ನಮ್ಮ ಸಮಾಜದಲ್ಲಿ ಮಕ್ಕಳ ಆಧ್ಯಾತ್ಮಿಕ ಪಯಣದ ಮೊದಲ ಹೆಜ್ಜೆಯು ‘ತಾಯಿ’ಯಿಂದಲೇ ಆರಂಭವಾಗುತ್ತದೆ. ಏಕೆಂದರೆ, ಮಕ್ಕಳು ಅತಿ ಹೆಚ್ಚು ನೆನಪಿಸಿಕೊಳ್ಳುವುದು, ಸದಾ ಸ್ಮರಿಸುವುದು ಅಮ್ಮನನ್ನೇ. ಈ ಭೂಮಿಯ ಮೇಲೆ ಭಗವಂತನು ತಳೆಯುವ ಮೊದಲ ರೂಪವು ತಾಯಿಯದ್ದೇ ಆಗಿರುತ್ತದೆ. ಮಗು ಹುಟ್ಟಿದಾಗ ಅದು ಮೊದಲು ಗುರುತಿಸುವುದು ತನ್ನ ತಾಯಿಯನ್ನು. ಅವಳ ಸ್ಪರ್ಶ, ಕಾಳಜಿ ಮತ್ತು ಪ್ರೀತಿಯೇ ಮಗುವನ್ನು ಪೋಷಿಸುತ್ತವೆ. ತಾಯಿಯೊಂದಿಗಿನ ಈ ಸಂಬಂಧವೇ ಜಗತ್ತಿನ ಅತ್ಯಂತ ಆಳವಾದ ಮತ್ತು ಪವಿತ್ರವಾದ ಸಂಬಂಧ.
ನವರಾತ್ರಿಯ ಈ ಶುಭ ಸಂದರ್ಭದಲ್ಲಿ ನಾವು ಜಗನ್ಮಾತೆಯನ್ನು ಆರಾಧಿಸುತ್ತೇವೆ. ವರ್ಷವಿಡೀ ಲೌಕಿಕ ಜಗತ್ತಿನಲ್ಲಿ ಅಲೆದಾಡಿ ದಣಿದ ನಮ್ಮನ್ನು ಆ ತಾಯಿಯ ವಾತ್ಸಲ್ಯವೇ ಸಂತೈಸುತ್ತದೆ. ಅತ್ಯಂತ ಪ್ರೀತಿಯಿಂದ ನಮ್ಮ ಪ್ರಾರ್ಥನೆಯನ್ನು ಆಲಿಸಿ, ಭವಿಷ್ಯದ ಸವಾಲುಗಳಿಗೆ ಆ ಮಹಾಮಾತೆಯು ನಮ್ಮನ್ನು ಸಜ್ಜುಗೊಳಿಸುತ್ತಾಳೆ. ತನ್ನಲ್ಲಿ ಪ್ರಾಮಾಣಿಕವಾಗಿ ಶರಣಾದವರ ತಪ್ಪುಗಳನ್ನು ಉದಾರವಾಗಿ ಕ್ಷಮಿಸುವ ಆ ತಾಯಿ, ಭಕ್ತರ ಮುಂದಿನ ದಾರಿಯನ್ನು ಸ್ವತಃ ತಾನೇ ಬೆಳಗುತ್ತಾಳೆ.
