ಅಂಕಣ

ಮನೋಲ್ಲಾಸ | ಪ್ರಯತ್ನ ನಿರಂತರವಾಗಿರಲಿ...

Webdesk - Ravikanth
| ಶ್ರೀಕಾಂತ ಹೆಗಡೆ

ಹೀಗೊಂದು ದೃಷ್ಟಾಂತ. ‘ಬದುಕಲ್ಲಿ ಬಹಳಷ್ಟು ವಿಚಾರಗಳು ಮಂಗ ಮನೆಕಟ್ಟಿದ ಹಾಗೆ ಆಗ್ತದೆ!’ ಎಂಬುದು. ಜೋರು ಮಳೆ ಸುರಿಯುವಾಗ ಮಂಗಗಳೂ ಅಂದುಕೊಳ್ಳುತ್ತವೆಯಂತೆ... ‘ನಾವ್ಯಾಕೆ ಮಳೆಯಲ್ಲಿ ನೆನೆಯಬೇಕು, ನಮಗೂ ಕೈಕಾಲಿದೆ, ಜನರಿಗಿಂತ ಅಧಿಕವೇ ಬಾಲವೊಂದು ಮಿಗಿಲು ನಮಗೆ. ಮನುಷ್ಯರಂತೆ ಮನೆಕಟ್ಟಿಕೊಂಡು ಬೆಚ್ಚಗೆ ಇರಬೇಕು’ ಎಂದು. ಆದರೆ ಮಳೆ ನಿಲ್ಲುತ್ತಲೇ, ಘೂಕ್ ಘೂಕ್... ಚೆಟರ್ ಪಟರ್... ಎಂದರಚಿ ಇನ್ನೊಂದು ಮರಕ್ಕೆ ನೆಗೆಯುತ್ತವೆ. ಪುನಃ ಮನೆಕಟ್ಟಬೇಕೆಂದು ಅನಿಸುವುದು ಮತ್ತೆ ಮಳೆ ಮೊದಲಿಟ್ಟಾಗಲೇ! ಸಮಾಜದಲ್ಲಿ ಬಹುತೇಕರ ಕಥೆ ಹೀಗೆಯೇ.

ಶಾಲೆಯಲ್ಲಿ ಮಕ್ಕಳು ಲಘುಪರೀಕ್ಷೆಯಲ್ಲಿ ಅನುತ್ತೀರ್ಣರಾದಾಗ ಮುಂದೆ ಹೀಗೆ ಮಾಡಬಾರದು. ಆರಂಭದಿಂದಲೇ ಚೆನ್ನಾಗಿ ಓದಿಕೊಳ್ಳಬೇಕು ಎಂದು ತೀರ್ವನಿಸುತ್ತಾರೆ. ಆದರೆ ಲಘುಪರೀಕ್ಷೆ ಮುಗಿದ ಮರುದಿನದಿಂದಲೇ ಅದೇ ಮಂಗಾಟ. ಪುನಃ ಮುಂದಿನ ಪರೀಕ್ಷಾ ಪರಿಣಾಮ ಬಂದಾಗಲೇ ಜ್ಞಾನೋದಯವಾಗುವುದು. ‘ಇರಲಿ ಬಿಡು ಮಾಡಿದರಾಯ್ತು’ ಎಂಬುದು ಸಾಮಾನ್ಯವಾಗಿ ಕೇಳಿಬರುವ ನಿರ್ಣಾಯಕ ಮಾತು. ಕೆಲವೊಬ್ಬರಿಗೆ ಆ ನಾಳೆ ಬರುವುದೇ ಇಲ್ಲ. ‘ಇಂದಿನ ಕೆಲಸವ ಇಂದೇ ಮಾಡು, ನಾಳೆಯೆಂದರೆ ಕಂಡವರಾರು’ ಇತ್ಯಾದಿ ನಾಣ್ಣುಡಿಗಳು ಎಲ್ಲರಿಗೂ ಚೆನ್ನಾಗಿ ಗೊತ್ತೇ ಇರುತ್ತವೆ. ಆದರೆ ಕಾರ್ಯಾನುಷ್ಠಾನದಲ್ಲಿ ಏನೋ ಆಲಸ್ಯ, ಎಂತದೋ ಅಡಚಣೆ, ಆದ್ಯತೆಯ ಕೊರತೆ. ಎಷ್ಟೋ ಜನರಿಗೆ ಉದ್ಯೋಗವನ್ನು ಕಂಡುಕೊಳ್ಳುವಲ್ಲಿಯೂ ಇದೇ ಬಗೆಯಾಗಿದೆ. ಉದ್ಯಮ ಕ್ಷೇತ್ರವನ್ನು ನೋಡಿ ಗಾಳಿ ಬಂದಾಗ ತೂರಿಕೊಳ್ಳದೇ ಮತ್ತೆ ಪರಿತಪಿಸುವುದು. ಅವಕಾಶಗಳು ಬಂದಾಗ ಉದಾಸೀನ, ಆಮೇಲೆ ತೀರಾ ಕಟಪಟೆ ಮಾಡುವುದು, ಆರಕ್ಕೇರದೆ ಮೂರಕ್ಕಿಳಿಯದೆ ಬದುಕಿನ ನಾವೆಯನ್ನು ನೂಕುವುದು.

