ಅಂಕಣ

ಯಮುನೆ ಮಡಿಲಲ್ಲಿ ಅರಳಲಿ ದೇಶದ ಹೃದಯ

ಸಂಸ್ಕೃತಿ ಮತ್ತು ಶ್ರದ್ಧೆಯ ಕೇಂದ್ರಗಳ ಕುರಿತು ಕೀಳು ರಾಜಕೀಯ ಮಾಡಲು ಹೊರಟರೆ ಅದಕ್ಕೆ ಜನರು ಮತಾಸ್ತ್ರದ ಮೂಲಕವೇ ಜೋರ್ದಾರ್ ಉತ್ತರ ಕೊಡುತ್ತಾರೆ ಎಂಬುದು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಸೋಲಿಗೆ ಹಲವು ಕಾರಣಗಳಿದ್ದರೂ, ಅವರು ಯಮುನೆ ಬಗ್ಗೆ ಆಡಿದ ಮಾತು ಜನರ ಭಾವನೆಗಳಿಗೆ ನೋವುಂಟು ಮಾಡಿದ್ದು ಸುಳ್ಳಲ್ಲ. ‘ಯಮುನೆಗೆ ವಿಷ ಬೆರೆಸಲಾಗಿದೆ’ ಎಂಬ ಅವರ ಹೇಳಿಕೆ ತೀರಾ ರಾಜಕೀಯಪ್ರಚೋದಿತ ಮತ್ತು ದೇಶದ ಸಂಸ್ಕೃತಿ, ಶ್ರದ್ಧೆಯನ್ನೇ ಅವಮಾನಿಸುವಂತಿತ್ತು. ಚುನಾವಣೆ ಮುಗಿದಿದೆ. ಅಧಿಕಾರಕ್ಕೇರಲಿರುವ ಬಿಜೆಪಿ ‘ಸ್ವಚ್ಛ ಯಮುನಾ’ದ ಭರವಸೆ ನೀಡಿದೆ. ಈಗ ಯಮನೆ ಹೇಗಿದ್ದಾಳೆ, ಅವಳ ನೋವಿಗೆ ಕಾರಣವೇನು? ನಮ್ಮ ಆಳುಗರ, ಜನರ ಸಂವೇದನೆ ಜಾಗೃತಗೊಂಡು ಅವಳ ಕಣ್ಣೀರನ್ನು ಒರೆಸಬಹುದೆ? ಯಮುನಮ್ಮನ ಮಡಿಲಲ್ಲಿ ಪರಂಪರೆಯ ಸೊಗಡು ಮತ್ತೆ ಅರಳಬಹುದೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಯತ್ನ ಇಲ್ಲಿದೆ.

| ರವೀಂದ್ರ ಎಸ್. ದೇಶಮುಖ್

‘ಸರ್ವಪಾಪವ ತಿಂದುತೇಗುವ ಗಂಗೆಗೇ ಕೊಳೆ ಕೊರತೆಯೇ?’ ಎಂದು ಸಂನ್ಯಾಸಿ ಗೀತೆ ಮೂಲಕ ಕಣ್ಣು ತೆರೆಸಿದವರು ಸಿಡಿಲ ಸಂತ ಸ್ವಾಮಿ ವಿವೇಕಾನಂದರು. ಆದರೆ, ದೇಶದ ಹೃದಯವಾದ ದೆಹಲಿಯಲ್ಲಿ ಹರಿಯುವ ಯಮುನೆಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ ಎಂಬುದು ಕರಾಳ ವಾಸ್ತವ. ಕಳೆದ ಹತ್ತು ವರ್ಷಗಳಲ್ಲಿ ಗಂಗೆಯ ಸ್ಥಿತಿ ಬದಲಾಗಿದೆ.

