| ಬೇಲೂರು ರಾಮಮೂರ್ತಿ
ಗುರುಗಳು ಜೀವನದಲ್ಲಿ ಆರರ ಮಹತ್ವಗಳ ಕುರಿತು ಮಾತನಾಡುತ್ತಾ ಆರರಲ್ಲಿ ನಿಮಗೆ ಯಾವ್ಯಾವ ಮಹತ್ವಗಳು ತಿಳಿದಿದೆ ಎಂದು ಕೇಳಿದರು. ಶಿಷ್ಯನೊಬ್ಬ ‘ಗುರುಗಳೇ ನಮ್ಮ ಜೀವನಕ್ಕೆ ಷಡ್ರಸಗಳು ಅಂದರೆ ಸಿಹಿ, ಹುಳಿ, ಖಾರ, ಉಪ್ಪು, ಒಗರು, ಕಹಿ ಇವುಗಳು ಮುಖ್ಯ’ ಅಂದ. ಇನ್ನೊಬ್ಬ ಶಿಷ್ಯ ಶ್ರೀ ಶಂಕರಾಚಾರ್ಯರು ಷಣ್ಮತ ಸ್ಥಾಪನಾಚಾರ್ಯರು ಅಂದರೆ ಶೈವ, ವೈಷ್ಣವ, ಶಾಕ್ತ, ಸೌರ, ಗಾಣಾಪತ್ಯ, ಕಾಪಾಲಿಕ ಎಂದ. ಮತ್ತೊಬ್ಬ ಶಿಷ್ಯ ನಮ್ಮ ಬದುಕಿಗೆ ಮೂಲ ಮಂತ್ರವಾದ ಓಂ ನಮಃ ಶಿವಾಯ ಎನ್ನುವುದು ಷಡಕ್ಷರಿ ಅಂದರೆ ಆರು ಅಕ್ಷರಗಳ ರೂಪದಲ್ಲಿವೆ ಎಂದ. ಪಕ್ಕದಲ್ಲಿದ್ದ ಶಿಷ್ಯ ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ ಎಂಬ ಆರು ಋತುಗಳು ಇವೆ ಎಂದ. ಅವನ ಪಕ್ಕದಲ್ಲಿದ್ದ ಶಿಷ್ಯ ಷಟ್ಕರ್ಮಗಳು ಬಹಳ ಮುಖ್ಯ. ಇವುಗಳು ಅಧ್ಯಯನ, ಅಧ್ಯಾಪನ, ಯಜನ, (ಯಜ್ಞ ಮಾಡುವುದು) ಯಾಜನ, (ಯಜ್ಞ ಮಾಡಿಸುವುದು) ದಾನ, ಪ್ರತಿಗ್ರಹ (ದಾನವನ್ನು ತೆಗೆದುಕೊಳ್ಳುವುದು) ಎಂದ. ಇನ್ನೊಬ್ಬ ಶಿಷ್ಯ ಅರಿಷಡ್ವರ್ಗಗಳು ಎಂದ. ಮತ್ತೊಬ್ಬ ಶಿಷ್ಯ ಹೇಳಿದ- ಷಡ್ಬಾವ ವಿಕಾರಗಳು ಅಂದರೆ ಜಾಯತೇ (ಹುಟ್ಟುವಿಕೆ),ಅಸ್ತಿ (ಇರುವಿಕೆ) ಬವಿಪರಣಮಮತೆ (ರೂಪಾಂತರ ಹೊಂದುವಿಕೆ) ವರ್ಧತೆ (ಬೆಳೆಯುವಿಕೆ), ಅಪಕ್ಷೀಯತೆ (ಕೃಶನಾಗುವಿಕೆ) ನಶ್ಯತೆ(ನಾಶವಾಗುವಿಕೆ) ಮತ್ತು ಆರು ಬಗೆಯ ಸಂಕಟಗಳು ಯಾವುದು ಎಂದರೆ ಅಶನ, ಪಿಪಾಸೆ, ಶೋಕ, ಮೋಹ, ಜರಾ, ಮರಣ ಮತ್ತು ಆರು ಬಗೆಯ ವೇದಾಂಗಗಳು ಶಿಕ್ಷಾ, ವ್ಯಾಕರಣಂ, ಛಂದಸ್, ನಿರುಕ್ತಂ, ಜ್ಯೋತಿಷಂ, ಕಲ್ಪಃ ಎಂದು ಹೇಳಿದ.
