ಅಂಕಣ

ಬದಲಾಗಲಿ ಸಮಾಜದ ಮನಸ್ಸು; 21ಕ್ಕೆ ಹೆಚ್ಚಳ ಮದುವೆ ವಯಸ್ಸು..

ಹುಡುಗಿಯರ ವಿವಾಹ ವಯಸ್ಸನ್ನು ಕನಿಷ್ಠ 21ಕ್ಕೆ ಹೆಚ್ಚಳ ಮಾಡಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ, ಸದ್ಯದಲ್ಲೇ ಸಂಸತ್ತಿನಲ್ಲಿ ಮಂಡಿಸಿ ಕಾಯ್ದೆಯಾಗುವ ನಿರೀಕ್ಷೆಯಿದೆ. ಮಹಿಳೆಯರ ಭಾವನೆಗೆ ಗೌರವ, ಅಪೌಷ್ಟಿಕತೆ ನಿವಾರಣೆ, ವೈವಾಹಿಕ ಸಂಬಂಧ ಸುಧಾರಣೆ ಸೇರಿ ಅನೇಕ ಕಾರಣಗಳು ಇದರ ಹಿಂದೆ ಇವೆ ಎನ್ನಲಾಗುತ್ತಿದೆ. ಸರ್ಕಾರ ಸದುದ್ದೇಶದಿಂದ ಕಾನೂನು ಮಾಡಿರುವುದು ಸ್ವಾಗತಾರ್ಹವಾದರೂ ಅದನ್ನು ಪಾಲಿಸುವಲ್ಲಿ ಸಮಾಜದ ಮನಸ್ಸು ಬದಲಾಗಬೇಕು ಎಂಬುದು ತಜ್ಞರ ಅಭಿಪ್ರಾಯ. ಈ ಕುರಿತು ‘ವಿಜಯವಾಣಿ ಹಾಗೂ ದಿಗ್ವಿಜಯ 24*7 ನ್ಯೂಸ್’ ಆಯೋಜಿಸಿದ್ದ ಕ್ಲಬ್​ಹೌಸ್ ಸಂವಾದದಲ್ಲಿ ಅವರು ವ್ಯಕ್ತಪಡಿಸಿದ ಅನಿಸಿಕೆಗಳು ಇಲ್ಲಿವೆ.

