ಕಳೆದ ವಾರ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಚಾನಲ್ ವತಿಯಿಂದ ಕ್ಲಬ್ ಹೌಸ್ ಸಂವಾದ ಏರ್ಪಡಿಸಲಾಗಿತ್ತು. ವಿಷಯ-ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿ, ತಾಲಿಬಾನ್ ಚಟುವಟಿಕೆ, ಭಾರತದ ಮೇಲೆ ಆಗಬಹುದಾದ ಪರಿಣಾಮಗಳು ಇತ್ಯಾದಿ. ಈಗ ಅತಿ ಹೆಚ್ಚು ಪ್ರಚಾರದಲ್ಲಿರುವುದು ಅಫ್ಘಾನಿಸ್ತಾನ. ಅಮೆರಿಕ ಸೇನೆ ಅಲ್ಲಿಂದ ತೆರಳಿದ ಮೇಲೆ ಆ ದೇಶ ತಾಲಿಬಾನ್ ಹಿಡಿತಕ್ಕೆ ಸಿಲುಕಿದ್ದು, ಮುಂದೇನು ಎಂಬ ಪ್ರಶ್ನೆ ಇಡೀ ಜಗತ್ತನ್ನು ತುದಿಗಾಲಲ್ಲಿ ನಿಲ್ಲಿಸಿದೆ. ಹೀಗಾಗಿ ಸಹಜವಾಗಿಯೇ ಈ ಕ್ಲಬ್ ಹೌಸ್ ಸಂವಾದಕ್ಕೆ ಜನರ ಪ್ರಶ್ನೆಗಳು ಸ್ವಲ್ಪ ಹೆಚ್ಚೇ ಇದ್ದವು. ಅದರಲ್ಲೂ ಒಂದಿಬ್ಬರು ಹೆಣ್ಮಕ್ಕಳಂತೂ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದಲ್ಲಿ ಮಹಿಳೆಯರು ಎದುರಿಸುತ್ತಿರುವ, ಎದುರಿಸಿದ ಮತ್ತು ಎದುರಿಸಬಹುದಾದ ಕಷ್ಟಕೋಟಲೆಗಳನ್ನು ಪ್ರಸ್ತಾಪಿಸಿ, ಅಕ್ಷರಶಃ ಭಾವುಕರಾದರು. ಅಲ್ಲೆಲ್ಲೋ ಅಫ್ಘನ್ ಹೆಣ್ಮಕ್ಕಳಿಗೆ ಆಗುವ ಕಷ್ಟ ನಮ್ಮವರ ಕರುಳನ್ನೂ ಚುರ್ರೆನ್ನಿಸುತ್ತದೆ ಎನ್ನುವುದು ನಮ್ಮ ಮಹಿಳೆಯರ ಭಾವುಕತನಕ್ಕೆ, ಅಂತಃಕರಣಕ್ಕೆ ಸಾಕ್ಷಿ.
