ಅಂಕಣ

ಕರ್ತವ್ಯದಿಂದ ಧನ್ಯತೆ; ಮನೋಲ್ಲಾಸ ಅಂಕಣ

Webdesk - Ravikanth
| ಭಾರತಿ ಎ. ಕೊಪ್ಪ

ಅದೊಂದು ಭವ್ಯ ದೇಗುಲದ ನಿರ್ಮಾಣ ಕಾರ್ಯ ಆರಂಭವಾಗಿತ್ತು. ನೂರಾರು ಜನ ಕಾರ್ವಿುಕರು ಕಲ್ಲು ಕೆತ್ತುವ ಕಾಯಕದಲ್ಲಿ ನಿರತರಾಗಿದ್ದರು. ಅವರೆಲ್ಲರೂ ಒಂದೇ ತೆರನಾದ ಕೆಲಸ ಮಾಡುತ್ತಿದ್ದರು. ಸಮಾನ ಕೆಲಸಕ್ಕೆ ಸಮಾನ ಸಂಬಳವನ್ನೂ ನೀಡಲಾಗುತ್ತಿತ್ತು. ಆದರೆ ಅವರೆಲ್ಲರ ಭಾವನೆ ಒಂದೇ ತೆರನಾಗಿರಲಿಲ್ಲ. ಕಲ್ಲು ಕೆತ್ತಿದರೆ ಮಾತ್ರ ಸಂಬಳ, ಇಲ್ಲದಿದ್ದರೆ ಸಂಬಳ ಸಿಗುವುದಿಲ್ಲವಲ್ಲ, ಹೊಟ್ಟೆಪಾಡಿಗಾಗಿ ಕೆಲಸ ಮಾಡಲೇಬೇಕಲ್ಲ ಎಂಬ ಭಾವನೆ ಕೆಲವರದಾಗಿತ್ತು. ಆದರೆ ಇನ್ನು ಕೆಲವರಲ್ಲಿ, ಆ ದೇವರೇ ನೆಲೆಸುವ ದೇಗುಲದ ಕಲ್ಲಿನ ಕೆತ್ತನೆ ಮಾಡುತ್ತಿದ್ದೇವೆ ಎಂಬ ಧನ್ಯತಾ ಭಾವವಿತ್ತು. ಇವರ ಕೆಲಸ ಕೇವಲ ಹೊಟ್ಟೆಪಾಡಿಗಾಗಿ ಆಗಿರದೆ ಕೃತಾರ್ಥತೆಯ ಮೂಲಕ ಮನಸ್ಸು ತೃಪ್ತಿ ಪಡೆಯುವ, ದೇವರೊಲುಮೆ ಪಡೆದು ಪುನೀತರಾಗುವ ಪವಿತ್ರ ಕಾರ್ಯವಾಗಿತ್ತು. ಮುಖದಲ್ಲಿ ಆಯಾಸ ಕಾಣದೆ ಮಂದಹಾಸವಿತ್ತು. ಮಾತಿನಲ್ಲಿ ನಯ, ಕೆಲಸದಲ್ಲಿ ನಾಜೂಕು ಇತ್ತು. ಕೆಲಸ ಚೆನ್ನಾಗಿ ಮಾಡಬೇಕೆಂಬ ತುಡಿತದೊಂದಿಗೆ ಕೆಲಸದ ಎಲ್ಲಾ ಫಲಿತವನ್ನು ಭಗವಂತನಿಗೊಪ್ಪಿಸಿ ಧನ್ಯರಾಗಬೇಕೆಂಬ ಮಿಡಿತ ಇತ್ತು.

ದೇಗುಲದ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ಕೇವಲ ಸಂಬಳದ ಮನಸ್ಥಿತಿಯಿಂದ ಕೆಲಸ ಮಾಡಿದವರು ಕೆಲಸ ಮುಗಿಯಿತಲ್ಲ, ನಾಳೆಯಿಂದ ಇನ್ನೊಂದೆಡೆ ಕೆಲಸಕ್ಕೆ ಹೋಗುವುದಷ್ಟೆ ಎಂಬ ಭಾವ ವ್ಯಕ್ತಪಡಿಸಿದರು. ನಿಷ್ಠೆಯಿಂದ, ಕೃತಾರ್ಥ ಭಾವದಿಂದ ಕೆಲಸ ಮಾಡಿದವರು, ದೇಗುಲದ ಸೌಂದರ್ಯದಲ್ಲಿ ತಾವು ಹರಿಸಿದ ಬೆವರಿನ ನೋವು ಮರೆತರು. ಕೆಲಸದ ಫಲಿತ ಅಜರಾಮರವಾಗುವಂತೆ ದೇಗುಲ ನಿರ್ವಣವಾಗಿದ್ದನ್ನು ನೋಡಿ ಧನ್ಯತಾಭಾವ ತೋರಿದರು. ದೇಗುಲದ ಉದ್ಘಾಟನಾ ಸಂದರ್ಭದಲ್ಲಿ ಬಂದ ಭಕ್ತರೆಲ್ಲರೂ ವ್ಹಾ! ಎಂತಹಾ ಅದ್ಭುತ ಕೆಲಸ! ಎಂದು ಉದ್ಗರಿಸಿದಾಗ, ಈ ಕೆಲಸಗಾರರು ಇದು ತಮ್ಮ ಕರ್ತವ್ಯನಿಷ್ಠೆಗೆ ಸಿಕ್ಕ ಬಹುಮಾನ ಎಂದುಕೊಂಡರು. ಭಕ್ತರ ಸಂತಸದಲ್ಲಿ ತಮ್ಮ ಸಂತಸ ಇಮ್ಮಡಿಗೊಳಿಸಿಕೊಂಡರು.

ನಾವೂ ಕೂಡ ಜೀವನೋಪಾಯಕ್ಕಾಗಿ ಒಂದಲ್ಲ ಒಂದು ಕೆಲಸವನ್ನು ಮಾಡುತ್ತಿರುತ್ತೇವೆ. ಹಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುತ್ತೇವೆ. ಮಾಡುವ ಕೆಲಸವನ್ನು ಸಂಬಳದ ಲೆಕ್ಕಾಚಾರದಲ್ಲಿ ಮಾತ್ರ ಮಾಡುವ ಯೋಚನೆ ನಮ್ಮದಾಗಿದ್ದರೆ, ಅದರ ಗುಣಮಟ್ಟವೂ ಅಷ್ಟಕ್ಕಷ್ಟೇ ಆಗಿರುತ್ತದೆ. ಫಲಿತಾಂಶವೂ.

ಕೇವಲ ಸಂಬಳದ ಲೆಕ್ಕಾಚಾರ ಬದಿಗೊತ್ತಿ, ಪ್ರೀತಿ, ಶ್ರದ್ಧೆಯಿಂದ ನಿರ್ವಹಿಸಿದರೆ ಮನೋಲ್ಲಾಸವಾಗುತ್ತದೆ. ಶ್ರಮದ ಭಾವ ಗೋಚರಿಸುವುದಿಲ್ಲ. ಫಲಿತಾಂಶವೂ ಸರ್ವಮಾನ್ಯವಾಗುತ್ತದೆ. ಸಂಬಳದ ಸಿಹಿಗಿಂತ ಧನ್ಯತೆಯ ಸವಿ ನೂರ್ಕಾಲ ಉಳಿಯುತ್ತದೆ. ಹೀಗೆ ಎಲ್ಲರಿಗೂ ಒಳಿತಾಗಬೇಕು, ಪರಮಾತ್ಮನಿಗೆ ಸಂಪ್ರೀತಿಯಾಗಬೇಕೆಂದು ಭಾವದುಂಬಿ ಕೆಲಸ ನಿರ್ವಹಿಸಿದಲ್ಲಿ ಕರ್ತವ್ಯಪರತೆ ಎತ್ತಿ ಹಿಡಿಯಬಹುದು. ಕರ್ತವ್ಯಪರತೆಯು ಕೆಲಸದ ಶ್ರೇಷ್ಠತೆಯನ್ನು ದಿರ್ಗªಸುತ್ತದೆ, ಆಂತರ್ಯದ ಆನಂದವನ್ನು ಇಮ್ಮಡಿಗೊಳಿಸುತ್ತದೆ, ಜನಮನ್ನಣೆಗೆ ಮುನ್ನುಡಿ ಬರೆಯುತ್ತದೆ. ಕೇವಲ ಸಂಬಳದ ದೃಷ್ಟಿಯಿಂದ ಮಾಡಿದ ಕೆಲಸವು ಅಲ್ಲೇ ಗೌಣವಾಗಿಬಿಡುತ್ತದೆ.

ದೊರೆತನದ ಜಟಿಲಗಳ, ಕುಟಿಲಗಳ, ಕಠಿಣಗಳ

ಭರತನುಳಿಸಿದನೆ ರಾಮನ ತೀರ್ಪಿಗೆಂದು?

ಅರಿವಿಗಿಹ ಕರ್ತವ್ಯ ಭಾರವನು ತಾನರಿತು

ಧುರವ ಧರಿಸಿದನವನು - ಮಂಕುತಿಮ್ಮ

ಎಂಬ ಡಿ.ವಿ.ಜಿ ಯವರ ಕಗ್ಗದ ಸಾಲುಗಳಂತೆ, ಭರತನು ರಾಜ್ಯವನ್ನು ನಡೆಸಿಕೊಂಡು ಹೋಗುವಾಗ ಬಂದೊದಗಿದ ಅಡ್ಡಿ ಆತಂಕಗಳನ್ನು, ಮೋಸದ ವ್ಯವಹಾರಗಳನ್ನು, ಕ್ಲಿಷ್ಟತೆಗಳನ್ನು ರಾಮನಿಗಾಗಿ ಉಳಿಸಿದನೆ? ತನ್ನ ತಿಳುವಳಿಕೆಗನುಗುಣವಾದ ಜವಾಬ್ದಾರಿಯನ್ನು ತಾನು ತಿಳಿದು ರಾಜ್ಯದ ಭಾರವನ್ನು ಹೊತ್ತನಲ್ಲವೆ? ಅಂತೆಯೇ ನಮ್ಮಕೆಲಸಗಳನ್ನು, ಜವಾಬ್ದಾರಿಗಳನ್ನು ನಾವೇ ಸರ್ವಶ್ರೇಷ್ಠವಾಗಿ ಮಾಡಿ ಧನ್ಯತಾಭಾವ ತಾಳಬೇಕಿದೆ.

(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)