ಹಲವು ಅನುಕೂಲಗಳು

| ಆರ್. ಶ್ರೀನಾಗೇಶ್ ಖ್ಯಾತ ಆಪ್ತಸಲಹೆಗಾರ

ಉತ್ತರ ಪ್ರದೇಶದಲ್ಲಿ ಸಾಮಾನ್ಯವಾಗಿ ಬೇಗ ಮದುವೆ ಮಾಡುತ್ತಾರೆ. ಒಂದು ಪ್ರಕರಣದಲ್ಲಿ, ಚಿಕ್ಕವಯಸ್ಸಿಗೇ ಮದುವೆ ಮಾಡಲು ಪಾಲಕರು ಮುಂದಾದರು. ಹುಡುಗಿ ಹೇಗೋ ಪಾಲಕರನ್ನು ಒಪ್ಪಿಸಿ ಪಿಯುಸಿವರೆಗೆ ಮುಂದೂಡಿದಳು. ಪಿಯು ಮುಗಿದ ಕೂಡಲೆ ಮದುವೆ ಮಾಡಿದರು. ಆದರೆ ವಿವಾಹ ಹೊಂದಾಣಿಕೆ ಆಗದೆ ಹೊರಬಂದಳು. ನಂತರ ಪೊಲೀಸ್ ಇಲಾಖೆಯಲ್ಲಿ ಕಾನ್​ಸ್ಟೆಬಲ್ ಕೆಲಸಕ್ಕೆ ಸೇರಿದಳು. ಅಲ್ಲಿದ್ದಾಗಲೇ ಪರೀಕ್ಷೆ ಎದುರಿಸಿ ಸಬ್ ಇನ್ಸ್​ಪೆಕ್ಟರ್ ಆದಳು. ಅಲ್ಲಿಗೂ ಸಮಾಧಾನವಾಗದೆ ಕೊನೆಗೆ ಯುಪಿಎಸ್​ಸಿ ಪರೀಕ್ಷೆ ಬರೆದು ಈಗ ಐಪಿಎಸ್ ಅಧಿಕಾರಿಯಾಗಿದ್ದಾಳೆ. ಅಂದರೆ, ಹೆಣ್ಣುಮಕ್ಕಳಿಗೆ ತಮ್ಮದೇ ಆದ ಕನಸುಗಳಿರುತ್ತವೆ. ಆದರೆ ಹೆಣ್ಣುಮಕ್ಕಳಿಗೆ ಓದಿಸಿದರೆ ಒಳ್ಳೆಯ ಗಂಡ ಸಿಗುವುದಿಲ್ಲ, ಬೇಗನೆ ಮದುವೆ ಮಾಡಿದರೆ ಅಡ್ಡದಾರಿ ಹಿಡಿಯುವುದಿಲ್ಲ ಎಂಬ ತಪ್ಪುಕಲ್ಪನೆಗಳು ಪಾಲಕರಲ್ಲಿವೆ. ಮದುವೆ, ದಾಂಪತ್ಯವನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತಲೂ ಮೊದಲು ಮದುವೆ ಆಗುವುದರಿಂದ ನಂತರ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದೇ ರೀತಿಯ ಪ್ರಕರಣವೊಂದರಲ್ಲಿ, 18 ವರ್ಷ ಆದಕೂಡಲೆ ಹುಡುಗಿಯೇ ಪತಿಯನ್ನು ಆಯ್ಕೆ ಮಾಡಿಕೊಳ್ಳಲು ಪ್ರೌಢಿಮೆ ಇರುವುದಿಲ್ಲ ಎಂದು 2010ರಲ್ಲಿ ನ್ಯಾಯಾಲಯದ ತೀರ್ಪೆಂದು ಇದೆ. ಹುಡುಗಿ ತಾನಾಗಿಯೇ ಆಯ್ಕೆ ಮಾಡಿಕೊಳ್ಳಲು 21 ವರ್ಷ ಆಗಬೇಕು. ಇಲ್ಲದಿದ್ದರೆ ಮದುವೆ ನಂತರ ಸಮಸ್ಯೆ ಆದರೆ ತಂದೆ-ತಾಯಿಯೇ ಬರಬೇಕಾಗುತ್ತದೆ ಎಂದು ತೀರ್ಪಿನಲ್ಲಿ ಹೇಳಿತ್ತು. 22-23 ವರ್ಷಕ್ಕೆ ಮದುವೆ ಆದರೆ ಜವಾಬ್ದಾರಿಗಳ ಬಗ್ಗೆ ತಿಳಿವಳಿಕೆ ಬಂದಿರುತ್ತದೆ. ಕೇಂದ್ರ ಸರ್ಕಾರ ಕೈಗೊಂಡಿರುವುದು ಸ್ವಾಗತಾರ್ಹವಾದ ಹೆಜ್ಜೆ. ಬಾಲ್ಯವಿವಾಹಗಳನ್ನು ತಡೆಯಲು ಇದು ಒಂದು ಪ್ರಮುಖ ಹೆಜ್ಜೆ, ಆದರೆ ಇಷ್ಟೇ ಸಾಕಾಗುವುದಿಲ್ಲ.

ಕೇಂದ್ರ ಸರ್ಕಾರದ ಉಡುಗೊರೆ ಎಂದ ಯುವತಿ: ಗುರುವಾರವಷ್ಟೇ ಆಪ್ತಸಂವಾದಕ್ಕೆ ಆಗಮಿಸಿದ ಯುವತಿಯ ಉದಾಹರಣೆ ನೀಡಬಹುದು. ಆಕೆಗೆ ಐಎಎಸ್ ಅಧಿಕಾರಿಯಾಗುವ ಕನಸಿದೆ. ಆದರೆ, ಒಳ್ಳೆಯ ಸಂಬಂಧ ಬಂದಿದೆ, ‘ಬೇಗ ಮದುವೆ ಆಗು’ ಎಂಬ ಪಾಲಕರ ಒತ್ತಾಯಕ್ಕೆ ಆತಂಕಗೊಂಡಿದ್ದಳು. ಈ ವೇಳೆಗೆ ಮದುವೆ ವಯಸ್ಸನ್ನು ಕೇಂದ್ರ ಸರ್ಕಾರ 21 ವರ್ಷಕ್ಕೆ ಹೆಚ್ಚಿಸುವ ವಿಚಾರ ತಿಳಿದುಬಂದಿತು. ‘ಕೇಂದ್ರ ಸರ್ಕಾರದ ಈ ನಿರ್ಧಾರ ನನಗೆ ಲಭಿಸಿರುವ ಉಡುಗೊರೆ’ ಎಂದು ಆಕೆ ಸಂತಸ ವ್ಯಕ್ತಪಡಿಸಿದಳು.