ಹೌದು, ಗಂಗೆ ನಿರ್ಮಲವಾಗಿದ್ದಾಳೆ, ಅವಳ ತೀರಪ್ರದೇಶ ಸೌಂದರ್ಯದಿಂದ ಕಂಗೊಳಿಸುತ್ತಿದೆ, ಶ್ರದ್ಧೆಯ ನವಗಾನ ಅಲ್ಲಿ ಮಧುರವಾಗಿ ಮೊಳಗುತ್ತಿದೆ. ಗಂಗಾ ಘಾಟ್​ಗಳಲ್ಲಿ ಓಡಾಡುವುದೆಂದರೆ ಈಗ ಪುಳಕ, ಸಂಭ್ರಮ. ನದಿಯ ನೈಸರ್ಗಿಕ ಹರಿವಿಗೆ ಅಡ್ಡಿಯಾಗಿದ್ದ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗಿದೆ. ‘ನಮಾಮಿ ಗಂಗೆ’ ಯೋಜನೆ ರಾಜಕೀಯ ಇಚ್ಛಾಶಕ್ತಿಯನ್ನು ದರ್ಶಿಸಿದೆ. ದೇಶದ ಕೋಟ್ಯಂತರ ಜನರ ಜೀವನಾಡಿ ಗಂಗೆ ಈಗ ನಿರುಮ್ಮಳ. ಅವಳ ಮಡಿಲಲ್ಲಿ ಬದುಕು ಕಟ್ಟಿಕೊಂಡಿರುವ ಮಕ್ಕಳು ಈಗ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.

ಇದೇ ಮಾದರಿಯಲ್ಲಿ ಯಮುನೆಯ ಸ್ಥಿತಿ ಬದಲಾಗಬೇಕಿದೆ. ಏಕೆಂದರೆ, ಯಮುನೆ ಬರೀ ನದಿಯಲ್ಲ. ಈ ದೇಶದ ಹೆಗ್ಗುರುತು. ನಿರ್ಮಲ, ಸುಂದರ ಯಮುನೆ ಭಾರತದ ಗೌರವದ ಪ್ರತೀಕವೂ ಹೌದು. ‘ಗಂಗಾ ಮಯ್ಯಾನೇ ಮುಝೇ ಬುಲಾಯಾ ಹೈ’ (ಗಂಗಮ್ಮ ನನ್ನನ್ನು ಕರೆದಿದ್ದಾಳೆ) ಎಂದು 2014ರ ಲೋಕಸಭೆ ಚುನಾವಣೆ ವೇಳೆ ಕಾಶಿ ಲೋಕಸಭಾ ಕ್ಷೇತ್ರವನ್ನು ಆಯ್ದುಕೊಂಡ ಬಿಜೆಪಿಯ ಆಗಿನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ಮತ್ತೆ ‘ಯಮುನಾ ಮಯ್ಯಾ ಕೀ ಜಯ್’ ಎಂದು ಹೇಳುವ ಮೂಲಕ ಮುಂದಿನ ಆದ್ಯತೆ, ಕಾಯಕಲ್ಪ ಯಮುನಾ ನದಿಯದ್ದೇ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಬಿಗಿ ಕ್ರಮಗಳು ಅಗತ್ಯ

ಯಮುನಾ ನದಿ ಶುದ್ಧೀಕರಣದ ವಿಷಯದಲ್ಲಿ ರಾಜಕೀಯ ಪಕ್ಷಗಳ ಆಶ್ವಾಸನೆಯಿಂದ ಜನರು ರೋಸಿಹೋಗಿದ್ದಾರೆ. ನದಿಯ ಸ್ವಚ್ಛತೆಯಲ್ಲೂ ರಾಜಕೀಯದ ಕಲ್ಮಶ ಬೆರೆಸಬೇಕೆ, ನಮ್ಮ ಯಮುನೆಯನ್ನು ರಕ್ಷಿಸಿ ಕೊಡಿ ಎಂದು ಪರಿಸರ ಸಂರಕ್ಷಕರು, ನದಿಗಳ ನೈರ್ಮಲ್ಯಕ್ಕೆ ಶ್ರಮಿಸುತ್ತಿರುವ ಸಾಧು-ಸಂತರು ಮೊರೆ ಇಟ್ಟಿದ್ದಾರೆ. ಈ ವಿಷಯದಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ.

ಹಲವು ಕಾಮಗಾರಿಗಳಿಂದ ನದಿಯ ನೈಸರ್ಗಿಕ ಹರಿವಿಗೆ ಉಂಟಾಗಿರುವ ಅಡ್ಡಿಆತಂಕವನ್ನು ನಿವಾರಿಸಬೇಕಿದೆ.

ಕೊಳಚೆ ನೀರನ್ನು ಸಾಗಿಸಲು ಇತರ ಮೂಲವನ್ನು ಕಂಡುಕೊಳ್ಳಬೇಕಿದೆ. ಅಲ್ಲದೆ, ಯಮುನೆಗೆ ಕೊಳಚೆ ನೀರು ಸಂಸ್ಕರಿತವಾಗದೆ ಸೇರುತ್ತಿದ್ದು, ಅತಿ ಹೆಚ್ಚು ಅನೈರ್ಮಲ್ಯಕ್ಕೆ ಇದುವೇ ಕಾರಣ. ಹಾಗಾಗಿ, ಕೊಳಚೆ ನೀರನ್ನು ಸಂಸ್ಕರಿತಗೊಳಿಸಲು ವೈಜ್ಞಾನಿಕ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಿದೆ.