ಈ ವಿಷಯ ಪ್ರಸ್ತಾಪವಾದಾಗ, ಸಹಜವಾಗಿಯೇ ಭಾರತದಲ್ಲಿನ ಪರಿಸ್ಥಿತಿ ಕುರಿತು ಒಂದಷ್ಟು ಆಲೋಚನೆಗಳು-ಭಾವನೆಗಳು ಮನದಲ್ಲಿ ಹಾದುಹೋದವು. ಭಾರತದಲ್ಲಿ ಎಷ್ಟೋ ಸ್ತ್ರೀಯರು ತಾವು ಖುದ್ದು ಕಷ್ಟ ಪರಂಪರೆಗಳನ್ನೇ ಎದುರಿಸಿದರೂ ಪರರಿಗಾಗಿ ಮಿಡಿದ ಪರಿಣಾಮವಾಗಿ ಇಂದು ಎಲ್ಲ ರಂಗಗಳಲ್ಲಿ ನಮ್ಮ ಹೆಣ್ಮಕ್ಕಳೂ ಎತ್ತರಕ್ಕೇರಲು ಕಾರಣವೇನೋ ಅನಿಸುತ್ತದೆ. ಅಂಥದೊಂದು ಸಾಮಾಜಿಕ ಕಾಳಜಿ ಇಲ್ಲದಿದ್ದರೆ ಸಾವಿತ್ರಿಬಾಯಿ ಫುಲೆ ಅವರು ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಎಂಬ ಹೆಗ್ಗಳಿಕೆ ಪಡೆಯುವ ಜತೆಗೆ ಸಾಮಾಜಿಕ ಕೆಲಸಗಳನ್ನು ಅಷ್ಟು ಅಗಾಧ ಪ್ರಮಾಣದಲ್ಲಿ ಮಾಡಲು ಸಾಧ್ಯವಿತ್ತೇ? ಪತಿ ಜ್ಯೋತಿಬಾ ಫುಲೆ ಅವರ ಹೆಗಲಿಗೆ ಹೆಗಲು ಕೊಟ್ಟು ಸಾವಿತ್ರಿಯವರು ಮಾಡಿದ ಕೆಲಸಗಳೇನು ಕಡಿಮೆಯೇ! 19ನೇ ಶತಮಾನದ ಅವಧಿಯಲ್ಲಿ ನಮ್ಮ ದೇಶದಲ್ಲಿ ಅನೇಕ ಸಾಮಾಜಿಕ ಅಪಸವ್ಯಗಳು ಇದ್ದವು. ಅಂಥ ವಾತಾವರಣದಲ್ಲಿ ಮಹಿಳೆಯರ ಏಳಿಗೆಗಾಗಿ ಕಂಕಣಬದ್ಧರಾದವರು ಸಾವಿತ್ರಿಬಾಯಿ. ಅದಕ್ಕೆಂದೇ, ‘ಭಾರತೀಯ ಸ್ತ್ರೀವಾದದ ತಾಯಿ’ ಎಂದು ಅವರನ್ನು ಗೌರವಿಸಲಾಗುತ್ತದೆ. ಪತಿಯ ಜತೆಗೂಡಿ, ಭಾರತದ ಪ್ರಥಮ ಮಹಿಳಾ ಶಾಲೆ ಸ್ಥಾಪಿಸಿದ ಕೀರ್ತಿ ಅವರದು. ‘ಕಷ್ಟನಷ್ಟಗಳನ್ನು, ಅಡೆತಡೆಗಳನ್ನು ಎದುರಿಸಿ ನಾವು ಮುಂದೆ ಬರಬೇಕು. ಭವಿಷ್ಯ ನಮ್ಮದು’ ಎಂದು ಸಾವಿತ್ರಿಬಾಯಿ ಫುಲೆ ಹೇಳಿದ್ದರು. ಆ ಮಾತು ಇಂದು ಸತ್ಯವಾಗುತ್ತಿದೆಯಲ್ಲವೆ? ಕಷ್ಟಗಳು ಬಂದಾಗ, ಸಂದಿಗ್ಧಗಳು ಎದುರಾದಾಗ, ದಾರಿತೋರಲೆಂದು ಯಾರಾದರೊಬ್ಬರು ಉದಿಸುವುದು ಈ ನೆಲದ ಮಣ್ಣಿನ ಗುಣವೇ ಇರಬೇಕು...