ಗುರುಗಳು ಪ್ರಸನ್ನರಾದರು. ‘ನೀವು ಹೇಳಿದ ಎಲ್ಲಾ ವಿಚಾರಗಳೂ ಚೆನ್ನಾಗಿದೆ. ಆದರೆ ಇವುಗಳಿಗಿಂತ ಮಿಗಿಲಾದ ಇನ್ನೊಂದಿದೆ. ನೀವೆಲ್ಲಾ ವಿಷ್ಣು ಸಹಸ್ರನಾಮವನ್ನು ಪಠಣೆ ಮಾಡುತ್ತೀರ. ಅದರಲ್ಲಿ ಬರುವ ಮೊದಲ ಶ್ಲೋಕದಲ್ಲೇ ಓಂ ವಿಶ್ವಂ ವಿಷ್ಣು ವಷಟ್ಕಾರೋ ಎನ್ನುವ ಪದಗಳು ಬರುತ್ತವೆ. ಪರಮಾತ್ಮನನ್ನು ವಷಟ್ಕಾರ ಎಂದು ಕರೆಯುವುದು ಏಕೆಂದರೆ ತಾನು ಇಚ್ಛಿಸಿದಂತೆ ವಿಶ್ವವನ್ನು ಸೃಷ್ಟಿ ಮಾಡಿ ಅದರಲ್ಲಿ ಆರು ಮುಖಗಳಿಂದ ಜಗತ್ತಿನಾದ್ಯಂತ ಇರುವವನು ಎಂದು. ಈ ಆರು ಮುಖಗಳು ಯಾವುವು ಎಂದರೆ ಜ್ಞಾನ, ಶಕ್ತಿ, ಬಲ, ಐಶ್ವರ್ಯ, ವೀರ್ಯ, ತೇಜಸ್ಸು ಈ ಆರು ಗುಣಗಳಿಂದ ಜಗತ್ತಿನ ಸೃಷ್ಟಿ, ಸ್ಥಿತಿ, ಸಂಹಾರಗಳಿಗೆ ಕಾರಣನಾಗಿರುವ ಭಗವಂತ ವಷಟ್ಕಾರ. ಜ್ಞಾನ ಎಂದರೆ ವಸ್ತುವನ್ನು ಸೃಷ್ಟಿ ಮಾಡುವ ಸರ್ವಜ್ಞ ಶಕ್ತಿ ಇರುವವನು, ಶಕ್ತಿ ಎಂದರೆ ಎಲ್ಲ ಕೆಲಸಗಳಿಗೂ ಇರುವ ಮೂಲ ಕರ್ತೃತ್ವ ಶಕ್ತಿ ಉಳ್ಳವನು, ಬಲ ಎಂದರೆ ರಕ್ಷಣೆ ಮಾಡುವ ತಾಕತ್ತು ಇರುವವನು, ಐಶ್ವರ್ಯ ಎಂದರೆ ಪ್ರಪಂಚದಲ್ಲಿರುವ ಎಲ್ಲದರ ಒಡೆತನ ಹೊಂದಿರುವವನು, ವೀರ್ಯ ಎಂದರೆ ಪರಾಕ್ರಮ, ಎಲ್ಲ ದುಷ್ಟ ಶಕ್ತಿಗಳನ್ನೂ ನಿರ್ನಾಮ ಮಾಡುವ ಪರಾಕ್ರಮ ಉಳ್ಳವನು. ತೇಜಸ್ಸು ಎಂದರೆ ಇಡೀ ಜಗತ್ತನ್ನು ಬೆಳಗುವ ಶಕ್ತಿ ಉಳ್ಳವನು, ಇಂಥಾ ವಷಟ್ಕಾರನನ್ನು ಅಂದರೆ ವಿಷ್ಣುವನ್ನು ನಿತ್ಯ ನಮ್ಮ ಹೃದಯದಲ್ಲಿಟ್ಟು ಪೂಜಿಸಬೇಕು’ ಎಂದರು ಗುರುಗಳು.