ಅಂಕಣ

ಮೋದಿ, ಇಂದಿರಾ ಗಾಂಧಿ ಮತ್ತು ಡಾ.ಸ್ನೇಹ್ ಭಾರ್ಗವ...

ಲೇಖಕರು 'ವಿಜಯವಾಣಿ' ಡೆಪ್ಯೂಟಿ ಎಡಿಟರ್​

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಜುಲೈ 9ರಂದು ನಾಗ್ಪುರದಲ್ಲಿ ಆರೆಸ್ಸೆಸ್ ಅಗ್ರ ನಾಯಕ ಮೋರೋಪಂತ ಪಿಂಗಳೆ ಅವರ ಕುರಿತ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಪಿಂಗಳೆಯವರಿಗೆ 75 ವರ್ಷವಾದಾಗ ವೃಂದಾವನದಲ್ಲಿ ನಡೆದ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಿದ ಪ್ರಸಂಗವನ್ನು ಉಲ್ಲೇಖಿಸಿದ ಭಾಗವತ್, ಆಗ ಪಿಂಗಳೆಯವರು ಮಾಡಿದ ಭಾಷಣದ ಕೆಲ ಸಾಲುಗಳನ್ನು ಉದ್ಧರಿಸಿದರು.

‘ನನಗೆ 75 ವರ್ಷವಾದ ಸಂದರ್ಭದಲ್ಲಿ ನೀವು ನನಗೆ ಈ ಶಾಲನ್ನು ಹೊದೆಸಿದ್ದೀರಿ. ಇದರ ಅರ್ಥವೇನೆಂದು ನನಗೆ ಗೊತ್ತು. 75ನೇ ವಯಸ್ಸಿನಲ್ಲಿ ಹೆಗಲ ಮೇಲೆ ಶಾಲು ಹೊದೆಸಿದರೆಂದರೆ, ನಿನಗೆ ವಯಸ್ಸಾಗಿದೆ, ಬದಿಗೆ ಸರಿ ಎಂದು ಸೂಚ್ಯವಾಗಿ ಹೇಳಿದಂತೆ’ ಎಂದು ಪಿಂಗಳೆ ಹೇಳಿದ್ದರು. ಆದರೆ ಭಾಗವತ್ ಮಾತು ರಾಜಕೀಯ ತಿರುವನ್ನು ಪಡೆದುಕೊಂಡಿತು. ಭಾಗವತ್ ಹೇಳಿದ್ದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಕುರಿತಾಗಿದೆ ಎಂದು ಕಾಂಗ್ರೆಸ್ ಮತ್ತಿತರ ಪಕ್ಷದ ಕೆಲ ನಾಯಕರು ವ್ಯಾಖ್ಯಾನಿಸಿದರು. ಅಂದಹಾಗೆ, ಮೋದಿ ಅವರಿಗೆ ಇದೇ ಸೆಪ್ಟೆಂಬರ್ 17ಕ್ಕೆ 75 ವರ್ಷವಾಗುತ್ತದೆ (ಜನನ: ಸೆ.17, 1950). ವಿಪಕ್ಷಗಳ ಈ ವ್ಯಾಖ್ಯಾನವನ್ನು ಆರೆಸ್ಸೆಸ್ ಖಡಾಖಂಡಿತವಾಗಿ ತಿರಸ್ಕರಿಸಿತು.

