ಅಂಕಣ

ಕಣಿವೆ ಶಾಂತವಾಗಿರೋ ಹೊತ್ತಲ್ಲಿ ನೆನಪು

ಇಂದಿಗೆ ಸರಿಯಾಗಿ 73 ವರ್ಷಗಳ ಹಿಂದೆ, ಅಂದರೆ 1953ರ ಜೂ. 23ರಂದು, ದೇಶ ಕಂಡ ಅಪ್ರತಿಮ ನಾಯಕ ಡಾ. ಶ್ಯಾಮಪ್ರಸಾದ್ ಮುಖರ್ಜಿ ಜಮ್ಮು-ಕಾಶ್ಮೀರ ಸರಕಾರದ ಕಸ್ಟಡಿಯಲ್ಲಿದ್ದಾಗಲೇ ಅನುಮಾನಾಸ್ಪದವಾಗಿ ದೇಹಾಂತವಾದರು!

ಡಾ. ಮುಖರ್ಜಿ ಅವಿಭಜಿತ ಬಂಗಾಳ ಸರಕಾರದಲ್ಲಿ ಮತ್ತು ನಂತರ ನೆಹರು ಸಂಪುಟದಲ್ಲಿ ಸಚಿವರಾಗಿದ್ದವರು. ಆದರೂ ನೆಹರು ಅವರ ಸೆಕ್ಯುಲರ್ ನೀತಿಯನ್ನು ಉಗ್ರವಾಗಿ ಟೀಕಿಸುತ್ತಿದ್ದರು. ಬಿಜೆಪಿಯ ಮೂಲಸ್ವರೂಪವಾಗಿದ್ದ ಜನಸಂಘದ ಸಂಸ್ಥಾಪಕರಲ್ಲಿ ಪ್ರಮುಖರಾಗಿದ್ದರು. ಹಿಂದು- ರಾಷ್ಟ್ರವಾದದ ಪ್ರಬಲ ಪ್ರತಿಪಾದಕರಾಗಿದ್ದರು. ಕಾಶ್ಮೀರವು ಭಾರತದಲ್ಲಿ ವಿಲೀನ ಆಗಬೇಕೆಂಬ ಹಕ್ಕೊತ್ತಾಯ ಮಂಡಿಸಿದ ಮೊದಲಿಗರೂ ಅವರೇ. ಅದಕ್ಕೋಸ್ಕರ 1950ರ ದಶಕದಲ್ಲಿ ಏಕ್ ದೇಶ್ ಮೇ ಏಕ್ ವಿಧಾನ್, ಏಕ್ ಪ್ರಧಾನ್, ಏಕ್ ನಿಶಾನ್- ಒಂದು ದೇಶದಲ್ಲಿ ಒಂದೇ ಸಂವಿಧಾನ, ಒಬ್ಬನೇ ಪ್ರಧಾನಿ, ಒಂದೇ ಲಾಂಛನ- ಇರಬೇಕೆಂಬ ಘೊಷಣೆ ಮೊಳಗಿಸಿ, ದೇಶವ್ಯಾಪಿ ಆಂದೋಲನ ಆರಂಭಿಸಿದರು.

ವೀರಮರಣದ ಯಾತ್ರೆ: 1953ರ ಮೇ 8ರ ಮುಂಜಾನೆ 6.30ಕ್ಕೆ ಡಾ. ಮುಖರ್ಜಿ ತಮ್ಮ ಸಹವರ್ತಿಗಳೊಂದಿಗೆ ಕಾಯಿದೆಭಂಗ ಚಳವಳಿಗಾಗಿ ದೆಹಲಿ ರೈಲು ನಿಲ್ದಾಣದಿಂದ ಕಾಶ್ಮೀರಕ್ಕೆ ಪ್ರಯಾಣ ಆರಂಭಿಸಿದರು. ಅವರೊಂದಿಗೆ ಗುರುದತ್ ವೈದ್ಯ, ಅಟಲ್ ಬಿಹಾರಿ ವಾಜಪೇಯಿ, ಟೇಕ್​ಚಂದ್, ಬಲರಾಜ್ ಮಧೋಕ್ ಮತ್ತು ಕೆಲವರು ಪತ್ರಕರ್ತರಿದ್ದರು. ನೆಹರು ನೀಡಿದ್ದ ವಿಶೇಷ ಸ್ಥಾನಮಾನದ ಪ್ರಕಾರ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯ ಲಿಖಿತ ಪರವಾನಗಿಯಿಲ್ಲದೆ ಭಾರತದ ರಾಷ್ಟ್ರಪತಿ, ಪ್ರಧಾನಿ ಕೂಡ ಆ ರಾಜ್ಯಕ್ಕೆ ಭೇಟಿ ಕೊಡುವಂತಿರಲಿಲ್ಲ. ಇದರ ವಿರುದ್ಧ ಉಪವಾಸ ಸತ್ಯಾಗ್ರಹ ಮತ್ತು ಕಾನೂನುಭಂಗ ಚಳವಳಿ ಹಮ್ಮಿಕೊಳ್ಳುವ ಉದ್ದೇಶದಿಂದಲೇ ಮುಖರ್ಜಿ ಮೇ 11ರಂದು ಕಾಶ್ಮೀರಕ್ಕೆ ತಲುಪಿದರು.