ಗ್ರಾಮೀಣ ಭಾಗದ ಸ್ಥಿತಿ: ಗ್ರಾಮೀಣ ಭಾಗದಲ್ಲೂ ಅನೇಕ ಹೆಣ್ಣುಮಕ್ಕಳಿಗೆ ತಮ್ಮ ಹಕ್ಕುಗಳ ಅರಿವಾಗುತ್ತಿದೆ. ಒಂದು ಪ್ರಕರಣದಲ್ಲಿ, ಹಳ್ಳಿಯಲ್ಲಿ ಓದುತ್ತಿದ್ದ ಮಗಳಿಗೆ 15 ವರ್ಷಕ್ಕೆ ಮದುವೆ ಮಾಡಲು ಪಾಲಕರು ಮುಂದಾಗಿದ್ದರು. ‘ಇಷ್ಟು ಚಿಕ್ಕ ವಯಸ್ಸಿಗೇ ಮದುವೆ ಮಾಡಬೇಡಿ’ ಎಂದು ಆಕೆಯ ಗೆಳತಿಯರು ಹೇಳಿದರೂ ಕೇಳಲಿಲ್ಲ, ಬೆದರಿಸಿ ಕಳಿಸಿದರು. ಆನಂತರ ಗೆಳತಿಯರು ನೇರವಾಗಿ ಪೊಲೀಸರಿಗೆ ತಿಳಿಸಿದರು. ಪೊಲೀಸರು ಪಾಲಕರನ್ನು ಠಾಣೆಗೆ ಕರೆಸಿ, 18 ಪೂರ್ಣವಾಗುವವರೆಗೂ ಮದುವೆ ಮಾಡುವುದಿಲ್ಲ ಎಂದು ಅವರಿಂದ ಮುಚ್ಚಳಿಕೆ ಬರೆಸಿಕೊಂಡರು. ಈಗ ಗ್ರಾಮೀಣ ಪ್ರದೇಶದಲ್ಲೂ ಮಾಹಿತಿ ಹರಿಯುತ್ತಿದೆ. ಇದರಲ್ಲಿ ಗ್ರಾಮೀಣ ಹಾಗೂ ನಗರ ಎನ್ನುವುದಕ್ಕಿಂತಲೂ, ಹೆಣ್ಣುಮಕ್ಕಳ ಬಗ್ಗೆ ಎಲ್ಲ ಕಡೆಯ ಪಾಲಕರಲ್ಲೂ ಮನಃಸ್ಥಿತಿ ಬದಲಾಗಬೇಕು.

ವಿವಾಹಪೂರ್ವ ಸಮಾಲೋಚನೆ: ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ಸೇರಿ ಅನೇಕ ಕಾರಣಗಳಿಗೆ ಹುಡುಗಿಯರಿಗೆ ಆತ್ಮವಿಶ್ವಾಸ ಹೆಚ್ಚುತ್ತಿದೆ. ಆದರೆ ಆತ್ಮವಿಶ್ವಾಸ ಹೆಚ್ಚಿರುವ ಹುಡುಗಿಯರನ್ನು ಹೇಗೆ ನಿಭಾಯಿಸಬೇಕು ಎಂಬ ಅರಿವು ಹುಡುಗರಿಗಿಲ್ಲ ಎಂಬ ಸಮಸ್ಯೆಯೂ ಇದೆ. ಹಾಗಾಗಿಯೇ ವಿವಾಹಪೂರ್ವ ಸಮಾಲೋಚನೆ ಹೆಚ್ಚಾಗಿ ನಡೆಯುತ್ತಿದೆ. ಮದುವೆ ನಂತರ ಯಾವ ಪರಿಸ್ಥಿತಿ ಎದುರಾಗಬಹುದು, ನಿಭಾಯಿಸುವುದು ಹೇಗೆ ಎಂಬುದನ್ನು ಮನವರಿಕೆ ಮಾಡಲಾಗುತ್ತದೆ. ಮದುವೆ ನಂತರ ಮೂರು ತಿಂಗಳಿಗೂ ಸಮಾಲೋಚನೆ ನಡೆಯುತ್ತಿದೆ.