‘ಹಿಂದೆ, ಅಂದರೆ, ವೇದಕಾಲದಲ್ಲಿ ಸ್ತ್ರೀ ಕುರಿತು ತಾರತಮ್ಯ ಇರಲಿಲ್ಲ. ಮಹಿಳೆಯರೂ ಸೇರಿದಂತೆ ಯಾರೂ ಜ್ಯೇಷ್ಠರಲ್ಲ, ಯಾರೂ ಕನಿಷ್ಠರಲ್ಲ ಎಂದು ವೇದ ಹೇಳುತ್ತದೆ. ಆಗ ಮಹಿಳೆಯರ ಬಾಲ್ಯವಿವಾಹ ಪದ್ಧತಿ ಇರಲಿಲ್ಲ. ವಿಧವೆಯರ ಮರುವಿವಾಹ ಸಾಮಾನ್ಯವಾಗಿತ್ತು. ವೇದಕಾಲದ ತರುವಾಯ, ನೂರಾರು ವರ್ಷಗಳ ನಂತರದಲ್ಲಿ, ಅನ್ಯದೇಶಗಳ ಸಂಸ್ಕೃತಿಗಳ ಪ್ರಭಾವದ ಪರಿಣಾಮವಾಗಿ ನಮ್ಮಲ್ಲಿ ಮಹಿಳೆಯರ ಮೇಲೆ ಬೇರೆ ಬೇರೆ ಬಗೆಯ ನಿರ್ಬಂಧ ಶುರುವಾಯಿತು’ ಎಂದು ಸಾಂಸ್ಕೃತಿಕ ಚಿಂತಕಿ ಡಾ.ಜಯಂತಿ ಮನೋಹರ್ ಹೇಳುತ್ತಾರೆ.
ದೇಶಕಟ್ಟುವಲ್ಲಿ ಮಹಿಳೆಯರ ಪಾತ್ರವೂ ದೊಡ್ಡದು ಎಂಬುದಕ್ಕೆ, ನಮ್ಮ ಸ್ವಾತಂತ್ರ್ಯಹೋರಾಟದಲ್ಲಿ ಅವರ ಕೊಡುಗೆ ಒಂದು ನಿದರ್ಶನ. ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಇವಳ ಸಮಕಾಲೀನಳಾದ ರಾಯಗಢದ ರಾಣಿ ಆವಂತಿಬಾಯಿ, ತಮಿಳುನಾಡಿನ ವೇಲು ನಾಚಿಯಾರ್, ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ.... ಒಹ್, ನಮ್ಮನ್ನು ಬ್ರಿಟಿಷರ ದಾಸ್ಯದಿಂದ ಪಾರುಮಾಡಲು ಸೆಣೆಸಿದ ವೀರನಾರಿಯರು ಅದೆಷ್ಟು ಮಂದಿ...! ಪ್ರತ್ಯಕ್ಷವಾಗಿ ಹೋರಾಟದಲ್ಲಿ ಭಾಗವಹಿಸಿದವರ ಜತೆಗೆ, ದೇಶದ ಲಕ್ಷಾಂತರ ಹೆಣ್ಮಕ್ಕಳು ಅಪ್ರತ್ಯಕ್ಷವಾಗಿ ಈ ಚಳವಳಿಯಲ್ಲಿ ಭಾಗವಹಿಸಿದ್ದನ್ನು ಮರೆಯಲಾಗದು. ಮನೆಯ ಪುರುಷರು ಆಂದೋಲನಕ್ಕೆಂದು ಹೊರಗೆ ಹೋದಾಗ ಮನೆಯನ್ನು ಮುನ್ನಡೆಸುವ ಮೂಲಕ ಕುಟುಂಬವನ್ನೂ ಆಧರಿಸಿದವರು ಈ ಸಹನಾಮಣಿಗಳು. ಇಲ್ಲವಾದಲ್ಲಿ ಅದೆಷ್ಟು ಕುಟುಂಬಗಳು ನಾಮಾವಶೇಷವಾಗಬೇಕಿತ್ತೋ... ‘ಮಹಿಳೆಯನ್ನು ದಮನ, ದೌರ್ಜನ್ಯಗಳಿಂದ ಮುಕ್ತಗೊಳಿಸದಿದ್ದರೆ ನಾವು ಸ್ವಾತಂತ್ರ್ಯ ಗಳಿಸಲು ಸಾಧ್ಯವಿಲ್ಲ’ ಎಂದಿದ್ದರು ‘ದಕ್ಷಿಣ ಆಫ್ರಿಕಾದ ಗಾಂಧಿ’ ನೆಲ್ಸನ್ ಮಂಡೇಲಾ.