‘ಭಾಗವತ್ ಅವರು ಪಿಂಗಳೆಯವರ ಮಾತನ್ನು ತಮ್ಮ ಭಾಷಣದ ಮಧ್ಯೆ ಉಲ್ಲೇಖಿಸಿದ್ದಾರಷ್ಟೇ. ಅದು ಅವರ ಹೇಳಿಕೆಯಲ್ಲ. ಪಿಂಗಳೆಯವರ ಅನೇಕ ಹೇಳಿಕೆಗಳನ್ನು ಭಾಗವತರು ಆ ವೇಳೆ ಪ್ರಸ್ತಾಪಿಸಿದ್ದಾರೆ’ಎಂದು ಸಂಘ ಸ್ಪಷ್ಟನೆ ನೀಡಿತು. ಖುದ್ದು ಭಾಗವತ್ ಕೂಡ ತಾವು ಆ ಅರ್ಥದಲ್ಲಿ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್​ನ ಜೈರಾಮ್ ರಮೇಶ್, ಪವನ್ ಖೇರಾ ಹಾಗೂ ಶಿವಸೇನೆ (ಉದ್ಧವ್ ಬಣ)ದ ಸಂಜಯ್ ರಾವುತ್ ಮುಂತಾದವರು ಭಾಗವತ್ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಮೋದಿ ನಿವೃತ್ತಿ ಬಗ್ಗೆ ಕಟಕಿಯಾಡಿದರು. ಇಷ್ಟು ಮಾತ್ರವಲ್ಲ, ಮಹಾರಾಷ್ಟ್ರ ಭೇಟಿ ಸಂದರ್ಭದಲ್ಲಿ ನಾಗ್ಪುರದ ಆರೆಸ್ಸೆಸ್ ಪ್ರಧಾನ ಕಾರ್ಯಾಲಯಕ್ಕೆ ಮೋದಿ ಹೋದಾಗಲೂ ವಿಪಕ್ಷಗಳಿಂದ ಟೀಕಾಸ್ತ್ರಗಳು ಬಂದಿದ್ದವು. ಸಮಕಾಲೀನ ರಾಜಕಾರಣವನ್ನು ಅವಲೋಕಿಸಿದರೆ, ಮೋದಿಯವರಷ್ಟು ಬಹುರ್ಚಚಿತ ಮತ್ತೊಬ್ಬ ನಾಯಕ ಕಾಣಸಿಗುವುದಿಲ್ಲ.

ಮೋದಿ ಮಾಡಿದ್ದೆಲ್ಲ ಸರಿ ಎನ್ನುವವರು ಒಂದೆಡೆಯಾದರೆ, ಮೋದಿಯ ಎಲ್ಲ ನಡೆಯಲ್ಲೂ ತಪ್ಪು ಹುಡುಕುವವರು ಇನ್ನೊಂದು ಕಡೆ. ಆರ್ಥಿಕ ನೀತಿಯಿಂದ ಹಿಡಿದು ಆಡಳಿತಾತ್ಮಕ ನಿರ್ಣಯಗಳವರೆಗೆ ಎಲ್ಲದರಲ್ಲೂ ಇದನ್ನು ಗಮನಿಸಬಹುದು. ಇದೇನೇ ಇದ್ದರೂ, ಸದ್ಯದ ಮಟ್ಟಿಗೆ ದೇಶದ ರಾಜಕಾರಣದಲ್ಲಿ ಮೋದಿ ಜನಾಕರ್ಷಣೆಯ ನಾಯಕ ಎಂಬುದನ್ನು ಅವರ ವಿರೋಧಿಗಳೂ ಒಪು್ಪತ್ತಾರೆ. ಚುನಾವಣೆಗಳ ಸಂದರ್ಭದಲ್ಲಿ ಬಿರುಗಾಳಿಯಂತೆ ಸಂಚರಿಸಿ ಪಕ್ಷದ ಮತಬುಟ್ಟಿ ತುಂಬಿಸುವಲ್ಲಿ ಮೋದಿ ಎತ್ತಿದ ಕೈ. ಲೋಕಸಭೆ ಮಾತ್ರವಲ್ಲ, ರಾಜ್ಯ ವಿಧಾನಸಭೆಗಳ ಪ್ರಚಾರಕ್ಕೂ ಮೋದಿ ಬರಬೇಕೆಂದು ಆಯಾ ರಾಜ್ಯದ ಬಿಜೆಪಿಯವರು ಅಪೇಕ್ಷಿಸುತ್ತಾರೆ. ಕಾಂಗ್ರೆಸ್​ನ ರಾಹುಲ್ ಗಾಂಧಿಯವರು ಮೋದಿಗೆದುರಾಗಿ ವರ್ಚಸ್ಸು ಬೆಳೆಸಿಕೊಳ್ಳಲು ಶ್ರಮಹಾಕುತ್ತಿದ್ದಾರಾದರೂ ಯಶಸ್ಸು ಇನ್ನೂ ಕೈಗೆಟುಕಿಲ್ಲ. 2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ 2024ರಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳ ಸ್ಥಾನಗಳ ಸಂಖ್ಯೆಯಲ್ಲಿ ಕುಸಿತವಾಗಿರುವುದು ನಿಜವಾದರೂ, ಇಷ್ಟರಮಟ್ಟಿಗಾದರೂ ಗೆಲ್ಲುವಲ್ಲಿ ಮೋದಿ ಜಾದೂ ಇದೆಯೆಂಬುದನ್ನು ಅಲ್ಲಗಳೆಯಲಾಗದು.