ಮಕ್ಕಳನ್ನು ಗೌರವಿಸಿ: ಅನೇಕ ಪಾಲಕರಿಗೆ ಮಕ್ಕಳ ಜನ್ಮದಿನಾಂಕ, ದೈಹಿಕ ಬೆಳವಣಿಗೆಯಷ್ಟೆ ತಿಳಿದಿರುತ್ತದೆ. ಆದರೆ ಅವರಲ್ಲಿ ಬೌದ್ಧಿಕ ಬೆಳವಣಿಗೆಯೂ ಆಗಿರುತ್ತದೆ. ಅವರದ್ದೇ ಆಸೆ, ಕನಸು, ಕೌಶಲವೂ ಇರುತ್ತದೆ. ಅವುಗಳನ್ನು ಗೌರವಿಸಿ. ಮದುವೆ ಮಾಡುವುದಕ್ಕೆ ಯೋಚಿಸುವುದಕ್ಕಿಂತಲೂ ಸಮಾಜದಲ್ಲಿ ಸನ್ಮಾರ್ಗದಲ್ಲಿ ಸಾಗುವಂತಹ ಮೌಲ್ಯಗಳನ್ನು ತುಂಬಿ. ಮದುವೆ ವಯಸ್ಸು ಬಂದಾಗ ಅವರಾಗಿಯೇ ಸನ್ಮಾರ್ಗದಲ್ಲೇ ವಿವಾಹ ಮಾಡಿಕೊಳ್ಳುತ್ತಾರೆ. ಈ ವಿಚಾರದಲ್ಲಿ ಅನುಮಾನ ಇದ್ದಾಗ ಯಾವುದೇ ಹಿಂಜರಿಕೆ ಇಲ್ಲದೆ ಆಪ್ತ ಸಲಹೆಗಾರರನ್ನು ಸಂರ್ಪಸುವುದು ಒಳ್ಳೆಯದು.

ಮಾಹಿತಿ ಬೇರೆ, ಜ್ಞಾನ ಬೇರೆ: ಈಗಿನ ಮಾಹಿತಿ ಯುಗದಲ್ಲಿ 18 ವಯಸ್ಸಿಗೂ ಮುನ್ನವೇ ಸಾಕಷ್ಟು ಮಾಹಿತಿ ಇರುತ್ತದೆ, ಅವರ ಜೀವನದ ನಿರ್ಧಾರ ಕೈಗೊಳ್ಳಲು ಸಮರ್ಥರಿರುತ್ತಾರೆ ಎಂದು ಅನ್ನಿಸುತ್ತದೆ. ಆದರೆ ಮಾಹಿತಿ ಬೇರೆ, ಜ್ಞಾನ ಬೇರೆ. ಜೀವನದಲ್ಲಿ ಸಮಸ್ಯೆಗಳು ಬಂದಾಗ ಎದುರಿಸುವುದು ಹೇಗೆ? ತಮಗೆ ಬೇಕಾದ್ದು ಸಿಗದಿದ್ದಾಗ ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಜೀವನದಲ್ಲಿ ಅನುಭವ, ವಿವೇಚನೆಯಿಂದ ತಾವೇ ಕಲಿಯಬೇಕಾದ ವಿಷಯಗಳಿವು. ಮಕ್ಕಳಲ್ಲಿ ಪ್ರೌಢಿಮೆ ಇರುವುದಿಲ್ಲ ಎಂಬುದಷ್ಟೆ ಅಲ್ಲ, ಮಕ್ಕಳಿಗೆ ಜವಾಬ್ದಾರಿ ಕಲಿಸುವುದು ಹೇಗೆ ಎಂದು ಪಾಲಕರೂ ಯೋಚಿಸಬೇಕು.

