| ಜಯಶ್ರೀ ಜೆ. ಅಬ್ಬಿಗೇರಿ
ಜಗತ್ಪ್ರಸಿದ್ಧ ತತ್ತ್ವಜ್ಞಾನಿಯಾದ ಸಾಕ್ರೆಟಿಸ್ನನ್ನು ಒಮ್ಮೆ ಅವನ ಶಿಷ್ಯಂದಿರು, ‘ನಿಜವಾದ ಜ್ಞಾನಿ ಯಾರು?’ ಎಂದು ಪ್ರಶ್ನಿಸಿದರು. ಅದಕ್ಕೆ ಆತ ‘ನಾನು ಅಜ್ಞಾನಿ’ ಎಂದ. ‘ಮಹಾಜ್ಞಾನಿಗಳಾದ ನೀವೇ ಹೀಗೆಂದರೆ ನಮ್ಮ ಗತಿಯೇನು?’ ಎಂದು ಅಚ್ಚರಿಯಿಂದ ಪ್ರಶ್ನಿಸಿದರು ಶಿಷ್ಯರು. ‘ನಾನು ಅಜ್ಞಾನಿ ಎಂಬ ವಿಷಯ ನಾನು ತಿಳಿದುಕೊಂಡೆ. ಆದರೆ, ಅದು ನಿಮಗೆ ತಿಳಿಯದು. ನೀವು ಮುಗ್ಧರು’ ಎಂದುತ್ತರಿಸಿದ ಸಾಕ್ರೆಟಿಸ್. ‘ಜ್ಞಾನ ಎಂಬುದು ಯಾರದೋ ಒಬ್ಬರ ಸ್ವತ್ತಲ್ಲ. ಅಲ್ಲದೆ ಒಬ್ಬರೇ ಗಳಿಸಲು ಸಾಧ್ಯವಿಲ್ಲದ ಅಮೂಲ್ಯ ವಸ್ತು ಅದು. ಜ್ಞಾನ ಎಂಬ ಸಾಗರದಲ್ಲಿ ಬಿಂದು ಮಾತ್ರ ಜ್ಞಾನವನ್ನು ಹೊಂದಿರುತ್ತಾರೆ’ ಎಂಬುದು ಸಾಕ್ರೆಟಿಸ್ನ ಅಭಿಪ್ರಾಯ.
ವಿಖ್ಯಾತ ವೈದ್ಯನಿಗೆ ಸುಂದರವಾದ ಮನೆಯ ನೀಲಿನಕ್ಷೆಯನ್ನು ತಯಾರಿಸುವುದು ತಿಳಿಯದೇ ಇರಬಹುದು. ಇಂಜಿನಿಯರ್ಗೆ ಮಕ್ಕಳಿಗೆ ಬೋಧಿಸುವುದು ಗೊತ್ತಿರದೆ ಇರಬಹುದು. ವೈದ್ಯ ಮನೆ ಕಟ್ಟುವ ಜ್ಞಾನ ಹೊಂದಿರಬೇಕು. ಇಂಜಿನಿಯರ್ ಶಿಕ್ಷಕ ವೃತ್ತಿಯ ನೈಪುಣ್ಯವನ್ನು ಕರಗತ ಮಾಡಿಕೊಂಡಿರಬೇಕೆಂದು ಬಯಸುವುದು ಮೂರ್ಖತನ ಎನಿಸುತ್ತದೆ ಅಲ್ಲವೇ? ಸಂತಸಮಯ ಜೀವನ ಸಾಗಿಸಲು ಜಗದ ಎಲ್ಲ ಜ್ಞಾನವೂ ಗೊತ್ತಿರಬೇಕೆಂದಿಲ್ಲ. ಅದರಂತೆ ವಿಭಿನ್ನ ವಿಷಯಗಳ ಜ್ಞಾನವಿದ್ದರೂ ನಮಗೆ ಬಲವಾದ ಸಾಮರ್ಥ್ಯ ಯಾವುದರಲ್ಲಿದೆ? ಎಂಬುದನ್ನು ಗುರುತಿಸಿಕೊಳ್ಳುವುದು ಮುಖ್ಯ. ವಿವಿಧ ಕ್ಷೇತ್ರಗಳಲ್ಲಿ ಜ್ಞಾನವಿದ್ದವರು ಯಾವುದರಲ್ಲೂ ನೆಲೆ ನಿಲ್ಲದೆ ಬದುಕಿನಲ್ಲಿ ಸಾಕಷ್ಟು ನೋವು ಅನುಭವಿಸಿದ್ದೂ ಇದೆ. ಒಂದೇ ರಂಗದಲ್ಲಿ ನೆಲೆ ಕಂಡುಕೊಳ್ಳಬೇಕೆಂದರೆ ಬಲಾಬಲಗಳನ್ನು ತಿಳಿದುಕೊಳ್ಳಬೇಕು. ವ್ಯಾನ್ ಡೈರ್ ಹೇಳಿದಂತೆ, ‘ಜಗತ್ತಿನಲ್ಲೊಂದು ಧ್ವನಿಯಿದೆ. ಅದು ಈ ಶ್ರೇಷ್ಠ ಭೂಮಿಯಲ್ಲಿ ನಮ್ಮ ಬದುಕಿನ ಉದ್ದೇಶವನ್ನು ಆಗಿಂದಾಗ್ಗೆ ನೆನಪಿಸುತ್ತಲೇ ಇರುತ್ತದೆ. ಅದುವೇ ಸ್ಪೂರ್ತಿಯ ವಾಣಿ. ಅದು ಭುವಿಯಲ್ಲಿದೆ. ಹಾಗೆಯೇ ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಇದೆ’. ವ್ಯಕ್ತಿತ್ವದ ವಿಕಾಸಕ್ಕೆ ಬುನಾದಿಯಾದ ಜ್ಞಾನದೊಂದಿಗೆ ಒಳ ಮನಸ್ಸಿನ ಸ್ಪೂರ್ತಿಯ ವಾಣಿಯನ್ನು ಅನುಸರಿಸಬೇಕು ಎನ್ನುವುದು ಆತನ ಮಾತಿನ ಅರ್ಥ. ಇದನ್ನೂ ಓದಿ: ಮನೋಲ್ಲಾಸ: ರಾಮಾಯಣವೆಂಬ ಮಹಾಫಲ
ಜಾಣತನದಿಂದ ಜ್ಞಾನಾರ್ಜನೆ ಮಾಡಿದರೆ ಸಾಲದು. ಪ್ರೇರೇಪಿತ ಉದ್ಯೋಗ ಗಳಲ್ಲಿ ಪುರಸ್ಕರಿಸುವಂತೆ, ಸತತವಾಗಿ ಸಮಾಜದಲ್ಲಿ ಮನ್ನಣೆ ಪಡೆದುಕೊಳ್ಳುವಂತೆ ದುಡಿಯಬೇಕು. ಜ್ಞಾನಶಕ್ತಿ ಜತೆ ಕ್ರಿಯಾಶಕ್ತಿಯೂ ಕೈಗೂಡಬೇಕು. ಅಂದಾಗ ಬದುಕು ಅರಳಿದ ಸುಂದರ ಹೂವಿನಂತೆ ಕಣ್ಮನ ಸೆಳೆಯುವುದು. ಸುತ್ತಲೂ ಸುವಾಸನೆ ಸೂಸಿ ಆನಂದ ನೀಡುವುದು. ಸಾಧಾರಣವಾದುದರಲ್ಲಿ ಅಸಾಧಾರಣವಾದುದನ್ನು ಹುಡುಕಿ ತೆಗೆಯಬೇಕು. ಜ್ಞಾನದ ಬಲದಿಂದ ಸಕಾರಾತ್ಮಕತೆ ಹಾಗೂ ಜೀವಂತಿಕೆಯ ಲವಲವಿಕೆಯನ್ನು ಮೈಗೂಡಿಸಿಕೊಳ್ಳಬೇಕು. ನಮ್ಮ ತಪು್ಪಗಳನ್ನು ನಾವೇ ತೆಗಳಿಕೊಂಡು ಸುಧಾರಿಸಿಕೊಳ್ಳಬೇಕು. ‘ಅಲ್ಪಜ್ಞಾನಿ ಮಹಾಗರ್ವಿ’ ಎಂಬಂತಿದ್ದರೆ ಪರಿಸ್ಥಿತಿಗಳು ಹದಗೆಡುತ್ತವೆ. ಬದುಕು ಕೈ ಜಾರಿ ಹೋಗುತ್ತದೆ. ‘ಯಾರಿಗೆ ಕೀರ್ತಿ ಸಿಗುತ್ತದೆ ಎಂದು ನಿಮಗೆ ಚಿಂತೆ ಇರದಿದ್ದರೆ ನೀವು ನಿಮ್ಮ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು’. ಇತರರ ಸಾಧನೆಗಳಲ್ಲಿ ಕಳೆದು ಹೋಗುವಂಥವರನ್ನು, ಜ್ಞಾನದ ಅಸೀಮ ಶಕ್ತಿಯನ್ನು ಅರಿಯದವರನ್ನು ಕುರಿತು ಹ್ಯಾರಿ ಟ್ರೂಮನ್ ಹೇಳಿದ ಮಾತಿದು. ಈ ಮಾತನ್ನು ಅರ್ಥೈಸಿಕೊಂಡು ಜ್ಞಾನದ ಬಲದಿಂದ ಜೀವನಾನಂದ ಪಡೆಯೋಣ.
(ಲೇಖಕಿ ಉಪನ್ಯಾಸಕಿ, ಹವ್ಯಾಸಿ ಬರಹಗಾರ್ತಿ)