ಅದ್ನಾನ್ ಸಾಮಿಯ ಹಾಡು ನೆನಪಾಗುತ್ತದೆ. ‘ಕೈಸೆ ಕೈಸೋಂಕೋ ದೇತಾ ಹೈ, ಐಸೆ ವೈಂಸೋ ಕೋ ದೇತಾ ಹೈ, ಮುಝುಕೋ ಭೀ ತೋ ಲಿಫ್ಟ್ ಕರಾದೇ...’ ಸಮಾಜದಲ್ಲಿ ಅಂಥ ಸಾಮರ್ಥ್ಯ ಇಲ್ಲದವರೂ ಎಂತೆಂಥ ಸಾಧನೆಯನ್ನು ಮಾಡಿದ್ದನ್ನು ಕಂಡಾಗ ಹಾಡು ಅರ್ಥಹೀನ ಎನ್ನಿಸುವುದಿಲ್ಲ. ಮಹಾವಿಷ್ಣುವಿಗೆ ಲಕ್ಷ್ಮಿ ದೊರಕಿದ್ದು, ಶಿವನಿಗೆ ವಿಷ ದೊರಕಿದ್ದು ‘ಭಾಗ್ಯಂ ಫಲತಿ ಸರ್ವತ್ರ ನ ವಿದ್ಯಾ ನ ಚ ಪೌರುಷಮ್ ಎಂಬ ಮಾತನ್ನು ಪುಷ್ಟೀಕರಿಸುತ್ತದೆ. ಸಬೂಬು ಹೇಳದೆ ಪ್ರಯತ್ನಗಳು ನಿರಂತರವಾಗಿ ಸಾಗಬೇಕು. ‘ಕರ್ಮಣ್ಯೇ ವಾಧಿಕಾರಃ ತೇ, ಫಲೇಷು ಮಾ...’ ಎಂಬುದನ್ನು ಅನುಪಂಕ್ತಿಯನ್ನಾಗಿಸಿ ಮುನ್ನಡೆಯಬೇಕಷ್ಟೆ. ಆಗ ‘ತೇನ ತ್ಯಕ್ತೇನ ಭುಂಜೀಥಾಃ’ ಎಂಬ ಉಪನಿಷದ್ವಾಣಿ ಮನಸ್ಸನ್ನು ಗಟ್ಟಿಗೊಳಿಸುತ್ತದೆ.

ಎಷ್ಟೋ ಸಾರಿ ಬದುಕಿನ ಸಿಂಹಾವಲೋಕನ ಮಾಡಿದಾಗ ಎಡವಿದ್ದು ಸ್ಮೃತಿಪಥಕ್ಕೆ ಬರುತ್ತದೆ, ಆತ್ಮಜಿಗುಪ್ಸೆ ಉಂಟಾಗುತ್ತದೆ. ‘ಹಾಗೆ ಮಾಡಬೇಕಿತ್ತು, ಹೀಂಗೆ ಇರಬೇಕಿತ್ತು, ಅದನ್ನು ಮಾಡುಬಾರದಿತ್ತು’ ಇತ್ಯಾದಿ ಅನಿಸುತ್ತದೆ. ಆಗ ಹಣೆಬರಹ ಎಂಬ ಗುರಾಣಿಯನ್ನು ಬಳಸಿ ಮುಂದಿನ ಬದುಕಿಗೆ ಧೈರ್ಯ ತಂದುಕೊಳ್ಳುತ್ತೇವೆ. ಬಾಳು ಆಗ ಪುನರ್ನವತೆಯನ್ನು ಕಾಣುತ್ತದೆ. ಹೀಗೆ ಕರ್ಮಗಳನ್ನು, ಪ್ರಯತ್ನಗಳನ್ನು ನಿರಂತರ ಮಾಡಿದಾಗಲೇ, ಉದ್ದೇಶಿತ ಕಾರ್ಯಸಾಧನೆ ಸಾಧ್ಯ ಎಂಬುದನ್ನು ಮರೆಯಬಾರದು.

(ಲೇಖಕರು ಸಂಸ್ಕೃತ ಶಿಕ್ಷಕರು)