ಕೈಗಾರಿಕೆಗಳ ತ್ಯಾಜ್ಯದಿಂದ ನದಿನೀರಿಗೆ ಅಪಾಯಕಾರಿ ರಾಸಾಯನಿಕಗಳು ಸೇರುತ್ತಿವೆ. ಈ ಬಗ್ಗೆ ದಂಡ ವಿಧಿಸುವ ಆಯ್ಕೆ ಇದೆಯಾದರೂ. ಕೆಲ ಅಧಿಕಾರಿಗಳೇ ಕೈಗಾರಿಕೆಗಳ ಆಡಳಿತ ಮಂಡಳಿಗಳೊಂದಿಗೆ ಶಾಮೀಲಾಗಿರುವುದು, ನದಿಯ ಸ್ಥಿತಿಯನ್ನು ಮತ್ತಷ್ಟು ದಯನೀಯವಾಗಿಸಿದೆ. ಹಾಗಾಗಿ, ಇಂಥ ಕೈಗಾರಿಕೆಗಳ ವಿರುದ್ಧ ಮತ್ತು ಅವುಗಳಿಗೆ ಸಹಕರಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ಜನರಲ್ಲಿ ಜಾಗೃತಿ ಮತ್ತು ಅರಿವಿನ ಕೊರತೆಯೂ ಯಮುನೆಯ ಸಂಕಷ್ಟವನ್ನು ಹೆಚ್ಚಿಸಿದೆ. ನದಿಯನ್ನು, ನದಿ ತೀರ ಪ್ರದೇಶವನ್ನು ಸ್ವಚ್ಛವಾಗಿ ಇರಿಸಿಕೊಳ್ಳುವ ಅಗತ್ಯತೆ, ಅದರ ನಿರ್ವಹಣೆ ಕುರಿತಾಗಿ ಸರ್ಕಾರ ಮತ್ತು ಸಾಮಾಜಿಕ ಸಂಘಟನೆಗಳಿಂದ ಜನರಲ್ಲಿ ಜಾಗೃತಿ ಮೂಡಿಸ ಬೇಕಿದೆ. ಜನರ ಮನೋಭಾವ ಬದಲಾದಲ್ಲಿ ಸಕಾರಾತ್ಮಕ ಪರಿವರ್ತನೆ ತರಬಹುದು.

ಅತಿಯಾದ ಕೈಗಾರೀಕರಣ ತಂದ ಆಪತ್ತು

ರಾಜಧಾನಿ ದೆಹಲಿಯಲ್ಲಿ ಯಮುನಾ ನದಿ ಆರಂಭಗೊಳ್ಳುವುದೇ ವಜೀರಾಬಾದ್ ಪ್ರದೇಶದಿಂದ. ಇಲ್ಲಿ ಕಟ್ಟಲಾಗಿರುವ ಬ್ಯಾರೇಜ್ ಯಮುನೆಯನ್ನು ಮುಂದೆ ಹರಿಯಲು ಬಿಡುತ್ತಿಲ್ಲ. ಹೀಗಾಗಿ, ವಜೀರಾಬಾದ್ ಪ್ರದೇಶದ ಒಂದು ಭಾಗದಲ್ಲಿ ನದಿ ಸ್ವಚ್ಛವಾಗಿದ್ದರೆ, ಮತ್ತೊಂದು ಭಾಗದಲ್ಲಿ ಬರೀ ಕಪ್ಪು ಮತ್ತು ಕಲ್ಮಶ.