2029ರಲ್ಲಿಯೂ ಮೋದಿ ನಾಯಕತ್ವವೇ ಇರುತ್ತದೆಯೆಂದು ಕಳೆದ ಲೋಕಸಭಾ ಚುನಾವಣೆ ಪ್ರಚಾರ ಸಂದರ್ಭದಲ್ಲೇ ಅಮಿತ್ ಷಾ ಹೇಳಿದ್ದರು. ಇದೀಗ ಭಾಗವತ್ ಹೇಳಿಕೆಯ ಹಿನ್ನೆಲೆಯಲ್ಲಿ ವಿಪಕ್ಷಗಳು ಮೋದಿ ನಿವೃತ್ತಿ ಬಗ್ಗೆ ಪುಕಾರೆಬ್ಬಿಸಿದಾಗ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮುಂತಾದವರು ಸಹ 2029ರಲ್ಲಿಯೂ ಮೋದಿಯದೇ ನೇತೃತ್ವವೆಂದು ಹೇಳಿಕೆ ನೀಡಿದ್ದಾರೆ. ಮುಂದೆ ಏನಾಗುತ್ತದೆಂದು ಕಾದುನೋಡೋಣ. ಈಗಲೇ ಏನೂ ಷರಾ ಬರೆಯಲಾಗದು. ಇನ್ನು, ಇದೇ ಜುಲೈ 25ಕ್ಕೆ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ದಾಖಲೆಯೊಂದನ್ನು ನಿರ್ವಿುಸಿದರು. ಭಾರತದಲ್ಲಿ ಸತತವಾಗಿ ಅತಿಹೆಚ್ಚು ಅವಧಿಗೆ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ವಿಚಾರದಲ್ಲಿ ಮೋದಿಯವರು ಇಂದಿರಾ ಗಾಂಧಿಯನ್ನು ಮೀರಿಸಿದ್ದಾರೆ.

