ಅಂಕಣ

ಆಂತರ್ಯದ ಲೋಕ ಪ್ರವೇಶಿಸಲು ಧ್ಯಾನವೇ ಸಾಧನ

rashmirhebbur
ಧ್ಯಾನವು ಮನಸ್ಸು ಮತ್ತು ದೇಹವನ್ನು ಮೀರಿ ಹೋಗಲು ಒಂದು ವೈಜ್ಞಾನಿಕ ಸಾಧನ. ದೇಹ ಮತ್ತು ಮನಸ್ಸು ಎಂಬುದು ಬದುಕುಳಿಯುವಿಕೆಗೆ ಬೇಕಾದ ಸಾಮಗ್ರಿಗಳು, ಆದರೆ, ಅದರಿಂದ ಪರಿಪೂರ್ಣ ತೃಪ್ತಿ ಸಿಗುವುದಿಲ್ಲ. ಯಾಕೆಂದರೆ ಅವೆಲ್ಲವನ್ನೂ ಮೀರಿದ ಒಂದನ್ನು ಅರಸುವುದು ಮನುಷ್ಯನ ವಿಶಿಷ್ಟ ಗುಣ.

ಧ್ಯಾನ ಎಂದರೆ ದೇಹ ಮತ್ತು ಮನಸ್ಸಿನ ಮಿತಿಗಳನ್ನು ಮೀರಿ ಸಾಗುವುದು ಎಂದರ್ಥ. ದೇಹ ಮತ್ತು ಮನಸ್ಸಿನ ಜೊತೆಗಿರುವ ಸೀಮಿತ ದೃಷ್ಟಿಕೋನವನ್ನು ಮೀರಿದರಷ್ಟೇ ಜೀವನದ ಪರಿಪೂರ್ಣ ಆಯಾಮವನ್ನು ತಲುಪಲು ಸಾಧ್ಯ. ದೇಹ ಎಂದರೆ ಅದು ಕೇವಲ ನೀವು ಸೇವಿಸಿರುವ ಆಹಾರದ ಸಂಗ್ರಹ. ಮನಸ್ಸು ಎಂದರೆ ಈವರೆಗೂ ಬಾಹ್ಯ ಪ್ರಪಂಚದಿಂದ ಸಂಗ್ರಹಿಸಿರುವ ಅನಿಸಿಕೆಗಳು ಮತ್ತು ಅಭಿಪ್ರಾಯಗಳು.

ದೇಹದೊಂದಿಗೆ ಗುರುತಿಸಿಕೊಂಡರೆ, ಜೀವನ ಕೇವಲ ಬದುಕುಳಿಯುವುದರ ಕುರಿತು ಚಿಂತಿಸುವುದರಲ್ಲೇ ಸಾಗುತ್ತದೆ. ಮನಸ್ಸಿನೊಂದಿಗೆ ಗುರುತಿಸಿಕೊಂಡರೆ, ಸಂಪೂರ್ಣ ದೃಷ್ಟಿಕೋನ ಸಾಮಾಜಿಕ, ಧಾರ್ವಿುಕ ಮತ್ತು ಕುಟುಂಬದ ವಿಚಾರಗಳ ಚಿಂತನೆಯಲ್ಲೇ ಸಾಗುತ್ತದೆ. ಅದನ್ನು ಮೀರಿ ಸಾಗುವುದಕ್ಕೆ ಆಗುವುದಿಲ್ಲ. ಸ್ವಂತ ಮನಸ್ಸಿನ ಚಿಂತನೆಗಳ ಮಾರ್ಪಾಡುಗಳಿಂದ ಮುಕ್ತರಾದರಷ್ಟೇ ಈ ಎಲ್ಲ ಆಯಾಮಗಳನ್ನು ಮೀರಿ ಸಾಗಲು ಸಾಧ್ಯ.