ಇಲ್ಲಿನ ನೀರನ್ನು ಶುದ್ಧೀಕರಿಸಿಯೇ ದೆಹಲಿ ಜನರಿಗೆ ಕುಡಿಯುವ ನೀರನ್ನು ಒದಗಿಸಲಾಗುತ್ತದೆ. ಬ್ರಿಟಿಷರ ಕಾಲದಲ್ಲಿಯೂ ಸ್ವಚ್ಛವಾಗಿದ್ದ, ಕುಡಿಯುವ ನೀರಿನ ಪ್ರಮುಖ ಮೂಲವಾಗಿದ್ದ ಯಮುನಾ ನದಿ 1960ರ ದಶಕದಿಂದಲೇ ಕಲುಷಿತಗೊಳ್ಳಲಾರಂಭಿಸಿತು. ಮೊದಲಿಗೆ, ನದಿಯ ನೀರು ಸ್ವಾದ ಕಳೆದುಕೊಂಡಿತು. 1970ರ ದಶಕದಲ್ಲಿ ಇನ್ನಷ್ಟು ಮಲಿನವಾಯಿತು. 1980ರ ದಶಕದಲ್ಲಿ ದೆಹಲಿ ಕೈಗಾರೀಕರಣಕ್ಕೆ ತೆರೆದುಕೊಂಡು, ಉದ್ಯಮಗಳ ಸಂಖ್ಯೆ ಗಣನೀಯವಾಗಿ ಏರಿತು. ಅದರಿಂದ ಉದ್ಯೋಗ ಹುಡುಕಿಕೊಂಡು ಬಂದು ದೆಹಲಿಯಲ್ಲಿ ನೆಲೆಸುವವರ ಸಂಖ್ಯೆ ಹೆಚ್ಚಾಗಿದ್ದರಿಂದ, ಇಲ್ಲಿಯ ಜನಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂತು.

1993ರಲ್ಲಿ ಸರ್ಕಾರ ಯಮುನಾ ಕ್ರಿಯಾ ಯೋಜನೆ ರೂಪಿಸಿ, ಜಾರಿಗೊಳಿಸುವ ಹೊತ್ತಿಗೆ ಪರಿಸ್ಥಿತಿ ತೀವ್ರ ಗಂಭೀರವಾಗಿತ್ತು. 1980ರ ದಶಕದ ಕೈಗಾರೀಕರಣ, ನಗರೀಕರಣ, ಅಸಮರ್ಪಕ ಒಳಚರಂಡಿ ವ್ಯವಸ್ಥೆಯೇ ಯುಮುನೆಗೆ ಆಪತ್ತು ಸೃಷ್ಟಿಸಿತು. ಈ ಮೂಲಕ ನದಿಯ ನೀರಿನ ಗುಣಮಟ್ಟ ಅಪಾಯಕಾರಿ ಮಟ್ಟದಲ್ಲಿ ಕುಸಿಯುತ್ತಲೇ ಹೋಯಿತು.

1978ರಲ್ಲಿ ಯಮುನಾದ ನೀರನ್ನು ದೆಹಲಿಯ ನಾಲ್ಕು ಪ್ರದೇಶಗಳಲ್ಲಿ ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಡಿಡಿಟಿ ಕೀಟನಾಶಕ (Dichloro-Diphenyl-Trichloroethane) ಪ್ರಮಾಣ ಗಾಬರಿಗೊಳ್ಳುವ ಮಟ್ಟದಲ್ಲಿ ಪತ್ತೆಯಾಯಿತು. ವಜೀರಾಬಾದ್ ಪ್ರದೇಶದ ನೀರಿನಲ್ಲಿ ಹೆಚ್ಚು ಡಿಡಿಟಿ ಅಂಶ ಕಂಡುಬಂತು. 1986ರಲ್ಲಿ ನಾಲ್ವರು ಸಂಶೋಧಕರು ಮಂಡಿಸಿದ ಸಂಶೋಧನಾ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಯಿತು.

ನದಿನೀರಿನ ಕಲ್ಮಶ ಅಲ್ಲಿ ವಾಸಿಸುತ್ತಿರುವ ಮೀನು ಸೇರಿದಂತೆ ಇತರ ಜಲಜೀವಿಗಳಿಗೆ ಅಪಾಯ ತಂದೊಡ್ಡಿದೆ ಎಂದು 2010ರಲ್ಲಿ ಅನಿಲ್ ಕುಮಾರ್ ಮಿಶ್ರಾ ತಮ್ಮ"A River about to Die: Yamuna' ಎಂಬ ಸಂಶೋಧನಾ ವರದಿಯಲ್ಲಿ ತಿಳಿಸಿದರು. ಇದಕ್ಕೂ ಮುಂಚೆಯೇ, 2002ರ ಜೂನ್ 13ರಂದು ಸಿಕಂದರಾ (ಆಗ್ರಾದ ತಾಜ್​ವುಹಲ್ ಬಳಿಯ ಪ್ರದೇಶ)ದಲ್ಲಿ ಸಾವಿರಾರು ಮೀನುಗಳು ಮರಣ ಹೊಂದಿದವು.