ಜುಲೈ 25ಕ್ಕೆ ಮೋದಿ ಪ್ರಧಾನಿಯಾಗಿ ಒಟ್ಟು 4,078 ದಿನಗಳಾದವು. ಇಂದಿರಾ ಗಾಂಧಿಯವರು 1966ರ ಜನವರಿ 24ರಿಂದ 1977ರ ಮಾರ್ಚ್ 24ರ ವರೆಗೆ ಒಟ್ಟಾರೆಯಾಗಿ 4,077 ದಿನಗಳ ಕಾಲ ಪ್ರಧಾನಿ ಹುದ್ದೆಯಲ್ಲಿದ್ದರು. ಭಾರತದಲ್ಲಿ ಅತಿ ದೀರ್ಘಾವಧಿಗೆ ಸತತವಾಗಿ ಪ್ರಧಾನಿ ಹುದ್ದೆಯಲ್ಲಿದ್ದ ಹೆಗ್ಗಳಿಕೆ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಸಲ್ಲುತ್ತದೆ. 1947ರ ಆಗಸ್ಟ್ 15ರಿಂದ 1964ರ ಮೇ 27ರವರೆಗೆ ಅವರು ಸತತವಾಗಿ ಅಧಿಕಾರದಲ್ಲಿದ್ದರು. ಅಂದರೆ ಒಟ್ಟಾರೆ 16 ವರ್ಷ 286 ದಿನಗಳು. ಸತತವಾಗಿ ಮೂರು ಲೋಕಸಭೆ ಚುನಾವಣೆಗಳಲ್ಲಿ ತಮ್ಮ ಪಕ್ಷಗಳನ್ನು ಗೆಲುವಿನತ್ತ ನಡೆಸುವ ವಿಚಾರದಲ್ಲಿಯೂ ಮೋದಿ ನೆಹರುರನ್ನು ಸರಿಗಟ್ಟಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮುಖ್ಯಸ್ಥರಾಗಿಯೂ ಮೋದಿ ದೀರ್ಘಾವಧಿಯಿಂದ ಇದ್ದಾರೆ. ಅವರು 2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು, ನಂತರ 2014ರಲ್ಲಿ ಪ್ರಧಾನಿಯಾಗುವವರೆಗೂ ಸಿಎಂ ಆಗಿ ಅಧಿಕಾರದಲ್ಲಿದ್ದರು.

2002, 2007 ಹಾಗೂ 2012ರಲ್ಲಿ ಗುಜರಾತಿನಲ್ಲಿ ಬಿಜೆಪಿಯನ್ನು ಜಯದತ್ತ ಮುನ್ನಡೆಸಿದ ಮೋದಿ, 2014, 2019 ಹಾಗೂ 2024ರಲ್ಲಿ ಲೋಕಸಭೆಯಲ್ಲಿ ಎನ್​ಡಿಎ ಮೈತ್ರಿಕೂಟದ ಗೆಲುವಿನಲ್ಲಿ ಪ್ರಧಾನ ಭೂಮಿಕೆ ನಿಭಾಯಿಸಿದರು. ಈ ಮೂಲಕ ಭಾರತದ ಎಲ್ಲ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳ ಪೈಕಿ ಪಕ್ಷದ ಮುಖ್ಯಸ್ಥರಾಗಿ ಸತತ ಆರು ಚುನಾವಣೆಗಳಲ್ಲಿ ಗೆದ್ದ ನಾಯಕ ಎಂಬ ದಾಖಲೆಗೂ ಮೋದಿ ಭಾಜನರಾಗಿದ್ದಾರೆ. ಅತಿಹೆಚ್ಚು ಕಾಲ ಕಾರ್ಯನಿರ್ವಹಿಸಿದ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಹೆಗ್ಗಳಿಕೆ ಕೂಡ ಮೋದಿಯದು.

*****

ವೈದ್ಯಕೀಯ ವೃತ್ತಿಯಲ್ಲಿ ಅನಿರೀಕ್ಷಿತ ಸನ್ನಿವೇಶಗಳಿಗೆ ಸದಾ ಮುಖಾಮುಖಿಯಾಗುತ್ತ ಇರಬೇಕಾಗುತ್ತದೆ. ದೈನಂದಿನ ಕೆಲಸ ಮುಗಿಸಿ ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ, ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತರಬಹುದು. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದ ವ್ಯಕ್ತಿ ದಿಢೀರನೆ ಯಾವುದೋ ಕಾರಣಕ್ಕೆ ಮರಣಿಸಬಹುದು. ಇನ್ನೇನು ಬದುಕುವುದೇ ಇಲ್ಲ ಎಂಬ ಸ್ಥಿತಿಯಲ್ಲಿದ್ದ ವ್ಯಕ್ತಿ ಪವಾಡಸದೃಶವಾಗಿ ಬದುಕಿಬಿಡಬಹುದು... ಇವೆಲ್ಲ ವೈದ್ಯವೃತ್ತಿಯಲ್ಲಿ ಇರುವವರಿಗೆ ಎದುರಾಗುವ ಅನುಭವಗಳು. ಆದರೆ, ದೆಹಲಿಯ ಅಖಿಲ ಭಾರತ ವೈದ್ಯಕೀಯ ಸಂಸ್ಥೆ(ಏಮ್ಸ್​)ಯ ಮೊದಲ ಮಹಿಳಾ ಮುಖ್ಯಸ್ಥೆ ಎಂಬ ಹೆಗ್ಗಳಿಕೆಯ ಡಾ. ಸ್ನೇಹ್ ಭಾರ್ಗವ ಅವರಿಗೆ ಮೊದಲ ದಿನವೇ ಆದ ಅನುಭವ ಮಾತ್ರ ಬೆಟ್ಟದಷ್ಟು ವಿಷಾದವನ್ನು ತಂದಿತ್ತಿತು. ಕನಸುಮನಸಿನಲ್ಲೂ ಊಹಿಸಿರದ ಸನ್ನಿವೇಶಕ್ಕೆ ಅಂದು ಸಾಕ್ಷಿಯಾಗಬೇಕಾಯಿತು.