ಈ ದೇಹ ಮತ್ತು ಮನಸ್ಸು ನಿಮ್ಮದಲ್ಲವೆಂಬುದನ್ನು ಅರ್ಥಮಾಡಿಕೊಳ್ಳಬೇಕು. ಅದು ನಿರ್ದಿಷ್ಟ ಅವಧಿಯಲ್ಲಿ ಸಂಗ್ರಹಿಸಿಕೊಂಡಿರುವ ವಿಷಯಗಳು ಅಷ್ಟೇ. ದೇಹ ಸೇವಿಸಿದ ಆಹಾರದ ಸಂಗ್ರಹಣೆಯಾದರೆ, ಮನಸ್ಸು ಹೊರಜಗತ್ತಿನಿಂದ ಸಂಗ್ರಹಿಸಿದಂಥ ವಿಚಾರಗಳು. ನೀವು ಸಂಗ್ರಹಿಸಿರುವುದು ನಿಮ್ಮ ಆಸ್ತಿಯಷ್ಟೇ. ಸ್ವಂತ ಮನೆ, ಬ್ಯಾಂಕ್ ಬ್ಯಾಲೆನ್ಸ್ ಇರುವ ಹಾಗೆಯೇ ಮನಸ್ಸು ಮತ್ತು ದೇಹ. ಉತ್ತಮ ಬ್ಯಾಂಕ್ ಬ್ಯಾಲೆನ್ಸ್, ಉತ್ತಮ ದೇಹ ಮತ್ತು ಮನಸ್ಸನ್ನು ಹೊಂದಿರುವುದರಿಂದ ಉತ್ತಮ ಜೀವನ ಸಾಗಿಸಬಹುದು. ಆದರೆ, ಅವುಗಳೇ ಸರ್ವಸ್ವವಲ್ಲ. ಕೇವಲ ಈ ವಿಷಯಗಳನ್ನು ಪಡೆದುಕೊಳ್ಳುವುದರಿಂದ ಯಾವುದೇ ಮನುಷ್ಯ ಪೂರ್ಣತೃಪ್ತನಾಗುವುದಿಲ್ಲ. ಈ ಭೌತಿಕ ಸೌಲಭ್ಯಗಳು ಜೀವನವನ್ನು ಆರಾಮದಾಯಕ ಮತ್ತು ಅನುಕೂಲಕರವಾಗಿಸುತ್ತವೆ ಅಷ್ಟೇ. ಹಿಂದಿನ ಯಾವುದೇ ಪೀಳಿಗೆಗಳಿಗೆ ಇಲ್ಲದ ಅನುಕೂಲಗಳು ಮತ್ತು ಸೌಲಭ್ಯಗಳು ಈಗಿನ ಪೀಳಿಗೆಯವರಿಗೆ ಇವೆ. ಹಾಗಾಗಿಯೇ ಆರಾಮದಾಯಕವಾಗಿದೆ ನಮ್ಮ ಈಗಿನ ಪೀಳಿಗೆ. ಆದರೆ, ಇವನ್ನೆಲ್ಲ ಪಡೆದಿರುವ ನಾವು ಆನಂದದಾಯಕ ಮತ್ತು ಪ್ರೀತಿಪೂರ್ಣವಾಗಿ ಬದುಕು ನಡೆಸುತ್ತಿದ್ದೇವೆ ಎಂದು ಖಂಡಿತವಾಗಿಯೂ ಹೇಳಿಕೊಳ್ಳಲು ಸಾಧ್ಯವಿಲ್ಲ.

ಧ್ಯಾನವು ಮನಸ್ಸು ಮತ್ತು ದೇಹವನ್ನು ಮೀರಿ ಹೋಗಲು ಒಂದು ವೈಜ್ಞಾನಿಕ ಸಾಧನ. ದೇಹ ಮತ್ತು ಮನಸ್ಸು ಎಂಬುದು ಬದುಕುಳಿಯುವಿಕೆಗೆ ಬೇಕಾದ ಸಾಮಗ್ರಿಗಳು, ಆದರೆ, ಅದರಿಂದ ಪರಿಪೂರ್ಣ ತೃಪ್ತಿ ಸಿಗುವುದಿಲ್ಲ. ಯಾಕೆಂದರೆ ಅವೆಲ್ಲವನ್ನೂ ಮೀರಿದ ಒಂದನ್ನು ಅರಸುವುದು ಮನುಷ್ಯನ ವಿಶಿಷ್ಟ ಗುಣ. ಸ್ವತಃ ನಾವು ಯಾರು ಎಂಬುದನ್ನೇ ಅರಿಯದೆ ಹೋದರೆ, ಈ ಜಗತ್ತನ್ನು ಹೇಗೆ ತಾನೇ ಅರಿಯಬಲ್ಲೆವು? ದೇಹ ಮತ್ತು ಮನಸ್ಸಿನ ಮಿತಿಗಳನ್ನು ದಾಟಿ ಪರಿವರ್ತನೆಗೊಂಡರಷ್ಟೇ ನಿಜಸ್ವರೂಪದ ಅನುಭವ ಪಡೆಯಬಹುದು. ಯೋಗ ಮತ್ತು ಧ್ಯಾನ ಇದಕ್ಕೆ ಪೂರಕವಾದ ಸಾಧನಗಳು.

