೇರವಾಗಿ ಪ್ರಶ್ನೆ ಕೇಳಬಹುದು. ಇದೇ ಮೊದಲ ಬಾರಿಗೆ ಮಕ್ಕಳ ಜತೆ ಅವರ ಪಾಲಕರಿಗೂ ಅವಕಾಶ ಕಲ್ಪಿಸಲಾಗಿದೆ. ಭಾಗವಹಿಸಿದ ಮಕ್ಕಳಿಗೆ ಡಿಜಿಟಲ್ ಸರ್ಟಿಫಿಕೇಟ್ ನೀಡಲಾಗುತ್ತದೆ.

ದಿನಾಂಕ: ಜ.20 (ಸೋಮವಾರ)

ವೇಳೆ: ಬೆಳಗ್ಗೆ 11ರಿಂದ

ಎಲ್ಲಿ: ದೆಹಲಿ

ನೇರಪ್ರಸಾರ: ದೂರದರ್ಶನ ಮತ್ತು ಯೂಟ್ಯೂಬ್