| ಅನಿತಾ ನಾಗರಾಜ ಹೆಗಡೆ
ಮನಸ್ಸು ಸಹ ಎರಡು ಮುಖಗಳಿರುವ ನಾಣ್ಯದಂತೆ. ಮನದಲ್ಲಿ ಉದ್ಭವಿಸುವ ನೂರಾರು ಯೋಚನೆಗಳಲ್ಲಿ ನಾವು ಯಾವ ಯೋಚನೆಗೆ ಒತ್ತು ಕೊಟ್ಟು ಅದಕ್ಕೆ ಮೂರ್ತರೂಪ ಕೊಡುತ್ತೇವೆ ಎಂಬುದರ ಮೇಲೆ ಅದಕ್ಕೆ ತಕ್ಕಂಥ ಫಲ ಪ್ರಾಪ್ತಿಯಾಗುತ್ತದೆ. ಒಮ್ಮೆ ಒಬ್ಬ ರೈತನಿಗೆ ಹೊಲ ಉಳುತ್ತಿದ್ದಾಗ ಒಂದು ಮಾಣಿಕ್ಯ ಸಿಕ್ಕಿತು. ಅದನ್ನು ತೆಗೆದುಕೊಂಡು ತನ್ನ ನೆರೆಯಲ್ಲಿದ್ದ ಜೋಯಿಸರ ಮನೆಗೆ ಹೋಗಿ ತೋರಿಸಿ, ‘ಇದೇನೆಂದು ಹೇಳುತ್ತೀರಾ?’ ಎಂದು ಕೇಳಿದ. ಅದನ್ನು ಪರೀಕ್ಷಿಸಿದ ಜೋಯಿಸರು, ‘ನಿಜಕ್ಕೂ ನೀನು ಅದೃಷ್ಟವಂತ, ಈ ಮಾಣಿಕ್ಯವನ್ನು ಮೈಯಲ್ಲಿ ಧರಿಸಿಕೊ, ನಿರ್ಮಲವಾದ ಮನಸ್ಸಿನಿಂದ ನಿನ್ನಂತೆಯೇ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸು. ನಿನಗೂ ಒಳ್ಳೆಯದಾಗುತ್ತದೆ, ಇತರರಿಗೂ ಒಳಿತು ಮಾಡಿದೆನೆಂಬ ಪುಣ್ಯಫಲವೂ ಸಿಗುತ್ತದೆ’ ಎಂದರು.
ಜೋಯಿಸರು ಹೇಳಿದಂತೆಯೇ ಆ ರೈತ ಮಾಣಿಕ್ಯವನ್ನು ಧರಿಸಿಕೊಂಡ. ಮರುದಿನ ಹೊಲ ಊಳುವಾಗ ಈ ಹೊಲ ಊಳುವುದು ಎಷ್ಟು ಆಯಾಸದ ಕೆಲಸ, ಎತ್ತುಗಳಿಗೂ ಮನುಷ್ಯರಂತೆ ಬುದ್ಧಿ ಇದ್ದರೆ ತಾವಾಗೆ ನೇಗಿಲು ಎಳೆದುಕೊಂಡು ಹೋಗುತ್ತಿದ್ದವು ಎಂದುಕೊಂಡ. ಕ್ಷಣಮಾತ್ರದಲ್ಲಿ ಎತ್ತುಗಳು ಹೊಲವನ್ನು ಉತ್ತುಬಿಟ್ಟವು. ಮನೆಗೆ ಬಂದು ಈ ವಿಸ್ಮಯವನ್ನು ಅವನ ಹೆಂಡತಿಗೆ ಹೇಳಿದಾಗ ಅವಳು ಅಚ್ಚರಿ ಪಡದೆ ‘ನಮ್ಮ ಹೊಲದಲ್ಲಷ್ಟೇ ಅಲ್ಲದೆ ಎಲ್ಲ ರೈತರ ಹೊಲದಲ್ಲೂ ಹೀಗೆ ಆಗಿದೆ’ ಎಂದಳು. ಆಗ ಆ ರೈತ ಇದರ ಬಗ್ಗೆ ಹೆಚ್ಚು ಯೋಚಿಸದೆ ಕಲಿಯುಗದ ಮಹಿಮೆ ಇರಬಹುದೆಂದು ಸುಮ್ಮನಾದ. ಕೆಲದಿನಗಳ ಬಳಿಕ ಆ ರೈತ ಅಟ್ಟದ ಮೂಲೆಯಲ್ಲಿ ಬಿದ್ದಿದ್ದ ಬೇಡವಾದ ವಸ್ತುಗಳನ್ನು ನೋಡಿ ‘ಇವೆಲ್ಲವೂ ಬಂಗಾರವಾದರೆ ಎಷ್ಟು ಚೆನ್ನ’ ಎಂದು ಆಲೋಚಿಸಿದ. ನೋಡನೋಡುತ್ತಿದ್ದಂತೆ ಎಲ್ಲ ಅನುಪಯುಕ್ತ ವಸ್ತುಗಳೂ ಬಂಗಾರವಾಗಿ ಮಾರ್ಪಟ್ಟಿತು. ಆತ ಅಚ್ಚರಿಯಿಂದ ಹೆಂಡತಿಯನ್ನು ಕರೆದು ನಡೆದುದ್ದನ್ನು ಹೇಳಿ ಯಾರಿಗೂ ಹೇಳಬೇಡವೆಂದ. ಆಕೆ ನಗುತ್ತ ‘ಅಕ್ಕಪಕ್ಕದ ಮನೆಯವರಿಗೂ ಇದೇ ರೀತಿಯಾಗಿದೆ’ ಎಂದಳು. ಆಗ ಅವನಿಗೆ ಜೋಯಿಸರ ಮಾತು ನೆನಪಾಗಿ ಇವೆಲ್ಲದರ ಕಾರಣ ತಿಳಿಯಿತು. ಇದನ್ನೂ ಓದಿ: ಮನೋಲ್ಲಾಸ: ಅವಕಾಶಗಳ ಸದ್ಬಳಕೆಯಾಗಲಿ
ಆಗ ಅವನು, ತನ್ನ ಅದೃಷ್ಟದಿಂದ ದೊರಕಿದ ಮಾಣಿಕ್ಯದ ಫಲದಿಂದ ಯಾಕೆ ಎಲ್ಲರೂ ಧನಿಕರಾಗಬೇಕು ಎಂದು ಚಿಂತಿಸುತ್ತ ಎಲ್ಲರ ಮನೆಯ ಅಟ್ಟವನ್ನೂ ಇಣುಕಿ ನೋಡಿ ಬಂದ. ಆಗ ಅವನಿಗೆ ಒಂದು ಉಪಾಯ ಹೊಳೆದು ಎಲ್ಲರ ಮನೆಯ ಅಟ್ಟದ ಮೇಲಿರುವ ಹುಲ್ಲಿನ ಗೊಣಬೆಗೆ ಬೆಂಕಿ ಬಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಯೋಚಿಸಿದ. ಮರುಕ್ಷಣ ಎಲ್ಲರ ಮನೆಯೂ ಹೊತ್ತಿ ಉರಿಯಿತು. ಎಲ್ಲರ ಹಾಹಾಕಾರ ಕಂಡು ಖುಷಿ ಪಡುತ್ತಿರುವಾಗ ಅವನ ಮನೆಯಿಂದಲೂ ಬೊಬ್ಬೆ ಕೇಳಿಸಿತು, ಹೋಗಿ ನೋಡಿದಾಗ ಅವನ ಮನೆಯೂ ಸುಟ್ಟು ಬೂದಿಯಾಗಿತ್ತು.
ನಮ್ಮಅದೃಷ್ಟ ಹೇಗೆ ಇದ್ದರೂ ನಮ್ಮ ಮನಸ್ಸಿನ ಯೋಚನಾಲಹರಿ ಎಲ್ಲಕ್ಕಿಂತ ಮುಖ್ಯವಾಗುತ್ತದೆ. ಎಲ್ಲರಿಗೂ ಒಳಿತಾಗಲಿ ಎನ್ನುವ ಮನಸ್ಥಿತಿಯಿರಬೇಕು. ನಮಗೆ ಅವಕಾಶವಿರುವಾಗ ಎಲ್ಲರ ಒಳಿತಿಗಾಗಿ ಪ್ರಯತ್ನಿಸಬೇಕು. ನಾವು ಇನ್ನೊಬ್ಬರಿಗೆ ಏನನ್ನು ಕೊಡುತ್ತೇವೆಯೋ ಅದೇ ನಮಗೂ ಲಭ್ಯವಾಗುತ್ತದೆ. ಅದು ಒಳ್ಳೆಯದೇ ಇರಲಿ ಕೆಟ್ಟದ್ದೇ ಇರಲಿ ವಾಪಸ್ಸು ಸಿಗುವುದಂತೂ ನಿಶ್ಚಿತ. ಅದನ್ನು ಅನುಭವಿಸದೆ ವಿಧಿ ಇಲ್ಲ. ಇದನ್ನೂ ಓದಿ: ಮನೋಲ್ಲಾಸ: ಯುದ್ಧದಿಂದ ಧರ್ಮರಕ್ಷಣೆ ಹೇಗೆ?
(ಲೇಖಕಿ ಹವ್ಯಾಸಿ ಬರಹಗಾರ್ತಿ)