ಅಮೆರಿಕ ತನ್ನನ್ನು ತಾನು ‘ಪ್ರಜಾಪ್ರಭುತ್ವದ ಚಾಂಪಿಯನ್’ ಎಂದು ಹೇಳಿಕೊಳ್ಳುತ್ತದೆ. ಆದರೆ ಆ ದೇಶಕ್ಕೆ ಇನ್ನೂ ಓರ್ವ ಮಹಿಳಾ ಅಧ್ಯಕ್ಷರನ್ನು ಕೊಡಲು ಆಗಿಲ್ಲ. ಅಧ್ಯಕ್ಷ ಹುದ್ದೆ ಇರಲಿ, ಉಪಾಧ್ಯಕ್ಷ ಹುದ್ದೆಗೇರಲು ಸಹ ಮಹಿಳೆ 2020ರವರೆಗೆ ಕಾಯಬೇಕಾಯಿತು. ಅಷ್ಟೇ ಅಲ್ಲ, ಅಮೆರಿಕದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ನೀಡಲು ಕೂಡ ಹೋರಾಟವೇ ನಡೆಯಬೇಕಾಯಿತು. ಅದೇ ನಮ್ಮಲ್ಲಿ ಮತದಾನದ ಹಕ್ಕು ಪುರುಷ-ಸ್ತ್ರೀ ಎಂಬ ಭೇದವಿರದೆ ಎಲ್ಲರಿಗೂ ದಕ್ಕಿತಲ್ಲ... ‘ಪ್ರಶ್ನಿಸುವ ಧೈರ್ಯ ಮಾನವಪ್ರಗತಿಯ ಮೂಲ’ ಎಂಬ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮಾತು ಸ್ಮರಣಾರ್ಹ.
ಮೌಂಟ್ ಎವರೆಸ್ಟ್ ಏರಿದ ಪ್ರಥಮ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆ ಬಚೇಂದ್ರಿಪಾಲ್ ಅವರಿಗೆ 1984ರಲ್ಲಿ ದಕ್ಕುವಾಗ, ಅದಕ್ಕಾಗಿ ಆಕೆ ಪಟ್ಟ ಕಷ್ಟ-ಸಾಹಸದ ಲೆಕ್ಕ ಇಟ್ಟವರಾರು? ನಂತರದಲ್ಲಿ ಅನೇಕರಿಗೆ ಪರ್ವತಾರೋಹಣಕ್ಕೆ ಬಚೇಂದ್ರಿ್ರಾಲ್ ಪ್ರೇರಣೆಯಾದರಲ್ಲ, ಅದರಲ್ಲಿ ನಿಜವಾದ ಸಾರ್ಥಕತೆ ಅಡಗಿದೆ. ಆಸಿಡ್ ದಾಳಿಗೆ ಒಳಗಾಗಿ, ನೊಂದುಬೆಂದವರು ಲಕ್ಷ್ಮಿ ಅಗರವಾಲ್. ಆದರೆ ಇದರಿಂದ ಜೀವನಾಸಕ್ತಿ ಕಳೆದುಕೊಳ್ಳದೆ, ತನ್ನಂತೆಯೇ ಆಸಿಡ್ ದಾಳಿಗೆ ತುತ್ತಾದವರ ಪರವಾಗಿ ಆಂದೋಲನವೇ ನಡೆಯಲು ಸ್ಪೂರ್ತಿಯಾದರು. ‘ಜೀವನಪಯಣದಲ್ಲಿ ನನಗೆ ಬೆಂಬಲವಾಗಿ ಯಾರೂ ಇರಲಿಲ್ಲ. ನಮಗೆ ನಾವೇ ಬೆಂಬಲ, ಪ್ರೋತ್ಸಾಹ ಕೊಟ್ಟುಕೊಳ್ಳಬೇಕು. ನನ್ನ ಪ್ರಕಾರ, ಇದುವೇ ಮಹಿಳೆಯಾಗಿರುವುದರಲ್ಲಿನ ನಿಜವಾದ ಸೌಂದರ್ಯ’ ಎಂದು ಬಾಲಿವುಡ್ನ ಖ್ಯಾತ ನಟಿ ಕಂಗನಾ ರಣಾವತ್ ಹೇಳುತ್ತಾರೆ. ಹಲವು ವಿವಾದಗಳು ಎದುರಾದರೂ ಈಕೆ ಹೆದರದೆ ಹಿಂದಿ ಚಲನಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ; ಈ ಹಾದಿಯಲ್ಲಿ ಅನೇಕ ಘಟಾನುಘಟಿಗಳನ್ನೂ ತಡವಿಕೊಂಡಿದ್ದಾರೆ.