ಡಾ.ಸ್ನೇಹ್ ಅವರನ್ನು ಏಮ್ಸ್​ ನಿರ್ದೇಶಕಿಯಾಗಿ ನೇಮಿಸುವ ಪ್ರಸ್ತಾವಕ್ಕೆ 1984ರ ಅಕ್ಟೋಬರ್ ಮೂರನೆಯ ವಾರದ ಹೊತ್ತಿಗೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅನುಮೋದನೆ ನೀಡಿದ್ದರು. ಏಮ್ಸ್​ನಂಥ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯನ್ನು ಮುನ್ನಡೆಸುವ ಅವಕಾಶ ದಕ್ಕುವುದು ಸುಲಭವಲ್ಲ. ದೇಶದ ವೈದ್ಯಕೀಯ ವಲಯದಲ್ಲಿ ದೆಹಲಿಯ ಏಮ್್ಸ ತನ್ನದೇ ಆದ ಮಹತ್ವ ಪಡೆದಿದ್ದು, 1956ರಲ್ಲಿ ಸಂಸತ್ ಕಾನೂನಿನ ಮೂಲಕ ಇದನ್ನು ಸ್ಥಾಪಿಸಲಾಗಿದೆ. ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನದಲ್ಲಿ ಬರುವ ಇದು ಸ್ವಾಯತ್ತ ಸ್ಥಾನಮಾನ ಹೊಂದಿದೆ.

ಅಂದು 1984ರ ಅಕ್ಟೋಬರ್ 31. ಆ ದಿನ ಬೆಳಗ್ಗೆ 9 ಗಂಟೆ ಸುಮಾರಿಗೆ, ಡಾ.ಸ್ನೇಹ್ ಭಾರ್ಗವ ಅವರ ನೇಮಕವನ್ನು ಸ್ಥಿರೀಕರಿಸುವ ಕುರಿತ ಸಭೆ ಏಮ್ಸ್​ನಲ್ಲಿ ನಡೆಯುತ್ತಿತ್ತು. ಅದೇ ವೇಳೆಗೆ, ಪ್ರಧಾನಿ ಇಂದಿರಾ ಅವರನ್ನು ಏಮ್ಸ್​ನ ಕ್ಯಾಷುಯಲಿಟಿ ವಿಭಾಗದಲ್ಲಿ ದಾಖಲಿಸಲಾಗಿದೆ ಎಂಬ ಸುದ್ದಿ ಬಂತು. ಸಾಮಾನ್ಯವಾಗಿ ಪ್ರಧಾನಿಯಂಥ ಗಣ್ಯರನ್ನು ಆಸ್ಪತ್ರೆಗೆ ಕರೆತರುವ ಸಂದರ್ಭವಿದ್ದಲ್ಲಿ ಮೊದಲೇ ಮಾಹಿತಿ ಇರುತ್ತದೆ. ಆದರೆ ಇಲ್ಲಿ ಯಾವುದೇ ಪೂರ್ವಮಾಹಿತಿ ಇರಲಿಲ್ಲ. ಹೀಗಾಗಿ ಏನೋ ನಡೆಯಬಾರದ್ದು ನಡೆದಿರಬಹುದೇ ಎಂಬ ಅನುಮಾನ ವೈದ್ಯರಲ್ಲಿ ಮೂಡಿತ್ತು. ನಿಜಕ್ಕೂ ಅಲ್ಲಿ ದೊಡ್ಡ ಅನಾಹುತವೇ ನಡೆದುಹೋಗಿತ್ತು. ಸಿಖ್ ಪ್ರತ್ಯೇಕತಾವಾದಿಗಳನ್ನು ಸ್ವರ್ಣ ಮಂದಿರದಿಂದ ಹೊರನೂಕಲು ನಡೆದ ಆಪರೇಷನ್ ಬ್ಲ್ಯೂ ಸ್ಟಾರ್ ಕಾರ್ಯಾಚರಣೆಗೆ ಆದೇಶ ನೀಡಿದರೆಂಬ ಕೋಪಕ್ಕೆ ಇಂದಿರಾರ ಸಿಖ್ ಅಂಗರಕ್ಷಕರು ಅಂದು ಬೆಳಗ್ಗೆ ಗುಂಡಿನ ದಾಳಿ ನಡೆಸಿದ್ದರು.