‘ಸೌಂದರ್ಯ ಲಹರಿ’ ಸೇರಿದಂತೆ ಹಲವು ಬಗೆಯ ಸ್ತೋತ್ರ ಸಾಹಿತ್ಯದ ಮೂಲಕ ಜಗನ್ಮಾತೆಯ ಕರುಣೆ, ಶಕ್ತಿ ಮತ್ತು ಸೌಂದರ್ಯವನ್ನು ವರ್ಣಿಸಿದ, ಅದ್ವೈತ ವೇದಾಂತವನ್ನು ಜಗತ್ತಿಗೆ ಸಾರಿದ ಜಗದ್ಗುರು ಆದಿ ಶಂಕರಾಚಾರ್ಯರು ತಮ್ಮ ಜೀವನದ ಕೊನೆಯಲ್ಲಿ ಸಂನ್ಯಾಸದ ಕಠಿಣ ನಿಯಮಗಳನ್ನು ಮುರಿದು, ಸಮಾಜದ ವಿರೋಧದ ನಡುವೆಯೂ ತಮಗೆ ಜನ್ಮ ನೀಡಿದ ತಾಯಿ ಆರ್ಯಾಂಬೆಯ ಪಾರ್ಥಿವ ಶರೀರದ ಅಂತ್ಯಸಂಸ್ಕಾರವನ್ನು ನೆರವೇರಿಸಿದರು.
ತನ್ನ ತಾಯಿಯ ಕಡೆಗಿನ ಕರ್ತವ್ಯವನ್ನು ತಡೆಯುವ ಯಾವುದೇ ಸಂನ್ಯಾಸತ್ವವು ಯೋಗ್ಯವಲ್ಲ; ಏಕೆಂದರೆ, ತಾಯಿಯೇ ನನಗೆ ತಿಳಿದಿರುವ ಮೊದಲ ದೇವರು ಎಂದು ಅವರು ಸಾರಿದರು. ಇದು ದೇವರನ್ನು ತಾಯಿಯ ರೂಪದಲ್ಲಿ ಕಾಣಬೇಕಾದ ಔಚಿತ್ಯವನ್ನು ನಮಗೆಲ್ಲರಿಗೂ ನೆನಪಿಸುತ್ತದೆ. ಈ ನವರಾತ್ರಿಯು ಜಗನ್ಮಾತೆಯ ಆರಾಧನೆಯ ಜತೆಗೆ ನಮ್ಮ ಲೌಕಿಕ ತಾಯಂದಿರ ಅಗತ್ಯಗಳ ಬಗ್ಗೆಯೂ ಗಮನ ನೀಡುವ ಸಂದರ್ಭವಾಗಬೇಕು. ಏಕೆಂದರೆ, ‘ಈ’ ತಾಯಿಯನ್ನು ನಿರ್ಲಕ್ಷಿಸಿ, ‘ಆ’ ತಾಯಿಯನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ.
ತ್ವಮೇವ ಮಾತಾ ಚ ಪಿತಾ ತ್ವಮೇವ, ತ್ವಮೇವ ಬಂಧುಶ್ಚ ಸಖಾ ತ್ವಮೇವ |
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ, ತ್ವಮೇವ ಸರ್ವಂ ಮಮ ದೇವ ದೇವ ||
ನಮ್ಮ ನಾಡಿನಲ್ಲಿ ಬಹುತೇಕ ಎಲ್ಲರಿಗೂ ತಿಳಿದಿರುವ ಜನಪ್ರಿಯ ಶ್ಲೋಕವಿದು. ‘ಹೇ ಪ್ರಭು, ನನ್ನ ಪಾಲಿಗೆ ತಾಯಿ, ತಂದೆ, ಬಂಧು, ಮಿತ್ರ, ವಿದ್ಯೆ, ಸಂಪತ್ತು ಹಾಗೂ ನನ್ನ ಸರ್ವವೂ ನೀನೇ ಆಗಿದ್ದೀಯೆ’ ಎಂದು ದೇವರನ್ನು ಅತ್ಯಂತ ಭಾವುಕವಾಗಿ ವರ್ಣಿಸುವ ಸುಂದರ ಪ್ರಾರ್ಥನೆ ಇದರಲ್ಲಿದೆ. ‘ಭಕ್ತನು ಯಾವ ರೂಪದಲ್ಲಿ ಅಥವಾ ಯಾವ ವಿಧದಲ್ಲಿ ನನ್ನನ್ನು ಪೂಜಿಸಲು ಬಯಸುತ್ತಾನೋ, ಆಯಾ ಭಕ್ತನಿಗೆ ಆಯಾ ರೂಪದಲ್ಲಿ ಅಚಲವಾದ ಶ್ರದ್ಧೆಯನ್ನು ನಾನೇ ಕರುಣಿಸುತ್ತೇನೆ’ ಎಂದು ಭಗವದ್ಗೀತೆಯಲ್ಲಿ ಸಾಕ್ಷಾತ್ ಶ್ರೀಕೃಷ್ಣನೇ ಹೇಳಿದ್ದಾನೆ. ಶ್ರೀಕೃಷ್ಣನ ಈ ಮಾತು ಮೇಲಿನ ಶ್ಲೋಕದ ಭಾವವನ್ನೇ ಪುಷ್ಟೀಕರಿಸುತ್ತದೆ.