ಇದರ ಬಳಿಕ ಬಟೇಶ್ವರ (ಆಗ್ರಾದಿಂದ 78 ಕಿ.ಮೀ)ದವರೆಗೆ ಇಂಥ ಸರಣಿ ಘಟನೆಗಳು ಸಂಭವಿಸಿದವು. ನಂತರ, ಪ್ರತಿ ವರ್ಷವೂ ಯಮುನಾ ನದಿಯಲ್ಲಿ ಮೀನುಗಳ ಮರಣದ ಸುದ್ದಿ ಬರುತ್ತಿದ್ದು, ಮಾಲಿನ್ಯ ಗಂಭೀರ ಮಟ್ಟ ತಲುಪಿರುವುದಕ್ಕೆ ಸಾಕ್ಷಿ. 2001ರ ಹೊತ್ತಲ್ಲೇ ದೆಹಲಿಯ ಶೇಕಡ 70ರಷ್ಟು ಮಾಲಿನ್ಯ ಯಮುನಾ ಸೇರಿ, ಪರಿಸ್ಥಿತಿಯನ್ನು ಬಿಗಡಾಯಿಸಿತು.

ಅಲ್ಲದೆ, ನದಿಯ ಒಟ್ಟು ಮಾಲಿನ್ಯದಲ್ಲಿ ಶೇಕಡ 76ರಷ್ಟು ಕೊಡುಗೆ ವಜೀರಾಬಾದ್ ಪ್ರದೇಶದ್ದೇ ಆಗಿದೆ. ಕಳೆದ 20 ವರ್ಷಗಳಲ್ಲಿ ನದಿ ಎಷ್ಟು ಪ್ರಮಾಣದಲ್ಲಿ ಮಲಿನಗೊಂಡಿತ್ತೋ, 2020ರಿಂದ 2024ರವರೆಗಿನ ನಾಲ್ಕೇ ವರ್ಷಗಳಲ್ಲಿ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮಲಿನಗೊಂಡಿದ್ದು, ಯಮುನೆಯ ಉಸಿರುಗಟ್ಟಿದೆ. ಇದಕ್ಕೆ ಪ್ರಮುಖ ಕಾರಣ ಅಸಂಸ್ಕರಿತ ತ್ಯಾಜ್ಯ ಮತ್ತು ನೀರು ನದಿಯ ಒಡಲಿಗೆ ಸೇರುತ್ತಿರುವ ಪ್ರಮಾಣ ಹೆಚ್ಚಿರುವುದು.

ಪವಿತ್ರ ಸಪ್ತನದಿಗಳಲ್ಲಿ ಒಂದು...

ಯಮುನೆಗೆ ಪೌರಾಣಿಕ ಮಹತ್ವವಿದೆ. ಭಾರತದ ಪ್ರಾಚೀನವಾದ ಏಳು ಪವಿತ್ರ ನದಿಗಳಲ್ಲಿ ಯಮುನೆ ಕೂಡ ಒಂದು. ಹಿಮಾಲಯದ ಯಮುನೋತ್ರಿಯಲ್ಲಿ ಹುಟ್ಟಿ, ಪ್ರಯಾಗರಾಜ್​ನಲ್ಲಿ ಗಂಗೆ, ಸರಸ್ವತಿಯೊಂದಿಗೆ ಸಂಗಮಗೊಳ್ಳುವ ಯಮುನೆ ಯಮನ ಸಹೋದರಿ. ಅವಳಿಗೆ ‘ಯಮಿ’ ಎಂದು ಹೆಸರು. ಯಮಿಯಿಂದ ನದಿಗೆ ಯಮುನಾ ಎಂಬ ನಾಮಧೇಯ. ಕಾಳಿಂದಿ, ಜಮುನಾ ಎಂಬ ಹೆಸರುಗಳು ಇದ್ದೂ, ಯಮುನಾ ನದಿಯಿಂದಾದ ಕಲ್ಪಿ ನದಿದ್ವೀಪದಲ್ಲಿ ಮಹರ್ಷಿ ವೇದವಾಸ್ಯರು ಜನಿಸಿದ್ದು ಎಂದು ಪುರಾಣಗಳು ಹೇಳಿವೆ.

ನದಿಗೆ ಯಾಕೆ ಈ ಸ್ಥಿತಿ?