ನಮ್ಮಲ್ಲಿನ ಆಡಳಿತದ ಕುಂದುಕೊರತೆಗಳ ಬಗ್ಗೆ, ಭ್ರಷ್ಟಾಚಾರದ ಬಗ್ಗೆ ನಾವು ಏನೇ ಟೀಕೆವಿಮರ್ಶೆ ಮಾಡಬಹುದು. ಆದರೆ ಅರಾಜಕತೆಯಾಗುವಷ್ಟು ಆಡಳಿತ ಕುಸಿತ ನಮ್ಮಲ್ಲಿ ಆಗಿಲ್ಲ ಎಂಬುದನ್ನೂ ಒಪ್ಪಬೇಕು. ಆಡಳಿತ ನಡೆಸುವವರು ಜನದನಿಯನ್ನು ತೀರಾ ಉಪೇಕ್ಷಿಸಲಾಗದು ಎಂಬುದಕ್ಕೆ ನಿರ್ಭಯಾ ಪ್ರಕರಣವೇ ಸಾಕ್ಷಿ. ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಘಟನೆ ದೇಶದ ಮನಸ್ಸಾಕ್ಷಿಯನ್ನು ಎಷ್ಟು ಕಲಕಿತು ಎಂದರೆ, ದೆಹಲಿ ಮಾತ್ರವಲ್ಲ, ದೇಶದ ಅನೇಕ ಕಡೆಗಳಲ್ಲಿ ಸ್ತ್ರೀ ಸುರಕ್ಷತೆ ವಿಷಯ ಮಾರ್ದನಿಸಿತು. ಇದರ ಪರಿಣಾಮವಾಗಿ, ಕೇಂದ್ರ ಸರ್ಕಾರ ಕೂಡಲೇ ಜಸ್ಟಿಸ್ ಜೆ.ಎಸ್.ವರ್ವ ಆಯೋಗವನ್ನು ನೇಮಿಸಿ, ಮಹಿಳಾ ರಕ್ಷಣೆ ಕುರಿತ ಕಾನೂನಿನಲ್ಲಿ ಒಂದಷ್ಟು ಮಾರ್ಪಾಡುಗಳನ್ನು ತಂದಿತು. ಅದರರ್ಥ, ನಿರ್ಭಯಾ ಪ್ರಕರಣಕ್ಕೆ ಮೊದಲು ದೇಶದಲ್ಲಿ ಅತ್ಯಾಚಾರ ನಡೆದಿರಲಿಲ್ಲ ಅಥವಾ ಈಗ ನಿಂತಿದೆ ಎಂದಲ್ಲ. ಆದರೆ, ಜನರು ಮನಸ್ಸು ಮಾಡಿದರೆ ಬದಲಾವಣೆ ತರಬಹುದು ಎಂಬುದಕ್ಕೆ ಈ ಮಾತು ಹೇಳಬೇಕಾಯಿತು.