ಚರ್ಚೆ ಬಳಿಕವೇ ನಿರ್ಧಾರ

| ಡಾ. ಪದ್ಮಿನಿ ಪ್ರಸಾದ್ ಖ್ಯಾತ ಸ್ತ್ರೀರೋಗ ತಜ್ಞೆ

ಈ ನಿರ್ಧಾರ ಕೈಗೊಳ್ಳುವ ಮುನ್ನ ಕೇಂದ್ರ ಸರ್ಕಾರ ರಚಿಸಿದ್ದ ವೈದ್ಯಕೀಯ, ಕಾನೂನು, ಶಿಕ್ಷಣ ತಜ್ಞರ ಸಮಿತಿ ಸಾಕಷ್ಟು ಚರ್ಚೆ ನಡೆಸಿದೆ. ಇದು ಜನಸಂಖ್ಯೆ ನಿಯಂತ್ರಣಕ್ಕಾಗಿ ಕೈಗೊಂಡಿರುವ ನಿರ್ಧಾರ ಅಲ್ಲ. ಇದರ ಮುಖ್ಯ ಉದ್ದೇಶ ಹೆಣ್ಣುಮಕ್ಕಳ ಶಿಕ್ಷಣ, ಉದ್ಯೋಗ, ಆರ್ಥಿಕ ಸಬಲತೆ ಹೊಂದುವುದಾಗಿದೆ. ಇದರಿಂದ ಹೆಣ್ಣುಮಕ್ಕಳ ದೈಹಿಕ ಆರೋಗ್ಯವೃದ್ಧಿ ಜತೆಗೆ ಬೌದ್ಧಿಕವಾಗಿಯೂ ಬೆಳವಣಿಗೆ ಹೊಂದಲು ಸಹಕಾರಿಯಾಗಲಿದ್ದು, ಭವಿಷ್ಯದ ನಿರ್ಧಾರಗಳನ್ನು ಕೈಗೊಳ್ಳಲು ಸಮರ್ಥರಾಗಿರುತ್ತಾರೆ. ಈ ಎಲ್ಲ ವಿಚಾರಗಳನ್ನು ಮನಗಂಡು ವಯಸ್ಸು ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

18ಕ್ಕೆ ವಿವಾಹ, ಆರೋಗ್ಯದ ಮೇಲೆ ದುಷ್ಪರಿಣಾಮ: ಹೆಣ್ಣುಮಕ್ಕಳು 18 ವರ್ಷಕ್ಕೆ ವಿವಾಹ ಆಗುವುದರಿಂದ ಬೇಗ ಗರ್ಭಧಾರಣೆ ಆದಲ್ಲಿ ತಾಯಿ ಮತ್ತು ಶಿಶುಮರಣ ಪ್ರಮಾಣ ಹೆಚ್ಚು. ಈ ವಯಸ್ಸಿನಲ್ಲಿ ಹೆಣ್ಣುಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಟಿಕತೆ, ವಿಟಮಿನ್, ಪ್ರೋಟಿನ್ ಕೊರತೆಯಿಂದ ದೇಹ ದುರ್ಬಲವಾಗಿರುತ್ತದೆ. ಹಾಗಾಗಿ ಆರೋಗ್ಯವಂತ ಮಕ್ಕಳನ್ನು ಹೆರುವ ಸಾಮರ್ಥ್ಯ ಹೊಂದಿರುವುದಿಲ್ಲ. ಇದು ಮುಂದಿನ ಪೀಳಿಗೆಯ ಮೇಲೂ ಪರಿಣಾಮ ಬೀರುತ್ತದೆ. 21 ವರ್ಷಕ್ಕಿಂತ ಮುಂಚಿತವಾಗಿ ತಾಯಿಯಾದರೆ ಹೈರಿಸ್ಕ್ ಪ್ರೆಗ್ನೆನ್ಸಿ ಹೆಚ್ಚುತ್ತದೆ. ರಕ್ತಸ್ರಾವ, ಗರ್ಭದಲ್ಲಿ ಶಿಶುವಿನ ಸಾವು, ಅಕಾಲ ಪ್ರಸವ, ತಾಯಿ ಮರಣದಂಥ ಸಮಸ್ಯೆಗಳು ಹೆಚ್ಚು.