ಪ್ರತಿದಿನ ದೆಹಲಿ ನಗರ ಯಮುನೆಗೆ ಹರಿಸುತ್ತಿರುವ ಕೊಳಚೆ ನೀರು 79.2 ಕೋಟಿ ಗ್ಯಾಲನ್.

ಪ್ರತಿನಿತ್ಯ ದೆಹಲಿಯ ಸಂಸ್ಕರಿತ ಕೊಳಚೆ ನದಿಗೆ ಸೇರುತ್ತಿರುವ ಪ್ರಮಾಣ 66.7 ಕೋಟಿ ಗ್ಯಾಲನ್.

ಕಾರ್ಖಾನೆಗಳು, ಇತರ ಕೈಗಾರಿಕೆಗಳು ನಿಯಮ ಉಲ್ಲಂಘಿಸಿ ತ್ಯಾಜ್ಯವನ್ನು, ರಾಸಾಯನಿಕಯುಕ್ತ ನೀರನ್ನು ನದಿ ಒಡಲಿಗೆ ಬಿಡುತ್ತಿವೆ.

ಶ್ರೀಸಾಮಾನ್ಯರು ಮನೆಯ ಕಸ, ಹಳೆಯ ಬಟ್ಟೆ, ಇತರ ತ್ಯಾಜ್ಯಗಳನ್ನು ನದಿಗೆ ಸುರಿಯುತ್ತಾರೆ.

ಮಳೆಯ ನೀರು ಕೃಷಿ ತ್ಯಾಜ್ಯ ಹಾಗೂ ಇತರ ಮಲಿನಕಾರಕ ವಸ್ತುಗಳೊಂದಿಗೆ ನದಿಯನ್ನು ಸೇರುತ್ತಿರುವುದು.

ವಾರಾಣಸಿ ಮಾಡೆಲ್...

ವಾರಾಣಸಿಯ ಗಂಗಾನದಿ ಹಾಗೂ ಅಲ್ಲಿ ನಡೆಯುವ ಆರತಿ ಕೋಟ್ಯಂತರ ಜನರ ಶ್ರದ್ಧಾಕೇಂದ್ರ. ವಿದೇಶಿಗರೂ ಭಕ್ತಿಯ ಈ ಮಹಾಸಂಭ್ರಮವನ್ನು ಕಣ್ತುಂಬಿಕೊಳ್ಳಲು ಕಾಶಿಗೆ ಭೇಟಿ ನೀಡುತ್ತಿದ್ದು, ಕಳೆದ 10 ವರ್ಷಗಳಲ್ಲಿ ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇದಕ್ಕೆ ಕಾರಣ, ಘಾಟ್​ಗಳು ಸ್ವಚ್ಛಗೊಂಡಿವೆ. ಶವಗಳ ದಹನಕ್ಕೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಶವಗಳನ್ನು ನದಿಯಲ್ಲಿ ತೇಲಿ ಬಿಡುವುದನ್ನು ನಿಷೇಧಿಸಲಾಗಿದೆ. ಘಾಟ್​ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಾಡಾಗುತ್ತಿದ್ದು, ಕಾಶಿಯ ಪರಂಪರೆ ಮತ್ತೆ ಮೇಳೈಸುತ್ತಿದೆ. ಇದೇ ರೀತಿ ದೆಹಲಿಯಲ್ಲಿ ಪರಿವರ್ತನೆಯಾದರೆ ಯಮುನೆಯ ಕಾಯಕಲ್ಪ ಅಸಾಧ್ಯವೇನಲ್ಲ.

ವಿಫಲ ಯತ್ನಗಳು

ಯಮುನಾ ನದಿಯ ಸ್ವಚ್ಛತೆಗೆ ಪ್ರಯತ್ನಗಳು ನಡೆದೇ ಇಲ್ಲ ಅಂತೇನಲ್ಲ. ಆದರೆ, ರಾಜಕೀಯ ಬದ್ಧತೆಯ ಕೊರತೆಯಿಂದ ಅವು ಯಶಸ್ವಿಯಾಗಿಲ್ಲ ಎಂಬುದು ವಿಪರ್ಯಾಸ, 1993ರಲ್ಲಿಯೇ ಮೊದಲ ಬಾರಿಗೆ ಯಮುನಾ ಕ್ರಿಯಾ ಯೋಜನೆಯನ್ನು ಜಪಾನ್ ಸಹಯೋಗದಿಂದ ಜಾರಿಗೆ ತರಲಾಯಿತು. ಆದರೆ, ಈ ಯೋಜನೆಯ ಮೊದಲ ಹಂತ ಮುಗಿದಿದ್ದು ಬರೋಬ್ಬರಿ ಒಂದು ದಶಕದ ನಂತರ ಅಂದರೆ 2003ರಲ್ಲಿ. ಆ ಹೊತ್ತಿಗೆ ಕೊಳಚೆ ಸಂಸ್ಕರಣೆಯ 29 ಘಟಕಗಳನ್ನು ಸ್ಥಾಪಿಸಲಾಯಿತು.