ಗಗನಯಾನ ಮಾಡಿದ ಭಾರತದ ಮೊದಲ ಮಹಿಳೆ ಎಂಬ ಹಿರಿಮೆಗೆ ಪಾತ್ರರಾದವರು ಕಲ್ಪನಾ ಚಾವ್ಲಾ. ವ್ಯವಸ್ಥೆಯ ಸಹಕಾರ ಇಲ್ಲದಿದ್ದರೆ ಆ ಕನಸು ನನಸಾಗಲು ಸಾಧ್ಯವೇ? ಬಾಹ್ಯಾಕಾಶ ಯಾನದಿಂದ ವಾಪಸ್ ಬರುವಾಗ ಸಂಭವಿಸಿದ ದುರಂತದಲ್ಲಿ ಆಕೆ ಆಗಸದಲ್ಲೇ ದುರಂತ ಸಾವನ್ನಪ್ಪಿದ್ದು ಮಾತ್ರ ಅಳಿಸಲಾಗದ ವೇದನೆಯನ್ನು ಉಳಿಸಿತು. ‘ನೀವು ಕನಸು ಕಾಣಬೇಕು. ಅದನ್ನು ನನಸು ಮಾಡಲು ಯತ್ನಿಸಬೇಕು. ಅದಿಲ್ಲವಾದಲ್ಲಿ, ಬೇರೆಯವರು ತಮ್ಮ ಕನಸು ಈಡೇರಿಸಿಕೊಳ್ಳಲು ನಿಮ್ಮ ಪ್ರತಿಭೆಯನ್ನು ಬಳಸಿಕೊಳ್ಳುತ್ತಾರೆ’ ಎಂದು ಮಹಿಳೆಯರನ್ನು ಎಚ್ಚರಿಸುತ್ತಾರೆ, ಮುಂಬೈ ಇಂಡಿಯನ್ಸ್ ಐಪಿಎಲ್ ತಂಡದ ಸಹಮಾಲಕಿ, ಸಾಮಾಜಿಕ ಕಾರ್ಯಕರ್ತೆ ನೀತಾ ಅಂಬಾನಿ (ರಿಲಯನ್ಸ್ ಸಮೂಹದ ಅಧ್ಯಕ್ಷ ಮುಕೇಶ್ ಅಂಬಾನಿಯವರ ಪತ್ನಿ).
ನಮ್ಮ ದೇಶದಲ್ಲಿ ಪ್ರಾಥಮಿಕ ಶಿಕ್ಷಣವನ್ನು ತೆಗೆದುಕೊಂಡರೆ, ಪುರುಷರಿಗಿಂತ ಮಹಿಳೆಯರೇ ಹೆಚ್ಚು ಸಂಖ್ಯೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಹನೆ, ಸಂಭಾಳಿಸಿಕೊಂಡು ಹೋಗುವ ಗುಣ ಇದಕ್ಕೆ ಕಾರಣವಾಗಿರಬಹುದಲ್ಲವೆ? ಬಂಗಾಳದ ಚಂದ್ರಮುಖಿ ಬಸು ಮತ್ತು ಕಾದಂಬಿನಿ ಗಂಗೂಲಿ ಎಂಬುವವರು 1882ರಲ್ಲಿ ಬಿಎ ಪರೀಕ್ಷೆ ಉತ್ತೀರ್ಣರಾಗುವ ಮೂಲಕ, ಭಾರತದಲ್ಲಿ ಈ ಸಾಧನೆಗೈದ ಮೊದಲಿಗರೆಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರ ಸಾಹಸ ಇಷ್ಟಕ್ಕೇ ನಿಲ್ಲುವುದಿಲ್ಲ. ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮದೇ ಆದ ರೀತಿಯಲ್ಲಿ ಗುಪ್ತಚರ ಆಂದೋಲನವನ್ನೂ ಮುನ್ನಡೆಸಿದ ಕೀರ್ತಿ ಇವರದು. ಭಿನ್ನ ಹಾದಿಯಲ್ಲಿ ನಡೆಯಲು ಹುಂಬಧೈರ್ಯ, ದಿಟ್ಟತನ
ಬೇಕಾಗುತ್ತದೆ. ‘ಅಯ್ಯೋ, ಬಾಕ್ಸಿಂಗ್ಗೀಕ್ಸಿಂಗ್ ಎಲ್ಲ ಪುರುಷರಿಗೆ ಮಾತ್ರ, ಮಹಿಳೆಯರಿಗೆ ಇದು ಹೊಂದಲ್ಲ. ನಿನಗೆ ಯಾಕೆ ಅದರ ಉಸಾಬರಿ ಎಂದು ಜನರು ಹೇಳುತ್ತಿದ್ದರು. ಆಗೆಲ್ಲ ನನಗೆ ಬಾಕ್ಸಿಂಗ್ನಲ್ಲಿಯೇ ಸಾಧಿಸಿ ತೋರಿಸಬೇಕು ಎಂಬ ಕೆಚ್ಚು ಮೂಡುತ್ತಿತ್ತು. ಆ ದಿಕ್ಕಿನಲ್ಲಿ ನನಗೆ ನಾನೇ ಭರವಸೆ ತುಂಬಿಕೊಂಡೆ. ಮತ್ತು ನಾನು ಏನೆಂದು ಪ್ರೂವ್ ಮಾಡಿ ತೋರಿಸಿದೆ’ ಎಂಬ, ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ಮಾತು ಇದನ್ನು ಧ್ವನಿಸುತ್ತದೆ.