ಇಂದಿರಾರನ್ನು ಏಮ್ಸ್​ಗೆ ಕರೆತಂದು ತುರ್ತು ವಿಭಾಗದಲ್ಲಿ ದಾಖಲಿಸಲಾಗಿತ್ತು. ಅವರ ಸೀರೆ ರಕ್ತದಲ್ಲಿ ತೋಯ್ದುಹೋಗಿತ್ತು. ದೇಹದ ಅಂಗಗಳಿಂದ ರಕ್ತ ಸುರಿಯುತ್ತಿತ್ತು. ಇಂದಿರಾರ ಆಪ್ತ ಕಾರ್ಯದರ್ಶಿ ಆರ್.ಕೆ.ಧವನ್, ಇಂದಿರಾ ಆಪ್ತವಲಯದ ಎಂ.ಎಲ್.ಪೋತೆದಾರ್ ಹಾಗೂ ಸೊಸೆ ಸೋನಿಯಾ ಗಾಂಧಿ ಮತ್ತಿತರರು ದಿಕ್ಕೇ ತೋಚದಂತೆ, ಕಣ್ಣೀರು ತುಂಬಿಕೊಂಡು ಅಲ್ಲಿ ನಿಂತಿದ್ದರು. ಪಕ್ಷ ಮತ್ತು ದೇಶದ ಆಡಳಿತದ ಮೇಲೆ ಅಪಾರ ಹಿಡಿತ ಸಾಧಿಸಿದ್ದ ಇಂದಿರಾ, ಆಸ್ಪತ್ರೆಯಲ್ಲಿ ಅಸಹಾಯಕರಂತೆ ಮಲಗಿದ್ದನ್ನು ನೋಡಿ ಅರಗಿಸಿಕೊಳ್ಳುವುದು ಸುಲಭವೆ? ಇಡೀ ಏಮ್ಸ್​ನಲ್ಲಿ ಆತಂಕ, ಗಡಿಬಿಡಿ, ಉದ್ವೇಗದ ವಾತಾವರಣವಿತ್ತು. ಡಾ.ಸ್ನೇಹ್ ಭಾರ್ಗವ ಸೇರಿದಂತೆ ಏಮ್ಸ್​ನ ಪ್ರಮುಖ ವೈದ್ಯರು ಸುಮಾರು ನಾಲ್ಕು ತಾಸು ಕಾಲ ಶ್ರಮಿಸಿದರೂ ಇಂದಿರಾರನ್ನು ಉಳಿಸಿಕೊಳ್ಳಲು ಆಗಲಿಲ್ಲ.