ಕಾನೂನು ಇಲ್ಲದೆಯೂ ಸಾಧ್ಯ: ಶಿಕ್ಷಣದಿಂದಾಗಿ ಇಂದು ಹೆಣ್ಣುಮಕ್ಕಳು ಉದ್ಯೋಗ, ಆರ್ಥಿಕ ಸಬಲತೆ ಹೊಂದುತ್ತಿದ್ದಾರೆ. ಹೀಗಾಗಿ 30ನೇ ವಯಸ್ಸಿನವರೆಗೂ ಮದುವೆಗೆ ಒಪು್ಪತ್ತಿಲ್ಲ. ತನ್ನಲ್ಲಿರುವ ಪ್ರತಿಭೆ ಬಳಸಿಕೊಂಡು ಸಾಧನೆ ಮಾಡಬೇಕು ಎನ್ನುವ ಮನೋಭಾವ ಹೊಂದುತ್ತಿದ್ದಾರೆ. ಹಾಗಾಗಿ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಲ್ಲಿ ಕಾನೂನು ಇಲ್ಲದೆಯೇ ಬಾಲ್ಯವಿವಾಹ ತಡೆಯಬಹುದಾಗಿದೆ. ಇದಕ್ಕಾಗಿ ಶಿಕ್ಷಣ, ಶಾಲೆಗಳಲ್ಲಿ ಶೌಚಗೃಹ ಸೇರಿದಂತೆ ಉತ್ತಮ ಪರಿಸರ ನಿರ್ಮಾಣ ಮಾಡಿಕೊಡಬೇಕು. ಆದಾಗಿಯೂ ಕಾನೂನು ಪ್ರಕಾರ ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ.

ದಾಂಪತ್ಯ ಕಲಹಕ್ಕೆ ಕಾರಣ: ಹೆಣ್ಣುಮಕ್ಕಳ ಮಿದುಳು ಸಂಪೂರ್ಣ ಬೆಳವಣಿಗೆ ಆಗಲು 25 ವರ್ಷ ಆಗಬೇಕು ಎಂದು ವೈದ್ಯಕೀಯ ಅಧ್ಯಯನದಿಂದ ತಿಳಿದು ಬಂದಿದೆ. ಶಿಕ್ಷಣದಲ್ಲಿ ಆಸಕ್ತಿ ಬಂದರೆ ಸಹಜವಾಗಿ ಅವರೇ ವಿವಾಹದ ವಯಸ್ಸನ್ನು ಮುಂದೂಡುತ್ತಾರೆ. ತಿಳಿವಳಿಕೆ ಇಲ್ಲದ ವಯಸ್ಸಿನಲ್ಲಿ ವಿವಾಹ ಮಾಡುವುದರಿಂದ ಕೆಲ ವರ್ಷಗಳಲ್ಲೇ ದಾಂಪತ್ಯದಲ್ಲಿ ಕಲಹ ಉಂಟಾಗುತ್ತಿದೆ. ಇದಲ್ಲದೆ ಇಂದಿನ ಯುವಜನಾಂಗದ ತಿಳಿವಳಿಕೆ, ಅನಿಸಿಕೆಗಳು, ನಿರೀಕ್ಷೆಗಳು ಹೆಚ್ಚಿರುವುದರಿಂದ ದಾಂಪತ್ಯದಲ್ಲಿ ಕಲಹ ಉಂಟಾಗುತ್ತಿದೆ. ಹಾಗಾಗಿ ವಿದ್ಯೆ, ಉದ್ಯೋಗದ ಜತೆಗೆ ಯೋಚನಾಶಕ್ತಿಯ ಅಗತ್ಯವೂ ಇದೆ.

ಕೇಳುಗರ ಪ್ರಶ್ನೆಗಳಿಗೆ ಉತ್ತರ

ಎಲ್ಲ ಧರ್ಮದವರಿಗೂ ಅನ್ವಯವಾಗಲಿದೆಯೇ?