ಹೀಗಾಗಿ, ನೀವು ದೇವರನ್ನು ತಾಯಿಯಂತೆ ಪೂಜಿಸಲು ಬಯಸಿದರೆ ಆತ ನಿಮ್ಮ ತಾಯಿಯಾಗುತ್ತಾನೆ. ತಂದೆಯಂತೆ ಪೂಜಿಸಲು ಬಯಸಿದರೆ ತಂದೆಯಾಗುತ್ತಾನೆ. ಆತ ನಿಮ್ಮ ಸ್ನೇಹಿತನಾಗಬಲ್ಲ, ಪ್ರಿಯತಮನಾಗಬಲ್ಲ. ನಿಮ್ಮ ಸಕಲ ವಿದ್ಯೆ, ಸಂಪತ್ತು ಹಾಗೂ ನಿಮ್ಮದೆಂದು ನೀವು ಭಾವಿಸುವ ಪ್ರತಿಯೊಂದೂ ಆಗಬಲ್ಲ. ದೇವರಿಗೆ ನಿರ್ದಿಷ್ಟವಾದ ಯಾವುದೇ ಹೆಸರಿಲ್ಲ, ರೂಪವೂ ಇಲ್ಲ. ಆತ ನಿಮ್ಮ ಶ್ರದ್ಧೆಯ ಆಧಾರದ ಮೇಲೆಯೇ ಸ್ಪಂದಿಸುತ್ತಾನೆ. ನಿಮ್ಮ ಶ್ರದ್ಧೆ ಹೇಗಿರುತ್ತದೆಯೋ, ದೈವಿಕತೆಯಿಂದ ನಿಮಗೆ ದಕ್ಕುವ ಅನುಭವವೂ ಹಾಗೆಯೇ ಇರುತ್ತದೆ. ದೇವರೊಂದಿಗಿನ ಈ ಸಂಬಂಧದ ಸೌಂದರ್ಯವೇ ಅದು!