ಇಷ್ಟೆಲ್ಲ ಹೇಳಿದ ಮೇಲೆ ಒಂದು ಪ್ರಶ್ನೆ ಮೂಡಬಹುದು- ಹಾಗಾದರೆ ಭಾರತವೆಂಬುದು ಮಹಿಳೆಯರಿಗೆ ಸಂಪೂರ್ಣ ಸುರಕ್ಷಿತ ಎನಿಸಿದೆಯೇ? ಗಾಂಧಿ ಹೇಳಿದಂತೆ, ಮಧ್ಯರಾತ್ರಿಯಲ್ಲೂ ಮಹಿಳೆಯೊಬ್ಬಳು ಒಂಟಿಯಾಗಿ ಸಂಚರಿಸಬಲ್ಲ ಪರಿಸ್ಥಿತಿ ನಿರ್ವಣವಾಗಿದೆಯೇ? ‘ಹೌದು’ ಎಂದು ಹೇಳಿಕೊಂಡರೆ, ಆತ್ಮವಂಚನೆಯಾಗುತ್ತದೆ; ಮೊನ್ನೆ ಮೈಸೂರಿನಲ್ಲಿ ನಡೆದಂಥ ಘಟನೆಗಳು ನಮ್ಮನ್ನು ಅಣಕಿಸತೊಡಗುತ್ತವೆ. ಮಹಿಳಾ ದೌರ್ಜನ್ಯ ಮಾಯವಾಗಿಲ್ಲ; ಅತ್ಯಾಚಾರ ಪ್ರಕರಣಗಳು ದಿನಂಪ್ರತಿ ವರದಿಯಾಗುತ್ತವೆ; ಬಾಲ್ಯವಿವಾಹ ನಿಂತಿಲ್ಲ; ಹೆಣ್ಣು ಭ್ರೂಣ ಹತ್ಯೆ ಸುಶಿಕ್ಷಿತರು ಎನಿಸಿಕೊಂಡವರಲ್ಲೂ ನಡೆಯುತ್ತಿದೆ. ಇಷ್ಟೆಲ್ಲ ನಕಾರಾತ್ಮಕ ಅಂಶಗಳ ನಡುವೆಯೂ ನಮ್ಮಲ್ಲಿ ಸ್ತ್ರೀಶಕ್ತಿ ಜಾಗೃತವಾಗಿದೆ. ಮಹಿಳೆಯರಿಗೆ ಸಾಧನೆಗೆ ಅವಕಾಶಗಳು ದಕ್ಕುತ್ತಿವೆ. ಹೊರಗೆ ಹೋಗಿ ದುಡಿಯುತ್ತೇನೆ ಎಂದರೆ, ಅಡ್ಡಿಪಡಿಸುವವರು ಕಡಿಮೆ. ಒಂದು ಕಾಲದಲ್ಲಿ ಸ್ತ್ರೀಯರಿಗೆ ನಿಷಿದ್ಧವಾಗಿದ್ದ ಸೇನೆಯ ಕೆಲ ಅವಕಾಶಗಳೂ ಈಗ ದಕ್ಕುತ್ತಿವೆ. ಪಂಚಾಯಿತಿ ಹಂತದಲ್ಲಿ ಶೇಕಡ 50 ಮೀಸಲಾತಿ ಇದೆ. ಶಾಸನಸಭೆಗಳಲ್ಲಿ ಶೇ.33 ಮೀಸಲಾತಿಯ ಮಾತು ಸಾಕಾರವಾಗಬೇಕಿದೆ. ಈಶ ಫೌಂಡೇಷನ್ ಸ್ಥಾಪಕ, ಆಧ್ಯಾತ್ಮಿಕ ಮಾರ್ಗದರ್ಶಕ ಸದ್ಗುರು ಅವರು ಹೇಳುವಂತೆ, ‘ಈ ಆಧುನಿಕ ಯುಗ ಎನ್ನುವುದು ಮಾನವನಿಗೆ ಸಾಧನೆಗೆ ಹಿಂದೆಂದೂ ಇಲ್ಲದ ಅವಕಾಶಗಳನ್ನು ಸೃಷ್ಟಿಸಿದೆ. ತಂತ್ರಜ್ಞಾನ ಬೆಳೆದಿದೆ.’ ನಮ್ಮ ಹೆಣ್ಮಕ್ಕಳು ಸಹ ಇದನ್ನು ಸಮರ್ಥವಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಜೈ ನಾರೀಶಕ್ತಿ! ಅಲ್ಲಿ ಅಫ್ಘಾನಿಸ್ತಾನದಲ್ಲಿ ಹೆಣ್ಮಕ್ಕಳಿಗೆ ಶಿಕ್ಷಣದ ಅವಕಾಶಗಳೇ ಮುಚ್ಚಲ್ಪಡುತ್ತಿವೆ ಎಂಬ ವರದಿಗಳ ನಡುವೆ, ನಮ್ಮಲ್ಲಿ ನೂರಕ್ಕೆ ನೂರು ಅಂಕ ತೆಗೆಯುವ ಹೆಣ್ಮಕ್ಕಳು ಹೆಮ್ಮೆಮೂಡಿಸುತ್ತಾರೆ.
ಯಾವ ಭಾರತದಲ್ಲಿ ಸಹಗಮನ ಪದ್ಧತಿ ಇತ್ತೋ, ಅದೇ ಭಾರತದಲ್ಲಿ ವಿಧವಾ ವಿವಾಹದ ಚರಿತ್ರೆಯೂ ಇದೆ. ಖುದ್ದು ಹೆಣ್ಮಕ್ಕಳೇ ಮುಂದೆನಿಂತು ವಿಧವಾ ವಿವಾಹ ಮಾಡಿಸಿದ ನಿದರ್ಶನಗಳಿವೆ. ನ್ಯೂನತೆ ಕಂಡುಬಂದಲ್ಲಿ ಸರಿಪಡಿಸಿಕೊಳ್ಳುವುದು, ಸಮಸ್ಯೆ ಇದ್ದಲ್ಲಿ ಪರಿಹಾರದ ದಾರಿಯ ಅನ್ವೇಷಣೆ ಭಾರತದ ಆತ್ಮಗುಣ.
ಕೊನೇಮಾತು: ಕೆಲ ದಿನಗಳ ಹಿಂದೆ ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಕ್ಕೆ ತೆಗೆದುಕೊಂಡರಲ್ಲ, ಆಗ ವಾಟ್ಸ್ಆ್ಯಪ್ ಜೋಕ್ ಗ್ರೂಪುಗಳಲ್ಲಿ ಒಂದು ಜೋಕ್ ಓಡಾಡುತ್ತಿತ್ತು. ಅದರ ಒಕ್ಕಣೆ ಹೀಗಿತ್ತು-‘ಎಷ್ಟೋ ಭಾರತೀಯರು ಈಗಲೂ ‘ತಾಳಿ’ಬಾನಿಗಳ ಹಿಡಿತದಲ್ಲಿದ್ದಾರೆ’. ಇದು ಕೆಲಮಟ್ಟಿಗೆ ನಿಜವೂ ಹೌದೆನ್ನಿ!
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)