ಇಂದಿರಾರದು ವಿರಳವಾದ ಬಿ-ಮೈನಸ್ ಗುಂಪಿಗೆ ಸೇರಿದ ರಕ್ತವಾಗಿತ್ತು. ರಕ್ತ ನೀಡಿದಷ್ಟೂ ದೇಹದಿಂದ ಹೊರಕ್ಕೆ ಬರುತ್ತಿತ್ತು. ಇಂದಿರಾ ಬದುಕಿಲ್ಲ ಎಂಬುದು ವೈದ್ಯರಿಗೆ ಮನವರಿಕೆಯಾಗಿದ್ದರೂ, ರಾಷ್ಟ್ರಪತಿ ಹಾಗೂ ಇಂದಿರಾ ಪುತ್ರ ರಾಜೀವ್ ಗಾಂಧಿ ದೆಹಲಿಗೆ ಬರುವವರೆಗೆ ಏನನ್ನೂ ಘೋಷಿಸದಂತೆ ಹಾಗೂ ಚಿಕಿತ್ಸೆ ಮುಂದುವರಿಸುವಂತೆ ಕಾಂಗ್ರೆಸ್​ನ ಉನ್ನತ ನಾಯಕರು ವೈದ್ಯರಿಗೆ ಸೂಚಿಸಿದ್ದರು. ಪಕ್ಷವು ಒಂದು ನಿರ್ಧಾರ ತೆಗೆದುಕೊಳ್ಳುವ ವರೆಗೆ ಅಧಿಕಾರದ ನಿರ್ವಾತ ಆಗಬಾರದು ಎಂಬುದು ಅವರ ಉದ್ದೇಶವಾಗಿತ್ತು. 1980ರ ಜೂನ್ 23ರಂದು ರಾಜೀವರ ಸೋದರ ಸಂಜಯ್ ಗಾಂಧಿ ವಿಮಾನಾಪಘಾತದಲ್ಲಿ ಅಕಾಲಿಕವಾಗಿ ಸಾವನ್ನಪ್ಪಿದರು. ಆಗ ಲಂಡನ್ ಪ್ರವಾಸದಲ್ಲಿದ್ದ ರಾಜೀವ್ ಸ್ವದೇಶಕ್ಕೆ ವಾಪಸಾಗಿ ತಮ್ಮನ ಅಂತ್ಯಕ್ರಿಯೆ ನೆರವೇರಿಸಿದರು. ಬದರಿನಾಥದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಅವರು ಸಂಜಯ್ ಸಾವಿಗೆ ಸಂತಾಪ ಸೂಚಿಸಿ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದಾಗ, ವಿಮಾನ ಚಾಲನೆಯ ಬದಲು ದೇಶಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ರಾಜೀವ್​ಗೆ ಸೂಚಿಸಿದ್ದರಂತೆ.