ದೇಹ ಮತ್ತು ಮನಸ್ಸಿನ ಮಿತಿಗಳನ್ನು ಮೀರಿ ಸಾಗಲು ಅಸಾಧ್ಯವಾದರೆ, ಜೀವನವು ಕೇವಲ ತಿನ್ನುವುದು, ಮಲಗುವುದು, ಸಂತಾನೋತ್ಪತ್ತಿ ಮತ್ತು ಕೊನೆಗೊಂದು ದಿನ ಸಾವಿನಲ್ಲಿ ಮುಕ್ತಾಯವಾಗುತ್ತದೆ. ಇಷ್ಟೇ ಆದರೆ ಜೀವನ ಪೂರ್ಣತ್ವ ಪಡೆದುಕೊಳ್ಳುವುದಿಲ್ಲ. ಈ ಎಲ್ಲ ವಿಷಯಗಳು, ಸೌಲಭ್ಯಗಳು ಸಿಕ್ಕರೂ ಜೀವನ ಪೂರ್ಣತ್ವ ಕಾಣಲಸಾಧ್ಯ. ಕಾರಣವೆಂದರೆ, ಮಾನವರ ಸ್ವರೂಪ ಎಂತಹದ್ದೆಂದರೆ, ಅವರ ಜ್ಞಾನ ಕೆಲವು ನಿರ್ದಿಷ್ಟ ಎಲ್ಲೆಗಳನ್ನು ಮೀರಿದ್ದಾಗಿದೆ. ಎಷ್ಟೇ ಅರಿತರೂ, ಅದು ತೃಪ್ತಿ ಕಾಣುವುದಿಲ್ಲ. ಅದು ಎಲ್ಲವನ್ನೂ ಮೀರಿದ ಅನಂತತೆಯನ್ನು ಕಾಣಬೇಕು ಎಂದು ತುಡಿಯುತ್ತಿರುತ್ತದೆ. ನಿಜಸ್ವರೂಪವಾದ ಅನಂತತೆಯ ಈ ಆಯಾಮದೆಡೆಗೆ ಸಾಗುವುದಕ್ಕೆ ಧ್ಯಾನವೇ ಪ್ರಮುಖ ದಾರಿಯಾಗಿದೆ.