‘ಏಕ್ ದೇಶ್ ಮೇ ದೋ ವಿಧಾನ್, ದೋ ಪ್ರಧಾನ್, ದೋ ನಿಶಾನ್ ನಹಿ ಚಲೇಗಿ ನಹಿ ಚಲೇಗಿ’ ಎಂಬ ಗರ್ಜನೆಯೊಂದಿಗೆ ಕಾಶ್ಮೀರ ತಲುಪುತ್ತಿದ್ದಂತೆ ಅಲ್ಲಿನ ಪೊಲೀಸರು ಡಾ.ಮುಖರ್ಜಿ ಮತ್ತವರ ಜತೆಗಾರರನ್ನು ಬಂಧಿಸಿದರು. ಶ್ರೀನಗರದಿಂದ ಬಲು ದೂರದ ನಿರ್ಜನ ಗುಡ್ಡಗಾಡು ಪ್ರದೇಶ ನಿಶಾತ್​ಬಾಗ್​ನ ಸರಕಾರಿ ವಸತಿಗೃಹವನ್ನು ಜೈಲಾಗಿ ಪರಿವರ್ತಿಸಿ ಅಲ್ಲಿ ಮುಖರ್ಜಿ ಒಬ್ಬರನ್ನೇ ಇರಿಸಿದರು.

ರೈಲಿನ ಮೂಲಕ ಕಾಶ್ಮೀರ ತಲುಪುವ ಹೊತ್ತಿಗೇ ಕೆಮ್ಮು, ಕಫ, ಉಸಿರಾಟದ ತೊಂದರೆಗೆ ಸಿಲುಕಿದ್ದ ಮಹಾನ್ ನಾಯಕನನ್ನು ಕಾಶ್ಮೀರ ಸರಕಾರ ಅಕ್ಷರಶಃ ಓರ್ವ ಪುಡಿರೌಡಿಯಂತೆ ನಡೆಸಿಕೊಂಡಿತು. ಕಾಲಿಗೆ ಗಾಯವಾಗಿ ನಡೆಯಲು ಪ್ರಯಾಸಪಡುತ್ತಿದ್ದ ಮುಖರ್ಜಿ ಅವರನ್ನು ಪೊಲೀಸರು ಬೆಟ್ಟದ ತುದಿಯ ಕಡಿದಾದ ಮೆಟ್ಟಿಲು ಹತ್ತಿಸಿ, ಕ್ರೂರವಾಗಿ ನಡೆಸಿಕೊಂಡರು.

