| ಹೀರಾನಾಯ್ಕ ಟಿ. ವಿಜಯಪುರ
ಬರದನಾಡು ಎಂದೇ ಹಣೆಪಟ್ಟಿ ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ಕೃಷಿ ಮಾಡುವುದು ಸವಾಲಿನ ಕೆಲಸ. ಹಲವಾರು ಸಮಸ್ಯೆಗಳನ್ನು ಎದುರಿಸಿ ಕೃಷಿಯಲ್ಲಿ ಯಶಸ್ಸು ಕಂಡಿರುವ ದನವಾಡಟ್ಟಿಯ ಯುವರೈತ ಕೇದಾರಿ ಖಂಡೋಬಾ ದನವಾಡೆ ಸಾಧನೆ ಇತರರಿಗೂ ಮಾದರಿ.ಸಾವಿರ ಅಡಿ ಬೋರ್ವೆಲ್ ಹಾಕಿಸಿದರೂ ನೀರು ಸಿಕ್ಕಿಲ್ಲ. ಗಂಗೆಗಾಗಿ 42 ಬೋರ್ವೆಲ್ ಕೊರೆಸಿದ್ದನ್ನು ಗಮನಿಸಿದರೆ ನೀರಿನ ಸಮಸ್ಯೆ ಎಷ್ಟೆಂಬುದು ಯಾರಿಗಾದರೂ ಅರ್ಥವಾಗದಿರದು. ಸಿಕ್ಕ ಒಂದಿಂಚು ನೀರಿನ ಲಭ್ಯತೆಯಲ್ಲಿ ಒಂದು ಎಕರೆ ಪ್ರದೇಶದಲ್ಲಿ ಲಕ್ಷಾಂತರ ರೂ. ಆದಾಯ ಪಡೆಯುವ ಮೂಲಕ ಕೇದಾರಿ ಖಂಡೋಬಾ ಇತರ ಕೃಷಿಕರಿಗೆ ಐಕಾನ್ ಆಗಿದ್ದಾರೆ. ಬಿಎಸ್ಸಿ, ಎಂಎಸ್ಸಿ ಪದವಿ ಮುಗಿಸಿ ಪಿಎಚ್.ಡಿ ಪಡೆದಿರುವ ಕೇದಾರಿ ಒಂದು ಎಕರೆ ಪ್ರದೇಶದಲ್ಲಿ ಅನೇಕ ದೇಶ-ವಿದೇಶ ತಳಿಯ ತೋಟಗಾರಿಕೆ ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ.
ಗಮನ ಸೆಳೆಯುತ್ತಿವೆ ವಿವಿಧ ಬೆಳೆಗಳು: ಒಂದು ಎಕರೆ ಪ್ರದೇಶದಲ್ಲಿ ಡೈಮಂಡ್ ತಳಿಯ 800 ಸೀತಾಫಲ, 180 ಧೂಪಾಳ, ಬದಂ, ಜಂಬು ಹಾಗೂ ಬಿಳಿ ತಳಿಯ ನೇರಳೆ ಹಣ್ಣು ಬೆಳೆಯಲಾಗಿದೆ. ಅದರಿಂದ 1.80 ಲಕ್ಷ ರೂ. ಲಾಭ ಗಳಿಸಿದ್ದಾರೆ ಕೇದಾರಿ. ಎಲ್ಲ ಋತುವಿನಲ್ಲಿ ಇಳುವರಿ ಬರುವಂತಹ 52 ಮಾವು ಸಸಿಗಳನ್ನು ನೆಟ್ಟಿದ್ದಾರೆ. ಕಾಟಿಮೋನಿ, ಮಿಯಾಜಾಕಿ, ಕೇಸರ್ ಮಲ್ಲಿಕಾ, ಬೇನಿಶ ಪ್ರಮುಖ ಮಾವು ತಳಿಗಳಾಗಿವೆ. ಮೂರು ವಿಧದ 60 ಲಿಂಬೆ (ಬೀಜ ರಹಿತ, ಶ್ವೇತಾಂಬರಿ, ಜವಾರಿ), 50 ಹುಣಸೆ (ಪಿಕೆಎಂ, ಸಿಹಿ ಹುಣಸೆ, ಅನಂತ ರುಧೀರ), 80 ಹನುಮಫಲ, 80 ರಾಮಫಲ, ಐದು ಲಕ್ಷ್ಮಣ ಫಲ, 60 ಹಲಸು (ಸಿದ್ದು, ಜಿಗಿರಹಿತ, ಪ್ರೇಮ್ಂದ್, ರುದ್ರಾಕ್ಷಿ ತಳಿ, ಕಾಂಚನ ತಳಿ), 50 ನುಗ್ಗೆ ಗಿಡಗಳನ್ನು ಬೆಳೆದಿದ್ದಾರೆ. ಸೀತಾಫಲದಿಂದ ಕಳೆದ ವರ್ಷ ಪ್ರತಿ ಕೆಜಿಗೆ 160 ರೂ. ನಂತೆ ಬೆಂಗಳೂರಿನ ಹಾಫ್ಕಾಮ್ಸ್ಗೆ ಮಾರಾಟ ಮಾಡಿ 5 ಲಕ್ಷ ರೂ. ಆದಾಯ ಗಳಿಸಿದ್ದಾರೆ.
ಕೃಷಿ ಜತೆಗೆ ಉಪಕಸುಬುಗಳಾದ ಕೋಳಿ ಸಾಕಣೆ, ಕುರಿ-ಮೇಕೆ ಸಾಕಣೆ, ಹೈನುಗಾರಿಕೆ ಹೀಗೆ ವಿವಿಧ ಕಾಯಕವನ್ನು ಮಾಡಿಕೊಂಡು ಕೈ ತುಂಬ ಹಣ ಗಳಿಸುವುದರ ಮೂಲಕ ನೆಮ್ಮದಿ ಬದುಕು ಕಟ್ಟಿಕೊಳ್ಳಬಹುದು. | ಕೇದಾರಿ ಖಂಡೋಬಾ ದನವಾಡೆ ಯುವರೈತ, ವಿಜಯಪುರ
ಕೈ ಹಿಡಿದ ಕೋಳಿ ಸಾಕಣೆ: ತೋಟಗಾರಿಕೆ ಬೆಳೆ ಜತೆಗೆ ಉಪಕಸುಬಾಗಿ ಕೋಳಿ ಸಾಕಣೆ ಮಾಡುತ್ತಿದ್ದಾರೆ. ಎರಡು ಸಾವಿರ ವಿವಿಧ ತಳಿಯ ನಾಟಿ ಕೋಳಿಗಳನ್ನು ಸಾಕಣೆ ಮಾಡುತ್ತಿದ್ದು, ಕೈ ತುಂಬ ಆದಾಯ ಬರುತ್ತಿದೆ. 200 ಫೈಟರ್ ತಳಿಯ ಕೋಳಿ, 900 ಗಿರಿರಾಜ, 300 ಖಡಕನಾಥ್, 500 ಡಿಪಿ ಕ್ರಾಸ್, ಐದು ಬಾತುಕೋಳಿ, ಮೂರು ಟರ್ಕಿ ಕೋಳಿ ಹಾಗೂ ಎರಡು ಗಿಣಿಪೌಲ್ ಕೋಳಿ ಮತ್ತು 20 ಪಾರಿವಾಳಗಳನ್ನು ಸಾಕಿದ್ದಾರೆ. ಪ್ರತಿ ದಿನ 700 ರಿಂದ ಒಂದು ಸಾವಿರ ಮೊಟ್ಟೆ ಉತ್ಪಾದನೆ ಆಗುತ್ತದೆ. ಪ್ರತಿ ಮೊಟ್ಟೆಗೆ 8ರಿಂದ 10 ರೂ.ಗೆ ಮಾರಾಟ ಮಾಡುತ್ತಿದ್ದು, ವಾರ್ಷಿಕವಾಗಿ 5ರಿಂದ 7 ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ.
ಪಿಎಚ್ಡಿ ಪಡೆದಿರುವ ರೈತ: ಕೇದಾರಿ ಖಂಡೋಬಾ ದನವಾಡೆ ಅವರು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ (ತೋಟಗಾರಿಕೆ) ಹಾಗೂ ಎಂಎಸ್ಸಿ (ತೋಟಗಾರಿಕೆ) ಮುಗಿಸಿದ್ದಾರೆ. ಮಹಾರಾಷ್ಟ್ರದ ರಹುರಿ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪಡೆದಿದ್ದಾರೆ. ಅಲ್ಲಿಯೇ ಮೂರು ವರ್ಷ ಹಿರಿಯ ವಿಜ್ಞಾನಿಯಾಗಿ ಕೆಲಸ ಮಾಡಿದ್ದಾರೆ. ಸಹೋದರ ಉಲ್ಲಾಸ ದನವಾಡೆ ಅಪಘಾತದಲ್ಲಿ ಮೃತಪಟ್ಟ ನಂತರ ಕೇದಾರಿ ಕೆಲಸ ಬಿಟ್ಟು ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ಅವರಿಗೆ ಮತ್ತೊಬ್ಬ ಸಹೋದರ ಮಲ್ಹಾರಿ ದನವಾಡೆ ಸಾಥ್ ನೀಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ.ಸಂ. 8884443367ಗೆ ಸಂಪರ್ಕಿಸಬಹುದು.