ಆದರೆ ಯಜ್ಞ-ಯಾಗಾದಿಗಳು ಮತ್ತು ಕೆಲವು ವಿಧಿ-ಆಚರಣೆಗಳ ಮೂಲಕ ಒಬ್ಬ ಮನುಷ್ಯ ಅಮಿತತೆಯ ಆಯಾಮವನ್ನು ಮುಟ್ಟಬಹುದೇ? ಅಥವಾ ಧ್ಯಾನವೊಂದೇ ಮಾರ್ಗವೇ? ಎಂಬ ಪ್ರಶ್ನೆ ಹಲವರಿಗೆ ಕಾಡುತ್ತದೆ. ಈಶಾದಲ್ಲಿ ನಾವು ಆಚರಣಾ ಪದ್ಧತಿಯನ್ನು ಆದಷ್ಟು ಕಡಿಮೆಯಾಗಿಸಿ, ಧ್ಯಾನವನ್ನು ಮುಖ್ಯವಾಗಿ ತೆಗೆದುಕೊಂಡಿರುವುದಕ್ಕೆ ಕಾರಣ ಧ್ಯಾನ ಒಂದು ಪ್ರತ್ಯೇಕ ಪ್ರಕ್ರಿಯೆ. ಏಕೆಂದರೆ ಆಚರಣೆಯು ದುರ್ಬಳಕೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ, ಯಾರೂ ಧ್ಯಾನ ಪ್ರಕ್ರಿಯೆಯ ದುರ್ಬಳಕೆಯನ್ನು ಮಾಡಲಾಗದು. ಏಕೆಂದರೆ ಅದು ಒಬ್ಬ ವ್ಯಕ್ತಿ ಪ್ರತ್ಯೇಕವಾಗಿ ಮಾಡುವಂಥ ಪ್ರಕ್ರಿಯೆಯಾಗಿದೆ. ಆಧುನಿಕ ಸಮಾಜದಲ್ಲಿ ಪ್ರತ್ಯೇಕತೆಯೇ ಶಾಪವಾಗಿ ಹೊರಹೊಮ್ಮಿದೆ. ಆಧುನಿಕ ಶಿಕ್ಷಣವನ್ನು ಹೆಚ್ಚು ಪಡೆದಷ್ಟು ಜನರು ಹೆಚ್ಚು ಹೆಚ್ಚು ಪ್ರತ್ಯೇಕವಾಗಿ ಇರಲು ಬಯಸುತ್ತಿದ್ದಾರೆ ಎಂಬುದು ಅಚ್ಚರಿಯೂ, ವಿಪರ್ಯಾಸದ ಸಂಗತಿಯೂ ಹೌದು.

ಮನೆಯಲ್ಲಿ ಇಬ್ಬರು ಹೊಂದಾಣಿಕೆಯಿಂದ ಇರಲು ಸಾಧ್ಯವಾಗುತ್ತಿಲ್ಲ ಎನ್ನುವಷ್ಟು ಪರಿಸ್ಥಿತಿ ಹದಗೆಟ್ಟಿದೆ. ಅಂದರೆ, ಬಾಹ್ಯಜೀವನಕ್ಕೆ ಎಷ್ಟು ಶರಣಾಗಿದ್ದೇವೆ ಎಂಬುದಕ್ಕೆ ಸಾಕ್ಷಿ. ಇಂದಿಗೂ ದಕ್ಷಿಣ ಭಾರತದಲ್ಲಿ ಒಂದೇ ಕುಟುಂಬದಲ್ಲಿ 400 ಜನರು ಒಂದಾಗಿ ವಾಸಿಸುವುದನ್ನು ಕಾಣಬಹುದು. ಅದು ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, ದೊಡ್ಡಮ್ಮ, ಅಜ್ಜ, ಅಜ್ಜಿ ಎಲ್ಲರನ್ನೂ ಒಳಗೊಂಡಂಥ ತುಂಬು ಕುಟುಂಬವಾಗಿರುತ್ತದೆ. ಕುಟುಂಬದಲ್ಲಿ ಒಬ್ಬ ಮುಖ್ಯಸ್ಥರು ಇರುತ್ತಾರೆ ಮತ್ತು ಇತರ ಎಲ್ಲರಿಗೂ ವಹಿಸಲು ತಮ್ಮದೇ ಪಾತ್ರವಿರುತ್ತದೆ. ಕನಿಷ್ಟ 70-80 ಮಕ್ಕಳು ಮನೆಯಲ್ಲಿ ವಾಸವಿರುತ್ತಾರೆ. ಆ ಮಕ್ಕಳಿಗೆ ಸ್ವಲ್ಪ ವಯಸ್ಸಾಗುವವರೆಗೂ, ತಮ್ಮ ತಂದೆ-ತಾಯಿ ಯಾರು ಎಂಬುದೇ ತಿಳಿಯುವುದಿಲ್ಲ. ಏಕೆಂದರೆ, ಮನೆಯಲ್ಲಿನ 8-10 ಮಹಿಳೆಯರು (ದೊಡ್ಡಮ್ಮ, ಚಿಕ್ಕಮ್ಮ, ಅಜ್ಜಿ, ಇತರ ಸಂಬಂಧಿಗಳು) ಎಲ್ಲ ಮಕ್ಕಳನ್ನೂ ಕಾಳಜಿವಹಿಸಿ ಬೆಳೆಸುತ್ತಿರುತ್ತಾರೆ. 12-13 ವರ್ಷ ವಯಸ್ಸಾಗುವವರೆಗೂ, ಆ ಮಕ್ಕಳು ತಮ್ಮ ನಿಜವಾದ ತಂದೆ-ತಾಯಿ ಯಾರು ಎಂಬುದನ್ನು ಅರಿತಿರುವುದಿಲ್ಲ. ಗೊತ್ತಿದ್ದರೂ, ಅವರು ಶಾಲೆಯನ್ನು ಪ್ರವೇಶಿಸಿ ಸ್ವಲ್ಪ ಮಟ್ಟದ ಆಲೋಚನೆ ಮಾಡುವುದನ್ನು