ಮನುಷ್ಯ ಸಂಬಂಧಗಳ ಮಿತಿಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಒಬ್ಬ ತಾಯಿಗೆ ತಂದೆಯಾಗುವುದು ಕಷ್ಟ. ಅಂತೆಯೇ, ತಂದೆಗೆ ತಾಯಿಯ ಸ್ಥಾನವನ್ನು ತುಂಬುವುದು ಎಲ್ಲ ಸಂದರ್ಭಗಳಲ್ಲೂ ಸಾಧ್ಯವಿಲ್ಲ. ಸ್ನೇಹಿತನು ಗುರುವಾಗಲಾರ; ಗುರುವು ಸ್ನೇಹಿತನಾಗಲಾರ. ಈ ಎಲ್ಲ ಲೌಕಿಕ ಸಂಬಂಧಗಳು ಪರಸ್ಪರ ಪ್ರತ್ಯೇಕವಾಗಿರುತ್ತವೆ. ಆದರೆ ದೇವರೊಂದಿಗಿನ ಸಂಬಂಧ ಮಾತ್ರ ಅನನ್ಯವಾದುದು. ದೇವರು ಮಾತ್ರ ಸದಾ ನಮ್ಮೊಂದಿಗೆ ಎಲ್ಲ ರೂಪಗಳಲ್ಲಿಯೂ ಇರಬಲ್ಲನು. ಆತ ವಿದ್ಯೆ ಕೊಡುವಾಗ ಸರಸ್ವತಿಯಾಗಬಲ್ಲ; ಕಷ್ಟ ಪರಿಹರಿಸುವಾಗ ದುರ್ಗೆಯಾಗಬಲ್ಲ; ವಿಘ್ನ ನಿವಾರಿಸುವಾಗ ಗಣೇಶನಾಗಬಲ್ಲ. ನಮ್ಮ ಅಗತ್ಯಕ್ಕೆ ತಕ್ಕಂತೆ ಆ ದೈವಿಕ ಶಕ್ತಿಯು ಆವಿರ್ಭವಿಸಿ ಸದಾ ನಮ್ಮನ್ನು ಕಾಪಾಡುತ್ತಲೇ ಇರುತ್ತದೆ.
ಹೃದಯವೆಂಬ ‘ಸಿಂಗಲ್ ಸೋಫಾ’: ತಾಯಿಯ ಪ್ರೀತಿಯಿಂದ ಆರಂಭವಾಗುವ ನಮ್ಮ ಪಯಣ ತಂದೆಯ ಮಾರ್ಗದರ್ಶನದತ್ತ ಸಾಗುತ್ತದೆ. ತಂದೆ ನಮ್ಮನ್ನು ಗುರುವಿನ ಬಳಿಗೆ ಕರೆದೊಯ್ಯುತ್ತಾರೆ. ಕಾಲಾನಂತರದಲ್ಲಿ, ಆ ಗುರುವೇ ನಮ್ಮಲ್ಲಿ ದೇವರ ಅರಿವನ್ನು ಮೂಡಿಸುತ್ತಾರೆ. ದೇವರೊಂದಿಗೆ ಸ್ನೇಹಿತನ (ಸಖನ) ರೂಪದ ನಂಟೂ ಬಹಳ ಆಪ್ತವಾದದ್ದು. ನಾವು ದೇವರನ್ನು ಸ್ನೇಹಿತನನ್ನಾಗಿ ಮಾಡಿಕೊಂಡರೆ, ನಮ್ಮ ಹೃದಯವು ಪ್ರೀತಿ ಮತ್ತು ವಾತ್ಸಲ್ಯದಿಂದ ತುಂಬಿಹೋಗುತ್ತದೆ; ಆಗ ನಮಗೆ ಲೌಕಿಕ ಒಡನಾಟದ ಅಗತ್ಯವೇ ಬೀಳುವುದಿಲ್ಲ.
ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರು, ‘ಹೃದಯವು ಒಂದೇ ಸೋಫಾ, ಅದು ಮ್ಯೂಸಿಕಲ್ ಚೇರ್ ಅಲ್ಲ’ ಎಂದು ಹೇಳುತ್ತಿದ್ದರು. ಹೃದಯವೆಂಬ ಸಿಂಹಾಸನವು ಕೇವಲ ಭಗವಂತನೊಬ್ಬನಿಗಾಗಿಯೇ ಮೀಸಲಾಗಿರಬೇಕು ಎಂಬುದು ಅವರ ಮಾತಿನ ಅಂತರಾರ್ಥವಾಗಿತ್ತು. ಬೇಕುಬೇಕಾದ ಜನರು ತಮ್ಮ ಇಚ್ಛೆಯಂತೆ ಬಂದು ಹೋಗಲು ಅದು ಮ್ಯೂಸಿಕಲ್ ಚೇರ್ ಅಲ್ಲ. ನಮ್ಮ ಉಳಿದೆಲ್ಲ ಸಂಬಂಧಗಳು ದೇವರೊಂದಿಗಿನ ಈ ಪ್ರಧಾನ ಸಂಬಂಧದ ಸುತ್ತ ಹೆಣೆಯಲ್ಪಡಬೇಕೇ ಹೊರತು, ದೇವರ ಸ್ಥಾನವನ್ನು ಬೇರಾರಿಗೂ ಬಿಟ್ಟುಕೊಡಬಾರದು.