2003ರಿಂದ 2009ರವರೆಗೆ ಯಮುನಾ ಕ್ರಿಯಾ ಯೋಜನೆಯ ಎರಡನೇ ಹಂತ ಮತ್ತು 2011ರಿಂದ 2018ರವರೆಗೆ ಯಮುನಾ ಕ್ರಿಯಾ ಯೋಜನೆಯ ಮೂರನೇ ಹಂತ ಪೂರ್ಣಗೊಂಡಿತು. ಗಂಗಾ ನದಿ ಮತ್ತು ಅದರ ಉಪನದಿಗಳನ್ನು ಶುದ್ಧೀಕರಣಕ್ಕಾಗಿ ರೂಪಿಸಲಾಗಿರುವ ‘ನಮಾಮಿ ಗಂಗೆ’ ಯೋಜನೆಯಡಿ ಯಮುನಾ ನದಿಯನ್ನು ಪರಿಗಣಿಸಲಾಗಿದೆ. ಆದರೆ, 2025ರ ಹೊತ್ತಿಗೆ ಯಮುನಾವನ್ನು ಸ್ವಚ್ಛ, ಸುಂದರಗೊಳಿಸಲಾಗುವುದು ಎಂಬ ರಾಜಕೀಯ ಪಕ್ಷಗಳ ಭರವಸೆ ಹುಸಿಯಾಗಿದೆ. ಮುಂಬರುವ ದಿನಗಳಲ್ಲಾದರೂ, ಯಮುನೆ ಈ ಎಲ್ಲ ಅಪಸವ್ಯಗಳಿಂದ ಮುಕ್ತಿ ಪಡೆಯುವಳೇ ಎಂದು ಕಾದು ನೋಡಬೇಕು. ದೆಹಲಿಯ ಜನಜೀವನವನ್ನು, ಸಂಸ್ಕೃತಿಯನ್ನು ಪೋಷಿಸಿ, ಬೆಳೆಸಿದ ಯಮುನೆಗೆ ಗತವೈಭವ ಮರಳಿಸಬೇಕಿದೆ.

ಸಾಕಾರಗೊಳ್ಳುವುದೇ?

ದೆಹಲಿಯಲ್ಲಿ ಯಮುನಾ ರಿವರ್ ಫ್ರಂಟ್ ನಿರ್ವಿುಸಲಾಗುವುದು. ಈ ಮೂಲಕ ದೆಹಲಿಯ ಯಮುನಾ ತೀರದಲ್ಲಿ ಜನರು ಆಹ್ಲಾದ ಮನಸ್ಸಿನಿಂದ ಸಂಚರಿಸಲಿದ್ದಾರೆ. ಯಮುನಾದ ನೈರ್ಮಲ್ಯ ಕಾಪಾಡಿಕೊಳ್ಳುವುದೇ ನಮ್ಮ ಮೊದಲ ಆದ್ಯತೆ ಎಂದು ಭರವಸೆ ನೀಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಗುಜರಾತಿನ ಅಹಮದಾಬಾದ್​ನಲ್ಲಿ ಸಾಬರ್​ವುತಿ ರಿವರ್ ಫ್ರಂಟ್ ನಿರ್ವಿುಸಲಾಗಿದ್ದು, ಅದೇ ಮಾದರಿಯಲ್ಲಿ ದೆಹಲಿಯಲ್ಲಿ ಯಮುನಾ ರಿವರ್ ಫ್ರಂಟ್​ನ ಕನಸು ಸಾಕಾರಗೊಂಡರೆ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಒಂದು ಉತ್ತಮ ನಿದರ್ಶನ ಸೃಷ್ಟಿಯಾಗಲಿದೆ.