ಪ್ರಾರಂಭಿಸುವ ತನಕ ಪಾಲಕರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವುದಿಲ್ಲ. ಆದರೆ, ಆಧುನಿಕ ಶಿಕ್ಷಣ ಪದ್ಧತಿಯ ದುಷ್ಪರಿಣಾಮಗಳು, ಕಡಿಮೆಯಾಗುತ್ತಿರುವ ಸಂಸ್ಕಾರಗಳು, ಕ್ಷೀಣಿಸುತ್ತಿರುವ ಕೌಟುಂಬಿಕ ಮೌಲ್ಯಗಳ ಪರಿಣಾಮ ಬಹಳಷ್ಟು ಜನರಿಗೆ ಕೂಡಿ ಬದುಕಲು ಸಾಧ್ಯವಾಗುತ್ತಿ್ತಲ್ಲ. ಆಧುನಿಕ ಶಿಕ್ಷಣ ಪದ್ಧತಿ ಪ್ರತ್ಯೇಕತೆಯನ್ನೇ ಕಲಿಸಿಕೊಡುತ್ತಿದೆ, ಆದರೆ ಪೂರ್ಣ ಅಸ್ತಿತ್ವ ಏಕತೆ ಅಥವಾ ಒಳಗೊಳ್ಳುವಿಕೆಯ ಪ್ರಕ್ರಿಯೆಯಾಗಿ ನಡೆಯುತ್ತಿದೆ.

ಒಳಗೊಳ್ಳುವಿಕೆಗೆ ದಾರಿ: ಧ್ಯಾನ ಪ್ರತ್ಯೇಕವಾಗಿ ಮಾಡುವ ಒಂದು ಪ್ರಕ್ರಿಯೆಯಾದರೂ, ಅದು ನಂತರದಲ್ಲಿ ನಮ್ಮನ್ನು ಒಳಗೊಳ್ಳುವಿಕೆಯೆಡೆಗೆ ಒಯ್ಯುತ್ತದೆ. ಆದರೆ, ಪ್ರಾರಂಭದಲ್ಲಿ ಕಣ್ಣನ್ನು ಮುಚ್ಚಿ ಕುಳಿತಿರುತ್ತೀರಿ. ಆಧ್ಯಾತ್ಮಿಕದ ಆರಂಭದ ಹಂತದಲ್ಲಿ ಜನರು ಹೆಚ್ಚು ಪ್ರತ್ಯೇಕವಾಗಿರುತ್ತಾರೆ- ಯಾರೊಬ್ಬರೊಂದಿಗೂ ಬೆರೆಯಲು ಬಯಸುವುದಿಲ್ಲ. ಇದರಂದಲೇ ತುಂಬ ಜನರಿಗೆ ‘ನಾನು ಅಧ್ಯಾತ್ಮ ಪಥದಲ್ಲಿ ಮುಂದುವರಿದರೆ, ಸಮಾಜದೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗದಿರಬಹುದು’ ಎಂಬ ಭಯ ಕಾಡುತ್ತಿರುತ್ತದೆ.

ನಾವು ಈ ಧ್ಯಾನಮಾರ್ಗವನ್ನು ಏಕೆ ಆಯ್ಕೆ ಮಾಡಿದ್ದೇವೆ ಎಂದರೆ ಒಳಗೊಳ್ಳುವಿಕೆ ಅಥವಾ ಏಕತೆಯ ಮಾರ್ಗ ಇಂದಿನ ಸಮಾಜದಲ್ಲಿ ಕಷ್ಟಸಾಧ್ಯ. ಒಂದು ಆಚರಣೆಯನ್ನು ಅನುಸರಿಸಿದಿರಿ ಎಂದುಕೊಳ್ಳಿ, ಎಲ್ಲರೂ ಅದನ್ನು ಒಪ್ಪಿ ಆಚರಿಸಲು ಸಿದ್ಧರಿರಬೇಕು. ಯಾವುದಾದರೂ ನಿರ್ದಿಷ್ಟ ಆಚರಣೆಯಲ್ಲಿ ಪಾಲ್ಗೊಳ್ಳಲು ಒಬ್ಬರಲ್ಲಿ ಗಾಢವಾದ ಐಕ್ಯತಾ ಭಾವವಿರಬೇಕು. ಮತ್ತೊಂದು ಅಂಶವೆಂದರೆ, ಅದಕ್ಕೆ ಪೂರಕವಾದ ವಾತಾವರಣವನ್ನು ಹೊಂದಿಸದಿದ್ದರೆ, ಅದರ ದುರ್ಬಳಕೆಯಾಗಬಹುದು. ಜನರು ಆ ಆಚರಣೆಯನ್ನು ತಮ್ಮ ಜೀವಕ್ಕೂ ಉತ್ಕೃಷ್ಟ ಎಂದು ನೋಡದಿದ್ದರೆ, ಯಾವುದೇ ಆಚರಣೆಯನ್ನು ಮಾಡಲಸಾಧ್ಯ. ಯಾಕೆಂದರೆ, ಆಚರಣೆಯ ದುರ್ಬಳಕೆಯಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಆದರೆ, ಧ್ಯಾನ ಪ್ರಕ್ರಿಯೆಯ ದುರ್ಬಳಕೆಯನ್ನು ಯಾರೂ ಮಾಡಲಾಗದು.

ಯಾವುದೇ ವಿಷಯದಲ್ಲಿ ‘ನೀವು ಮತ್ತು ನಾನು’ ಎಂಬ ಪೈಪೋಟಿ ಮನೋಭಾವ ಇರುತ್ತದೆಯೋ, ಅಂಥ ಪರಿಸ್ಥಿತಿಯಲ್ಲಿ ಯಾವುದೇ ಒಂದು ನಿರ್ದಿಷ್ಟ ಆಚರಣೆಯನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ. ಎಲ್ಲಿ ‘ನಾವೆಲ್ಲರೂ ಒಂದಾಗಿ ಇರಬೇಕು’ ಎಂಬ ಒಳಗೊಳ್ಳುವಿಕೆಯ ಮನೋಭಾವ ಇರುವುದೋ, ಅಂಥ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಆಚರಣೆ ಯಶಸ್ಸು ಕಾಣುತ್ತದೆ. ಆದರೆ, ಇಂದು ನಾವಿರುವ ಜಗತ್ತಿನಲ್ಲಿ, ಅಂಥ ಒಳಗೊಳ್ಳುವಿಕೆಯ ಮನೋಭಾವ ಸ್ಥಾಪಿಸುವುದು ಕಷ್ಟಸಾಧ್ಯ ಮತ್ತು ಕೆಲವೇ ಕೆಲವು ಸಮುದಾಯಗಳು ಇದನ್ನು ಉಳಿಸಿಕೊಂಡು ಬಂದಿವೆ. ಅದನ್ನು ಹೊರತುಪಡಿಸಿ, ಎಲ್ಲರೂ ಪ್ರತ್ಯೇಕವಾದಿಗಳೇ. ಇಂಥ ಸನ್ನಿವೇಶದಲ್ಲಿ ಧ್ಯಾನವು ಒಗ್ಗೂಡಿಸುವಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)