ದೇವರೊಂದಿಗಿನ ನಂಟು ‘ಸಿಚುವೇಷನ್ಶಿಪ್’ ಆಗದಿರಲಿ: ಇಂದಿನ ಯುವಕರು ‘ಸಿಚುವೇಷನ್ಶಿಪ್’ ಎಂಬ ಹೊಸ ಪದವನ್ನು ಬಳಸುತ್ತಾರೆ. ಅಂದರೆ, ಪರಿಸ್ಥಿತಿಗಳು ಅನುಕೂಲಕರವಾಗಿದ್ದರೆ ಮಾತ್ರ ಸಂಬಂಧವಿರುತ್ತದೆ; ಪರಿಸ್ಥಿತಿ ಪ್ರತಿಕೂಲವಾದರೆ ಸಂಬಂಧ ಮುರಿದುಬೀಳುತ್ತದೆ. ದೇವರೊಂದಿಗಿನ ನಮ್ಮ ನಂಟನ್ನು ನಾವು ಹೀಗೆಯೇ ಮಾಡಿಕೊಳ್ಳುತ್ತಿದ್ದೇವೆಯೇ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಅತ್ಯಗತ್ಯ. ನಮಗೆ ಒಳಿತಾದಾಗ ಮಾತ್ರ ಜಗನ್ಮಾತೆಗೆ ನಮ್ಮ ಮೇಲೆ ಕರುಣೆ ಇದೆ ಎಂದುಕೊಳ್ಳುವ ನಾವು, ಕಷ್ಟ ಬಂದಾಗ ಆಕೆಯನ್ನೇ ದೂರುತ್ತೇವೆ. ಇಂತಹ ನಾಸ್ತಿಕ ಮನೋಭಾವ ಎಂದಿಗೂ ನಮ್ಮದಾಗಬಾರದು.
ದೇವರು ನಮ್ಮನ್ನು ಯಾವ ಪರಿಸ್ಥಿತಿಯಲ್ಲಿ ಇರಿಸಿದರೂ ಅದು ನಮ್ಮ ಅತ್ಯುನ್ನತ ಕಲ್ಯಾಣಕ್ಕಾಗಿಯೇ ಎಂಬ ಅಚಲ ನಂಬಿಕೆ ನಮ್ಮದಾಗಬೇಕು. ದೇವರೊಂದಿಗಿನ ಆ ಸಂಬಂಧ ಶಾಶ್ವತವಾಗಿರಬೇಕೇ ಹೊರತು, ಅದು ಎಂದಿಗೂ ‘ಸಿಚುವೇಷನ್ಶಿಪ್’ ಆಗಬಾರದು. ಶುದ್ಧ ನಿಸ್ವಾರ್ಥ ಪ್ರೀತಿಯೇ ದೇವರು: ದೇವರನ್ನು ಹೇಗೆ ಅರ್ಥ ಮಾಡಿಕೊಳ್ಳುವುದು ಎಂದು ಹಲವರು ಕೇಳುತ್ತಿರುತ್ತಾರೆ. ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರು ಒಮ್ಮೆ ನನಗೆ, ‘ನನ್ನನ್ನು ತಿಳಿದುಕೊಳ್ಳಲು ನೀನು ನನ್ನಂತೆಯೇ ಆಗಬೇಕು. ನಾನೆಂದರೆ ಶುದ್ಧ ನಿಸ್ವಾರ್ಥ ಪ್ರೀತಿ’ ಎಂದಿದ್ದರು. ಸಕ್ಕರೆಯಿಂದ ಮಾಡಿದ ಬೊಂಬೆಗಳು ನಾನಾ ಆಕಾರಗಳಲ್ಲಿದ್ದರೂ ಅವುಗಳ ಮೂಲ ವಸ್ತು ಸಕ್ಕರೆಯೇ ಆಗಿರುವಂತೆ, ದೇವರು ಹಲವು ರೂಪಗಳನ್ನು ತಳೆದರೂ ಆತ ಕೇವಲ ಪ್ರೀತಿಯಾಗಿದ್ದಾನೆ. ಭಕ್ತನ ಅಗತ್ಯಕ್ಕೆ ತಕ್ಕಂತೆ ಆತ ತಾಯಿ, ತಂದೆ, ಗುರು, ಸಖನ ರೂಪವನ್ನು ತಾಳುತ್ತಾನೆ. ಕೆಲವೊಮ್ಮೆ ಆತ ನಮ್ಮ ಮೇಲೆ ಕಠಿಣವಾಗಿದ್ದರೆ, ಅದು ನಮ್ಮ ಮೇಲಿನ ದ್ವೇಷದಿಂದಲ್ಲ; ಬದಲಿಗೆ, ನಮ್ಮ ಅಭ್ಯುದಯಕ್ಕಾಗಿ ಆತ ನಮ್ಮನ್ನು ತಿದ್ದುತ್ತಿದ್ದಾನೆ ಎಂದರ್ಥ.
ನಾವು ಜೀವನದಲ್ಲಿ ಏನೇ ಸಾಧಿಸಿದರೂ, ಎಷ್ಟೇ ಜನರನ್ನು ಭೇಟಿಯಾದರೂ, ಆ ಜಗನ್ಮಾತೆಯೊಂದಿಗಿನ ಸಂಬಂಧವೇ ನಮ್ಮ ನಿಜವಾದ ಮತ್ತು ಶಾಶ್ವತ ಸಂಬಂಧ. ಅವಳಿಂದಲೇ ಬಂದ ನಾವು ಕೊನೆಗೆ ಅವಳಲ್ಲಿಯೇ ಸೇರುತ್ತೇವೆ. ಉಳಿದೆಲ್ಲವೂ ನಶ್ವರ. ಹಾಗಾಗಿ, ಆಕೆಯನ್ನು ನಿಮ್ಮ ಹೃದಯದಲ್ಲಿ ಪ್ರತಿಷ್ಠಾಪಿಸಿಕೊಳ್ಳಿ. ನೀವು ದೈವಿಕ ಪ್ರೀತಿಯನ್ನು ಅಳವಡಿಸಿಕೊಂಡರೆ ನಿಮ್ಮ ಇಡೀ ಜೀವನವೇ ಪವಿತ್ರವಾಗುತ್ತದೆ. ಈ ನವರಾತ್ರಿಯ ಸಂದರ್ಭದಲ್ಲಿ ಜಗನ್ಮಾತೆಯು ನಮ್ಮೆಲ್ಲರ ಹೃದಯದಲ್ಲಿ ಪರಿಶುದ್ಧ ನಿಸ್ವಾರ್ಥ ಪ್ರೇಮವನ್ನು ಜಾಗೃತಗೊಳಿಸಲಿ. ‘ನಿನ್ನ ಮಡಿಲಿನ ಮಕ್ಕಳಮ್ಮ, ನಿನ್ನ ನಂಬಿದ ಕಂದರಮ್ಮ, ನಿನ್ನ ಕರುಣೆಯ ಬೆಳಕಲೆಮ್ಮ ಬಾಳನು ಬೆಳಗಮ್ಮ, ನಮ್ಮ ಕೋರಿಕೆ ಆಲಿಸಮ್ಮ...’ ಎಂದು ಮನದುಂಬಿ ಪ್ರಾರ್ಥಿಸೋಣ.