- ಮಕ್ಕಳು-ಮಹಿಳೆಯರ ಹಕ್ಕುಗಳ ರಕ್ಷಣೆ, ಬಾಲ್ಯವಿವಾಹ ತಡೆ ಕಾಯ್ದೆಯಂಥ ವಿಶೇಷ ಕಾಯ್ದೆಗಳೇನಿವೆ, ಈ ಕಾಯ್ದೆಗಳು ಯಾವುದೇ ಧರ್ಮದ ವೈಯಕ್ತಿಕ ಕಾಯ್ದೆಗಳನ್ನೂ ಮೀರಿ ನಿಲ್ಲುತ್ತವೆ ಎಂದು ಈಗಾಗಲೇ ಸುಪ್ರೀಂಕೋರ್ಟ್, ಹೈಕೋರ್ಟ್ ಗಳು ಹಲವು ಬಾರಿ ಹೇಳಿವೆ. ಹೀಗಿದ್ದರೂ, ಈ ವಿಚಾರದ ಬಗ್ಗೆ ಈಗಲೂ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇರುತ್ತವೆ.

ವಯಸ್ಸು ಹೆಚ್ಚಿಸುವುದರಿಂದ ಉಪಯೋಗವಿದೆಯೇ?

- 21 ವರ್ಷದವರೆಗೆ ಮದುವೆಯನ್ನೇ ಮಾಡುವಂತಿಲ್ಲ ಎಂದಾದಾಗ ಪಾಲಕರು ಹಾಗೂ ಮಕ್ಕಳೂ ಅದಕ್ಕೆ ಹೊಂದಿಕೊಳ್ಳಲೇಬೇಕಾಗುತ್ತದೆ. ಆಗ ಮಕ್ಕಳ ವಿದ್ಯಾಭ್ಯಾಸ ಅಥವಾ ಮದುವೆಯ ಬಗ್ಗೆ ಮೊದಲೇ ಯೋಜನೆ ರೂಪಿಸಿಕೊಳ್ಳಲು ಸಹಾಯವಾಗುತ್ತದೆ. ಮೊದಲು 18 ವರ್ಷ ಮದುವೆಯ ವಯಸ್ಸು ಇದ್ದ ಕಾರಣ, ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿ ಮದುವೆ ಮಾಡುವ ಸಾಧ್ಯತೆಯೂ ಇತ್ತು. ಈಗ 21 ವರ್ಷವಾಗುವವರೆಗೂ ಮಕ್ಕಳು ಶಿಕ್ಷಣವನ್ನಾದರೂ ಮುಗಿಸಲಿ ಎಂಬ ನಿರ್ಧಾರಕ್ಕೆ ಬಂದರೂ ಬರಬಹುದು. ಉತ್ತಮ ಶಿಕ್ಷಣ ದೊರೆತಾಗ ಸಹಜವಾಗಿಯೇ ಉತ್ತಮ ಕೆಲಸ ಸಿಗಲಿದೆ. ಆಗ ಅವರು ಆರ್ಥಿಕ ಸ್ವಾವಲಂಬನೆ ಪಡೆದುಕೊಳ್ಳುತ್ತಾರೆ.

ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗಬೇಕು

| ರಾಜರಾಜೇಶ್ವರಿ ಹೈಕೋರ್ಟ್ ವಕೀಲೆ

ಕೇಂದ್ರದ ನಿರ್ಧಾರ ಸ್ವಾಗತಾರ್ಹವೇ ಆದರೂ, ಮುಂದೆ ಇದರಿಂದ ಸಾಕಷ್ಟು ಪ್ರಶ್ನೆಗಳು ಉದ್ಭವಿಸುವ ಸಾಧ್ಯತೆಯೂ ಇದೆ. ಐಪಿಸಿ ಸೆಕ್ಷನ್ 375 ಪ್ರಕಾರ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಂಡತಿಯೊಂದಿಗೆ ಪತಿ ದೈಹಿಕ ಸಂಪರ್ಕ ನಡೆಸಿದರೆ ಅದು ಅತ್ಯಾಚಾರವಲ್ಲ ಎಂದು ಹೇಳಲಾಗುತ್ತದೆ. ಆದರೆ, ಹಿಂದು ವಿವಾಹ ಕಾಯ್ದೆಯ ಸೆಕ್ಷನ್ 12ರ ಪ್ರಕಾರ ಅಪ್ರಾಪ್ತರೊಂದಿಗೆ ಮದುವೆ ಊರ್ಜಿತವಲ್ಲ ಎನ್ನಲಾಗಿದೆ. ಇಂಡಿಯನ್ ಕಾಂಟ್ರಾ್ಯಕ್ಟ್​ನಲ್ಲಿ ಅಪ್ರಾಪ್ತರೊಂದಿಗಿನ ಒಪ್ಪಂದಗಳನ್ನು ಅನೂರ್ಜಿತ ಎನ್ನಲಾಗುತ್ತದೆ. ಹೀಗೆ ಮತದಾನಕ್ಕೆ ಒಂದು ವಯಸ್ಸು, ಮದುವೆಗೆ ಒಂದು ವಯಸ್ಸು, ಅತ್ಯಾಚಾರ ಪ್ರಕರಣಗಳಲ್ಲಿ ಒಂದು ವಯಸ್ಸು ಎಂದಿದ್ದಾಗ ಈ ಬಗ್ಗೆ ಗೊಂದಲ ಸೃಷ್ಟಿಯಾಗುವ ಸಾಧ್ಯತೆ ಇದ್ದು, ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾಗುತ್ತದೆ.

ದೌರ್ಜನ್ಯದ ಬಗ್ಗೆ ಅರಿವಿರುವುದಿಲ್ಲ: ಬಾಲ್ಯವಿವಾಹ ತಡೆಯುವ ಮುಖ್ಯ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಈ ಪ್ರಸ್ತಾವನೆ ತಂದಿದೆ. ಬಾಲ್ಯವಿವಾಹಗಳು ಹೆಣ್ಣುಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ. ಮದುವೆಯ ನಂತರ ಗಂಡನಿಂದಲೇ ನಡೆಯುವ ಲೈಂಗಿಕ ದೌರ್ಜನ್ಯಗಳ ಬಗ್ಗೆಯೂ ಅವರಿಗೆ ಅರಿವಿರುವುದಿಲ್ಲ. ಹೆಣ್ಣುಮಕ್ಕಳ ಮದುವೆಯ ವಯಸ್ಸು 21ಕ್ಕೆ ಹೆಚ್ಚಳ ಮಾಡುವುದರಿಂದ, ಯಾವುದು ಸರಿ, ಯಾವುದು ತಪು್ಪ ಎನ್ನುವುದನ್ನು ತಾವೇ ನಿರ್ಧರಿಸುವಷ್ಟು ಪ್ರೌಢಿಮೆ ಅವರಲ್ಲಿ ಮೂಡಿರುತ್ತದೆ.

ಪಾಲಕರು ಅವಕಾಶ ನೀಡಬೇಕು: ನಮ್ಮ ದೇಶದ ಮದುವೆಯನ್ನು ವಿದೇಶದ ಮದುವೆ ಜತೆಗೆ ಹೋಲಿಕೆ ಮಾಡುವಂತಿಲ್ಲ. ನಮ್ಮಲ್ಲಿ ಅದಕ್ಕೆ ತನ್ನದೇ ಹಿನ್ನೆಲೆ ಇದೆ. ವಿವಾಹ ನಂತರ ಸಮಸ್ಯೆಯನ್ನು ಗಂಭೀರವಾಗಿ ನಿಭಾಯಿಸುವುದು ಹೇಗೆ ಎಂದು ತಿಳಿದುಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಸಮಸ್ಯೆಯನ್ನು ಸಮಸ್ಯೆ ಎಂದು ತಿಳಿಯುವುದು ಮುಖ್ಯವಾಗುತ್ತದೆ. ಮದುವೆ ನಂತರ ದಂಪತಿ ಹೊಂದಿಕೊಳ್ಳಲು ಪಾಲಕರು ಅವಕಾಶ ನೀಡಬೇಕು.