ರಾಜೀವ್ ಸಕ್ರಿಯ ರಾಜಕೀಯಕ್ಕೆ ಬರಬೇಕು ಎಂಬ ಒತ್ತಡ ಕಾಂಗ್ರೆಸ್​ನಲ್ಲಿ ಹೆಚ್ಚಾಗಿ, ಇಂದಿರಾ ಬಳಿಯೂ ಆಗ್ರಹ ಹೋಯಿತು. ರಾಜಕಾರಣಕ್ಕೆ ಬರಬೇಕೇ ಬೇಡವೇ ಎಂಬುದು ರಾಜೀವ್ ನಿರ್ಧಾರಕ್ಕೆ ಬಿಟ್ಟ ವಿಷಯ ಎಂದು ಇಂದಿರಾ ಪ್ರತಿಕ್ರಿಯಿಸಿದ್ದರಂತೆ. ತಾಯಿಗೆ ನೆರವಾಗುತ್ತದೆ ಎಂದಾದಲ್ಲಿ ಸಕ್ರಿಯ ರಾಜಕಾರಣಕ್ಕೆ ಬರಲು ಸಿದ್ಧ ಎಂದು ರಾಜೀವ್ ಹೇಳಿದರಂತೆ. ಹೀಗೆ, ಮೂಲತಃ ರಾಜಕೀಯದ ಬಗ್ಗೆ ಆಸಕ್ತಿ ಇರದಿದ್ದ ರಾಜೀವ್ ರಾಜಕೀಯ ರಂಗಕ್ಕೆ ಬರುವಂತಾಯಿತು. 1981ರ ಫೆಬ್ರವರಿ 16ರಂದು ದೆಹಲಿಯಲ್ಲಿ ರೈತರ ರ‍್ಯಾಲಿ ಉದ್ದೇಶಿಸಿ ಮಾತನಾಡುವ ಮೂಲಕ, ಅಧಿಕೃತವಾಗಿ ರಾಜೀವ್ ರಾಜಕೀಯ ಪ್ರವೇಶವಾಯಿತು. 1981ರ ಮೇ 4ರಂದು ಇಂದಿರಾ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸಭೆಯಲ್ಲಿ, ಸಂಜಯ್ ಗಾಂಧಿ ಹಿಂದೆ ಪ್ರತಿನಿಧಿಸಿದ್ದ ಅಮೇಥಿ ಕ್ಷೇತ್ರದಿಂದ ರಾಜೀವರನ್ನು ಲೋಕಸಭೆಗೆ ನಿಲ್ಲಿಸಬೇಕೆಂಬ ನಿರ್ಣಯವನ್ನು ಅಂಗೀಕರಿಸಲಾಯಿತು.

ಲೋಕದಳ ಅಭ್ಯರ್ಥಿ ಶರದ್ ಯಾದವ್​ರನ್ನು 2.27 ಲಕ್ಷ ಮತಗಳಿಂದ ಸೋಲಿಸುವ ಮೂಲಕ ರಾಜೀವ್ ಲೋಕಸಭೆ ಪ್ರವೇಶಿಸಿದರು. ಇಂದಿರಾ ಹತ್ಯೆ ನಡೆದ ದಿನದಂದು ರಾಜೀವ್ ಗಾಂಧಿ ಪಶ್ಚಿಮ ಬಂಗಾಳದಲ್ಲಿದ್ದರು. ಬಳಿಕ ರಾಜೀವ್ ಪ್ರಧಾನಿಯಾದದ್ದು ಈಗ ಇತಿಹಾಸ. ತನ್ನನ್ನು ಏಮ್ಸ್​ ನಿರ್ದೇಶಕರಂಥ ಉನ್ನತ ಹುದ್ದೆಗೆ ನೇಮಿಸಿದ ಇಂದಿರಾ ಅವರಿಗೆ ಒಂದು ಧನ್ಯವಾದ ಹೇಳಲು ಕೂಡ ತನಗೆ ಅವಕಾಶ ಸಿಗಲಿಲ್ಲ ಎಂಬುದು ಡಾ.ಸ್ನೇಹ್ ಭಾರ್ಗವ ಅವರ ಬೇಸರ. ಅವರು ಪುಸ್ತಕವೊಂದರಲ್ಲಿ್ಲ ಈ ಘಟನೆಗಳನ್ನು ಮೆಲುಕು ಹಾಕಿದ್ದಾರೆ. 1990ರವರೆಗೆ ಅವರು ಈ ಹುದ್ದೆಯಲ್ಲಿದ್ದರು. ವೈದ್ಯಕೀಯ ರಂಗದಲ್ಲಿನ ಸೇವೆಗಾಗಿ ಅವರಿಗೆ ಪದ್ಮಶ್ರೀ ಪುರಸ್ಕಾರ ಸಂದಿದೆ. 1958ರಲ್ಲಿ ದೇಶದ ಮೊದಲ ಮಹಿಳಾ ರೇಡಿಯಾಲಜಿಸ್ಟ್​ಗಳಲ್ಲಿ ಒಬ್ಬರು ಎಂಬ ಹಿರಿಮೆ ಕೂಡ ಅವರಿಗಿದೆ.