ಅತ್ತ, ಮಥುರಾದಲ್ಲಿ ಉತ್ತರಪ್ರದೇಶ ಸರ್ಕಾರವು 177 ಕೋಟಿ ರೂಪಾಯಿ ವೆಚ್ಚದಲ್ಲಿ ಯಮುನಾ ರಿವರ್ ಫ್ರಂಟ್ ನಿರ್ವಿುಸುತ್ತಿದ್ದು, ಘಾಟ್​ಗಳ ವಿಸ್ತಾರ, ಯಾತ್ರಾರ್ಥಿಗಳಿಗೆ ಕುಳಿತುಕೊಳ್ಳಲು ಸುಸಜ್ಜಿತ ಸೌಲಭ್ಯ, ವಾಹನಗಳ ರ್ಪಾಂಗ್​ಗೆ ವಿಶಾಲ ಪ್ರದೇಶ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳು ಸಾಕಾರಗೊಳ್ಳಲಿವೆ.

ಗಂಗೆ ಸೇರುವ ಮುನ್ನ...

ಗಂಗಾ ನದಿಗೆ ಸೇರುವ ಮುನ್ನ ಯಮುನಾ ನದಿಯ ಒಟ್ಟು ಉದ್ದ 1,376 ಕಿ.ಮೀ.

ರಾಜಧಾನಿ ದೆಹಲಿಯಲ್ಲಿ ಗಂಗಾನದಿ ಹರಿಯುವ ಒಟ್ಟು ಪ್ರದೇಶ 22 ಕಿ.ಮೀ.

ದೆಹಲಿ ಸರ್ಕಾರ 2017-21ರ ಅವಧಿಯಲ್ಲಿ ಯಮುನಾ ಸ್ವಚ್ಛತೆ ಹೆಸರಿನಲ್ಲಿ 6,856 ಕೋಟಿ ರೂಪಾಯಿ ವೆಚ್ಚ ಮಾಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಬದಲಾಗಿ ಸ್ಥಿತಿ ಇನ್ನಷ್ಟು ಬಿಗಡಾ ಯಿಸಿದೆ. ಇತ್ತೀಚೆಗೆ ನಡೆದ ಛತ್ ಪೂಜೆ ವೇಳೆ ಜನರು ನೊರೆ ಬಂದ ಕಲುಷಿತ ನೀರಿನಲ್ಲೇ ಪೂಜೆ ಸಲ್ಲಿಸಿದ ಘಟನೆ ದೇಶದ ಗಮನ ಸೆಳೆದಿತ್ತು.

ದೆಹಲಿಯ ಅಸ್ತಿತ್ವವೇ ಯಮುನೆಯ ಮಡಿಲಲ್ಲಿ ಬೆಳೆದು ಬಂದಿದೆ. ದೆಹಲಿಯ ಜನರ ಮನಸ್ಸಿಗೆ ಯಮುನೆಯ ಈಗಿನ ಸ್ಥಿತಿ ಆಘಾತ ತಂದಿದೆ. ಯಮುನಾ ನದಿಯನ್ನು ದೆಹಲಿ ನಗರದ ಪ್ರಮುಖ ಗುರುತು, ಅಸ್ಮಿತೆಯನ್ನಾಗಿ ಪರಿವರ್ತಿಸುವ ಸಂಕಲ್ಪವನ್ನು ನಾನು ಮಾಡಿದ್ದೇನೆ. ಇದಕ್ಕಾಗಿ ಎಷ್ಟಾದರೂ ಸಮಯ, ಶಕ್ತಿ, ಹಣ ಖರ್ಚಾಗಲಿ. ಯಮುನೆಯ ಶುದ್ಧೀಕರಣಕ್ಕಾಗಿ ಎಲ್ಲ ಅಗತ್ಯ ಪ್ರಯತ್ನಗಳನ್ನು ಮಾಡುತ್ತೇವೆ. | ನರೇಂದ್ರ ಮೋದಿ ಪ್ರಧಾನಿ (ಶನಿವಾರ ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ಮುಖ್ಯ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ವೇಳೆ) ಯಮುನಾ ನದಿಯ ಸ್ವಚ್ಛತೆಗೆ ಮೊದಲ ಆದ್ಯತೆ. ಇದರ ಶುದ್ಧೀಕರಣಕ್ಕೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರಿವರ್ ಫ್ರಂಟ್ ನಿರ್ವಿುಸುವ ಮೂಲಕ ಪ್ರವಾಸಿತಾಣವಾಗಿಯೂ ಅಭಿವೃದ್ಧಿ ಪಡಿಸಲಾಗುವುದು. | ಪರ್ವೆಶ್ ವರ್ವ ದೆಹಲಿ ಬಿಜೆಪಿ ನಾಯಕ