ಜೂನ್ ಮೊದಲ ವಾರ ಮುಖರ್ಜಿಯವರ ಆರೋಗ್ಯ ಅನುಮಾನಾಸ್ಪದ ರೀತಿಯಲ್ಲಿ ಕ್ಷೀಣಿಸತೊಡಗಿತ್ತು. ಜೂ. 20ರ ಮಧ್ಯಾಹ್ನ 3.30ರ ಹೊತ್ತಿಗೆ ಅವರಿಗೆ ಕ್ಷಯರೋಗಕ್ಕೆ ಬಳಸುವ ಸ್ಟ್ರೆಪ್ಟೊಮೈಸಿನ್ ನೀಡಲಾಯಿತು. ಅದು ಅವರಿಗೆ ಅಲರ್ಜಿ ಎಂದು ಜತೆಗಿದ್ದವರು ಹೇಳಿದರೂ ಡಾ. ಅಲಿ ಅಹಮದ್ ಎಂಬ ವೈದ್ಯ ಬಲವಂತವಾಗಿ ಅದೇ ಔಷಧ ನೀಡಿದ. ಅದಲ್ಲದೆ, ನೋವು ನಿವಾರಕ ಔಷಧ ಎಂದು ಒಂದು ತೆರನಾದ ಪೌಡರನ್ನು ದಿನಕ್ಕೆರಡು ಬಾರಿ ತೆಗೆದುಕೊಳ್ಳಲು ಕೊಡಲಾಗಿತ್ತು. ಮುಖರ್ಜಿಯವರ ಅನಾರೋಗ್ಯದ ಕುರಿತು ಅವರ ಸಂಬಂಧಿಗಳಿಗೆ ತಿಳಿಸಲು ಜೈಲ್ ಸೂಪರಿಂಟೆಂಡೆಂಟ್​ಗೆ ಕೇಳಿಕೊಂಡರೂ ಪ್ರಯೋಜನವಾಗಲಿಲ್ಲ.

ಮರುದಿನವೂ ಜೈಲಿನ ವೈದ್ಯರೇ ಚಿಕಿತ್ಸೆ ಮುಂದುವರೆಸಿದರು. ಮುಖರ್ಜಿಯವರಿಗೆ ಔಷಧೋಪಚಾರ ಸಲಹೆ ಮಾಡುತ್ತಿದ್ದ ಹಿರಿಯ ವೈದ್ಯರು ಕನಿಷ್ಠ ಅವರನ್ನು ನೋಡುವ ಸೌಜನ್ಯವನ್ನೂ ತೋರಲಿಲ್ಲ. ಸಾಲದೆಂಬುದಕ್ಕೆ ಸ್ಟ್ರೆಪ್ಟೊಮೈಸಿನ್ ಡೋಸನ್ನು ಮತ್ತೆ ಒಂದು ಗ್ರಾಂ ಹೆಚ್ಚಿಸಿದರು. ಪರಿಣಾಮವಾಗಿ ಜ್ವರ, ಮೈಕೈ ನೋವು ತೀವ್ರವಾಯಿತು. ಜೂ. 22ರ ಬೆಳಗಿನ ಜಾವ ‘ಮುಖರ್ಜಿ ನಿಮ್ಮನ್ನು ನೋಡಲು ಬಯಸುತ್ತಿದ್ದಾರೆ’ ಎಂದು ಸಹವರ್ತಿ ಗುರುದತ್ ಅವರಿಗೆ ತಿಳಿಸಲಾಯಿತು. ಅಲ್ಲಿಗೆ ಹೋದಾಗ ಮುಖರ್ಜಿಯವರ ಜ್ವರ ತೀವ್ರಗೊಂಡಿತ್ತು, ಆರೋಗ್ಯ ಅತ್ಯಂತ ಕ್ಷೀಣಿಸಿತ್ತು. ಮುಂಜಾನೆ 5.15ಕ್ಕೆ ಮುಖರ್ಜಿಯವರ ಆರೋಗ್ಯ ತೀವ್ರವಾಗಿ ಹದಗಟ್ಟಿರುವ ಬಗ್ಗೆ ಜೈಲ್ ಸೂಪರಿಂಟೆಂಡೆಂಟ್ ಮಾಹಿತಿ ನೀಡಿದರು. ಮುಂಜಾನೆ 7.30ಕ್ಕೆ ಮುಖರ್ಜಿ ಅವರನ್ನು ನೋಡಲು ಡಾ. ಅಲಿ ಬಂದರು. ತಕ್ಷಣ ಮುಖರ್ಜಿಯವರನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ವಿಚಿತ್ರ ಎಂದರೆ ಹಾಗೆ ಮಾಡಲು ತನಗೆ ಡಿಸ್ಟ್ರಿಕ್ಟ್ ಮಾಜಿಸ್ಟ್ರೇಟರಿಂದ ಲಿಖಿತ ಆದೇಶ ಬೇಕೆಂದು ಜೈಲು ಸೂಪರಿಂಟೆಂಡೆಂಟ್ ವರಾತ ತೆಗೆದರು. ಅಗತ್ಯ ಅನುಮತಿ ಕೊಡಿಸಲು ಡಾ. ಅಲಿ ಬಳಿ ಟೇಕ್​ಚಂದ್ ಮತ್ತು ಗುರುದತ್ ಪರಿಪರಿಯಾಗಿ ಬೇಡಿಕೊಂಡರೂ ಆತ, ‘ನಿಮ್ಮ ಭಾವನೆ ನನಗೆ ಅರ್ಥವಾಗುತ್ತದೆ, ಚಿಂತೆ ಮಾಡಬೇಡಿ, ಮುಖರ್ಜಿ ಸುರಕ್ಷಿತ ಕೈಗಳಲ್ಲಿದ್ದಾರೆ’ ಎಂದೇ ಹೇಳಿದರು. ಬೆಳಗ್ಗೆ 11-30ರ ಸುಮಾರಿಗೆ ಜೈಲ್ ಸೂಪರಿಂಟೆಂಡೆಂಟ್ ಒಂದು ಬಾಡಿಗೆ ಕಾರ್ ತರಿಸಿದರು. ಮುಖರ್ಜಿಯವರನ್ನು ಸೂಕ್ತ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬದಲು ಹತ್ತು ಮೈಲು ದೂರದಲ್ಲಿದ್ದ ಸರಕಾರಿ ಪ್ರಸೂತಿಗೃಹದ ವಾರ್ಡಿಗೆ ದಾಖಲಿಸಿದರು. ಜೂ. 23ರ ಬೆಳಗಿನ ಜಾವ ಪೊಲೀಸ್ ಸೂಪರಿಂಟೆಂಡೆಂಟ್​ರಿಂದ ಟೇಕ್​ಚಂದ್ ಮತ್ತು ಗುರುದತ್ ಅವರಿಗೆ ಮುಖರ್ಜಿ ಅವರ ಆರೋಗ್ಯ ತೀರಾ ಹದಗೆಟ್ಟಿದೆ ಎಂಬ ಮಾಹಿತಿ ಬಂತು.

ಬೆಳಗಿನ ಜಾವ ನಾಲ್ಕು ಗಂಟೆ! ಟೇಕ್​ಚಂದ್ ಮತ್ತು ಗುರುದತ್ ಅವರು ಆಸ್ಪತ್ರೆ ವಾರ್ಡಿಗೆ ಧಾವಿಸುತ್ತಾರೆ. ಆಸ್ಪತ್ರೆ ಅಧಿಕಾರಿಗಳು ಹೇಳುತ್ತಾರೆ- ಮುಖರ್ಜಿ 3.40ಕ್ಕೆ ಕೊನೆಯುಸಿರೆಳೆದರು ಎಂದು!

ಮರಣೋತ್ತರ ಪರೀಕ್ಷೆ ಮಾಡುವುದಿಲ್ಲ!: ಸರಕಾರ ಮುಖರ್ಜಿ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿಸುವುದಿಲ್ಲ. ಆಗ ಪ್ರಧಾನಿ ನೆಹರು ಲಂಡನ್ ಪ್ರವಾಸದಲ್ಲಿದ್ದರು. ಹಂಗಾಮಿ ಪ್ರಧಾನಿ ಮೌಲಾನಾ ಆಜಾದ್ ಅವರೂ ಅಂತಿಮದರ್ಶನಕ್ಕೆ ದೆಹಲಿಯಲ್ಲಿ ವ್ಯವಸ್ಥೆ ಮಾಡಿಕೊಡದೆ ನೇರವಾಗಿ ಕೋಲ್ಕತ್ತಾಗೆ ಕಳಿಸುತ್ತಾರೆ. ಮುಖರ್ಜಿ ಸಾವಿನ ಸುದ್ದಿ ಇಡೀ ದೇಶದಲ್ಲಿ ಲಕ್ಷಾಂತರ ಜನರಿಗೆ ಆಘಾತ ತರುತ್ತದೆ. ಮುಖರ್ಜಿ ಅವರ ತಾಯಿ ಜಗಮಯದೇವಿ ಅವರಿಗೆ ಪ್ರಧಾನಿ ನೆಹರು ಸಂತಾಪಪತ್ರ ಕಳಿಸುತ್ತಾರೆ. ಅದನ್ನು ಸ್ವೀಕರಿಸಿದ ತಾಯಿ, ಉನ್ನತ ತನಿಖೆ ನಡೆಸುವಂತೆ ನೆಹರು ಅವರಿಗೆ ಒತ್ತಾಯಿಸುತ್ತಾರೆ. ‘ಮುಖರ್ಜಿ ಸಾವಿನ ಕುರಿತು ಖಚಿತ ಮಾಹಿತಿ ಸಂಗ್ರಹಿಸಿದ್ದೇನೆ, ಆ ಎಲ್ಲ ಮಾಹಿತಿಯಿಂದ ತೃಪ್ತನಾಗಿದ್ದೇನೆ, ಯಾವುದೇ ಹೆಚ್ಚಿನ ತನಿಖೆ ಅಗತ್ಯವಿಲ್ಲ’ ಎಂದು ನೆಹರು ಕಡ್ಡಿ ಮುರಿದಂತೆ ಹೇಳುತ್ತಾರೆ. ಆರಂಭದ ದಿನಗಳಲ್ಲಿ ಮುಖರ್ಜಿಯವರ ಆಪ್ತ ಸಹಾಯಕರಾಗಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ‘ಇದು ಸಹಜ ಸಾವಲ್ಲ, ನೆಹರು ಸರಕಾರ ಮತ್ತು ಶೇಖ್ ಅಬ್ದುಲ್ಲಾ ಸರಕಾರ ಜಂಟಿಯಾಗಿ ನಡೆಸಿದ ರಾಜಕೀಯ ಕಗ್ಗೊಲೆ. ದೆಹಲಿ ಸರಕಾರ ಬಯಸಿದ್ದರೆ ಅವರನ್ನು ಪಂಜಾಬ್ ನಲ್ಲೇ ಬಂಧಿಸಬಹುದಿತ್ತು. ಮುಖರ್ಜಿ ಕಾಶ್ಮೀರಕ್ಕೆ ಪ್ರವೇಶಿಸಬೇಕು ಮತ್ತು ಅಲ್ಲಿಂದ ಜೀವಂತ ಮರಳಬಾರದು ಎಂಬುದು ತೀರ್ಮಾನ ಆಗಿತ್ತು’ ಎಂದಿದ್ದಾರೆ.

ಮುಖರ್ಜಿಯವರ ಬಲಿದಾನ ವ್ಯರ್ಥವಾಗಲಿಲ್ಲ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370ನ್ನು 2019ರ ಆ. 5ರಂದು ಪ್ರಧಾನಿ ಮೋದಿ ರದ್ದು ಮಾಡಿದರು. ಆ ಮೂಲಕ ಮುಖರ್ಜಿ ಕಂಡ ಕನಸನ್ನು 68 ವರ್ಷಗಳ ತರುವಾಯ ಈಡೇರಿಸಿದರು. ನೆಹರು ಕಾಶ್ಮೀರಕ್ಕೆ ನೀಡಿದ ಕರಾಳ ಶಾಸನ ಮುಖರ್ಜಿಯಂತಹ ಅಪ್ಪಟ ದೇಶಭಕ್ತನನ್ನು ಕಳೆದುಕೊಳ್ಳುವಂತೆ ಮಾಡಿತು. ನೆಹರು ಪುತ್ರಿ ಇಂದಿರಾ 1975ರ ಜೂ. 25ರಂದು ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿಯ ಕರಾಳ ನೆನಪು ಇನ್ನೆರಡು ದಿನಕ್ಕೆ ಮರುಕಳಿಸುತ್ತದೆ.

ಆಧಾರ: ‘ಶ್ಯಾಮಪ್ರಸಾದ್ ಮುಖರ್ಜಿ: ಹಿಸ್ ಲೈಫ್ ಆಂಡ್ ಟೈಮ್ಸ್​’ ; ಲೇ: ತಥಾಗತ ರಾಯ್; ಶ್ಯಾಮಪ್ರಸಾದ್ ಮುಖರ್ಜಿ ಜೀವನ ಚರಿತ್ರೆ- ಇಂಗ್ಲಿಷ್ ಮೂಲ.

(ಲೇಖಕರು ಬಿಜೆಪಿಯ ಹಿರಿಯ ವಕ್ತಾರರು)